varthabharthi

ಕರಾವಳಿ

ಮೇಯರ್ ಹಿಂದಿರುಗಿದರೂ ಉದ್ಘಾಟನೆಗೊಂಡ ಬಾರ್!

ಬಾರ್ ರೆಸ್ಟೋರೆಂಟ್‌ಗೆ ವಿದ್ಯಾರ್ಥಿಗಳ ವಿರೋಧ: ಉದ್ಘಾಟನೆ ನೆರವೇರಿಸದೆ ಹಿಂದಿರುಗಿದ ಮೇಯರ್!

ವಾರ್ತಾ ಭಾರತಿ : 7 Dec, 2017

ಮಂಗಳೂರು, ಡಿ.7: ಬಾರ್ ಆ್ಯಂಡ್ ರೆಸ್ಟೋರೆಂಟೊಂದರ ಉದ್ಘಾಟನೆ ಬಂದಿದ್ದ ಮೇಯರ್ ಕವಿತಾ ಸನಿಲ್, ಆ ರೆಸ್ಟೋರೆಂಟ್ ವಿರುದ್ಧ ಸ್ಥಳೀಯ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಪುರಸ್ಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಹಿಂದಿರುಗಿದ ಘಟನೆ ಇಂದು ನಡೆಯಿತು. ಇತ್ತ ಮೇಯರ್ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದರಾದರೂ ಅವರು ಅಲ್ಲಿಂದ ತೆರಳಿದ ಬಳಿಕ ನಿಗದಿತ ಅವಧಿಯಲ್ಲೇ ರೆಸ್ಟೋರೆಂಟ್ ಮಾತ್ರ ಉದ್ಘಾಟನೆಗೊಂಡಿದೆ.!

ನಗರದ ಕುಂಟಿಕಾನ ಜಂಕ್ಷನ್‌ನಲ್ಲಿ ಇಂದು ಬೆಳಗ್ಗೆ ಬಾರ್ ಆ್ಯಂಡ್ ರೆಸ್ಟೋರೆಂಟ್ ಉದ್ಘಾಟನೆಯನ್ನು ಮೇಯರ್ ನೆರವೇರಿಸಬೇಕಿತ್ತು. ಕುಂಟಿಕಾನ ಜಂಕ್ಷನ್‌ನಲ್ಲಿ ಆರಂಭವಾಗುವ ನೂತನ ಬಾರ್‌ನ ಸಮೀಪದಲ್ಲೇ ಒಂದು ಶಾಲೆ ಇದೆ. ಈ ಶಾಲೆಯ ಕಂಪೌಂಡ್‌ನಿಂದ ನೂರು ಮೀಟರ್ ಅಂತರದಲ್ಲಿ ಬಾರ್ ಆರಂಭವಾಗುವುದನ್ನು ವಿರೋಧಿಸುವುದಾಗಿ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ರೆಸ್ಟೋರೆಂಟ್‌ನ ಮಾಲಕರು ತಮ್ಮ ಆತ್ಮೀಯರಾಗಿದ್ದ ಕಾರಣ ಅವರ ಕರೆಯ ಮೇರೆಗೆ ಮೇಯರ್ ಉದ್ಘಾಟನೆ ಬಂದಿದ್ದರಾದರೂ, ವಿದ್ಯಾರ್ಥಿಗಳ ವಿರೋಧದ ಹಿನ್ನೆಲೆಯಲ್ಲಿ ನೇರವಾಗಿ ವಿದ್ಯಾರ್ಥಿಗಳ ಬಳಿ ತೆರಳಿದರು. ವಿದ್ಯಾರ್ಥಿಗಳು ಮೇಯರ್ ಎದುರು ಲಕ ಪ್ರದರ್ಶಿಸಿ ಯಾವುದೇ ಕಾರಣಕ್ಕೂ ಇಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭವಾಗಬಾರದು ಎಂದು ಮನವಿ ಮಾಡಿದರು. ವಿದ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿದ ಮೇಯರ್ ತಾನು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿದೆ ತೆರಳುವ ನಿರ್ಧಾರ ಪ್ರಕಟಿಸಿದರು.

