varthabharthi

ಅನುಗಾಲ

ಪದ್ಮಾವತಿಯೆಂಬ ಹೆಣ್ಣು ಭ್ರೂಣಹತ್ಯೆ?

ವಾರ್ತಾ ಭಾರತಿ : 7 Dec, 2017
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಹೆಣ್ಣು ಭ್ರೂಣಹತ್ಯೆಯನ್ನು ನಿಷೇಧಿಸುವ ಕಾನೂನಿದ್ದರೂ ಅದು ಪುಸ್ತಕದಲ್ಲೇ. ಆದರೆ ಪದ್ಮಾವತಿಯೆಂಬ ಸಿನೆಮಾವೂ ಹೆಣ್ಣು ಭ್ರೂಣದಂತೆ ಹುಟ್ಟುವ ಮೊದಲೇ ಹತ್ಯೆಗೆ ಗುರಿಯಾಗುವ ಅಪಾಯವಿದೆ. ನಮ್ಮ ಕಲೋಪಾಸಕರು ಬೆಂಕಿ ಹಚ್ಚದೆ ಒಲೆಯೂದುವ ಬದಲು ಹೊರಗೆ ಬಂದು ಉರಿಯುವ ಬೆಂಕಿಯನ್ನು ಆರಿಸಲು ಮನಮಾಡುವುದು ಒಳ್ಳೆಯದು.


ಸಂಜಯ್ ಲೀಲಾ ಬನ್ಸಾಲಿಯವರ ಅದ್ದೂರಿ ಹಿಂದಿ ಚಲನಚಿತ್ರ ‘ಪದ್ಮಾವತಿ’ಯ ಕುರಿತು ರಾಜಸ್ಥಾನದ ರಜಪೂತರ ಒಂದು ತಂಡ ‘ಕರ್ಣಿಸೇನಾ’ ಎಂಬ ಹೆಸರಿನಲ್ಲಿ ಅನವಶ್ಯಕ ಧೂಳೆಬ್ಬಿಸಿದೆ. ಈ ಚಲನಚಿತ್ರ ರಜಪೂತರ ಅಸ್ಮಿತೆಗೆ ಅಪಚಾರವೆಸಗಿದೆಯೆಂದು ಗುಲ್ಲೆದ್ದಿದೆ. ಇದಕ್ಕೆ ಭಾಜಪ ಆಡಳಿತದಲ್ಲಿರುವ ಬಹುತೇಕ ರಾಜ್ಯಗಳು ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲವನ್ನೂ ಪ್ರೋತ್ಸಾಹವನ್ನೂ ನೀಡಿವೆ. ಉತ್ತರ ಪ್ರದೇಶದ ಮೀರತ್‌ನ ಸೋಮ್ ಎಂಬಾತ ಚಲನ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ತಲೆಯನ್ನೂ ನಾಯಕಿ ದೀಪಿಕಾ ಪಡುಕೋಣೆಯ ಮೂಗನ್ನೂ ಕತ್ತರಿಸಿ ತಂದವರಿಗೆ 5 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದ್ದಾನೆ. ಇದನ್ನು ಬೆಂಬಲಿಸಿ ಸೂರಜ್ ಪಾಲ್ ಅಮು ಎಂಬ ಹರ್ಯಾಣದ ಭಾಜಪ ಧುರೀಣನು ತಾನೂ 10 ಕೋಟಿ ರೂಪಾಯಿಗಳ ಬಹುಮಾನ ಘೋಷಿಸಿದ್ದಾನೆ. ಈ ಬಹುಮಾನದ ಮೊತ್ತವನ್ನು ಗಮನಿಸಿದರೆ ಇರಾನಿನ ಅಯಾತೊಲ್ಲಾ ಖೊಮೇನಿಗೂ ನಾಚಿಕೆಯಾಗುವುದು ಖಚಿತ. ಏಕೆಂದರೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಲ್ಮಾನ್ ರಶ್ದಿ ಮುಂತಾದವರ ವಿರುದ್ಧ ಘೋಷಿಸಿದ ಮೊತ್ತ ಇದಕ್ಕೆ ಹೋಲಿಸಿದರೆ ಏನೇನೂ ಅಲ್ಲ.

