ಹಾರ್ದಿಕ್ ಪಟೇಲ್ ವಿರುದ್ಧ ಮತ್ತೊಂದು ಸೆಕ್ಸ್ ಸಿಡಿ ಸಿಡಿಸಿದ ಬಿಜೆಪಿ
ಅಹ್ಮದಾಬಾದ್, ಡಿ.7: ಚಂಡಮಾರುತದ ಭೀತಿಯ ನಡುವೆಯೂ ಗುಜರಾತ್ನಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದ್ದು, ಪ್ರಚಾರದಲ್ಲಿ ಮುಂಚೂಣಿಯಲ್ಲಿರುವ ಪಾಟೀದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ್ ಪಟೇಲ್ ವಿರುದ್ಧ ಆಡಳಿತಾರೂಢ ಬಿಜೆಪಿ ಮತ್ತೊಂದು ಸೆಕ್ಸ್ ವಿಡಿಯೋ ಬಿಡುಗಡೆ ಮಾಡಿದೆ.
ಹಾರ್ದಿಕ್ ಪಟೇಲ್ ಹಾಗೂ ಅವರ ಇಬ್ಬರು ಸ್ನೇಹಿತರು ಮಹಿಳೆಯೊಂದಿಗೆ ಇರುವ ವಿಡಿಯೋ ಬುಧವಾರ ವೈರಲ್ ಆಗಿದೆ. ವಿಡಿಯೋಗೆ ಸಂಬಂಧಿಸಿ ಹಾರ್ದಿಕ್ ಬಣ ಹಾಗೂ ಬಿಜೆಪಿ ನಡುವೆ ವಾಗ್ವಾದ ನಡೆದಿದೆ.
ಪಟೇಲ್ ಮೀಸಲಾತಿಗಾಗಿ ಹೋರಾಡುತ್ತಿರುವ ಹಾರ್ದಿಕ್ ವಿರುದ್ಧ ಮೂರನೇ ಬಾರಿ ಇಂತಹ ಅಶ್ಲೀಲ ವಿಡಿಯೋವನ್ನು ವೈರಲ್ ಮಾಡಲಾಗಿದೆ. ಕಳೆದ ತಿಂಗಳು ಇತರ ಎರಡು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು.
‘‘ಬಿಜೆಪಿಗೆ ಇಂತಹ ವಿಡಿಯೋಗಳನ್ನು ಬಿಡುಗಡೆ ಮಾಡುವುದೆಂದರೆ ಒಂದು ರೀತಿಯಲ್ಲಿ ಕ್ರೇಜಿಯಾಗಿದೆ. ಚುನಾವಣೆಗೆ ಇನ್ನು ಕೆಲವೇ ದಿನಗಳಿರುವಾಗ ಮತ್ತೊಮ್ಮೆ ಇಂತಹ ವಿಡಿಯೋ ಬಿಡುಗಡೆ ಮಾಡಲಾಗಿದೆ. ನನ್ನ ಗೌರವಕ್ಕೆ ಧಕ್ಕೆ ತರಲು ಬಿಜೆಪಿ ಇಂತಹ ವಿಡಿಯೋಗಳನ್ನು ಬಿಡುಗಡೆ ಮಾಡಲಿದೆ ಎಂದು ನಾನು ಈ ಮೊದಲೇ ಹೇಳಿದ್ದೇನೆ’’ ಎಂದು ಹಾರ್ದಿಕ್ ಪ್ರತಿಕ್ರಿಯಿಸಿದ್ದಾರೆ.
‘‘ವಿಡಿಯೋ ಕ್ಲಿಪ್ಗಳು ನಕಲಿ ಎಂದು ನಾವು ಈ ಹಿಂದೆಯೂ ಹೇಳಿದ್ದೇವೆ. ಬಿಜೆಪಿ ವಿಡಿಯೋವನ್ನು ತಿರುಚಿದೆ. ಹಾರ್ದಿಕ್ ಪಟೇಲ್ರ ಗೌರವಕ್ಕೆ ಧಕ್ಕೆ ತರಲು ಬಿಜೆಪಿ ಇಂತಹ ಕೆಲಸಕ್ಕೆ ಕೈ ಹಾಕಿದೆ. ಈ ವಿಡಿಯೋ ನಕಲಿ ಆಗಿರುವ ಕಾರಣ ಮಾಧ್ಯಮಗಳು ದಯವಿಟ್ಟು ಇದನ್ನು ಪ್ರಸಾರ ಮಾಡಬಾರದು’’ ಎಂದು ಪಾಟೀದಾರ್ ಅನಾಮತ್ ಆಂದೋಲನ ಸಮಿತಿ(ಪಾಸ್) ಸಂಚಾಲಕ ದಿನೇಶ್ ಬಂಭಾನಿಯಾ ಹೇಳಿದ್ದಾರೆ.