varthabharthi

ಸಂಪಾದಕೀಯ

ಅಭಿವೃದ್ಧಿ ಯೋಜನೆ: ತಾರತಮ್ಯ ಬೇಡ

ವಾರ್ತಾ ಭಾರತಿ : 7 Dec, 2017

ಕರ್ನಾಟಕ ಏಕೀಕರಣಗೊಂಡು ಆರು ದಶಕಗಳು ಗತಿಸಿದವು. ಭೌಗೋಳಿಕವಾಗಿ ಕನ್ನಡನಾಡು ಒಂದಾಯಿತು. ಆದರೆ, ಭಾವನಾತ್ಮಕವಾಗಿ ಈ ರಾಜ್ಯ ಒಂದಾಗಿದೆಯೇ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ. ಕನ್ನಡ ಭಾಷಿಕ ಪ್ರದೇಶಗಳೆಲ್ಲ ಏಕೀಕರಣಕ್ಕಿಂತ ಮುಂಚೆ ಅಕ್ಕಪಕ್ಕದ ರಾಜ್ಯಗಳಲ್ಲಿ ಹಂಚಿಹೋಗಿದ್ದವು. ಅವಿಭಜಿತ ಬಿಜಾಪುರ, ಧಾರವಾಡ ಹಾಗೂ ಕಾರವಾರ ಮತ್ತು ಬೆಳಗಾವಿ ಜಿಲ್ಲೆಗಳು ಮಹಾರಾಷ್ಟ್ರದಲ್ಲಿದ್ದವು. ಕಲಬುರ್ಗಿ, ಬೀದರ್, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳು ಹೈದರಾಬಾದ್ ಪ್ರಾಂತದಲ್ಲಿದ್ದವು. ದಕ್ಷಿಣಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು ಹಳೆ ಮದ್ರಾಸ್ ಪ್ರಾಂತದಲ್ಲಿದ್ದವು. ಈ ಕನ್ನಡ ಭಾಷಿಕ ಪ್ರದೇಶಗಳನ್ನೆಲ್ಲಾ ಒಂದುಗೂಡಿಸಿ 1956ರಲ್ಲಿ ಕರ್ನಾಟಕ ರಾಜ್ಯ ನಿರ್ಮಾಣವಾಯಿತು.

ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಕರ್ನಾಟಕ ರಾಜ್ಯ ನಿರ್ಮಾಣವಾದರೂ ಪ್ರಾದೇಶಿಕ ತಾರತಮ್ಯ ಮತ್ತು ಅಸಮತೋಲನ ಕಡಿಮೆಯಾಗಿಲ್ಲ ಎಂಬ ಧ್ವನಿ ಆಗಾಗ ಕೇಳಿ ಬರುತ್ತಿದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ನಾಡಿನ ಹಿರಿಯ ಚೇತನ ಪಾಟೀಲ ಪುಟ್ಟಪ್ಪನವರು ಕೂಡಾ ಅಭಿವೃದ್ಧಿ ಯೋಜನೆಯಲ್ಲಿ ಉತ್ತರಕರ್ನಾಟಕಕ್ಕೆ ಅನ್ಯಾಯ ಉಂಟಾಗಿದೆ ಎಂಬ ಮಾತನ್ನು ಆಡುತ್ತಿರುತ್ತಾರೆ. ಕರ್ನಾಟಕ ಏಕೀಕರಣವಾಗುವ ಸಂದರ್ಭದಲ್ಲಿ ಹಿಂದುಳಿದ ಉತ್ತರ ಕರ್ನಾಟಕ ಭಾಗದ ಜೊತೆಗೆ ಸೇರಲು ಹಳೇ ಮೈಸೂರು ಪ್ರಾಂತದ ಕೆಲ ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ರಾಷ್ಟ್ರಕವಿ ಕುವೆಂಪು ಅವರಂತಹ ಹಿರಿಯ ಸಾಹಿತಿಗಳು ಮತ್ತು ಕೆಂಗಲ್ ಹನುಮಂತಯ್ಯನವರಂತಹ ಹಿರಿಯ ರಾಜಕಾರಣಿಗಳು ಕರ್ನಾಟಕ ಏಕೀಕರಣಕ್ಕೆ ಒತ್ತಾಸೆಯಾಗಿ ನಿಂತಿದ್ದರು. ಇದರಿಂದಾಗಿ ಕರ್ನಾಟಕ ರಾಜ್ಯ ನಿರ್ಮಾಣವಾಯಿತು. ಕರ್ನಾಟಕ ರಾಜ್ಯ ನಿರ್ಮಾಣವಾಗುವ ಹಂತದಲ್ಲೂ ಏಕೀಕೃತ ಕರ್ನಾಟಕದ ರಾಜಧಾನಿ ಯಾವುದಾಗಬೇಕು ಎಂಬ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. ಉತ್ತರ ಕರ್ನಾಟಕ ಮತ್ತು ಮಧ್ಯಕರ್ನಾಟಕದ ಜನರು ದಾವಣಗೆರೆ ರಾಜಧಾನಿಯಾಗಬೇಕೆಂದು ಒತ್ತಾಯಿಸಿದರು. ಆದರೆ, ಬೆಂಗಳೂರು ರಾಜಧಾನಿ ಆಗದಿದ್ದರೆ ಏಕೀಕರಣಕ್ಕೆ ತಾವು ಒಪ್ಪುವುದಿಲ್ಲ ಎಂದು ಹಳೇ ಮೈಸೂರು ಭಾಗದ ರಾಜಕಾರಣಿಗಳು ಪಟ್ಟುಹಿಡಿದರು. ಹೀಗಾಗಿ ಬೆಂಗಳೂರು ರಾಜಧಾನಿ ಆಯಿತು.

