ಕೊಹ್ಲಿ- ಅನುಷ್ಕಾ ವಿವಾಹಕ್ಕೆ ಇಟೆಲಿ ರೆಸಾರ್ಟ್ ವೇದಿಕೆ
ಮುಂಬೈ, ಡಿ. 10: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಸಂಬಂಧದ ಬಗ್ಗೆ ಇದ್ದ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಇಟೆಲಿಯಲ್ಲಿ ವಿವಾಹ ಬಂಧನಕ್ಕೆ ಒಳಗಾಗಲು ಉಭಯ ತಾರೆಯರು ನಿರ್ಧರಿಸಿದ್ದಾರೆ.
ಬಹುಶಃ ಮುಂದಿನ ವಾರ ವಿವಾಹ ಸಮಾರಂಭ ನಡೆಯಲಿದ್ದು, ಟ್ಯೂಸೆನಿಯ ರೆಸಾರ್ಟ್ ಒಂದರ ಅದ್ಧೂರಿ ಪಾರಂಪರಿಕ ತಾಣವೊಂದರಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ರೆಸಾರ್ಟ್ಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಆಹ್ವಾನಪತ್ರ ಹೊಂದಿದ ಅತಿಥಿಗಳಿಗಷ್ಟೇ ವಿವಾಹ ಸಮಾರಂಭಕ್ಕೆ ಪ್ರವೇಶ ಇದೆ. ಸಾಂಪ್ರದಾಯಿಕ ಪಂಜಾಬಿ ಶೈಲಿಯಲ್ಲಿ ವಿವಾಹ ಸಿದ್ಧತೆಗಳು ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವೃತ್ತಿಪರ ಭಾಂಗ್ರಾ ಡ್ಯಾನ್ಸರ್ಗಳು ರೆಸಾರ್ಟ್ಗೆ ಈಗಾಗಲೇ ಆಗಮಿಸಿದ್ದಾರೆ. ಡೋಲು ಹಾಗೂ ಡ್ರಮ್ ಬಾರಿಸುವುದು ರೆಸಾರ್ಟ್ನಿಂದ ಕೇಳಿಬರುತ್ತಿದೆ.
ವಿವಾಹ ಸಮಾರಂಭ ಮಧ್ಯಾಹ್ನ ನಡೆಯಲಿದ್ದು, ಸಂಜೆ ಔತಣಕೂಟ ನಡೆಯಲಿದೆ. ಬಳಿಕ ಡಿಸೆಂಬರ್ 26ರಂದು ಕೊಹ್ಲಿ ಮುಂಬೈನಲ್ಲಿ ಅದ್ದೂರಿ ಔತಣಕೂಟ ಇಟ್ಟುಕೊಂಡಿದ್ದಾರೆ. ಶ್ರೀಲಂಕಾ ತಂಡದ ಜತೆಗಿನ ಮೂರನೇ ಟಿ-20 ಪಂದ್ಯ ನಡೆದ ಎರಡನೇ ದಿನಕ್ಕೇ ಔತಣಕೂಟ ನಡೆಯಲಿದೆ.
ಬಿಸಿಸಿಐ ಅಧಿಕಾರಿಗಳು, ಬಾಲಿವುಡ್ ತಾರೆಯರು, ರಾಜಕೀಯ ಮುಖಂಡರು ಹಾಗೂ ಕಾರ್ಪೊರೇಟ್ ಜಗತ್ತಿನ ಅಗ್ರಗಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಡಿಸೆಂಬರ್ 27ರ ಮಧ್ಯರಾತ್ರಿ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ. ಕೇಪ್ಟೌನ್ನಲ್ಲಿ ಮೊದಲ ಟೆಸ್ಟ್ ಪಂದ್ಯ ಜನವರಿ 5ರಂದು ಆರಂಭವಾಗಲಿದೆ.