varthabharthi

ಸಂಪಾದಕೀಯ

ಗಲಭೆಗಳ ಹಿಂದಿರುವ ವಿದ್ಯಾವಂತರು

ವಾರ್ತಾ ಭಾರತಿ : 15 Dec, 2017

ಯಾವುದೇ ಕೋಮುಗಲಭೆಗಳು ಅನಕ್ಷರಸ್ಥರಿಂದ, ಶ್ರೀಸಾಮಾನ್ಯರ ಕಾರಣದಿಂದ ಸೃಷ್ಟಿಯಾದ ಉದಾಹರಣೆಗಳಿಲ್ಲ. ಒಂದು ವ್ಯವಸ್ಥಿತವಾದ ಯೋಜನೆಯ ಬಳಿಕವೇ ಗಲಭೆ ಸ್ಫೋಟಗೊಳ್ಳುತ್ತದೆ ಮತ್ತು ಈ ಯೋಜನೆಯ ನೀಲನಕ್ಷೆಯ ಹಿಂದೆ ವಿದ್ಯಾವಂತರ ಪಾತ್ರವಿರುತ್ತದೆ. ಮುಂಬೈ ಗಲಭೆ, ಗುಜರಾತ್ ಗಲಭೆ ಸ್ಫೋಟಕ್ಕೆ ಶ್ರೀಸಾಮಾನ್ಯನ ಆಕ್ರೋಶ ಕಾರಣ ಎಂದು ಬಿಂಬಿಸಲಾಯಿತಾದರೂ, ಪತ್ರಕರ್ತರು ಮತ್ತು ಪೊಲೀಸರ ವೇಷದಲ್ಲಿದ್ದ ಸಂಘಪರಿವಾರ ಕಾರ್ಯಕರ್ತರೇ ಗಲಭೆಗೆ ನಿಜವಾದ ಕಾರಣಕರ್ತರಾಗಿದ್ದರು. ಸಂವಿಧಾನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸಬೇಕಾದವರೇ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೋಮುಗಲಭೆಗಳಿಗೆ ಕಾರಣರಾಗುತ್ತಿರುವುದು ದೇಶದ ಸದ್ಯದ ಆತಂಕವಾಗಿದೆ.

ಪುಡಿ ರೌಡಿಗಳು, ಕಾರ್ಯಕರ್ತರು ಈ ಸಜ್ಜನ ವೇಷಧಾರಿಗಳ ಆಯುಧಗಳಾಗಿ ಬಳಕೆಯಾಗುತ್ತಿದ್ದಾರೆ. ಹೊನ್ನಾವರದಲ್ಲಿ ನಡೆದಿರುವ ಘಟನೆಯನ್ನೇ ನೋಡಿ. ಪರೇಶ್ ಮೇಸ್ತಾ ಎಂಬಾತನ ಸಾವು ಸಂಭವಿಸಿದಾಗ ಜನಸಾಮಾನ್ಯರು ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಶೋಭಾ ಕರಂದ್ಲಾಜೆಯಂತಹ ನಾಯಕಿಯೊಬ್ಬರು ಮಾಧ್ಯಮಗಳ ಮುಂದೆ, ಬಾಯಿಗೆ ಬಂದಂತೆ ಮಾತನಾಡಿದ್ದೇ ಗಲಭೆಗೆ ಕಾರಣವಾಯಿತು. ಅಷ್ಟೇ ಅಲ್ಲ, ಸಾಮಾಜಿಕ ತಾಣಗಳಲ್ಲಿ ಮೇಸ್ತಾನ ಸಾವಿನ ಕುರಿತಂತೆ ವಿದ್ಯಾವಂತರೆನಿಸಿಕೊಂಡ ಜನರೇ ವದಂತಿಗಳನ್ನು ಹಬ್ಬಿಸಿದರು. ಅವರೆಲ್ಲರಿಗೂ ಅಶಾಂತಿ ಎಬ್ಬಿಸಲು ಒಂದು ಕಾರಣ ಬೇಕಿತ್ತು. ಮತ್ತು ಆ ಕಾರಣವನ್ನು ಸೃಷ್ಟಿಸಿಕೊಟ್ಟಿರುವುದು ವಿದ್ಯಾವಂತರು. ಇದೇ ಸಂದರ್ಭದಲ್ಲಿ ಸಂವಿಧಾನದ ರಕ್ಷಣೆಯ ಹೊಣೆ ಹೊತ್ತ ವ್ಯವಸ್ಥೆಯೂ ಈ ಕೋಮುಗಲಭೆಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು ಇನ್ನಷ್ಟು ಅಪಾಯಕಾರಿ ಬೆಳವಣಿಗೆಯಾಗಿದೆ. ಹೊನ್ನಾವರದ ಗಲಭೆ ಪ್ರಕರಣದಲ್ಲೂ ಇದು ಸಂಭವಿಸಿದೆ. ಬಂಧಿತರಾಗಿರುವ ಒಂದು ನಿರ್ದಿಷ್ಟ ಸಮುದಾಯದ ಆರೋಪಿಗಳ ಪರವಾಗಿ ವಕಾಲತ್‌ಗೆ ಕೆಲವು ವಕೀಲರು ನಿರಾಕರಿಸಿದ್ದಾರೆ ಎಂದು ಸಂತ್ರಸ್ತರು ಹೇಳುತ್ತಿದ್ದಾರೆ.

