varthabharthi

ದಿಲ್ಲಿ ದರ್ಬಾರ್

ಪತ್ರಕರ್ತ

ದಿಲ್ಲಿ ದರ್ಬಾರ್

ವಾರ್ತಾ ಭಾರತಿ : 9 Dec, 2017

  ತಾಳ್ಮೆ ಕಳೆದುಕೊಂಡ ಶಾ

ಗುಜರಾತ್‌ನಲ್ಲಿ ಬ್ಯುಸಿಯಾಗಿದ್ದ ಅಮಿತ್ ಶಾ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾಗಲೆಲ್ಲಾ, ತನ್ನ ಪಕ್ಷ 150 ಸ್ಥಾನಗಳನ್ನು ಗೆಲ್ಲಲಿದೆಯೆಂದು ಹೇಳಿಕೊಳ್ಳುತ್ತಲೇ ಇದ್ದರು. ಆದರೆ ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ತಾಳ್ಮೆ ಕಳೆದುಕೊಂಡಿರುವಂತೆ ಕಾಣುತ್ತಿದೆ. ಅದನ್ನು ಅನೇಕರು ಗಮನಿಸಿರಬಹುದು. ಅಹ್ಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಸಂದರ್ಶನವೊಂದರ ಮಧ್ಯದಲ್ಲೇ ಅವರು ಹೊರನಡೆದಿದ್ದರು. ಆಗ ಶಾ ತುಂಬಾ ಕೆಟ್ಟ ಮೂಡ್‌ನಲ್ಲಿದ್ದರು ಎಂದು ಅವರ ಸುತ್ತಮುತ್ತಲಿದ್ದವರು ಹೇಳಿಕೊಂಡಿದ್ದರು. ಗುಜರಾತ್‌ನಲ್ಲಿ 184 ಸ್ಥಾನಗಳ ಪೈಕಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆಯೆಂದು ಶಾ ಹೇಳುತ್ತಿರುವುದನ್ನು ಪಕ್ಷದ ವಕ್ತಾರರು ಉರು ಹೊಡೆಯುತ್ತಲೇ ಇದ್ದಾರೆ. ಆದರೆ ಆಂತರಿಕವಾಗಿ ಅವರೆಲ್ಲರೂ ಗುಜರಾತ್‌ನಲ್ಲಿ ಈ ಚುನಾವಣೆಯು ಪಕ್ಷಕ್ಕೆ ಅತ್ಯಂತ ಕಠಿಣವಾಗಿ ಪರಿಣಮಿಸಿದೆಯೆಂಬುದನ್ನು ಒಪ್ಪಿಕೊಳ್ಳುತ್ತಿದ್ದಾರೆ.

 ರೂಪಾನಿಯ ಮೋದಿ ಗುಣಗಾನ

  ನರೇಂದ್ರ ಮೋದಿಯ ಗುಣಗಾನ ಮಾಡುವುದನ್ನು ವಿಜಯ್ ರೂಪಾನಿ ಎಲ್ಲೂ ನಿಲ್ಲಿಸಲಾರರು. ಗುಜರಾತ್‌ನಲ್ಲಿ ಎಲ್ಲಿ ಹೋಗಿ ಭಾಷಣ ಮಾಡಿದರೂ, ಅವರು ಮೋದಿ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಾರೆ ಹಾಗೂ ಉಳಿದ ವಿಷಯಗಳ ಬಗ್ಗೆ ಮಾತನಾಡಿದ್ದು ತೀರಾ ಕಡಿಮೆ. ಈ ಕಾರ್ಯತಂತ್ರವು ಅವರಿಗೆ ಹೆಚ್ಚುವರಿ ಲಾಭವನ್ನು ತಂದುಕೊಟ್ಟಿದೆ. ಕಾಂಗ್ರೆಸ್ ಭವಿಷ್ಯ ನುಡಿದಿರುವಂತೆ, ಗುಜರಾತ್‌ನಲ್ಲಿ ‘ಆಕಾಶವೇನಾದರೂ ಬಿಜೆಪಿಯ ತಲೆ ಮೇಲೆ ಬಿದ್ದಲ್ಲಿ’ ಅದಕ್ಕಾಗಿ ಮೋದಿ ದೂಷಣೆಯನ್ನು ಎದುರಿಸಬೇಕಾಗುತ್ತದೆಯೇ ಹೊರತು ರೂಪಾನಿಯವರಲ್ಲ. ಅಮಿತ್ ಶಾ ಅವರ ತತ್ವಜ್ಞಾನದ ಕಟ್ಟಾ ಅನುಯಾಯಿಯಾದ ರೂಪಾನಿಗೆ ಗುಜರಾತ್‌ನಲ್ಲಿ ಮೋದಿ ಮಾತ್ರವೇ ಪಕ್ಷವನ್ನು ಕಾಪಾಡಬಲ್ಲರೆಂದು ಅರಿವಿದೆಯೆಂದು ಕೆಲವರು ಹೇಳುತ್ತಾರೆ. ಹೀಗಾಗಿ ಚುನಾವಣೆಯಲ್ಲಿ ಪಕ್ಷದ ಗೆಲುವು, ಅವರ ಬಗ್ಗೆ ಮೋದಿಗೆ ಸದಭಿಪ್ರಾಯ ಮೂಡುವುದನ್ನು ಖಾತರಿಪಡಿಸಲಿದೆ. ಇಲ್ಲದೇ ಇದ್ದಲ್ಲಿ ಚುನಾವಣೆಯ ಬಳಿಕ ಅವರಿಗೆ ಯಾವ ಹೊಣೆಗಾರಿಕೆಯೂ ಇರದೆಂದು ವೀಕ್ಷಕರು ಅಭಿಪ್ರಾಯಿಸುತ್ತಾರೆ.

