varthabharthi

ಸಂಪಾದಕೀಯ

ನಮ್ಮ ಹೆಬ್ಬೆರಳನ್ನು ರಕ್ಷಿಸಿಕೊಳ್ಳೋಣ

ವಾರ್ತಾ ಭಾರತಿ : 16 Dec, 2017

ಆಧಾರ್ ಜೋಡಣೆಯ ಕುರಿತಂತೆ ಇರುವ ಜನಸಾಮಾನ್ಯರ ಗೊಂದಲ ಮುಂದುವರಿದಿದೆ. ಸರಕಾರ ಮತ್ತು ನ್ಯಾಯಾಲಯದ ನಡುವೆ ಆಧಾರ್ ಕುರಿತಂತೆ ನಡೆಯುತ್ತಿರುವ ಕಣ್ಣಾಮುಚ್ಚಾಲೆ ಆಟ ಇನ್ನೂ ಮುಗಿದಿಲ್ಲ. ಆಧಾರ್ ಜೋಡಣೆ ಯಾವುದಕ್ಕೆಲ್ಲ ಕಡ್ಡಾಯ ಎನ್ನುವುದರ ತೀರ್ಮಾನವೇ ನನೆಗುದಿಯಲ್ಲಿದೆ. ಆಧಾರ್‌ನ್ನು ಆರು ಯೋಜನೆಗಳಿಗೆ ಮಾತ್ರ ಕಡ್ಡಾಯಗೊಳಿಸಬೇಕು ಎಂದು ನ್ಯಾಯಾಲಯ ಹೇಳಿದ್ದರೆ, ಸರಕಾರ ಅದನ್ನು 100ಕ್ಕೂ ಅಧಿಕ ಯೋಜನೆಗಳಿಗೆ ವಿಸ್ತರಿಸಿದೆ ಎನ್ನುವ ಆರೋಪಗಳ ಬಗ್ಗೆ ನ್ಯಾಯಾಲಯ ಇನ್ನೂ ಸ್ಪಷ್ಟ ಆದೇಶವನ್ನು ನೀಡಿಲ್ಲ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಸರಕಾರ ಮಧ್ಯಂತರ ಆದೇಶವೊಂದನ್ನು ನೀಡಿದ್ದು, ಎಲ್ಲ ಸೇವೆ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಆಧಾರ್ ಜೋಡಣೆಯ ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸುವ ಸರಕಾರದ ನಿವೇದನೆಗೆ ಒಪ್ಪಿಗೆ ನೀಡಿದೆ.

ಈ ತೀರ್ಪು ಅನಿರೀಕ್ಷಿತವೇನೂ ಆಗಿರಲಿಲ್ಲ. ಸರಕಾರ ಇಂತಹದೊಂದು ಪ್ರಸ್ತಾವವಿಟ್ಟಾಗ ನ್ಯಾಯಾಲಯ ಅದನ್ನು ಅನುಮೋದಿಸುವುದು ಸದ್ಯದ ಸಮಸ್ಯೆಗಳಿಗೆ ಪರಿಹಾರವಲ್ಲ. ಮುಖ್ಯವಾಗಿ ಇಲ್ಲಿ, ಅವಧಿಯನ್ನು ವಿಸ್ತರಿಸುವುದು ಮನವಿದಾರರ ಬೇಡಿಕೆಯಾಗಿರಲಿಲ್ಲ. ಆಧಾರ್ ದುರ್ಬಳಕೆಗೊಳ್ಳುತ್ತಿದೆ ಎನ್ನುವುದು ಶ್ರೀಸಾಮಾನ್ಯರ ಆತಂಕವಾಗಿದೆ. ಸರಕಾರವನ್ನು ಬಳಸಿಕೊಂಡು ಖಾಸಗಿ ಕಂಪೆನಿಗಳೂ ಜನರ ಆಧಾರ್ ಗುರುತನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎನ್ನುವುದು ಈಗ ಇರುವ ಇನ್ನೊಂದು ಮುಖ್ಯ ದೂರು. ಜನ ಸಾಮಾನ್ಯರ ಹೆಬ್ಬೆಟ್ಟನ್ನು ಒಮ್ಮೆ ಕೊಟ್ಟ ಬಳಿಕ, ಮತ್ತೆ ಅದನ್ನು ಹಿಂದೆಗೆಯುವಂತಿಲ್ಲ.

