varthabharthi

ಅನುಗಾಲ

ಕಾಣ್ಕೆ ಕಣ್ಕಟ್ಟುಗಳ ನಡುವೆ

ವಾರ್ತಾ ಭಾರತಿ : 14 Dec, 2017
ಬಾಲಸುಬ್ರಹ್ಮಣ್ಯ ಕಂರ್ಜಪಣೆ

ದೇಶವಿಡೀ ಧಾರ್ಮಿಕ ಮೂಲಭೂತವಾದಕ್ಕೆ ಪುಷ್ಟಿನೀಡುವ ಹಂಬಲದಲ್ಲಿ ರುವಾಗ ಕೆಲವರಾದರೂ ಗಾಂಧಿ ಹುಟ್ಟಿದ ಈ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಇದು ಫಲ ನೀಡುವುದೋ ಇಲ್ಲವೋ ಈಗಲೇ ಹೇಳಲಾಗದು. ಆದರೆ ಕುತೂಹಲ ಸೃಷ್ಟಿಯಾಗಿರುವುದು ಮತ್ತು ಧಾರ್ಮಿಕ ಮೂಲಭೂತವಾದಿಗಳಿಗೆ ಮುಜುಗರವನ್ನು ತಂದಿರುವುದಂತೂ ಹೌದು.


ಭಾರತ ದೇಶದ ಒಂದು ರಾಜ್ಯದ ಚುನಾವಣೆ ಇಷ್ಟೊಂದು ಸದ್ದು ಮಾಡಿದ್ದು ಪ್ರಾಯಃ ಇದೇ ಮೊದಲು. ಗುಜರಾತ್‌ನ ವಿಧಾನಸಭಾ ಚುನಾವಣೆಯಲ್ಲಿ ಯಾರೇ ಗೆಲ್ಲಲಿ, ನೈತಿಕ ಗೆಲುವು ರಾಹುಲ್ ಗಾಂಧಿಯದ್ದೇ ಎಂಬಂತಾಗಿದೆ. ಈ ಬಾರಿ ಹೇಳಿಕೊಳ್ಳುವಂತಹ ಹಿಂಸೆಯೇನೂ ನಡೆಯಲಿಲ್ಲ. ಆದರೆ ಹಿಂಸೆಗಿಂತಲೂ ಘೋರ ಸುಳ್ಳುಗಳು ರಾಜ್ಯವನ್ನಾಳುತ್ತಿವೆ. ಆದರೂ ಮಾಧ್ಯಮ ವರದಿಗಳ ಆಧಾರದ ಮೇಲೆ ಹೇಳುವುದಾದರೆ ಅಲಕ್ಷಿತ ರಾಜಕಾರಣಿಯಂತಿದ್ದ ರಾಹುಲ್‌ಗಾಂಧಿ ಜನಬೆಂಬಲ ಮತ್ತು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪ್ರಮಾಣ ಬಿಜೆಪಿಯ ಬುಡಕ್ಕೆ ಕಂಟಕಪ್ರಾಯವಾಗಿದೆ. ಮಾಧ್ಯಮದವರೂ ಸೇರಿದಂತೆ ರಾಹುಲ್‌ರನ್ನು ನಿರ್ಲಕ್ಷಿಸುತ್ತಿದ್ದವರು, ಆನಂತರ ಗೇಲಿ ಮಾಡುತ್ತಿದ್ದವರು ಈಗ ಕಾಲಡಿಯ ನೀರು ತಮ್ಮ ಕಂಠಮಟ್ಟಕ್ಕೆ ಬಂದುದನ್ನು ಗಾಬರಿಯಿಂದ ಗಮನಿಸುತ್ತಿದ್ದಾರೆ.

