varthabharthi

ಸುಗ್ಗಿ

ರೂಪದರ್ಶಿಗಳು

ಇತಿಹಾಸಕಾರ ವಿಶ್ವನಾಥ ಕಾಶೀನಾಥ ರಾಜವಾಡೆ

ವಾರ್ತಾ ಭಾರತಿ : 3 Dec, 2017
ಜೆ. ಶ್ರೀನಿವಾಸ ಮೂರ್ತಿ

ವಿಶ್ವನಾಥ ಕಾಶೀನಾಥ ರಾಜವಾಡೆ

ಭಾರತದ ಪ್ರಸಿದ್ಧ ಇತಿಹಾಸಕಾರರಾಗಿದ್ದ ವಿ.ಕ. ರಾಜವಾಡೆಯವರ ಬದುಕು ಹಾಗೂ ಬರಹಗಳನ್ನು ಪರಿಚಯಿಸುವ ಲೇಖನವಿದು. ರಾಜವಾಡೆಯವರ ಮರಾಠಿ ಮೂಲದ ಹಲವು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ನವಕರ್ನಾಟಕ ಪ್ರಕಾಶನದ 90 ರ ದಶಕದಲ್ಲಿ ಪ್ರಕಟಿಸಿರುವ ರಾಜವಾಡೆಯವರ ಭಾರತೀಯ ವಿವಾಹ ಸಂಸ್ಥೆಯ ಇತಿಹಾಸ ಕೃತಿಯ ಮುನ್ನುಡಿಯ ಆಯ್ದ ಭಾಗವಿದು.

ಹತ್ತೊಂಬತ್ತನೆ ಶತಮಾನದ ಕೊನೆ ಹಾಗೂ ಇಪ್ಪತ್ತನೆಯ ಶತಮಾನದ ಮೊದಲ ಭಾಗದಲ್ಲಿ ಪಾರತಂತ್ರ ಹಾಗೂ ಕುರುಡು ಇಂಗ್ಲಿಷ್ ಭಕ್ತಿಯ ಕತ್ತಲೆ ತುಂಬಿದ ಹಿನ್ನೆಲೆಯಲ್ಲಿ ಇತಿಹಾಸಾಚಾರ್ಯ ದಿವಂಗತ ವಿ.ಕಾ. ರಾಜವಾಡೆ ಅವರ ಉಜ್ವಲ ವ್ಯಕ್ತಿತ್ವ ಕಂಗೊಳಿಸುತ್ತದೆ. ಅವರ ತೀಕ್ಷ್ಣ ಬುದ್ಧಿ, ಅಪಾರವಾದ ಕರ್ತೃತ್ವ ಶಕ್ತಿ ಮತ್ತು ಅದಮ್ಯವಾದ ಅನ್ವೇಷಣಾ ಶಕ್ತಿಯಿಂದಾಗಿ ಅವರಿಗೆ ಸಮಕಾಲೀನ ದಿ. ಡಾ.ಎಂ. ಕೇತಕರ್‌ರಂತಹ ಕೆಲವು ವ್ಯಕ್ತಿಗಳ ಪರಿಚಯವಿತ್ತು. ಅವರು ಇವರ ಕೆಲಸದ ನಿಜವಾದ ಮಹತ್ವವನ್ನು ತಿಳಿದಿದ್ದರು ಮತ್ತು ಕಾಲಕಾಲಕ್ಕೆ ಅವರ ಕೆಲಸದ ಬಗ್ಗೆ ಗೌರವವನ್ನೂ ಸೂಚಿಸಿದ್ದರು. ಆದರೆ ಕೆಲವು ಅಹಂಕಾರಿಗಳ ಮತ್ತು ಚಂಚಲ-ಮನಸ್ಕ ಜನರ ಕಾರಣದಿಂದಾಗಿ ಅವರು ಸಾಮಾನ್ಯ ಸಮಾಜದಿಂದ ಕೊಂಚ ಬೇರೆಯೇ ಆಗಿ ತೋರಿಬರುತ್ತಿದ್ದರು.

ಇಂತಹ ವಿವಾದ ಪೂರ್ಣರಾದ ಬಿರುಗಾಳಿಯಂತಹ ವ್ಯಕ್ತಿತ್ವದ ರಾಜವಾಡೆಯವರ ಪರಿಚಯ ಹೊಸ ಪೀಳಿಗೆಗೆ ಮಾಡಿಕೊಡುವುದು ಬಹಳ ಅವಶ್ಯ.

ವಿ.ಕಾ. ರಾಜವಾಡೆ ಅವರ ಜನನ 24 ಜೂನ್, 1863 ರಲ್ಲಿ ವಾರಸಾಯಿ ಎಂಬಲ್ಲಿ ಆಯಿತು. ಬಾಲಕ ವಿಶ್ವನಾಥ ಮೂರು ವರ್ಷದವರಾಗಿದ್ದಾಗ ಅವರ ತಂದೆ ಮೃತರಾದರು. ಆದ್ದರಿಂದ ಅವರ ತಾಯಿ ತನ್ನ ಇಬ್ಬರು ಮಕ್ಕಳಾದ ಹಿರಿಯ ಮಗ ಬೈಜನಾಥ ಕಿರಿಯ ಮಗ ವಿಶ್ವನಾಥ ಇವರನ್ನು ಕರೆದುಕೊಂಡು ತನ್ನ ತಂದೆಯ ಮನೆ ವಾರಸಾಯಿಗೆ ಬಂದರು.

ಈ ಇಬ್ಬರು ಅಣ್ಣ ತಮ್ಮಂದಿರ ಓದು ಪುಣೆಯಲ್ಲಿ ನಡೆಯಿತು. 1882 ರಲ್ಲಿ ಶ್ರೀ ರಾಜವಾಡೆ ಅವರು ಪ್ರವೇಶ ಪರೀಕ್ಷೆಯಲ್ಲಿ (ಮೆಟ್ರಿಕ್ಯುಲೇಷನ್‌ನಲ್ಲಿ) ಉತ್ತೀರ್ಣರಾದರು.

