varthabharthi

ಕರಾವಳಿ

ಮೋದಿಯವರ ಢೋಂಗಿತನ ಕರ್ನಾಟಕದಲ್ಲಿ ನಡೆಯದು: ಸಿದ್ದರಾಮಯ್ಯ

ವಾರ್ತಾ ಭಾರತಿ : 6 Dec, 2017

ಭಟ್ಕಳ,ಡಿ.6: 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಎಂಬ ಢೋಂಗಿತನದೊಂದಿಗೆ ದೇಶದ ಒಂದು ಪ್ರಮುಖ ಸಮುದಾಯವನ್ನು ಹೊರಗಿಟ್ಟು ಬಾಯಿಮಾತಿನ ವಿಕಾಸ ಮಾಡುತ್ತಿರುವ ಮೋದಿಯವರ 'ಢೋಂಗಿತನ' ಕರ್ನಾಟಕದಲ್ಲಿ ನಡೆಯದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬುಧವಾರ ಇಲ್ಲಿನ ಪೊಲೀಸ್ ಮೈದಾನದಲ್ಲಿ ನಡೆದ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು. 

ನಾವು ಪರಸ್ಪರ ಪ್ರೀತಿ, ಗೌರವಗಳಿಂದ ಬದುಕಬೇಕು. ಪರಸ್ಪರ ಬೇಧ ಹುಟ್ಟುಹಾಕುವಂತಹ, ಬೆಂಕಿ ಇಡುವಂತಹ ಕೆಲಸ ಯಾರೇ ಮಾಡಲಿ ಅದನ್ನು ಎಲ್ಲರು ಒಕ್ಕೊರಲಿನಿಂದ ಖಂಡಿಸಬೇಕು. ಆಗ ಮಾತ್ರ ಈ ದೇಶದ ಸಮಗ್ರತೆ, ಸಾರ್ವಭೌಮತೆ, ಸಂವಿಧಾನದಲ್ಲಿ ಉಲ್ಲೇಖಿತ ಜಾತ್ಯಾತೀತ ಸಮಾಜ ನಿರ್ಮಾಣ ಸಾಧ್ಯ ಎಂದರು. 

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ 6.30 ಕೋಟಿ ಜನರಿಗೆ ಸಮಾನವಾಗಿ ಕಾರ್ಯಕ್ರಮಗಳನ್ನು ನೀಡಿದ್ದೇವೆ. ಯೋಜನೆಗಳು ಎಲ್ಲಾ ಜಾತಿ ಧರ್ಮದವರಿಗಾಗಿದೆ. ಬಡವರು ಯಾವುದೇ ಜಾತಿಯವರಾಗಲಿ ಅವರಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದು ನಾನು ತಿಳಿದುಕೊಂಡಿದ್ದೇನೆ. 1.8ಲಕ್ಷ ಮಂದಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 7ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಇದು ಜನಪರ ಸರ್ಕಾರ. ನಾವು ನುಡಿದಂತೆ ನಡೆದಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ನಾವು ರಾಜ್ಯವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುತ್ತಿದ್ದರೆ ಬಿಜೆಪಿಯವರು ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ, ಅನಂತ್ ಕುಮಾರ್ ಹೆಗಡೆಯಂತಹ ನೂರು ಜನ ಬಂದರೂ ರಾಜ್ಯವನ್ನು ಕಾಂಗ್ರೆಸ್ ಮುಕ್ತವನ್ನಾಗಿ ಮಾಡಲು ಸಾಧ್ಯವಿಲ್ಲ. ಧೈರ್ಯವಿದ್ದರೆ ಅದನ್ನು ಮಾಡಿ ತೋರಿಸಿ ಎಂದು ಸವಾಲೆಸೆದರು.