ಇದರ ಮೂರ್ತ ಸ್ವರೂಪದಂತೆ ಈ ದೇಶದ ಪ್ರಧಾನಿಯವರು ಆಡಬಾರದ ಮಾತುಗಳನ್ನು ಆಡುತ್ತ ತನ್ನ ಹತಾಶ ಮನೋಭಾವವನ್ನು ಬಿಚ್ಚಿಟ್ಟಿದ್ದಾರೆ. ಇದರ ಮೇರುಸ್ಥಿತಿಯೆಂದರೆ ಗುಜರಾತ್‌ನ ಚುನಾವಣೆಯ ಮೇಲೆ ಪಾಕಿಸ್ತಾನವು ಹಸ್ತಕ್ಷೇಪ ಮಾಡಿದೆ ಎಂಬ ಪ್ರಧಾನಿಯವರ ಮಾತು. ಇದರ ಮೂಲಕ ಕಾಂಗ್ರೆಸಿಗರ ಮೇಲೆ ಗೂಬೆ ಕೂರಿಸುವುದು ಮಾತ್ರವಲ್ಲ, ಅವರ ವಿರುದ್ಧ ದೇಶದ್ರೋಹದ ಗುರುತರ ಆಪಾದನೆಯನ್ನು ಮಾಡಿ ಮತದಾರರನ್ನು ಮರುಳು ಮಾಡುವ ಭಾರೀ ಅಪಾಯದ ಹೆಜ್ಜೆಯನ್ನು ಪ್ರಧಾನಿ ಇಟ್ಟಿದ್ದಾರೆ. ಮಾತ್ರವಲ್ಲ, ಆ ಮೂಲಕ ಪ್ರಧಾನಿ ಸ್ಥಾನದ ಮಾನವನ್ನು ಬಹಿರಂಗ ಹರಾಜಿನ ಮೂಲಕ ಪಣಕ್ಕಿಟ್ಟಿದ್ದಾರೆ. ದಿಲ್ಲಿಯ ಒಂದು ಸಮಾರಂಭದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್, ಮಣಿಶಂಕರ ಅಯ್ಯರ್, ನಟವರಸಿಂಗ್, ಮುಂತಾದ ಧುರೀಣರಲ್ಲದೆ ಹಲವು ಮಾಜಿ ಮತ್ತು ಹಾಲಿ ಸೇನಾ ಮುಖ್ಯಸ್ಥರು ಹಾಜರಿದ್ದರು. ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವರು ಮತ್ತು ಇನ್ನೊಬ್ಬ ಮಾಜಿ ಸೇನಾಧಿಕಾರಿ ಹಾಜರಿದ್ದರಂತೆ. ಇಂತಹ ಸಭೆ ಸಮಾರಂಭಗಳು ಎಲ್ಲ ದೇಶಗಳಲ್ಲೂ ನಡೆಯುತ್ತವೆ. ಈ ಮೂಲಕ ಅನೇಕ ಬಾರಿ ಸಂಬಂಧಗಳು ಸುಧಾರಿಸುವುದೂ ಉಂಟು. ಇವಕ್ಕೆ ರಾಜಕಾರಣದಲ್ಲಿ ಮಹತ್ವದ ಪಾತ್ರವೇನೂ ಇರುವುದಿಲ್ಲ. ಇಂತಹ ಭೇಟಿಗಳ ಸಂದರ್ಭಗಳು ಹಲವಾರು ನಡೆದಿವೆ.

