varthabharthi

ವಿಶೇಷ-ವರದಿಗಳು

ಜಾಗತಿಕವಾಗಿ ವಿಸ್ತರಣೆಗೊಳ್ಳುತ್ತಿರುವ ಪ್ರತಿಷ್ಠಿತ ‘ತುಂಬೆ ಗ್ರೂಪ್’

ಕರ್ನಾಟಕದಲ್ಲಿ ಶೀಘ್ರ ಬೃಹತ್ ಯೋಜನೆ: ಡಾ. ತುಂಬೆ ಮೊಯ್ದಿನ್

ವಾರ್ತಾ ಭಾರತಿ : 6 Dec, 2017
ಸಂದರ್ಶನ: ಪುಷ್ಪರಾಜ್ ಬಿ.ಎನ್.

ಯುಎಇಯಲ್ಲಿ ಹುಟ್ಟಿ ಜಾಗತಿಕವಾಗಿ ಬೆಳಗಿದ ತುಂಬೆ ಗ್ರೂಪ್!

►2.1 ಬಿಲಿಯನ್ ಡಾಲರ್(ಹದಿಮೂರುವರೆ ಸಾವಿರ ಕೋಟಿ ರೂಪಾಯಿ) ಮೌಲ್ಯದ ಬಹುರಾಷ್ಟ್ರೀಯ ಕಂಪೆನಿ 

►ಮಧ್ಯಪ್ರಾಚ್ಯದ ಪ್ರತಿಷ್ಠಿತ ಖಾಸಗಿ ವೈದ್ಯಕೀಯ ವಿವಿಗಳಲ್ಲಿ ಒಂದಾದ ಗಲ್ಫ್ ಮೆಡಿಕಲ್ ವಿವಿ ತುಂಬೆ ಸಮೂಹದ ಹೆಮ್ಮೆಯ ಸಂಸ್ಥೆ

►175ಕ್ಕೂ ಹೆಚ್ಚು ದೇಶಗಳ ಜನರಿಗೆ ಆರೋಗ್ಯ ಸೇವೆ

►75ಕ್ಕೂ ಹೆಚ್ಚು ದೇಶಗಳ ವಿದ್ಯಾರ್ಥಿಗಳು, 22ಕ್ಕೂ ಹೆಚ್ಚು ದೇಶಗಳ ಶಿಕ್ಷಕರು

►ಗಲ್ಫ್‌ನಲ್ಲೇ ಅತೀ ದೊಡ್ಡ ಖಾಸಗಿ ಆಸ್ಪತ್ರೆಗಳ ಜಾಲ

►ಜಾಗತಿಕ ಗುಣಮಟ್ಟದ ಹೆಲ್ತ್ ಕ್ಲಬ್‌ಗಳು ಹಾಗೂ ಸ್ಪಾಗಳ ಸರಣಿ

►ಖ್ಯಾತ ಕಾಫಿ ಶಾಪ್‌ಗಳು ಹಾಗೂ ರೆಸ್ಟೋರೆಂಟ್‌ಗಳು

►ಖ್ಯಾತ ಆರೋಗ್ಯ ಹಾಗೂ ಜೀವನ ಶೈಲಿಯ ಮ್ಯಾಗಝಿನ್ ಪ್ರಕಾಶನ


ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳು, ಗೌರವಗಳು ಡಾ.ತುಂಬೆ ಮೊಯ್ದಿನ್‌ರನ್ನು ಅರಸಿಕೊಂಡು ಬಂದಿವೆ. ಇವೆಲ್ಲವೂ ಯುಎಇ ಸರಕಾರದ ಪ್ರೋತ್ಸಾಹ ಹಾಗೂ ನನ್ನ ಕುಟುಂಬ ಮತ್ತು ತಂಡದ ಸಹಕಾರದಿಂದ ಸಾಧ್ಯವಾಗಿದೆ ಎಂದು ವಿನೀತರಾಗಿ ಹೇಳುತ್ತಾರೆ ತುಂಬೆ ಮೊಯ್ದಿನ್. ಅವರಿಗೆ ಸಂದಿರುವ ಪ್ರಶಸ್ತಿ, ಪುರಸ್ಕಾರಗಳಲ್ಲಿ ಅತ್ಯಂತ ಆಯ್ದ ಕೆಲವು ಇಲ್ಲಿವೆ.

