varthabharthi

ಸಂಪಾದಕೀಯ

ಕೊಟ್ಟ ವಚನ ಮುರಿದವರಿಂದ ವಚನ ಪರಿಪಾಲಕನಿಗೊಂದು ಮಂದಿರ!

ವಾರ್ತಾ ಭಾರತಿ : 6 Dec, 2017

ಡಿಸೆಂಬರ್ 6ನ್ನು ಎರಡು ಕಾರಣಕ್ಕಾಗಿ ಪ್ರಜಾಸತ್ತೆಯ ಮೇಲೆ ನಂಬಿಕೆಯುಳ್ಳ ಭಾರತೀಯರು ಸ್ಮರಿಸುತ್ತಾರೆ. ಅಂದು ಡಾ. ಬಿ.ಆರ್.ಅಂಬೇಡ್ಕರ್ ನಿಧನರಾಗಿರುವ ದಿನ. 1992ರವರೆಗೂ ಆ ದಿನ ವಿಷಾದದ ದಿನವಾಗಿ ದೇಶವನ್ನು ಕಾಡುತ್ತಿತ್ತು. ಈ ದೇಶದ ತಳಸ್ತರದ ಜನರಿಗೆ ನಿಜವಾದ ಅರ್ಥದಲ್ಲಿ ಸ್ವಾತಂತ್ರವನ್ನು ತಂದುಕೊಡಲು ತನ್ನ ಕೊನೆಯ ಉಸಿರಿನವರೆಗೆ ಹೋರಾಡಿದ ಮಹಾ ನಾಯಕ ನಿರ್ಗಮಿಸಿದ ಈ ದಿನ ಭಾರತೀಯರೆಲ್ಲರಿಗೂ ನೋವು ಕೊಟ್ಟ ದಿನವಾಗಿದೆ. ವಿಪರ್ಯಾಸವೆಂದರೆ ಇದೇ ದಿನವನ್ನು ಇಂದು ಈ ದೇಶದ ಒಂದು ಗುಂಪು ‘ವಿಜಯದ ದಿನ’ ಎಂದು ಆಚರಿಸುತ್ತಿದೆ. ಅಂಬೇಡ್ಕರ್ ಅವರ ಸಂವಿಧಾನವನ್ನು ಧ್ವಂಸಗೊಳಿಸುವ ಮೂಲಕ ಅವರು ಈ ದಿನವನ್ನು ತಮ್ಮ ಸಂಭ್ರಮದ ದಿನವಾಗಿ ಪರಿವರ್ತಿಸಿದರು.

ಅಂಬೇಡ್ಕರ್ ಸಂವಿಧಾನವನ್ನು ಧ್ವಂಸಗೊಳಿಸಲು ಅವರು ಆರಿಸಿದ ದಿನ ಅಂಬೇಡ್ಕರ್ ಮೃತಪಟ್ಟ ದಿನವೇ ಆಗಿರುವುದು ಆಕಸ್ಮಿಕ ಅಲ್ಲ. ತಮ್ಮ ದುರುದ್ದೇಶಕ್ಕೆ ಅವರು ಬಾಬರಿ ಮಸೀದಿಯನ್ನು ಒಂದು ನೆಪವಾಗಿ ಬಳಸಿಕೊಂಡರು. ಈ ಮೂಲಕ ಅವರು ಅಂಬೇಡ್ಕರ್ ನಿಧನರಾದ ದಿನವನ್ನು ತಮ್ಮ ಸಂಭ್ರಮದ, ವಿಜಯದ ದಿನವಾಗಿ ಬದಲಿಸಿಕೊಂಡರು ಮತ್ತು ಪ್ರತೀ ವರ್ಷ ಅವರು ಅದನ್ನು ಆಚರಿಸುತ್ತಾ ಬರುತ್ತಿದ್ದಾರೆ. ಬಾಬರ್ ಮುಸ್ಲಿಮರ ಧಾರ್ಮಿಕ ನಾಯಕನೇನೂ ಅಲ್ಲ. ಅವನೊಬ್ಬ ವಿಲಾಸಿ ರಾಜನೆಂಬ ಹೆಗ್ಗಳಿಕೆಯನ್ನು ಪಡೆದಾತ. ಈ ದೇಶದ ಹಿಂದೂ ರಾಜರ ಆಹ್ವಾನದ ಮೇರೆಗೇ ಆತ ಭಾರತದತ್ತ ಸೇನೆಯೊಂದಿಗೆ ಆಗಮಿಸಿದ. ಇಲ್ಲವಾದರೆ ಈ ದೇಶದಲ್ಲಿ ಮೊಘಲರ ಪ್ರವೇಶವೇ ಆಗುತ್ತಿರಲಿಲ್ಲವೇನೋ.

