varthabharthi

ಸುಗ್ಗಿ

ನಾನು ಓದಿದ ಪುಸ್ತಕ

ನಿಂಜೂರರ ತೆಂಕನಿಡಿಯೂರು ಮತ್ತಲ್ಲಿನ ಕುಳವಾರಿಗಳು

ವಾರ್ತಾ ಭಾರತಿ : 16 Dec, 2017
ಶ್ಯಾಮಲಾ ಮಾಧವ

ತೆಂಕನಿಡಿಯೂರು!

ಆ ಹೆಸರೇ ಕಚಗುಳಿಯಿಡುವಂತೆ, ಪಡುಕರಾವಳಿಯ ತಮ್ಮ ಆ ಹಳ್ಳಿ ಹಾಗೂ ಅಲ್ಲಿನ ಕುಳವಾರಿಗಳು ಓದುಗರ ಮನದಲ್ಲಿ ಬೆಚ್ಚಗೆ ಉಳಿವಂತೆ ಅಲ್ಲಿನ ಜನಜೀವನದ ದೃಶ್ಯಚಿತ್ರವನ್ನು ಕಟ್ಟಿಕೊಟ್ಟವರು, ನಮ್ಮ ಡಾ. ನಿಂಜೂರರು. ತಮ್ಮ ಹೃದಯಕ್ಕೆ ಹತ್ತಿರವಾದ ಆ ತಮ್ಮ ಬಾಲ್ಯದ ನೆಲೆಯನ್ನು, ತಾವು ಚಿತ್ರಿಸಿದ ಆ ಅನನ್ಯ ಕಾಲ್ಪನಿಕ ವ್ಯಕ್ತಿಚಿತ್ರಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಕಡೆದಿಟ್ಟವರು! ಹೊಚ್ಚ ಹೊಸದಾದ ಅದ್ಭುತ ಕಥನ ತಂತ್ರವೊಂದನ್ನು ತಮ್ಮೀ ಕೃತಿಯಲ್ಲಿ ತೆರೆದಿಟ್ಟವರು.

ನಿಂಜೂರರ ತೆಂಕನಿಡಿಯೂರಿನಲ್ಲಿ ನಮಗೆದುರಾಗುವ ದುಗ್ಗಪ್ಪ ಶೆಟ್ಟರು, ರುಕ್ಮಿಣಿ ಶೆಡ್ತಿ; ದುಗ್ಗಪ್ಪ ಹೆಗ್ಡೆಯವರು, ರತ್ನಮ್ಮ ಹೆಗ್ಗಡ್ತಿ; ಜೀತದಾಳುಗಳಾದ ಚಿಕ್ಕು, ಬೂದ, ತನಿಯ, ಪೋಂಕ್ರ, ಮೆಣ್ಕರು; ಉಗ್ರಾಣಿ ಅಣ್ಣಪ್ಪ, ಶ್ರೀ ವೀರಭದ್ರ ವಿಲಾಸ ಯಾನೆ ತಟ್ಟಿ ಹೊಟೇಲಿನ ಭಟ್ಟರು, ಶೀನ ಭಟ್ಟ, ಕಾಳು ಭಟ್ಟರು, ಕಿಟ್ಟಪ್ಪು, ಶಂಭು, ನರಸಿಂಹ, ಜಿಲ್ಲ ನಾಯ್ಕ, ಇನಾಸ ಸೋಜ; ಶೇಖರ, ಸುಂದರರು; ಚಂಪಾರಾಣಿ, ಗುಲಾಬಿ, ಮಾಲತಿ, ಕ್ರೈಮ್ ಬ್ರಾಂಚ್ ಅಸಿಸ್ಟೆಂಟ್ ಕಮಿಶನರ್ ಫರ್ವೇಝ್ ಬಿಲ್ಲಿಮೋರಿಯಾ ಅವರು - ಒಂದೊಂದೂ ಮರೆಯಲಾಗದ ಪಾತ್ರಗಳು!

