varthabharthi

ಸುಗ್ಗಿ

ಬಳ್ಳಾರಿಯ ಬಹುರೂಪಿ ನಟ ಶಂಕರ್ ನಾಯ್ಡು

ವಾರ್ತಾ ಭಾರತಿ : 9 Dec, 2017
ಡಾ. ಅರುಣ್ ಜೋಳದಕೂಡ್ಲಿಗಿ

ನಾಯ್ಡು ಹಾಸ್ಯ ಪಾತ್ರಕ್ಕೆ ಹೆಚ್ಚು ಹೊಂದುತ್ತಿದ್ದರು. ರಂಗಕ್ಕೆ ಅವರು ಬಂದು ನಿಲ್ಲುವ ಹಾವಭಾವವೇ ನಗೆ ಉಕ್ಕಿಸುತ್ತಿತ್ತು. ಬಳ್ಳಾರಿಯ ಪೌರಾಣಿಕ ನಾಟಕ ಪರಂಪರೆ ಹಿನ್ನೆಲೆಯ ಪ್ರಭಾವವೂ ಅವರ ಮೇಲಿತ್ತು. ಹಾಗಾಗಿ ನಾಯ್ಡು ರಕ್ತರಾತ್ರಿಯ ನವಲಿ ಪಾತ್ರದಲ್ಲಿ ಹೆಚ್ಚು ಜನಪ್ರಿಯರು. ಉಳಿದಂತೆ ಶಿಶುನಾಳ ಶರೀಫ, ಪುಟ್ಟರಾಜ ಗವಾಯಿ, ಕನಕದಾಸ ಹೀಗೆ ಹಲವು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಜನರಿಂದ ಸೈ ಎನಿಸಿಕೊಂಡಿದ್ದರು.

ಕಳೆದ ಮೂರ್ನಾಲ್ಕು ದಶಕಗಳಿಂದ ಬಳ್ಳಾರಿ ಪರಿಸರದಲ್ಲಿ ನಡೆದಾಡುವ ರಂಗಭೂಮಿ, ರಂಗಶಂಕರ್ ಎಂದು ಕರೆಯಲ್ಪಡುತ್ತಿದ್ದ ಶಂಕರ್‌ನಾಯ್ಡು ಈಚೆಗೆ ಉಸಿರು ನಿಲ್ಲಿಸಿದರು. ಝೀ ಕನ್ನಡ ಚಾನೆಲ್ ನಡೆಸುವ ಕಾಮಿಡಿ ಕಿಲಾಡಿಗಳು ಎನ್ನುವ ಕಾರ್ಯಕ್ರಮದ ಆಡಿಷನ್‌ನಲ್ಲಿ ನಟನೆ ಮಾಡುತ್ತಲೇ ಹೃದಯಾಘಾತದಿಂದ ತೀರಿದರು. ಈ ಅರ್ಥದಲ್ಲಿ ನಟನ ಸಾರ್ಥಕ ಸಾವಿದು. ಬಹುಶಃ ಅವರು ಇನ್ನಷ್ಟು ದಿನ ಬದುಕಿದ್ದರೆ ಕಾಮಿಡಿ ಕಿಲಾಡಿಗಳ ಮೂಲಕ ನಾಡಿನ ಜನರನ್ನು ರಂಜಿಸಿ ಜನಪ್ರಿಯರಾಗುತ್ತಿದ್ದರು.

 ಶಂಕರ್ ನಾಯ್ಡು ನನಗೆ ಕಳೆದ ಆರೇಳು ವರ್ಷಗಳಿಂದ ಪರಿಚಿತರು. ಮರಿಯಮ್ಮನಹಳ್ಳಿಯ ಕೆ.ನಾಗರತ್ನಮ್ಮ ಮತ್ತು ಮಂಜಮ್ಮ ಜೋಗತಿ ಅವರು ರೂಪಿಸಿದ್ದ ಕಾರ್ಯಕ್ರಮದಲ್ಲಿ ನಾಯ್ಡು ಅವರ ಮಾತುಗಾರಿಕೆ ನೋಡಿ ಅಭಿಮಾನಿಯಾಗಿದ್ದೆ. ಆರಂಭಕ್ಕೆ ನಾನು ಅವರನ್ನು ಹಗಲುವೇಷದ ಕಲಾವಿದರೆಂದೇ ತಿಳಿದಿದ್ದೆ. ಅಂತೆಯೇ ಅವರು ನೋಡುಗರಿಗೆ ನಟನೆಂದು ಗುರುತಿಸುವಂತೆ ಅವರ ಮಾತು ನಡೆನುಡಿಗಳೇ ಸಂಕೇತದಂತಿದ್ದವು.

ಅವರ ಸಂಪರ್ಕ ಹೆಚ್ಚು ಆಪ್ತವಾದದ್ದು ನನ್ನ ‘ಗಣಿಗಣಮನ’ ನಾಟಕದ ಸಿದ್ಧತೆಯ ಸಂದರ್ಭದಲ್ಲಿ. ಈ ನಾಟಕದಲ್ಲಿ ಅವರು ಐದು ಪಾತ್ರಗಳನ್ನು ಮಾಡಿದ್ದರು. ಇಡೀ ನಾಟಕ ಅವರ ಜೀವಂತಿಕೆಯಿಂದ ರೂಪುಗೊಂಡಿತ್ತು. ನಾಟಕದ ವಸ್ತು ಗಣಿಧಣಿ ಮತ್ತು ಕೂಲಿಗಳಿಗೆ ಸಂಬಂಧಿಸಿದ್ದರಿಂದ ಅದನ್ನೆಲ್ಲಾ ಸೂಕ್ಷ್ಮವಾಗಿ ಗ್ರಹಿಸಿ ವ್ಯಂಗ್ಯ ಮತ್ತು ಹಾಸ್ಯದ ಮೂಲಕ ಗಣಿಗಾರಿಕೆಯ ದರ್ಪ ಮತ್ತು ಕ್ರೌರ್ಯವನ್ನು ನೋಡುಗರಿಗೆ ದಾಟಿಸಿದ್ದರು.

