varthabharthi

ಸುಗ್ಗಿ

ಮಲೆನಾಡಿನ ಜಾನುವಾರು ಜಾತ್ರೆ

ವಾರ್ತಾ ಭಾರತಿ : 9 Dec, 2017
ಕಲ್ಕುಳಿ ವಿಠಲ ಹೆಗ್ಡೆ

ಜಾನುವಾರು ಜಾತ್ರೆಗಳೆಂದರೆ ಬರೀ ಜಾನುವಾರುಗಳ ವ್ಯಾಪಾರಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅದು ಊರಿನ ಸಂಭ್ರಮವಾಗಿ ಜನರ ಜಾತ್ರೆಯೂ ನಡೆಯುತ್ತದೆ. ಜಾತ್ರೆಯಲ್ಲಿ ಜನರ ಮನರಂಜನೆಗಾಗಿ ಸಿನೆಮಾ ಟೆಂಟುಗಳಲ್ಲಿ ಆಗಷ್ಟೇ ಬಿಡುಗಡೆಯಾದ ವಿಶೇಷ ಸಿನೆಮಾ ಹಾಕಲಾಗುತ್ತದೆ. ಹಾಗೆಯೇ ಯಕ್ಷಗಾನ, ತಿಂಗಳುಗಟ್ಟಲೆ ನಾಟಕಗಳು ನಡೆಯುತ್ತವೆ. ಪೆಟ್ಟಿಗೆಯಂಗಡಿಗಳು, ಜೋಪಡಿ ಹೊಟೇಲ್‌ಗಳು ಇರುತ್ತವೆ. ಅಲ್ಲಿ ತಾತ್ಕಾಲಿಕವಾದ ಪೇಟೆ ನಿರ್ಮಾಣವಾಗಿರುತ್ತದೆ. ಮಲೆನಾಡಿನ ಜಾತ್ರೆಗಳಲ್ಲಿ ತೀರ್ಥಹಳ್ಳಿ, ಶೃಂಗೇರಿ, ಸೀತಾನದಿ, ಸುಬ್ರಹ್ಮಣ್ಯದಲ್ಲಿ ನಡೆಯುವ ಜಾತ್ರೆಗಳು ವಿಶೇಷ.

ಮಲೆನಾಡಿನಲ್ಲಿ ವಿಶೇಷವಾಗಿ ಬೆಳೆಯುವ ಭತ್ತ, ಕಾಳುಮೆಣಸು, ಏಲಕ್ಕಿ ಇತ್ಯಾದಿ ವಸ್ತುಗಳನ್ನು ಪ್ರತೀ ಊರಿನಿಂದಲೂ ಸಾಕಷ್ಟು ಸಂಖ್ಯೆ ಹೇರೆತ್ತುಗಳಲ್ಲಿ ಕರಾವಳಿ ಜಿಲ್ಲೆಗಳಿಗೆ ಸಾಗಿಸಲಾಗುತ್ತಿತ್ತು. ಮಲೆನಾಡಿನ ಘಟ್ಟ ಪ್ರದೇಶದಿಂದ ಕರಾವಳಿಯ ಆಯ್ದ ಪ್ರದೇಶಗಳಿಗೆ ಹೋಗಲು ಮೂರು ದಿನ ಬೇಕಾಗುತ್ತಿತ್ತು. ಒಂದು ದಿನಕ್ಕೆ ಒಂದು ದಾರಿ ಎನ್ನುತ್ತಿದ್ದರು. ಹೀಗೆ ಮೂರು ಹೇರೆತ್ತಿನ ದಾರಿಯಲ್ಲಿ ಕರಾವಳಿ ತಲುಪಲಾಗುತ್ತಿತ್ತು. ಪ್ರತಿದಿನ ಕತ್ತಲಾಗು ತ್ತಿದ್ದಂತೆ ನಿರ್ದಿಷ್ಟ ಪ್ರದೇಶದಲ್ಲಿ ಎತ್ತುಗಳೊಂದಿಗೆ ಉಳಿದುಕೊಳ್ಳುತ್ತಿದ್ದರು. ದಾರಿಯಲ್ಲಿ ತಮಗೆ ಅಗತ್ಯವಾದ ಗಂಜಿ ಬೇಯಿಸಿ ಉಂಡು ಉಳಿಯುತ್ತಿದ್ದರು. ಆದರೆ ಹೇರೆತ್ತುಗಳ ವಿಶೇಷವೆಂದರೆ ಆ ದಾರಿಯಲ್ಲಿ ಸಿಕ್ಕುವ ಹಸಿರನ್ನೇ ಮೇಯ್ದು ಹೊಟ್ಟೆ ತುಂಬಿ ಸಿಕೊಳ್ಳುತ್ತಿದ್ದವು. ಹೇರೆತ್ತುಗಳನ್ನು ಸಾಮಾನು ತುಂಬಿಸಿ ಹೋಗುವ ಊರಿನದಿಕ್ಕಿಗೆ ತಿರುಗಿಸಿದರೆ ಆ ಎತ್ತುಗಳು ಅಭ್ಯಾಸ ದಂತೆ ಮುಂದಿನ ದಾರಿಯನ್ನು ಹಿಡಿದುಕೊಂಡು ಹೋಗುತ್ತಿದ್ದವು.