ಕರ್ನಾಟಕ ರಾಜ್ಯ ನಿರ್ಮಾಣಗೊಂಡು ಆರು ದಶಕಗಳು ಗತಿಸಿದ ನಂತರವೂ ಉತ್ತರ ಕರ್ನಾಟಕ ಭಾಗದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತದೆ ಎಂಬ ಕೂಗು ಆ ಭಾಗದಿಂದ ಆಗಾಗ ಕೇಳಿ ಬರುತ್ತಿದೆ. ರಾಜ್ಯ ವಿಧಾನಮಂಡಲದಲ್ಲೂ ಅನೇಕ ಬಾರಿ ಇದು ಪ್ರಸ್ತಾಪವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಣೆಗಾಗಿ ಹಿರಿಯ ಆರ್ಥಿಕ ತಜ್ಞರಾಗಿದ್ದ ಡಾ.ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ನಾಡಿನ ಎಲ್ಲ ಭಾಗಗಳಲ್ಲಿ ಸಂಚರಿಸಿ ಅಲ್ಲಿನ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಅವಲೋಕನ ಮಾಡಿ ಸಮಗ್ರವಾದ ವರದಿಯೊಂದನ್ನು ನೀಡಿತು. ಈ ವರದಿಯ ಶಿಫಾರಸುಗಳ ಪ್ರಕಾರ ರಾಜ್ಯದ 114 ತಾಲೂಕುಗಳು ಹಿಂದುಳಿದಿವೆ. ಅವುಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು. ಅವುಗಳಿಗೆ 16 ಸಾವಿರ ಕೋಟಿ ರೂ. ವಿಶೇಷ ಅನುದಾನವನ್ನೂ ನೀಡಬೇಕು. ಹಾಗೂ 15 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಒದಗಿಸಬೇಕು. ಒಟ್ಟು ಈ 31 ಸಾವಿರ ಕೋಟಿ ರೂ.ಯನ್ನು ಎಂಟು ವರ್ಷಗಳಲ್ಲಿ ಖರ್ಚು ಮಾಡಬೇಕು ಎಂಬುದು ನಂಜುಂಡಪ್ಪ ಆಯೋಗದ ಶಿಫಾರಸಾಗಿತ್ತು. ಈ ಶಿಫಾರಸಿನ ಅನ್ವಯ ವಿವಿಧ ಸರಕಾರಗಳು ಸಾಕಷ್ಟು ಹಣವನ್ನು ಪ್ರಾದೇಶಿಕ ಅಸಮಾನತೆ ನಿವಾರಣೆಗಾಗಿ ಮೀಸಲಿಡುತ್ತಾ ಬಂದಿವೆೆ. ನಂಜುಂಡಪ್ಪ ಆಯೋಗದ ಶಿಫಾರಸಿನಂತೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ವಿವಿಧ ಪಕ್ಷಗಳ ಸರಕಾರಗಳು ಹಣವನ್ನು ಮೀಸಲಿಡುತ್ತಾ ಬಂದರೂ ಆ ಹಣ ಪೂರ್ತಿಯಾಗಿ ಯಾವತ್ತೂ ಖರ್ಚು ಆಗಲೇ ಇಲ್ಲ.