ಪರಸ್ಪರ ವೈರಿಗಳಂತಿದ್ದರೂ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿಯವರ ಮನೆಯ ಸಮಾರಂಭಕ್ಕೆ ಲಾಲೂ ಪ್ರಸಾದ್ ಯಾದವ್ ಹಾಜರಾಗಿದ್ದರು. ಈಚೆಗೆ ಭಾಜಪ ನಾಯಕ ಜಗದೀಶ್ ಶೆಟ್ಟರ್ ಅವರ ಮನೆಯ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಜರಾಗಿದ್ದರು. ಮೋದಿಯವರೇ ಇಂಗ್ಲೆಂಡಿನಿಂದ ಬರುವಾಗ ಅನೌಪಚಾರಿಕವಾಗಿ ಪಾಕ್ ಪ್ರಧಾನಿಯವರ ಮನೆಗೆ ಹೋಗಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿ ಬಂದಿದ್ದಾರೆ. ತಮ್ಮ ಪ್ರಾಮಾಣಿಕತೆಯನ್ನು ಪ್ರಮಾಣೀಕರಿಸಲು ಪಠಾಣಕೋಟ್‌ಗೆ ಐಎಸ್‌ಐಯನ್ನೇ ಆಹ್ವಾನಿಸಿದ್ದಾರೆ. ಜವಾಬ್ದಾರಿಯುತ ಸಜ್ಜನ ರಾಜಕಾರಣಿಗಳು ಇಂತಹ ಭೇಟಿಗೆ ಹೆಚ್ಚಿನ ಅಥವಾ ಅನಗತ್ಯ ಮಹತ್ವವನ್ನು ನೀಡುವುದಿಲ್ಲ. ಗುಜರಾತ್‌ನಲ್ಲಿ ಗೆಲುವು ಶತಸಿದ್ಧ ಎಂದೇ ಬಗೆದಿದ್ದ ಪ್ರಧಾನಿಯವರಿಗೆ ನಿಧಾನಕ್ಕೆ ಅಲ್ಲಿನ ಬೇರುಗಳು ಸಡಿಲವಾದದ್ದು ಗಮನಕ್ಕೆ ಬಂದಿದೆ. ಈ ದೇಶಕ್ಕೆ ಗುಜರಾತ್ ಅಭಿವೃದ್ಧಿ ಮಾದರಿ ಎನ್ನುತ್ತಿದ್ದವರಿಗೆ ಅಲ್ಲಿನ ಬೆತ್ತಲೆ ಅರಸನ ರಾಜರಹಸ್ಯವು ಬಯಲಿಗೆ ಬಂದಿರುವುದು ಮನದಟ್ಟಾಗಿದೆ. ಕಳೆದ ಎರಡು ದಶಕಗಳಿಂದ ಗುಜರಾತ್‌ನ ಪ್ರಜೆಯ ಕತ್ತನ್ನು ಬಿಗಿದ ಅಧಿಕಾರ ಮುಷ್ಟಿಯು ತೆರೆದುಕೊಂಡು ಜನರು ಉಸಿರಾಡುವುದಕ್ಕೆ ಆರಂಭಿಸಿದ್ದಾರೆ.

ಮತೀಯ, ಮೂಲಭೂತವಾದಿ ರಾಜಕಾರಣವು ಜನರನ್ನು ಎಂದಿನಂತೆ ಆಕರ್ಷಿಸಲಾರದು ಎಂಬುದು ಅಲ್ಲಿನ ಮತ್ತು ಕೇಂದ್ರದ ಆಡಳಿತಪಕ್ಷಕ್ಕೆ ಮನವರಿಕೆಯಾದಂತಿದೆ. ಇದರಿಂದಾಗಿ ಗುಜರಾತ್‌ನ ಚುನಾವಣೆಯ ಫಲಿತಾಂಶವು ಪ್ರಧಾನಿಯವರಿಗೆ ಮತ್ತು ಪಕ್ಷಾಧ್ಯಕ್ಷ ಅಮಿತ್‌ಶಾ ಅವರಿಗೆ (ಇವರಿಬ್ಬರೂ ಗುಜರಾತ್‌ನವರೇ!) ಒಂದು ಸವಾಲಾಗಿ ಪರಿಣಮಿಸಿದೆ. ಆರಂಭದಲ್ಲಿ ಇದು ಏಕಪಕ್ಷೀಯ ಚುನಾವಣೆಯೆಂಬಂತಿತ್ತು. ಪ್ರಧಾನಿಯ ವರು ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಂಡು ಹಿಮಾಚಲ ಪ್ರದೇಶದ ಚುನಾವಣೆ ಯನ್ನು ಮೊದಲು ಘೋಷಿಸಿಕೊಂಡು ಗುಜರಾತ್‌ನ ಚುನಾವಣಾ ಘೋಷಣೆಯಾಗ ದಂತೆ ನೋಡಿಕೊಂಡರು. ಅಗತ್ಯವಿರುವ ಜನಪ್ರಿಯ ಚಟುವಟಿಕೆಗಳಾದ ಶಂಕುಸ್ಥಾಪನೆ, ಉದ್ಘಾಟನೆ ಇವೆಲ್ಲವನ್ನು ಗುಜರಾತ್‌ನ ಉದ್ದಗಲಕ್ಕೆ ಮಾಡಿಕೊಂಡು ಆನಂತರವೇ ಚುನಾವಣಾ ಘೋಷಣೆಯನ್ನು ಮಾಡಿಸಿದರು. ಇವಕ್ಕೆಲ್ಲ ಪ್ರತ್ಯಕ್ಷ ಸಾಕ್ಷಿಗಳಿರುವುದಿಲ್ಲ; ಸಾಂದರ್ಭಿಕ ಸಾಕ್ಷ್ಯ ಮಾತ್ರ ಲಭ್ಯ.