►ದುಬೈಯ ಅಮಿಟಿ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ

►ಎನ್‌ಡಿಟಿವಿಯ ಗಲ್ಫ್ ಇಂಡಿಯನ್ ಎಕ್ಸಲೆನ್ಸ್ ಪ್ರಶಸ್ತಿ

►ಪ್ರತಿಷ್ಠಿತ ಫೋರ್ಬ್ಸ್‌ನ ಅರಬ್ ಜಗತ್ತಿನ ಟಾಪ್ ಭಾರತೀಯ ನಾಯಕರ ಪಟ್ಟಿಯಲ್ಲಿ ಸತತ ನಾಲ್ಕು ವರ್ಷ ಸ್ಥಾನ (2014-2017)

►ಪ್ರತಿಷ್ಠಿತ ಫೋರ್ಬ್ಸ್ ಮಿಡ್ಲ್ ಈಸ್ಟ್‌ನ ಮುಖಪುಟದಲ್ಲಿ ಸ್ಥಾನ (2016)

►ಗಲ್ಫ್ ದೇಶಗಳ 50 ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ (2013)

►ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಅತ್ಯುತ್ತಮ ಹಳೆ ವಿದ್ಯಾರ್ಥಿ ಪ್ರಶಸ್ತಿ (2016)


ದಕ್ಷಿಣ ಕನ್ನಡ ಜಿಲ್ಲೆಯ ಪುಟ್ಟ ಗ್ರಾಮ ತುಂಬೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದವರು ಡಾ.ತುಂಬೆ ಮೊಯ್ದಿನ್. ಇವರು ತುಂಬೆಯ ಹಿರಿಯ ಉದ್ಯಮಿ, ಸಾಮಾಜಿಕ, ಧಾರ್ಮಿಕ ಧುರೀಣ ಡಾ. ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರ ಸುಪುತ್ರ. ಮಂಗಳೂರಿನ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿ. ಇಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅತ್ಯಂತ ಪ್ರಭಾವೀ ಉದ್ಯಮಿಗಳಲ್ಲಿ ಒಬ್ಬರು.

1998ರಲ್ಲಿ ಅವರು ಯುಎಇಯಲ್ಲಿ ಪ್ರಾರಂಭಿಸಿದ ತುಂಬೆ ಗ್ರೂಪ್ ಕೇವಲ ಎರಡು ದಶಕಗಳಲ್ಲಿ ಇಡೀ ಮಧ್ಯಪ್ರಾಚ್ಯದ ಅತ್ಯಂತ ಪ್ರತಿಷ್ಠಿತ ಬಹುರಾಷ್ಟ್ರೀಯ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿ ರೂಪುಗೊಂಡಿದೆ. ಜೊತೆಗೆ ಈಗ ಜಾಗತಿಕವಾಗಿ ಬಹಳ ವೇಗವಾಗಿ ಬೆಳೆಯುತ್ತಿರುವ ಬೃಹತ್ ಸಂಸ್ಥೆ. ಶಿಕ್ಷಣ, ವೈದ್ಯಕೀಯ ಸೇವೆ, ಸಂಶೋಧನೆ, ಫಾರ್ಮಸಿ, ಪ್ರಕಾಶನ, ತಂತ್ರಜ್ಞಾನ ಸಹಿತ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತುಂಬೆ ಗ್ರೂಪ್ ಯಶಸ್ವಿ ಉದ್ಯಮ ಸಂಸ್ಥೆಗಳನ್ನು ನಡೆಸುತ್ತಿದೆ.

