varthabharthi

ಆರೋಗ್ಯ

ಸೈನಸ್ ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ..

ವಿಪರೀತ ಶೀತ, ಕೆಮ್ಮಿನ ಬಗ್ಗೆ ನಿರ್ಲಕ್ಷ್ಯ ಬೇಡ: ಅದು ಸೈನಸ್ ಆಗಿರಬಹುದು...

ವಾರ್ತಾ ಭಾರತಿ : 7 Dec, 2017

ನೀವು ಸೀನುತ್ತಿದ್ದೀರಿ, ಕೆಮ್ಮೂ ಬರುತ್ತಿದೆ, ಮೂಗೂ ಕೆಂಪಗಾಗಿದೆ ಎಂದಿಟ್ಟುಕೊಳ್ಳಿ. ಇದೊಂದು ಸಾಮಾನ್ಯ ಶೀತ ಎಂದು ನೀವು ಭಾವಿಸಬಹುದು. ಆದರೆ ಈ ಶೀತ ನಿಮ್ಮನ್ನು ಬಾಧಿಸುವುದು ನಿಲ್ಲುವುದಿಲ್ಲ, ಸುಮಾರು ದಿನಗಳವರೆಗೆ ನಿಮ್ಮನ್ನು ಕಾಡುತ್ತಿದೆ ಎಂದಾದರೆ ಇದು ನಿಮ್ಮ ಸೈನಸ್‌ಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು.

ಸೈನಸ್ ಸೋಂಕು ಎಂದಾಕ್ಷಣ ತಲೆ ಬಿಸಿ ಮಾಡಿಕೊಳ್ಳಬೇಕಿಲ್ಲವಾದರೂ ನೀವು ವೈದ್ಯ ರನ್ನು ಯಾವಾಗ ಭೇಟಿಯಾಗಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.

ಸೈನಸ್‌ಗಳೆಂದರೇನು?

ತಲೆ ಮತ್ತು ಮುಖದ ಮೂಳೆಗಳಲ್ಲಿರುವ ಗಾಳಿ ತುಂಬಿದ ರಂಧ್ರ ಅಥವಾ ಸ್ಥಳಗಳನ್ನು ಸೈನಸ್ ಎಂದು ಕರೆಯುತ್ತಾರೆ. ಇಂತಹ ನಾಲ್ಕು ಜೋಡಿ ಸೈನಸ್‌ಗಳಿರುತ್ತವೆ. ಸಾಮಾನ್ಯವಾಗಿ ಸೈನಸ್‌ಗಳು ಶ್ಲೇಷ್ಮದ ತೆಳ್ಳನೆಯ ಪದರವೊದನ್ನು ಹೊರತುಪಡಿಸಿದರೆ ಖಾಲಿ ಸ್ಥಳಗಳಾಗಿರುತ್ತವೆ. ಸೈನಸ್ ನಾವು ಉಸಿರಾಡುವ ಗಾಳಿಯನ್ನು ತೇವವಾಗಿಸುತ್ತದೆ ,ಜೊತೆಗೆ ಧ್ವನಿಗಳನ್ನು ಹೆಚ್ಚಿಸುತ್ತದೆ.

ಸೈನಸ್ ಬಾಧೆ ಹೇಗೆ?

ನಮಗೆ ಶೀತ ಅಥವಾ ಅಲರ್ಜಿಯುಂಟಾದಾಗ ಮೂಗಿನ ಮಾರ್ಗವು ಊದಿ ಕೊಳ್ಳುತ್ತದೆ. ಇದರಿಂದಾಗಿ ಅದು ಸಂಕುಚಿತಗೊಂಡು ಸೈನಸ್‌ನ ಪುಟ್ಟ ದ್ವಾರವನ್ನೂ ಮುಚ್ಚುತ್ತದೆ. ಇದು ಹೆಚ್ಚು ಶ್ಲೇಷ್ಮ ಅಥವಾ ಸಿಂಬಳದ ಉತ್ಪತ್ತಿಗೆ ಕಾರಣವಾಗುತ್ತದೆ. ಹೆಚ್ಚಿನ ಸಲ ಇದು ಗಟ್ಟಿಯಾಗಿರುತ್ತದೆ ಮತ್ತು ಸೈನಸ್‌ನಿಂದ ಹೊರಗೆ ಹರಿಯುವುದಿಲ್ಲ. ಹೀಗೆ ಸೈನಸ್‌ನಲ್ಲಿಯೇ ಸಂಗ್ರಹಗೊಳ್ಳುವ ಈ ಲೋಳೆಯು ವೈರಸ್‌ಗಳು, ಬ್ಯಾಕ್ಟೀರಿಯಾ ಮತ್ತು ಬೂಷ್ಟಿನ ಬೆಳವಣಿಗೆಗೆ ಉತ್ತಮ ವೇದಿಕೆಯನ್ನು ಸೃಷ್ಟಿಸುತ್ತದೆ.

ಶೀತ ಅಥವಾ ಸೈನಸ್ ಸೋಂಕು ಎನ್ನುವುದನ್ನು ತಿಳಿಯುವುದು ಹೇಗೆ?

ಶೀತ ಮತ್ತು ಸೈನಸ್ ಲಕ್ಷಣಗಳು ಒಂದೇ ರೀತಿಯಾಗಿದ್ದರೂ, ಇವೆರಡೂ ಸಮಸ್ಯೆಗಳ ನಡುವೆ ಇರುವ ಕೆಲವು ವ್ಯತ್ಯಾಸಗಳು ನಿಮ್ಮನ್ನು ಕಾಡುತ್ತಿರುವುದು ಯಾವುದು ಎನ್ನುವುದನ್ನು ನಿರ್ಧರಿಸಲು ನೆರವಾಗುತ್ತವೆ.