ನಮ್ಮ ಬಳಿ ಹೇಳಿಕೊಳ್ಳಲು ಹಲವಾರು ಜನಪರ ಯೋಜನೆಗಳಿವೆ. ಆದರೆ ನಿಮ್ಮಲ್ಲೇನಿದೆ. ಸೀರೆ ಕೊಟ್ಟಿದ್ದೇನೆ, ಸೈಕಲ್ ಕೊಟ್ಟಿದ್ದೇನೆ. ಅದಕ್ಕೂ ಹೆಚ್ಚು ಅಂದ್ರೆ ಜೈಲಿಗೆ ಹೋಗಿದ್ದೇನೆ ಎಂದಷ್ಟೇ ಹೇಳಬಹುದು ಎಂದು ಬಿಜೆಪಿಯನ್ನು ಸಿಎಂ ಟೀಕಿಸಿದರು. ರಾಜ್ಯದ ರೈತರ ಸಾಲಮನ್ನಾ ಮಾಡಿದ ನಾವು ಕೇಂದ್ರ ಸರ್ಕಾರ ಯಾವುದೇ ರೀತಿಯ ಸಹಕಾರ ನೀಡಲಿಲ್ಲ. 8160 ಕೋಟಿ ರೂ. ಸಾಲಮನ್ನಾ ಮಾಡಲಾಗಿದ್ದು, ಮೋದಿಯವರು ಒಂದು ನಯಾಪೈಸೆಯನ್ನು ಮನ್ನಾ ಮಾಡಲಿಲ್ಲ ಎಂದರು.

ರಾಜ್ಯದ ಇತಿಹಾಸದಲ್ಲೇ ಹಗರಣ, ಭ್ರಷ್ಟಾಚಾರ ರಹಿತ ಸರ್ಕಾರ ಎಂಬ ಹೆಗ್ಗಳಿಕೆ ನಮ್ಮದು. ಮುಂದಿನ ಚುನಾವಣೆಯಲ್ಲೂ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಟಿಪ್ಪುವನ್ನು ಹಾಡಿ ಹೊಗಳಿದವರೇ ಇಂದು ಟಿಪ್ಪು ಒಬ್ಬ ಮತಾಂಧ ಎಂದು ಹೇಳುತ್ತಿದ್ದಾರೆ. ಇವರಿಗೆ ಇರುವ ನಾಲಗೆ ಎಷ್ಟು ಎನ್ನುವುದು ರಾಜ್ಯದ ಜನತೆಗೆ ತೋರಿಸಬೇಕ . ದೇಶದ ಚರಿತ್ರೆಯನ್ನು ಅರಿಯದವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳನ್ನು ಅರಿಯುವುದರ ಮೂಲಕ ದೇಶದ ಇತಿಹಾಸವನ್ನು ಅರಿಯಬಹುದಾಗಿದೆ. ರಾಜಕಾರಣಕ್ಕಾಗಿ ಏನು ಬೇಕಾದರೂ ಮಾತನಾಡಬಹುದು ಎಂದು ಸಾಬೀತು ಮಾಡಿರುವ ಅನಂತ್ ಕುಮಾರ್ ಹೆಗಡೆ ತಮ್ಮ ನಾಲಗೆಯ ಮೂಲಕ ತಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತಿದ್ದಾರೆ. ಸಂಸ್ಕೃತಿ ಸಂಸ್ಕಾರ ಎಂದು ಬೊಗಳೆ ಬಿಡುವವರ ಸಂಸ್ಕಾರ ಹೇಗಿದೆ ಎನ್ನುವುದು ಜನರಿಗೆ ಗೊತ್ತಾಗಿದೆ. ಉತ್ತರಕನ್ನಡ ಜಿಲ್ಲೆಯ ಜನ ಸುಸಂಸ್ಕೃತರು. ಆದರೆ ಈ ಅನಂತ್ ಕುಮಾರ್ ಹೆಗಡೆ ಇದಕ್ಕೆ ಅಪವಾದವಾಗಿದ್ದಾರೆ ಎಂದರು. 

ಈ ಸಂದರ್ಭ ಸಚಿವ ಎಚ್.ಸಿ. ಮಾಹದೇವಪ್ಪ, ಆರ್.ವಿ.ದೇಶಪಾಂಡೆ, ಶಾಸಕ ಮಾಂಕಾಳ್ ವೈದ್ಯ ಉಪಸ್ಥಿತರಿದ್ದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)