ಅದರಲ್ಲೊಂದು ಗಂಟೆ ಎತ್ತು ಎಂಬು ದೊಂದು ಅನುಭವದ ಎತ್ತು ಇರುತ್ತದೆ. ಆ ಎತ್ತಿಗೆ ಗಂಟೆಯನ್ನು ಕಟ್ಟಲಾಗಿರುತ್ತದೆ. ಆ ಎತ್ತು ಗುಂಪಿನ ನಾಯಕನಂತೆ ವರ್ತಿಸು ತ್ತದೆ. ಉಳಿದ ಎಲ್ಲಾ ಎತ್ತುಗಳು ಆ ಎತ್ತನ್ನು ಹಿಂಬಾಲಿಸುತ್ತವೆ. ಎತ್ತು ಹೊಡೆದುಕೊಂಡು ಹೋಗುವವರ ಕೆಲಸವೆಂದರೆ ಒಂದಷ್ಟು ದೂರಕ್ಕೊಂದು ಸಾರಿ ಬಾಯಿ ಮಾಡುವುದು. ಬಾಯಿ ಮಾಡುವುದು ಏಕೆಂದರೆ ದಾರಿಯಲ್ಲಿ ಅಡ್ಡಗಟ್ಟುವ ಹುಲಿಗಳಿಂದ ರಕ್ಷಿಸಲು. ಹೀಗೆ ಹೇರೆತ್ತುಗಳ ಸವಾರಿ ನಡೆಯುತ್ತಿತ್ತು. ಎತ್ತಿನ ಗಾಡಿಗಳು ಬಂದ ನಂತರ ಅದರಲ್ಲೂ ಹೈದರಲಿ, ಟಿಪ್ಪು ಸುಲ್ತಾನ್ ಮಹಾರಾಜರುಗಳು ಬ್ರಿಟಿಷರನ್ನು ಕರಾವಳಿಯಿಂದ ಹಿಮ್ಮೆಟ್ಟಿ ಸಲು ಯುದ್ಧ ಮಾಡುವಾಗ ಘಾಟಿಯಲ್ಲಿದ್ದ ಆ ಎಲ್ಲಾ ಹೇರಿತ್ತಿನ ದಾರಿ ಗಳನ್ನು ಗಾಡಿ ರಸ್ತೆಗಳಾಗಿ ಮಾರ್ಪಡಿಸಿದರು. ಈಗ ಇರುವ ಹುಲಿಕಲ್, ಆಗುಂಬೆ, ಶಿರಾಡಿ, ಚಾರ್ಮಾಡಿ ಈ ಎಲ್ಲಾ ಘಾಟಿರಸ್ತೆಗಳು ಅಂದಿನ ಹೇರೆತ್ತಿನ ದಾರಿಗಳು.

ಟಿಪ್ಪು ಸುಲ್ತಾನ್ ಅಭಿವೃದ್ಧಿಪಡಿಸಿದ ಹಳ್ಳಿಕಾರ್ ಮತ್ತು ಅಮೃತಮಹಲಿನಂತಹ ಉದ್ದ ಕೈ, ಕಾಲಿನ ಗಾಡಿ ಎತ್ತುಗಳು ಮಲೆನಾಡಿಗೆ ಬಂದವು. ವರ್ಷಕ್ಕೊಮ್ಮೆ ನಡೆಯುವ ಜಾನುವಾರು ಜಾತ್ರೆಗಳಲ್ಲಿ ಬಯಲು ಸೀಮೆಯಿಂದ ಅಂತಹ ನೂರಾರು ಜೊತೆ ಎತ್ತುಗಳನ್ನು ತಂದು ಮಳೆನಾಡಿಗೆ ಮಾರಾಟ ಮಾಡಲಾಗುತ್ತಿತ್ತು. ಶಿವರಾತ್ರಿಯ ನಂತರ ನಡೆಯುವ ಜಾನುವಾರು ಜಾತ್ರೆಯಲ್ಲಿ ರೈತರಿಗೆ ಬೇಕಾಗುವ ಎತ್ತುಗಳನ್ನು ಹೊಸದಾಗಿ ಕೊಂಡುಕೊಳ್ಳಲಾಗುತ್ತಿತ್ತು. ಹಾಗೆಯೇ ಉಪಯೋಗಕ್ಕೆ ಬಾರದವನ್ನು ಬದಲಾಯಿಸಲಾಗುತ್ತಿತ್ತು. ಹಳೆಯದನ್ನು ಕೊಟ್ಟು ಹೊಸದಾಗಿ ಕೊಂಡುಕೊಳ್ಳುವ ಜಾನುವಾರ್ ವ್ಯಾಪಾರಕ್ಕೆ ‘ಪಗರ್‌ಸಾಟ್’ ಮಾಡುವುದೆನ್ನುತ್ತಾರೆ.

ತಮ್ಮ ಹಳೆಯ ಎತ್ತುಗಳನ್ನು ಕೊಟ್ಟು ಹೊಸ ಎತ್ತುಗಳಿಗೆ ಹೆಚ್ಚಿನ ಹಣ ಕೊಟ್ಟು ಪಡೆದುಕೊಳ್ಳುವ ಜಾನುವಾರು ವ್ಯಾಪಾರವನ್ನು ಮಾಡಲು ಮಧ್ಯಸ್ಥಿಕೆ ವಹಿಸು ವವರನ್ನು ‘ದಲ್ಲಾಳಿ’ಗಳು ಎನ್ನುತ್ತಾರೆ. ಜಾನುವಾರುಗಳ ದರ ನಿಗದಿಯು ಗುಪ್ತವಾಗಿ ನಡೆಯುತ್ತದೆ. ಕೊಡುವವರು, ಪಡೆಯುವವರು, ದಲ್ಲಾಳಿಗಳು ಯಾರೂ ಕೂಡ ಬಾಯಿಬಿಟ್ಟು ಮಾತಾಡುವುದಿಲ್ಲ. ಅದು ಕೈ ಬೆರಳಿನ ಸಂಖ್ಯೆಯಲ್ಲಿ ಬಟ್ಟೆಯನ್ನು ಮುಚ್ಚಿ ಕೊಂಡು ನಿಗದಿಗೊಳಿಸುತ್ತಾರೆ. ಎರಡೂ ಕೈಯ ಹತ್ತು ಬೆರಳು ಸೇರಿದರೆ ಒಂದು ಸಾವಿರ, ಪ್ರತೀ ಬೆರಳಿಗೆ ನೂರು, ಬೆರಳಿನ ಕಟ್ಟಿಗೆ ಇಪ್ಪತ್ತೈದು ಐವತ್ತು ಹೀಗೆ ಲೆಕ್ಕಾಚಾರವಾಗುತ್ತದೆ. ಆ ಬಗ್ಗೆ ಕೊಂಡುಕೊಳ್ಳುವವರಿಗೆ ಗೊತ್ತಿಲ್ಲದಿದ್ದರೂ ದಲ್ಲಾಳಿಗಳು ಆ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಾರೆ. ಒಟ್ಟಿನಲ್ಲಿ ಜಾನುವಾರುಗಳ ದರವನ್ನು ಬಹಿರಂಗವಾಗಿ ಹೇಳುವಂತಿಲ್ಲ ಎಂಬುದು ಜಾನುವಾರು ಜಾತ್ರೆಯ ನಿಯಮ ಗಳಲ್ಲೊಂದು. ತಿಂಗಳಿಗೂ ಹೆಚ್ಚು ದಿನ ನಡೆಯುವ ಜಾನುವಾರು ಜಾತ್ರೆಯಲ್ಲಿ ತಮಗೆ ಬೇಕಾದ ಎತ್ತುಗಳನ್ನು ಕೊಂಡುಕೊಳ್ಳುತ್ತಾರೆ.

