varthabharthi

ವಚನ ಬೆಳಕು

ಈಸಕ್ಕಿಯಾಸೆ ನಿಮಗೇಕೆ?

ವಾರ್ತಾ ಭಾರತಿ : 16 Dec, 2017

ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯ?
ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆ ಅಯ್ಯ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ
ಮಾರಯ್ಯಪ್ರಿಯ ಅಮಲೇಶ್ವರಲಿಂಗಕ್ಕೆ ದೂರ ಮಾರಯ್ಯ.
                                                          - ಆಯ್ದಕ್ಕಿ ಲಕ್ಕಮ್ಮ

ವಸ್ತುಮೋಹ ಎಂಬುದು ಬಲಾಢ್ಯರ, ಧನಾಢ್ಯರ ಮತ್ತು ಸಾಮ್ರಾಜ್ಯಶಾಹಿಗಳ ಮನದಾಳ ದಲ್ಲಿ ಇರುತ್ತದೆ. ಸಂಪತ್ತು ಹೆಚ್ಚಿದಷ್ಟೂ ಸಾಮ್ರಾಜ್ಯ ವಿಸ್ತರಣೆಯಾದಷ್ಟೂ ಅವರ ದಾಹ ಹೆಚ್ಚಾಗುತ್ತಲೇ ಹೋಗುತ್ತದೆ. ಅವರು ಪರರನ್ನು ಶೋಷಿಸುವ ಮೂಲಕ ಸಂಪತ್ತಿನ ವಿಸ್ತರಣೆ ಮಾಡುತ್ತ ಹೋಗುತ್ತಾರೆ. ಆದರೆ ಶಿವಭಕ್ತರು ತಮ್ಮ ಸ್ವಕಾಯಕದ ಮೇಲೆ ಅವಲಂಬಿತರಾಗಿರುತ್ತಾರೆ. ಗಳಿಸಿದ್ದರಲ್ಲಿ ತಮಗೆ ಬೇಕಾದಷ್ಟನ್ನು ಮಾತ್ರ ಪ್ರಸಾದವೆಂದು ಸ್ವೀಕರಿಸಿ ಉಳಿದೆಲ್ಲವನ್ನೂ ದಾಸೋಹ ರೂಪದಲ್ಲಿ ಶರಣಸಂಕುಲಕ್ಕೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ಯಾರೊಬ್ಬರ ಬಳಿಯೂ ಸಂಪತ್ತಿನ ಸಂಗ್ರಹವಾಗುವುದಿಲ್ಲ.

ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯ ದಂಪತಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಯರಡೋಣಿ ಗ್ರಾಮದವರು. ಗ್ರಾಮಕ್ಕೆ ಸಮೀಪದ ದೇವರಭೂಪುರ ಗ್ರಾಮದ ಅಮರೇಶ್ವರಲಿಂಗದ ಭಕ್ತರಾಗಿದ್ದರು. ಕಲ್ಯಾಣದಲ್ಲಿ ಶರಣರು ನವಸಮಾಜ ನಿರ್ಮಾಣ ಮಾಡುತ್ತಿದ್ದ ಸುದ್ದಿ ಕೇಳಿ ಅಲ್ಲಿಗೆ ಹೋಗಿ ಶರಣಸಂಕುಲದ ಭಾಗವಾಗಿ, ಶ್ರೇಷ್ಠ ವಚನಕಾರರಾಗಿ ಅಮರರಾದರು.

ಬಸವಣ್ಣನವರ ಕಾಯಕ ತತ್ತ್ವದ ಮೇಲೆ ಬೆಳಕು ಚೆಲ್ಲಿದ ದಂಪತಿ ಇವರು. ಮಹಾ ಮನೆಯ ಅಂಗಳ ಮುಂತಾದ ಕಡೆಗಳಲ್ಲಿ ಚೆಲ್ಲಿದ ಅಕ್ಕಿಯನ್ನು ಮಾರಯ್ಯ ದಂಪತಿ ಆಯ್ದುತಂದು ಜೀವನ ನಿರ್ವಹಣೆ ಮತ್ತು ದಾಸೋಹ ಮಾಡುತ್ತಿದ್ದರು. (ಬಿದ್ದಿರುವ ಕಾಳುಗಳನ್ನು ಆರಿಸಿಕೊಂಡು ಜೀವನ ನಡೆಸುವ ಕಾಯಕಕ್ಕೆ ಸಂಸ್ಕೃತದಲ್ಲಿ ಉಂಛವೃತ್ತಿ ಎನ್ನುತ್ತಾರೆ) ಗಹನವಾದ ಅನುಭಾವದ ಚಿಂತನ ಮಂಥನದೊಂದಿಗೆ ಾತ್ವಿಕ ಬಾಳನ್ನು ಬಾಳುತ್ತಿದ್ದರು.