ಮುಂದಿನ ಶಿಕ್ಷಣಕ್ಕಾಗಿ ಅವರು ಮುಂಬೈಯ ಎಲ್ಫಿಂಸ್ಟನ್ ಕಾಲೇಜಿನಲ್ಲಿ ಹೆಸರು ದಾಖಲಿಸಿದರು. ಅಲ್ಲಿ ವಿದ್ಯಾರ್ಥಿ ವೇತನ ಸಿಕ್ಕಿತ್ತು. ಅದರಿಂದಲೂ ಅವರು ತಮ್ಮ ಶಿಕ್ಷಣ ಮುಂದುವರಿಸಲು ಸಹಾಯ ಸಿಕ್ಕಿತು.

ಶಾಲೆ ಅಥವಾ ಕಾಲೇಜಿನ ಪಠ್ಯಕ್ರಮದಲ್ಲಿದ್ದ ಪಠ್ಯ ಪುಸ್ತಕಗಳ ಬಗ್ಗೆ ಅವರು ಎಂದೂ ಹೆಚ್ಚಿನ ಆಸ್ಥೆ ವಹಿಸಲಿಲ್ಲ. ಶಾಲೆಯ ಶಿಕ್ಷಕರು, ಕಾಲೇಜಿನ ಪ್ರೊಫೆಸರ್‌ಗಳು ಅವರ ಕುಶಾಗ್ರ ಬುದ್ಧಿ ಮತ್ತು ವಿಶಾಲ ಚಿಂತನೆಗೆ ಮತ್ತು ಜ್ಞಾನಪಿಪಾಸೆಗೆ ಅವಶ್ಯಕವಾದ ಸಾಮಗ್ರಿ ಒದಗಿಸಲು ಅಸಮರ್ಥರಾಗಿದ್ದರು. ಆದರೆ ಡಾ॥ ರಾಮಕೃಷ್ಣ ಗೋಪಾಲ(R.G.)  ಭಂಡಾರಕರ್, ನ್ಯಾಯಕೋಶ ಬರೆದ ಮ.ಮ. ಜಲಕೀಕರ್‌ರಂತಹ ಅಖಿಲ ಭಾರತ ಮಟ್ಟದ ಕೆಲವು ವಿದ್ವಾಂಸರು ಮತ್ತು ಪ್ರಾಧ್ಯಾಪಕರುಗಳಿಂದ ಅವರಿಗೆ ಸಿಕ್ಕ ಶಿಕ್ಷಣ ಬಹಳ ಲಾಭದಾಯಕವಾಗಿತ್ತು. ಅವರು ಗ್ರಂಥಗಳನ್ನೇ ತಮ್ಮ ಗುರುಗಳೆಂದು ತಿಳಿದರು. ಇತಿಹಾಸ, ಅರ್ಥಶಾಸ್ತ್ರ, ಧರ್ಮಶಾಸ್ತ್ರ, ಸಸ್ಯಶಾಸ್ತ್ರ(Botany) ಮುಂತಾದ ವಿವಿಧ ಶಾಸ್ತ್ರಗಳಿಗೆ ಸಂಬಂಧಿಸಿದ ಅನೇಕ ಗ್ರಂಥಗಳನ್ನು ಓದಿದ ಮೇಲೆ 1887ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ‘ವಿದ್ಯಾರ್ಜನೆಯ ಒಂದೇ ಉದ್ದೇಶ ಮನಸ್ಸಿನಲ್ಲಿ ಇಟ್ಟುಕೊಂಡ ನಾನು, ನೌಕರರನ್ನು ತಯಾರಿಸುವ ಕಾರ್ಖಾನೆಯಲ್ಲಿ ಬಿದ್ದೆ’ ಎಂಬ ಕಹಿ ಶಬ್ದಗಳಿಂದ ಅವರು ಆ ಕಾಲದ ಶಿಕ್ಷಣ ಸಂಸ್ಥೆಗಳ ಬಗೆಗಿನ ತಮ್ಮ ವಿಚಾರ ಪ್ರಕಟಿಸಿದ್ದಾರೆ. ಪ್ರಾಥಮಿಕ ಶಿಕ್ಷಣದಿಂದ ಆರಂಭಿಸಿ ಕಾಲೇಜುವರೆಗಿನ ಉಚ್ಚ ಶಿಕ್ಷಣ ಕುರಿತ ತಮ್ಮ ಅನುಭವವನ್ನು ಅವರು ‘ಗ್ರಂಥಮಾಲಾ’ ಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಿದ- ‘ಕನಿಷ್ಠ, ಮಧ್ಯಮ ಉಚ್ಚ ಶಾಲಾಂತೀತ ಸ್ವಾನುಭವ್’ ಎಂಬ ಪ್ರಬಂಧದ ಮೂಲಕ ಸಮಾಜದ ಎದುರಿಗೆ ಇಟ್ಟಿದ್ದಾರೆ. ಈ ಪ್ರಬಂಧದಲ್ಲಿ ರಾಜವಾಡೆ ಹೀಗೆ ಬರೆದಿದ್ದಾರೆ- ‘ನನಗೆ ವೈಜ್ಞಾನಿಕ ಪದ್ಧತಿಯಿಂದ ಪಾಠ ಹೇಳಿ ಕೊಡುವ ಒಬ್ಬ ಗುರುವೂ ಸಿಗಲಿಲ್ಲ, ನನ್ನ ಜೀವನದ ಎರಡೂವರೆ ವರ್ಷ ಹೊಸ ಜ್ಞಾನಪ್ರಾಪ್ತಿಯ ದೃಷ್ಟಿಯಿಂದ ಸಂಪೂರ್ಣ ವ್ಯರ್ಥವಾಗಿ ಹೋಯಿತು. ಇದಲ್ಲದೆ ನೈತಿಕ ಮತ್ತು ಧಾರ್ಮಿಕ ದೃಷ್ಟಿಯಿಂದ ನನಗಾದ ನಷ್ಟವೇನಿದೆ ಅದನ್ನು ಹೇಳುವುದು ಕಷ್ಟ’. ಇದೇ ಪ್ರಬಂಧದಲ್ಲಿ ಮುಂದೆ ಹೇಳುತ್ತಾರೆ. ‘‘ಆದ್ದರಿಂದ ನಾನು ಈ ಬಿಕರಿಗಿಟ್ಟ ಕಟ್ಟಿನ ಹಾಗಿರುವ ಶಿಕ್ಷಕರ ಗುಲಾಮಗಿರಿಯಂತಹ ನೌಕರಿಗೂ ಗಡಿಬಿಡಿ ಮಾಡುವ ಪರೀಕ್ಷೆಗೂ ಬೆನ್ನು ಹಾಕಿ ಗ್ರಂಥಾಲಯದ ಗ್ರಂಥಗಳ ಕಡೆಗೆ ತೆರೆದ ಮನದಿಂದ ಮುಖ ತಿರುಗಿಸಿದೆ’’. ಹೀಗೆ ವಿದ್ಯಾರ್ಥಿ ದೆಸೆಯಿಂದ ಆರಂಭವಾದ ಅವರ ಜ್ಞಾನ ಸಾಧನೆ ಕೊನೆಯವರೆಗೂ ನಡೆಯಿತು.