ಮೊದಮೊದಲಿಗೆ ಕಾಂಗ್ರೆಸ್ ಗುಜರಾತ್‌ನಲ್ಲಿ ಅಪ್ರಸ್ತುತವೆಂಬಂತಿತ್ತು. ಭಾಜಪದಲ್ಲಿದ್ದು, ಅಲ್ಲಿ ಅತೃಪ್ತಿಗೊಂಡು ಕಾಂಗ್ರೆಸ್ ಸೇರಿದ, ಆನಂತರ ಪ್ರಾಶಸ್ತ್ಯದ ಅಭಾವದಿಂದಾಗಿ ಕಾಂಗ್ರೆಸ್ ತ್ಯಜಿಸಿದ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್ ವಘೇಲಾ ಪ್ರತ್ಯೇಕವಾದದ್ದು ಭಾಜಪಕ್ಕೆ ವರದಾನದಂತಿತ್ತು. ಆದರೆ ನಿಧಾನವಾಗಿ ಪಟ್ಟುಗಳು ಬದಲಾದವು. ಹಾರ್ದಿಕ್ ಪಟೇಲ್, ಜಿಗ್ನೇಶ್ ಮೆವಾನಿ ಮತ್ತಿತರ ಯುವ ನಾಯಕರ ಬೆಂಬಲ, ಪಾಟಿದಾರ್ ಚಳವಳಿ, ದಲಿತರ ಸಂಕಷ್ಟ, ಮತ್ತಿತರ ವಿಚಾರಗಳು ಕಾಂಗ್ರೆಸನ್ನು ಶಕ್ತಗೊಳಿಸಿದವು ಮತ್ತು ತಮ್ಮ ಪಾತ್ರವನ್ನು ಸ್ಪಷ್ಟಗೊಳಿಸಿದವು. ಪರಿಣಾಮವಾಗಿ ಪ್ರಧಾನಿಯೂ ಸೇರಿದಂತೆ ಕೇಂದ್ರದ ಸುಮಾರು 30 ಮಂತ್ರಿಗಳು ಗುಜರಾತ್ ರಾಜ್ಯವೇ ತಮ್ಮ ದೇಶವೆಂಬಂತೆ ಅಲ್ಲಿ ಠಿಕಾಣಿ ಹೂಡಿದರು. ಗುಜರಾತ್ ಇವರಿಗೀಗ ಭಾರತ ಜನನಿಯ ತನುಜಾತೆಯಲ್ಲ, ಭಾರತಮಾತೆಯೇ ಆಗಿದ್ದಾಳೆ. ಕೇಂದ್ರ ಸಚಿವೆ, ಕಿರುತೆರೆ ನಟಿ ಸ್ಮತಿ ಇರಾನಿಯವರು ರಾಹುಲ್ ಗಾಂಧಿಯನ್ನು ‘ಬೆಚಾರಾ’ ಎಂದು ಹೇಳಿದ್ದರು; ಈ ‘ಬಹು’ ಈಗ ಸೆರಗು ಕಟ್ಟಿ ಮತಯಾಚನೆ ಮಾಡುವ ಸ್ಥಿತಿಗೆ ಇಳಿದಿದ್ದಾರೆ. ಇದೆಲ್ಲದರ ಕಳಶಪ್ರಾಯವಾಗಿ ಪ್ರಧಾನಿಯವರ ಈ ಪಾಕ್ ಸಂಬಂಧಿತ ಆರೋಪ ಬರಿಗೊಡಗಳಿಗೆ ಸಮಾಧಾನ ಹೇಳಿದಂತಾಗುತ್ತದೆಯೇ ಅಥವಾ ನಿಜಕ್ಕೂ ಸದ್ದು ಮಾಡಲಿದೆಯೇ ಎಂಬುದು ಫಲಿತಾಂಶದಿಂದಷ್ಟೇ ಗೊತ್ತಾಗಬೇಕು.