ಎತ್ತುಗಳನ್ನು ಕೊಂಡುಕೊಳ್ಳುವಾಗ ಒಬ್ಬರೊಬ್ಬರ ಅದೃಷ್ಟಕ್ಕೆ ಕೂಡಿ ಬರುವ ಬಣ್ಣದ ಎತ್ತುಗಳನ್ನೇ ಕೊಂಡುಕೊಳ್ಳುತ್ತಾರೆ. ಬಣ್ಣಕ್ಕಿಂತಲೂ ಎತ್ತುಗಳನ್ನು ಆಯ್ಕೆ ಮಾಡುವಾಗ ಅವುಗಳ ಕೋಡು, ಕೊಳಗು, ಬಾಲ, ಬಣ್ಣ, ವಯಸ್ಸು, ಹಲ್ಲು ಎಲ್ಲವನ್ನೂ ನೋಡುತ್ತಾರೆ. ಇದಕ್ಕಿಂತ ಮುಖ್ಯವಾಗಿ ಜಾನುವಾರುಗಳ ಚರ್ಮದಲ್ಲಿ ಇರುವ ರೊಣೆ (ಕೂದಲು) ಯಲ್ಲಿ ಸುಳಿ ಇರುತ್ತದೆ. ಈ ಸುಳಿಯಲ್ಲಿ ನಾಲ್ಕಾರು ತರಹದ ಸುಳಿಗಳಿವೆ. ಅದರಲ್ಲಿ ‘ರಾಜ ಸುಳಿ’ ಇದ್ದರೆ ಅದು ಎಲ್ಲರಿಗೂ ಕೂಡಿ ಬರುತ್ತದೆ. ಅದು ಇದ್ದುದರಲ್ಲಿ ಶ್ರೇಷ್ಠವಾದದ್ದು. ಅಂತಹ ಸುಳಿಯಿರುವಂತಹ ಜಾನುವಾರು ಗಳ ಸಂಖ್ಯೆ ವಿರಳ. ಅಂತಹ ಅಪರೂಪದ ಎತ್ತುಗಳ ಬೆಲೆಯೂ ವಿಶೇಷ. ರಾಜ ಸುಳಿ ಬಿಟ್ಟರೆ ಕತ್ತರಿ ಸುಳಿ, ದವಣೆ ಸುಳಿ, ಅರಳೆ ಸುಳಿ, ಹೀನ ಸುಳಿ ಎನ್ನುವ ಬಗೆ ಇದೆ. ರಾಜ ಸುಳಿಯು ಬೆನ್ನಿನ ಮೇಲೆ ಎಡದಿಂದ ಬಲಕ್ಕೆ ತಿರುಗಿರಬೇಕು. ಭುಜದ ನೆತ್ತಿಯಲ್ಲಿರಬೇಕು, ಭುಜದ ಹಿಂದೆ ಬೆನ್ನ ಮೇಲೆ ಇರುವುದು ದವಣೆ ಸುಳಿ, ಬೆನ್ನ ಮಧ್ಯೆ ಇರುವುದು ಕತ್ತರಿ ಸುಳಿ. ಸೊಂಟದ ಮೇಲಿರುವುದು ಅರಲೆ ಸುಳಿ. ಈ ಕತ್ತರಿ ಸುಳಿ ಇದ್ದರೆ ಅಣ್ಣತಮ್ಮಂದಿರಿಗೆ ಕಟಿಪಿಟಿ ಬರುತ್ತದೆ. ಅಂದರೆ ಅಣ್ಣತಮ್ಮಂದಿರಿಗೆ ಕೂಡಿಬ ರುವುದಿಲ್ಲ. ಕೋಡು ಎರಡೂ ಒಂದಕ್ಕೆ ಬಾಗಿದ್ದರೆ ಉತ್ತಮ. ಒಂದೊಂದು ಹಿಂದು ಮುಂದಕ್ಕಿದ್ದರೆ ಮಧ್ಯಮ. ಎರಡೂ ಹಿಂದಕ್ಕಿದ್ದರೆ ಅಧಮ. ಬಾಲವೂ ಕೂಡ ಉದ್ದವಾಗಿದ್ದು ನೆಲಕ್ಕೆ ತಾಗುತ್ತಿರಬೇಕು ಬಾಲದ ಕುಚ್ಚಿನಲ್ಲಿ ಬಿಳಿಯ ಬಣ್ಣವಿರುವುದಕ್ಕೆ ಹೂ ಬಾಲ ಎನ್ನುತ್ತಾರೆ. ಹೂ ಬಾಲವು ಬಲಭಾಗಕ್ಕೆ ಇದ್ದರೆ ರಾಜ ಸುಳಿಯಷ್ಟೇ ಶ್ರೇಷ್ಠ. ಆದರೆ ಈ ಎಲ್ಲವೂ ಜಾತ್ರೆಯಲ್ಲಿ ಕೊಂಡುತರುವ ಜಾನುವಾರುಗಳ ಮಟ್ಟಿಗೆ ಮಾತ್ರ. ಮನೆಯಲ್ಲಿ ಹುಟ್ಟುವ ಜಾನುವಾರುಗಳಿಗೆ ಸುಳಿಯ ದೋಷವಿಲ್ಲ. ಹೀನ ಸುಳಿ ಎಂದರೆ ಅದು ಬಲದಿಂದ ಎಡಕ್ಕೆ ತಿರುಗಿ ರಾಜ ಸುಳಿಯ ವಿರುದ್ಧ ದಿಕ್ಕಿನಲ್ಲಿರುತ್ತದೆ. ಇಂತಹ ಎತ್ತುಗಳನ್ನು ಗೊತ್ತಿದ್ದವರು ಯಾರೂ ತೆಗೆದುಕೊಳ್ಳುವುದಿಲ್ಲ.