ಮೌಂಟ್ ಸ್ಟುವರ್ಟ್ ಎಲ್ಫಿನ್ಸ್ಟೋನ್

ದಿ. ರಾಜವಾಡೆಯವರು ವಿಶ್ವವಿದ್ಯಾನಿಲಯದ ಪದವಿಯನ್ನೇನೋ ಪಡೆದರು. ಆದರೆ ತನ್ಮೂಲಕ ಒಳ್ಳೆ ಕೆಲಸ ಗಿಟ್ಟಿಸಿಕೊಂಡು ದೊಡ್ಡ ಪದವಿಗೆ ಏರುವ ಆಸೆ ಅವರೆಂದೂ ಇಟ್ಟುಕೊಳ್ಳಲಿಲ್ಲ. ಆದರೂ ತಮ್ಮ ಕಾರ್ಯಕ್ಷೇತ್ರ ವನ್ನು ನಿಶ್ಚಯಿಸಿಕೊಳ್ಳುವವರೆಗೆ ಅವರ ಜೀವನದ ಒಂದೆರಡು ವರ್ಷ ಗಲಿಬಿಲಿಯಲ್ಲಿ ಕಳೆಯಿತು. ಆಗಿನ ಪದ್ಧತಿಯಂತೆ 1888ರಲ್ಲಿ ಅವರಿನ್ನೂ ವಿದ್ಯಾ ರ್ಥಿಯಾಗಿದ್ದಾಗಲೇ ಅವರ ಮದುವೆಯಾಗಿತ್ತು. ಪದವಿ ಪಡೆದ ಮೇಲೆ ಮನೆ ನಡೆಸುವ ದೃಷ್ಟಿಯಿಂದ ಅವರು ಪುಣೆಯ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ಹಂಗಾಮಿ ಕೆಲಸ ಮಾಡಿದರು. ಆದರೆ ಇಬ್ಬರು ಮಕ್ಕಳು ಮತ್ತು ಹೆಂಡತಿ ಅಕಾಲಿಕವಾಗಿ ಸತ್ತದ್ದರಿಂದ ಅವರಿಗೆ ಮನೆಯ ಕಟ್ಟು ಕಳಚಿಬಿತ್ತು. ಸ್ವಾಭಾವಿಕ ವಾಗಿಯೇ, ಮನೆ ನಡೆಸಲೆಂದೇ ಹಿಡಿದಿದ್ದ ಕೆಲಸವನ್ನು 1893ರಲ್ಲಿ ಬಿಟ್ಟು ಬಿಟ್ಟರು. ಮರಾಠೀ ಭಾಷೆ ಮತ್ತು ಸ್ವದೇಶದ ಬಗ್ಗೆ ಇದ್ದ ಅಭಿಮಾನ ಹಾಗೂ ಆದರ ಸ್ಥಿತಿಯನ್ನು ಸುಧಾರಿಸಲು ರಾಜವಾಡೆಯವರೇ ಹೇಳಿಕೊಂಡಿದ್ದಾರೆ- ‘‘ವಿಷ್ಣು ಶಾಸ್ತ್ರೀ ಚಿಪಲೂಣಕರರ ಬರಹ, ಕಾವ್ಯ-ಇತಿಹಾಸಕಾರ ರಾವ್ ಬಹದ್ದೂರ ಕಾಶೀನಾಥಪಂತ ಸಾ-ನೇ ಅವರ ಐತಿಹಾಸಿಕ ಪತ್ರ ಹಾಗೂ ಪರಶುರಾಮ ಪಂತ ಗೋಡಬೋಲೆ ಅವರಿಂದ ಪ್ರಕಟಗೊಂಡ ಕಾವ್ಯಗಳಿಂದ ನನ್ನಲ್ಲಿ ಮಹಾರಾಷ್ಟ್ರದ ಸಾಹಿತ್ಯದ ಬಗ್ಗೆ ಹೆಮ್ಮೆ ಉಂಟಾಯಿತು’’.