 ಶೆಹಝಾದ್ ಮತ್ತು ಶೆಹಝಾದ!

  ಸುಖದ ಸುಪ್ಪತ್ತಿಗೆಯಲ್ಲಿಯೇ ಹುಟ್ಟಿ ಬೆಳೆದವರೆಂದು ಹಾಗೂ ಕೆಲವರು ಹೇಳಿಕೊಳ್ಳುವಂತೆ ‘ಭಾರತದ ಪ್ರಥಮ ಕುಟುಂಬ’ಕ್ಕೆ ಸೇರಿದವರಾಗಿದ್ದುದರಿಂದ ರಾಜಕೀಯಕ್ಕೆ ನಿರಾಯಾಸವಾಗಿ ಪ್ರವೇಶಿಸಿದವರೆಂದು, ರಾಹುಲ್‌ಗಾಂಧಿ ಅವರನ್ನು ನರೇಂದ್ರ ಮೋದಿ ಆಗಾಗ ಅಪಹಾಸ್ಯ ಮಾಡುತ್ತಿರುತ್ತಾರೆ. ರಾಹುಲ್‌ರನ್ನು ಗೇಲಿ ಮಾಡಲು ಮೋದಿ ‘ಶೆಹಝಾದ’ ಎಂಬ ಪದವನ್ನು ಆಯ್ದುಕೊಂಡಿದ್ದಾರೆ. ಆದರೆ ಸದ್ಯದಲ್ಲೇ ಕಾಂಗ್ರೆಸ್ ಅಧ್ಯಕ್ಷರಾಗಲಿರುವ ರಾಹುಲ್‌ಗೆ ಯಾತನೆ ನೀಡಲು ಓರ್ವ ‘ಶೆಹಝಾದ್’ ಬಂದಿದ್ದಾರೆ. ರಾಬರ್ಟ್ ವಾದ್ರಾರ ಸೋದರ ತಂಗಿ ಮೋನಿಕಾರನ್ನು ವಿವಾಹವಾಗಿರುವ ತೆಹೆಸಿನ್‌ರ ಕಿರಿಯ ಸಹೋದರ ಶೆಹಝಾದ್ ಪೂನಾವಾಲಾ ಅವರು ವಂಶಪಾರಂಪರ್ಯದ ರಾಜಕೀಯವನ್ನು ಟೀಕಿಸುವ ಮೂಲಕ ಹಾಗೂ ರಾಹುಲ್‌ರನ್ನು ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಿಸಲು ಚುನಾವಣಾ ಪ್ರಕ್ರಿಯೆಯಲ್ಲಿ ವಂಚನೆ ನಡೆದಿದೆಯೆಂದು ಆರೋಪಿಸುವ ಮೂಲಕ ಮಾಧ್ಯಮಗಳ ಗಮನ ತನ್ನತ್ತ ಹರಿಯುವಂತೆ ಮಾಡಿದ್ದಾರೆ. ಶೆಹಝಾದ್ ಪೂನಾವಾಲಾ ಅವರ ಈ ಬಂಡಾಯವು ಭಾರತೀಯ ಜನತಾಪಕ್ಷಕ್ಕೆ ಕರ್ಣಾನಂದಕರವಾದ ಸಂಗೀತವಾಗಿ ಪರಿಣಮಿಸಿದೆ. ವಿಪರ್ಯಾಸವೆಂದರೆ, ಇದೇ ಗಾಂಧಿ ಕುಟುಂಬದಿಂದಾಗಿ ಪೂನಾವಾಲಾ ಅವರಿಗೆ ರಾಜಕೀಯದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿತ್ತು. ತಾನು ಕಾಂಗ್ರೆಸ್ ಬಗ್ಗೆ ಸಹಾನುಭೂತಿಯುಳ್ಳವನೆಂದು ಬಿಂಬಿಸಿಕೊಳ್ಳಲು ಪೂನಾವಾಲಾ ಪ್ರಯತ್ನಿಸಿದ್ದರಾದರೂ, ಪಕ್ಷವು ಅವರನ್ನು ಬಹಳ ಕಾಲದವರೆಗೆ ಸ್ವಲ್ಪ ದೂರವೇ ಇರಿಸಿತ್ತು. ಕೊನೆಗೂ ಅವರಿಗೆ ಮಹಾರಾಷ್ಟ್ರದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲು ಅನುಮತಿ ನೀಡಿತು. ಪೂನಾವಾಲಾ ಅವರು ಹಲವು ಗಣ್ಯರ ಜೊತೆ ತನ್ನ ನಂಟನ್ನು ಬಲಪಡಿಸಲು ಪಕ್ಷವನ್ನು ವೇದಿಕೆಯಾಗಿ ಬಳಸಿಕೊಂಡರೆಂದು ಹಿರಿಯ ನಾಯಕರೊಬ್ಬರು ಹೇಳುತ್ತಾರೆ. ತನ್ನ ಸಾಂಸ್ಥಿಕ ಚುನಾವಣೆಗೆ ಅಡ್ಡಿಪಡಿಸಲು ಬಾಹ್ಯಶಕ್ತಿಗಳು ಪ್ರಯತ್ನಿಸುತ್ತಿರುವುದನ್ನು ಮನಗಂಡ ಕಾಂಗ್ರೆಸ್ ಪಕ್ಷವು, ಬಂಡಾಯಗಾರರು ಸಾಂಸ್ಥಿಕ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಬೇಕಾದ ಸದಸ್ಯತ್ವವನ್ನು ಹೊಂದಿಲ್ಲವೆಂದು ಘೋಷಿಸಿ ಬಿಟ್ಟಿತ್ತು.