ಮದುವೆಯಾಗುವ ಹೆಣ್ಣಿನ ಜಾತಕ ನೋಡಿ ಮೂಲ ನಕ್ಷತ್ರದಲ್ಲಿ ಹುಟ್ಟಿದರೆ ಅಂತಹ ನತದೃಷ್ಟ ಹುಡುಗಿಯರನ್ನು ಯಾವ ಗಂಡುಗಳೂ ಮದುವೆಯಾಗುವುದಿಲ್ಲ. ಮೂಲ ನಕ್ಷತ್ರದಲ್ಲಿ ಹುಟ್ಟಿದ ಹುಡುಗಿಗೆ ಮೂಲ ನಕ್ಷತ್ರದಲ್ಲಿ ಹುಟ್ಟಿದ ಹುಡುಗನೇ ಸಾಟಿ. ಮೂಲ ನಕ್ಷತ್ರದಲ್ಲಿ ಹುಟ್ಟಿದ ಹುಡುಗಿಯ ಪಾಡಿನಂತೆಹೀನ ಸುಳಿಯ ಜಾನುವಾರಿನ ಪಾಡು. ಅಂತಹ ಹೀನ ಸುಳಿಯು ಸುಲಭಕ್ಕೆ ಕಾಣದಂತೆ ಕೆಲವು ಬುದ್ಧ್ದಿವಂತ ವ್ಯಾಪಾರಿಗಳು ಅದನ್ನು ಸಣ್ಣದಾಗಿ ಸುಟ್ಟೋ ಕತ್ತರಿಸಿಯೋ ಕಾಣದಂತೆ ಮಾಡಿಟ್ಟುಕೊಂಡಿ ರುತ್ತಾರೆ. ಜಾನುವಾರು ಜಾತ್ರೆಯಲ್ಲಿ ಎತ್ತುಗಳನ್ನು ಆಯ್ಕೆ ಮಾಡಿಕೊಡಲು ದಲ್ಲಾಳಿಗಳ ಸಹಾಯ ಪಡೆಯಲಾಗುತ್ತದೆ. ದಲ್ಲಾಳಿಗಳಿಗೆ ಜಾನುವಾರುಗಳ ಪ್ರಾಯ, ಸುಳಿ, ಸಿಡಿಗಾಲು ಅಂದರೆ ಕೆಲವು ಎತ್ತುಗಳ ಹಿಂದಿನ ಕಾಲಿನ ಕೊಳಗು ನಡೆಯುವಾಗ ಕಾಲನ್ನು ಎತ್ತಿ ಇಡಲಾಗದೆ ಜಾರಿಸಿಕೊಂಡು ನಡೆಯುತ್ತವೆ. ಅಂತಹ ಎತ್ತುಗಳಿಗೆ ಸಿಡಿಗಾಲು ಎನ್ನುವರು ಮತ್ತು ಎತ್ತುಗಳ ಪಕ್ಕೆಗಳಲ್ಲಿ ಎಲ್ಲವೂ ಸಮನಾಗಿ ಇರದೆ ಒಂದೊಂದು ಗಿಡ್ಡವಾಗಿರುತ್ತವೆ. ಅವಕ್ಕೆ ಕುಂಟೆಲುಬು ಎನ್ನುತ್ತಾರೆ. ಅಲ್ಲದೆ ಎತ್ತಿನ ಕೋಡುಗಳು ಎರಡೂ ಸೇರಿಕೊಂಡಿದ್ದರೆ ಅದಕ್ಕೆ ಮುಂಗ್ರಿಗೋಡು, ಅಗಲಕೋಡು, ಬಗ್ರಿಕೋಡು, ಹಿಂಗೋಡು, ಮುಂಗೋಡು ಹೀಗೆ ಎತ್ತಿನ ಕೋಡುಗಳು ಯಾವ್ಯಾವ ಕಡೆಗೆ ಬಗ್ಗಿರುತ್ತದೋ ಹಾಗೆ ಕೋಡುಗಳನ್ನು ಪರಿಗಣಿಸಲಾಗುತ್ತದೆ. ಅಲ್ಲದೆ ರೊಣೆ ಅಂದರೆ ಕೂದಲು ಮತ್ತು ಚರ್ಮ ಇನ್ನೊಂದು ಮುಖ್ಯ ಅಂಶ. ದಪ್ಪ ಚರ್ಮ, ತೆಳುಚರ್ಮ ಹೀಗೆ ಚರ್ಮವನ್ನು ಆಯ್ಕೆಯಲ್ಲಿ ಪರಿಗಣಿಸುತ್ತಾರೆ. ಅಲ್ಲದೇ ಅಂತಹ ಎತ್ತುಗಳನ್ನು ಗಾಡಿಗಳಿಗೆ ಹೂಡಿ ಒಂದು ಮೈಲಿಯಷ್ಟು ಓಡಿಸಿ ನೋಡುತ್ತಾರೆ. ನಾಲ್ಕಾರು ಜನಗಳು ಗಾಡಿಯಲ್ಲಿ ಕುಳಿತು ಅವುಗಳ ಶಕ್ತಿ ಸಾಮರ್ಥ್ಯಗಳನ್ನು ನಿರ್ಧರಿಸುತ್ತಾರೆ. ಆಗಷ್ಟೇ ಗಾಡಿ ಕಟ್ಟಿದ ಹುಡುಗಾಟಿಕೆಯ ಎತ್ತುಗಳು ಬೆಚ್ಚಿ ರಸ್ತೆ ಬಿಟ್ಟು ಎಲ್ಲೆಲ್ಲೋ ಓಡಿ ಗಾಡಿಗಳನ್ನು ತಲೆ ಕೆಳಗೆ ಮಾಡುವುದು, ಅದರಿಂದ ಅಪಘಾತವೂ ಸಂಭವಿಸುವುದು ಜಾನುವಾರು ಜಾತ್ರೆಗಳಲ್ಲಿ ಸಾಮಾನ್ಯ.