ಬಂದವನು ಭಾರತವನ್ನು ಇಷ್ಟಪಟ್ಟ. ಈ ದೇಶದ ಸೌಂದರ್ಯಕ್ಕೆ ಮಾರು ಹೋಗಿ ತನ್ನ ತಾಯ್ನೆಡನ್ನೇ ಮರೆತ. ಬಾಬರ್ ಈ ದೇಶವನ್ನು ದೋಚಿಕೊಂಡು ತನ್ನ ನಾಡಿಗೆ ಕೊಂಡೊಯ್ಯಲಿಲ್ಲ. ಬದಲಿಗೆ ಭಾರತವನ್ನೇ ತನ್ನ ತಾಯ್ನೆಡಾಗಿ ಆರಿಸಿಕೊಂಡ. ಆತ ಮತ್ತು ಅನಂತರದ ಮೊಗಲ್ ಅರಸರು ಭಾರತಕ್ಕೆ ಕೊಟ್ಟ ಕೊಡುಗೆಗಳು ಅಪಾರ. ಅವರೆಲ್ಲರೂ ತಮ್ಮನ್ನು ತಾವು ಮುಸ್ಲಿಮರೆಂದು ಗುರುತಿಸಿಕೊಂಡದ್ದು ಕಡಿಮೆ. ಎಲ್ಲ ರಾಜರಂತೆಯೇ ಅವರೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದರು. ಆವರೆಗೆ ಭಾರತದ ಆಳರಸರಿಂದ ಸಣ್ಣ ಸಣ್ಣ ತುಂಡುಗಳಾಗಿ ಹಂಚಿಹೋಗಿದ್ದ ಭಾರತ ಮೊಗಲ್ ಚಕ್ರವರ್ತಿಗಳ ದೆಸೆಯಿಂದಾಗಿ ಒಂದಾಯಿತು. ಬಳಿಕ ಬಂದ ಬ್ರಿಟಿಷರು ಈ ಭಾರತಕ್ಕೆ ಒಂದು ಅಧಿಕೃತ ನಕ್ಷೆಯನ್ನು ಕೊಟ್ಟರು. ಮೊಗಲರು ಮುಸ್ಲಿಮರಿಗೆ ಕೊಟ್ಟ ಕೊಡುಗೆಗಳಿಗಿಂತ ಭಾರತಕ್ಕೆ ಕೊಟ್ಟ ಕೊಡುಗೆಗಳೇ ಬಹುದೊಡ್ಡದು. ಬಾಬರ್‌ನಿಗೂ ಮುಸ್ಲಿಮರಿಗೂ ಯಾವುದೇ ಆಧ್ಯಾತ್ಮಿಕವಾದ ನಂಟುಗಳು ಇಲ್ಲ. ಬಾಬರೀ ಮಸೀದಿಯನ್ನೇ ತೆಗೆದುಕೊಳ್ಳೋಣ. ಬಾಬರ್ ನಿರ್ಮಾಣ ಮಾಡಿದ ಮಸೀದಿಯೆಂದು ಮುಸ್ಲಿಮರಿಗೆ ಅದರ ಮೇಲೆ ವಿಶೇಷ ಅಕ್ಕರೆಯೇನೂ ಇಲ್ಲ. ಅವರ ಪಾಲಿಗೆ ಈ ದೇಶದ ಲಕ್ಷಾಂತರ ಮಸೀದಿಗಳಲ್ಲಿ ಅದೂ ಒಂದು ಅಷ್ಟೆ. ಇಷ್ಟಕ್ಕೂ ಈ ದೇಶದ ಮುಸ್ಲಿಮರಿಗೆ ಮಸೀದಿಯ ಕೊರತೆ ಎಂದೂ ಕಾಡಿದ್ದಿಲ್ಲ. ಮಸೀದಿಯ ಕೊರತೆಯಿಂದಾಗಿ ಅವರ ಪ್ರಾರ್ಥನೆಗೆ ಅಡಚಣೆಯಾದ ಉದಾಹರಣೆಯೂ ಇಲ್ಲ.

