varthabharthi

ಸಂಪಾದಕೀಯ

ಹಿಂದೂ ಧರ್ಮಕ್ಕೆ ಮುಳುವಾಗುತ್ತಿರುವ ಧರ್ಮದ ವಿಕೃತ ವ್ಯಾಖ್ಯಾನ

ವಾರ್ತಾ ಭಾರತಿ : 8 Dec, 2017

ಧಾರ್ಮಿಕರು ಧರ್ಮದ ಕುರಿತಂತೆ ಮಾತನಾಡಿದರೆ, ಮನುಷ್ಯನೊಳಗಿರುವ ಮೃಗೀಯ ಭಾವನೆಗಳು ತೊಲಗಿ ಅಲ್ಲಿ ಮಾನವೀಯತೆ ನೆಲೆಸುತ್ತದೆ. ಧರ್ಮ ಮನುಷ್ಯನ ಒಳ ಹೊರಗನ್ನು ಶುಚಿಗೊಳಿಸಿ ಆತನನ್ನು ಮೇಲೆಕ್ಕೆತ್ತುತ್ತದೆ. ಶತಶತಮಾನಗಳಿಂದ ಈ ದೇಶದಲ್ಲಿ ಬೇರೆ ಬೇರೆ ಸಾಧು, ಸಂತರು ಅದನ್ನು ಮಾಡುತ್ತಾ ಬಂದಿದ್ದಾರೆ. ಬುದ್ಧ, ಬಸವಣ್ಣ, ನಾರಾಯಣ ಗುರು ಈ ದೇಶದ ಆತ್ಮಕ್ಕಂಟಿದ ಮೃಗೀಯ ಭಾವನೆಗಳನ್ನು ಅಳಿಸುತ್ತಾ ಮನುಕುಲವನ್ನು ಉದ್ಧರಿಸಿದರು. ಜಾತೀಯತೆ, ವರ್ಗ, ಲಿಂಗಭೇದ ಇವೆಲ್ಲವುಗಳ ಮರೆಯಲ್ಲಿ ಅಡಗಿ ನಿಂತ ಮನುಷ್ಯನ ಕ್ರೌರ್ಯಗಳು ಇವರ ಬೋಧನೆಗಳಿಂದ ಚಿಂತನೆಗಳಿಂದ ತಣ್ಣಗಾದವು. ಆದರೆ ಇತ್ತೀಚಿನ ದಿನಗಳಲ್ಲಿ ಸಾಧು ಸಂತರ ವೇಷದಲ್ಲಿರುವ ರಾಜಕಾರಣಿಗಳು ಧರ್ಮವನ್ನು ವಿರೂಪಗೊಳಿಸಿ, ಮನುಷ್ಯನ ಆಳದಲ್ಲಿರುವ ಮೃಗೀಯತೆಯನ್ನು ಪ್ರಚೋದಿಸ ತೊಡಗಿದ್ದಾರೆ.

ಸೌಹಾರ್ದ, ಶಾಂತಿ, ಅಹಿಂಸೆಗಳಿಗಿಂತ ದ್ವೇಷ, ಹಿಂಸೆ, ಅಶಾಂತಿಗಳ ಕರೆಗೆ ಮನುಷ್ಯನ ಮೆದುಳು ತಕ್ಷಣ ಸ್ಪಂದಿಸುತ್ತದೆ. ಧಾರ್ಮಿಕ ವೇಷದಲ್ಲಿರುವ ಕಾವಿಧಾರಿಗಳು ದೇಶಾದ್ಯಂತ ಬುದ್ಧ, ಬಸವನರ ಚಿಂತನೆಗಳಿಗೆ ವಿರುದ್ಧವಾದ ಕ್ರೌರ್ಯ, ಹಿಂಸೆಗಳನ್ನು ಪ್ರಚೋದಿಸುತ್ತಾ, ಜನಸಾಮಾನ್ಯರ ಎದೆಯೊಳಗೆ ಅದನ್ನು ಬಿತ್ತುತ್ತಾ ಅದನ್ನೇ ಧರ್ಮಜಾಗೃತಿಯೆಂದು ಬಿಂಬಿಸುತ್ತಿದ್ದಾರೆ. ಇಂತಹ ವಿಕೃತ ಚಿಂತನೆಗಳು ಮನುಷ್ಯನನ್ನು ಎಷ್ಟು ನೀಚತನಕ್ಕೆ ಇಳಿಸಬಹುದು ಎನ್ನುವುದಕ್ಕೆ ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ಉದಾಹರಣೆಯಾಗಿದೆ.

