varthabharthi

ಆರೋಗ್ಯ

ಸರಿಯಾದ ಬ್ಲಡ್ ಪ್ರೆಷರ್ ಮಾನಿಟರ್ ಆಯ್ಕೆ ಮಾಡುವುದು ಹೇಗೆ....?

ವಾರ್ತಾ ಭಾರತಿ : 8 Dec, 2017

ಹಿಂದೆ ಜನರು ತಮ್ಮ ರಕ್ತದೊತ್ತಡದ ನಿಯಮಿತ ತಪಾಸಣೆಗಾಗಿ ವೈದ್ಯರ ಬಳಿಗೆ ತೆರಳುತ್ತಿದ್ದರು. ಈ ಪದ್ಧತಿ ಕ್ರಮೇಣ ಮಾಯವಾಗುತ್ತಿದ್ದು, ಈಗ ಮನೆಯಲ್ಲಿಯೇ ನಮ್ಮ ರಕ್ತದೊತ್ತಡವನ್ನು ನಾವೇ ಪರೀಕ್ಷಿಸಿಕೊಳ್ಳಲು ಬ್ಲಡ್ ಪ್ರೆಷರ್ ಮಾನಿಟರ್(ಬಿಪಿಎಂ)ಗಳು ಲಭ್ಯವಿವೆ. ಆದರೆ ಸರಿಯಾದ ಮಾನಿಟರ್ ಆಯ್ಕೆ ಮಾಡಿಕೊಳ್ಳದಿದ್ದರೆ ಅದು ನಿಖರವಾದ ರಕ್ತದೊತ್ತಡವನ್ನು ತೋರಿಸುವುದಿಲ್ಲ ಎನ್ನುವುದು ಗೊತ್ತೇ?

ಇಂದು ಮಾರುಕಟ್ಟೆಯಲ್ಲಿ ವಿವಿಧ ಬಿಪಿಎಂಗಳು ಲಭ್ಯವಿವೆ. ಆದರೆ ನಿಖರವಾದ ಫಲಿತಾಂಶವನ್ನು ನೀಡುವ ಮತ್ತು ಸುಲಲಿತವಾಗಿ ಕಾರ್ಯ ನಿರ್ವಹಿಸುವ ಬಿಪಿಎಂ ಖರೀದಿಯು ಮುಖ್ಯವಾಗುತ್ತದೆ. ಬಿಪಿಎಂ ಖರೀದಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳಿಲ್ಲಿವೆ.

ರಕ್ತದೊತ್ತಡದ ತಪಾಸಣೆಗಾಗಿ ತೋಳಿಗೆ ಸುತ್ತಿಕೊಳ್ಳುವ ಪಟ್ಟಿ ಅಥವಾ ಕಫ್ ಸೂಕ್ತವಾದ ಗಾತ್ರದಲ್ಲಿದೆ ಎನ್ನುವುದನ್ನು ಪರಿಶೀಲಿಸಿ. ಅದು ನಿಮ್ಮ ತೋಳಿಗೆ ಸೂಕ್ತವಾಗಿ ಹೊಂದಿಕೆಯಾಗದಿದ್ದರೆ ಬಿಪಿಎಂ ಸರಿಯಾದ ಫಲಿತಾಂಶವನ್ನು ನೀಡುವುದಿಲ್ಲ.

ಬಳಸಲು ಸುಲಭವಾದ ಬಿಪಿಎಂ ಅನ್ನೇ ಖರೀದಿಸಿ. ಸಂಕೀರ್ಣ ನಿರ್ವಹಣಾ ವ್ಯವಸ್ಥೆಯಿರುವ ಬಿಪಿಎಂ ಖರೀದಿಸಿದರೆ ಅದು ಬಳಕೆಯಾಗುವುದಕ್ಕಿಂತ ಹೆಚ್ಚಾಗಿ ಮನೆಯ ಕಪಾಟಿನಲ್ಲಿಯೇ ಇರುವಂತಾಗಬಹುದು.

