varthabharthi

ಸಂಪಾದಕೀಯ

ಕಾನೂನಿನ ಮುಂದೆ ಬೆತ್ತಲಾದವರು!

ವಾರ್ತಾ ಭಾರತಿ : 5 Dec, 2017

ಕಲ್ಲಡ್ಕದಲ್ಲಿ ಸಂಘಪರಿವಾರ ನಡೆಸಿದ ಹಿಂಸಾಚಾರ, ಕಾನೂನು ಉಲ್ಲಂಘಿಸಿ ಪ್ರತಿಭಟನೆ, ಟಿಪ್ಪು ಜಯಂತಿಯ ಹೆಸರಿನಲ್ಲಿ ದಾಂಧಲೆ, ದತ್ತಮಾಲೆ ಧಾರಣೆಯ ಹೆಸರಿನಲ್ಲಿ ಕಾನೂನು ಉಲ್ಲಂಘನೆ ಇವುಗಳೆಲ್ಲ ಆಕಸ್ಮಿಕವಲ್ಲ, ಕೇಂದ್ರದ ಬಿಜೆಪಿ ವರಿಷ್ಠ ಅಮಿತ್ ಶಾ ಅವರ ಸೂಚನೆಯಂತೆ ನಡೆಯುತ್ತಿದೆ ಎನ್ನುವುದನ್ನು ಮೈಸೂರಿನ ಸಂಸದ ತಮ್ಮ ವೀಡಿಯೊ ಹೇಳಿಕೆಯಲ್ಲಿ ನಾಡಿನ ಜನರಿಗೆ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಪ್ರತಿಭಟನೆಯ ಹೆಸರಲ್ಲಿ ಕಾನೂನನ್ನು ಉಲ್ಲಂಘಿಸಿ ಉದ್ವಿಗ್ನ ವಾತಾವರಣ ಸೃಷ್ಟಿಸಿ ಎಂದು ಅಮಿತ್ ಶಾ ಸೂಚನೆ ನೀಡಿರುವುದನ್ನು ಮತ್ತು ಅದನ್ನು ಅನುಷ್ಠಾನಕ್ಕೆ ತರಲು ಮುಂದಾಗಿರುವುದನ್ನು ಸಂಸದ ಪ್ರತಾಪ್ ಸಿಂಹ ಎಂಬ ಎಳೆ ಬಿಜೆಪಿ ರಾಜಕಾರಣಿ ಸ್ವತಃ ಒಪ್ಪಿಕೊಂಡಿರುವುದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಅವರ ಹೇಳಿಕೆಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವ ಬೆನ್ನಿಗೇ, ಮೈಸೂರಿಗೆ ಬೆಂಕಿ ಹಚ್ಚುವ ಸಂಸದರ ಪ್ರಯತ್ನ, ಪೊಲೀಸರ ಕರ್ತವ್ಯ ನಿಷ್ಠೆಯಿಂದಾಗಿ ವಿಫಲಗೊಂಡಿದೆ.

