varthabharthi

ನಿಮ್ಮ ಅಂಕಣ

ಕೋಮು ದ್ವೇಷದಿಂದ ಯಾರಿಗೆ ಲಾಭ?

ವಾರ್ತಾ ಭಾರತಿ : 7 Dec, 2017
-ಆರ್. ಬಿ. ಶೇಣವ, ಮಂಗಳೂರು

 ಮಾನ್ಯರೇ,

‘ಗುಜರಾತ್ ಮಾದರಿ ಅಭಿವೃದ್ಧಿ’ ಗುಜರಾತ್‌ನಲ್ಲಿಯೇ ಫ್ಲಾಪ್ ಆದ ಮೇಲೆ ಅಲ್ಲಿ ಆ ಪಕ್ಷದವರಲ್ಲಿ ಹೇಳಿಕೊಳ್ಳುವಂತಹದ್ದು ಏನೂ ಉಳಿದಿಲ್ಲ. ಅದಕ್ಕಾಗಿ ಅವರು ಜನರ ಗಮನ ಬೇರೆಡೆ ಸೆಳೆಯಲು ದೇವರು, ಧರ್ಮ, ಜನಿವಾರ ಇತ್ಯಾದಿ ವಿಷಯಗಳ ಬಗ್ಗೆ ವಾದ-ವಿವಾದಕ್ಕೆ ಇಳಿಯುತ್ತಿದ್ದಾರೆ. ಗುಜರಾತ್‌ನಲ್ಲಿ ಹಿಂದಿನ 22 ವರ್ಷಗಳಲ್ಲಿ ಹಲವು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈಗ 60 ಲಕ್ಷ ಯುವಕರು ನಿರುದ್ಯೋಗಿಯಾಗಿದ್ದಾರೆ, ನೋಟು ರದ್ದತಿಯಿಂದ ಗುಜರಾತ್‌ಒಂದರಲ್ಲಿಯೇ 15 ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ ಹಾಗೂ 10 ಲಕ್ಷ ಸಣ್ಣ ವ್ಯಾಪಾರಿಗಳು ದಿವಾಳಿ ಎದ್ದು ತಮ್ಮ ವ್ಯಾಪಾರ ಬಂದ್ ಮಾಡಿ ಮನೆ ಸೇರಿದ್ದಾರೆ. ಕೇವಲ ಹಿಂದಿನ ಮೂರು ವರ್ಷಗಳಲ್ಲಿ ಗುಜರಾತ್‌ನಲ್ಲಿ ಸಾವಿರಾರು ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ, ಸಾವಿರಗಟ್ಟಲೆ ಮಕ್ಕಳು ಕಾಣೆಯಾಗಿದ್ದಾರೆ. ಈ ಬಗ್ಗೆ ಸಂಘಪರಿವಾರಿಗರ ಪಕ್ಷ ಮಾತನಾಡುತ್ತಿಲ್ಲ. ದೂರದ ಅಯೋಧ್ಯೆಯಲ್ಲಿ ಸಿಮೆಂಟಿನ ಮಂದಿರ ಕಟ್ಟಿದ ಕೂಡಲೇ ಎಲ್ಲವೂ ಸರಿಯಾಗುತ್ತದೆಯೇ? ಅಯೋಧ್ಯೆಯಲ್ಲಿ ಕೇವಲ ನಾಲ್ಕು ಬ್ರಾಹ್ಮಣರಿಗೆ ಹತ್ತು ಪಾಂಡಾಗಳಿಗೆ ಪೂಜೆಯ ಕೆಲಸ ಸಿಗಬಹುದು ಅಷ್ಟೇ. ದೇಶದ ಸಮಸ್ಯೆ ಒಂದಿಷ್ಟೂ ಕಡಿಮೆಯಾಗುವುದಿಲ್ಲ. ಒಂದೊಮ್ಮೆ ಮಂದಿರ ನಿರ್ಮಾಣವಾದರೂ ಕೋಮುದ್ವೇಷ ಕಡಿಮೆಯಾಗುವುದಿಲ್ಲ, ಯಾಕೆಂದರೆ ಕೇವಲ ಕೋಮು ದ್ವೇಷ ಹಬ್ಬಿಸಿ ಅಧಿಕಾರ ಪಡೆದ ರಾಜಕೀಯ ಪಕ್ಷವು ಇದನ್ನು ಜೀವಂತವಾಗಿ ಇಡಲು ಮತ್ತೆ ಯಾವುದಾದರೂ ನೆಪ ಹುಡುಕುತ್ತದೆ. ಈಗಾಗಲೇ ಅಯೋಧ್ಯೆಯ ನಂತರ ಕಾಶಿ-ಮಥುರಾ ಎಂದು ಸಂಘ ಪರಿವಾರದವರು ಹೇಳುತ್ತಲೇ ಇದ್ದಾರೆ. ಕೋಮು ದ್ವೇಷ ಹುಟ್ಟಿಸಿ ಈಗಾಗಲೇ ಬಂಪರ್ ಲಾಭ ಪಡೆದವರಿಗೆ ಈ ದ್ವೇಷ ಕಡಿಮೆಯಾಗುವುದು ಬೇಡವೇ ಬೇಡ. ಹಾಗಾಗಿ ಅವರು ಏನೇನೋ ನೆಪದಲ್ಲಿ ಕೋಮು ದ್ವೇಷವನ್ನು ಜೀವಂತವಾಗಿ ಇಡುತ್ತಲೇ ಹೋಗುತ್ತಾರೆ.