ಈ ಅಂಶ ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲೂ ಪ್ರಸ್ತಾಪವಾಯಿತು. ಪ್ರಸ್ತುತ ಸಿದ್ದರಾಮಯ್ಯನವರ ಸರಕಾರ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 13,497 ಕೋಟಿ ರೂ. ಮೀಸಲಿಟ್ಟಿದೆ. ಆದರೆ, ಅದರಲ್ಲಿ ಉತ್ತರಕರ್ನಾಟಕದ ಅಭಿವೃದ್ಧಿಗಾಗಿ ಖರ್ಚು ಮಾಡಿದ ಮೊತ್ತ 8,367 ಕೋಟಿ ರೂ. ಮಾತ್ರ. ಬರೀ ಹಣ ಮೀಸಲಾಗಿ ಇಟ್ಟರೆ ಸಾಲದು. ಅದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಹಾಗೆಯೇ ಯೋಜನೆಗಳನ್ನು ರೂಪಿಸುವುದು ಹೆಚ್ಚು ಉಪಯುಕ್ತವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಉದಾಹರಣೆಗೆ ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಆ ಭಾಗದ ಜನರಿಗೆ ನೌಕರಿಯಲ್ಲಿ ಮೀಸಲಾತಿ ಕೊಟ್ಟರೆ ಸಾಲದು.ನೌಕರಿಯಲ್ಲಿ ಮೀಸಲಾತಿ ಜೊತೆಗೆ ಆ ಭಾಗದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕಾಗುತ್ತದೆ. ಸದ್ಯದ ಸರಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಆ ಭಾಗದಲ್ಲಿ ಉನ್ನತ ಶಿಕ್ಷಣಕ್ಕಾಗಿ, ಪಶುಸಂಗೋಪನೆಗಾಗಿ ಮೀಸಲಿಟ್ಟ ಹಣ ಕೂಡಾ ಸರಿಯಾಗಿ ಬಳಕೆಯಾಗಿಲ್ಲ ಎಂಬ ದೂರುಗಳಿವೆ. ನಂಜುಂಡಪ್ಪ ವರದಿ ಅನುಷ್ಠಾನ ಯಾವ ಪ್ರಮಾಣದಲ್ಲಿ ಆಗಿದೆ ಎಂಬುದನ್ನು 2010ರಲ್ಲಿ ಧಾರವಾಡದ ಅಭಿವೃದ್ಧಿ ಅಧ್ಯಯನ ಸಂಸ್ಥೆಯೊಂದುಅಧ್ಯಯನ ಮಾಡಿದೆ. ಇದು ಹಿಂದುಳಿದ ತಾಲೂಕುಗಳ ಸಂಖ್ಯೆಯನ್ನು 114ರಿಂದ 98ಕ್ಕೆ ಇಳಿಸಿತು. ಆದರೆ, ಮುಂಬೈ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಹಿಂದುಳಿದ ತಾಲೂಕು ಗಳ ಸಂಖ್ಯೆ ಹೆಚ್ಚಾದರೆ ಮೈಸೂರು ಭಾಗದಲ್ಲಿ ಹಿಂದುಳಿದ ತಾಲೂಕುಗಳ ಸಂಖ್ಯೆ ಕಡಿಮೆಯಾಗಿದೆ.