ಪ್ರತಿಷ್ಠಿತ ಫೋರ್ಬ್ಸ್ ಪ್ರಕಟಿಸಿರುವ ಅರಬ್ ಜಗತ್ತಿನ ಅತ್ಯಂತ ಪ್ರಭಾವಿ 100 ಕಂಪೆನಿಗಳಲ್ಲಿ ಒಂದೆಂಬ ಹೆಗ್ಗಳಿಕೆ ತುಂಬೆ ಸಮೂಹದ್ದು. ಸಣ್ಣ ವಯಸ್ಸಿನಲ್ಲೇ ಉದ್ಯಮ ರಂಗಕ್ಕೆ ಕಾಲಿಟ್ಟ ಡಾ.ಮೊಯ್ದಿನ್, ತಮ್ಮ ಶಿಸ್ತು, ಚಾಣಾಕ್ಷತೆ, ದಕ್ಷತೆ, ಅತ್ಯುತ್ತಮ ಸೇವೆಗಳ ಮೂಲಕ ಬಹಳ ಬೇಗ ಅದ್ಭುತ ಯಶಸ್ಸು ಗಳಿಸಿದವರು. ತಮ್ಮ ತಂದೆ ಅಹ್ಮದ್ ಹಾಜಿ ಹಾಗೂ ಅಜ್ಜ ಯೆನೆಪೊಯ ಮೊಯ್ದಿನ್ ಕುಂಞಿ ಅವರ ವ್ಯವಹಾರ ಕೌಶಲ್ಯಗಳನ್ನು ನೋಡಿ ಪಡೆದ ಸ್ಫೂರ್ತಿಯಿಂದ ಕೆಲವೇ ವರ್ಷಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸುತ್ತಾ ಹೋದರು. ಇಂದು ಅವರು ಗಲ್ಫ್ ದೇಶಗಳಲ್ಲೇ ಅತ್ಯಂತ ಹೆಸರುವಾಸಿ ಭಾರತೀಯ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಯುಎಇ ದೊರೆಗಳ ಜೊತೆ ಅತ್ಯಂತ ಆಪ್ತ ಒಡನಾಟ ಹೊಂದಿದ್ದಾರೆ.

ಡಾ.ತುಂಬೆ ಮೊಯ್ದಿನ್‌ರ ಪತ್ನಿ ರೊಹ್ರಾ ಮೊಯ್ದಿನ್. ಪುತ್ರರಲ್ಲಿ ಓರ್ವರಾದ ಅಕ್ಬರ್ ಮೊಯ್ದಿನ್‌ರವರು ತುಂಬೆ ಸಮೂಹದ ಆರೋಗ್ಯ ಸೇವೆಗಳ ವಿಭಾಗದ ಉಪಾಧ್ಯಕ್ಷ ರಾಗಿದ್ದಾರೆ. ಇನ್ನೋರ್ವ ಪುತ್ರ ಅಕ್ರಮ್ ಮೊಯ್ದಿನ್ ತುಂಬೆ ಟೆಕ್ನಾಲಜಿಸ್‌ನ ನಿರ್ದೇಶಕರಾಗಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಂಬೆಗೆ ಆಗಮಿಸಿದ್ದ ಡಾ.ತುಂಬೆ ಮೊಯ್ದಿನ್ ‘ವಾರ್ತಾಭಾರತಿ’ ಜೊತೆ ಮಾತನಾಡಿದರು. ಅದರ ಆಯ್ದ ಭಾಗ ಇಲ್ಲಿದೆ.