ರಾಜಕಾರಣದ ಭಾಷೆ ಹೊಲಸುಗೆಟ್ಟಿದೆಯೆಂಬುದು ಸಾಮಾನ್ಯ ಜ್ಞಾನ. ಗೌರವಸ್ಥರು ರಾಜಕೀಯದ ವ್ಯಕ್ತಿಗಳ ಭಾಷಣವನ್ನು ಕೇಳಲಾಗದು- ಆ ಸ್ಥಿತಿಯಿದೆ. ‘ಬೂಟು ನೆಕ್ಕುವುದು’, ‘ಪಾಪದ ಪಿಂಡ’, ‘ನೀಚ’ ಇವೆಲ್ಲ ಹೊಸ ಸಂಸದೀಯ ಮತ್ತು ಶಾಸನಾತ್ಮಕ ಸಂಪ್ರದಾಯವನ್ನು ಹುಟ್ಟುಹಾಕಿದೆ. ಇಂತಹ ಹೊಸಲು ಬೈಗುಳದ ರಾಜಕಾರಣದಲ್ಲಿ ಮಹಿಳೆಯರೂ ಹಿಂದೆ ಬಿದ್ದಿಲ್ಲವೆಂಬುದನ್ನು ರಾಷ್ಟ್ರ ಮಟ್ಟದಲ್ಲಿ ಸ್ಮತಿ ಇರಾನಿ ಹಾಗೂ ರಾಜ್ಯ ಮಟ್ಟದಲ್ಲಿ ಶೋಭಾ ಕರಂದ್ಲಾಜೆ ಈಗಾಗಲೇ ಸಾಬೀತುಪಡಿಸಿದ್ದರು. ಎದುರಾಳಿಗಳನ್ನು ಗುರಿಯಾಗಿಸಿ ಪ್ರಸಾರ ಮಾಡುತ್ತಿರುವ ನೀಲಿಚಿತ್ರಗಳ ವೀಡಿಯೋ ಕೂಡಾ ದೇಶಭಕ್ತಿಯ ಸರಕಾಗಿದೆ. ಆದರೆ ಬಹುತೇಕ ರಾಜಕಾರಣಿಗಳು ಇಂತಹ ಕೆಟ್ಟ ಬೈಗುಳದ ಮೂಲಕ ಅಪಪ್ರಚಾರಕ್ಕೆ ತಮ್ಮ ಭಾಷಣವನ್ನು ಮೀಸಲಾಗಿರಿಸಿರುವುದರಿಂದ ಮತ್ತು ಇತರ ವೈಚಾರಿಕ ಚರ್ಚೆಯನ್ನು ಮಾಡದಿರುವುದರಿಂದ ಅವರನ್ನು ಕೇಂದ್ರವಾಗಿಟ್ಟುಕೊಂಡು ಒಟ್ಟಾರೆ ರಾಜಕಾರಣದ ಗೊಂದಲಗಳು ಸೃಷ್ಟಿಯಾಗುವುದಿಲ್ಲ. ಇವರೆಲ್ಲ ಸಂಸದರಾಗಿ, ಶಾಸಕರಾಗಿ ತಮ್ಮ ಹಕ್ಕುಚ್ಯುತಿಯ ಕುರಿತು ಮಾತನಾಡುವಾಗ ಶ್ರೀಸಾಮಾನ್ಯನಿಗೆ ಇವರು ಯಾವ ಹಕ್ಕಿನ ಬಗ್ಗೆ ಹೇಳುತ್ತಾರೆಂದು ಗೊತ್ತಾಗದೆ- ಮನುಷ್ಯರ ಹಕ್ಕಿನ ಕುರಿತಂತೂ ಅಲ್ಲ- ಏಕೆಂದರೆ ಅದು ಅತೀ ವೇಗವಾಗಿ ಮಾಯವಾಗುತ್ತಿದೆ- ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ.