ಒಂದು ಮೂಲದ ಪ್ರಕಾರ, ವಕೀಲರ ಸಂಘವೇ ಈ ನಿರ್ದೇಶನವನ್ನು ವಕೀಲರಿಗೆ ನೀಡಿದೆಯಂತೆ. ಆದರೆ ಅಧಿಕೃತವಾಗಿ ವಕೀಲರ ಸಂಘದ ಅಧ್ಯಕ್ಷರು ಇದನ್ನು ಒಪ್ಪುತ್ತಿಲ್ಲ. ಆದರೆ ಸಂತ್ರಸ್ತರ ಪರವಾಗಿ ವಾದಿಸಲು ವಕೀಲರು ನಿರಾಕರಿಸುತ್ತಿರುವುದಂತೂ ಸತ್ಯ. ಹೊನ್ನಾವರದಲ್ಲಿ ನಡೆದಿರುವ ಗಲಭೆಗೂ ಈ ವಕೀಲರಿಗೂ ಏನು ಸಂಬಂಧ? ಇವರು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೂಗಿನ ನೇರಕ್ಕೆ ನ್ಯಾಯಾಲಯದಲ್ಲಿ ವಾದಿಸಲು ಇರುವವರೇ ಅಥವಾ ಸಂವಿಧಾನಕ್ಕೆ ಬದ್ಧರಾಗಿ ವಾದಮಾಡಬೇಕಾದವರೇ? ಗಲಭೆಗೆ ಸಂಬಂಧಿಸಿ ಒಬ್ಬ ವ್ಯಕ್ತಿಯನ್ನು ಬಂಧಿಸಿದಾಕ್ಷಣ ಆತ ಗಲಭೆಯಲ್ಲಿ ಭಾಗಿಯಾಗಿರಬೇಕಾಗಿಲ್ಲ. ಅದನ್ನು ತೀರ್ಮಾನ ಮಾಡಬೇಕಾದವರು ನ್ಯಾಯಾಧೀಶರು. ವಕೀಲರು ಸಂವಿಧಾನಕ್ಕೆ ಪೂರಕವಾಗಿ ಕೆಲಸ ಮಾಡಬೇಕಾದವರು. ಸಂವಿಧಾನ ಬೋಧಿಸುವ ಜಾತ್ಯತೀತ ಆಶಯಗಳನ್ನು ಎತ್ತಿ ಹಿಡಿಯಬೇಕಾದವರು. ಇಂತಹ ವಕೀಲರೇ ಇಂದು ಕೋಮುವಿಷವನ್ನು ಹರಡುವ ಪ್ರತಿನಿಧಿಗಳಾದರೆ ಜನಸಾಮಾನ್ಯರು ಯಾರಿಂದ ನ್ಯಾಯ ಪಡೆಯಬೇಕು?