ಜನವರಿ 1894ರಲ್ಲಿ ರಾಜವಾಡೆಯವರು ‘ಭಾಷಾಂತರ’ ಮಾಸಿಕ ಪತ್ರಿಕೆಯ ಮೊದಲ ಸಂಚಿಕೆ ಪ್ರಕಟಿಸಿದರು, ರಾಷ್ಟ್ರದ ಸ್ವಾಭಿಮಾನ ಬೆಳೆಸಲು ಮತ್ತು ಪ್ರಪಂಚದ ವಿಭಿನ್ನ ವಿಚಾರ- ಪ್ರವಾಹಗಳನ್ನು ತಮ್ಮ ದೇಶಬಾಂಧವರಿಗೆ ಪರಿಚಯಿಸಲು ತುಂಬ ಉತ್ತಮ ಗ್ರಂಥಗಳ ಅನುವಾದ ಮಾಡಿ ಅವನ್ನು ಜನರಿಗೆ ಪರಿಚಯಿಸುವುದು ಆವಶ್ಯಕವಾಗಿತ್ತು. ಈ ಮಾಸಿಕ ಪತ್ರಿಕೆಯನ್ನು ಹೊರತರುವುದರ ಹಿಂದಿದ್ದ ರಾಜವಾಡೆಯವರ ಉದ್ದೇಶ ವೆಂದರೆ ಪಾಶ್ಚಾತ್ಯ ದೇಶಗಳಲ್ಲಿ ವಿಭಿನ್ನ ಶಾಸ್ತ್ರಗಳ ಬಗ್ಗೆ ಹೊರಹೊಮ್ಮಿರುವ ಅಗಾಧ ಜ್ಞಾನವೇನಿದೆ ಅಂತಹುದೇ ಸ್ವತಂತ್ರ ಜ್ಞಾನ ಭಂಡಾರ ಕಟ್ಟುವ ಯೋಗ್ಯತೆ ಈಗ ನಮ್ಮಲ್ಲಿಲ್ಲ. ಆದ್ದರಿಂದ ಅದೇ ಜ್ಞಾನವನ್ನು ಮರಾಠಿ ಭಾಷೆ ಯಲ್ಲಿ ತರಲು ಪ್ರಯತ್ನಿಸಬೇಕು. ಈ ಪ್ರಕಾರವಾಗಿ 37 ತಿಂಗಳು ಕೆಲಸ ಮಾಡಿ 15 ಪೂರ್ಣ ಮತ್ತು 7 ಅಪೂರ್ಣ ಗ್ರಂಥಗಳ ಅನುವಾದ ಪ್ರಕಟಿಸಿದರು. ಪುಣೆ ಯಲ್ಲಿ ಪ್ಲೇಗಿನ ಗಲಾಟೆಯಿಂದ ಆ ಮಾಸ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು.

ಅವರು ಕಾಲೇಜಿನಲ್ಲಿ ಓದುತ್ತಿದ್ದಾಗಿನಿಂದಲೇ ಇತಿಹಾಸ ಅವರಿಗೆ ಪ್ರಿಯ ವಿಷಯವಾಗಿದ್ದಿತು. ‘‘ಗ್ರಾಂಟ್ ಡಫ್’ ಮತ್ತಿತರ ಇತಿಹಾಸಕಾರರು ಬರೆದಿರುವ ಭಾರತದ ಇತಿಹಾಸ, ಗೆದ್ದವರು ಸೋತ ದೇಶದ ಇತಿಹಾಸ ಬರೆಯುವುದಾಗಿದ್ದು ಆದ್ದರಿಂದಲೇ ಅದರಲ್ಲಿ ಸತ್ಯದ ಅಭಾವವೇ ಹೆಚ್ಚಾಗಿದ್ದು, ಮಹತ್ವವಿಲ್ಲದ ಘಟನೆಗಳನ್ನು ಮಹತ್ವಪೂರ್ಣವೆಂದು ಹೇಳಲಾಗಿದೆ’’ ಎನ್ನುವುದು ಶ್ರೀ ರಾಜವಾಡೆಯವರ ಮತವಾಗಿತ್ತು ಮತ್ತು ಅವರ ಮನಸ್ಸಿನಲ್ಲಿ ಹುಟ್ಟಿದ್ದ ವಿಚಾರವೆಂದರೆ ಸತ್ಯವಾದ ಇತಿಹಾಸವನ್ನು ಬೆಳಕಿಗೆ ತರದೆ ರಾಷ್ಟ್ರದಲ್ಲಿ ಸ್ವಂತಿಕೆಯ ಚೇತನವನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುವುದು. ಅವರು ಹೀಗೆಯೇ ದುಃಖದಿಂದ ಭಾರವಾದ ಮನಸ್ಥಿತಿ ಯಲ್ಲಿದ್ದಾಗಲೇ ಅವರ ವಿದ್ಯಾರ್ಥಿಯಿಂದ ಒಂದು ಸುದ್ದಿ ತಿಳಿಯಿತು. ‘‘ಕಾಕಾರಾವ್ ಪಂಡಿತರೆನ್ನುವವರಿಗೆ ‘ವಾಯಿ’ ಎಂಬಲ್ಲಿ ಹಳೆಯ ಕಾಗದಗಳ ಪೆಟ್ಟಿಗೆಯೊಂದು ಸಿಕ್ಕಿ, ಅದರಿಂದ ಒಂದು ಪುಸ್ತಕಕ್ಕೆ ಬೇಕಾದ ಸಾಮಗ್ರಿ ದೊರೆಯಿತು’’ ಎನ್ನುವುದೇ ಆ ಸುದ್ದಿ. ಆ ಬಗ್ಗೆ ಸ್ವತಃ ಕಾಕಾ ಸಾಹೇಬರೇ ಹೀಗೆಂದು ಬರೆದಿದ್ದಾರೆ- ‘ವಿಸು ಭಾವು (ವಿಶ್ವನಾಥ ರಾಜವಾಡೆ) ತಡ ಮಾಡದೆ ಅದೇ ರಾತ್ರಿ ಪುಣೆಯಿಂದ ವಾಯಿಗೆ ಬಂದರು. ಬೆಳಗ್ಗೆಯೇ ನನ್ನನ್ನು ಭೇಟಿಯಾಗಿ ಕಾಗದಗಳನ್ನು ಓದುವುದರಲ್ಲಿ ಮಗ್ನರಾದರು’. ಹೀಗೆ ಎರಡು ತಿಂಗಳು ಬಿಡುವಿಲ್ಲದೆ ದುಡಿದ ಮೇಲೆ 1896ರಲ್ಲಿ ‘ಮರಾಠ್ಯಾಂಚ ಇತಿಹಾಸಾಚಿ ಸಾಧನ’ (ಮರಾಠಿಯ ಇತಿಹಾಸದ ಆಕರಗಳು) ಎಂಬ ಹೆಸರಿನ ಪುಸ್ತಕದ ಮೊದಲ ಸಂಪುಟವನ್ನು ಪ್ರಕಟಿಸಿದರು. ಪಾಣಿಪತ್‌ನ ಯುದ್ಧಕ್ಕೆ ಸಂಬಂಧಿಸಿದ 202 ಪತ್ರಗಳು ಈ ಸಂಪುಟದಲ್ಲಿ ಇವೆ.