ಒಂದುದಿನ ಶಿವಾನುಭವ ಗೋಷ್ಠಿಯಲ್ಲಿ ತಲ್ಲೀನನಾಗಿದ್ದ ಮಾರಯ್ಯನಿಗೆ ಕಾಯಕಕ್ಕೆ ಹೋಗುವುದಕ್ಕೆ ತಡವಾಯಿತು. ‘‘ಕಾಯಕ ನಿಂದಿತ್ತು ಹೋಗಯ್ಯೆ ಎನ್ನಾಳ್ದನೆ.’’ ಎಂದು ಮಾರಯ್ಯನನ್ನು ಲಕ್ಕಮ್ಮ ಎಚ್ಚರಿಸುತ್ತಾಳೆ. ಮಾರಯ್ಯ ಆ ದಿನ ಹೆಚ್ಚಿನ ಅಕ್ಕಿಯನ್ನು ಆಯ್ದು ತರುತ್ತಾನೆ. ಆಗ ಲಕ್ಕಮ್ಮ ಅದಕ್ಕೂ ಎಚ್ಚರಿಸುತ್ತಾಳೆ. ‘‘ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ?’’ ಎಂದು ಪ್ರಶ್ನಿಸುತ್ತಾಳೆ. ಆಸೆ ಎಂಬುದು ರಾಜರ ಸೊತ್ತು; ರೋಷವೆಂಬುದು ಯಮದೂತರ ಸೊತ್ತು ಎಂದು ಗಂಡನಿಗೆ ವಿವರಿಸುತ್ತಾಳೆ. ಆಸೆಯ ರಾಜರನ್ನು ಒಂದೆಡೆ ನಿಲ್ಲಿಸಿ ಆಸೆ ಇಲ್ಲದ ಶರಣರನ್ನು ಅವರೆದುರು ನಿಲ್ಲಿಸುತ್ತಾಳೆ. ಶರಣ ಧರ್ಮದ ಶ್ರೇಷ್ಠತೆಯನ್ನು ಸಾರುತ್ತಾಳೆ. ಆಸೆಬುರುಕರನ್ನು ದೇವರು ಮೆಚ್ಚುವುದಿಲ್ಲ ಎನ್ನುತ್ತಾಳೆ. ‘ಆಸೆ ಬೇಡ, ಬದುಕುವ ಧೈರ್ಯ ಬೇಕು, ಸಂಗ್ರಹಬುದ್ಧಿ ಬೇಡ, ಕಾಯಕ-ದಾಸೋಹ ಬೇಕು, ಹಿಂಜರಿಕೆ ಬೇಡ, ಚಿತ್ತಶುದ್ಧಿ ಬೇಕು.’ ಇವು ಕಡುಬಡವಿ ಲಕ್ಕಮ್ಮನ ಮಹೋನ್ನತ ಜೀವನಸಂದೇಶಗಳಾಗಿವೆ.

