varthabharthi

ಅಂತಾರಾಷ್ಟ್ರೀಯ

ದಶಕದ ನೀತಿಗೆ ಟ್ರಂಪ್ ತಿಲಾಂಜಲಿ

ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಘೋಷಣೆ

ವಾರ್ತಾ ಭಾರತಿ : 7 Dec, 2017

ವಾಷಿಂಗ್ಟನ್, ಡಿ.7: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ನಗರವನ್ನು ಮಾನ್ಯ ಮಾಡಿ ಆದೇಶ ಹೊರಡಿಸಿದ್ದಾರೆ. ಇದು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ದ್ವೇಷದ ಬೆಂಕಿಗೆ ತುಪ್ಪ ಸುರಿಯಲಿದೆ ಎಂದು ವಿದೇಶಗಳು ಎಚ್ಚರಿಕೆ ನೀಡಿದ್ದರೂ, ಅಮೆರಿಕದ ಹತ್ತು ವರ್ಷಗಳ ನೀತಿಗೆ ತಿಲಾಂಜಲಿ ನೀಡಿ ಈ ನಿರ್ಧಾರವನ್ನು ಟ್ರಂಪ್ ಕೈಗೊಂಡಿದ್ದಾರೆ.

ಶ್ವೇತಭವನದಲ್ಲಿ ಮಾಡಿದ ಭಾಷಣದಲ್ಲಿ ಈ ವಿಷಯ ಪ್ರಕಟಿಸಿದ ಟ್ರಂಪ್, "ಅಮೆರಿಕದ ದೂತಾವಾಸವನ್ನು ಟೆಲ್ ಅವೀವ್‌ನಿಂದ ಜೆರುಸಲೇಂಗೆ ವರ್ಗಾಯಿಸಲು ಆಡಳಿತ ಯಂತ್ರ ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದರು. ಇದಕ್ಕೆ ಸುಮಾರು ಒಂದು ವರ್ಷ ತೆಗೆದುಕೊಳ್ಳಲಿದೆ.

ಮುಸ್ಲಿಮರು, ಕ್ರೈಸ್ತರು ಮತ್ತು ಯಹೂದಿ ಧರ್ಮಗಳ ಪವಿತ್ರ ಸ್ಥಳಗಳನ್ನು ಒಳಗೊಂಡಿರುವ ಜೆರುಸಲೇಂ, ಮಧ್ಯಪ್ರಾಚ್ಯದ ಶಾಂತಿ ಪ್ರಯತ್ನಗಳಿಗೆ ಮುಳ್ಳಾಗಿ ಹಲವು ದಶಕಗಳಿಂದ ಕಾಡುತ್ತಿರುವ ಜ್ವಲಂತ ಸಮಸ್ಯೆಯಾಗಿದೆ.

ಇಸ್ರೇಲ್ ಈ ನಗರವನ್ನು ತನ್ನ ಪೂರ್ವಜರಿಂದ ಬಂದ ಹಾಗೂ ಅವಿಭಾಗ್ಯ ಅಂಗ ಎಂದು ಪರಿಗಣಿಸಿದ್ದು, ಎಲ್ಲ ದೂತಾವಾಸಗಳನ್ನು ಇಲ್ಲೇ ಸ್ಥಾಪಿಸಲು ಬಯಸಿದೆ. ಪ್ಯಾಲೆಸ್ತೇನಿಯನ್ನರು ಸ್ವತಂತ್ರ ದೇಶದ ರಾಜಧಾನಿಯಾಗಿ ನಗರದ ಪೂರ್ವಭಾಗವನ್ನು ಪರಿವರ್ತಿಸಬೇಕು ಎಂದು ಪ್ರತಿಪಾದಿಸುತ್ತಾ ಬಂದಿದೆ. ಈ ಪ್ರದೇಶವನ್ನು ಇಸ್ರೇಲ್ 1967ರ ಮಧ್ಯಪ್ರಾಚ್ಯ ಯುದ್ಧದಲ್ಲಿ ವಶಪಡಿಸಿಕೊಂಡಿದೆ. ಆದರೆ ಅಂತಾರಾಷ್ಟ್ರೀಯವಾಗಿ ಇಸ್ರೇಲ್‌ನ ಪ್ರತಿಪಾದನೆಯನ್ನು ಯಾವುದೇ ದೇಶ ಮಾನ್ಯ ಮಾಡಿರಲಿಲ್ಲ.

ಟ್ರಂಪ್ ತನ್ನ ಕಟ್ಟಾ ಬೆಂಬಲಿಗಾರದ ಸಂಪ್ರದಾಯವಾದಿ ರಿಪಬ್ಲಿಕನ್ನರನ್ನು ಮತ್ತು ಟ್ರಂಪ್ ಅವರ ರಾಜಕೀಯ ಬೆಂಬಲಿಗರ ಪ್ರಮುಖ ಭಾಗವಾದ ಕ್ರೈಸ್ತ ಸಮುದಾಯವನ್ನು ಓಲೈಸಲು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಟ್ರಂಪ್ ಸಹವರ್ತಿಗಳು ಜೆರುಸಲೇಂ ನಗರವನ್ನು ಯಹೂದಿ ಧರ್ಮದ ಕೇಂದ್ರ ಎಂದು ಪರಿಗಣಿಸಿದ್ದು, ಇಸ್ರೇಲಿ ಸರ್ಕಾರದ ಶಕ್ತಿಕೇಂದ್ರ ಎಂದು ಪರಿಗಣಿಸಿದ್ದಾರೆ.

 

Comments (Click here to Expand)