varthabharthi

ವಿಶೇಷ-ವರದಿಗಳು

ಕಾಂಗ್ರೆಸ್ ನದ್ದು ನಕಲಿ ಸೆಕ್ಯುಲರಿಸಂ : ಬಿ.ಎಂ.ಫಾರೂಕ್

ವಾರ್ತಾ ಭಾರತಿ : 9 Dec, 2017
ಸಂದರ್ಶನ : ಎನ್.ಕೆ.

ಡಿಸೆಂಬರ್ 10ರಂದು ತುಮಕೂರಿನಲ್ಲಿ ಜೆಡಿಎಸ್ ಬೃಹತ್ ಅಲ್ಪಸಂಖ್ಯಾತರ ಸಮಾವೇಶವನ್ನು ಆಯೋಜಿಸಿದೆ. ಈ ಸಮಾವೇಶದ ರೂವಾರಿ, ಇತ್ತೀಚೆಗೆಜೆಡಿಎಸ್‌ಗೆ ಸೇರ್ಪಡೆಯಾಗಿ ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆ ಪಡೆದಿರುವ ಮುಸ್ಲಿಂ ಮುಖ ಬಿ.ಎಂ.ಫಾರೂಕ್. ಮೂಲತಃ ದೊಡ್ಡ ಉದ್ಯಮಿಯಾಗಿರುವ ಫಾರೂಕ್ ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲನುಭವಿಸಿದವರು. ಈಗ ಜೆಡಿಎಸ್‌ನ ಪ್ರಭಾವೀ ನಾಯಕರಾಗಿರುವ ಫಾರೂಕ್, ಹಠಕ್ಕೆ ಬಿದ್ದವರಂತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ‘ವಾರ್ತಾಭಾರತಿ’ ನಡೆಸಿದ ಮಾತುಕತೆ ಇಲ್ಲಿದೆ:

ವಾಭಾ: ತುಮಕೂರು ಅಲ್ಪಸಂಖ್ಯಾತ ಸಮಾವೇಶದ ಉದ್ದೇಶವೇನು ?

ಫಾರೂಕ್: ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಮುಸ್ಲಿಮರನ್ನು ಫುಟ್ಬಾಲ್‌ನಂತೆ ಬಳಸುತ್ತಿವೆ. ಕಾಂಗ್ರೆಸ್ ಮೇಲ್ತೋರಿಕೆಯ ತುಷ್ಟೀಕರಣ ನೀತಿಯಿಂದಾಗಿ ಮುಸ್ಲಿಮರು ಮತ್ತು ಹಿಂದೂಗಳ ನಡುವೆ ದ್ವೇಷ ಹೆಚ್ಚಾಗಿದೆ. ಒಂದೆಡೆ ಕಾಂಗ್ರೆಸ್‌ನ ಮುಸ್ಲಿಮರನ್ನು ಎತ್ತಿ ಕಟ್ಟುವ ತಂತ್ರಗಾರಿಕೆ ಇನ್ನೊಂದೆಡೆ ಬಿಜೆಪಿಯ ಮುಸ್ಲಿಂ ದ್ವೇಷ ಎರಡೂ ಮುಸ್ಲಿಮರ social isolation ಮತ್ತು ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ. ಇದನ್ನು ಮುಸ್ಲಿಮರಿಗೆ ಮನದಟ್ಟು ಮಾಡಲು ಮತ್ತು ಮುಸ್ಲಿಮರ ರಾಜಕೀಯ ಶಕ್ತಿಯನ್ನು ಬಲಪಡಿಸಲು ತುಮಕೂರು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಎಲ್ಲ ಸಮುದಾಯ ದವರ ಸಾಮರಸ್ಯದ ಬಾಳ್ವೆಯೇ ಜೆಡಿಎಸ್‌ಗುರಿ. ಈ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎನ್ನುವುದೇ ಸಮಾವೇಶದ ಆಶಯ.