ಗುಜರಾತ್ ಈಗಲೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕೆಳಗಿನ 15ನೇ ಸ್ಥಾನದಲ್ಲಿದೆ. ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಅದು ತುಂಬಾ ಕೆಳಗಿನ 26ನೇ ಸ್ಥಾನದಲ್ಲಿದೆ. ಪಾಕಿಸ್ತಾನ ಗಡಿಗೆ ತಾಗಿರುವ ಪಶ್ಚಿಮ ಗುಜರಾತ್‌ನ ಕಛ್ ಪ್ರದೇಶವಂತೂ ಈಗಲೂ ಬೆಂಗಾಡು ಆಗಿದ್ದು ಅಲ್ಲಿಯ ಹೆಣ್ಣು ಮಕ್ಕಳು ಕುಡಿಯುವ ನೀರಿಗೆ ಪ್ರತೀದಿನ 4-5 ಕಿ.ಮೀ. ನಡೆಯಬೇಕಾಗುತ್ತದೆ. ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ನಂತರ ಗುಜರಾತ್ ಮೂರನೆಯ ಸ್ಥಾನದಲ್ಲಿ ಇದೆ. ಗುಜರಾತಿ ರೈತರು ಕರ್ನಾಟಕದ ರೈತರಿಗಿಂತಲೂ ಹೆಚ್ಚು ಬಡವರಾಗಿದ್ದಾರೆ (ನಾನು ಗುಜರಾತ್‌ನಲ್ಲಿ ಹಲವು ವರ್ಷ ಉದ್ಯೋಗ ಮಾಡಿ ಬಂದವನು). ಆಳುವವರು ಪ್ರಾಮಾಣಿಕರಾಗಿದ್ದು ಪ್ರಜೆಗಳು ಶ್ರಮಜೀವಿಗಳಾಗಿದ್ದರೆ ಮಾತ್ರ ದೇಶ ಉನ್ನತಿ ಹೊಂದುತ್ತದೆ, ಆದರೆ ಜನರಲ್ಲಿ ಕೋಮುದ್ವೇಷ ಹುಟ್ಟಿಸಿ ಸುಲಭದಲ್ಲಿ ಅಧಿಕಾರ ಪಡೆಯುವವರಿಗೆ ಸೋಮನಾಥ, ಅಯೋಧ್ಯೆ ರಾಮಮಂದಿರ, ದತ್ತಪೀಠ ಇಂತಹ ವಿಷಯಗಳೇ ಬೇಕು ಅಷ್ಟೇ. ದೇವರನ್ನೂ ಪೆದ್ದ, ಮೂರ್ಖ ಎಂದು ಭಾವಿಸುವ ಭಕ್ತರೇ ಭಾರತದಲ್ಲಿ ಹೆಚ್ಚು. 

 

Comments (Click here to Expand)