 ಅಮಿತಾಭ್ ಧ್ವನಿಯೆತ್ತುವರೇ?

   ಈ ವರ್ಷದ ಕೋಲ್ಕತಾ ಚಲನಚಿತ್ರೋತ್ಸವವು, ಸಿನೆಮಾಗಳ ಪ್ರದರ್ಶನಕ್ಕಿಂತಲೂ ಬೇರೆ ವಿಷಯಗಳಿಂದಾಗಿಯೇ ಸುದ್ದಿಯಲ್ಲಿರುವಂತೆ ಕಾಣುತ್ತದೆ. ಸತತ ಹಲವಾರು ವರ್ಷಗಳಿಂದ ತಾನು ಕೋಲ್ಕತಾ ಚಲನಚಿತ್ರೋತ್ಸವದ ಮುಖ್ಯ ಅತಿಥಿಯಾಗಿದ್ದುದರಿಂದ, ಮುಂದಿನ ವರ್ಷ ನಡೆಯಲಿರುವ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ತನ್ನನ್ನು ಆಹ್ವಾನಿಸದಂತೆ ಅಮಿತಾಭ್ ಬಚ್ಚನ್ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಮನವಿ ಮಾಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ ನಗರದಲ್ಲಿ ಜನರು ಖಾಸಗಿಯಾಗಿ ಮಾತನಾಡುತ್ತಿದ್ದ ಈ ವಿಷಯವನ್ನೇ ಅವರು ಮುಖ್ಯಮಂತ್ರಿಗೆ ಹೇಳಿರಬೇಕು. ಸಾಮಾನ್ಯವಾಗಿ ತನ್ನ ಅನಿಸಿಕೆಗಳನ್ನು ತನ್ನಲ್ಲಿಯೇ ಮುಚ್ಚಿಡುವ ಅಮಿತಾಭ್ ಅವರು ಈ ಮೊದಲು ಶಾರುಖ್ ಖಾನ್, ಮಹೇಶ್ ಭಟ್‌ರಂತಹವರು, ಅಷ್ಟೇ ಏಕೆ ಸ್ವತಃ ಮಮತಾ ಬ್ಯಾನರ್ಜಿ ಹೇಳಿದ್ದ ಹಾಗೆ, ಭಾರತದಲ್ಲಿ ಈಗ ಸ್ಪಷ್ಟವಾಗಿ ಗೋಚರಿಸುತ್ತಿರುವ ಅಸಹಿಷ್ಣುತೆ, ರಾಜಕೀಯ ಕೆಸರೆರಚಾಟ ಹಾಗೂ ನಕಾರಾತ್ಮಕ ಚಿಂತನೆಗಳ ಬಗ್ಗೆ ತನ್ನ ಆತಂಕಗಳನ್ನು ಖಾಸಗಿಯಾಗಿ ವ್ಯಕ್ತಪಡಿಸಿದರೆನ್ನಲಾಗಿದೆ. ಈ ವಿಷಯವಾಗಿ ಅವರು ಬಹಿರಂಗವಾಗಿ ಮಾತನಾಡುವರೇ ಮತ್ತು ಸೂಕ್ತ ನಿಲುವೊಂದನ್ನು