varthabharthi

ಸಂಪಾದಕೀಯ

ಆತಂಕದಲ್ಲಿದೆ ಮಾನವೀಯತೆ

ವಾರ್ತಾ ಭಾರತಿ : 9 Dec, 2017

ಜಗತ್ತಿನಾದ್ಯಂತ ಮಾನವ ಹಕ್ಕು ಪ್ರತಿಪಾದಕರು ಅಪಾಯದಲ್ಲಿ ಸಿಲುಕಿದ್ದಾರೆ ಎಂದು ಆ್ಯಮ್ನೆಸ್ಟಿ ಅಂತಾರಾಷ್ಟ್ರೀಯ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದು ಹೇಳುತ್ತಿದೆ. 1998ರಿಂದೀಚೆಗೆ ವಿಶ್ವದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಪ್ರತಿಪಾದಕರ ದಮನದ ಬಗ್ಗೆ ಈ ವರದಿ ಬೆಳಕು ಚೆಲ್ಲಿದೆ. ಅಲ್ಲಿಂದ ಈವರೆಗೆ ಸುಮಾರು 3,500 ಮಾನವಹಕ್ಕು ಹೋರಾಟಗಾರರನ್ನು ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದ್ದು, ವರ್ಷದಿಂದ ವರ್ಷಕ್ಕೆ ಹತ್ಯೆಗೊಳಗಾಗುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರುವುದರ ಬಗ್ಗೆ ಅದು ಆತಂಕ ವ್ಯಕ್ತಪಡಿಸಿದೆ. 2014ರಲ್ಲಿ 136 ಮಾನವ ಹಕ್ಕು ಹೋರಾಟಗಾರರ ಹತ್ಯೆ ನಡೆದಿದ್ದರೆ 2016ರಲ್ಲಿ 281ಕ್ಕೆ ಏರಿದೆ. ಅತ್ಯಂತ ವಿಷಾದನೀಯ ಸಂಗತಿಯೆಂದರೆ, ವಿಶ್ವಗುರು ಆಗಲು ಹೊರಟಿರುವ ಭಾರತವೂ ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕು ಪ್ರತಿಪಾದಕರ ಹತ್ಯೆಯಲ್ಲಿ ಮುಂಚೂಣಿಯಲ್ಲಿದೆ.

ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ, ಗೌರಿಯರ ಹತ್ಯೆ ಜಾಗತಿಕವಾಗಿ ಸುದ್ದಿ ಮಾಡಿತು ಮತ್ತು ಈ ಕೃತ್ಯದ ವಿರುದ್ಧ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿತು. ದೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ಬಳಿಕ, ಆಳುವವರ ವಿರುದ್ಧ ಪ್ರಶ್ನಿಸುವ ಪ್ರಜ್ಞಾವಂತರ ಸಂಖ್ಯೆ ಹೆಚ್ಚಾಗಿದೆ. ಈ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ತಮ್ಮನ್ನು ತಿದ್ದಿಕೊಳ್ಳುವ ಬದಲು ಪ್ರಶ್ನಿಸುವವರನ್ನೇ ಇಲ್ಲವಾಗಿಸುವ ಪ್ರಯತ್ನದಲ್ಲಿದ್ದಾರೆ. ಒಬ್ಬ ಸಾಮಾನ್ಯ ನಾಗರಿಕನ ಹತ್ಯೆಗೂ ಒಬ್ಬ ಮಾನವ ಹಕ್ಕು ಕಾರ್ಯಕರ್ತನ ಹತ್ಯೆಗೂ ಬಹಳಷ್ಟು ವ್ಯತ್ಯಾಸವಿದೆ. ಈ ಕೊಲೆ ಯಾರದೋ ಖಾಸಗಿ ವಿಷಯವಲ್ಲ. ಸಾಯುವವರು ಒಂದು ಸಮುದಾಯದ ಧ್ವನಿಯಾಗಿ ಮೂಡಿಬಂದವರು. ಸಮಾಜದ ಪ್ರತಿನಿಧಿಗಳಾಗಿ ನಾಡಿಗೆ, ದೇಶಕ್ಕೆ, ವಿಶ್ವಕ್ಕೆ ಒಳಿತನ್ನು ಬಯಸಿ ಮುಂದೆ ನಿಂತವರು. ಇಂತಹ ಒಂದು ಕೊಲೆ ಒಂದು ಸಮುದಾಯದ, ಒಂದು ನಾಡಿನ ಕೊಲೆಗೆ ಸಮ. ಹಿಂಸೆಯ ಮೂಲಕ ಬೆದರಿಸಿ ಸಮಾಜದ ಪ್ರಶ್ನೆಗಳನ್ನು ಅಮುಕು ದುರುದ್ದೇಶವನ್ನು ಇದು ಹೊಂದಿದೆ. ಹಾಗೆ ನೋಡಿದರೆ ಮಾನವ ಹಕ್ಕು ಪ್ರತಿಪಾದಕರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸೆ ಇದೇ ಮೊದಲಲ್ಲ. ಸಾಕ್ರೆಟಿಸ್ ಕಾಲದಲ್ಲೂ ಜಾರಿಯಲ್ಲಿತ್ತು. ವಿಜ್ಞಾನಿಗಳು ತಮ್ಮ ಸಂಶೋಧನೆಯ ಫಲವನ್ನು ಜಗದ ಮುಂದೆ ತೆರೆದಿಡುವುಕ್ಕ್ಕೆ ಸಾಧ್ಯವಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಹಾಗೆ ತೆರೆದಿಟ್ಟ ವಿಜ್ಞಾನಿಗಳನ್ನು, ಚಿಂತಕರನ್ನು ಪುರೋಹಿತ ಶಾಹಿ ವ್ಯವಸ್ಥೆ ಮತ್ತು ರಾಜ ಪ್ರಭುತ್ವ ಜೊತೆಗೂಡಿ ದಮನಿಸಿದವು.