ತಮ್ಮ ಯೋಜನೆ ವಿಫಲಗೊಂಡ ಹಿನ್ನೆಲೆಯಲ್ಲಿಯೋ ಏನೋ, ಆಕ್ರೋಶಗೊಂಡ ಸಂಸದ ರವಿವಾರ ಪೊಲೀಸ್ ಬ್ಯಾರಿಕೇಡ್‌ನ ಮೇಲೆಯೇ ತಮ್ಮ ವಾಹನವನ್ನು ಹರಿಸಿದ್ದು, ಕೂದಲೆಳೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಾರ್ವಜನಿಕವಾಗಿ ಗೂಂಡಾಗಿರಿ ಪ್ರದರ್ಶಿಸಿದ ಸಂಸದನನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಇದೀಗ ಕರ್ತವ್ಯ ನಿರ್ವಹಿಸಿದ ಪೊಲೀಸರ ವಿರುದ್ಧವೇ ಬಿಜೆಪಿಯ ಮುಖಂಡರು ತಿರುಗಿ ಬಿದ್ದಿದ್ದಾರೆ. ಕಾನೂನು ಉಲ್ಲಂಘಿಸಿದ್ದಷ್ಟೇ ಅಲ್ಲದೆ, ಪೊಲೀಸರಿಗೆ ಬೆದರಿಕೆ ಹಾಕಿ ಬ್ಯಾರಿಕೇಡ್‌ನ ಮೇಲೆಯೇ ವಾಹನ ಓಡಿಸಿದ ಸಂಸದನಿಗೆ ಕರೆದು ಬುದ್ಧಿ ಹೇಳುವ ಬದಲು ಆತನನ್ನು ಸಮರ್ಥಿಸಲು ಮುಂದಾಗಿದ್ದಾರೆ. ಹನುಮ ಜಯಂತಿಯ ಹೆಸರಿನಲ್ಲಿ ಮೈಸೂರು ಜಿಲ್ಲೆಗೆ ಬೆಂಕಿ ಹಚ್ಚಲು ಹೊರಟ ಸಂಘಪರಿವಾರ ನಾಯಕರು ಬಾಲ ಸುಟ್ಟ ಬೆಂಕಿನಂತೆ ಆಡುತ್ತಿದ್ದಾರೆ.

ಇತ್ತೀಚೆಗೆ ರಾಜ್ಯಕ್ಕೆ ಕಾಲಿಟ್ಟ ಅಮಿತ್ ಶಾ, ಕೋಮುಭಾವನೆಗಳನ್ನು ಉದ್ವಿಗ್ನಗೊಳಿಸಿ ಸಮಾಜದ ಶಾಂತಿಯನ್ನು ಕೆಡಿಸಿ ಆ ಮೂಲಕ ಅಧಿಕಾರ ಹಿಡಿಯುವ ತಂತ್ರವನ್ನು ಬಿಜೆಪಿ ನಾಯಕರಿಗೆ ಹೇಳಿಕೊಟ್ಟಿದ್ದಾರೆ ಎಂದು ವಿವಿಧ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ ಇದು ಅನಧಿಕೃತ ಮಾಹಿತಿಯಾಗಿರುವುದರಿಂದ ಅದನ್ನು ಗಂಭೀರವಾಗಿ ಸ್ವೀಕರಿಸುವಂತಿರಲಿಲ್ಲ. ಯಾವಾಗ ಅಮಿತ್ ಶಾ ಕರ್ನಾಟಕಕ್ಕೆ ಕಾಲಿಟ್ಟರೋ ಅಲ್ಲಿಂದ ಒಂದಲ್ಲ ಒಂದು ಉದ್ವಿಗ್ನಕಾರಿ ಪ್ರಕರಣಗಳಿಗೆ ನಾಡು ಸಾಕ್ಷಿಯಾಗುತ್ತಿದೆ. ಗುಜರಾತ್ ಮಾದರಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು ಶಾ ಹೊರಟಿದ್ದಾರೆಯೇ ಎನ್ನುವ ಅನುಮಾನ, ಭಯ ಜನರನ್ನು ಇತ್ತೀಚಿನ ದಿನಗಳಲ್ಲಿ ಕಾಡ ತೊಡಗಿತ್ತು. ಇದೀಗ ಸ್ವತಃ ಸಂಸದ ಪ್ರತಾಪ್ ಸಿಂಹ ಅವರೇ ವೀಡಿಯೊ ಒಂದರಲ್ಲಿ, ನಾವು ಅಮಿತ್ ಶಾ ನಿರ್ದೇಶನದಂತೆ ನಡೆಯುತ್ತಿದ್ದೇವೆ ಎನ್ನುವುದನ್ನು ಒಪ್ಪಿಕೊಂಡಿರುವುದು