ತೆಗೆದುಕೊಳ್ಳುವರೇ ಎಂಬುದನ್ನು ಕಾದುನೋಡಬೇಕಾಗಿದೆ. ಆದರೆ ಅವರು ಹಾಗೆ ಮಾಡಲಾರರೆಂಬ ಸೂಚನೆಗಳು ದೊರೆಯುತಿವೆ. ಒಂದು ವೇಳೆ ಅವರು ಹಾಗೆ ಮಾಡಿದಲ್ಲಿ ಅವರನ್ನು ದೇಶದ್ರೋಹಿಯೆಂದು ಘೋಷಿಸಲೂಬಹುದೆಂಬುದು ಯಾರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ.

 ಸೋನಿಯಾ ನೆನಪಲ್ಲಿ ಶಶಿಕಪೂರ್

   ಸೋನಿಯಾಗಾಂಧಿ ಅವರು ಶಶಿಕಪೂರ್ ಅಭಿನಯದ ಚಿತ್ರವನ್ನು ಮೊತ್ತಮೊದಲ ಬಾರಿಗೆ ನೋಡಿದ್ದು 1966ರಲ್ಲಿ. ‘‘ ‘ಶೇಕ್ಸ್‌ಪಿಯರ್‌ವಾಲಾ’ ಚಿತ್ರವನ್ನು ಇಂಗ್ಲೆಂಡ್‌ನಲ್ಲಿ 1966ರಲ್ಲಿ ನೋಡಿದ್ದೆನೆಂದು ನಾನು ಭಾವಿಸುತ್ತೇನೆ. ಶಶಿಕಪೂರ್‌ರ ಸುಂದರ ಅಭಿನಯ ಮಾತ್ರವಲ್ಲ, ಆ ಚಿತ್ರವನ್ನು ನೋಡಲು ರಾಜೀವ್ (ಪತಿ) ನನ್ನನ್ನು ಕರೆದುಕೊಂಡು ಹೋಗಿದ್ದುದು ಕೂಡಾ ಅದೊಂದು ಅವಿಸ್ಮರಣೀಯ ಅನುಭವವಾಗುವಂತೆ ಮಾಡಿತು ಎಂದು ಸೋನಿಯಾ, ಅಗಲಿದ ನಟನ ಪುತ್ರಿ ಸಂಜನಾ ಕಪೂರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ‘‘ನಿಮ್ಮ ತಂದೆ ಮನಸೆಳೆಯುವ ಹಾಗೂ ನೇರವಾಗಿ ಹೃದಯದಿಂದಲೇ ಒಲುಮೆಯನ್ನು ಹರಿಸುವಂತಹ ವ್ಯಕ್ತಿತ್ವವುಳ್ಳವರಾಗಿದ್ದರು’’ ಎಂದು ಕಾಂಗ್ರೆಸ್ ನಾಯಕಿ, ಈ ಹಿರಿಯ ನಟನ ನಿಧನದ ಬಳಿಕ ಬರೆದಿರುವ ಈ ಪತ್ರದಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)