ಕಡಿಮೆ ಬೆಲೆಯ ಬಿಪಿಎಂ ಖರೀದಿ ಬುದ್ಧಿವಂತಿಕೆಯ ನಿರ್ಧಾರವಾಗುತ್ತದೆ. ಆದರೆ ಅದು ಎಲ್ಲ ಅಗತ್ಯ ಅಂಶಗಳನ್ನು ಒಳಗೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ನೀವು ಹಿರಿಯ ವ್ಯಕ್ತಿಗಳು, ಗರ್ಭಿಣಿಯರು ಅಥವಾ ಮಕ್ಕಳಿಗಾಗಿ ಬಿಪಿಎಂ ಖರೀದಿಸುತ್ತಿದ್ದರೆ ಅದು ಅವರಿಗೆ ಸೂಕ್ತವಾಗುತ್ತದೆಯೇ ಎನ್ನುವುದನ್ನು ಪರಿಶೀಲಿಸಿ.

ಬಿಪಿಎಂ ಖರೀದಿಗೆ ಮುನ್ನ ಅದು ಪರೀಕ್ಷೆಗೊಳಪಟ್ಟಿದೆಯೇ ಮತ್ತು ನಿರೀಕ್ಷಿತ ನಿಖರತೆಯನ್ನು ನೀಡುತ್ತದೆಯೇ ಎನ್ನುವುದನ್ನು ಖಚಿತಪಡಿಸಕೊಳ್ಳಲು ಪ್ಯಾಕೇಜ್‌ನ್ನು ಪರಿಶೀಲಿಸಿ.

ನೀವು ಆಗಾಗ್ಗೆ ಪ್ರಯಾಣ ಮಾಡುತ್ತಿರುವರಾದರೆ ಅಥವಾ ದಿನವೊಂದರಲ್ಲಿ ಹಲವಾರು ಬಾರಿ ರಕ್ತದೊತ್ತಡವನ್ನು ತಪಾಸಣೆ ಮಾಡಿಕೊಳ್ಳುವಂತೆ ವೈದ್ಯರು ನಿಮಗೆ ಸಲಹೆ ನೀಡಿದ್ದರೆ ಪುಟ್ಟ, ಎಲ್ಲಿಗೂ ಒಯ್ಯಬಹುದಾದ ಬಿಪಿಎಂ ಅನ್ನು ಖರೀದಿಸುವುದು ಒಳ್ಳೆಯದು. ಇಂತಹ ಸಂದರ್ಭದಲ್ಲಿ ಅದಕ್ಕೆ ಹಾನಿಯಾಗದಂತೆ ಪೆಟ್ಟಿಗೆಯೂ ಲಭ್ಯವಿರುವ ಬಿಪಿಎಂ ಅನ್ನೇ ಆಯ್ಕೆ ಮಾಡಿಕೊಳ್ಳಿ.

ದೋಷಪೂರ್ಣ ಫಲಿತಾಂಶಗಳನ್ನು ನಿವಾರಿಸಲು ಬಿಪಿಎಂನ ಬ್ಯಾಟರಿಯನ್ನು ಆಗಾಗ್ಗೆ ಪರಿಶೀಲಿಸುವುದು ಅಗತ್ಯ. ಉದಾಹರಣೆಗೆ ಬ್ಯಾಟರಿಯ ಶಕ್ತಿ ಕಡಿಮೆಯಾಗುತ್ತಿದೆ ಎಂದು ಇಂಡಿಕೇಟರ್ ಸೂಚಿಸಿದಾಗ ಅಥವಾ ಕಫ್ ಉಬ್ಬಿಕೊಳ್ಳದಿದ್ದಾಗ ಬ್ಯಾಟರಿಯನ್ನು ಬದಲಿಸಬೇಕಾಗುತ್ತದೆ.

ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವ ಸಂದರ್ಭ ಈ ಕೆಳಗಿನ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.

► ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ.

► ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವ ಕನಿಷ್ಠ 30 ನಿಮಿಷಗಳ ಮುನ್ನ ಕಾಫಿ, ಮದ್ಯ ಮತ್ತು ತಂಬಾಕಿನಿಂದ ದೂರವಿರಿ.