ಬಂಟರ ಮಕ್ಕಳು ಅಂತಾದ್ಮೇಲೆ ಒಂದಿಷ್ಟು ದರ್ಪ, ಫೋರ್ಸು, ಠೇಂಕಾರ ಇಲ್ಲದಿದ್ದರೆ ಹೇಗೆ, ಎಂದು ಕೊಂಡು ಸದಾ ದೊಡ್ಡ ಕುಳವಾಗುವ ಕನಸು ಕಾಣುವ ದುಗ್ಗಪ್ಪ ಶೆಟ್ಟರು! ಆ ಫೋರ್ಸಿಗಾಗಿಯೇ ಕೋಳಿ ಕಟ್ಟಕ್ಕಿಳಿದು ಎದುರಾಳಿ ದುಗ್ಗಪ್ಪ ಹೆಗ್ಡೆಯವರ ಸಹೃದಯದಿಂದ ಗೆದ್ದು ವಿಜಯೋತ್ಸವ ಆಚರಿಸಿದಂತೆಯೇ, ಕಂಬಳ ಸ್ಪರ್ಧೆಗಿಳಿದು ಮೀಸೆ ಮಣ್ಣಾಗಿಸಿಕೊಂಡವರು! ಮನೆ ಬಿಟ್ಟು ಪಲಾಯನಗೈದ ಮಗ ಶಂಭುವಿನ ಪತ್ತೆಯಿರದೆ ಹಪಹಪಿಸುವವರು! ದುಗ್ಗಪ್ಪ ಹೆಗ್ಡೆಯವರ ಮೇಲೆ ಗುಲಗುಂಜಿಯಷ್ಟೂ ದ್ವೇಷವಿರದಿದ್ದರೂ, ಅವರ ಸ್ಥಾನಮಾನದ ಬಗ್ಗೆ ಸ್ವಲ್ಪ ಹೊಟ್ಟೆ ಕಿಚ್ಚಿರುವವರು. ತೆಂಕನಿಡಿಯೂರ ಆ ಕೋಳಿಕಟ್ಟದ ರಣರಂಗದ, ಕಂಬಳ ಕಟ್ಟದ ಮುಖಭಂಗದ ವರ್ಣನೆಯೋ! ಓದಿಯೇ ಆಸ್ವಾದಿಸಬೇಕು. ಕಾರುಣ್ಯ, ಪರೋಪಕಾರ, ಹೃದಯ ಶ್ರೀಮಂತಿಕೆಯ ಸಜ್ಜನ ದುಗ್ಗಪ್ಪ ಹೆಗ್ಡೆಯವರು; ತಮ್ಮ ಹೊಟೇಲಿನ ಚಾ ತಿಂಡಿಗಳಂತೆಯೇ ಅಲ್ಲಿ ತನ್ನಿಂದ ಪ್ರಸಾರವಾಗುವ ತಮ್ಮೂರ ಬ್ರೇಕಿಂಗ್ ನ್ಯೂಸ್‌ಗಳಿಗೂ ಪ್ರಸಿದ್ಧರಾದ, ‘‘ಅಂಡು ತುರಿಸಲೂ ಪುರುಸೊತ್ತಿಲ್ಲದ’’ ತಟ್ಟಿ ಹೊಟೇಲಿನ ಭಟ್ಟರು! ‘‘ನುಸಿಗೆ ಬಸಿರು ಬರಿಸುವಷ್ಟು ಚಾಲಾಕು ಬ್ರಾಹ್ಮಣ’’, ಆತ! ಆತನಲ್ಲಿಗೆ ಚಾ, ತಿಂಡಿಗಾಗಿ ಬರುವ ಊರ ಸಭ್ಯರಂತೆಯೇ, ಮಿಂಗೆಲ್ ಫೆರ್ನಾಂಡಿಸ್‌ನ ಸಾರಾಯಿ ಅಡ್ಡೆಗೆ ಹೋಗಲೆಂದು ಈರುಳ್ಳಿ ಬಜೆ, ಕಾರಕಡ್ಡಿ ಕಟ್ಟಿಸಿಕೊಳ್ಳಲು ಬರುವ ಚಿಕ್ಕ, ಜಿಲ್ಲ, ಐತ, ಪೋಂಕ್ರನಂಥವರು!