ವಾಭಾ: ನಿಮಗೆ ರಾಜ್ಯಸಭಾ ಸ್ಥಾನ ತಪ್ಪಿಸಿದೆ ಎಂಬ ಅಸಮಾಧಾನದಿಂದ ನೀವು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಸಂಘಟನೆ ಮಾಡುತ್ತಿದ್ದೀರಿ ಎಂದು ಹೇಳಲಾಗುತ್ತಿದೆ.
ಫಾರೂಕ್: ಹೌದು, ರಾಜ್ಯಸಭೆ ಚುನಾವಣೆಯಲ್ಲಿ ನಾನು ಸೋತೆ. ಅದಕ್ಕೆ ಯಾರು ಕಾರಣ? ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿಲ್ಲ. ದೇವೇಗೌಡರು ಕರೆದು ಕೊಟ್ಟರು. ಆರಂಭದಲ್ಲಿ ಎರಡೇ ಅಭ್ಯರ್ಥಿಗಳನ್ನು ನಿಲ್ಲಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಒಬ್ಬ ಮುಸ್ಲಿಮ್ ಅಭ್ಯರ್ಥಿ ರಾಜ್ಯಸಭಾ ಸದಸ್ಯ ಆಗುವುದನ್ನು ಸಹಿಸಲು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಗೆ ಆಗಲಿಲ್ಲ.

ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು. ಹಣ ಚೆಲ್ಲಿದರು. ಜೆಡಿಎಸ್ ಪಕ್ಷವನ್ನು ಒಡೆದರು. ರಾಜ್ಯಸಭೆ ಸದಸ್ಯನಾದರೆ ಮುಸ್ಲಿಮರಿಗೆ ಏನಾದರೂ ಸ್ವಲ್ಪ ಹೆಚ್ಚು ನೆರವಾಗಬಹುದು ಎಂದು ನಾನು ಅಂದುಕೊಂಡಿದ್ದೆ. ಕಾಂಗ್ರೆಸ್‌ನವರು ಬಿಡಲಿಲ್ಲ. ನನ್ನನ್ನು ಸೋಲಿಸಲು 100 ಕೋಟಿ ರೂ. ಖರ್ಚು ಮಾಡಿದ್ದರಂತೆ. ನಾನೇನು ಅಂತಹ ತಪ್ಪುಮಾಡಿದ್ದೆ? ನಿಮ್ಮ ಪಕ್ಷದಲ್ಲಿ ಮುಸ್ಲಿಮರಿಗೆ ರಾಜ್ಯಸಭಾ ಟಿಕೆಟ್ ಕೊಡಲಿಲ್ಲ, ಜೆಡಿಎಸ್ ಕೊಟ್ಟರೆ ಸಹಿಸುವುದಿಲ್ಲ ಅಂದರೆ ಏನರ್ಥ? ಮೈನಾರಿಟಿಗೆ ಆಗುವ ಇಂತಹ ಅನ್ಯಾಯಗಳನ್ನು ಎದುರಿಸಲೆಂದೇ ಈಗ Active politicsಗೆ ಇಳಿದಿದ್ದೇನೆ.

ದೇವೇಗೌಡರು, ಕುಮಾರಸ್ವಾಮಿಯವರು ನನ್ನನ್ನು ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದ್ದಾರೆ. ಪಕ್ಷದ ಕೋರ್ ಕಮಿಟಿಯಲ್ಲಿ ನನಗೆ ಸ್ಥಾನ ನೀಡಿದ್ದಾರೆ. ಪಕ್ಷವನ್ನು ಸಂಘಟಿಸುವುದು ನನ್ನ ಕೆಲಸ. ಮುಸ್ಲಿಮರು ಕೇವಲ ಕಾಂಗ್ರೆಸ್‌ಗೆ ಜೋತು ಬಿದ್ದರೆ ಪ್ರಯೋಜನವಿಲ್ಲ. ಇವರದ್ದು ನಕಲಿ ಸೆಕ್ಯುಲರಿಸಂ. ಬೇರೆ ನಿಜವಾದ ಜಾತ್ಯತೀತ ಪಕ್ಷಗಳನ್ನು ಮುಸ್ಲಿಮರು, ದಲಿತರು ಸೇರಿ ಬೆಳೆಸಬೇಕು.

ವಾಭಾ: ಕರಾವಳಿ ಸಹಿತ ಕೆಲವೆಡೆ ಜೆಡಿಎಸ್ ಸ್ಪರ್ಧೆಯಿಂದ ಬಿಜೆಪಿಗೇ ಲಾಭ ಎಂದು ಕಾಂಗ್ರೆಸ್ ಹೇಳುತ್ತಿದೆ.

