varthabharthi

ಸಿನಿಮಾ

ಒಡಿಯಾನ್ ಗಾಗಿ ಸ್ಲಿಮ್ ಆದ ಲಾಲೇಟನ್

ವಾರ್ತಾ ಭಾರತಿ : 15 Dec, 2017

ಭಾರೀ ದೊಡ್ಡ ಬಜೆಟ್‌ನೊಂದಿಗೆ ನಿರ್ಮಾಣಗೊಳ್ಳುತ್ತಿರುವ ಮಲಯಾಳಂ ಸಿನೆಮಾ ಒಡಿಯಾನ್‌ನಲ್ಲಿ, ಮೋಹನ್‌ಲಾಲ್ ತನ್ನ ಅಭಿಮಾನಿಗಳಿಗೊಂದು ಅಚ್ಚರಿ ನೀಡಲಿದ್ದಾರೆ. ಚಿತ್ರದ ಕಥಾನಾಯಕ ಒಡಿಯಾನ್ ಮಾಣಿಕ್ಯನ್ ಹದಿಹರೆ ಯದ ಯುವಕನಾಗಿರುವಾಗಿನ ದೃಶ್ಯಗಳಲ್ಲಿ ಅಭಿನಯಿಸುವುದಕ್ಕೋಸ್ಕರ ಅವರು ತಮ್ಮ ದೇಹತೂಕವನ್ನು ಇಳಿಸಿಕೊಂಡಿದ್ದಾರೆ.

ಎಲ್ಲಾ ರೀತಿಯ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುವ 57 ವರ್ಷದ ಮೋಹನ್‌ಲಾಲ್, ಕೇವಲ ಒಂದೂವರೆ ತಿಂಗಳಲ್ಲಿ ತನ್ನ ದೇಹ ತೂಕ ಇಳಿಸಿಕೊಳ್ಳುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ದಪ್ಪ ಮೈಕಟ್ಟಿನವರಾದ ಮೋಹನ್‌ಲಾಲ್ ದೈಹಿಕವಾಗಿ ಸ್ಲಿಮ್ ಆಗಿ ಕಾಣಿಸಿಕೊಂಡಿರುವ ಛಾಯಾಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಅಭಿಮಾನಿಗಳನ್ನು ಪುಳಕಿತಗೊಳಿಸಿದೆ. ಸುಮಾರು 51 ದಿನಗಳ ಕಟ್ಟುನಿಟ್ಟಿನ ಪಥ್ಯಾಹಾರ ಹಾಗೂ ವ್ಯಾಯಾಮದ ಮೂಲಕ ಅವರು ಸುಮಾರು 18 ಕೆ.ಜಿ.ಯಷ್ಟು ದೇಹತೂಕ ಇಳಿಸಿಕೊಂಡಿದ್ದಾರೆ. ಫಿಟ್‌ನೆಸ್ ತಜ್ಞರು, ಯೋಗಶಿಕ್ಷಕರು ಹಾಗೂ ಫ್ರಾನ್ಸ್‌ನಿಂದ ಕರೆಸಿಕೊಳ್ಳಲಾದ ಚರ್ಮಶಾಸ್ತ್ರಜ್ಞರ ತಂಡದ ನೆರವಿನಿಂದ ಮೋಹನ್‌ಲಾಲ್‌ಗೆ ಇದು ಸಾಧ್ಯವಾಗಿದೆ.

ಈಗಾಗಲೇ ಮೋಹನ್‌ಲಾಲ್, ಈ ಚಿತ್ರದಲ್ಲಿ 65 ವರ್ಷದ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಂಡಿರುವ ದೃಶ್ಯಗಳ ಚಿತ್ರೀಕರಣ ಮುಗಿಸಿದೆ. ಮೋಹನ್‌ಲಾಲ್‌ರ ಈ ‘ರೂಪಾಂತರ’ಕ್ಕಾಗಿಯೇ ಚಿತ್ರತಂಡವು ಶೂಟಿಂಗ್‌ನಿಂದ ಸುಮಾರು ಎರಡು ತಿಂಗಳುಗಳ ಬ್ರೇಕ್ ತೆಗೆದುಕೊಂಡಿತ್ತು, ಇದೀಗ ಥೇಟ್ ಎಳೆಯ ವಯಸ್ಸಿನ ಯುವಕನಂತೆ ಕಾಣುವ ಮೋಹನ್‌ಲಾಲ್, ಒಡಿಯಾನ್‌ಗೆ ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.

ಚಿತ್ರದ ನಿರ್ದೇಶಕ ಶ್ರೀಕುಮಾರ್, ಒಡಿಯಾನ್ ಪೂರ್ತಿಗೊಳಿಸಿದ ಬಳಿಕ, ಭಾರೀ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ‘ರಂಡಾಂ ಮೂಲಂ’ ಚಿತ್ರದ ಕೆಲಸ ಆರಂಭಿಸಲಿದ್ದಾರೆ. ಬರೋಬ್ಬರಿ 1 ಸಾವಿರ ಕೋಟಿ ರೂ.ಬಜೆಟ್‌ನಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರ ಮಹಾಭಾರತದ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲೂ ನಾಯಕನಾಗಿರುವ ಮೋಹನ್‌ಲಾಲ್ ಭೀಮನಾಗಿ ಕಾಣಿಸಿಕೊಳ್ಳಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)