ಬರೇ ವಿಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಮಾಜಿಕ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಾನವೀಯತೆಯ ಪರವಾಗಿ ನಿಂತು ಧ್ವನಿಯೆತ್ತಿದವರನ್ನೂ ಅಷ್ಟೇ ಅಮಾನವೀಯವಾಗಿ ದಮನಿಸಲಾಯಿತು. ತಳಸ್ತರದ ನೋವಿಗೆ ಮಿಡಿದ ಜೀಸಸ್‌ನನ್ನು ಶಿಲುಬೆಗೇರಿಸಿದ ಪ್ರಕರಣಗಳೂ ಮಾನವೀಯತೆಯ ದಮನವೇ ಆಗಿತ್ತು. ಆದರೆ ಅವರು ಪ್ರತಿಪಾದಿಸಿದ ವೌಲ್ಯಗಳನ್ನು ದಮನಿಸಲು ಸಾಧ್ಯವಾಗಲಿಲ್ಲ. ಅದು ಇನ್ನಷ್ಟು ವಿಜೃಂಭಿಸಿ ವಿಶ್ವದೆಲ್ಲೆಡೆ ಪಸರಿಸಿತು. ಆದರೆ ಇದೇ ಸಂದರ್ಭದಲ್ಲಿ ಬಳಿಕ ಅದೇ ಜೀಸಸ್‌ನ ಅನುಯಾಯಿಗಳು ಎನಿಸಿಕೊಂಡವರೇ ರಾಜ ಪ್ರಭುತ್ವದ ಜೊತೆಗೆ ಸೇರಿ ಜನರನ್ನು ಶೋಷಿಸತೊಡಗಿದರು. ಕಮ್ಯುನಿಸಂ ಹುಟ್ಟುವುದಕ್ಕೆ ಈ ಶೋಷಣೆಯೂ ಒಂದು ದೊಡ್ಡ ಕಾರಣವಾಯಿತು. ತಳಸ್ತರದ ಜನರ ಪರವಾಗಿ ಹುಟ್ಟಿದ ಕ್ರಾಂತಿಯ ಒಡಲೊಳಗಿಂದಲೇ ಮತ್ತೆ ಶೋಷಕರು ಮೈ ತಳೆಯುತ್ತಿರುವುದು ಮಾನವೀಯತೆಯ ಅತೀ ದೊಡ್ಡ ಸೋಲಾಗಿದೆ. ಜನರನ್ನು ಅಮಾನವೀಯತೆಯಿಂದ, ಶೋಷಣೆಯಿಂದ ಪಾರು ಮಾಡಲು ಬೀದಿಗಿಳಿದ ಪ್ರವಾದಿ ಮುಹಮ್ಮದರನ್ನು ದಮನಿಸಲು ಸರ್ವ ಪ್ರಯತ್ನ ನಡೆಯಿತಾದರೂ, ಅಂತಿಮವಾಗಿ ಅವರು ತಮ್ಮ ಕಾರ್ಯದಲ್ಲಿ ಯಶ ಸಾಧಿಸಿದರು. ವಿಪರ್ಯಾಸವೆಂದರೆ, ಇಂದು ಒಂದು ಗುಂಪು ವಿಶ್ವದಲ್ಲಿ ಅವರ ಹೆಸರನ್ನು ದುರುಪಯೋಗ ಪಡಿಸಿಕೊಂಡು ಪ್ರಶ್ನಿಸುವವರನ್ನು ದಮನಿಸಲು ಮುಂದಾಗಿದೆ. ಇದರಲ್ಲಿ ಭಾರತ ಹಿಂದೆ ಬಿದ್ದಿಲ್ಲ. ಅಹಿಂಸೆಯನ್ನು ಎತ್ತಿ ಹಿಡಿದ ಗಾಂಧಿಯನ್ನು ಕೊಂದು ಹಾಕಿದರು. ಅವರು ತಂದುಕೊಟ್ಟ ಸ್ವಾತಂತ್ರದ ಲಾಭಗಳನ್ನು ಪಡೆದುಕೊಂಡೇ ಭಾರತದಲ್ಲಿ ಮತ್ತೆ ಗಾಂಧಿಯ ಕೊಲೆಗಾರರು ವಿಜೃಂಭಿಸತೊಡಗಿದ್ದಾರೆ.