ಜಾನುವಾರು ಜಾತ್ರೆಗಳೆಂದರೆ ಬರೀ ಜಾನುವಾರುಗಳ ವ್ಯಾಪಾರಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅದು ಊರಿನ ಸಂಭ್ರಮವಾಗಿ ಜನರ ಜಾತ್ರೆಯೂ ನಡೆಯುತ್ತದೆ. ಜಾತ್ರೆಯಲ್ಲಿ ಜನರ ಮನರಂಜನೆಗಾಗಿ ಸಿನೆಮಾ ಟೆಂಟುಗಳಲ್ಲಿ ಆಗಷ್ಟೇ ಬಿಡುಗಡೆಯಾದ ವಿಶೇಷ ಸಿನೆಮಾ ಹಾಕಲಾಗುತ್ತದೆ. ಹಾಗೆಯೇ ಯಕ್ಷಗಾನ, ತಿಂಗಳುಗಟ್ಟಲೆ ನಾಟಕಗಳು ನಡೆಯುತ್ತವೆ.

ಪೆಟ್ಟಿಗೆಯಂಗಡಿಗಳು, ಜೋಪಡಿ ಹೊಟೇಲ್‌ಗಳು ಇರುತ್ತವೆ. ಅಲ್ಲಿ ತಾತ್ಕಾಲಿಕವಾದ ಪೇಟೆ ನಿರ್ಮಾಣವಾಗಿರುತ್ತದೆ. ಮಲೆನಾಡಿನ ಜಾತ್ರೆಗಳಲ್ಲಿ ತೀರ್ಥಹಳ್ಳಿ, ಶೃಂಗೇರಿ, ಸೀತಾನದಿ, ಸುಬ್ರಹ್ಮಣ್ಯದಲ್ಲಿ ನಡೆಯುವ ಜಾತ್ರೆಗಳು ವಿಶೇಷ. ಮಲೆನಾಡಿನ ಜಾತ್ರೆಗಳಲ್ಲಿ ತೀರ್ಥಹಳ್ಳಿ, ಶೃಂಗೇರಿ, ಸೀತಾನದಿ, ಸುಬ್ರಹ್ಮಣ್ಯದಲ್ಲಿ ನಡೆಯುವ ಜಾತ್ರೆಗಳು ವಿಶೇಷ. ಈ ಜಾತ್ರೆಗಳಿಗೆ ಸಾವಿರಾರು ಜೋಡಿಯ ಗಾಡಿಎತ್ತುಗಳು ಉಳುವ ಕೋಣಗಳು, ಹಾಲು ಕರೆಯುವ ಎಮ್ಮೆ ಹಸುಗಳು ಹೀಗೆ ಎಲ್ಲಾ ರೀತಿಯ ಜಾನುವಾರುಗಳನ್ನು ಸೇರಿಸಿರುತ್ತಾರೆ.

ಜಾನುವಾರು ಜಾತ್ರೆಯಲ್ಲಿ ವಿಶೇಷವಾದ ಜಾನುವಾರುಗಳಿಗೆ ಬಹುಮಾನ ಕೊಡುವ ಕಾರ್ಯಕ್ರಮ ಇರುತ್ತದೆ. ಜಾನುವಾರುಗಳ ಬಹುಮಾನಕ್ಕೆ ‘ಮೆಡಲ್’ ಕೊಡುವು ದೆಂದು ಹೇಳುತ್ತಾರೆ.

ಮೆಡಲ್‌ನ ಸ್ಪರ್ಧೆಗಾಗಿ ಗಾಡಿ ಎತ್ತುಗಳು, ಬೀಜದ ಹೋರಿಗಳು, ವಿಶೇಷ ಜಾತಿಯ ಎಮ್ಮೆ ಕೋಣಗಳು ಎಲ್ಲವೂ ಸ್ಪರ್ಧೆಯಲ್ಲಿರುತ್ತವೆ. ಎತ್ತುಗಳಿಗೆ ಕೊಡುವ ಬಹುಮಾನದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳು ನಗದಿನೊಂದಿಗೆ ಬಂಗಾರದ ಬೆಳ್ಳಿಯ ಮತ್ತು ಕಂಚಿನ ಪದಕಗಳಿರುತ್ತವೆ. ಬಹುಮಾನ ಯೋಜನೆಯನ್ನು ತಾಲೂಕು ಅಭಿವೃದ್ಧಿ ಮಂಡಳಿ ಅಥವ ಮುನ್ಸಿಪಾಲಿಟಿಗಳು ನಡೆಸುತ್ತವೆ.