ದೇಶದಲ್ಲಿ ತಾಂಡವವಾಡುವ ಭ್ರಷ್ಟಾಚಾರ, ಅನಾರೋಗ್ಯ, ಬಡತನ, ಅನಕ್ಷರತೆ, ಇವುಗಳಿರುವಾಗ ‘ಪದ್ಮಾವತಿ’ ಎಂಬ ಬಾಲಿವುಡ್ ಚಲನಚಿತ್ರದ ಕುರಿತು ಚರ್ಚೆ ನಡೆಯುತ್ತಿರುವುದನ್ನು ಜನರು ಟೀಕಿಸುವುದನ್ನು ಕೇಳಿದ್ದೇನೆ; ಓದಿದ್ದೇನೆ. ಇಂತಹ ಗುರುತರ ಸಮಸ್ಯೆಗಳಿರುವಾಗ ಪದ್ಮಾವತಿ ಚಲನ ಚಿತ್ರದ ಕುರಿತು ಪ್ರತಿಭಟಿಸುವವರ ಮತ್ತು ಅಂತಹ ಪ್ರತಿಭಟನೆಗಳಿಗೆ ಬೆಂಬಲ ಸಾರುವವರ ವಿರುದ್ಧ ಇಂತಹ ಟೀಕೆ ಏಕಿಲ್ಲ? ಪದ್ಮಾವತಿಯ ಕುರಿತು ಚರ್ಚೆ ನಡೆಯದಿದ್ದರೆ ಈ ಎಲ್ಲ ಸಮಸ್ಯೆಗಳು ಬಗೆಹರಿಯುವುದಿದ್ದರೆ ಖಂಡಿತಾ ಪದ್ಮಾವತಿಯ ಬಗ್ಗೆ ಚರ್ಚೆಯನ್ನು ನಿಲ್ಲಿಸಬಹುದು. ಅಷ್ಟೇಕೆ, ಉಸಿರಾಡುವುದನ್ನೂ ನಿಲ್ಲಿಸಬಹುದು. ದೇಶಕ್ಕೆ ಮತ್ತು ಜನರಿಗೆ ಒಳಿತಾಗುವುದಾದರೆ ಕೆಲವು ಮಂದಿ ಆಹುತಿಯಾದರೆ ತಪ್ಪಿಲ್ಲ. ಪದ್ಮಾವತಿಯ ಕುರಿತಾಗಿ ಎದ್ದ ಹಗರಣದ ಕುರಿತು ಈ ದೇಶದ ಪ್ರಧಾನಿ ಏನನ್ನೂ ಆಡಿಲ್ಲ. ಅವರಿಗೆ ಗಮನಿಸುವುದಕ್ಕೆ ಇದಕ್ಕಿಂತ ಪ್ರಮುಖ ವಿಚಾರಗಳಿವೆ ಎಂದು ಆಗಲೇ ಅವರ ಬೆಂಬಲಿಗರು, ಅಭಿಮಾನಿಗಳು ಫರ್ಮಾನ್ ಹೊರಡಿಸಿದ್ದಾರೆ.