ಧನಶಕ್ತಿ ಮತ್ತು ಕಾಯಕಶಕ್ತಿ ಮುಖಾಮುಖಿಯಾಗಿರುವುದನ್ನು ಮೊದಲಿಗೆ ಗುರುತಿಸಿದ ಶ್ರೇಯಸ್ಸು ಆಯ್ದಕ್ಕಿ ಲಕ್ಕಮ್ಮನಿಗೆ ಸಲ್ಲುತ್ತದೆ. ಧನಶಕ್ತಿ ಮತ್ತು ಕಾಯಕಶಕ್ತಿಗಳು ಮುಖಾಮುಖಿಯಾಗಿ ಎರಡು ವರ್ಗಗಳನ್ನು ಪ್ರತಿನಿಧಿಸುತ್ತವೆ. ಇವುಗಳನ್ನೇ ದುಡಿಸಿಕೊಳ್ಳುವವರ ವರ್ಗ ಮತ್ತು ದುಡಿಯುವ ವರ್ಗ ಎಂದು ಕಾರ್ಲ್ ಮಾರ್ಕ್ಸ್ ಗುರುತಿಸಿದರು. ಈ ವರ್ಗಗಳ ಮಧ್ಯದ ಸಂಘರ್ಷ ಮಾನವ ಸಮಾಜ ಹುಟ್ಟಿದಂದಿನಿಂದಲೂ ಇದೆ ಎಂಬ ಐತಿಹಾಸಿಕ ಸ್ಯವನ್ನು ಅವರು ಕಂಡುಹಿಡಿದರು.