ಇಲ್ಲಿನ ಜೈಪುರದಲ್ಲಿ ಶಂಭುಲಾಲ್ ರಾಯ್‌ಗರ್ ಎಂಬಾತ ಅಫ್ರಾಝುಲ್ ಇಸ್ಲಾಂ ಎಂಬ ತನ್ನ ನೆರೆಯಾತನನ್ನು ಬರ್ಬರವಾಗಿ ಹತ್ಯೆ ಮಾಡುತ್ತಾನೆ. ಯಾವ ಕಾರಣವೂ ಇಲ್ಲದೆ ಮಾರಕಾಯುಧದಿಂದ ಬರ್ಬರವಾಗಿ ಥಳಿಸಿದ್ದಲ್ಲದೆ, ಬಳಿಕ ಆತನನ್ನು ಜೀವಂತವಾಗಿ ದಹಿಸುತ್ತಾನೆೆ. ಈ ಭೀಕರ ಕೃತ್ಯವನ್ನು ಎಸಗಿದ ಬಳಿಕ ಆತ ತನ್ನ ಕೃತ್ಯವನ್ನು ಧರ್ಮರಕ್ಷಣೆ ಎಂದು ಕರೆದು ಕೊಳ್ಳುತ್ತಾನೆ. ಲವ್‌ಜಿಹಾದ್ ಕಾರಣಕ್ಕಾಗಿ ಆತ, ತನ್ನದೇ ಊರಿನ ಅಮಾಯಕನನ್ನು ಬರ್ಬರವಾಗಿ ಕೊಂದು ಹಾಕಿದನಂತೆ. ಇಷ್ಟಕ್ಕೂ ಸತ್ತು ಹೋದ ಮನುಷ್ಯ ಮುಸ್ಲಿಮ್ ಎನ್ನುವುದು ಹೊರತು ಪಡಿಸಿದರೆ ಈ ಲವ್‌ಜಿಹಾದ್‌ಗೂ ಅವನಿಗೂ ಯಾವ ಸಂಬಂಧವೂ ಇಲ್ಲ. ಬಡ ಕುಟುಂಬದ ಹಿನ್ನೆಲೆಯಿರುವ ಆತ ಯಾವ ರಾಜಕೀಯ ಸಂಘಟನೆಗಳಲ್ಲೂ ಗುರುತಿಸಲ್ಪಟ್ಟವನಲ್ಲ. ಕೆಲಸ ಕೊಡುತ್ತೇನೆ ಎಂದು ಈತನನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದ ಶಂಭುಲಾಲ್ ಭಾರೀ ಆಯುಧದಿಂದ ಭೀಕರವಾಗಿ ಥಳಿಸಿ ಬಳಿಕ ಬೆಂಕಿ ಹಚ್ಚಿ ಸಾಯಿಸುತ್ತಾನೆ. ವಿಪರ್ಯಾಸವೆಂದರೆ ಇಂತಹದೊಂದು ಮೃಗೀಯ ಕೆಲಸವನ್ನು ಮಾಡಿದ ಆತ ಬಳಿಕ ಆ ಕಳಂಕವನ್ನು ಹಿಂದೂಧರ್ಮದ ಮುಖಕ್ಕೆ ಒರೆಸುತ್ತಾನೆ. ಧರ್ಮ ರಕ್ಷಣೆ ಮಾಡಿದೆ ಎಂಬಂತೆ ವೀಡಿಯೊದಲ್ಲಿ ಮಾತನಾಡುತ್ತಾನೆ.