ಇರಬಹುದು; ಏಕೆಂದರೆ ಅವರೀಗ ದಿಲ್ಲಿಗಿಂತ ಮತ್ತು ವಿದೇಶಗಳಿಗಿಂತ ಹೆಚ್ಚಾಗಿ ‘ತಮ್ಮ’ ಗುಜರಾತಿನಲ್ಲೇ ಠಿಕಾಣಿ ಹೂಡಿದ್ದಾರೆ. ಕಳೆದ 22 ವರ್ಷಗಳಿಂದ ಗುಜರಾತೋದ್ಧರಣ ಮಾಡಿ ಈಗ ಅದೆಲ್ಲಿ ಕೈತಪ್ಪಿಹೋಗುತ್ತದೆಯೋ ಎಂಬ ಭೀತಮನವಾಗಿ ಅಂಡಲೆಯುತ್ತಿದ್ದಾರೆ. ರಾಹುಲ್ ಗಾಂಧಿಯ ಹೆಸರು ಕೇಳಿದರೆ ರೋಮಾಂಚನಗೊಂಡವರಂತೆ ಮಾತನಾಡುವ ಸ್ಮತಿ ಇರಾನಿಯವರೂ ಪದ್ಮಾವತಿಯ ಹೆಸರು ಕೇಳಿ ಏನೂ ಹೇಳಿಲ್ಲ. ಒಂದರ್ಥದ ಸವತಿ ಮಾತ್ಸರ್ಯವಿದು. ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯ ಇಕ್ಕೊಳಗಳಿಂದ ಅರುಣ್ ಜೇಟ್ಲಿಯವರು ‘‘ಯುರೇಕಾ, ಯುರೇಕಾ’’ ಎಂದು ಕೂಗಿಕೊಳ್ಳುತ್ತಾರಾದರೂ ನೀರಿನಿಂದ ಹೊರಬಂದು ಪ್ರಮೇಯ ಸಿದ್ಧಪಡಿಸುತ್ತಿಲ್ಲ. ಪದ್ಮಾವತಿ ಒಬ್ಬ ಹೆಣ್ಣುಮಗಳು. ಅವಳ ಕುರಿತು ಚರಿತ್ರೆ ಏನು ಹೇಳಿದೆಯೆಂಬುದಕ್ಕೆ ಅಧಾರವಿಲ್ಲ.

ಮಲಿಕ್ ಮುಹಮ್ಮದ್ ಜೈಸಿ ಎಂಬ 15ನೇ ಶತಮಾನದ ಒಬ್ಬ ಸೂಫಿ ಕವಿ ಬರೆದ ಜಾನಪದ ಕಾವ್ಯ ಇಷ್ಟು ಹಗರಣಗಳನ್ನು ಸೃಷ್ಟಿಸುತ್ತದೆಯೆಂದು ಆತ ಅರಿತಿರಲಿಕ್ಕಿಲ್ಲ. ಇಷ್ಟು ರಾಜಕೀಯ ಲಾಭವಾಗುವುದಿದ್ದರೆ ಆತನಿಗೂ ಈಗ ಮರಣೋತ್ತರ ಭಾರತರತ್ನ ನೀಡಬಹುದು. ಇನ್ನು ಅಕ್ಕಮಹಾದೇವಿ, ಮೀರಾಬಾಯಿ, ಝಾನ್ಸಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಓಬವ್ವ, ಅಬ್ಬಕ್ಕ ಮುಂತಾದ ನಾಯಕಿಯರು ತಮ್ಮ ಕುರಿತು ಯಾರಾದರೂ ಸಾಹಿತ್ಯ ರಚಿಸಿದರೆ ಭೂತವಾಗಿ ಕಾಡಬಹುದು. ಅಜ್ಞಾನವೇ ಪರಮರಕ್ಷೆ. ನಾನು ಕೇಳಿದ ಒಂದು ನಗೆಹನಿ ಹೀಗಿದೆ: ಸಂಸ್ಕೃತ ಪಂಡಿತರ ಮಗನು ತನ್ನ ಸಹಪಾಠಿಯನ್ನು ‘ಗಾರ್ದಭ’ ಎಂದು ಬೈದನಂತೆ. ಬೈಸಿಕೊಂಡವನಿಗೆ ಅದರ ಅರ್ಥ ತಿಳಿಯದೆ ಆತ ಸುಮ್ಮನಿದ್ದ. ಮನೆಗೆ ಹೋದವನೇ ತನ್ನ ತಂದೆಯಲ್ಲಿ ಅದರ ಅರ್ಥವನ್ನು ಕೇಳಿ ತಿಳಿದುಕೊಂಡು ಮರುದಿನ ಶಾಲೆಗೆ ಬಂದು ಆ ಬೈದ ಹುಡುಗನಿಗೆ ಎರಡೇಟು ಕೊಟ್ಟನಂತೆ. ಹೀಗೆ ಕೆಲವು ಬಾರಿ ತಡವಾಗಿ ಅರಿವು ಮೂಡಿದರೆ ಆನಂತರ ಬುದ್ಧಿ ಜಾಗೃತವಾಗುತ್ತದೆ. ಹೀಗಾದರೂ ಆಗಬಹುದು. ಆದರೆ ಪದ್ಮಾವತಿಯ ಪ್ರಸಂಗದಲ್ಲಿ ಇಷ್ಟೂ ಇಲ್ಲ.