ಆದರೆ ದೇಶದ ಸಕಲ ಭಾರತೀಯರ ಪಾಲಿಗೆ ಬಾಬರಿ ಮಸೀದಿಯೊಂದಿಗೆ ಒಂದು ನಂಟಿತ್ತು. ಆ ನಂಟು, ತಾಜ್‌ಮಹಲ್, ಕೆಂಪುಕೋಟೆಯಂತಹ ಕಟ್ಟಡಗಳ ಜೊತೆಗಿರುವ ಸಂಬಂಧ. ಬಾಬರೀ ಮಸೀದಿ ಒಂದು ಐತಿಹಾಸಿಕ ಕಟ್ಟಡವಾಗಿತ್ತು. ಅದರ ಉಸ್ತುವಾರಿಯನ್ನು ಈ ದೇಶವನ್ನಾಳುವ ಸರಕಾರ ಹೊಂದಿತ್ತು. ಮುಸ್ಲಿಮರಿಗೆ ವೈಯಕ್ತಿಕವಾಗಿ ಆ ಕಟ್ಟಡ ಬೇಡ ಅನ್ನಿಸಿದರೂ, ಅದನ್ನು ಧ್ವಂಸಗೊಳಿಸುವಂತಿಲ್ಲ. ಅದರ ಹಕ್ಕುದಾರರು ಈ ದೇಶದ ಸಕಲ ಭಾರತೀಯರು. ಮುಸ್ಲಿಮರು, ಕ್ರಿಶ್ಚಿಯನ್ನರು, ಹಿಂದೂಗಳು, ಸಿಖ್ಖರು ಎಲ್ಲರೂ ಆ ಕಟ್ಟಡದ ಜೊತೆಗೆ ಸಮಾನವಾದ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಡಿಸೆಂಬರ್ 6ರಂದು ದುಷ್ಕರ್ಮಿಗಳು ಆ ಕಟ್ಟಡವನ್ನು ನಾಶ ಮಾಡುವ ಮೂಲಕ ಸಕಲ ಭಾರತೀಯರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದರು. ಭಾರತೀಯತೆಯನ್ನು ಜೊತೆ ಜೊತೆಗೇ ನಾಶ ಮಾಡುವ ಉದ್ದೇಶವನ್ನು ಅವರು ಹೊಂದಿದ್ದರು.

 ಎರಡನೆಯದಾಗಿ, ಆ ಕಟ್ಟಡವನ್ನು ಧ್ವಂಸಗೊಳಿಸುವ ಮೂಲಕ ನ್ಯಾಯವ್ಯವಸ್ಥೆಯ ಘನತೆಗೆ ಧಕ್ಕೆ ತಂದರು. ನ್ಯಾಯಾಲಯಕ್ಕೆ ಕೊಟ್ಟ ಮಾತನ್ನು ಉಲ್ಲಂಘಿಸಿ ಹಾಡಹಗಲೇ ಆ ಕಟ್ಟಡವನ್ನು ನಾಶ ಮಾಡಿದ ದುಷ್ಕರ್ಮಿಗಳ ನಿಜವಾದ ಗುರಿ ಅಂಬೇಡ್ಕರ್ ಸಂವಿಧಾನವಾಗಿತ್ತು. ಆದುದರಿಂದಲೇ, ಬಾಬರಿ ಮಸೀದಿ ಧ್ವಂಸ ಈ ದೇಶದ ಮುಸ್ಲಿಮರಿಗಾದ ಹಾನಿಯೆಂದು ವ್ಯಾಖ್ಯಾನಿಸುವುದು ತಪ್ಪು. ಅಂದು ನಾಶವಾದುದು ಈ ದೇಶದ ಸಂವಿಧಾನದ ಆಶಯ. ಅದೂ ಅಂಬೇಡ್ಕರ್ ತೀರಿ ಹೋದ ದಿನವೇ ಅದು ಸಂಭವಿಸಿತು. ಆದುದರಿಂದಲೇ, ನಾಳೆ ಈ ದೇಶದ ಮುಸ್ಲಿಮರು ‘ನಮಗೆ ಬಾಬರಿ ಮಸೀದಿಯ ಪುನರ್ ರ್ನಿರ್ಮಾಣದ ಅಗತ್ಯವಿಲ್ಲ’ ಎಂದು ಹೇಳಿದರೂ ಸಮಸ್ಯೆ ಮುಗಿಯುವುದಿಲ್ಲ.