ಅದು ದುರ್ಬಳಕೆಯಾಗದ ನೆಲೆಯಲ್ಲಿ ಒಂದು ತಾತ್ಕಾಲಿಕ ಸೂಚನೆಯನ್ನಾದರೂ ತನ್ನ ಮಧ್ಯಂತರ ಆದೇಶದಲ್ಲಿ ನ್ಯಾಯಾಲಯ ನೀಡಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ನ್ಯಾಯಾಲಯ ಸರಕಾರದ ನಿಲುವಿನ ಬಗ್ಗೆ ಮೃದುವಾಗಿದೆಯೇನೋ ಅನ್ನಿಸುವಂತಹ ಆದೇಶವನ್ನು ಹೊರಡಿಸಿದೆ. ಸರಕಾರದ ಕ್ರಮಕ್ಕೆ ತಡೆ ನೀಡಲು ನ್ಯಾಯಾಲಯ ಹಿಂದೇಟು ಹಾಕಿದೆ. ಆದರೆ ಮಾರ್ಚ್ 31ಕ್ಕೆ ಗಡುವನ್ನು ವಿಸ್ತರಿಸಿದೆ. ವಿಚಾರಣೆ ಮುಂದುವರಿಯಲಿದೆ. ವಿಪರ್ಯಾಸವೆಂದರೆ ನ್ಯಾಯಾಲಯ ಒಂದೆಡೆ ಅವಧಿಯನ್ನು ವಿಸ್ತರಿಸಿದ್ದರೂ, ಇತ್ತ ಕೆಲವು ಇಲಾಖೆಗಳು ಜನ ಸಾಮಾನ್ಯರಿಗೆ ಆಧಾರ್ ಜೋಡಣೆಗೆ ಒತ್ತಡ ಹೇರುತ್ತಿವೆ. ಸಮಾಜ ಕಲ್ಯಾಣ ಸವಲತ್ತುಗಳನ್ನು ಪಡೆಯುವ ಬಡವರ್ಗಕ್ಕೆ ಆಧಾರ್ ಐಚ್ಛಿಕವಾಗಿರಬೇಕು ಎಂದು ಹೇಳಿದ್ದರೂ, ಕಡ್ಡಾಯ ಮಾಡಿದ ಪರಿಣಾಮವಾಗಿ ಹಲವೆಡೆ ಬಡವರು ಹಸಿವಿನಿಂದ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ರಾಜಸ್ಥಾನ, ಹರ್ಯಾಣ, ಉತ್ತರ ಪ್ರದೇಶ, ದಿಲ್ಲಿ ಮೊದಲಾದೆಡೆ ಆಧಾರ್ ಕಾರ್ಡ್ ಜೋಡಣೆಯಾಗಿಲ್ಲ ಎನ್ನುವ ಒಂದೇ ಕಾರಣದಿಂದ ಅವರಿಗೆ ರೇಷನ್ ಪೂರೈಕೆ ನಿಲ್ಲಿಸಲಾಗಿದೆ. ಪರಿಣಾಮವಾಗಿ ಅವರು ಹಸಿವಿನಿಂದ ಮೃತಪಟ್ಟಿರುವ ಘಟನೆಗಳು ವರದಿಯಾಗಿವೆ. ಕರ್ನಾಟಕದಲ್ಲೂ ಇಂತಹದೊಂದು ಪ್ರಕರಣ ಮಾಧ್ಯಮಗಳ ಮೂಲಕ ಬೆಳಕಿಗೆ ಬಂತು. ಅಂದರೆ, ಸರಕಾರ ನ್ಯಾಯಾಲಯವನ್ನು ವಂಚಿಸುತ್ತಿದೆಯೇ? ಬಹಿರಂಗವಾಗಿ ಆಧಾರ್ ಐಚ್ಛಿಕ ಎನ್ನುತ್ತಲೇ ಗುಟ್ಟಾಗಿ, ಜನರಿಗೆ ಆಧಾರ್ ಜೋಡಣೆ ಮಾಡಲು ಒತ್ತಡ ಹೇರುತ್ತಿದೆಯೇ? ಒಂದು ವೇಳೆ, ಜನರಿಗೆ ಒತ್ತಡ ಹೇರುತ್ತಿಲ್ಲ ಎಂದಾದರೆ, ರೇಷನ್ ಪೂರೈಸದ ಸಿಬ್ಬಂದಿಯ ಮೇಲೆ ಸರಕಾರ ಏನು ಕ್ರಮ ಕೈಗೊಂಡಿದೆ ಎನ್ನುವುದನ್ನು ವಿವರಿಸಬೇಕಲ್ಲವೇ? ಆಧಾರ್ ಜೋಡಣೆಯ ಕುರಿತಂತೆ ಗೊಂದಲಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಕೆಲವು ದೂರವಾಣಿ ಸಂಸ್ಥೆಗಳು ಜನರಿಗೆ ಆಧಾರ್ ಜೋಡಣೆ ಮಾಡಬೇಕು ಎಂದು ಒತ್ತಾಯಿಸುತ್ತಿವೆ.