1963ರಲ್ಲಿ ಇದೇ ಕಥೆಯನ್ನಾಧರಿಸಿ ಚಿತ್ತೂರು ರಾಣಿ ಪದ್ಮಿನಿ ಎಂಬ ತಮಿಳು ಚಲನಚಿತ್ರ ಬಂದಿತ್ತು. ನನ್ನ 9-10ನೇ ವರ್ಷದಲ್ಲಿ ನೋಡಿದ ಕಪ್ಪು-ಬಿಳುಪು ಚಿತ್ರದಲ್ಲಿ ಎಮ್.ಎನ್. ನಂಬಿಯಾರ್ ವಹಿಸಿದ ಖಿಲ್ಜಿ ಪಾತ್ರ ಈಗಲೂ ಕಣ್ಣ ಮುಂದಿದೆ. ಶಿವಾಜಿಗಣೇಶನ್, ವೈಜಯಂತಿಮಾಲಾ ನಟಿಸಿದ ಆ ಚಿತ್ರ ಯಾರ ಪ್ರತಿಭಟನೆಯನ್ನೂ ಎದುರಿಸಲಿಲ್ಲ. ಖ್ಯಾತ ನೃತ್ಯಗಾತಿ ವೈಜಯಂತಿಮಾಲಾ ಇದ್ದುದರಿಂದ ಸಹಜವಾಗಿಯೇ ಅದರಲ್ಲಿ ಅನೇಕ ನೃತ್ಯಗಳಿದ್ದವು. ಆಗ ಯಾರೂ ಪ್ರತಿಭಟಿಸಲಿಲ್ಲ. ಈಗ ಪ್ರತಿಭಟಿಸುವ ಜನರು (ಅಥವಾ ಅವರನ್ನು ಬೆಂಬಲಿಸಿ ಪ್ರೋತ್ಸಾಹಿಸುವ ದೇಶಭಕ್ತರು) ಆಗ ಗಾರ್ದಭ ಎಂದರೆ ಅರ್ಥವಾಗದಷ್ಟು ದಡ್ಡರಾಗಿದ್ದರೆಂಬ ಬಗ್ಗೆ ಯಾವ ಪುರಾವೆಯೂ ಇಲ್ಲ! ಖ್ಯಾತ ಚಲನಚಿತ್ರಗಳಾದ ‘ಮೊಗಲ್ ಆಝಮ್’, ಇತ್ತೀಚೆಗೆ ಬಂದ ‘ಜೋಧಾ ಅಕ್ಬರ್’, ಇವೆಲ್ಲ ಮಾಡದ ಅಪಮಾನವನ್ನು ಯಾವ ಪದ್ಮಾವತಿಯೂ ಮಾಡಳು.