12ನೇ ಶತಮಾನದಲ್ಲಿ ಬಸವಣ್ಣರ ನೇತೃತ್ವದಲ್ಲಿ ಅಧ್ಯಾತ್ಮ ಕ್ರಾಂತಿಯ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯಲು ಪ್ರಯತ್ನಿಸಲಾಯಿತು. ಪರಿಣಾಮವಾಗಿ ಬಸವಣ್ಣ ಮತ್ತು ಅವರ ಅನುಯಾಯಿಗಳು ಪುರೋಹಿತ ಶಾಹಿಗಳ ಸಂಚಿಗೆ ಬಲಿಯಾದರು. ಇಂದು ಬಸವಣ್ಣನವರ ಅನುಯಾಯಿಗಳೇ ಆ ಪುರೋಹಿತಶಾಹಿ ವ್ಯವಸ್ಥೆಯ ಭಾಗವಾಗಿ, ಜನರನ್ನು ಶೋಷಿಸತೊಡಗಿದ್ದಾರೆ. ಈ ಎಲ್ಲ ಅಂಶಗಳಿಂದ ನಾವು ಒಂದನ್ನು ತಿಳಿದುಕೊಳ್ಳಬೇಕಾಗಿದೆ. ಮಾನವೀಯ ಹಕ್ಕಿಗಾಗಿ ಹೋರಾಟ ಮಾಡಿದವರನ್ನು ಕೊಂದು ಹಾಕಿದ್ದರಿಂದಾಗಿ ಅವರ ಸಂದೇಶ, ವೌಲ್ಯಗಳು ನಾಶವಾಗಲಿಲ್ಲ. ಅದು ಇನ್ನಷ್ಟು ದೊಡ್ಡ ಧ್ವನಿಯಲ್ಲಿ, ದೊಡ್ಡ ಶಕ್ತಿಯಾಗಿ ಶೋಷಕರನ್ನು ಮಟ್ಟಹಾಕಿ ವಿಶ್ವದಲ್ಲಿ ಕೇಂದ್ರ ಸ್ಥಾನವನ್ನು ಪಡೆದವು. ಈ ನಿಟ್ಟಿನಲ್ಲಿ ಇಂದಿನ ದಿನಗಳಲ್ಲಿ, ಫ್ಯಾಶಿಸ್ಟ್ ಶಕ್ತಿಗಳು ಮಾನವ ಹಕ್ಕು ಹೋರಾಟಗಾರರ ಧ್ವನಿಯನ್ನು ಅಡಗಿಸಲು ಯತ್ನಿಸಿದಷ್ಟೂ ಅದು ಹೆಚ್ಚು ಹೆಚ್ಚು ಪ್ರತಿರೋಧ ಶಕ್ತಿಯನ್ನು ಪಡೆದುಕೊಳ್ಳುತ್ತಿದೆ ಎನ್ನುವ ಅಂಶವನ್ನೂ ನಾವು ಗಮನಿಸಬೇಕಾಗಿದೆ. ಆದರೆ ಆ ಕಾಲ ಮತ್ತು ಈ ಕಾಲದ ಒಂದು ದೊಡ್ಡ ವ್ಯತ್ಯಾಸಕ್ಕಾಗಿ ‘ನಾಗರಿಕ ಮನುಷ್ಯ’ ಎಂದು ಕರೆದುಕೊಳ್ಳುವ ನಾವು ನಾಚಿಕೆ ಪಟ್ಟುಕೊಳ್ಳಬೇಕಾಗಿದೆ. ಅಂದು ಪ್ರಜಾಸತ್ತೆಯಿರಲಿಲ್ಲ. ವಿಜ್ಞಾನ ಇಷ್ಟರಮಟ್ಟಿಗೆ ಮುಂದುವರಿದಿರಲಿಲ್ಲ. ಶಿಕ್ಷಣ ಈ ಮಟ್ಟಿಗೆ ಬೆಳೆದಿರಲಿಲ್ಲ. ವಿಜ್ಞಾನ, ಅಧ್ಯಾತ್ಮ ಮತ್ತು ಪ್ರಜಾಸತ್ತೆ ಜಗತ್ತಿನಾದ್ಯಂತ ತನ್ನ ಪ್ರಾಬಲ್ಯವನ್ನು ಸಾಧಿಸಿದೆ ಎಂದು ನಂಬಿರುವ ಕಾಲದಲ್ಲೇ, ಬಂಡವಾಳಶಾಹಿ ಶಕ್ತಿಗಳು ಶತಮಾನಗಳ ಹಿಂದಿನ ಪುರೋಹಿತಶಾಹಿ ವ್ಯವಸ್ಥೆಯನ್ನು ಜಾಗೃತಗೊಳಿಸಿ ಅವರ ಮೂಲಕ ತಮ್ಮ ಹಿತವನ್ನು ಸಾಧಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಶೋಷಕರೇ ಶೋಷಿತರ ಕಾಲಾಳುಗಳಾಗಿದ್ದಾರೆ. ವಿಜ್ಞಾನ ಜ್ಞಾನದ ಬೆಳಕನ್ನು ತೆರೆಯಬೇಕಾಗಿತ್ತು.