ರಾಜ್ಯ ಬಿಜೆಪಿಯ ಪಾಲಿಗೆ ನುಂಗಲಾರದ ತುತ್ತಾಗಿದೆ. ಪ್ರತಾಪ್ ಸಿಂಹ ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟ ವೀಡಿಯೊದಲ್ಲಿ, ಮಾಧ್ಯಮಗಳನ್ನು ಟೀಕಿಸುವ ಭರದಲ್ಲಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ‘‘ಅಮಿತ್ ಶಾ ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ ಅಮಿತ್ ಶಾ ನನ್ನನ್ನು ತರಾಟೆಗೆ ತೆಗೆದುಕೊಂಡಿರಲಿಲ್ಲ. ಬದಲಿಗೆ, ಇತ್ತೀಚೆಗೆ ಏನು ಪ್ರತಿಭಟನೆ ಮಾಡಿದ್ದೀರಿ ಎಂದು ಕೇಳಿದರು. ನಾವು ಮಾಡಿರುವ ಪ್ರತಿಭಟನೆಗಳ ವಿವರಣೆ ನೀಡಿದೆವು. ಪ್ರತಿಭಟನೆಯಲ್ಲಿ ಟಿಯರ್‌ಗ್ಯಾಸ್ ಸಿಡಿಸಲಾಗಿದೆಯೇ? ಲಾಠಿ ಚಾರ್ಜ್ ಮಾಡಲಾಗಿದೆಯೇ? ಎಂದು ಅಮಿತ್ ಶಾ ಪ್ರತಿಯಾಗಿ ಪ್ರಶ್ನಿಸಿದ್ದಾರೆ. ನಾವು ಇಲ್ಲ ಎಂದೆವು. ಇಂತಹ ಪ್ರತಿಭಟನೆಗಳಿಂದ ಪ್ರಯೋಜನವಿಲ್ಲ. ಉಗ್ರ ರೀತಿಯ ಪ್ರತಿಭಟನೆ ನಡೆಸಬೇಕು. ಪೊಲೀಸರು ಟಿಯರ್ ಗ್ಯಾಸ್ ಸಿಡಿಸಬೇಕು. ಲಾಠಿ ಚಾರ್ಜ್ ಮಾಡಬೇಕು....’’ ಇತ್ಯಾದಿ ಸೂಚನೆಗಳನ್ನು ಅಮಿತ್ ಶಾ ನೀಡಿದರು ಎಂದು ವೀಡಿಯೊದಲ್ಲಿ ಯಾವ ನಾಚಿಕೆ, ಅಂಜಿಕೆ ಇಲ್ಲದೆ ಪ್ರತಾಪ್ ಸಿಂಹ ಹೇಳಿಕೊಂಡಿದ್ದಾರೆ. ಅಂದರೆ ಅಮಿತ್ ಶಾ ಅವರು ಸೂಚಿಸಿದ ಪ್ರತಿಭಟನೆಯ ಉದ್ದೇಶ ಜನರ ಬೇಡಿಕೆಗೆ ಧ್ವನಿಯಾಗುವುದಲ್ಲ. ಬದಲಿಗೆ ಸಮಾಜದ ಶಾಂತಿಯನ್ನು ಕೆಡಿಸುವುದು. ಪೊಲೀಸರು ಲಾಠಿ ಚಾರ್ಜ್ ಮಾಡುವುದು, ಟಿಯರ್ ಗ್ಯಾಸ್ ಸಿಡಿಸುವುದು ಯಾವಾಗ? ಪ್ರತಿಭಟನಾಕಾರರು ಕಾನೂನನ್ನು ಕೈಗೆತ್ತಿಕೊಂಡಾಗ. ಅಂದರೆ ಅಮಿತ್ ಶಾ ಪರೋಕ್ಷವಾಗಿ ಬಿಜೆಪಿಗೆ ನಿರ್ದೇಶಿಸಿರುವುದು ಕಾನೂನನ್ನು ಕೈಗೆತ್ತಿಕೊಳ್ಳಿ ಎಂದಾಗಿದೆ. ಕಲ್ಲಡ್ಕ ಗಲಭೆ, ಟಿಪ್ಪು ಜಯಂತಿ ಹಾರಾಟ, ದತ್ತ ಜಯಂತಿಯ ಹೆಸರಲ್ಲಿ ದಾಂಧಲೆ, ಹನುಮಜಯಂತಿ ಇವೆಲ್ಲವೂ ಯಾಕೆ ಧರ್ಮದ ಹೆಸರಲ್ಲಿ ಆರಂಭಗೊಂಡು, ಕ್ರಿಮಿನಲ್ ಕೃತ್ಯಗಳಲ್ಲಿ ಮುಕ್ತಾಯವಾಗುತ್ತಿದೆ ಎನ್ನುವುದಕ್ಕೆ ಪ್ರತಾಪ್‌ಸಿಂಹ ಹೇಳಿಕೆಯಲ್ಲಿ ಉತ್ತರವಿದೆ.

ಇವೆಲ್ಲವೂ ಪೂರ್ವನಿಯೋಜಿತವಾಗಿದೆ. ದುಷ್ಕರ್ಮಿಗಳನ್ನು ಸಂಘಟಿಸಿ ಅವರ ಮುಖಾಂತರ ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಮಾಡುವುದು ಬಿಜೆಪಿಯ ಉದ್ದೇಶ. ಆ ಮೂಲಕ ಸಮಾಜವನ್ನು, ಪೊಲೀಸ್ ಇಲಾಖೆಯನ್ನು ಪ್ರಚೋದಿಸುವುದು. ಸಮಾಜದ ಶಾಂತಿಯನ್ನು ಕೆಡಿಸಿ, ಅದರ ಹೊಣೆಯನ್ನು ರಾಜ್ಯ ಸರಕಾರದ ಮೇಲೆ ಕಟ್ಟುವುದು. ದತ್ತ ಪೀಠದಲ್ಲಿ ಶಾಂತಿಯಿಂದ ಮೆರವಣಿಗೆ ಸಾಗುತ್ತಿದ್ದಾಗ ಕೆಲವು ದುಷ್ಕರ್ಮಿಗಳು ಬೇಲಿ ಹಾರಿ ಗೋರಿಗಳನ್ನು ಧ್ವಂಸಗೊಳಿಸಲು ಯತ್ನಿಸಿದ್ದು ಇದೇ ಕಾರಣಕ್ಕಾಗಿದೆ. ಹುಣಸೂರಿನಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮತೆಗೆದುಕೊಂಡು ಮೀಲಾದುನ್ನಬಿ ಮೆರವಣಿಗೆ ಮತ್ತು ಹನುಮಜಯಂತಿ ಮೆರವಣಿಗೆಗಳು ಇಂತಹದೇ ನಿರ್ದಿಷ್ಟ ದಾರಿಯಲ್ಲಿ ಸಾಗಬೇಕು ಎಂದು ಪೊಲೀಸರು ಸೂಚನೆ ನೀಡಿದ್ದರು. ಆದರೆ ಕಟ್ಟಕಡೆಯಲ್ಲಿ ದಾರಿಯನ್ನು ಬದಲಿಸಲು ಯತ್ನಿಸಿರುವುದರ ಉದ್ದೇಶವೇನು? ಯಾವುದೇ ಧಾರ್ಮಿಕ ಕಾರ್ಯಕ್ರಮಗಳು, ಆಚರಣೆಗಳು ಸಮಾಜಕ್ಕೆ ಒಳಿತನ್ನು ಮಾಡುವ ಉದ್ದೇಶವನ್ನು ಹೊಂದಿರಬೇಕು. ಆದರೆ ಸಮಾಜಕ್ಕೆ ಕೆಡುಕು ಬಗೆಯಬೇಕು ಎನ್ನುವ ಉದ್ದೇಶದಿಂದಲೇ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಧರ್ಮಕ್ಕೂ, ನಾಡಿಗೂ ಮಾಡುವ ವಂಚನೆಯಾಗಿದೆ. ಅಂತಹದೊಂದು ವಂಚನೆಯನ್ನು ಮಾಡಲು ಹೋಗಿ ನಾಡಿನ ಮುಂದೆ ಈ ಸಂಸದರು ಬೆತ್ತಲೆಯಾಗಿದ್ದಾರೆ.