ವ್ಯಾಸರಾವ್ ನಿಂಜೂರು

ತೆಂಕನಿಡಿಯೂರಲ್ಲಿ ನಿಂಜೂರರು ಕಡೆದಿಟ್ಟ ಅನುಪಮ ಪಾತ್ರ, ಜಿಲ್ಲ ನಾಯ್ಕನದು! ‘‘ದಾಕ್‌ದಾರ್ ಮಾಸ್ಟ್ರ ಬರಾದಲ್ಲಿ’’ (ಬರಹದಲ್ಲಿ) ತಾನೇಕೆ ಇನ್ನೂ ಬಂದಿಲ್ಲವೆಂದು ಲೇಖಕನನ್ನು ಪ್ರಶ್ನಿಸುವ ಜಿಲ್ಲ! ಕಿರಿಸ್ತಾನರೆಲ್ಲ ಕುಡುಕರೆಂಬಂತೆ ಚಿತ್ರಿಸುವ ಬಗ್ಗೆ ಆಕ್ಷೇಪವೆತ್ತುವ ಜಿಲ್ಲ! ‘‘ಸುಮ್ನೆ ಮದುವೆಯಾಗಿ; ನಿಮ್ಮ ಮರ್ಲ್ ಎಲ್ಲ ನಿಲ್ಲುತ್ತದೆ’’, ಎಂದು ಭಟ್ಟರಿಗೆ ಉಪದೇಶಿಸುವ ಜಿಲ್ಲ! ತನ್ನ ಹದಿನೇಳರ ಹರೆಯದಲ್ಲೇ ಪೀಂತನಾಯ್ಕರ ಮಗಳು ಕ್ಯಾಥರಿನ್‌ಳನ್ನು ಬಸಿರಾಗಿಸಿ, ಮತ್ತವಳ ಕೈ ಹಿಡಿವ ಶಿಕ್ಷೆಗೊಳ ಗಾದವನು! ಹೆಂಡತಿ ಕ್ಯಾಥರಿನ್ - ಕತ್ತಿಬಾಯಿಯಂತೆಯೇ ಮೈಮುರಿದು ದುಡಿಯುವವನು! ಎಲ್ಲ ಶ್ರಮದ ದುಡಿಮೆಗೆ, ಅನುವು, ಆಪತ್ತಿನಲ್ಲಿ ಊರವರಿಗೆ ಅನಿವಾರ್ಯವಾದ ಆಪದ್ಬಾಂಧವ! ರಾಮಾಯಣ, ಮಹಾಭಾರತ ಎಲ್ಲವನ್ನೂ ಒಂದು ಮಾಡುವ ಕಥನಕಾರ! ಸರ್ವಧರ್ಮ ಸಮನ್ವಯದಲ್ಲಿ ನಂಬಿಕೆ ಇರಿಸಿದ ಜಿಲ್ಲ! ಬೆಳಗೆದ್ದು ಗಡಂಗಿಗೆ ಹೋಗುವ ಮೊದಲು ನಾಗಬನಕ್ಕೆ ಹೋಗಿ ಕೈ ಮುಗಿಯುವುದನ್ನು ಮರೆಯದವ! ಕುಡಿದ ಬಳಿಕ ನಾಗಬನದತ್ತ ಸುಳಿಯದವ! ಇಗರ್ಜಿ ಪೆಸ್ತಾದಲ್ಲಿ, ಬಲರಾಮ ದೇವರ ಉತ್ಸವದ ರಥ ಎಳೆಯುವಲ್ಲಿ, ಬಯ್ಯಾರಿನ ಉರೂಸ್‌ನಲ್ಲಿ ಭಾಗವಹಿಸುವವ! ಕುಡಿದು ಬಾಯಿಗೆ ಬಂದಂತೆ ಉಗುಳುವುದೊಂದನ್ನು ಬಿಟ್ಟರೆ, ದೇವತಾ ಮನುಷ್ಯನಂತಿರುವ ಜಿಲ್ಲ!! ದೊಡ್ಡ ಜನ ಆಗುವ ಉದ್ದೇಶದಿಂದ ಕಾಲೇಜ್ ವಿದ್ಯಾಭ್ಯಾಸ ಅರ್ಧದಲ್ಲೇ ಬಿಟ್ಟು ಮುಂಬೈಗೆ ರಟ್ಟಿದ ಶೆಟ್ಟರ ಮಗ ಶಂಭು! ಊರು ಬಿಟ್ಟು ಬಂದ ಅವನನ್ನು ತಮ್ಮ ಜೊತೆ ಸೇರಿಸಿಕೊಳ್ಳುವ, ಮುಂಬೈಯ ಪೋರ್ಟ್ ಪ್ರದೇಶದಲ್ಲಿ ನೆಲೆನಿಂತ ಊರವರ ಚಿತ್ರಣ; ತೆಂಕನಿಡಿಯೂರ ದುಗ್ಗಪ್ಪ ಹೆಗ್ಡೆಯ ‘‘ಕೋಟಿ ಚೆನ್ನಯರಂತಹ ಮಕ್ಕಳು’’ ಎನಿಸಿಕೊಂಡ ಶೇಖರ, ಸುಂದರರ ಗುಪ್ತಚರಿತ್ರೆ; ಮುಂಬೈ ಅಧೋಃಲೋಕದ ಸೂಕ್ಷ್ಮ ಕಿರುನೋಟ; ಪೈಧೋಣಿಯ ಚಾ ದುಕಾನ್‌ನಲ್ಲಿ ದರ್ಬಾಂಗ್‌ನ ಶರ್ಮಾ-ಚಂಪಾ ಅನೂಹ್ಯ ಕಥನದೊಡನೆ ತಳಕು ಹಾಕಿಕೊಳ್ಳುವ ಶಂಭು ಕಥೆ!

