varthabharthi

ಸುಗ್ಗಿ

ಕತೆ

ಯಾರೂ ಪರಿಪೂರ್ಣ ಜ್ಞಾನಿಗಳಲ್ಲ!!

ವಾರ್ತಾ ಭಾರತಿ : 9 Dec, 2017
ತಾರಾನಾಥ್ ಮೇಸ್ತ ಶಿರೂರು, ಉಡುಪಿ

ಜನನಿಪುರ ಸಂಸ್ಥಾನವನ್ನು ದೊರೆ ರಾಜವರ್ಮನು ಆಳ್ವಿಕೆ ನಡೆಸುತ್ತಿದ್ದನು. ರಾಜಾಡಳಿತ ಪರಿವಾರದಲ್ಲಿ ವಿಕ್ರಮ ಸೇನ ಎಂಬ ಬಲಿಷ್ಠ ಸೇನಾಧಿಪತಿ ಇದ್ದನು. ಈತ ತುಂಬಾ ಬಲಶಾಲಿಯಾಗಿದ್ದನು. ಶತ್ರು ಸೇನೆಯನ್ನು ಹಿಮ್ಮೆಟಿಸುವ, ಸೆರೆ ಹಿಡಿಯುವ ಯುದ್ಧ ತಂತ್ರಗಾರಿಕೆ ಬಲ್ಲವನಾಗಿದ್ದನು. ನವ್ಯ ಮಾದರಿಯ ಮದ್ದು ಗುಂಡು, ಶಸ್ತ್ರ ಅಸ್ತ್ರಗಳ ತಯಾರಿಕೆಯಲ್ಲೂ ಪರಿಣಿತಿಯನ್ನು ಹೊಂದಿದವನಾಗಿದ್ದನು. ಹಾಗಾಗಿ ಸೇನಾಧಿಪತಿ ವಿಕ್ರಮ ಸೇನ ದೊರೆ ರಾಜವರ್ಮನ ಪ್ರೀತಿ ನಂಬಿಕೆ ಗೌರವಗಳಿಗೆ ಪಾತ್ರನಾಗಿದ್ದನು.

ಆದರೆ... ವಿಕ್ರಮ ಸೇನನಿಗೆ ದಿನಗಳು ಕಳೆದಂತೆ, ‘ತಾನೇ ಎಲ್ಲ ವಿದ್ಯೆಗಳನ್ನು ಬಲ್ಲವನು, ತನಗಿಂತ ಮಿಗಿಲಾರಿಲ್ಲ..! ಜನನಿಪುರ ರಾಜ್ಯದ ಪ್ರಜಾವರ್ಗದ ರಕ್ಷಣೆ, ರಾಜ್ಯದ ರಕ್ಷಣೆ ನನ್ನಿಂದಲೇ ನಡೆಯುತ್ತಿರುವುದು’ ಎನ್ನುವ ಅಹಂ ಭಾವ ವಿಕ್ರಮ ಸೇನನ ಮನದೊಳಗೆ ನೆಲೆಯೂರಿತು. ಆಸ್ಥಾನ ವಿದ್ವಾಂಸರನ್ನು, ಸೇನಾಳುಗಳನ್ನು, ಗೋಪಾಲಕರನ್ನು, ಅರಮನೆ ಪರಿಚಾರಕರನ್ನು, ಆಸ್ಥಾನ ರಜಕರನ್ನು, ಮಂತ್ರಿ ಪರಿವಾರವನ್ನು ತೀರ ಕೆಳ ಮಟ್ಟದಿಂದ ನೋಡುತ್ತಿದ್ದನಲ್ಲದೆ ಹೀನಾಯವಾಗಿ ನಿಂದಿಸುತ್ತಿದ್ದನು.

ಹೀಗೊಂದು ದಿನ ಅರಮನೆಯ ಹೊರ ವಲಯದಲ್ಲಿರುವ, ಕುಸುಮಗಂಧಿನಿ ನದಿಯಲ್ಲಿ ಆಸ್ಥಾನ ರಜಕನ ಮಗಳಾದ ಪ್ರಮೀಳೆಯು, ಬಟ್ಟೆಗಳ ಮೂಟೆಗಳನ್ನು ಕತ್ತೆಗಳ ಮೇಲೆ ಹೊತ್ತು ತಂದು, ಬಟ್ಟೆಗಳನ್ನು ಮಡಿಗೊಳಿಸಲು ನದಿ ಸನಿಹ ಇಳಿಸಿದ ತರುವಾಯ, ಕತ್ತೆಗಳನ್ನು ಮೇಯಲು ನದಿ ತಟಕ್ಕೆ ಬಿಟ್ಟಳು. ನಂತರ ರಾಜಪರಿವಾರದ ಬಟ್ಟೆಗಳನ್ನು ಮಡಿಗೊಳಿಸಲು ಪ್ರಾರಂಭಿಸಿದಳು. ಅದೇ ಸಮಯದ ಸುಮಾರಿಗೆ ಸೇನಾಧಿಪತಿ ವಿಕ್ರಮಸೇನ, ತಾನು ರಾಜ್ಯದ ಗಡಿ ಭಾಗದಲ್ಲಿ ನಿಯೋಜನೆ ಮಾಡಿದ ಗಡಿ ಕಾವಲು ಪಡೆಯ ಕಾರ್ಯ ಚಟುವಟಿಕೆ ಪರಿಶೀಲಿಸಿ, ಹಿಂದಿರುಗಿ ಬರುವಾಗ, ಬಳಲಿ ನೀರಡಿಕೆಯಾಯಿತು. ಜಲದಾಹ ತೀರಿಸಿಕೊಳ್ಳಲು, ಹರಿಯುವ ಕುಸುಮಗಂಧಿನಿ ನದಿ ದಡದಲ್ಲಿ ಕುದುರೆಯನ್ನು ನಿಲ್ಲಿಸಿ, ನದಿ ತಟದ ಕಲ್ಲಿನ ಮೇಲೆ ಕುಳಿತು ಬೊಗಸೆಯಲ್ಲಿ ನೀರು ಕುಡಿಯಲು ಆರಂಭಿಸುತ್ತಿದಂತೆ, ಪಾಚಿಕಟ್ಟಿದ ಕಲ್ಲಿನ ಮೇಲಿಂದ ಕಾಲು ಜಾರಿ ನದಿಯೊಳಗೆ ಬಿದ್ದು ಬಿಟ್ಟನು. ವಿಕ್ರಮಸೇನ ಈಜು ಬಾರದೆ ಕಾಪಾಡಿ...ಕಾಪಾಡಿ ಎಂದು ಬೊಬ್ಬಿಡ ತೊಡಗಿದನು.