ಕಾಲಕಾಲಕ್ಕೆ ಇಂತಹ ವೈಜ್ಞಾನಿಕ ಮೀಕ್ಷೆಗಳು ನಡೆಯುತ್ತಿದ್ದರೆ ಮಾತ್ರ ಪ್ರಾದೇಶಿಕ ಅಸಮತೋಲನವನ್ನು ಸರಿಯಾದ ರೀತಿಯಲ್ಲಿ ನಿವಾರಿಸಲು ಸಾಧ್ಯವಾಗುತ್ತದೆ. ಇದೇ ಸಂಸ್ಥೆಯಿಂದ ಮತ್ತೊಮ್ಮೆ ಸಮೀಕ್ಷೆ ಮಾಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ಭರವಸೆ ನೀಡಿದ್ದರು. ಆದರೆ, ಅವರ ಭರವಸೆ ಇನ್ನೂ ಕಾರ್ಯಗತವಾಗಿಲ್ಲ. ಉತ್ತರಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದಲೇ ಪ್ರತೀ ಬಾರಿ ಬೆಳಗಾವಿ ಯಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತದೆ. ಆದರೆ, ಪ್ರತೀ ಬಾರಿ ಉತ್ತರಕರ್ನಾಟಕ ಭಾಗದ ಸಮಸ್ಯೆಗಳು ಕಡೆಗಣಿಸಲ್ಪಟ್ಟು, ಸದನದ ಕಲಾಪಗಳು ಬರೀ ಕೋಲಾಹಲದಲ್ಲಿ ಕೊನೆಗೊಳ್ಳುತ್ತವೆ. ನಂಜುಂಡಪ್ಪ ಆಯೋಗದ ವರದಿಯ ಪ್ರಕಾರ ಉತ್ತರಕರ್ನಾಟಕದ ಅಭಿವೃದ್ಧಿಗೆ ಸರಕಾರ ಮೀಸಲಿಟ್ಟ ಹಣವನ್ನು ಖರ್ಚು ಮಾಡುವ ಬದ್ಧತೆಯನ್ನು ಸರಕಾರ ತೋರಿಸಬೇಕಾಗುತ್ತದೆ. ಇದಕ್ಕಾಗಿ ಕಾಲಮಿತಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ಒಂದು ಪ್ರದೇಶವನ್ನು ನಿರ್ಲಕ್ಷ ಮಾಡಿದರೆ, ಆ ಭಾಗದ ಜನರಲ್ಲಿ ಅಸಮಾಧಾನ ಬೆಳೆಯುತ್ತಾ ಹೋಗುತ್ತದೆ. ಈ ಅಸಮಾಧಾನ ಪ್ರತ್ಯೇಕತೆಗೆ ನಾಂದಿ ಹಾಡುತ್ತದೆ. ಸ್ವಾತಂತ್ರಾ ನಂತರ ಆಂಧ್ರಪ್ರದೇಶವನ್ನು ಆಳಿದ ಸರಕಾರಗಳು ತೆಲಂಗಾಣ ಭಾಗವನ್ನು ನಿರ್ಲಕ್ಷ ಮಾಡಿದವು. ಅದರ ಪರಿಣಾಮವಾಗಿ ಅಲ್ಲಿ ಪ್ರತ್ಯೇಕತಾವಾದಿ ಚಳವಳಿ ತಲೆ ಎತ್ತಿ, ಆಂಧ್ರಪ್ರದೇಶ ಇಬ್ಭಾಗವಾಯಿತು. ಉತ್ತರಪ್ರದೇಶದಲ್ಲಿ ಕೆಲ ಭಾಗಗಳನ್ನು ನಿರ್ಲಕ್ಷಿಸಿದ ಪರಿಣಾಮವಾಗಿ ಪ್ರತ್ಯೇಕ ಉತ್ತರಾಖಂಡ ಬೇಡಿಕೆಗಾಗಿ ಚಳವಳಿ ಆರಂಭವಾಯಿತು. ಕೊನೆಗೆ ಉತ್ತರಪ್ರದೇಶವೂ ಇಬ್ಭಾಗವಾಯಿತು. ಬಿಹಾರ ರಾಜ್ಯದಲ್ಲಿ ಕೂಡಾ ಜಾರ್ಖಂಡ್ ಪ್ರದೇಶವನ್ನು ಸರಕಾರ ನಿರ್ಲಕ್ಷ ಮಾಡಿದ ಪರಿಣಾಮವಾಗಿ ಅಲ್ಲಿ ಪ್ರತ್ಯೇಕ ಜಾರ್ಖಂಡ್ ರಾಜ್ಯ ನಿರ್ಮಾಣವಾಗಬೇಕಾಗಿ ಬಂತು. ಈ ರೀತಿ ಪ್ರತ್ಯೇಕತೆಯ ಕೂಗುಗಳು ಅನೇಕ ಕಡೆ ಕೇಳಿ ಬರುತ್ತಿವೆ.