ಮುಖ್ಯವಾಗಿ ಶಂಕರ್‌ನಾಯ್ಡು ಬಳ್ಳಾರಿಯನ್ನು ಒಳಗೊಂಡಂತೆ ಹೈದರಾಬಾದ್ ಕರ್ನಾಟಕದ ರಂಗಭೂಮಿ ಪರಿಸರದಲ್ಲಿ ಬೆಳೆದವರು. ವೃತ್ತಿಯಲ್ಲಿ ವಕೀಲರಾದರೂ, ತಮ್ಮ ವೃತ್ತಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದು ಅಭಿನಯದಲ್ಲಿ. ಹಾಗಾಗಿ ತಮ್ಮ ಜೀವನವನ್ನು ಅಭಿನಯಕ್ಕಾಗಿ ತೇಯ್ದರು. ನಾಯ್ಡು ಹಾಸ್ಯ ಪಾತ್ರಕ್ಕೆ ಹೆಚ್ಚು ಹೊಂದುತ್ತಿದ್ದರು. ರಂಗಕ್ಕೆ ಅವರು ಬಂದು ನಿಲ್ಲುವ ಹಾವಭಾವವೇ ನಗೆ ಉಕ್ಕಿಸುತ್ತಿತ್ತು. ಬಳ್ಳಾರಿಯ ಪೌರಾಣಿಕ ನಾಟಕ ಪರಂಪರೆ ಹಿನ್ನೆಲೆಯ ಪ್ರಭಾವವೂ ಅವರ ಮೇಲಿತ್ತು. ಹಾಗಾಗಿ ನಾಯ್ಡು ರಕ್ತರಾತ್ರಿಯ ನವಲಿ ಪಾತ್ರದಲ್ಲಿ ಹೆಚ್ಚು ಜನಪ್ರಿಯರು. ಉಳಿದಂತೆ ಶಿಶುನಾಳ ಶರೀಫ, ಪುಟ್ಟರಾಜ ಗವಾಯಿ, ಕನಕದಾಸ ಹೀಗೆ ಹಲವು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಜನರಿಂದ ಸೈ ಎನಿಸಿಕೊಂಡಿದ್ದರು.

ಕಳೆದ ಜುಲೈನಲ್ಲಿ ನಾಯುಡು ಅವರಿಗೆ 55 ವರ್ಷ ಪೂರ್ಣಗೊಂಡಿದ್ದಕ್ಕೆ ಅಭಿನಂದನಾಸಮಾರಂಭವನ್ನು ರಂಗಜಂಗಮ ಸಂಸ್ಥೆ ಆಯೋಜಿಸಿತ್ತು. ಈ ಸಮಾರಂಭದಲ್ಲಿ ನಾಯ್ಡು ಅವರ ಬಹುರೂಪಿ ವ್ಯಕ್ತಿತ್ವದ ಬಗ್ಗೆ ಹಲವರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ರಂಗಭೂಮಿಯ ಪರಂಪರೆ ಮತ್ತು ವರ್ತಮಾನದ ಕಣ್ಣೋಟಗಳ ಚರ್ಚೆ ಸಂವಾದಗಳೂ ನಡೆದಿದ್ದವು. ಬಹುಶಃ ಇದೊಂದೆ ನಾಯ್ಡು ಅವರಿಗೆ ಸಿಕ್ಕ ದೊಡ್ಡ ಅಭಿಮಾನದ ಸಂಗತಿ ಅನ್ನಿಸುತ್ತದೆ.

ನಾಯ್ಡು ಅವರಿಗೆ ನಾಟಕ ಅಕಾಡಮಿ ಸೇರಿದಂತೆ ಅನೇಕ ಸಂಸ್ಥೆಗಳ ಗೌರವ, ಪ್ರಶಸ್ತಿ, ಸನ್ಮಾನಗಳು ದೊರೆತಿವೆ. ಕೊನೆತನಕ ಅವಿವಾಹಿತರಾಗಿಯೇ ಉಳಿದ ನಾಯ್ಡು ತಮ್ಮ ಮನೆಯನ್ನೇ ರಂಗಭೂಮಿ ಯ ತರಬೇತಿ ಕೇಂದ್ರದಂತೆ ಬಳಸುತ್ತಿದ್ದರು. ಈ ಮೂಲಕ ಯುವಜನತೆಗೆ ಅಭಿನಯದ ಅಭಿರುಚಿ ಮೂಡಿಸುವ ಉತ್ಸಾಹ ತೋರುತ್ತಿದ್ದರು. ಹೀಗೆ ರಂಗಭೂಮಿಯ ಜತೆಗೆ ತನ್ನ ಬದುಕನ್ನು ಬೆಸೆದು ಕೊಂಡಿದ್ದ ಶಂಕರ ನಾಯ್ಡು ಅವರನ್ನು ರಂಗಭೂಮಿ ಇತಿಹಾಸ ನೆನಪಿಟ್ಟುಕೊಳ್ಳಬೇಕಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)