ಹೊನ್ನಾವರದಲ್ಲಿ ನಡೆದಿರುವುದು ಏನು ಎನ್ನುವುದು ಕಾನೂನು ಓದಿರುವ ವಕೀಲರಿಗೆ ಚೆನ್ನಾಗಿಯೇ ಗೊತ್ತು. ಅಧಿಕೃತ ಪೋಸ್ಟ್ ಮಾರ್ಟಂ ವರದಿಯ ಬಗ್ಗೆಯೂ ಅವರಿಗೆ ವಿವರಗಳಿವೆ. ಯುವಕನದ್ದು ಆತ್ಮಹತ್ಯೆಯೋ, ಕೊಲೆಯೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಕೊಲೆಯೇ ಆಗಿದ್ದರೂ ಅದನ್ನು ಇಂತಹ ನಿರ್ದಿಷ್ಟ ಸಮುದಾಯದ ಜನರೇ ಮಾಡಿದ್ದಾರೆ ಎನ್ನುವುದನ್ನು ಕಂಡವರೂ ಇಲ್ಲ. ಹೀಗಿರುವಾಗ, ಹೊನ್ನಾವರದ ವಕೀಲರು ಎಲ್ಲ ಸಾಕ್ಷಾಧಾರಗಳನ್ನು ಬದಿಗಿಟ್ಟು ಸಂಘಪರಿವಾರದ ದುಷ್ಕರ್ಮಿಗಳ ಜೊತೆಗೆ ತಾವು ಗುರುತಿಸಿಕೊಳ್ಳಲು ಹೊರಟಿರುವುದು ಸಂವಿಧಾನಕ್ಕೆ ಮಾಡಿದ ಅವಮಾನವಾಗಿದೆ. ಇಂದು ಸಂವಿಧಾನದ ಭಾಗವಾಗಿ ಕಾರ್ಯನಿರ್ವಹಿಸಬೇಕಾದ ಪೊಲೀಸರು, ವಕೀಲರು ಪರೋಕ್ಷವಾಗಿ ಸಂವಿಧಾನದ ವಿರುದ್ಧ ಕೆಲಸ ಮಾಡುತ್ತಿರುವುದರಿಂದ ಇಂದು ಕೋಮುಗಲಭೆಗಳು ಹೆಚ್ಚುತ್ತಿವೆಯೇ ಹೊರತು, ಶ್ರೀಸಾಮಾನ್ಯರ ಅಮಾಯಕತೆಯಿಂದ ಅಲ್ಲ ಎನ್ನುವುದನ್ನು ಈ ವಕೀಲರ ವರ್ತನೆಯ ಮೂಲಕ ನಾವು ಅರ್ಥ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಬಿಜೆಪಿಯ ಶಾಸಕರೊಬ್ಬರು ಹೇಳಿದಂತೆ, ಪೊಲೀಸ್ ಇಲಾಖೆಯೊಳಗೇ ಅತ್ಯಧಿಕ ಸಂಖ್ಯೆಯಲ್ಲಿ ಸಂವಿಧಾನ ವಿರೋಧಿಗಳು ಸೇರಿಕೊಂಡಿದ್ದಾರೆ