ಬಯಲು ಸೀಮೆಯಲ್ಲಿ ಎತ್ತುಗಳನ್ನು ಸಾಕುವವರು ಒಂದರಂತೆ ಮತ್ತೊಂದು ಸಣ್ಣ ವ್ಯತ್ಯಾಸವೂ ಇಲ್ಲದಂತಹ ಕೋಡಿನಿಂದ ಹಿಡಿದು ಕೊಳಗಿನವರೆಗೂ ಯಾವುದರಲ್ಲೂ ಭಿನ್ನತೆ ಕಾಣದ ಎತ್ತುಗಳನ್ನು ಜೋಡಿ ಮಾಡಿ ತಂದಿರುತ್ತಾರೆ. ಅವುಗಳನ್ನು ನೋಡಿದರೆ ಅವಳಿ ಜವಳಿಯಂತೆ ಇರುತ್ತವೆ. ನೂರಕ್ಕೆ ನೂರು ಒಂದರಂತೆ ಒಂದು ಇರುವ ಜೋಡಿಗೆ ಪ್ರಥಮ ಬಹುಮಾನ ಬರುತ್ತದೆ. ಅಂತಹ ಎರಡು ಮೂರು ಜೋಡಿಗಳಿದ್ದರೆ ಕಡಿಮೆ ವಯಸ್ಸಿನ ಮತ್ತು ಆಕರ್ಷಕವಾಗಿರುವ ಜೋಡಿಗೆ ಪ್ರಥಮ ಬಹುಮಾನ ಸಿಕ್ಕುತ್ತದೆ. ಮೆಡಲ್ ಬಂದ ಜೋಡಿಯನ್ನು ಭಾರೀ ಶ್ರೀಮಂತರು ಪ್ರತಿಷ್ಠೆಗಾಗಿ ಪೈಪೋಟಿಯಲ್ಲಿ ಒಂದಕ್ಕೆ ಎರಡು ಹಣಕೊಟ್ಟು ಕೊಂಡುಕೊಳ್ಳುತ್ತಾರೆ. ಮೆಡಲಿನ ಎತ್ತುಗಳನ್ನು ಕೊಂಡವರ ಹೆಸರು ಇಡೀ ಮಲೆನಾಡಿನಲ್ಲೇ ಖ್ಯಾತವಾಗಿರುತ್ತದೆ. ಅಂತಹ ಕೆಲವು ಶ್ರೀಮಂತರು ಮೆಡಲಿಗಾಗಿಯೇ ಸ್ವತಃ ಎತ್ತುಗಳನ್ನು ಸಾಕಿ ತರುವವರೂ ಇರುತ್ತಾರೆ.

ಮಲೆನಾಡಿನ ಜಾತ್ರೆಗಳಲ್ಲಿ ಸುಬ್ರಹ್ಮಣ್ಯದ ಜಾತ್ರೆ ವಿಶಿಷ್ಟವಾದದ್ದು. ಯಾರಾದರೂ ಗಂಡು-ಹೆಣ್ಣು ಸುಂದರವಾಗಿ ಒಪ್ಪವಾಗಿದ್ದರೆ ಅಂತಹ ಗಂಡು ಹೆಣ್ಣಿನ ಜೋಡಿಗಳಿಗೆ ‘ಸುಬ್ರಹ್ಮಣ್ಯ ಜೋಡಿ’ ಎನ್ನುವುದು ವಾಡಿಕೆಯ ಮಾತು. ಹೀಗೆ ಜಾನುವಾರು ಜಾತ್ರೆಗಳು ಮಲೆನಾಡಿನ ಸುಗ್ಗಿಯ ಕಾಲದಲ್ಲಿ ನಡೆಯುವುದರಿಂದ ಇಡೀ ಮಲೆನಾಡೇ ಸಂಚಲನಗೊಂಡು ಚಟುವಟಿಕೆಯಿಂದ ಇರುತ್ತದೆ.

ಹೂಟಿ ಎತ್ತುಗಳೆಂದರೆ ಮಳೆನಾಡ ಗಿಡ್ಡಗಳು. ಬಯಲು ಸೀಮೆಯವರಿಂದ ಕೊಂಡು ತಂದ ಉದ್ದ ಕೈಕಾಲಿನ ಎತ್ತುಗಳಿಗೆ ಗಾಡಿಎತ್ತುಗಳು ಎನ್ನುತ್ತಾರೆ. ಉಳುಮೆಯ ಎತ್ತುಗಳೇ ಕೃಷಿಯ ಜೀವಾಳ. ಬಯಲು ಸೀಮೆಯಿಂದ ಕೊಂಡುತಂದ ಎತ್ತುಗಳನ್ನು ಮುಂಗಾರು ಮಳೆಯ ಒಂದೆರಡು ತಿಂಗಳು ಮುಂಚಿನಿಂದ ಮಳೆಗಾಲದ ಹೂಟಿಗೆ ಆಗುವಂತೆ ಹದಗೊಳಿಸುತ್ತಾರೆ. ಮನೆಯಲ್ಲಿ ಯಜಮಾನನೇ ತೀರಿ ಹೋದರೂ ಕೃಷಿ ಕಾರ್ಯ ಹಾಗೂ ಹೀಗೂ ನಡೆಯುತ್ತದೆ. ಹೂಡುವ ಎತ್ತು ಏನಾದರೂ ಹೆಚ್ಚುಕಡಿಮೆಯಾದರೆ ಆ ಮನೆಯೇ ನಾಶವಾಗಿ ಹೋದಂತೆ. ಹಾಗಾಗಿ ಹೂಡುವ ಎತ್ತುಗಳ ಬಗ್ಗೆ ವಿಶೇಷ ಮುತುವರ್ಜಿ. ಎತ್ತಿನ ಗಾಡಿ ಇದ್ದವರು ಬಯಲು ಸೀಮೆಯಿಂದ ತಂದ ದೊಡ್ಡ ಎತ್ತುಗಳನ್ನು ಇಟ್ಟುಕೊಂಡಿರುತ್ತಾರೆ. ಅಂತಹ ಗಾಡಿ ಎತ್ತುಗಳು ಮೊದಲನೆಯ ಸಾಲು ಉಳುಮೆ ಮಾಡಲು ಅಗತ್ಯ. ಮೊದಲನೆ ಸಾಲಿನಲ್ಲಿ ಗದ್ದೆಗಳು ಬಿಗು ಆಗಿರುತ್ತವೆ. ಆ ಸಾಲಿಗೆ ‘‘ಹೊಳಕೆ ಹೊಡೆಯುವುದು’’ ಎಂದು ಹೇಳುತ್ತಾರೆ. ಗಾಡಿ ಎತ್ತುಗಳನ್ನು ಹೊಳಕೆ ಹೊಡೆಯಲು ಮತ್ತು ನೊಳ್ಳಿ ಹೊಡೆಯಲು ಬಳಸು ತ್ತಾರೆ. ಅವುಗಳಿಗೆ ಕಬ್ಬಿಣದ ನೇಗಿಲು ಕಟ್ಟಿ ಮೊದಲ ಸಾಲು ಆಳವಾಗಿ ಉಳುಮೆ ಮಾಡುತ್ತಾರೆ. ನಂತರ ಮರದ ನೇಗಿಲಿನಿಂದ ಮನೆಯಲ್ಲಿ ಹುಟ್ಟಿದ ಅಥವ ಪ್ರಾದೇಶಿಕ ವಾದ ಮಳೆನಾಡು ಗಿಡ್ಡಗಳನ್ನು ಬಳಸಿ ಹೊಳಕೆಯೂ ಸೇರಿದಂತೆ ಐದು ಸಾರಿ ಉಳುಮೆ ಮಾಡುತ್ತಾರೆ.