ವಾರ್ತಾಭಾರತಿ: ತುಂಬೆಯಂತಹ ಸಣ್ಣ ಗ್ರಾಮದಿಂದ ವಿದೇಶಕ್ಕೆ ತೆರಳಿ ಅಲ್ಲಿ ಪ್ರತಿಷ್ಠಿತ ಶಿಕ್ಷಣ, ಆರೋಗ್ಯ ಹಾಗೂ ಇತರ ಉದ್ಯಮ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿದ್ದೀರಿ. ಇದೆಲ್ಲಾ ಹೇಗೆ ಸಾಧ್ಯವಾಯಿತು?
ಡಾ.ತುಂಬೆ ಮೊಯ್ದಿನ್: ನಾನು 1997ರಲ್ಲಿ ಉದ್ಯೋಗವನ್ನರಸಿ ಗಲ್ಫ್‌ಗೆ ಹೋದೆ. ಬಳಿಕ ಅಜ್ಮಾನ್‌ನ ಆಡಳಿತಗಾರರ ಸಂಪರ್ಕ ಸಿಕ್ಕಿತು. ಇದು ಹೇಳುವುದು ಸುಲಭ. ಆದರೆ ಅದಕ್ಕಾಗಿ ಬಹಳ ಶ್ರಮಪಟ್ಟಿದ್ದೇನೆ. ಅವರ ಸಹಕಾರದಲ್ಲಿ ವೈದ್ಯಕೀಯ, ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದೆ. ಹಾಗೆ ಗಲ್ಫ್ ಮೆಡಿಕಲ್ ಕಾಲೇಜು ಸ್ಥಾಪಿಸಲು ಸಾಧ್ಯವಾಯಿತು. ಭಾರತೀಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾಲೇಜನ್ನು ನಾವು ಪ್ರಾರಂಭಿಸಿದೆವು. ಈಗ ಈ ಸಂಸ್ಥೆ ಗಲ್ಫ್ ಮೆಡಿಕಲ್ ವಿಶ್ವವಿದ್ಯಾನಿಲಯವಾಗಿದೆ. ಇಲ್ಲಿ 80 ದೇಶಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 25 ದೇಶಗಳ ಸಂಪನ್ಮೂಲ ವ್ಯಕ್ತಿಗಳು ಇಲ್ಲಿ ಬೋಧಕರಾಗಿ, ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 175ಕ್ಕೂ ಅಧಿಕ ದೇಶಗಳ ಜನರು ನಮ್ಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಊರಿನ ಹೆಸರಾದ ‘ತುಂಬೆ’ಯನ್ನೇ ಸಂಸ್ಥೆಗೆ ಇಟ್ಟೆ. ಆಗ ತುಂಬೆ ಎಂಬ ಹೆಸರು ಅತ್ಯಂತ ಅಪರೂಪ. ಆದರೆ ಈಗ ಆ ಹೆಸರು ವ್ಯಾಪಕ ಜನಪ್ರಿಯತೆ ಗಳಿಸಿದೆ. ಎಲ್ಲ ಧರ್ಮಗಳ ಹಲವಾರು ಜನರ ಹೆಸರಿನೊಂದಿಗೆ ತುಂಬೆ ಎನ್ನುವ ಹೆಸರು ಸೇರಿಕೊಂಡಿದೆ. ಇದು ನನಗೆ ಅತ್ಯಂತ ಸಂತಸ ತಂದಿದೆ. ಸಂಸ್ಥೆ ಇಷ್ಟು ವಿಸ್ತಾರವಾಗಿ ಬೆಳೆಯಲು ಕಾರಣರಾದ ಅಜ್ಮಾನ್ ಆಡಳಿತಗಾರರಿಗೆ, ನಮ್ಮ ತಂಡಕ್ಕೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ದೇವರಿಗೆ ನಾನು ಋಣಿಯಾಗಿದ್ದೇನೆ.


