varthabharthi

ಸುಗ್ಗಿ

ಅಪೂರ್ವ ಸಾಹಿತಿ ಡಾ. ಜಿ.ಪಿ. ರಾಜರತ್ನಂ

ವಾರ್ತಾ ಭಾರತಿ : 16 Dec, 2017
ಎಸ್. ರುದ್ರೇಶ್ವರ

ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ ರಾಜರತ್ನಂ ಜನಿಸಿದ್ದು ರಾಮನಗರದಲ್ಲಿ. ಆದರೆ ಅವರ ಹೆಸರಿನಲ್ಲಿ ಒಂದಾದರೂ ಸ್ಮಾರಕ ರಾಮನಗರದಲ್ಲಿ ಇಲ್ಲದಿರುವುದೊಂದು ವಿಪರ್ಯಾಸ. ರಾಮನಗರದ ಛತ್ರದ ಬೀದಿಯಲ್ಲಿ ‘ಜಿ.ಪಿ. ರಾಜರತ್ನಂ ವೃತ್ತ’ ಎಂಬ ಬರಹವಿರುವ ಧ್ವಜಸ್ತಂಭವೊಂದನ್ನು ಹೊರತುಪಡಿಸಿ ರಾಜರತ್ನಂ ಅವರ ಹೆಸರಿನ ಯಾವುದೇ ಕುರುಹು ರಾಮನಗರದಲ್ಲಿಲ್ಲ ಎಂದು ಇಲ್ಲಿನ ಜನರು ಬೇಸರ ವ್ಯಕ್ತಪಡಿಸುತ್ತಾರೆ.

ಡಿಸೆಂಬರ್ 5 1908 ಕನ್ನಡದ ಸುಪ್ರಸಿದ್ದ ಸಾಹಿತಿ ಡಾ.ಜಿ.ಪಿ. ರಾಜರತ್ನಂ ಅವರ ಜನ್ಮದಿನ. ಅವರು ಜನಿಸಿ ಇಂದಿಗೆ (ಡಿ. 5 2017) 109 ವರ್ಷಗಳು ತುಂಬುತ್ತವೆ. ಇವರು ಜನಿಸಿದ್ದು ಅಂದು ಕ್ಲೋಸ್‌ಪೇಟೆ ಎಂದು ಕರೆಯಲ್ಪಡುತ್ತಿದ್ದ ರಾಮನಗರದಲ್ಲಿ. ರಾಮನಗರದಲ್ಲಿ ಜನಿಸಿ ನಾಡಿನಾದ್ಯಂತ ಸಾಹಿತ್ಯದ ಕಂಪು ಬೀರಿದ ರಾಜರತ್ನಂ ಅವರನ್ನು ರಾಮನಗರದ ಜನತೆಯೇ ಮರೆತಿದ್ದಾರೆ.

ಜಿ.ಪಿ. ಎಂದರೆ ಗುಂಡ್ಲುಪಂಡಿತ. ರಾಜರತ್ನಂ ಅವರ ವಂಶಸ್ಥರಾದ ಹಿರಿಯರೊಬ್ಬರು ಹಿಂದೆ ತಮಿಳುನಾಡಿನಿಂದ ಬಂದು ಗುಂಡ್ಲು ಎಂಬ ಊರಿನಲ್ಲಿ ಆಯುರ್ವೇದ ಪಂಡಿತರಾಗಿದ್ದರೆಂದೂ, ಅವರನ್ನು ಜನ ಗುಂಡ್ಲುಪಂಡಿತ ಎಂಬುದಾಗಿ ಕರೆಯುತ್ತಿದ್ದರೆಂದೂ, ಅದೇ ಹೆಸರು ರಾಜರತ್ನಂ ಅವರ ಹೆಸರಿಗೆ ಜಿ.ಪಿ. ಎನ್ನುವ ಸಂಕ್ಷಿಪ್ತ ರೂಪದಲ್ಲಿ ಸೇರಿಕೊಂಡಿತೆಂದೂ ತಿಳಿದು ಬರುತ್ತದೆ. ಆದ್ದರಿಂದಲೇ ಇವರು ಗುಂಡ್ಲು ಪಂಡಿತ ರಾಜರತ್ನಂ ಆಗಿದ್ದಾರೆ.