ಇದರ ಕುರಿತಂತೆಯೂ ಜನರು ಆತಂಕದಲ್ಲಿದ್ದಾರೆ. ಈ ದಿನಾಂಕದ ಒಳಗೆ ಆಧಾರ್ ಜೋಡಣೆ ಮಾಡದೇ ಇದ್ದಲ್ಲಿ ತಮ್ಮ ದೂರವಾಣಿ ಸಂಖ್ಯೆಯನ್ನು ಕಡಿತಗೊಳಿಸಲಾಗುತ್ತದೆ ಎಂಬ ಬೆದರಿಕೆಗಳೂ ಗ್ರಾಹಕರಿಗೆ ಬರುತ್ತಿವೆ. ಇದು ನ್ಯಾಯಾಂಗ ನಿಂದನೆಯಾಗುವುದಿಲ್ಲವೇ? ನ್ಯಾಯಾಲಯ ಥಳಿಸಿದಂತೆ ನಾಟಕವಾಡುತ್ತಿದೆ ಮತ್ತು ಸರಕಾರ ಅತ್ತಂತೆ ನಾಟಕವಾಡುತ್ತಿದೆ ಎಂದು ಜನರು ಭಾವಿಸುವಂತಾಗಿದೆ. ಯಾವುದು ನಿಜ, ಯಾವುದು ಸುಳ್ಳು ಎನ್ನುವುದು ಶ್ರೀಸಾಮಾನ್ಯನಿಗೆ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿ ಬಿಟ್ಟಿದೆ. ಇತ್ತ ಅತ್ಯಂತ ಖಾಸಗಿಯಾಗಿರುವ ವಿವರಗಳನ್ನೊಳಗೊಂಡ ಆಧಾರ್ ಸಂಖ್ಯೆಯನ್ನು ಜೋಡಿಸಲು ಕೆಲವು ಖಾಸಗಿ ಕಂಪೆನಿಗಳೂ ಆಸಕ್ತಿ ತೋರಿಸುತ್ತಿವೆ.

ಈ ಕಂಪೆನಿಗಳ ಹೇಳಿಕೆಗೆ ಬಲಿ ಬಿದ್ದು ನಾವು ಹೆಬ್ಬೆರಳನ್ನು ಅವರಿಗೆ ಒಪ್ಪಿಸಿದರೆ ನಮ್ಮ ಹೆಬ್ಬೆರಳಿನ ಜೊತೆಗೆ ನಮ್ಮ ಗುರುತಿಸುವಿಕೆಯನ್ನೇ ಅವರು ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ. ಕನಿಷ್ಠ ವಿಚಾರಣೆ ಮುಗಿಯುವವರೆಗೆ ಯಾರೂ ಆಧಾರ್ ಜೋಡಣೆಯನ್ನು ಮಾಡಬೇಕಾಗಿಲ್ಲ, ಮಾಡುವಂತಿಲ್ಲ ಎಂಬ ನಿರ್ದೇಶವನ್ನು ನ್ಯಾಯಾಲಯ ನೀಡಿದ್ದರೆ ಜನರ ಗೊಂದಲಗಳಿಗೆ ತಾತ್ಕಾಲಿಕವಾಗಿ ಪರಿಹಾರ ಸಿಗುತ್ತಿತ್ತೇನೋ. ಒಂದೆಡೆ ಸರಕಾರ ಮತ್ತು ವಿವಿಧ ಇಲಾಖೆಗಳ ಒತ್ತಡಕ್ಕೆ ಮಣಿದು ಒಬ್ಬೊಬ್ಬರಾಗಿ ಆಧಾರ್‌ಗೆ ತಮ್ಮನ್ನು ಜೋಡಿಸಿಕೊಳ್ಳುತ್ತಿದ್ದಾರೆ. ನಾಳೆ ವಿಚಾರಣೆಗಳೆಲ್ಲ ಮುಗಿದ ಬಳಿಕ ಆಧಾರ್ ಜೋಡಣೆ ಐಚ್ಛಿಕ ಎಂದು ನ್ಯಾಯಾಲಯ ತೀರ್ಪು ನೀಡಬಹುದು. ಅಥವಾ ಆಧಾರ್ ಬಳಕೆಯನ್ನೇ ತಿರಸ್ಕರಿಸಬಹುದು.