ವಾ.ಭಾ: ನಿಮ್ಮ ಮುಂದಿನ ಯೋಜನೆಗಳು ಏನು.?
ಡಾ.ತುಂಬೆ ಮೊಯ್ದಿನ್: ಯಶಸ್ಸಿನ ತಳಹದಿಯ ಮೂಲಕ ನಮ್ಮ ಸಮೂಹ ಸಂಸ್ಥೆಯನ್ನು ಇನ್ನಷ್ಟು ವಿಸ್ತರಿಸುವ ಗುರಿ ಇದೆ. ಸದ್ಯ ಆರೋಗ್ಯ, ಶಿಕ್ಷಣ ಕ್ಷೇತ್ರದ ಸಂಸ್ಥೆಗಳು, 60 ಫಾರ್ಮಸಿಗಳಿವೆ. ರೆಸ್ಟೋರೆಂಟ್, ರಿಟೈಲ್ ಉದ್ಯಮ, ಹೆಲ್ತ್ ಕ್ಲಬ್‌ಗಳು, ವಿಮಾ ಕ್ಷೇತ್ರ, ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರ ಸೇರಿದಂತೆ ಈಗ ಇರುವ ಸಂಸ್ಥೆಗಿಂತ ಹತ್ತು ಪಟ್ಟು ಹೆಚ್ಚು ಮತ್ತು ಜಾಗತಿಕವಾಗಿ ವಿಸ್ತರಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ನನ್ನಿಬ್ಬರು ಪುತ್ರರಾದ ಅಕ್ಬರ್ ಮತ್ತು ಅಕ್ರಮ್ ಸಹಕಾರ ನೀಡುತ್ತಿದ್ದಾರೆ. ಒಮನ್, ಕತರ್, ಆಫ್ರಿಕ, ಘಾನಾ, ಭಾರತದ ಹೈದರಾಬಾದ್ ಸೇರಿದಂತೆ ಹಲವೆಡೆ ಉದ್ಯಮ ಕ್ಷೇತ್ರವನ್ನು ವಿಸ್ತರಿಸುವ ಮಹತ್ವದ ಯೋಜನೆಯ ಕನಸಿದೆ.


ವಾ.ಭಾ.: ಮಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಏನಾದರೂ ನೂತನ ಯೋಜನೆ ಆರಂಭಿಸುವ ಉದ್ದೇಶ ಇದೆಯೇ?

ಡಾ.ತುಂಬೆ ಮೊಯ್ದಿನ್: ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಉದ್ಯಮ ವಿಸ್ತರಿಸುವ ಅವಕಾಶಗಳ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ನಮ್ಮ ಯೋಚನೆಗೆ ಪೂರಕವಾಗಿರುವ ಕ್ಷೇತ್ರಗಳಲ್ಲಿ ಮುಂದುವರಿಯುವ ಚಿಂತನೆ ಇದೆ. ಕರ್ನಾಟಕದಲ್ಲಿ ಹೂಡಿಕೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನಿಸಿದ್ದಾರೆ. ಮುಂದಿನ ಜನವರಿ ಅಥವಾ ಫೆಬ್ರವರಿಯೊಳಗೆ ಕರ್ನಾಟಕದಲ್ಲಿ ದೊಡ್ಡ ಯೋಜನೆಯೊಂದರ ಒಡಂಬಡಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಮಾತುಕತೆ ನಡೆದಿದೆ.


 ವಾ.ಭಾ: ನೀವು ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದೀರಿ. ಸದ್ಯದ ಗಲ್ಫ್ ರಾಷ್ಟ್ರಗಳ ಆರ್ಥಿಕ ಪರಿಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಡಾ.ತುಂಬೆ ಮೊಯ್ದಿನ್: ಮಧ್ಯಪ್ರಾಚ್ಯದ ಅಥವಾ ವಿಶ್ವದ ಇತರ ದೇಶಗಳಿಗೆ ಹೋಲಿಸಿದಾಗ ಯುಎಇ ಯಲ್ಲಿ ಹೆಚ್ಚು ಸದೃಢತೆ, ದೂರದೃಷ್ಟಿಯಿಂದ ಕೂಡಿದ ಸರಕಾರವಿದೆ. ನಮ್ಮ ಅದೃಷ್ಟ. ಯುಎಇ ಅತ್ಯಂತ ಸುಂದರ ದೇಶ. ಸರಕಾರವೂ ಸುಸ್ಥಿರ. ಹಾಗಾಗಿ ಅಲ್ಲಿ ಉದ್ಯಮಿಗಳಿಗೆ ಅತ್ಯಂತ ಪೂರಕ ವಾತಾವರಣವಿದೆ. ಇನ್ನು ಭಾರತ ಹಾಗೂ ಭಾರತೀಯರ ಬಗ್ಗೆ ಯುಎಇಗೆ ಹಿಂದಿನಿಂದಲೂ ವಿಶೇಷ ಆತ್ಮೀಯತೆ ಇದೆ. ಭಾರತದ ಬಗ್ಗೆ ಅಲ್ಲಿನ ಆಡಳಿತಗಾರರಿಗೆ ಗೌರವವಿದೆ. ಭಾರತ ಜಗತ್ತಿನಲ್ಲೇ ಅತಿದೊಡ್ಡ ಆರ್ಥಿಕತೆಯಾಗುತ್ತಿದೆ. ಇದನ್ನು ಯುಎಇ ಧನಾತ್ಮಕವಾಗಿ ಪರಸ್ಪರ ಬೆಳವಣಿಗೆಗೆ ಪೂರಕವಾಗಿ ನೋಡುತ್ತಿದೆ. ಇದು ಬಹಳ ಮುಖ್ಯ. ಇನ್ನು ಯಾವುದೇ ದೇಶದ ಆರ್ಥಿಕ ಬೆಳವಣಿಗೆಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಸರಕಾರ ಮುಂಗಡ ಪತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ಈ ಕ್ಷೇತ್ರಕ್ಕೆ ನಾವೂ ಕೊಡುಗೆ ನೀಡಿದ್ದೇವೆ.