ಆದರೆ ಪ್ರಧಾನಿಯಂತಹ ಸಾಂವಿಧಾನಿಕ ಹುದ್ದೆಯಲ್ಲಿರುವವರು ತಾವು ಪಕ್ಷದ ಪ್ರಧಾನಿಯಲ್ಲ, ದೇಶದ ಪ್ರಧಾನಿಯೆಂಬುದನ್ನು ಮರೆತರೆ ಈಗ ಗುಜರಾತ್‌ನಲ್ಲಿ ನಡೆಯುವುದು ದೇಶದ ಎಲ್ಲೆಡೆ ನಡೆದೇ ನಡೆಯುತ್ತದೆ. ಕಾಂಗ್ರೆಸಿನ ಮಣಿಶಂಕರ ಅಯ್ಯರ್ ಅವರು ಪ್ರಧಾನಿಯನ್ನು ನೀಚ ಎಂದದ್ದು ಭಾರೀ ವಿವಾದಕ್ಕೆ ಕಾರಣವಾಗಿ ಅವರನ್ನು ಕಾಂಗ್ರೆಸ್ ಪಕ್ಷವು ಸದಸ್ಯತ್ವದಿಂದ ಹೊರಹಾಕಿದೆ. ರಾಜಕೀಯದಲ್ಲಿ ಭಾಷಾಶುದ್ಧತೆ, ಭಾಷಾಗೌರವಗಳನ್ನು ಇಷ್ಟಾದರೂ ಮಡಿಯಾಗಿಟ್ಟುಕೊಳ್ಳಬೇಕೆಂದು ಕಾಂಗ್ರೆಸ್ ಭಾವಿಸಿದ್ದು ಅದರ ಭವಿಷ್ಯಕ್ಕೆ ಪೂರಕವಾಗುತ್ತದೆ. ಆದರೆ ಈಗ ಪ್ರಧಾನಿಯವರು ನಡೆದುಕೊಳ್ಳುವ ರೀತಿಯನ್ನು ಗಮನಿಸಿದರೆ ಅಯ್ಯರ್ ತಪ್ಪುಮಾಡಿಲ್ಲವೇನೋ ಎಂದೂ ಅನ್ನಿಸುತ್ತದೆ. ಪ್ರಧಾನಿಯವರ ಹಾದಿ ಸ್ಪಷ್ಟ: ಜನರ ಭಾವನೆಗಳನ್ನು, ಜಾತಿಯ, ಮತದ, ಭಾಷೆಯ, ಹುಟ್ಟಿನ ಆಧಾರದಲ್ಲಿ ಹೇಗೆ ಬೇಕೆಂದರೆ ಹಾಗೆ ತಿರುಚಿ, ಪ್ರಚೋದಿಸುವುದು. ಅದರ ಲಾಭವನ್ನು ಮತಪೆಟ್ಟಿಗೆಗೆ ಬೀಳುವಂತೆ ನೋಡಿಕೊಳ್ಳುವುದು. ದೇಶವನ್ನು ಕಾಂಗ್ರೆಸ್ ಮುಕ್ತ ಮಾಡಲು ಹೊರಟ ಭಾಜಪವು ರಾಹುಲ್ ಗಾಂಧಿಯವರನ್ನು ಲೇವಡಿ ಮಾಡಿ ಜನರೆದುರು ತಾವು ಹಗುರಾದದ್ದು ಸ್ಪಷ್ಟವಾಗಿದೆ.