ರಾಜ ಮಹಾರಾಜರು, ಜಮೀನುದಾರರು, ಬಂಡವಾಳಶಾಹಿಗಳು, ಧರ್ಮಾಧಿಕಾರಿಗಳು ಮತ್ತು ಇವರ ಶೋಷಣಾ ವ್ಯವಸ್ಥೆಯನ್ನು ಬೆಂಬಲಿಸುವ ಬುದ್ಧಿಜೀವಿಗಳು ಸಂಪತ್ತಿನ ಗುಲಾಮ ರಾಗಿದ್ದುಕೊಂಡು ಬಹುಸಂಖ್ಯಾತ ಕಾಯಕಜೀವಿಗಳ ನೆಮ್ಮದಿಯ ಬದುಕಿಗೆ ವಿರುದ್ಧವಾದ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿಡಲು ಶ್ರಮಿಸುತ್ತಿರುತ್ತಾರೆ. ಆದರೆ ಕಾಯಕಜೀವಿಗಳಾದ ಶಿವಭಕ್ತರು ಧನದಾಹಿಗಳ ಸಂಪತ್ತಿನ ಗುಲಾಮಗಿರಿಗೆ ಹೇಸಿಕೊಳ್ಳುತ್ತಾರೆ. ಇದ್ದುದೆಲ್ಲವೂ ಶರಣಸಂಕುಲದ ಸೊತ್ತೆಂದು ಭಾವಿಸುವ ಸಮರ್ಪಣಾಭಾವದ ಭಕ್ತರು ಸಹಜವಾಗಿಯೇ ವ್ಯಕ್ತಿಗತ ಸಂಪತ್ತಿನ ಬಗ್ಗೆ ಉದಾಸೀನರಾಗಿರುತ್ತಾರೆ. ದುಡಿದು ಬದುಕಬೇಕೆಂಬುದೇ ಶರಣರ ಛಲವಾಗಿದೆ. ಸಂಪತ್ತು ಏನಿದ್ದರೂ ಇಡೀ ಸಮಾಜದ ಬಳಕೆಗೆ ಬರುವಂಥ ಶಿವನಿಧಿಯಾಗಿರಬೇಕು ಎಂಬುದು ಅವರ ಆಶಯವಾಗಿದೆ. ಬಂಡವಾಳಶಾಹಿ ಸಮಾಜ ಎಮ್ಮೆಚರ್ಮದ ಸಮಾಜವಾಗಿದೆ. ಆದರೆ ಶರಣ ಸಮಾಜ ಮಾನವೀಯ ಸ್ಪಂದನದ ಸಮಾಜವಾಗಿದೆ. ಬಂಡವಾಳವು ಮನುಷ್ಯನನ್ನು ಕಡೆಗಣಿಸುತ್ತ, ತಾನೇ ದೇವರ ಅವತಾರವಾಗಿ ಇಡೀ ಭೂಮಂಡಲವನ್ನು ತನ್ನ ಅಧೀನದಲ್ಲಿಟ್ಟುಕೊಳ್ಳ ಬಯಸುತ್ತದೆ. ಬಡವರನ್ನು ಮೂಕರನ್ನಾಗಿಸುವ ಅದು ಸಂಗ್ರಹಬುದ್ಧಿಯಿಂದ ಜನಿಸಿದೆ. ನರನ ಸಂಗ್ರಹಬುದ್ಧಿಯೇ ಆಸೆಯ ಮೂಲ. ಮಾನವನ ಈ ಐಹಿಕ ಆಸೆಯೇ ಎಲ್ಲರೀತಿಯ ಶೋಷಣೆಗೆ ಮೂಲವಾಗಿದೆ. ಈ ಆಸೆಯ ಕಾರಣದಿಂದಲೇ ಕ್ರೌರ್ಯ, ಹಿಂಸೆ, ಕೊಲೆ, ಸುಲಿಗೆ ಮತ್ತು ಯುದ್ಧಗಳು ಸಂಭವಿಸುತ್ತವೆ. ಈ ಆಸೆಬುರುಕ ವ್ಯವಸ್ಥೆ ಇರುವವರೆಗೆ ಮಾನವಕುಲಕ್ಕೆ ದುಃಖದಿಂದ ಮುಕ್ತಿ ಇಲ್ಲ. ಎಲ್ಲರೀತಿಯ ಶೋಷಣೆಯಿಂದ ಮಾನವರನ್ನು ಮುಕ್ತಗೊಳಿಸುವುದಕ್ಕಾಗಿಯೇ ಶರಣರು ಸಂಗ್ರಹ ಸಿದ್ಧಾಂತವನ್ನು ವಿರೋಧಿಸಿದರು. ಅದಕ್ಕೆ ತದ್ವಿರುದ್ಧವಾದ ಕಾಯಕ-ಪ್ರಸಾದ-ದಾಸೋಹ ಸಿದ್ಧಾಂತವೆಂಬ ನಡೆನುಡಿ ಸಿದ್ಧಾಂತವನ್ನು ಜಗತ್ತಿಗೆ ಕೊಟ್ಟರು. ಉತ್ಪಾದಿಸಿದ್ದನ್ನು ಎಚ್ಚರಿಕೆಯಿಂದ ಬಳಸಬೇಕು. ಉಳಿಸಿದ್ದನ್ನು ಸಾಮಾಜಿಕ ಸಂಪತ್ತೆಂದು ಪರಿಗಣಿಸಿ ಶರಣ ಸಂಕುಲದ ಶಿವನಿಧಿಗೆ ದಾಸೋಹಂ ಭಾವದಿಂದ ಅರ್ಪಿಸಬೇಕು. ಆ ಮೂಲಕ ಲೋಕಕಲ್ಯಾಣ ಮಾಡಲು ಕಲಿಸುವ ಸಿದ್ಧಾಂತವೇ ನಡೆನುಡಿ ಸಿದ್ಧಾಂತ. ಈ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದ ಆಯ್ದಕ್ಕಿ ಲಕ್ಕಮ್ಮ ಸ್ವಂತಕ್ಕಾಗಿ ಸಂಗ್ರಹಿಸುವುದನ್ನು ನಿರಾಕರಿಸುತ್ತಾಳೆ. ದುಡಿಯುವ ಶಕ್ತಿಯ ಮೇಲೆ ನಂಬಿಕೆ ಇಟ್ಟವರು ಮಾತ್ರ ಇಂಥ ಧೈರ್ಯ ತಾಳಲು ಸಾಧ್ಯ. ಬೇರೆಯವರ ಸುಲಿಗೆ ಮಾಡದೆ ಬದುಕಲು ಸಾಧ್ಯ. ಅಷ್ಟೇ ಅಲ್ಲದೆ ಸೇವಾಭಾವದೊಂದಿಗೆ ಬೇರೆಯವರನ್ನು ಸಲುಹುವ ಶಕ್ತಿ ತಮಗಿದೆ ಎಂಬ ಆತ್ಮವಿಶ್ವಾಸ ಹೊಂದಲು ಸಾಧ್ಯ. ಕಾಯಕಜೀವಿಗಳು ಬಂಡವಾಳದ ಗುಲಾಮರಾಗಬಾರದು. ಆದರೆ ಬಂಡವಾಳವು ಕಾಯಕಜೀವಿಗಳ ಗುಲಾಮ ಆಗಲೇ ಬೇಕು ಎಂಬುದು ಆಯ್ದಕ್ಕಿ ಲಕ್ಕಮ್ಮನ ಆಶಯವಾಗಿದೆ.

***

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)