ಲವ್ ಜಿಹಾದ್ ಎನ್ನುವುದು ದೇಶದಲ್ಲಿ ಇದೆಯೇ ಎನ್ನುವ ಬಗ್ಗೆಯೇ ಸ್ಪಷ್ಟವಿಲ್ಲ. ಅಂತಹದೊಂದು ಜಾಲ ಇಲ್ಲ ಎಂದು ಪೊಲೀಸರು ಈಗಾಗಲೇ ವರದಿಯೊಂದರಲ್ಲಿ ಹೇಳಿದ್ದಾರೆ. ಆದರೂ, ಕೆಲವು ಮಹಿಳೆಯರ ಮತಾಂತರದ ಘಟನೆಗಳನ್ನು ‘ಲವ್ ಜಿಹಾದ್’ಗೆ ತಳಕು ಹಾಕಲಾಗುತ್ತಿದೆ. ಒಂದಂತೂ ಸತ್ಯ. ಈ ದೇಶದಲ್ಲಿ ನಾಸ್ತಿಕ, ಆಸ್ತಿಕನಾಗಲು ಅಥವಾ ಯಾವುದೇ ಧರ್ಮದ ಚಿಂತನೆಗಳ ಬಗ್ಗೆ ಆಲೋಚಿಸಲು, ತನಗೆ ಬೇಕಾದ ಧರ್ಮವನ್ನು ಸ್ವೀಕರಿಸಲು ಪುರುಷನಷ್ಟೇ ಮಹಿಳೆಗೂ ಸ್ವಾತಂತ್ರವಿದೆ. ಮಹಿಳೆಯಾದ ಕಾರಣಕ್ಕಾಗಿ ಆಕೆ ಧಾರ್ಮಿಕ ಚಿಂತನೆಗಳನ್ನು ಸ್ವತಂತ್ರವಾಗಿ ಚರ್ಚಿಸಬಾರದು, ವಿಮರ್ಶಿಸಬಾರದು, ತನಗೆ ಬೇಕಾದ ಧರ್ಮವನ್ನು ಸ್ವೀಕರಿಸಬಾರದು ಎನ್ನುವುದು ಮಹಿಳಾ ವಿರೋಧಿ ಧೋರಣೆಯೇ ಆಗಿದೆ. ಇತ್ತೀಚೆಗೆ ದೇಶದಲ್ಲಿ ಚರ್ಚೆಯಲ್ಲಿರುವ ಒಂದೆರಡು ಮತಾಂತರ ಪ್ರಕರಣಗಳಲ್ಲಿ ಗುರುತಿಸಲ್ಪಟ್ಟಿರುವ ಮಹಿಳೆಯರು ಎಳೆಯರಲ್ಲ. ಎಲ್ಲರೂ ಪ್ರಾಯ ಪೂರ್ತಿಯಾದವರು. ಜೊತೆಗೆ ವಿದ್ಯಾವಂತರು. ಮತ್ತು ಹಾದಿಯಾ ಪ್ರಕರಣದಲ್ಲಿ ಆಕೆ ಪ್ರಿಯಕರನ ಮೋಹದ ಬಲೆಗೆ ಬಿದ್ದು ಇಸ್ಲಾಮ್ ಸ್ವೀಕರಿಸಿದವಳಲ್ಲ ಎನ್ನುವುದೂ ಬೆಳಕಿಗೆ ಬಂದಿದೆ. ಈ ಬಗ್ಗೆ ಎನ್‌ಐಎ ತನಿಖೆಯನ್ನೂ ನಡೆಸಲಾಯಿತು. ಸಂಘಪರಿವಾರ ಆಕೆಯನ್ನು ಗೃಹಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡಿದರೂ ಆಕೆ ತನ್ನ ನಿರ್ಧಾರದಿಂದ ಹಿಂದೆಗೆಯಲಿಲ್ಲ.