► ಬಿಪಿಎಂನ ಕಫ್ ಅನ್ನು ನಿಮ್ಮ ತೋಳಿಗೆ ಸರಿಯಾಗಿ ಸುತ್ತಿಕೊಳ್ಳುವುದರಿಂದ ಫಲಿತಾಂಶದಲ್ಲಿ ಯಾವುದೇ ಏರುಪೇರಾಗುವುದಿಲ್ಲ.

► ಮೂತ್ರಕೋಶವು ತುಂಬಿದ್ದರೆ ಅದು ರಕ್ತದೊತ್ತಡ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವ ಮುನ್ನ ಮೂತ್ರಕೋಶವನ್ನು ಖಾಲಿ ಮಾಡುವುದು ಒಳ್ಳೆಯದು.

► ನಿಮ್ಮ ತೋಳು, ಹೃದಯ ಮತ್ತು ಬಿಪಿಎಂ ಒಂದೇ ಮಟ್ಟದಲ್ಲಿರುವುಂತೆ ಸೂಕ್ತವಾದ ಭಂಗಿಯಲ್ಲಿ ಕುಳಿತುಕೊಂಡು ರಕ್ತದೊತ್ತಡ ಪರೀಕ್ಷಿಸಿಕೊಳ್ಳಿ.

► ರಕ್ತದೊತ್ತಡ ಪರೀಕ್ಷಿಸಿಕೊಳ್ಳುವಾಗ ಮಾತನಾಡುವುದನ್ನು ನಿವಾರಿಸಿ.

► ಸಾಧನದಲ್ಲಿಯ ನಿರ್ದೇಶಗಳಂತೆ ರಕ್ತದೊತ್ತಡವನ್ನು ಪರೀಕ್ಷಿಸಿ.

► ರಕ್ತದೊತ್ತಡ ಅಧಿಕವಾಗಿದೆ ಎಂಬ ಫಲಿತಾಂಶ ಕಂಡು ಬಂದರೆ ಗಾಬರಿಯಾಗ ಬೇಕಿಲ್ಲ. ಕೆಲ ಹೊತ್ತು ಹಾಯಾಗಿದ್ದು ಬಳಿಕ ಇನ್ನೊಮ್ಮೆ ಪರೀಕ್ಷಿಸಿ.

► ರಕ್ತದೊತ್ತಡ ಫಲಿತಾಂಶ ಮತ್ತು ಅದನ್ನು ಪರೀಕ್ಷಿಸಿದ ಸಮಯವನ್ನು ದಾಖಲಿಸಿಕೊಳ್ಳಿ.

ಬೊಜ್ಜುದೇಹವನ್ನು ಹೊಂದಿದ್ದರೆ, ಕುಟುಂಬದಲ್ಲಿ ಬೇರೆ ಯಾರಿಗಾದರೂ ಅಧಿಕ ರಕ್ತದೊತ್ತಡವಿದ್ದರೆ, ಮಧುಮೇಹದಂತಹ ಕಾಯಿಲೆಗಳಿದ್ದರೆ ಅಂತಹವರು 30 ವರ್ಷ ಪ್ರಾಯದ ಬಳಿಕ ತಮ್ಮ ರಕ್ತದೊತ್ತಡದ ಮೇಲೆ ನಿಗಾ ಇರಿಸುವುದು ಒಳ್ಳೆಯದು. ಗರ್ಭಿಣಿಯರೂ ಆಗಾಗ್ಗೆ ತಮ್ಮ ರಕ್ತದೊತ್ತಡದ ತಪಾಸಣೆ ಮಾಡಿಕೊಳ್ಳುವುದು ಅಗತ್ಯವಾಗುತ್ತದೆ. ಅಧಿಕ ರಕ್ತದೊತ್ತಡವಿರುವರು ಉಪ್ಪು ಮತ್ತು ಮದ್ಯ ಸೇವನೆಯನ್ನು ತಗ್ಗಿಸುವುದು ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)