‘‘ಬಾರ್ ಮಾಲಕರು ಕಾನೂನು ಪ್ರಕಾರ ನಾವು ಸರಿ ಇದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಶಾಲೆಯವರು 100 ಮೀಟರ್ ಒಳಗಡೆ ಬಾರ್ ತೆರೆದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಸತ್ಯಾಸತ್ಯತೆ ಏನು ಎಂಬುದನ್ನು ಸಂಬಂಧಪಟ್ಟ ಇಲಾಖೆಯವರು ಅಳತೆ ಮಾಡಿ ಸಮಸ್ಯೆ ಬಗೆಹರಿಸಬೇಕಿದೆ. ಸ್ವಲ್ಪಮಟ್ಟಿನ ಗೊಂದಲ ಇರುವುದು ನಿಜ. ಅದು ಬಗೆಹರಿಯದೆ ನಾನು ಉದ್ಘಾಟನೆ ಮಾಡುವುದು ಸರಿ ಅಲ್ಲ ಎಂದು ತೀರ್ಮಾನಿಸಿ ನಾನು ವಾಪಸ್ ಹೋಗುತ್ತಿದ್ದೇನೆ’’ಎಂದು ಮೇಯರ್ ಕವಿತಾ ಸನಿಲ್ ಸುದ್ದಿಗಾರರಿಗೆ ತಿಳಿಸಿದರು.

 ಶಾಲೆಯ ರಕ್ಷಕ-ಶಿಕ್ಷಕ ಸಂಘದ ಪ್ರತಿನಿಧಿ ಜಾಸ್ಮಿನ್ ಡಿಸೋಜ ಮಾತನಾಡಿ, ಶಾಲೆ ಎದುರು ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭವಾಗುವುದರ ವಿರುದ್ಧ ನಾವು ಅಬಕಾರಿ ಆಯುಕ್ತರ ಬಳಿ, ಜಿಲ್ಲಾಧಿಕಾರಿ ಬಳಿ ದೂರು ನೀಡಿದ್ದೇವೆ. ಆದರೆ ಯಾರಿಂದಲೂ ಇದುವರೆಗೆ ಸ್ಪಂದನೆ ದೊರಕಿಲ್ಲ. ನಾವು ಅಳತೆ ಮಾಡಿದಾಗ ಈ ರೆಸ್ಟೋರೆಂಟ್ 80 ಮೀಟರ್ ಅಂತರದಲ್ಲಿ ಇರುವುದು ಸ್ಪಷ್ಟವಾಗಿದೆ. ಇದನ್ನು ನಾವು ವಿರೋಧಿಸುತ್ತಿದ್ದೇವೆ’’ ಎಂದರು.

ನಾವು ಕಾನೂನು ಪ್ರಕಾರವೇ ಪರವಾನಿಗೆ ಪಡೆದು ಬಾರ್ ಆ್ಯಂಡ್ ರೆಸ್ಟೋರೆಂಟ್ ಆರಂಭಿಸುತ್ತಿದ್ದೇವೆ. ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ ನಡೆಸಿ ನಮಗೆ ಪರವಾನಿಗೆ ನೀಡಿದ್ದಾರೆ. ಆದ್ದರಿಂದ ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಬಾರ್ ಮಾಲಕರು ತಿಳಿಸಿದ್ದಾರೆ. ಮೇಯರ್ ತೆರಳಿದ ಬಳಿಕ ನಿಗದಿತ ಸಮಯದಲ್ಲಿಯೇ ಉದ್ಘಾಟನೆ ಕಾರ್ಯ ನಡೆಯಿತು. ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ರಾಜೇಶ್ ಸೇರಿದಂತೆ ಉಳಿದ ಜನಪ್ರತಿನಿಧಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು!

 

Comments (Click here to Expand)