ರಾಜರತ್ನಂ ಅವರ ಮಾತೃಭಾಷೆ ತಮಿಳು. ಆದರೆ ಕನ್ನಡ ಪರಿಚಾರಿಕೆಗಾಗಿ ಇವರು ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿದ್ದರು. ಇವರಿಗೆ ಕನ್ನಡದ ಬಗ್ಗೆ ಇದ್ದ ಅಭಿಮಾನ ಅಪಾರ.

         ‘‘ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ

         ಬಾಯ್ ಒಲ್ಸಾಕಿದ್ರೂನೆ

         ಮೂಗ್ನಲ್ ಕನ್ನಡ ಪದವಾಡ್ತೀನಿ

         ನನ್ ಮನಸ್ಸನ್ ನೀ ಕಾಣೆ’’

ಎಂದು ತಮಗೆ ಕನ್ನಡದ ಬಗ್ಗೆ ಇದ್ದ ಅನನ್ಯ ಪ್ರೀತಿಯನ್ನು ಯೆಂಡ್ಗುಡ್ಕ ರತ್ನನ ಮೂಲಕ ಅಭಿವ್ಯಕ್ತಿಸಿದ್ದಾರೆ. ಕನ್ನಡದ ಬಗ್ಗೆ ಅಸದೃಶ ಅಭಿಮಾನ ಇರಿಸಿಕೊಂಡಿದ್ದ ರಾಜರತ್ನಂ ಇಂಗ್ಲಿಷ್, ಹಿಂದಿ, ಸಂಸ್ಕೃತ, ತೆಲುಗು, ಪಾಳಿ, ಪ್ರಾಕೃತ ಭಾಷೆಗಳಲ್ಲಿಯೂ ಪಾಂಡಿತ್ಯ ಪಡೆದಿದ್ದರು.

 ಜಿ.ಪಿ. ರಾಜರತ್ನಂ ಅವರು ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಕೃಷಿ ಮಾಡಿದ್ದಾರೆ. ಮಕ್ಕಳ ಸಾಹಿತ್ಯವನ್ನಂತೂ ಇವರು ವಿಫುಲವಾಗಿ ಬರೆದಿದ್ದಾರೆ. ಪುಟ್ಟ ಪುಟ್ಟ ಪಂಕ್ತಿ, ಸರಳ-ಸುಲಲಿತ ಭಾಷೆ, ಪ್ರಾಸ-ಅನುಪ್ರಾಸಗಳ ಸಹಜ ಹೊಂದಾಣಿಕೆ, ರಂಜನೀಯವೂ ಆಕರ್ಷಕವೂ ಆದ ನುಡಿಗಟ್ಟುಗಳ ಬಳಕೆ - ಇವೆಲ್ಲದರ ಸಮ್ಮೇಳದಲ್ಲಿ ರಚಿತವಾಗಿರುವ ಪುಟ್ಟ ಕವಿತೆಗಳು ಮಕ್ಕಳಿಗೆ ಅತ್ಯಂತ ಪ್ರಿಯವೆನಿಸಿದ್ದುವು. ಅಂದು ಪ್ರಾಥಮಿಕ ಶಾಲೆಯ ಪಠ್ಯಪುಸ್ತಕದಲ್ಲಿದ್ದ ರಾಜರತ್ನಂ ಅವರ ‘ನಾಯಿಮರಿ ನಾಯಿಮರಿ ತಿಂಡಿ ಬೇಕೆ?’ ಎಂಬ ಪದ್ಯದ ಜನಪ್ರಿಯತೆಯಿಂದಾಗಿ ಅವರು ಮಕ್ಕಳ ಪಾಲಿಗೆ ಪ್ರೀತಿಯ ನಾಯಿಮರಿ ರಾಜರತ್ನಂ ಆಗಿಬಿಟ್ಟಿದ್ದರು.

ಡಾ.ಜಿ.ಪಿ. ರಾಜರತ್ನಂ ಅವರ ಸಾಹಿತ್ಯ ಸೇವೆ :