ಅಂದರೆ, ಇಸ್ಲಾಮ್ ಧರ್ಮದ ಚಿಂತನೆಯನ್ನು ನಂಬಿ ಆಕೆ ಮತಾಂತರ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ತನಗೆ ಇಚ್ಛಿಸಿದ ತತ್ವದ ಜೊತೆಗೆ ಬದುಕಲು ಆಕೆಗೆ ಹಕ್ಕಿದೆ. ಇಂದು ಇಸ್ಲಾಮನ್ನು ಮೆಚ್ಚಿದವಳಿಗೆ ನಾಳೆ ಇನ್ನೊಂದು ಧರ್ಮ ಹೆಚ್ಚು ಹಿತವಾಗಿ ಕಾಣಬಹುದು. ಅದು ಆಕೆಯ ಖಾಸಗಿ ಬದುಕು. ಇಂದು ಇಂತಹ ಮಹಿಳೆಯರ ಕೆಲವು ಮತಾಂತರ ಪ್ರಕರಣಗಳನ್ನು ‘ಲವ್ ಜಿಹಾದ್’ ಎಂದು ಕರೆದು ಕೆಲವು ಸಾಧು ಸಂತರು ಮತ್ತು ಸಂಘಪರಿವಾರ ತಮ್ಮ ವೈಫಲ್ಯವನ್ನು ಮುಚ್ಚಲು ಹೊರಟಿದೆ. ಅವರು ಒಂದು ಧರ್ಮದ ಸಿದ್ಧಾಂತದ ಕಡೆಗೆ ಆಕರ್ಷಿತರಾಗಿದ್ದಾರೆ ಎನ್ನುವುದನ್ನು ಮುಚ್ಚಿಡುವುದಕ್ಕೆ ಯತ್ನಿಸುತ್ತಿದೆ. ಯಾಕೆ ಅವರು ಹಿಂದೂಧರ್ಮವನ್ನು ತೊರೆಯುತ್ತಿದ್ದಾರೆ ಮತ್ತು ಹಿಂದೂಧರ್ಮದ ಯಾವ ಸಿದ್ಧಾಂತಕ್ಕೆ ಅವರು ರೋಸಿದ್ದಾರೆ ಎನ್ನುವ ವಾಸ್ತವವನ್ನು ಮುಟ್ಟುವುದಕ್ಕೆ ಸಂಘಪರಿವಾರ ಸನ್ಯಾಸಿಗಳು ಹಿಂದೇಟು ಹಾಕುತ್ತಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಘಟನೆಯನ್ನೇ ತೆಗೆದುಕೊಳ್ಳೋಣ. ಬರ್ಬರವಾಗಿ ಕೊಲೆ ನಡೆಸಿದ ಆತನನ್ನು ಯಾರೂ ತಮ್ಮ ‘ಧರ್ಮ’ದ ಜೊತೆಗೆ ಗುರುತಿಸಲಾರರು. ಒಂದು ವೇಳೆ ಆತ ಒಂದು ಧರ್ಮದ ಪ್ರತಿನಿಧಿಯಾಗಿ ಗುರುತಿಸಿಕೊಂಡರೆ ಆ ಧರ್ಮದ ಕುರಿತಂತೆ ಹೇವರಿಕೆಯನ್ನು ಹೊಂದಬೇಕು. ಆದರೆ ಆತನಲ್ಲಿ ಆ ಮೃಗೀಯತೆಯನ್ನು ತುಂಬಿದ್ದು, ಸಂಘಪರಿವಾರದ ಸಾಧು ಸಂತರ ಮಾತುಗಳು ಎನ್ನುವುದರಲ್ಲಿ ಎರಡು ಮಾತಿಲ್ಲ. ಹಿಂದೂ ಧರ್ಮದ ಬಗೆಗಿನ ವಿಕೃತ ವ್ಯಾಖ್ಯಾನವೇ ಅವನನ್ನು ಮೃಗವಾಗಿಸಿತು. ಜಾಗತಿಕವಾಗಿ ಇಸ್ಲಾಂ ಧರ್ಮ ಹೇಗೆ ಕೆಲವು ಗುಂಪುಗಳ ವಿಕೃತ ವ್ಯಾಖ್ಯಾನಗಳಿಗೆ ಬಲಿಯಾಗಿದೆಯೋ ಹಾಗೆಯೇ, ಭಾರತದಲ್ಲಿ ಹಿಂದೂಧರ್ಮವೂ ಬಲಿಯಾಗುತ್ತಿದೆ. ಐಸಿಸ್ ಉಗ್ರರ ಹಿಂಸೆಯ ಜೊತೆಗೆ ವಿಶ್ವದ ಯಾವುದೇ ಧಾರ್ಮಿಕ ಮುಸ್ಲಿಮರು ತಮ್ಮನ್ನು ಗುರುತಿಸುತ್ತಿಲ್ಲ ಎನ್ನುವುದನ್ನು ಇದೇ ಸಂದರ್ಭದಲ್ಲಿ ನಾವು ಗಮನಿಸಬೇಕು.