ಒಬ್ಬ ಯಾತ್ರಿಕನ ದಾರ್ಢ್ಯದಿಂದಲೂ, ಅವಿರತ ಪ್ರಯತ್ನ ಶೀಲತೆ ಯಿಂದಲೂ ಅವರು ಇಡೀ ಮಹಾರಾಷ್ಟ್ರವನ್ನು ಸುತ್ತಿದರು. ಇತಿಹಾಸದ ದೃಷ್ಟಿಯಿಂದ ಮಹತ್ವಪೂರ್ಣವಾದ ಸ್ಥಳಗಳಿಗೆ ಮತ್ತೆ ಮತ್ತೆ ಹೋಗಿ ಅವನ್ನು ನೋಡಿದರು. ಆ ಐತಿಹಾಸಿಕ ಸ್ಥಳಗಳ ವಾಸ್ತುಶಿಲ್ಪದಂತೆಯೇ ಅವುಗಳ ಬಗೆಗೆ ತಲೆಯೆತ್ತಿ ಮಾತನಾಡತೊಡಗಿದರು. ಅಮೂಲ್ಯವಾದ ಮಾಹಿತಿ ಒಟ್ಟಾಯಿತು. ಅವರು ಅಲ್ಲಿನ ಜನಜೀವನ, ಭಾಷೆ, ರೀತಿ ರಿವಾಜು ಮತ್ತು ಸಾಹಿತ್ಯಗಳನ್ನು ಸಮಾಜ ಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಿ ನಿಷ್ಕರ್ಷೆ ಮಾಡಿದರು. ಹೀಗೆಯೇ ಅವರು ಎಲ್ಲಿಯೇ ಆಗಲಿ ಹಳೆಯ ಕಾಗದ ಪತ್ರ ಗಳು ಸಿಗುವ ಸಾಧ್ಯತೆ ಇದೆಯೆಂದು ತಾಳಿದರೆ ಒಂದು ಧೋತಿ, ಉದ್ದನೆಯ ಕರಿಯ ನಿಲುವಂಗಿ, ತಲೆಯ ಮೇಲೆ ಬಿಳಿಯ ಪೇಟ ಹಾಕಿಕೊಂಡು ತಮಗೆ ಅಡಿಗೆ ಬೇಯಿಸಿಕೊಳ್ಳಲು ಬೇಕಾದ ಸಣ್ಣಪುಟ್ಟ ಪಾತ್ರೆಯ ಗಂಟನ್ನು ಹೆಗಲ ಮೇಲೆ ಹಾಕಿಕೊಂಡು ಹೊರಟು ಬಿಡುತ್ತಿದ್ದರು ಮತ್ತು ಆ ಐತಿಹಾಸಿಕ ಸಾಮಗ್ರಿಯನ್ನು ಪಡೆಯಲು ಬಿಡುವಿಲ್ಲದೆ ದುಡಿಯುತ್ತಿದ್ದರು. ವಿಸು ಭಾವು ಮೊದಲಲ್ಲಿ ಯಾವಾಗಲೂ ಬೇರೆಯವರ ಹತ್ತಿರ ಹೋಗುವಾಗ ಮೊದಲು ವಿನಮ್ರರಾಗಿಯೇ ಹೋಗುತ್ತಿದ್ದರು ಮತ್ತು ಅನುನಯ ವಿನಯಗಳನ್ನು ತೋರುತ್ತಿದ್ದರು. ಹಗಲೂ ರಾತ್ರಿ ಕಷ್ಟಪಟ್ಟು ಆ ಕಾಗದವು ಸಿಕ್ಕಿದ ಕೂಡಲೇ ಅವರು ಅದರ ಮೇಲೆ ಒಮ್ಮೆಲೇ ಗಮನ ಹರಿಸಿ ಅದರಲ್ಲಿಯೇ ತಲ್ಲೀನರಾಗುತ್ತಿದ್ದರು. ಆ ಕಾಗದ ಪತ್ರಗಳ ಸಂದರ್ಭವನ್ನು ಜೋಡಿಸಿ ಸ್ವತಃ ತಮ್ಮ ಖರ್ಚಿನಿಂದಲೇ ಅದನ್ನು ಪ್ರಕಟಿಸುವ ತೊಂದರೆಯನ್ನೂ ತೆಗೆದುಕೊಳ್ಳುತ್ತಿದ್ದರು. ಯಾವುದಾದರೂ ಸಾಮಂತರ ಮನೆಯವರು ಅಥವಾ ಯಾವುದೇ ರಾಜ್ಯದ ವಾರಸುದಾರರು ಈ ರೀತಿಯ ಕಾಗದ ಪತ್ರಗಳನ್ನು ಕೊಡುವುದರಲ್ಲಿ ಅಲಕ್ಷ್ಯ ತೋರಿದರೆ ರಾಜವಾಡೆಯವರು ಕ್ರೋಧಾವಿಷ್ಟರಾಗಿ ಹೇಳುತ್ತಿದ್ದದ್ದು ‘ಯಾರ ಪರಾಕ್ರಮದಿಂದ ಈ ದಿನ ನೀವು ಇಷ್ಟು ಐಶ್ವರ್ಯ ಭೋಗಿಸುತ್ತಿದ್ದೀರೋ ಆ ರಾಜ ಈಗ ನಿದ್ದೆ ಹೋಗಿದ್ದಾನೆ, ಮತ್ತೆ ಜಾಗೀರುದಾರ ತೂಕಡಿಸುತ್ತಿದ್ದಾನೆ. ಆದ್ದರಿಂದಲೇ ನಾವು ಈ ಪಾಡು ಪಡಬೇಕಾಯಿತು’ ಎಂದು.