ಕಾಲಾವಧಿ

 ಇದು ಸೈನಸ್ ಸಮಸ್ಯೆ ಅಥವಾ ಸೈನುಸಿಸ್‌ನ ಮೊದಲ ಮತ್ತು ಮುಖ್ಯ ಲಕ್ಷಣವಾಗಿದೆ. ಸಾಮಾನ್ಯ ಶೀತದಿಂದ ಬಳಲುತ್ತಿರುವವರಲ್ಲಿ ಒಂದೆರಡು ದಿನ ಮೂಗು ಸೋರುತ್ತದೆ, ಬಳಿಕ 2ರಿಂದ 4 ದಿನಗಳ ಕಾಲ ಮೂಗು ಕಟ್ಟಿದಂತಿರುತ್ತದೆ. ಅದರ ಬಳಿಕ ಸ್ಥಿತಿಯಲ್ಲಿ ಸುಧಾರಣೆಯಾಗಿ ನಿರಾಳತೆಯನ್ನು ಅನುಭವಿಸುತ್ತಾರೆ. ಆದರೆ ಸೈನಸ್ ಸೋಂಕು ಸುಮಾರು ಒಂಂದು ವಾರ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ ಮುಂದುವರಿಯುತ್ತದೆ.

ಶ್ಲೇಷ್ಮ

ಮೂಗಿನಿಂದ ಹೊರಬರುವ ಶ್ಲೇಷ್ಮದ ಬಣ್ಣವು ಸೈನುಸಿಸ್ ಅನ್ನು ಗುರುತಿಸಲು ಪ್ರಬಲವಾದ ಲಕ್ಷಣವಾಗಿದೆ. ವೈರಲ್ ಸೋಂಕು ಬಣ್ಣದಿಂದ ಕೂಡಿದ ಶ್ಲೇಷ್ಮಕ್ಕೆ ಕಾರಣವಾಗಬಹುದು. ಆದರೆ ಬ್ಯಾಕ್ಟೀರಿಯಾಗಳು ಹಸಿರು ಛಾಯೆಯ ಅಥವಾ ಹಳದಿ ಬಣ್ಣದ ಶ್ಲೇಷ್ಮವನ್ನು ಉತ್ಪಾದಿಸುತ್ತವೆ.

ಸೈನಸ್ ತಲೆನೋವು

ಸೈನಸ್‌ಗಳಲ್ಲಿಯ ಒತ್ತಡ ಮತ್ತು ಬಾತುಕೊಳ್ಳುವಿಕೆ ತಲೆನೋವಿಗೆ ಕಾರಣವಾಗುತ್ತದೆ. ಸೈನಸ್ ನೋವು ಹಲ್ಲುಗಳು, ದವಡೆ ಮತ್ತು ಕೆನ್ನೆಗಳಿಗೂ ಹರಡಬಹುದು. ಅದು ಕಿವಿನೋವಿಗೂ ಕಾರಣವಾಗುತ್ತದೆ.

ಸೈನಸ್‌ಗಳಲ್ಲಿ ನೋವು

ನೋವು ಸೈನುಸಿಸ್‌ನ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಸೈನಸ್‌ನಲ್ಲಿಯ ಉರಿಯೂತ ಮತ್ತು ಬಾತುಕೊಳ್ಳುವಿಕೆ ಲಘು ಒತ್ತಡವನ್ನುಂಟು ಮಾಡುತ್ತದೆ ಮತ್ತು ಇದು ಹಣೆ, ಮೇಲಿನ ದವಡೆ, ಹಲ್ಲು, ಮೂಗಿನ ಎರಡೂ ಬದಿಗಳು ಅಥವಾ ಕಣ್ಣುಗಳ ನಡುವೆ ನೋವಿಗೆ ಕಾರಣವಾಗುತ್ತದೆ. ಇದು ಕ್ರಮೇಣ ತಲೆನೋವನ್ನು ತರುತ್ತದೆ.

ಗಂಟಲು ಕೆರೆತ ಮತ್ತು ಕೆಮ್ಮು

ಸೈನಸ್‌ನಲ್ಲಿ ತಡೆಯು ಗಂಟಲಿನಲ್ಲಿ ಕೆರೆತವನ್ನುಂಟು ಮಾಡಬಹುದು. ಇದು ನಿರಂತರ ಕೆಮ್ಮಿಗೂ ಕಾರಣವಾಗುತ್ತದೆ ಮತ್ತು ಈ ಕೆಮ್ಮು ನಿದ್ರಿಸಲೆಂದು ಹಾಸಿಗೆಯ ಮೇಲೆ ಬಿದ್ದುಕೊಂಡಾಗ ತೀವ್ರವಾಗಿ ಕಾಡುತ್ತದೆ.

ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

 ಈ ಮೇಲಿನ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು. ಮೊದಲಿಗೆ ಜನರಲ್ ಫಿಜಿಷಿಯನ್‌ರನ್ನು ಭೇಟಿಯಾಗಬಹುದು. ರೋಗದ ತೀವ್ರತೆಯನ್ನು ಅವಲಂಬಿಸಿ ಅವರು ನಿಮ್ಮನ್ನು ಇಎನ್‌ಟಿ ತಜ್ಞರ ಬಳಿಗೆ ಕಳುಹಿಸಬ ಹುದು. ಅಗತ್ಯವಾದರೆ ಅವರು ಸಿಟಿ ಸ್ಕಾನ್‌ಗೆ ಸೂಚಿಸಬಹುದು ಮತ್ತು ಅದು ಸೈನಸ್‌ಗಳ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)