ಒಂದು ಕಲ್ಪನೆಯ ಪಾತ್ರಕ್ಕೆ ಚಲನಚಿತ್ರವೆಂಬ ಕಲಾ ಪ್ರಕಾರವು ಜೀವಕೊಡುವ ಪ್ರಯತ್ನಮಾಡಿದಾಗ ಅದನ್ನು ಕಲೆಯೆಂದೇ ಸ್ವೀಕರಿಸಬೇಕಲ್ಲದೆ ಅದನ್ನು ನೈಜ ಜಗತ್ತಿನೊಳಗೆ ತಂದರೆ ಆಗುವ ಅಪಾಯ ಇದು. ಸಿನೆಮಾ ಥಿಯೇಟರಿನೊಳಗೆ ಹುಲಿಯ ದೃಶ್ಯ ಬಂದಾಗ ಒಬ್ಬ ಭಯಪಟ್ಟು ಹೊರಗೋಡಿದನಂತೆ. ಅಲ್ಲಿದ್ದ ಗೇಟ್‌ಕೀಪರ್ ಭಯಪಡಬೇಡ, ಅದು ಸಿನೆಮಾ ಎಂದಾಗ ಆ ಭಯಗ್ರಸ್ತ ಅದು ತನಗೂ ತಿಳಿದಿದೆ; ಆದರೆ ಅ ಹುಲಿಗೇನು ಗೊತ್ತು? ಅದು ಎಲ್ಲಾದರೂ ತನ್ನನ್ನು ಕೊಂದರೆ? ಎಂದು ಪ್ರಶ್ನಿಸಿದನಂತೆ. ಈ ಕರ್ಣಿಸೇನೆಯ ಯೋಧರಿಗೂ ಆದದ್ದಿದೇ. ಸಿನೆಮಾ ಎಂದು ಗೊತ್ತಿದೆ. ಕಲ್ಪನೆ ಎಂದು ಗೊತ್ತಿದೆ. ಆದರೆ ಅದು ಪದ್ಮಾವತಿಗಾಗಲೀ ಖಿಲ್ಜಿಗಾಗಲೀ ಗೊತ್ತಿಲ್ಲವಲ್ಲ! ಭ್ರಮರಕೀಟ ನ್ಯಾಯದ ಅಸಂಗತ ಅಸಂಬದ್ಧ ಪರಾಕಾಷ್ಠೆ ಇದು.

ವ್ಯಕ್ತಿ ಸ್ವಾತಂತ್ರ್ಯವನ್ನು, ಕಲೆಯ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಈ ದೇಶದ ಪ್ರಸಕ್ತ ಸರಕಾರವು ತಾನು ಇಂದಿರಾ ಗಾಂಧಿ ಮಾತ್ರವಲ್ಲ-ಯಾವ ಸರ್ವಾಧಿಕಾರಿಗೂ ಕಡಿಮೆಯಿಲ್ಲವೆಂಬುದನ್ನು ಪ್ರದರ್ಶಿಸುತ್ತಿದೆ. ರಾಜಕೀಯವನ್ನು ಮೂರ್ತ-ಅಮೂರ್ತವೆಂಬ ಗಣನೆಯಿಲ್ಲದೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ತೂರಿಸಿ ಜನರನ್ನು ರೊಚ್ಚಿಗೆಬ್ಬಿಸಿ ದೇಶವನ್ನು ಅಕ್ಷಾಂಶ-ರೇಖಾಂಶಗಳಿಗನುಗುಣವಾಗಿ ವಿಭಜಿಸಲು ಬೇಕಾದ ಎಲ್ಲ ತಯಾರಿ ನಡೆಯುತ್ತಿದೆ. ಒಳ್ಳೆಯ ಪ್ರೇರಣೆ ನೀಡುವ ಬದಲು ಕೆಟ್ಟ ಪ್ರೇರೇಪಣೆ ನೀಡಲಾಗುತ್ತಿದೆ. ಜ್ಞಾನ-ವಿಜ್ಞಾನಗಳಿಗೆ ಸಂಬಂಧಿಸಿದ ತಜ್ಞರ ಮಾರ್ಗದರ್ಶನ ಪಡೆಯುವ ಬದಲು ಚಾಣೂರ-ಮುಷ್ಠಿಕರ ಸಲಹೆ ಕೇಳಲಾಗುತ್ತಿದೆ ಅಥವಾ ಅವರಿಗೆ ಕಾರ್ಯೋನ್ಮುಖರಾಗಲು ಸಲಹೆ ನೀಡಲಾಗುತ್ತಿದೆ. ರಾಜಪುರೋಹಿತರುಗಳು ಅನ್ನದ ಋಣಕ್ಕಾಗಿ ಪ್ರಜೆಗಳು ಹರಿಯುವ ನದಿಗಳಿಗೆ ಮಾತ್ರವಲ್ಲ, ಬೀಳುವ ಮಳೆಗೂ ವಿಷವುಣ್ಣಿಸಲು ಸಿದ್ಧರಿದ್ದಾರೆ. ಸಂವೇದನಾಶೀಲ ಕ್ಷೇತ್ರದ ಬಹುಪಾಲು ಜನರು ಈ ವಸ್ತ್ರಾಪಹಾರ ನಡೆಯುತ್ತ್ತಿದೆಯೋ ಎಂಬ ಆಸೆಯಿಂದಿದ್ದಾರೆ. ಇನ್ನೂ ಹಲವರು ಚಿಮ್ಮಿದ ನಾಣ್ಯ ತಮ್ಮ ಕಿಸೆಗೆ ಬೀಳುತ್ತದೆಯೆಂಬ ನಿರೀಕ್ಷಕರಾಗಿದ್ದಾರೆ.

ವಿಶೇಷವೆಂದರೆ ಪದ್ಮಾವತಿಗೆ ಕೇಂದ್ರ ಸೆನ್ಸಾರ್ ಮಂಡಳಿಯಿಂದ ಅರ್ಹತಾ ಪರೀಕ್ಷೆ ಇನ್ನೂ ನಡೆದೇ ಇಲ್ಲ. ಅದಿನ್ನೂ ಭ್ರೂಣಾವಸ್ಥೆಯಲ್ಲಿದೆ. ಆದರೆ ಈಗಾಗಲೇ ನಾಲ್ಕಾರು ರಾಜ್ಯಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಚಲನಚಿತ್ರದ ಬಿಡುಗಡೆಯನ್ನು ನಿಷೇಧಿಸಿದ್ದರೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯು ತನ್ನ ಪಾಲಿನ ಅಧಿಕಾರ ನಡೆಸಿದೆ. (ವಿಚಿತ್ರವೆಂದರೆ ಈ ಇಲಿಗಳ ಪಂದ್ಯದಲ್ಲಿ ಪಂಜಾಬಿನ ಕಾಂಗ್ರೆಸ್ ಸರಕಾರವೂ ಈ ನಿಷೇಧದ ಪ್ರಹಸನದಲ್ಲಿದೆ!) ಸಂಸದೀಯ ಮಂಡಳಿಯೊಂದು ಪದ್ಮಾವತಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರನ್ನು ಕರೆಸಿ ವಿಚಾರಿಸಿದೆ. ಇದೊಂದು ರೀತಿಯ ನಿರೀಕ್ಷಣಾ ಜಾಮೀನು. ಈ ವ್ಯಾಯಾಮವು ಸದ್ಯ ಗುಜರಾತಿನಲ್ಲಿನ ಚುನಾವಣೆಯ ವರೆಗೆ ಮಾತ್ರವೋ ಆನಂತರವೂ ಇದೆಯೇನೋ ಗೊತ್ತಿಲ್ಲ. ಸರಕಾರವು ಕಾಲಿನ ಹೆಬ್ಬೆರಳನ್ನು ಚೀಪುವುದರಲ್ಲಿ ನಿಷ್ಣಾತವೆಂದು ಈಗಾಗಲೇ ಅನೇಕ ಪ್ರಸಂಗಗಳಲ್ಲಿ ತೋರಿಸಿದೆ. ಜಿಎಸ್‌ಟಿಯನ್ನು ವಿನಾಕಾರಣ ಏರಿಸಿ ಮತ್ತೆ ವಿನಾಕಾರಣ ಇಳಿಸಲಾಗಿದೆ. ಗೋಹತ್ಯೆ ನಿಷೇಧದ ಆದೇಶವನ್ನು ಹಿಂಪಡೆಯಲಾಗುವ ನಿರೀಕ್ಷೆಯಿದೆ. ಕಾಂಗ್ರೆಸ್ ಕೋಟೆ ಸೂರೆ ಹೋದ ಮೇಲೆ ಬಾಗಿಲು ಹಾಕಿಕೊಳ್ಳುವ ಪಕ್ಷವಾದರೆ ಭಾಜಪವು ಮಾಡಿದ ಮೇಲೆ, ಮಾತನಾಡಿದ ಮೇಲೆ, ಯೋಚಿಸುವ ಪಕ್ಷ. ಎಲ್ಲವನ್ನೂ ಹಿಂದೂ ಮುಸ್ಲಿಮ್ ಎಂದೇ ನೋಡುವ ಪರಿಪಾಠ ಹೆಚ್ಚುತ್ತಲೇ ಇದೆ.