ಧೂಳಿನಿಂದ ತುಂಬಿದ ಲಕೋಟೆಗಳ, ಹರಿದು ಚಿಂದಿಯಾಗಿ ಗೆದ್ದಲು ಹತ್ತಿದ ಹಳೆಯ ಕಾಗದಗಳ ಈ ನಿಧಿಯನ್ನು ಪಡೆಯುವ ತಪಶ್ಚರ್ಯೆಗೆ ನಡುವೆ ಬಂದ ಯಾವುದೇ ಕಷ್ಟಗಳಿಂದಲೂ ರಾಜವಾಡೆಯವರ ಕಾರ್ಯಕ್ಕೆ ಎಂದೂ ವಿಘ್ನ ಬರಲಿಲ್ಲ. ಸ್ವಲ್ಪವೇ ಹೊತ್ತಿನ ನಿದ್ದೆ ಮತ್ತು ಸ್ವತಃ ಬೇಯಿಸಿ ತಿನ್ನುವಷ್ಟು ಪುರುಸೊತ್ತು ಬಿಟ್ಟರೆ ಅವರ ಬಾಕಿ ಎಲ್ಲ ಸಮಯ ಓದು, ಬರಹ, ಮನನ, ಚಿಂತನಗಳಲ್ಲೇ ಕಳೆಯುತ್ತಿತ್ತು.

ಅವರ ಈ ತಪಸ್ಯೆಯ ಫಲವಾಗಿ ಮರಾಠೀ ಇತಿಹಾಸದ ಮೂಲ ಸಾಮಗ್ರಿಯ 22 ಸಂಪುಟಗಳು ಪ್ರಕಟಗೊಂಡವು. ಇದಲ್ಲದೆ ಅವರ ಸಾವಿನ ಕಾಲದಲ್ಲಿ ಇದಕ್ಕಿಂತಲೂ ಹೆಚ್ಚಿನ ಇಂತಹ ಅಪ್ರಕಟಿತ ಮಾಹಿತಿ ಸಂಗ್ರಹ ರಾಜವಾಡೆಯವರ ಹತ್ತಿರ ಇತ್ತು. ಮಾಹಿತಿಗಳಿಗಾಗಿ ಸುತ್ತಾಡುವ ಸಮಯದಲ್ಲೇ ಅವರಿಗೆ ಸಂತ ಏಕನಾಥರ ಕಾಲಕ್ಕಿಂತ ಹಿಂದಿನ ‘ಜ್ಞಾನೇಶ್ವರಿ’ಯ ಒಂದು ಪ್ರತಿ ಸಿಕ್ಕಿದುದು, ಅವರು ಅದನ್ನು ಸಂಪಾದಿಸಿ ಪ್ರಕಟಿಸಿದರು ಕೂಡ. ಅದಲ್ಲದೆ ‘ಜ್ಞಾನೇಶ್ವರೀ ತೀಲ್ ಮರಾಠೀ ವ್ಯಾಕರಣ್’ (ಜ್ಞಾನೇಶ್ವರಿಯಿಂದ ಮೂಡಿಬರುವ ಮರಾಠೀ ವ್ಯಾಕರಣ) ಎಂಬ ಭಾಷಾಶಾಸ್ತ್ರದ ದೃಷ್ಟಿಯಿಂದ ತುಂಬ ಮಹತ್ವದ ಗ್ರಂಥವೊಂದನ್ನು ಬರೆದು ಜ್ಞಾನೇಶ್ವರಿಯ ಅಧ್ಯಯನ ನಡೆಸುವವರಿಗೆ ಹೊಸ ಮಾರ್ಗದರ್ಶನವನ್ನು ಕೊಟ್ಟರು. ಶಿವಾಜಿಯ ತಂದೆ ಶಹಾಜಿಯ ಚರಿತ್ರೆಯ ಬಗ್ಗೆ ಜಯರಾಮ್ ಪಿಂಡ್ಯೆ ಬರೆದ ‘ರಾಧಾಮಾಧವ ವಿಲಾಸ ಚಂಪೂ’ ಎಂಬ ಕಾವ್ಯ-ಗ್ರಂಥವನ್ನು ಮತ್ತು ‘ಮಹಿಕಾವತೀಚಿ ಬಖರ್’ ಎಂಬ ಗ್ರಂಥವನ್ನೂ ರಾಜವಾಡೆಯವರು ಸಂಪಾದಿಸಿದರು. ಮಹಾರಾಷ್ಟ್ರದ ಜನ ವಸತಿಗಳು ಅಲ್ಲಿನ ಸಾಮಾಜಿಕ ಜೀವನ ಇವಕ್ಕೆ ಸಂಬಂಧಿಸಿದಂತೆ ರಾಜವಾಡೆಯವರು ನಡೆಸಿದ ಅಧ್ಯಯನ ಮತ್ತು ಅವರು ಅದರ ಬಗ್ಗೆ ಮಾಡಿದ ನಿಷ್ಕರ್ಷೆಗಳನ್ನು ಮೇಲಿನ ಗ್ರಂಥಗಳ ಪ್ರಸ್ತಾವನೆ ಒಳಗೊಂಡಿದೆ.

