ಪಡುಬಿದ್ರೆ : ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಪಡುಬಿದ್ರೆ, ಡಿ. 9: ಇನ್ನಾ ಗ್ರಾಮದ ಸಾಂತೂರುಕೊಪ್ಲ ಎಂಬಲ್ಲಿ ಮನೆಯ ಬಾಗಿಲು ಮುರಿದು ಒಳನುಗ್ಗಿ ಚಿನ್ನಾಭರಣ ಕಳವುಗೈದ ಘಟನೆ ಇಲ್ಲಿನ ನಡೆದಿದೆ.
ಇಲ್ಲಿನ ಸಾಂತೂರುಕೊಪ್ಲದ ಮೊಕಮಾರು ಚರ್ಚ್ ಬಳಿಯ ನಿವಾಸಿ ಫ್ಲಾವಿಯಾ ಪಿಂಟೋ ಎಂಬವರಿಗೆ ಸೇರಿದ ಮನೆಯಲ್ಲಿ ಚಿನ್ನದ ಕರಿಯಮಣಿ ಸಹಿತ ಒಟ್ಟು 17ಪವನ್ ಚಿನ್ನಾಭರಣ ಕಳವುಗೈಯ್ಯಲಾಗಿದೆ. ಕಳವುಗೈದ ಚಿನ್ನಾಭರಣಗಳ ಒಟ್ಟು ಮೌಲ್ಯ ರೂ. 3.5 ಲಕ್ಷ ಎಂದು ಅಂದಾಜಿಸಲಾಗಿದೆ.
ಶಿಕ್ಷಕಿಯಾಗಿರುವ ಫ್ಲಾವಿಯಾ ಪಿಂಟೋ ಅವರು ಜನವರಿ 14ರಂದು ನಡೆಯುವ ಮಗನ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಮೂಡಬಿದ್ರಿಯ ತಾಯಿಯ ಮನೆಗೆ ತೆರಳಿ ಅಲ್ಲಿಯೇ ತಂಗಿದ್ದರು. ಇಂದು ಬೆಳಗ್ಗೆ ಅಲ್ಲಿಂದ ಹೊರಟು ಶಾಲೆಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮಧ್ಯಾಹ್ನದ ವೇಳೆಗೆ ಮನೆಗೆಂದು ಬಂದಾಗ ಬೀಗ ಒಡೆದಿರುವುದು ಬೆಳಕಿಗೆ ಬಂತು. ಕೂಡಲೇ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿ ಠಾಣೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಪಡುಬಿದ್ರಿ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತಿದ್ದಾರೆ.