ಆದರೆ ಅದು ಜನರನ್ನು ಅಂಧಕಾರದಲ್ಲಿಡಲು, ಭಯದಲ್ಲಿಡಲು ಬಳಕೆಯಾಗುತ್ತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಭಾರತವಾಗಿದೆ. ಒಂದು ಕಾಲದಲ್ಲಿ ಜಾತಿ, ಅಸಮಾನತೆಯಿಂದ ಕಂಗೆಟ್ಟ ಸಮಾಜವನ್ನು ಮೇಲೆತ್ತಿದ ಕ್ರಾಂತಿಕಾರಿಗಳನ್ನು ಮರೆದ ಶೋಷಿತ ಸಮುದಾಯವು ತಮ್ಮನ್ನು ಶೋಷಿಸಿದ ಪುರೋಹಿತಶಾಹಿ ತಂತ್ರಗಳಿಗೆ ಬಲಿಯಾಗುತ್ತಿದ್ದಾರೆ. ತಮ್ಮ ಪರವಾಗಿ ಮಾತನಾಡುತ್ತಿರುವವರನ್ನೇ ಅವರು ಕೊಲೆಗೈಯುವಷ್ಟು ವಿಸ್ಮತಿಗೆ ಒಳಗಾಗಿದ್ದಾರೆ. ಆದುದರಿಂದ, ಮಾನವ ಹಕ್ಕು ಪ್ರತಿಪಾದಕರು ತಾವು ಯಾರ ಪರವಾಗಿ ಮಾತನಾಡುತ್ತಿದ್ದಾರೆಯೋ ಅವರನ್ನು ತಲುಪುವ ಕೆಲಸವನ್ನು ಮೊದಲು ಮಾಡಬೇಕಾಗಿದೆ. ವಿಜ್ಞಾನ, ಅಧ್ಯಾತ್ಮ ಇವೆಲ್ಲವೂ ಮಾನವ ಹಕ್ಕು ಪ್ರತಿಪಾದಕರ ಕೊಡುಗೆಗಳಾಗಿವೆ. ಅವರ ಬಲಿದಾನಗಳು ಇವುಗಳ ಹಿಂದಿವೆ. ಈ ವಿಜ್ಞಾನವನ್ನು ಮಾನವೀಯತೆಗಾಗಿ ಬಳಕೆಯಾಗಬೇಕಾಗಿದೆ.

ವಿಜ್ಞಾನ ಜನರ ಸೊತ್ತೇ ಹೊರತು, ಹಣವಿರುವವರ ಸೊತ್ತಲ್ಲ. ಶೋಷಿತರಿಗೆ ತಮ್ಮ ಇತಿಹಾಸ, ವರ್ತಮಾನಗಳನ್ನು ಪರಿಚಯಿಸಿ ಅವರ ನಿಜವಾದ ಶತ್ರು ಯಾರು ಎನ್ನುವುದನ್ನು ಅರ್ಥ ಮಾಡಿಸಿಕೊಡಬೇಕಾಗಿದೆ. ಹಿಂಸೆಯೆನ್ನುವುದು ಇಂದು ಬೇರೆ ಬೇರೆ ರೂಪಗಳಲ್ಲಿ ಜಗತ್ತನ್ನು ಕಾಡುತ್ತಿರುವಾಗ, ಹೋರಾಟಗಾರರು ತಮ್ಮ ಕಾರ್ಯತಂತ್ರವನ್ನು ಬದಲಿಸಬೇಕಾದ ಅನಿವಾರ್ಯತೆಯಿದೆ ಮತ್ತು ಎಲ್ಲ ಪಕ್ಷ, ಜಾತಿ, ವರ್ಗ, ಧರ್ಮ ಭೇದಗಳನ್ನು ಮರೆತು, ಫ್ಯಾಶಿಸ್ಟ್ ಶಕ್ತಿ ಜೊತೆಗೆ ಹೋರಾಡಲು ಪರಸ್ಪರ ಸಂಪರ್ಕ ಬೆಸೆದುಕೊಳ್ಳುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಜೊತೆಗೆ ಆಧುನಿಕತೆಯನ್ನು ಮಾನವೀಯ ಕಾರ್ಯಗಳಿಗೆ ಬಳಸುವುದಕ್ಕೆ ಸಾಧ್ಯವಾಗುವ ಎಲ್ಲ ಪ್ರಯತ್ನಗಳನ್ನೂ ಅವರು ಮಾಡಬೇಕಾಗಿದೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)