varthabharthi

ಸಂಪಾದಕೀಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಚಿವರಿಂದ ಹೀಗೊಂದು ಆತ್ಮವಿಮರ್ಶೆಯ ಯಾತ್ರೆ

ವಾರ್ತಾ ಭಾರತಿ : 11 Dec, 2017

ಭಾರತದಲ್ಲಿ ಪಾದಯಾತ್ರೆಗಳಿಗೆ ಸ್ವಾತಂತ್ರಪೂರ್ವದ ಇತಿಹಾಸವಿದೆ. ಬ್ರಿಟಿಷರು ನಮ್ಮನ್ನಾಳುತ್ತಿರುವಾಗ ಇಂತಹ ಹಲವು ಯಾತ್ರೆಗಳು ಗಾಂಧೀಜಿಯ ನೇತೃತ್ವದಲ್ಲಿ ನಡೆದಿವೆ ಮತ್ತು ಅಂತಹ ಯಾತ್ರೆಗಳಿಗೆ ಬ್ರಿಟಿಷರೂ ತಲೆ ಬಾಗಿದ್ದಾರೆ. ಸ್ವಾತಂತ್ರಾ ನಂತರವೂ ದೇಶದಲ್ಲಿ ಹಲವು ಪಾದಯಾತ್ರೆಗಳು ನಡೆದಿವೆ. ಸಾಮಾಜಿಕ ಜಾಗೃತಿಗಾಗಿ ಇಂತಹ ಪಾದಯಾತ್ರೆಗಳನ್ನು ಸಾಮಾಜಿಕ ಸಂಘಟನೆಗಳು, ಹೋರಾಟಗಾರರು ಹಮ್ಮಿಕೊಂಡದ್ದಿದೆ. ಆಳುವ ಸರಕಾರವನ್ನು ಎಚ್ಚರಿಸಲು ವಿರೋಧ ಪಕ್ಷಗಳೂ ಇಂತಹ ಯಾತ್ರೆಯನ್ನು ಹಮ್ಮಿಕೊಂಡ ಹಲವು ಉದಾಹರಣೆಗಳು ನಮ್ಮ ಮುಂದಿವೆ. ರಾಜ್ಯದಲ್ಲಿ ಬಿಜೆಪಿ ಸರಕಾರದ ವಿರುದ್ಧ ಸಿದ್ದರಾಮಯ್ಯ ನೇತೃತ್ವದಲ್ಲಿ ಹಮ್ಮಿಕೊಂಡ ಬಳ್ಳಾರಿ ಯಾತ್ರೆ ಇನ್ನೂ ಹಸಿರಾಗಿದೆ. ಈ ಯಾತ್ರೆಯೇ, ರಾಜ್ಯದಲ್ಲಿ ಗಣಿ ದೊರೆಗಳ ಕುರಿತಂತೆ ಜನರಲ್ಲಿ ಜಾಗೃತಿಯನ್ನು ಬಿತ್ತಿತು ಮಾತ್ರವಲ್ಲ, ರಾಜ್ಯ ಕಾಂಗ್ರೆಸ್‌ಗೆ ಈ ಯಾತ್ರೆ ಪ್ರಾಣವಾಯುವಾಯಿತು. ಪ್ರಭುತ್ವ ಜನವಿರೋಧಿಯಾದಾಗ ಜನರನ್ನು ನೇರವಾಗಿ ತಲುಪಲು ವಿರೋಧ ಪಕ್ಷಗಳಿಗೆ ಮಾತ್ರವಲ್ಲ ಸಾಮಾಜಿಕ ಸಂಘಟನೆಗಳಿಗೆ ಪಾದಯಾತ್ರೆ ಒಂದು ಪರಿಣಾಮಕಾರಿಯಾದ ವಿಧಾನವಾಗಿದೆ.

 ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಉದ್ವಿಗ್ನಕಾರಿ ಕೃತ್ಯಗಳಿಗಾಗಿ ರಾಜ್ಯಮಟ್ಟದಲ್ಲಿ ಸುದ್ದಿಯಲ್ಲಿದೆ. ಕಲ್ಲಡ್ಕದ ಹೆಸರು ಈ ಮೂಲಕ ಬೆಂಗಳೂರಿನಲ್ಲಿ ಹಲವು ಬಾರಿ ಪ್ರತಿಧ್ವನಿಸಿತ್ತು. ರಾಜ್ಯದ ಬಿಜೆಪಿ ಮತ್ತು ಸಂಘಪರಿವಾರ ನಾಯಕರು ಕಲ್ಲಡ್ಕದಲ್ಲಿ ನೆರೆದು ಜನಸಾಮಾನ್ಯರಲ್ಲಿ ಭೀತಿಯನ್ನು ಸೃಷ್ಟಿಸಿದ್ದರು. ಎರಡು ಹತ್ಯೆಗಳು, ಇರಿತಗಳು, ಮೆರವಣಿಗೆ, ಹಲ್ಲೆ, ದಾಳಿ ಹೀಗೆ ಹಲವು ಕಾರಣಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆ ಪದೇ ಪದೇ ನಲುಗಿತ್ತು. ದಕ್ಷಿಣ ಕನ್ನಡದ ಪೊಲೀಸರ ವೈಫಲ್ಯಗಳು ಈ ಸ್ಥಿತಿಗೆ ನೇರ ಕಾರಣವಾಗಿದ್ದವು. ಆದರೆ ಕಾನೂನು ಅವ್ಯವಸ್ಥೆಯನ್ನು ಮಾಧ್ಯಮಗಳು ವರದಿ ಮಾಡುವುದೇ ಕಷ್ಟ ಎನ್ನುವಂತಹ ವಾತಾವರಣ ದಕ್ಷಿಣ ಕನ್ನಡದಲ್ಲಿ ನಿರ್ಮಾಣವಾಯಿತು. ಇಂದಿಗೂ ಕರಾವಳಿ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಹಾಗೆಂದು ಬಂಟ್ವಾಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಶಾಸಕರು ಬಿಜೆಪಿಯವರೆಂದು ತಿಳಿದುಕೊಳ್ಳಬೇಕಾಗಿಲ್ಲ. ಸದಾ ಜಾತ್ಯತೀತ ಮಂತ್ರವನ್ನು ಜಪಿಸುವ ನಾಯಕರೇ ಇಲ್ಲಿನ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿಯನ್ನು ಸೃಷ್ಟಿಸುವುದು ಅವರ ಹೊಣೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಸದಾ ಜಾತ್ಯತೀತ ಮತ್ತು ಸೌಹಾರ್ದ ಮಂತ್ರಗಳನ್ನು ಜಪಿಸುತ್ತಿರುವುದರಿಂದ ತನ್ನ ಅಧಿಕಾರವನ್ನು ಬಳಸಿ ಎಲ್ಲದಕ್ಕೂ ಒಂದು ಪರಿಹಾರವನ್ನು ನೀಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಅವರು ಪೊಲೀಸ್ ಇಲಾಖೆ ತನ್ನ ಮಾತುಗಳನ್ನು ಕೇಳುತ್ತಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿ ಬಹಿರಂಗವಾಗಿ ಅಲವತ್ತುಕೊಂಡರು.

  ಹೀಗೆ ಕಾನೂನು ಸುವ್ಯವಸ್ಥೆಯನ್ನು ಬಿಗಿ ಗೊಳಿಸುವಲ್ಲಿ ಸಂಪೂರ್ಣ ವಿಫಲರಾದ ಉಸ್ತುವಾರಿ ಸಚಿವರು ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದವನ್ನು ಸ್ಥಾಪಿಸಲು ಹೊಸ ದಾರಿ ಕಂಡುಕೊಂಡಿದ್ದಾರೆ. ಅವರು ಪಾದಯಾತ್ರೆಗೆ ಹೊರಟಿದ್ದಾರೆ. ಇಡೀ ಜಿಲ್ಲೆಯ ಆಡಳಿತವನ್ನು ತನ್ನ ಕೈಯಲ್ಲಿಟ್ಟುಕೊಂಡಿರುವ ಈ ಉಸ್ತುವಾರಿ ಸಚಿವರು ಯಾರನ್ನು ಎಚ್ಚರಿಸುವುದಕ್ಕೆ ಪಾದಯಾತ್ರೆ ಹೊರಟಿದ್ದಾರೆ ಎನ್ನುವುದರ ಕುರಿತಂತೆ ಜನಸಾಮಾನ್ಯರು ಇದೀಗ ಗೊಂದಲದಲ್ಲಿ ಬಿದ್ದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೇ ಸರಕಾರದ ಭಾಗವಾಗಿರುವಾಗ, ಅವರು ಪಾದಯಾತ್ರೆ ಹೊರಟಿರುವುದು ಯಾರ ವಿರುದ್ಧ? ಈ ಪಾದಯಾತ್ರೆಯ ಮೂಲಕ ಅವರು ಆಗ್ರಹಿಸುತ್ತಿರುವುದು ಏನು? ಮತ್ತು ಯಾರಲ್ಲಿ ಆಗ್ರಹಿಸಲು ಹೊರಟಿದ್ದಾರೆ? ದಕ್ಷಿಣ ಕನ್ನಡ ಜಿಲ್ಲೆಯ ‘ಬುದ್ಧಿವಂತರು’ ಉತ್ತರಕ್ಕಾಗಿ ತಲೆಕೆರೆದುಕೊಳ್ಳುವಂತಾಗಿದೆ. ಈ ಸಾಮರಸ್ಯ ವಾಕಿಂಗ್ ಬಹುತೇಕ ನಡೆಯಲಿರುವುದು ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಆಗಿದೆ. ತಮ್ಮ ಯಾತ್ರೆಯ ಮೂಲಕ ಅವರು ದುಷ್ಕರ್ಮಿಗಳಿಗೆ, ಮತಾಂಧರಿಗೆ, ಲೂಟಿಕೋರರಿಗೆ, ಗಲಭೆ ಮಾಡಬೇಡಿ ಎಂದು ಮನವಿ ಮಾಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕೋಮುವಾದಿಗಳಿಗೆ, ಮತಾಂಧರಿಗೆ ಛೀಮಾರಿ ಹಾಕಲಿದ್ದಾರೆ. ಇದನ್ನು ಇವರು ಈ ಹಿಂದೆಯೂ ವಿವಿಧ ಭಾಷಣಗಳಲ್ಲಿ ಮಾಡಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಪಾದಯಾತ್ರೆಯನ್ನು ನಡೆಸುವ ಅಗತ್ಯವಿದೆಯೇ? ಇಷ್ಟಕ್ಕೂ ಬಂಟ್ವಾಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀಸಾಮಾನ್ಯ ಹಿಂದೂ ಮುಸ್ಲಿಮರು ಅನ್ಯೋನ್ಯವಾಗಿಯೇ ಇದ್ದಾರೆ. ಜನಸಾಮಾನ್ಯರು ಯಾರೂ ಕೋಮುವಾದಿಗಳೋ, ಮತಾಂಧರೋ ಆಗಿ ಸಮಾಜದ ಶಾಂತಿ ಕೆಡಿಸುತ್ತಿಲ್ಲ. ರಾಜಕೀಯ ಉದ್ದೇಶಗಳುಳ್ಳ ಕೆಲವು ನಿರ್ದಿಷ್ಟ ಹಿಂದೂ, ಮುಸ್ಲಿಮರೊಳಗಿನ ಸಂಘಟನೆಗಳು ಇಂದು ದಕ್ಷಿಣ ಕನ್ನಡದ ಶಾಂತಿಯನ್ನು ಕೆಡಿಸಲು ಹೊರಟಿವೆ. ಅದರ ಹಿಂದೆ ರಾಜಕೀಯ ಕಾರಣಗಳಿವೆ. ಉಸ್ತುವಾರಿ ಸಚಿವರು ಪಾದಯಾತ್ರೆಯ ಮೂಲಕ ಗಲಭೆ ನಡೆಸಬೇಡಿ ಎಂದು ಮನವಿ ಮಾಡಿದರೆ ಅದರಿಂದ ಅವರು ಮನಃ ಪರಿವರ್ತನೆಗೊಂಡು ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಸಹಕಾರ ನೀಡುತ್ತಾರೆ ಎನ್ನುವುದೇ ಹಾಸ್ಯಾಸ್ಪದ. ಅಶ್ರಫ್ ಎನ್ನುವ ಅಮಾಯಕ ರಿಕ್ಷಾ ಚಾಲಕನನ್ನು ಕೊಂದವರು ಅಥವಾ ಶರತ್ ಮಡಿವಾಳ ಎನ್ನುವ ಅಮಾಯಕ ಕಾರ್ಮಿಕನನ್ನು ಕೊಂದವರು ಜನ ಸಾಮಾನ್ಯರಲ್ಲ. ದುಷ್ಕರ್ಮಿಗಳು. ಇಷ್ಟಕ್ಕೂ ಅವರನ್ನು ಅಂತಹ ಕೃತ್ಯಗಳಿಗೆ ಸಿದ್ಧಪಡಿಸಿದವರು ಕಲ್ಲಡ್ಕದಲ್ಲಿ ನಾಯಕರಾಗಿ ಓಡಾಡುತ್ತಿದ್ದಾರೆ. ಈ ದುಷ್ಕರ್ಮಿಗಳನ್ನು ಮಟ್ಟ ಹಾಕಬೇಕಾದರೆ ಉಸ್ತುವಾರಿ ಸಚಿವರು ಒಮ್ಮೆ ಜಿಲ್ಲೆಯಲ್ಲಿ ಎಲ್ಲ ಪೊಲೀಸ್ ಠಾಣೆಗಳಿಗೆ ಪಾದಯಾತ್ರೆ ಮಾಡಬೇಕು ಮತ್ತು ತಮ್ಮ ಉಪದೇಶಗಳನ್ನು, ಕಾನೂನು ಭದ್ರತೆಗಳ ಕುರಿತ ಭಾಷಣಗಳನ್ನು ಆ ಪೊಲೀಸ್ ಠಾಣೆಗಳಲ್ಲಿ ನೀಡಬೇಕು. ಜಾತ್ಯತೀತವಾಗಿ, ಪಕ್ಷಾತೀತವಾಗಿ ಕೆಲಸ ಮಾಡುವುದನ್ನು ಅವರಿಗೆ ಪಾಠ ಮಾಡಬೇಕು. ಆದರೆ ಕಾನೂನು ವ್ಯವಸ್ಥೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿ, ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಸಚಿವರು ಇಂತಹದೊಂದು ಪಾದಯಾತ್ರೆಯ ಪ್ರಹಸನ ಹಮ್ಮಿಕೊಂಡಿದ್ದಾರೆಯೇ ಎಂದು ಜಿಲ್ಲೆಯ ಜನರು ಚಿಂತಿಸುವಂತಾಗಿದೆ.

    ನಾಲ್ಕೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದು ಈಗಲೂ ಸರಕಾರದ ಭಾಗವಾಗಿರುವ ಸಚಿವರಿಗೆ ಜಿಲ್ಲೆಯಲ್ಲಿ ಶಾಂತಿ ಕೆಡಿಸುತ್ತಿರುವವರು, ಸೆಕ್ಷನ್ ಉಲ್ಲಂಘಿಸುತ್ತಿರುವವರು ಯಾರು ಎನ್ನುವುದು ಚೆನ್ನಾಗಿ ಗೊತ್ತಿದೆ. ಬಹುಶಃ ಈ ಪಾದಯಾತ್ರೆ ಸಚಿವರು ತಮ್ಮ ವಿರುದ್ಧ ತಾವೇ ಹಮ್ಮಿಕೊಂಡಿರುವ ಯಾತ್ರೆ ಅಥವಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ, ತಮ್ಮ ವೈಫಲ್ಯದ ಕುರಿತಂತೆ ಜನರಿಗಿರುವ ಅಸಮಾಧಾನವನ್ನು ತಣಿಸಲು ಮಾಡಿರುವ ಯಾತ್ರೆ ಎಂದು ಜನರು ಭಾವಿಸಬೇಕಾಗಿದೆ . ಈ ಯಾತ್ರೆ ಯಾವ ಕಾರಣಕ್ಕೂ ಸೌಹಾರ್ದವನ್ನು ಬಿತ್ತಲಾರದು. ಕನಿಷ್ಠ ಸಚಿವರ ಪಾಲಿಗಾದರೂ ಈ ಯಾತ್ರೆ ಆತ್ಮ ವಿಮರ್ಶೆಯ ಯಾತ್ರೆಯಾಗಲಿ ಎನ್ನುವುದು ಜನರ ಅಪೇಕ್ಷೆ. ಓರ್ವ ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರ ತಪ್ಪು ಒಪ್ಪುಗಳ ವಿಶ್ಲೇಷಣೆಯಾದರೂ ಈ ಯಾತ್ರೆಯ ಸಂದರ್ಭದಲ್ಲಿ ನಡೆಯಲಿ. ತಮ್ಮ ವೈಫಲ್ಯವನ್ನು ಸಾರ್ವಜನಿಕರ ಮುಂದೆ ಒಪ್ಪಿ ಕ್ಷಮೆಯಾಚಿಸಿದ್ದೇ ಆದರೆ, ಪಾದಯಾತ್ರೆ ಸಣ್ಣ ಮಟ್ಟದಲ್ಲಾದರೂ ಯಶಸ್ವಿಯಾದೀತು. ಆದುದರಿಂದ ಪಾದಯಾತ್ರೆಯುದ್ದಕ್ಕೂ ಸಚಿವರು ಕನ್ನಡಿಯೊಂದನ್ನು ಒಯ್ಯಬೇಕಾಗಿದೆ. ಅದರಲ್ಲಿ ತನ್ನ ಮುಖವನ್ನೇ ತಾನು ನೋಡಿಕೊಂಡು ವಿರೂಪವನ್ನು ತಿದ್ದಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)