ಪದ್ಮಾವತಿ ಹಿಂದೂವಲ್ಲದಿದ್ದರೆ, ಅಥವಾ ಅಲ್ಲಾವುದ್ದಿನ್ ಖಿಲ್ಜಿ ಮುಸ್ಲಿಮನಾಗಿಲ್ಲದಿರುತ್ತಿದ್ದರೆ ಪ್ರಾಯ: ಸಂಜಯ್ ಲೀಲಾ ಬನ್ಸಾಲಿಯವರ ತಲೆ ಮತ್ತು ದೀಪಿಕಾಳ ಮೂಗಿಗೆ ಕೋಟಿ ಬೆಲೆ ಬರುತ್ತಿರಲಿಲ್ಲ. ಅಚ್ಚರಿಯ ಸಂಗತಿಯೆಂದರೆ ಯಾರೂ ರಣವೀರ್ ಸಿಂಗ್ ತಲೆಯನ್ನೋ, ಕಣ್ಣನ್ನೋ, ಮೂಗನ್ನೋ ಕೀಳಿಸುವ ಯೋಚನೆ ಮಾಡಿಲ್ಲ. ಪ್ರಾಯಃ ಆತನ ರಣವೀರತನವಲ್ಲವಾದರೂ ಸಿಂಗ್‌ತನ ಆತನನ್ನುಳಿಸಿರಬೇಕು. ಇನ್ನೂ ವಿಶೇಷವೆಂದರೆ ಈ ಸಿನೆಮಾಕ್ಕೆ ಸುಮಾರು ನೂರೈವತ್ತು ಕೋಟಿಗೂ ಮಿಕ್ಕಿ ಹಣ ಸುರಿದ ನಿರ್ಮಾಪಕರ ಬಗ್ಗೆ ಯಾರೂ ಏನೂ ಹೇಳಿಲ್ಲ. ಇದರ ನಿರ್ಮಾಣದ ಹಿಂದೆ ಅಂಬಾನಿಯವರ ಹಣವಿದೆಯೆಂಬ ಕಾರಣಕ್ಕೇ ಈ ರಾಷ್ಟ್ರವೀರರು ಸುಮ್ಮನಿದ್ದಾರೆಂದು ಗುಮಾನಿಯಿದೆ. ಈ ದೇಶದಲ್ಲಿ ಮಹಿಳೆಯರಿಗೆ ಗೌರವ ಸಿಕ್ಕುವುದು ‘‘ಯತ್ರ ನಾರ್ಯಸ್ತು...’’ ಎಂಬ ಸಂಸ್ಕೃತ ಶ್ಲೋಕದಲ್ಲಿ ಮಾತ್ರ. ಉಳಿದೆಡೆ ಅವರು ಅಹಲ್ಯೆಯಂತೆ ಕಲ್ಲಾಗಿ, ಸೀತೆಯಂತೆ ಅಗ್ನಿಪರೀಕ್ಷೆಗೆ ಒಳಗಾಗಿ, ದ್ರೌಪದಿಯಂತೆ ವಸ್ತ್ರಾಪಹಾರಕ್ಕೊಳಗಾಗಿ, ತಾರೆಯಂತೆ ಸುಗ್ರೀವನ ಊಟದ ತಟ್ಟೆಯಾಗಿ, ಮಂಡೋದರಿಯಂತೆ ಕುಟುಂಬ ವಿನಾಶಕ್ಕೆ ಸಾಕ್ಷಿಯಾಗಿ ಬದುಕಬೇಕು. ಮಹಿಳೆಯರಿಗೆ ಶೇ. 