ಸನಿಹದಲ್ಲೇ ಅರಮನೆ ಪರಿವಾರದ ಬಟ್ಟೆಗಳನ್ನು ಮಡಿಗೊಳಿಸುತ್ತಿದ್ದ ರಜಕಿ ಪ್ರಮೀಳೆ ಆಕ್ರಂದನ ಕೇಳಿ ಜಾಗೃತಳಾಗಿ, ತನ್ನ ಕೈಯಲ್ಲಿದ್ದ ಸೀರೆಯ ಒಂದು ತುದಿಯನ್ನು ಮುಳುಗೇಳುತ್ತಿರುವ ವಿಕ್ರಮ ಸೇನನತ್ತ ಎಸೆದಳು, ಆತ ಸೀರೆ ತುದಿಯನ್ನು ಹಿಡಿದ, ಪ್ರಮೀಳೆ ತನ್ನ ಕೈಯಲ್ಲಿದ್ದ ಸೀರೆಯ ಮತ್ತೊಂದು ತುದಿಯನ್ನು ಧರ ಧರನೆ ಎಳೆದು ವಿಕ್ರಮಸೇನನ್ನು ದಡ ಸೇರಿಸಿ ಪ್ರಾಣ ಉಳಿಸಿದಳು. ನದಿ ತಟದಲ್ಲಿಯೇ ಧ್ಯಾನಸ್ಥರಾಗಿದ್ದ ಆಸ್ಥಾನ ವಿದ್ವಾಂಸರಾದ ಸುಜ್ಞಾನ ಪಂಡಿತರು ದೂರದಿಂದಲೇ ನಡೆದ ವಿದ್ಯಮಾನಗಳನ್ನು ಗಮನಿಸಿ ಘಟನಾ ಸ್ಥಳದ ಸನಿಹ ಬಂದು, ‘‘ಇಲ್ಲಿ ಕೇಳು... ಸೇನಾಧಿಪತಿ ವಿಕ್ರಮ ಸೇನ...! ‘ನನ್ನಿಂದ ಎಲ್ಲವೂ ಎಂಬುದು ಸುಳ್ಳು,’ ಮಾನವ ಪರಿಪೂರ್ಣ ಜ್ಞಾನಿಯಾಗಲು ಸಾಧ್ಯವಿಲ್ಲ. ನಿನ್ನ ಜಂಬ..! ಅಹಂಭಾವ...! ನಿನ್ನ ಪ್ರಾಣ ರಕ್ಷಣೆ ಮಾಡಲಿಲ್ಲ. ನೀನು ಈಜು ವಿದ್ಯೆ ಕಲಿತಿಲ್ಲದೆ ಹೋದೆ. ನಿನ್ನಿಂದ ನಿಂದಿಸಲ್ಪಟ್ಟ ರಜಕಿ ಪ್ರಮೀಳೆ ನಿನ್ನನ್ನು ರಕ್ಷಿಸಿ ಜೀವರಕ್ಷಕಿಯಾದಳು. ಪರ ನಿಂದನೆ, ಅಹಂ..! ಯಾವತ್ತೂ ಜೀವನದಲ್ಲಿ ಸಲ್ಲದು. ಎಲ್ಲವನ್ನು ಬಲ್ಲ ಪೂರ್ಣಜ್ಞಾನಿ ದೇವರೊಬ್ಬನೆ ಮಾತ್ರ’’. ಹೀಗೆಂದ ವಿದ್ವಾಂಸರ ನುಡಿ ಆಲಿಸಿದಾಗ ವಿಕ್ರಮಸೇನನಿಗೆ ತನ್ನ ತಪ್ಪಿನ ಅರಿವಾಯಿತು. ನಂತರದ ದಿನಗಳಲ್ಲಿ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆತು ಅಹಂಭಾವ ಬಿಟ್ಟು ಬಾಳಲಾರಂಭಿಸಿದ. ಬೋಧನೆ ನೀಡಿ ಅಹಂಭಾವದ ಮನಸ್ಥಿತಿ ಯನ್ನು ಬದಲಾವಣೆಗೊಳಿಸಿದ. ಸುಜ್ಞಾನ ಪಂಡಿತರನ್ನು ಅಭಿನಂದಿಸಿದ ಹಾಗೂ ಪ್ರಾಣ ರಕ್ಷಿಸಿದ ಪ್ರಮೀಳೆಗೆ ಜನನಿಪುರದ ದೊರೆ ರಾಜವರ್ಮನಿಂದ ‘ಸಾಹಸಿ ವನಿತೆ’ ಪುರಸ್ಕಾರವನ್ನು ನೀಡುವಂತೆ ಮಾಡಿಸಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)