ಕರ್ನಾಟಕದಲ್ಲೂ ಪ್ರತ್ಯೇಕ ಉತ್ತರಕರ್ನಾಟಕ ರಾಜ್ಯ ನಿರ್ಮಾಣಕ್ಕಾಗಿ ಬೇಡಿಕೆ ಮುಂದಿಟ್ಟು ಪ್ರತ್ಯೇಕ ರಾಜ್ಯದ ಧ್ವಜಾರೋಹಣವನ್ನು ಕೆಲ ಕಡೆ ಮಾಡುತ್ತಾರೆ. ಸರಕಾರ ಈ ತಾರತಮ್ಯ ಧೋರಣೆಯನ್ನು ನಿವಾರಿಸದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಪ್ರತ್ಯೇಕತೆಯ ಧ್ವನಿ ತೀವ್ರಗೊಳ್ಳುತ್ತದೆ. ಅಷ್ಟೇ ಅಲ್ಲದೆ, ಕರಾವಳಿ ಜಿಲ್ಲೆಗಳಲ್ಲೂ ತಮ್ಮ ಭಾಗವನ್ನು ಕಡೆಗಣಿಸಲಾಗಿದೆ ಎಂಬ ಭಾವನೆ ಉಂಟಾಗಿದೆ. ಹಳೇ ಮೈಸೂರಿನ ಬರಪೀಡಿತ ಜಿಲ್ಲೆಗಳಿಗೆ ನೀರು ಒದಗಿಸುವ ಕುರಿತು ಆರಂಭವಾದ ಎತ್ತಿನ ಹೊಳೆ ಯೋಜನೆ ಬಗ್ಗೆ ದಕ್ಷಿಣ ಕನ್ನಡದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಪ್ರತ್ಯೇಕತೆಯ ಭಾವನೆ ಕಡಿಮೆಯಾಗಬೇಕೆಂದರೆ ಸರಕಾರ ಅಭಿವೃದ್ಧಿ ಯೋಜನೆಗಳಿಗೆ ಹಣ ಒದಗಿಸಿದರೆ ಸಾಲದು. ಆಯಾ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಒಂದು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕಾಗುತ್ತದೆ. ನೀರಾವರಿ ಯೋಜನೆಗಳ ಪ್ರಶ್ನೆಯಲ್ಲಿ ಕೂಡಾ ಕಾವೇರಿ ಕೊಳ್ಳದ ಯೋಜನೆಗಳಿಗಿಂತ ಕೃಷ್ಣಾ ಕೊಳ್ಳದ ಯೋಜನೆಗಳಿಗೆ ಕಡಿಮೆ ಹಣ ಒದಗಿಸಲಾಗಿದೆ ಎಂಬ ಭಾವನೆ ಇದೆ. ಅದನ್ನು ನಿವಾರಿಸಲು ಸರಕಾರ ಕ್ರಮ ಕೈಗೊಳ್ಳಬೇಕು.

ಆದ್ದರಿಂದ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳು ಈ ಪ್ರಾದೇಶಿಕ ತಾರತಮ್ಯದ ನಿವಾರಣೆಗಾಗಿ ಒಂದು ಒಮ್ಮತಕ್ಕೆ ಬರಬೇಕಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ, ತಾರತಮ್ಯಗಳ ಬಗ್ಗೆ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸ್ಪಷ್ಟವಾದ ಭರವಸೆಯನ್ನು ನೀಡಬೇಕು. ಇಲ್ಲದಿದ್ದರೆ ಆ ಭಾಗದ ಜನರಿಂದ ಪ್ರತಿರೋಧ ಎದುರಿಸಬೇಕಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)