ಅಂತೆಯೇ ಸಂಘಪರಿವಾರದ ಹಿನ್ನೆಲೆಯಿರುವ ಇಂತಹ ನೀಚ ಜನರ ಜೊತೆಗೆ ಗುರುತಿಸಿಕೊಳ್ಳದ ಅಪ್ಪಟ ಧಾರ್ಮಿಕ ಹಿಂದೂಗಳು ಈ ದೇಶದಲ್ಲಿ ಬಹು ಸಂಖ್ಯೆಯಲ್ಲಿದ್ದಾರೆ. ಇನ್ನೊಂದು ಧರ್ಮವನ್ನು ದ್ವೇಷಿಸುವುದೇ ತಮ್ಮ ಧರ್ಮವನ್ನು ಉಳಿಸುವ ಏಕೈಕ ಮಾರ್ಗ ಎಂದು ಸ್ವಧರ್ಮೀಯರಲ್ಲಿ ತಪ್ಪು ಕಲ್ಪನೆಗಳನ್ನು ಬಿತ್ತುತ್ತಿರುವ ಸಂಘಪರಿವಾರದ ಉದ್ದೇಶ ರಾಜಕೀಯವೇ ಹೊರತು, ಅಧ್ಯಾತ್ಮ ಅಲ್ಲ. ಇದರ ಪರಿಣಾಮವಾಗಿ ಶಂಭುಲಾಲ್‌ನಂತಹ ವಿಕೃತರು ಹಿಂದೂ ಧರ್ಮದ ಪ್ರತಿನಿಧಿಗಳು, ರಕ್ಷಕರೂ ಆಗುತ್ತಾರೆ. ಇಂತಹ ವಿಕೃತರು ಹಿಂದೂ ಧರ್ಮದ ಕುರಿತಂತೆ ತಪ್ಪು ಕಲ್ಪನೆಗಳನ್ನು ಬಿತ್ತುತ್ತಿರುವ ಪರಿಣಾಮವಾಗಿ ಅಮಾಯಕ ಹಿಂದೂಗಳು ಗೊಂದಲಕ್ಕೊಳಗಾಗಿದ್ದಾರೆ. ಒಂದೆಡೆ ಜಾತೀಯತೆ, ಶೋಷಣೆ, ವೌಢ್ಯಗಳಿಂದ ಹಿಂದೂಧರ್ಮ ನಲುಗುತ್ತಿರುವಾಗ, ಇಂತಹ ವಿಕೃತ ಜನರು ಬೀದಿಗಳಲ್ಲಿ ತಮ್ಮ ಧರ್ಮವನ್ನು ಪ್ರತಿನಿಧಿಸುತ್ತಿರುವುದು ಸಜ್ಜನ ಧಾರ್ಮಿಕ ಜನರೊಳಗೆ ನಾಚಿಕೆಯನ್ನು ತರುತ್ತಿದೆ. ಇದರ ಪರಿಣಾಮವಾಗಿಯೇ ದಲಿತರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧರಾಗುತ್ತಿದ್ದಾರೆ.