 ರಾಜ್ಯದಲ್ಲಿ ಜನಸಾಮಾನ್ಯರ ಹತ್ತು ಹಲವು ಮೂಲಭೂತ ಸಮಸ್ಯೆಗಳಿವೆ. ಅವುಗಳನ್ನು ಎತ್ತಿಕೊಂಡು ಜನರ ಧ್ವನಿಯಾಗುವುದನ್ನು ಬಿಟ್ಟು, ಜನರ ಇರುವ ಸಮಸ್ಯೆಗಳಿಗೆ ಇನ್ನಷ್ಟು ಸಮಸ್ಯೆಗಳನ್ನು ಹೇರುತ್ತಾ ಹೋಗುವ ಬಿಜೆಪಿಯ ತಂತ್ರ ಜನದ್ರೋಹ ರಾಜಕಾರಣವಾಗಿದೆ. ಬಿಜೆಪಿಯ ನಾಯಕರೇ ಕಾನೂನು ಉಲ್ಲಂಘಿಸುವ ನೇತೃತ್ವವನ್ನು ವಹಿಸಿದರೆ, ಇನ್ನು ಕಾರ್ಯಕರ್ತರ ಪಾಡೇನು? ತಮ್ಮ ಅನುಯಾಯಿಗಳಿಗೆ ಕಾನೂನು ಉಲ್ಲಂಘಿಸುವಂತೆ ಪ್ರಚೋದನೆ ನೀಡುವ ಉದ್ದೇಶ ಇದರ ಹಿಂದೆ ಇದೆ. ಗುಜರಾತ್, ಉತ್ತರ ಪ್ರದೇಶದಲ್ಲಿ ನಡೆಸಿದಂತೆ ಕೋಮುವಾದಿ ರಾಜಕಾರಣವನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಬಿಜೆಪಿ ಹವಣಿಸುತ್ತಿರುವುದು ಸ್ಪಷ್ಟ. ಆದರೆ ಕರ್ನಾಟಕ ಬಸವಣ್ಣನ ನಾಡು. ಸೂಫಿ ಸಂತರು, ಶಿಶುನಾಳ ಶರೀಫರು ಆಗಿ ಹೋದ ನಾಡು. ಭಾವೈಕ್ಯ ಈ ನಾಡಿನ ಉಸಿರು. ಇಲ್ಲಿ ದ್ವೇಷ ರಾಜಕಾರಣ ಹೆಚ್ಚು ಸಮಯ ಬಾಳದು. ಜನ ಸಾಮಾನ್ಯರ ನಿಜವಾದ ಸಮಸ್ಯೆಗಳಿಗೆ ಧ್ವನಿಯಾದಾಗ ಮತ್ತೆ ಜನರು ಬಿಜೆಪಿಯ ದಿಕ್ಕಿಗೆ ದೃಷ್ಟಿ ಹರಿಸಿಯಾರು. ನಿನ್ನೆ ನಡೆದ ಘಟನೆಗಳಿಗೆ ಪೊಲೀಸ್ ಇಲಾಖೆಯನ್ನು ದೂಷಿಸುವ ಬದಲು, ಬಿಜೆಪಿ ನಾಯಕರು ತಮ್ಮನ್ನು ತಾವು ತಿದ್ದಿಕೊಳ್ಳಬೇಕಾಗಿದೆ. ಜನರು ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸುವ ಮೊದಲು ಮೈಸೂರಿನ ಸಂಸದನನ್ನು ಕರೆದು ಆತನ ಕಿವಿ ಹಿಂಡಬೇಕಾಗಿದೆ. ಜೊತೆಗೆ ಕರ್ನಾಟಕ ಇನ್ನೊಂದು ಗುಜರಾತ್ ಅಲ್ಲ ಮತ್ತು ಕರ್ನಾಟಕಕ್ಕೆ ಗುಜರಾತ್ ಮಾದರಿಯಾಗಲಾರದು ಎನ್ನುವುದನ್ನು ಬಿಜೆಪಿ ನಾಯಕರೇ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)