ಯಾಕೆಂದರೆ ಮೊದಲೇ ಹೇಳಿದಂತೆ ಬಾಬರಿ ಮಸೀದಿ ಒಂದು ನೆಪ ಮಾತ್ರ. ಅಲ್ಲಿ ನಿಜಕ್ಕೂ ನಿರ್ಮಾಣವಾಗಬೇಕಾದುದು ಧ್ವಂಸಗೊಂಡಿರುವ ನ್ಯಾಯವ್ಯವಸ್ಥೆ. ನಮ್ಮ ಸಂವಿಧಾನದ ಆಶಯಗಳು ಆ ಸ್ಥಳದಲ್ಲಿ ಪುನರ್ನಿರ್ಮಾಣವಾಗಬೇಕು. ಇದು ಮುಸ್ಲಿಮರ ಅಗತ್ಯ ಮಾತ್ರವಲ್ಲ, ಸಕಲ ಭಾರತೀಯರ ಅಗತ್ಯವಾಗಿದೆ. ಈ ದೇಶದ ಸಂವಿಧಾನದ ಮೇಲೆ, ನ್ಯಾಯವ್ಯವಸ್ಥೆಯ ಮೇಲೆ, ಅಂಬೇಡ್ಕರ್ ಮೇಲೆ ಗೌರವವಿರುವ ಪ್ರತಿಯೊಬ್ಬನಿಗೂ ಡಿಸೆಂಬರ್ 6 ವಿಷಾದದ ದಿನ. ಈ ದೇಶದ ನ್ಯಾಯವ್ಯವಸ್ಥೆ, ಪ್ರಜಾಸತ್ತೆಯ ಮೇಲೆ ನಂಬಿಕೆಯುಳ್ಳ ಯಾವನೇ ಭಾರತೀಯ ಆ ದಿನವನ್ನು ಸಂಭ್ರಮಿಸಲಾರ. ಬಾಬರಿ ಮಸೀದಿ ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸುವ ಕುರಿತಂತೆ ಮತ್ತೆ ಚರ್ಚೆಗಳು ಆರಂಭಗೊಂಡಿವೆ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಈ ಬಗೆಗಿನ ಚರ್ಚೆಯನ್ನು ತೀವ್ರಗೊಳಿಸುವುದು ರಾಜಕಾರಣಿಗಳು ಮತ್ತು ಸನ್ಯಾಸಿಗಳ ನಡುವಿನ ಒಳ ಒಪ್ಪಂದವಾಗಿದೆ. ಬಾಬರಿ ಮಸೀದಿ ಧ್ವಂಸಗೊಳಿಸಿರುವುದೇ ಸಂವಿಧಾನ ವಿರೋಧಿಯಾಗಿರುವಾಗ, ಅಲ್ಲಿ ಮತ್ತೆ ದೇವಸ್ಥಾನವನ್ನು ನಿರ್ಮಾಣ ಮಾಡುವುದು ಎಷ್ಟರಮಟ್ಟಿಗೆ ನ್ಯಾಯಯುತವಾಗುತ್ತದೆ? ನ್ಯಾಯಾಲಯಕ್ಕೆ ಕೊಟ್ಟ ಭರವಸೆಯನ್ನು ಉಲ್ಲಂಘಿಸಿ ಬಾಬರಿ ಮಸೀದಿ ಧ್ವಂಸಗೈದ ಆರೋಪಿಗಳಿಗೆ ಶಿಕ್ಷೆಯಾಗುವುದು ಇಂದಿನ ಅಗತ್ಯವಾಗಿದೆ. ನ್ಯಾಯಾಲಯ ಈ ಕುರಿತಂತೆ ತ್ವರಿತ ವಿಚಾರಣೆ ನಡೆಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಾಗಿದೆ.