ವಾ.ಭಾ: ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದ ಕನಸು ಕಾಣುವ ಕರಾವಳಿ ಕರ್ನಾಟಕದ ಯುವಜನತೆಗೆ ನಿಮ್ಮ ಸಲಹೆ ಏನು?
ಡಾ. ತುಂಬೆ ಮೊಯ್ದಿನ್: ಅವಕಾಶ ಎಲ್ಲಾ ಕಡೆ ಇದೆ. ಗಲ್ಫ್‌ಗೆ ನಾನು ಪ್ರವೇಶ ಮಾಡಿದ್ದೇ 1997ರಲ್ಲಿ. ಆಗ ಬಹಳ ಜನ ನೀನು ತುಂಬಾ ತಡವಾಗಿ ಬಂದೆ ಎಂದಿದ್ದರು. ನನಗಿಂತ ಮೊದಲು 1974ರಲ್ಲಿ. ಡಾ ಬಿ.ಆರ್.ಶೆಟ್ಟಿ ಗಲ್ಫ್‌ಗೆ ಹೋಗಿದ್ದರು. ಅದಕ್ಕೂ ಮೊದಲು ಲುಲು ಗ್ರೂಪ್‌ನ ಯೂಸುಫ್ ಅಲಿ ಗಲ್ಫ್ ಸೇರಿದ್ದರು. ಆದರೆ ನಾನು ಅಲ್ಲಿಂದ ಈ ಹಂತಕ್ಕೆ ಬಂದು ತಲುಪಿದ್ದೇನೆ. ಪ್ರತಿಭೆ, ಕಠಿಣ ಪರಿಶ್ರಮಿಗಳಿಗೆ ಸಾಧನೆಗೆ ಯಾವತ್ತೂ, ಎಲ್ಲಿಯೂ ಸಾಕಷ್ಟು ಅವಕಾಶ ಇದ್ದೇ ಇರುತ್ತದೆ.


ವಾ.ಭಾ: ಅನಿವಾಸಿ ಭಾರತೀಯರಿಗೆ ಅಧಿಕೃತ ಪ್ರತಿನಿಧಿಯ ಮೂಲಕ ಮತ ಚಲಾಯಿಸಲು ಕಾನೂನು ತಿದ್ದುಪಡಿಗೆ ಕೇಂದ್ರ ಸರಕಾರ ಸಮ್ಮತಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಡಾ.ತುಂಬೆ ಮೊಯ್ದಿನ್: ಅದೊಂದು ಉತ್ತಮ ನಿರ್ಧಾರ. ಇದರಿಂದ ಅನಿವಾಸಿಯರಿಗೂ ದೇಶದ ಸರಕಾರ ರಚನೆಯಲ್ಲಿ ರಚನಾತ್ಮಕ ಪಾತ್ರ ನಿರ್ವಹಿಸುವ ಅವಕಾಶ ಸಿಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)