ಫಾರೂಕ್: ಕರಾವಳಿಯಲ್ಲಿ ಅಲ್ಪಸಂಖ್ಯಾತರು ಇಷ್ಟು ವರ್ಷಗಳ ಕಾಲ ಕಾಂಗ್ರೆಸ್‌ಗೆ ವೋಟ್ ಹಾಕಿ ಏನಾಯಿತು? ಪದೇ ಪದೇ ಕೋಮು ಗಲಭೆಗಳು ನಡೆಯುತ್ತಿವೆ. ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಎಷ್ಟೊಂದು ಯುವಕರು ಜೈಲು ಪಾಲಾದರು! ಕರಾವಳಿಯಲ್ಲಿ ಕೋಮು ಗಲಭೆ ನಿರಂತರವಾಗಿ ನಡೆದರೆ ತಮಗೆ ಲಾಭ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಅಂದು ಕೊಂಡಿವೆ. ಇವರದ್ದು ಮೇಲ್ನೋಟದ ನಾಟಕ. ಒಳಗಿಂದೊಳಗೆ ಇಬ್ಬರೂ ಒಂದೇ.

ವಾಭಾ: ಈಗ ಏನೇ ಭರವಸೆ ಕೊಟ್ಟರೂ ಅಗತ್ಯ ಬಿದ್ದರೆ ಮತ್ತೆ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸುತ್ತಾರೆ ಎಂಬ ಭಾವನೆ ಮುಸ್ಲಿಮರಲ್ಲಿದೆ.

ಫಾರೂಕ್: ಒಂದೇ ವಾಕ್ಯದ ಉತ್ತರ ಈ ಸಲದ ಚುನಾವಣೆಯಲ್ಲಿ ಜೆಡಿಎಸ್ ಖಂಡಿತಾ ಬಿಜೆಪಿ ಜತೆ ಕೈ ಜೋಡಿಸುವುದಿಲ್ಲ. ಹಿಂದಿನ ಅನುಭವದಿಂದ ನಾವು ಪಾಠ ಕಲಿತಿದ್ದೇವೆ.

ವಾಭಾ: ಸದ್ಯಕ್ಕೆ ಕಾಂಗ್ರೆಸ್ ರಾಜ್ಯದಲ್ಲಿ ಸುಭದ್ರ ಸ್ಥಿತಿಯಲ್ಲಿರುವಂತೆ ಕಾಣುತ್ತಿದೆ. ಹಾಗಾದರೆ ಜೆಡಿಎಸ್‌ನ ನಿರೀಕ್ಷೆ ಏನು ?

ಫಾರೂಕ್: ಸದ್ಯಕ್ಕೆ ಕಾಂಗ್ರೆಸ್ ಸುಭದ್ರ ಸ್ಥಿತಿಯಲ್ಲಿದೆ ಎನ್ನುವುದು ಸುಳ್ಳು ಪ್ರಚಾರ. ಜೆಡಿಎಸ್ 100 ಸ್ಥಾನಗಳನ್ನು ದಾಟುವುದು ಖಂಡಿತ. ರಾಜ್ಯಾದ್ಯಂತ ಪಕ್ಷಕ್ಕೆ ಅತ್ಯುತ್ತಮ ಜನ ಸ್ಪಂದನೆ ಸಿಗುತ್ತಿದೆ. ವೃತ್ತಿಪರರು, ಯುವಜನತೆ, ಸಮಾಜ ಸೇವಕರು, ಸಾಮಾಜಿಕ ಕಾರ್ಯಕರ್ತರು, ಉದ್ಯಮಿಗಳು, ಮಹಿಳೆಯರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ರಾಜ್ಯದೆಲ್ಲೆಡೆ ಪಕ್ಷಕ್ಕೆ ಪೂರಕ ವಾತಾವರಣವಿದೆ. ಅಗತ್ಯ ಬಿದ್ದರೆ ಕಾಂಗ್ರೆಸ್ ನೆರವು ಪಡೆದು ಸರಕಾರ ರಚಿಸುತ್ತೇವೆ.

ವಾಭಾ: ನೀವು ಚುನಾವಣೆಗೆ ಎಲ್ಲಿ ಸ್ಪರ್ಧಿಸುತ್ತೀರಿ ?

ಫಾರೂಕ್: ನಾನು ಚುನಾವಣೆಗೆ ನಿಲ್ಲುವುದಿಲ್ಲ. ರಾಜ್ಯದಾದ್ಯಂತ ಸುತ್ತಾಡಿ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರನ್ನು ಸಂಘಟಿಸಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)