ನಟ್ಟಿ ಹೂಟಿಯ ಕೊನೆಯ ಸಾಲಿನ ನೊಳ್ಳಿ ಹೊಡೆಯುವಾಗ ಮುಂಗಾರು ಮಳೆಯಲ್ಲಿ ಹತ್ತಿ ಬಂದು ಗದ್ದೆಗಳಲ್ಲಿ ತತ್ತಿ ಇಟ್ಟು ವಾಪಸ್ ಹೊಳೆ ಸೇರದ ಚಿಕ್ಕ ಪುಟ್ಟ ಜಾತಿಗೆ ಸೇರಿದ ಮೀನುಗಳು ಕೆಲವು ಗದ್ದೆಯಲ್ಲಿ ಉಳಿದುಕೊಂಡಿರುತ್ತವೆ. ಕೊನೆಯ ಸಾಲು ನೊಳ್ಳೆ ಹೊಡೆ ಯುವಾಗ ಮಣ್ಣು ನೀರು ಒಂದಾದಾಗ ಉಸಿರಾಟವು ಕಷ್ಟವಾಗಿ ಹೊಟ್ಟೆಮೇಲಾಗಿ ತೇಲುವ ಮೀನು ಸೋಸಲುಗಳನ್ನು ನೊಳ್ಳಿಯ ಹಿಂದೆಯೇ ಹೋಗಿ ಹೆಕ್ಕಿಕೊಳ್ಳುತ್ತಾರೆ.

ಒಂದು ಖಂಡುಗ ಭತ್ತದ ಗದ್ದೆ ಉಳುಮೆ ಮಾಡಲು ಒಂದು ಜೊತೆ ಎತ್ತು ಬೇಕು. ಒಂದು ಖಂಡುಗ ಎಂದರೆ ಹೆಚ್ಚು ಕಡಿಮೆ ಅರ್ಧ ಎಕರೆ. ಹತ್ತೈವತ್ತು ಖಂಡುಗ ಗದ್ದೆ ಸಾಗುವಳಿ ಮಾಡುವವರು ಕೂಡ ಹತ್ತು ಜೊತೆಗಿಂತ ಹೆಚ್ಚು ಎತ್ತುಗಳನ್ನು ಇಟ್ಟುಕೊಂಡಿ ರುವುದಿಲ್ಲ. ಒಂದು ಜೊತೆಗೆ ಒಬ್ಬ ಹೂಟಿಯ ಆಳು ಬೇಕಾಗುವುದರಿಂದ ಅಂತಹ ದೊಡ್ಡ ಜಮೀನುದಾರರುಗಳು ಹೆಚ್ಚೆಂದರೆ ಹತ್ತು ಜೊತೆ ಎತ್ತುಗಳನ್ನು ಇಟ್ಟುಕೊಂಡಿ ರುತ್ತಾರೆ. ಅವರ ಗದ್ದೆಗಳು ಸಾವಕಾಶವಾಗಿ ನಟ್ಟಿಯಾಗಲು ಹೆಚ್ಚುಕಾಲವನ್ನು ತೆಗೆದುಕೊಳ್ಳುತ್ತದೆ. ಅಲ್ಲದಿದ್ದರೆ ಅವರು ದೊಡ್ಡ ನಟ್ಟಿಯ ದಿನ ನೆರೆಹೊರೆಯವರ ಎರವಲು ಪಡೆಯುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)