ಇದರಲ್ಲಿ ವಿಫಲವಾದರೆ ನ್ಯಾಯಾಲಯ ಸ್ವತಃ ಆತ್ಮಹತ್ಯೆ ಮಾಡಿಕೊಂಡಂತೆ. ಯಾಕೆಂದರೆ ಡಿಸೆಂಬರ್ 6ರಂದು ಅನ್ಯಾಯ, ವಂಚನೆಯಾಗಿರುವುದು ನ್ಯಾಯವ್ಯವಸ್ಥೆಗೆ. ತನಗಾದ ಅನ್ಯಾಯಕ್ಕೆ ನ್ಯಾಯ ನೀಡಲಾಗದ ನ್ಯಾಯವ್ಯವಸ್ಥೆ, ಉಳಿದವರಿಗಾದ ಅನ್ಯಾಯಗಳಿಗೆ ಎಷ್ಟರಮಟ್ಟಿಗೆ ಪರಿಹಾರ ನೀಡೀತು? ಇಂದು ಸಂಘಪರಿವಾರಕ್ಕೆ ಅಯೋಧ್ಯೆಯಲ್ಲಿ ದೇವಸ್ಥಾನದ ಅಗತ್ಯ ಬಿದ್ದಿರುವುದು ರಾಮನ ಮೇಲಿನ ಭಕ್ತಿಯಿಂದಲ್ಲ, ಬದಲಿಗೆ ಅಲ್ಲಿ ಮಸೀದಿಯಿದೆ ಎನ್ನುವ ಕಾರಣಕ್ಕಾಗಿ. ನಾಳೆ ಅಲ್ಲಿ ರಾಮಮಂದಿರ ನಿರ್ಮಾಣವಾದರೂ ಈ ಸಮಸ್ಯೆ ಬಗೆ ಹರಿಯುವುದಿಲ್ಲ. ಯಾಕೆಂದರೆ ಅದು ಇನ್ನಷ್ಟು ದೇವಸ್ಥಾನಗಳನ್ನು ಬಯಸುತ್ತಿದೆ. ಕಾಶಿ, ಮಥುರಾ ಎಂದು ಅದರ ಪಟ್ಟಿ ವಿಸ್ತರಣೆಗೊಳ್ಳಲಿದೆ.

ಮುಖ್ಯವಾಗಿ ಅವರಿಗೆ ಆ ಮೂಲಕ ಭಕ್ತಿಯನ್ನು ಹರಡುವುದು ಗುರಿಯಲ್ಲ, ಬದಲಿಗೆ ದ್ವೇಷವನ್ನು ಹರಡುವುದು ಬೇಕಾಗಿದೆ. ಶ್ರೀರಾಮ ವಚನ ಪರಿಪಾಲಕ. ತಂದೆಗೆ ಕೊಟ್ಟ ಮಾತು ಪಾಲಿಸಲು ಎಲ್ಲವನ್ನೂ ತೊರೆದು ಕಾಡಿಗೆ ನಡೆದ. ಹಿಗಿರುವಾಗ ನ್ಯಾಯಾಲಯಕ್ಕೆ ನೀಡಿದ ವಚನವನ್ನು ಮುರಿದು ಕಟ್ಟುವ ರಾಮಮಂದಿರದಲ್ಲಿ ಖಂಡಿತವಾಗಿಯೂ ರಾಮ ನೆಲೆ ನಿಲ್ಲಲು ಸಾಧ್ಯವೆ? ವಚನ ಮುರಿದ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುವುದೇ ರಾಮನಿಗೆ ಸಂಘಪರಿವಾರ ಮಾಡುವ ಅತೀ ದೊಡ್ಡ ಅವಮಾನ. ಆ ಸ್ಥಳದಲ್ಲಿ ರಾಮಮಂದಿರ ನಿರ್ಮಾಣವಾಗುವುದನ್ನು ತಡೆದು ನಾವು ಏಕಕಾಲದಲ್ಲಿ ಸಂವಿಧಾನ ಮತ್ತು ಶ್ರೀರಾಮನ ವೌಲ್ಯಗಳನ್ನು ಕಾಪಾಡಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)