ತೆಂಕನಿಡಿಯೂರ ಕುಳವಾರಿಗಳಲ್ಲಿ ತಾನು ಕಾದಂಬರಿಕಾರನೂ ಒಂದು ಪಾತ್ರವಾಗಿ ಬರುವ ಅದ್ಭುತ ಕಥನ ತಂತ್ರವನ್ನು ರೂಪಿಸಿದ ಲೇಖಕನದ್ದು, ಇಲ್ಲಿ ಅಲ್ಲಲ್ಲಿ ಬೆರಳೆಣಿಕೆಯ ಅನಿರೀಕ್ಷಿತ ಅತೀ ಕೌತುಕಮಯ ಪ್ರವೇಶ! ಕಥಾಪಾತ್ರಗಳ ನಿರೀಕ್ಷೆಯ ಫಲವಾಗಿ, ಆಕ್ಷೇಪಕ್ಕೆ ಗುರಿಯಾಗಿ ಓದುಗರನ್ನು ರಂಜಿಸುವ ಲೇಖಕ! ಕೊನೆಯಲ್ಲಿ ಮುಖಾಮುಖಿಯಾಗುವ ಪ್ರಮೀಳೆ ಚಂಪಾರಾಣಿಯ ಕುರಿತಾಗಿ ಇನ್ನೂ ಬರೆಯಬೇಕೆಂಬ ಲೇಖಕನ ಅನಿಸಿಕೆಯೇ ಆ ಮುಂದಿನ ಕಥನಕ್ಕಾಗಿ ಓದುಗರು ತೀವ್ರ ಕುತೂಹಲದಿಂದ ಕಾಯುವಂತೆ ಮಾಡಿದೆ. 

 

ಶ್ಯಾಮಲಾ ಮಾಧವ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)