. ಪೊಲೀಸರು ನಿಷ್ಪಕ್ಷಪಾತವಾಗಿ ವರ್ತಿಸುವ ಯಾವುದೇ ಠಾಣಾ ವ್ಯಾಪ್ತಿಗಳಲ್ಲಿ ದುಷ್ಕರ್ಮಿಗಳು ಬಾಲ ಬಿಚ್ಚುವ ಧೈರ್ಯ ಮಾಡುವುದಿಲ್ಲ. ಪೊಲೀಸ್ ಇಲಾಖೆ ದುಷ್ಕರ್ಮಿಗಳ ಕುರಿತಂತೆ ಮೃದುವಾಗಿ ವರ್ತಿಸಿದಾಗ, ಅದು ಗಲಭೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಸಂವಿಧಾನ ವಿರೋಧಿ ಶಕ್ತಿಗಳ ಜೊತೆಗೆ ಪೊಲೀಸ್ ಇಲಾಖೆ ಮತ್ತು ನ್ಯಾಯವ್ಯವಸ್ಥೆಗೆ ಸಂಬಂಧಪಟ್ಟವರು ಹೊಂದಿರುವ ಅನೈತಿಕ ಸಂಬಂಧವೇ ಕೋಮುಗಲಭೆಗಳಿಗೆ ಮುಖ್ಯ ಕಾರಣ. ಕಲ್ಲು ತೂರಾಟ ನಡೆಸಿ ಅಥವಾ ಬೆಂಕಿ ಹಚ್ಚಿ ಜೈಲು ಸೇರಿದವರಿಗಿಂತ ಹೆಚ್ಚು ಅಪಾಯಕಾರಿಗಳು ಅವರನ್ನು ಬೆಂಬಲಿಸುವ ಸಂವಿಧಾನದ ಭಾಗವಾಗಿರುವ ಜನರು. ಇದು ದೇಶದ ದುರಂತವಾಗಿದೆ.

ರಾಜಸ್ಥಾನದ ಘಟನೆಯನ್ನು ತೆಗೆದುಕೊಳ್ಳೋಣ. ಶಂಭುಲಾಲ್ ಎಂಬಾತ ಓರ್ವ ಕಾರ್ಮಿಕನನ್ನು ಅತ್ಯಂತ ಬರ್ಬರವಾಗಿ ರಾಕ್ಷಸೀಯವಾಗಿ ಕೊಂದು ಹಾಕಿ ಅದನ್ನು ಚಿತ್ರೀಕರಿಸುತ್ತಾನೆ ಮತ್ತು ತಾನು ನಡೆಸಿದ ಕೊಲೆಗೆ ಲವ್‌ಜಿಹಾದ್ ಕಾರಣ ಎಂದೂ ಹೇಳುತ್ತಾನೆ. ಆದರೆ ಲವ್‌ಜಿಹಾದ್‌ಗೂ ಹತ್ಯೆಗೊಂಡ ಕಾರ್ಮಿಕನಿಗೂ ಯಾವ ಸಂಬಂಧವೂ ಇಲ್ಲ. ಶಂಭುಲಾಲ್ ನೋಟು ನಿಷೇಧದ ಬಳಿಕ ವ್ಯವಹಾರದಲ್ಲಿ ನಷ್ಟವುಂಟಾಗಿ ಅಪಾರ ಸಾಲದಲ್ಲಿ ಸಿಲುಕಿಕೊಂಡಿದ್ದ. ಒಂದು ರೀತಿಯಲ್ಲಿ ಮಾನಸಿಕ ಸ್ಥಿಮಿತತೆಯನ್ನೂ ಕಳೆದುಕೊಂಡಿದ್ದ. ತನ್ನ ಅಸಹಾಯಕತೆ, ಹತಾಶೆಯನ್ನು ಯಾರ ಮೇಲಾದರೂ ವ್ಯಕ್ತಪಡಿಸಬೇಕಾಗಿತ್ತು. ಆದುದರಿಂದ, ಲವ್ ಜಿಹಾದ್‌ನ್ನು ನೆಪವಾಗಿಟ್ಟುಕೊಂಡು ಒಬ್ಬ ಅಮಾಯಕನನ್ನು ಬರ್ಬರವಾಗಿ ಕೊಂದ. ಆದರೆ ನಾವು ಆತಂಕ ಪಡಬೇಕಾದುದು ಅದರನಂತರ ನಡೆದ ಬೆಳವಣಿಗೆಗಳ ಕುರಿತಂತೆ. ವಿಪರ್ಯಾಸವೆಂದರೆ ಇಂತಹದೊಂದು ಭೀಕರ ಕೃತ್ಯವೆಸಗಿದ ಎರಡು ವಾರಗಳ ಬಳಿಕ, ಇದೀಗ ಆತನನ್ನು 'ಹೀರೋ' ಎಂದು ಬಿಂಬಿಸಲು ವಿದ್ಯಾವಂತ ವರ್ಗವೊಂದು ಹೊರಟಿದೆ. ಆತನಿಗಾಗಿ ಸುಮಾರು 3 ಲಕ್ಷ ರೂಪಾಯಿ ಸಂಗ್ರಹಿಸಿ ಖಾತೆಗೆ ಹಾಕಿದೆ. ಇವರೆಲ್ಲರೂ ಸಂಘಪರಿವಾರ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವವರು.