ಮರಾಠರ ಇತಿಹಾಸದ ಆಕರಗಳ ಸಂಪುಟಗಳಿಗೆ ಅವರು ಬರೆದಿರುವ ದೀರ್ಘ ಪ್ರಸ್ತಾವನೆಗಳು ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಚರ್ಚಿಸುತ್ತವೆ. ಮರಾಠೀ ಇತಿಹಾಸವನ್ನು ವೈಜ್ಞಾನಿಕ ಪದ್ಧತಿಯಲ್ಲಿಯೇ ಬರೆಯಬೇಕೆಂಬ ಅವರ ಆಗ್ರಹ ಅವರ ಆ ಕೃತಿಗಳಲ್ಲಿ ಕಂಡು ಬರುತ್ತದೆ. ರಾಜವಾಡೆಯವರು ಹೇಳುತ್ತಿದ್ದುದು - ‘‘ಪರಿಸ್ಥಿತಿ ಮತ್ತು ಮಾನವ ಇವರ ನಡುವಿನ ಸಂಘರ್ಷದಿಂದ ಇತಿಹಾಸ ರಚಿತವಾಗುತ್ತದೆ. ದೈವೇಚ್ಛೆ, ಯಾವುದೇ ಒಬ್ಬ ವ್ಯಕ್ತಿಯ ಕೆಲಸ ಮಹತ್ವಪೂರ್ಣವಾಗುವುದಿಲ್ಲ. ಆದರೆ ಸಾಧಾರಣ ಮತ್ತು ಅಸಾಧಾರಣ ವ್ಯಕ್ತಿಗಳ ಜೀವನ ಚರಿತ್ರೆ ಒಟ್ಟಿಗೆ ಮೇಳೈಸಿ ಇತಿಹಾಸ ನಿರ್ಮಾಣವಾಗುತ್ತದೆ’’. ಅವರ ಇತಿಹಾಸದ ವ್ಯಾಪಕ ವ್ಯಾಖ್ಯೆಯ ಪ್ರಕಾರ ಇತಿಹಾಸ ಆಯಾ ಕಾಲದ ಸಮಾಜದ ಭೌತಿಕ ಹಾಗೂ ಆತ್ಮಿಕ ಚರಿತ್ರೆಯಾಗಿರುತ್ತದೆ.

ದಿ. ರಾಜವಾಡೆಯವರ ಕಾರ್ಯ ಕೇವಲ ಇತಿಹಾಸಕ್ಕಷ್ಟೇ ಸೀಮಿತವಾಗಿರಲಿಲ್ಲ. ಮರಾಠೀ ಭಾಷಾಶಾಸ್ತ್ರದ ದೃಷ್ಟಿಯಿಂದಲೂ ಅವರು ಬಹಳ ದೊಡ್ಡ ಕೆಲಸ ಮಾಡಿದ್ದಾರೆ. ‘ರಾಜವಾಡೆ ಧಾತುಕೋಶ’ ಮತ್ತು ‘ರಾಜವಾಡೆ ನಾಮಾದಿಶಬ್ದ ವ್ಯತ್ಪತ್ತಿಕೋಶ’ ಈ ಎರಡು ಗ್ರಂಥಗಳು ಅವರ ಅಮೂಲ್ಯ ಬುದ್ಧಿಶಕ್ತಿಯ ಪರಿಚಯ ಮಾಡಿಕೊಡುತ್ತವೆ. ಹಾಗೆಯೇ ದಾಮಲೆಯವರ ವ್ಯಾಕರಣದ ಮೇಲೆ ಅವರು ಬರೆದ ವಿವೇಚನಾತ್ಮಕ ಲೇಖನ ‘ಸುಬಂತ ವಿಚಾರ ಹಾಗೈ ತಿಙಂತ ವಿಚಾರ’ ಮತ್ತು ‘ಸಂಸ್ಕೃತ ಭಾಷೇಚ ಉಪಗಡ’ (ಸಂಸ್ಕೃತ ಭಾಷೆಯ ಸೃಷ್ಟೀಕರಣ) ಎಂಬ ಸ್ವತಂತ್ರ ಗ್ರಂಥ ಅವರ ಸ್ವತಂತ್ರ ವಿಚಾರ ಪ್ರವೃತ್ತಿಯನ್ನು ಪರಿಚಯಿಸುತ್ತವೆ. ಈ ಕೊನೆಯ ಗ್ರಂಥದಲ್ಲಿ ವ್ಯತ್ಪತ್ತಿಯ ಆಧಾರದ ಮೇಲೆ ಮಾನವ ಇತಿಹಾಸದ ಅರ್ಥವನ್ನು ವಿವರಿಸುವ ಅವರ ಪ್ರಯತ್ನ ನಿಸ್ಸಂದೇಹವಾಗಿಯೂ ಅಮೂಲ್ಯವಾದದ್ದು.