ಪ್ರಾಯಃ ಭಾಜಪದ ಈ ಟೀಕೆಗಳಲ್ಲದಿರುತ್ತಿದ್ದರೆ ರಾಹುಲ್ ರಾಜಕಾರಣದ ಪಕ್ವತೆಯನ್ನಾಗಲೀ, ಆಶಾದಾಯಕವೆನಿಸುವ ಹೊಸ ಬೆಳವಣಿಗೆಯನ್ನು ಕಾಣುತ್ತಿರಲಿಲ್ಲ ಮತ್ತು ಅವರ ಪಕ್ಷ ಇಷ್ಟೊಂದು ಮೈಕೊಡವಿಕೊಂಡು ಫೀನಿಕ್ಸ್ ಹಕ್ಕಿಯಂತೆ ಎದ್ದುನಿಲ್ಲುತ್ತಿರಲಿಲ್ಲ. ಈ ಕಾರಣಕ್ಕಾಗಿ ಕಾಂಗ್ರೆಸ್ ಮೋದಿಪಡೆಗೆ ಧನ್ಯವಾದ ಹೇಳಲೇಬೇಕು. ಮೋದಿ ಮತ್ತು ಅವರ ಬಹುಪಾಲು ಪ್ರಚಾರಕರು ತಮ್ಮ ಬಗ್ಗೆ ಹೇಳಿಕೊಂಡದ್ದು ಕಡಿಮೆ; ಪ್ರಚಾರ ಭಾಷಣಗಳನ್ನು ಅವಲೋಕಿಸಿದರೆ ಅವರು ಅಭಿವೃದ್ಧಿಯ ಮಂತ್ರವನ್ನು ಮರೆತು ರಾಹುಲ್ ನಾಮವನ್ನುಚ್ಛರಿಸಿದ್ದೇ ಹೆಚ್ಚು. ಇವೆಲ್ಲದರ ನಡುವೆಯೂ ಭಾಜಪವು ಚುನಾವಣೆಯ ಜನಾದೇಶದಲ್ಲಿ ಅನುಕೂಲಸ್ಥಿತಿಯಲ್ಲಿದೆಯೆಂದಾದರೆ ಅದು ಅವರ ಪಾಲಿನ ಅದೃಷ್ಟವೂ ದೇಶದ ಪಾಲಿನ ದುರದೃಷ್ಟವೂ ಹೌದು.