ಹಲವರು ಈ ಧರ್ಮದೊಳಗೆ ಗುರುತಿಸಿಕೊಳ್ಳಲು ಹೇಸಿ ಇತರ ಧರ್ಮಗಳ ಚಿಂತನೆಗಳ ಬಗ್ಗೆ ಆಸಕ್ತರಾಗುತ್ತಿದ್ದಾರೆ. ಇಂದು ದೇಶದಲ್ಲಿ ನಡೆಯುತ್ತಿರುವ ಮತಾಂತರಗಳಿಗೆ ಸಂಘಪರಿವಾರದ ವೇಷದಲ್ಲಿ ಬೀದಿಯಲ್ಲಿ ಕತ್ತಿ ತಲವಾರುಗಳ ಜೊತೆಗೆ ಓಡಾಡುತ್ತಿರುವ ಗೂಂಡಾಗಳೇ ಪರೋಕ್ಷವಾಗಿ ಕಾರಣರು. ಒಂದು ಕಾಲದಲ್ಲಿ ಹಲವು ಸಾಧು ಸಂತರು ಮುಂದೆ ನಿಂತು ಧರ್ಮದೊಳಗಿರುವ ಕೆಡುಕುಗಳನ್ನು ಸುಧಾರಿಸಿ ಧರ್ಮ ರಕ್ಷಕರೆಂದು ಗುರುತಿಸಿಕೊಂಡರೆ, ಆ ಮಹಾತ್ಮರ ಜಾಗದಲ್ಲಿ ಇಂದು ಸಂಘಪರಿವಾರದ ಗೂಂಡಾಗಳು ಬಂದು ಕುಳಿತಿರುವುದನ್ನು ಧಾರ್ಮಿಕ ಸಜ್ಜನರು ಹೇಗೆ ಸಹಿಸಬಲ್ಲರು? ಮತಾಂತರಗಳನ್ನು ತಡೆಯಬೇಕಾದರೆ ಮೊತ್ತ ಮೊದಲು ಹಿಂದೂ ಧರ್ಮವನ್ನು ಸಾರ್ವಜನಿಕವಾಗಿ ವಿಕೃತರೂಪದಲ್ಲಿ ವ್ಯಾಖ್ಯಾನಿಸಿ ಶಂಭುಲಾಲ್‌ನಂತಹ ವ್ಯಕ್ತಿಗಳನ್ನು ಸೃಷ್ಟಿಸುತ್ತಿರುವವರನ್ನು ತಡೆಯಬೇಕಾಗಿದೆ.

ಹಿಂದೂ ಧರ್ಮದ ರಕ್ಷಣೆಯ ಹೊಣೆಯನ್ನು ಸಂಘಪರಿವಾರ ಗೂಂಡಾಗಳ ಕೈಯಿಂದ ಕಿತ್ತು, ಸಜ್ಜನ ಧಾರ್ಮಿಕ ಸಂತರುಗಳ ಕೈಗೆ ಕೊಡಬೇಕಾಗಿದೆ. ಕತ್ತಿ ತಲವಾರುಗಳಿಂದ ಹಿಂದೂ ಧರ್ಮಕ್ಕೆ ಯಾರನ್ನೂ ಮರಳಿಸುವುದಕ್ಕೆ ಸಾಧ್ಯವಿಲ್ಲ, ಮತಾಂತರವಾಗದಂತೆ ತಡೆಯುವುದಕ್ಕೂ ಸಾಧ್ಯವಿಲ್ಲ. ಶತಶತಮಾನಗಳಿಂದ ಹಿಂದೂ ಧರ್ಮವು ವಿಶ್ವಕ್ಕೆ ನೀಡಿರುವ ಶಾಂತಿ, ಸೌಹಾರ್ದದ ಚಿಂತನೆಗೆ ನೀರೆರೆದು ಬೆಳೆಸಿದಾಗಷ್ಟೇ ಇತರ ಧರ್ಮೀಯರು ಹಿಂದೂ ಧರ್ಮದ ಕಡೆಗೆ ಆಕರ್ಷಿತರಾಗಬಹುದು. ಆ ಮೂಲಕ ಹಿಂದೂ ಧರ್ಮ ತಾನೂ ಉಳಿದು, ಇತರರನ್ನೂ ಉಳಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)