ಅನೇಕ ಮಹಾನುಭಾವರ ಗ್ರಂಥಗಳ ಸಾಂಕೇತಿಕ ಭಾಷೆಯ ಸೃಷ್ಟೀಕರಣ ಕುರಿತು ರಾಜವಾಡೆಯವರು ಮಾಡಿರುವ ಕಾರ್ಯವು ಬಹುದೊಡ್ಡ ಸಾಧನೆಯಾಗಿದೆ. ಭಾಷಾಧ್ಯಯನಕ್ಕೆ ಈ ಸೃಷ್ಟೀಕರಣದಿಂದ ಒಂದು ಹೊಸ ಆಯಾಮವೇ ತೆರೆದುಕೊಂಡಿತು. ಇದಲ್ಲದೆ ಕಾಲಕಾಲಕ್ಕೆ ವಿವಿಧ ವಿಷಯಗಳ ಬಗ್ಗೆ ವಿಭಿನ್ನ ಪ್ರಮುಖ ಪತ್ರಿಕೆಗಳಲ್ಲಿ ಅವರ ಲೇಖನ, ಪ್ರಬಂಧಗಳು ಪ್ರಕಟಗೊಂಡವು. ಅವುಗಳ ಸಂಖ್ಯೆ ಬಹುದೊಡ್ಡದು. ನೂರು ವರ್ಷ ಬದುಕಿದ್ದು ಚೆನ್ನಾಗಿ ಕೆಲಸ ಮಾಡಬೇಕೆನ್ನುವುದೇ ರಾಜವಾಡೆಯವರ ಇಚ್ಛೆಯಾಗಿತ್ತು. ವಿದ್ಯಾರ್ಥಿ ಜೀವನದಲ್ಲಿ ಮಾಡಿದ ವ್ಯಾಯಾಮದಿಂದ ಅವರ ಆರೋಗ್ಯವೂ ಚೆನ್ನಾಗಿಯೇ ಇತ್ತು. ಆದರೆ ಸತತವಾದ ಓಡಾಟ ಮತ್ತು ಅನವರತ ನಡೆಸಿದ ಮನನ ಚಿಂತನೆಗಳಿಂದ ಮನಸ್ಸಿನ ಮೇಲಾದ ಆಯಾಸದಿಂದ ಹೆಚ್ಚಿನ ರಕ್ತದ ಒತ್ತಡ ಅವರಿಗೆ ಕಾಯಿಲೆಯಾಗಿ ಹಿಡಿಯಿತು. ಆ ಸ್ಥಿತಿಯಲ್ಲೂ ಅವರು ಕಾರ್ಯತತ್ಪರರಾಗಿದ್ದರು. 1926 ರ ಮಾರ್ಚ್ ತಿಂಗಳಲ್ಲಿ ಟಿಪ್ಪಣಿ ಕಾಗದಗಳಿಂದ ತುಂಬಿದ ಟ್ರಂಕ್ ಮತ್ತು ಅನ್ನ ಬೇಯಿಸಿಕೊಳ್ಳಲು ಬೇಕಾದ ಪಾತ್ರೆಗಳನ್ನು ತೆಗೆದುಕೊಂಡು ಅವರು ‘ಧುಲೆ’ಗೆ ಹೋದರು. ಈ ಹಳ್ಳಿಯ ಜತೆಗೆ ಅವರಿಗೆ ತುಂಬ ಹೆಚ್ಚಿನ ಮತ್ತು ಸ್ನೇಹಪೂರ್ಣ ಸಂಬಂಧವಿತ್ತು. ಅಲ್ಲಿಗೆ ಹೋದ ಮೇಲೂ ಧಾತುಕೋಶವನ್ನು ಪೂರ್ತಿ ಮಾಡುವ ಕೆಲಸ ನಡೆದೇ ಇತ್ತು. ಆದರೆ ಹಠದ ಮನಸ್ಸು ದುರ್ಬಲ ದೇಹದ ಮುಂದೆ ಬಾಗಲೇಬೇಕಾಯಿತು. ದುರ್ವಾಸರಷ್ಟು ಕೋಪಿಷ್ಟ. ಆದರೆ ಅನವರತ ಸಾಧನೆಯಲ್ಲಿ ತೊಡಗಿದ ಈ ಋಷಿಯಂತಹ ಅನ್ವೇಷಕ, ಮಹಾನ್ ವೈಯ್ಯಿಕರಣಿ ಮತ್ತು ಸಮಾಜ ಶಾಸ್ತ್ರಜ್ಞ 1926ರ ಡಿಸೆಂಬರ್ 31 ರಂದು ನಿಧನರಾದರು.

ರಾಜವಾಡೆಯವರು ಇನ್ನಷ್ಟು ಕಾಲ ಬದುಕಿದ್ದರೆ ಆರ್ಯರ ವಿಜಯದ ಬಗ್ಗೆ ದೊಡ್ಡ ಗ್ರಂಥ ಬರೆಯುತ್ತಿದ್ದರು. ಮರಾಠೀ ಇತಿಹಾಸವನ್ನು ಹುಡುಕುವಾಗ ಸಂಪೂರ್ಣ ಆರ್ಯ ಸಂಸ್ಕೃತಿಯ ಇತಿಹಾಸವನ್ನು ಹುಡುಕುವ ತೀವ್ರ ಇಚ್ಛೆ ಅವರ ಮನದಲ್ಲಿ ಹುಟ್ಟಿದ್ದು, ಅದರ ಪರಿಪಾಕ ಈಗ ಹೇಳಿದ ಗ್ರಂಥದ ರೂಪದಲ್ಲಿ ಹೊರಬರುತ್ತಿತ್ತು. ಅದರ ರೂಪುರೇಷೆಗಳನ್ನೂ ಅವರು ತಯಾರಿಸಿದ್ದರು. ‘ಧಾತುಕೋಶ’ ಮತ್ತು ‘ವಿವಾಹ ಸಂಸ್ಥೆಯ ಇತಿಹಾಸ’ ಇವೆರಡು ಗ್ರಂಥಗಳನ್ನು ಪೂರ್ತಿ ಮಾಡಬಹುದಿತ್ತು. ಆದರೆ ಸಾವು ಅವರ ಈ ವಿಶಾಲ ಮನೋರಥವನ್ನು ಮಧ್ಯದಲ್ಲೇ ತಡೆದುಬಿಟ್ಟಿತು. (ಭಾರತೀಯ ವಿವಾಹ ಸಂಸ್ಥೆಯ ಇತಿಹಾಸ ಕೃತಿಯು ಕನ್ನಡಕ್ಕೆ ಅನುವಾದಗೊಂಡಿದೆ.)

ಇತಿಹಾಸದ ಆಚಾರ್ಯರ ಈ ಉತ್ತಮ ಕಾರ್ಯವನ್ನು ಪೂರ್ಣಗೊ ಳಿಸುವ ಸವಾಲನ್ನು ಹೊಸ ಪೀಳಿಗೆ ಸ್ವೀಕರಿಸಿದ್ದೇ ಆದರೆ ಇದೇ ಆ ಮಹಾ ಪುರುಷನಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)