33 ಮೀಸಲಾತಿ ರಾಜ್ಯಸಭೆಯಲ್ಲಿ (ಆಗ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಬಹುಮತದಲ್ಲಿತ್ತು!) ಮಂಜೂರಾದರೂ ಭಾಜಪ ಬಹುಮತದಲ್ಲಿರುವ ಲೋಕಸಭೆಯಲ್ಲಿ ಮಾತ್ರ ಇನ್ನೂ ಅಂಗೀಕಾರವಾಗಿಲ್ಲ. ನಿರ್ಭಯಾ ಪ್ರಕರಣ ಈಗೇನಾದರೂ ನಡೆದಿದ್ದರೆ ಆಕೆ ಬಸ್ಸು ಬರುವ ಹಾದಿಯಲ್ಲಿ ಹೋದದ್ದೇ ತಪ್ಪೆಂದು ಕಿರಣ್ ಖೇರ್ ಹೇಳುತ್ತಿದ್ದರು.

ಹೆಣ್ಣು ಭ್ರೂಣಹತ್ಯೆಯನ್ನು ನಿಷೇಧಿಸುವ ಕಾನೂನಿದ್ದರೂ ಅದು ಪುಸ್ತಕದಲ್ಲೇ. ಆದರೆ ಪದ್ಮಾವತಿಯೆಂಬ ಸಿನೆಮಾವೂ ಹೆಣ್ಣು ಭ್ರೂಣದಂತೆ ಹುಟ್ಟುವ ಮೊದಲೇ ಹತ್ಯೆಗೆ ಗುರಿಯಾಗುವ ಅಪಾಯವಿದೆ. ನಮ್ಮ ಕಲೋಪಾಸಕರು ಬೆಂಕಿ ಹಚ್ಚದೆ ಒಲೆಯೂದುವ ಬದಲು ಹೊರಗೆ ಬಂದು ಉರಿಯುವ ಬೆಂಕಿಯನ್ನು ಆರಿಸಲು ಮನಮಾಡುವುದು ಒಳ್ಳೆಯದು. ಕಲೆಯನ್ನು ಮನನ ಮಾಡುವುದರೊಂದಿಗೆ ಬದುಕಿನ ಹಸಿವೆಯನ್ನು ನೀಗುವ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಸ್ವಲ್ಪವಾದರೂ ಗಮನ ನೀಡುವುದು ಒಳ್ಳ್ಳೆಯದು. ಈ ದೇಶ ಸಹನಾಶೀಲವೆಂಬ ಹೆಸರಿಗೆ ಅರ್ಹವೋ ಎಂಬ ಪ್ರಶ್ನೆಗೆ ಉತ್ತರಕೊಡಬೇಕಾದವರು ಗೂಂಡಾಗಳಲ್ಲ; ದೇಶಭಕ್ತಿಯ ಅತಿಸಾರದಿಂದ ಬಳಲುವವರಲ್ಲ; ದೀರ್ಘ ಭವಿಷ್ಯದತ್ತ ಕಣ್ಣು ಹಾಯಿಸಬಲ್ಲ ಸಜ್ಜನರು. ಸಮಾಜವು ಕೆಡುವುದು ದುರ್ಜನರಿಂದಲ್ಲ; ಸುಮ್ಮನಿರುವ ಸಜ್ಜನರಿಂದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)