ಆದರೆ ಅದಾಗಲೇ ಸರಕಾರ ಮತ್ತು ಇಲಾಖೆಗಳ ಒತ್ತಡಕ್ಕೆ ಮಣಿದು ಆಧಾರ್ ಜೋಡಿಸಿಕೊಂಡವರಿಗೆ ಏನು ಪರಿಹಾರ? ಇತ್ತೀಚೆಗೆ ಏರ್‌ಟೆಲ್ ಸಂಸ್ಥೆ ಎಲ್ಲ ಗ್ರಾಹಕರಿಗೂ ಆಧಾರ್ ಜೋಡಣೆ ಮಾಡಲು ಒತ್ತಡ ಹೇರ ತೊಡಗಿದೆ. ಇದೇ ಸಂದರ್ಭದಲ್ಲಿ ಇನ್ನೊಂದು ಗೊಂದಲ ಎದುರಾಯಿತು. ಏರ್‌ಟೆಲ್‌ಗೆ ಆಧಾರ್ ಜೋಡಣೆ ಮಾಡಿದವರ ಎಚ್‌ಪಿ ಗ್ಯಾಸ್ ಸಿಲಿಂಡರ್‌ನ ಸಬ್ಸಿಡಿ ಹಣ ಏರ್‌ಟೆಲ್ ಖಾತೆಗೆ ಬೀಳಲಾರಂಭಿಸಿದವು. ಈ ಕುರಿತಂತೆ ಗ್ರಾಹಕರಿಗೆ ಯಾವುದೇ ಮಾಹಿತಿ ಇರಲಿಲ್ಲ. ಅವರು ನೀಡಿರುವ ಬ್ಯಾಂಕ್ ಖಾತೆಯೇ ಬೇರೆಯಾಗಿದ್ದರೂ ಏರ್‌ಟೆಲ್ ಸಂಸ್ಥೆ ಆಧಾರ್‌ನ್ನು ದುರ್ಬಳಕೆ ಮಾಡಿಕೊಂಡು ಅವರ ಸಬ್ಸಿಡಿ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡವು. ಇದನ್ನು ಪ್ರಶ್ನಿಸಿದವರಿಗೆ ಸರಿಯಾದ ಉತ್ತರ ನೀಡುವ ಸೌಜನ್ಯವನ್ನೂ ಸಂಸ್ಥೆ ತೋರಿಸುತ್ತಿಲ್ಲ. ಈ ಎಲ್ಲ ಅನಾಹುತಗಳಿಗೆ ಯಾರು ಹೊಣೆ?

ಆಧಾರ್ ಕುರಿತಂತೆ ಜನರ ಪಾಲಿಗೆ ಕಟ್ಟಕಡೆಯ ಆಸರೆ ನ್ಯಾಯಾಲಯವಾಗಿದೆ. ಕನಿಷ್ಠ ವಿಚಾರಣೆ ಪೂರ್ತಿಯಾಗುವವರೆಗೆ ಯಾವುದೇ ಇಲಾಖೆ ಆಧಾರ್ ಜೋಡಣೆಗೆ ಒತ್ತಾಯಿಸಲು ಅವಕಾಶ ನೀಡಬಾರದು. ಒಂದು ವೇಳೆ ಒತ್ತಾಯಿಸಿದ ಯಾವುದೇ ದಾಖಲೆಗಳು ದೊರಕಿದರೂ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಆರೋಪ ಹೊರಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಆಧಾರ್ ಹೆಸರಿನಲ್ಲಿ ತಮ್ಮ ಹೆಬ್ಬೆಟ್ಟನ್ನು ನೀಡುವ ಸಾರ್ವಜನಿಕರೂ ಗರಿಷ್ಠ ಜಾಗೃತಿಯನ್ನು ಹೊಂದುವ ಅಗತ್ಯವಿದೆ. ಅವರು ಕತ್ತರಿಸಲು ಹೊರಟಿರುವುದು ಪ್ರಜಾಸತ್ತೆಯ ಹೆಬ್ಬೆರಳು. ಈ ಹೆಬ್ಬೆರಳು ನಮಗೆ ಸಂವಿಧಾನ ನೀಡಿರುವ ಕಾಣಿಕೆಯಾಗಿದೆ. ಅಂತಹ ಹೆಬ್ಬೆರಳನ್ನು ಬೇರೆ ಬೇರೆ ನೆಪಗಳನ್ನು ಒಡ್ಡಿ ಕತ್ತರಿಸುವ ಪ್ರಯತ್ನವನ್ನು ಕೆಲವು ಶಕ್ತಿಗಳು ನಡೆಸುತ್ತಿವೆ. ಅವಸರದಲ್ಲಿ ಕತ್ತರಿಸಿಕೊಟ್ಟು ದ್ರೋಣಾಚಾರ್ಯನಿಗೆ ಬಲಿಯಾದ ಏಕಲವ್ಯನ ಸ್ಥಿತಿ ನಮ್ಮದಾಗುವುದು ಬೇಡ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)