ಕೆೇವಲ ಹದಿನೈದು ವರ್ಷಗಳ ಹಿಂದೆ ಭೀಕರ ರಕ್ತಕಾಂಡವನ್ನು ಕಂಡ ಗುಜರಾತ್ ಗಾಂಧಿಗೆ ಎಂದೋ ತಿಲಾಂಜಲಿ ಅರ್ಪಿಸಿದೆ. ಅಲ್ಲೀಗ ಇರುವುದು ಗಾಂಧಿಯ ಸ್ಮಾರಕ ಮಾತ್ರ. ಆನಂತರ ಸಬರಮತಿಯಲ್ಲಿ ಬಹಳಷ್ಟು ನೀರು ಹರಿದಿದೆಯಾದರೂ ಆಡಳಿತ ಬದಲಾಗಿಲ್ಲ. ಅನೇಕ ಅಪರಾಧಪ್ರಕರಣಗಳು ಇನ್ನೂ ವಿಚಾರಣೆಯ ಹಂತದಲ್ಲಿವೆ. ಅನೇಕ ಅಮಾಯಕರೂ ಜೈಲುಪಾಲಾಗಿದ್ದಾರೆ. ಹಲವು ತಪ್ಪಿತಸ್ಥ ರಾಜಕೀಯ ನಾಯಕರು ಅಧೀನ ನ್ಯಾಯಾಲಯಗಳಲ್ಲಿ ಶಿಕ್ಷೆಗೆ ಗುರಿಯಾದರೂ ಜಾಮೀನಿನ ಮೇಲೆ ಬಿಡುಗಡೆಯಾಗಿ ಇನ್ನೂ ರಾಜಕೀಯ ಮಾಡುತ್ತಲೇ ಇದ್ದಾರೆ. ನರ್ಮದೆಯ ನೀರನ್ನು ಗುಜರಾತಿಗೆ ಹರಿಸಲಾಗಿದೆಯಾದರೂ ಜನರ ಬವಣೆ ತಪ್ಪಿಲ್ಲ. ಗುಜರಾತ್‌ನ ವ್ಯಾಪಾರಿ ವರ್ಗ ತಮ್ಮ ಅನುಕೂಲತೆಗಳನ್ನಷ್ಟೇ ನೋಡುವುದರಿಂದ ಯಾವಾಗ ಬೇಕೆಂದರೆ ಆಗ ಸರಕಾರ ಅವರನ್ನು ತೃಪ್ತಿಗೊಳಿಸಬಹುದು. ಕೇಂದ್ರ ಸರಕಾರ ಈ ಕಾರಣಕ್ಕಾಗಿಯೇ ಕೆಲವೊಂದು ವ್ಯಾಪಾರಿ ಸಾಮಗ್ರಿಗಳ ಜಿಎಸ್‌ಟಿ ದರಗಳನ್ನು ಕಡಿಮೆಮಾಡಿದೆಯೆಂಬ ಆರೋಪವೂ ಇದೆ. ಗುಜರಾತಿಗೆ ಅನೇಕ ಕೈಗಾರಿಕಾ ಬಂಡವಾಳ ಹರಿದು ಬಂದಿದೆಯಾದರೂ ಅದು ಅಲ್ಲಿನ ಬಡವರ, ಆದಿವಾಸಿಗಳ, ಅಲ್ಪಸಂಖ್ಯಾತರ ಕಣ್ಣೀರನ್ನು ಒರೆಸು ವಲ್ಲಿ ಯಶಸ್ವಿಯಾಗಿಲ್ಲವೆಂದು ತಜ್ಞರೇ ಹೇಳುತ್ತಾರೆ.

ಇವೆಲ್ಲದರ ಮತ್ತು ಇವರೆಲ್ಲರ ಮಧ್ಯೆ ಮೋದಿ-ಶಾದ್ವಯರಿಗೆ ಚಳಿ ಮೂಡಿಸಿದ ಈ ಚಳಿಗಾಲದ ಅನಧಿಕೃತ ಅಧಿವೇಶನಕ್ಕೆ ಜೈ ಅನ್ನಲೇ ಬೇಕು. ದೇಶವಿಡೀ ಧಾರ್ಮಿಕ ಮೂಲಭೂತವಾದಕ್ಕೆ ಪುಷ್ಟಿನೀಡುವ ಹಂಬಲದಲ್ಲಿ ರುವಾಗ ಕೆಲವರಾದರೂ ಗಾಂಧಿ ಹುಟ್ಟಿದ ಈ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಇದು ಫಲ ನೀಡುವುದೋ ಇಲ್ಲವೋ ಈಗಲೇ ಹೇಳಲಾಗದು. ಆದರೆ ಕುತೂಹಲ ಸೃಷ್ಟಿಯಾಗಿರುವುದು ಮತ್ತು ಧಾರ್ಮಿಕ ಮೂಲಭೂತವಾದಿಗಳಿಗೆ ಮುಜುಗರವನ್ನು ತಂದಿರುವುದಂತೂ ಹೌದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)