ಮಾನಸಿಕ ಅಸ್ವಸ್ಥನೊಬ್ಬ ಕೊಲೆ ಮಾಡಿರುವುದಕ್ಕಿಂತಲೂ ಭೀಕರವಾದುದು, ಕೊಲೆಗಾರನನ್ನು ಹೀರೋ ಮಾಡಿ ಆತನಿಗೆ ನಗದು ಪುರಸ್ಕಾರವನ್ನು ನೀಡುವುದು.ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಕ್ರಿಮಿನಲ್‌ಗಳನ್ನು ಸೃಷ್ಟಿಸುವ ಸ್ಪಷ್ಟ ಉದ್ದೇಶವನ್ನು ಹೊಂದಿದೆ. ಒಂದು ರೀತಿಯಲ್ಲಿ, ಕೊಲೆಯ ಹಿಂದಿರುವ ನಿಜವಾದ ಪಾತ್ರಗಳು ಈ ನಗದು ಪುರಸ್ಕಾರ ನೀಡಿದವರೇ ಆಗಿದ್ದಾರೆ. ಅವರಿಗೆ ಶಿಕ್ಷೆಯಾಗದೆ ಶಂಭುಲಾಲ್ ಒಬ್ಬನಿಗೆ ಶಿಕ್ಷೆಯಾಗುವುದರಿಂದ ಸಮಾಜವನ್ನು ರಕ್ಷಿಸುವುದಕ್ಕೆ ಸಾಧ್ಯವಿಲ್ಲ.

ಬೀದಿಯಲ್ಲಿ ಕೊಲೆ, ಸುಲಿಗೆ, ಬೆಂಕಿ ಹಚ್ಚಿ ಜೈಲಿಗೆ ಹೋಗುತ್ತಿರುವ ತರುಣರು ನಿಜವಾದ ಅರ್ಥದಲ್ಲಿ ಬಲಿ ಪಶುಗಳು. ಅವರನ್ನು ಅದಕ್ಕಾಗಿಯೇ ಸಿದ್ಧಪಡಿಸುವ ವಿದ್ಯಾವಂತರ ಮುಖವಾಡದಲ್ಲಿರುವ ದುಷ್ಕರ್ಮಿಗಳೇ ನಿಜವಾದ ಅಪರಾಧಿಗಳು. ತಮ್ಮ ತಮ್ಮ ಮನೆಗಳಲ್ಲಿ, ಕಚೇರಿಗಳಲ್ಲಿ, ನ್ಯಾಯಸ್ಥಾನದಲ್ಲಿ, ಪೊಲೀಸ್ ಠಾಣೆಯಲ್ಲಿ ಕುಳಿತು ಹಲ್ಲೆ, ಕೊಲೆಗಳನ್ನು ಸಂಭ್ರಮಿಸುವ ಮನಸ್ಥಿತಿಗಳು ಇತ್ತೀಚೆಗೆ ಹೆಚ್ಚುತ್ತಿವೆ. ಸಂವಿಧಾನದ ಮಗ್ಗುಲ ಮುಳ್ಳಾಗಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಪುರೋಹಿತಶಾಹಿ ವ್ಯವಸ್ಥೆ, ಮನುವಾದಿ ಮನಸ್ಸುಗಳು ಇವರನ್ನು ನಿಯಂತ್ರಿಸುತ್ತಿವೆ. ಅಪರಾಧಿಗಳ ಮರೆಯಲ್ಲಿರುವ ಈ ಸಜ್ಜನ ಮುಖವಾಡದ ವಿದ್ಯಾವಂತರ ಕುರಿತಂತೆ ದೇಶ ಜಾಗೃತವಾಗಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)