ವಿದ್ಯಾರ್ಥಿಯಾಗಿದ್ದಾಗಲೇ ರಾಜರತ್ನಂ ಕನ್ನಡದಲ್ಲಿ ಸಾಹಿತ್ಯ ರಚನೆ ಆರಂಭಿಸಿದ್ದರು. ಅವರು ಬರೆದ ತಾರೆ ಎಂಬ ದೀರ್ಘ ಕವಿತೆ ಅದಾಗಲೇ ಬಿ.ಎಂ.ಶ್ರೀ. ಕವನ ಸ್ಪರ್ಧೆಯಲ್ಲಿ ಸ್ವರ್ಣಪದಕ ಪಡೆದುಕೊಂಡಿತ್ತು! ಮುಂದೆ, ಮಾಸ್ತಿಯವರ ಒತ್ತಾಸೆ ಮತ್ತು ಎ.ಆರ್. ಕೃಷ್ಣಶಾಸ್ತ್ರಿಯವರ ಪ್ರೋತ್ಸಾಹದಿಂದ ಚೀನಾ ದೇಶದ ಬೌದ್ಧ ಯಾತ್ರಿಕರು ಎಂಬ ಪುಸ್ತಕ ಹೊರತಂದರು. ತದನಂತರದಲ್ಲಿ ರತ್ನನ ಪದಗಳು ಪ್ರಕಟವಾಗಿ ನಾಡಿನಾದ್ಯಂತ ಪ್ರಸಿದ್ಧಿ ಪಡೆಯಿತು. ತರುವಾಯ ಅದೇ ಮಾದರಿಯ ನಾಗನ ಪದಗಳು ಹೊರಬರಲು ಇದು ಪ್ರೇರಣೆ ನೀಡಿತು. ಗಂಡುಗೊಡಲಿ ಎಂಬುದು ಇವರ ಇನ್ನೊಂದು ಸತ್ವಯುತ ನಾಟಕ. ಆ ನಂತರ ಇವರು ಬೌದ್ಧ ಸಾಹಿತ್ಯ, ಜೈನ ಸಾಹಿತ್ಯ ಹಾಗೂ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ನಲವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದರು. ಧರ್ಮದಾನಿ ಬುದ್ಧ, ಬುದ್ಧವಚನ ಪರಿಚಯ, ಬುದ್ಧನ ವರ್ಣವಾದ, ಬುದ್ಧನ ಕತೆಗಳು, ಜಾತಕ ಕತೆಗಳು, ಧರ್ಮಪದ ಮೊದಲಾದವು ಬೌದ್ಧಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳಾದರೆ ಮಹಾವೀರನ ಮಾತುಕತೆ, ಶ್ರೀ ಗೋಮಟೇಶ್ವರ, ಭಗವಾನ್ ಮಹಾವೀರ ಮೊದಲಾದವು ಜೈನಧರ್ಮಕ್ಕೆ ಸಂಬಂಧಿಸಿದ ಹೊತ್ತಗೆಗಳು. ಇಸ್ಲಾಂ ಧರ್ಮದ ಪರಿಮಳ ಎಂಬುದು ಇಸ್ಲಾಂ ಧರ್ಮದ ತಿರುಳನ್ನು ಸಂಕ್ಷಿಪ್ತವಾಗಿ ಸಾರವತ್ತಾಗಿ ನಿರೂಪಿಸುವ ಇವರ ಇನ್ನೊಂದು ಪುಸ್ತಕ.

ಜಿ.ಪಿ. ರಾಜರತ್ನಂ ಅವರು ಓದಿದ ರಾಮನಗರದಲ್ಲಿನ ಸರಕಾರಿ ಶಾಲೆ

ಹಳೆಗನ್ನಡ ಕಾವ್ಯಗಳ ಅಧ್ಯಯನಕ್ಕೆ ಸಹಾಯಕವಾಗುವ ಶ್ರೀ ಕವಿರತ್ನ, ರನ್ನನ ರಸಘಟ್ಟ, ಶ್ರೀ ಕವಿಪಂಪ, ಪಂಪಕವಿಯ ಕರ್ಣ ರಸಾಯನ, ಹಳೆಗನ್ನಡ ಪದ್ಯಾಂಜಲಿ ಮೊದಲಾದ ಹದಿನೈದಕ್ಕೂ ಮೀರಿದ ಪುಸ್ತಕಗಳನ್ನೂ ಶ್ರೀ ವಿಷ್ಣುಚಿತ್ತ, ಮುಕುಂದ ಮಾಲಾ, ನನ್ನ ಶ್ರೀವೈಷ್ಣವ ಕೈಂಕರ್ಯ, ಶ್ರೀರಾಮನಾಮ ಮೊದಲಾದ ವಿಷ್ಣುಭಕ್ತಿ ಸಾಹಿತ್ಯಕ್ಕೆ ಸಂಬಂಧಿಸಿದ ಇಪ್ಪತ್ತು ಕೃತಿಗಳನ್ನೂ ಇವರು ಹೊರತಂದಿದ್ದಾರೆ. ನಾಟಕಕಾರ ಕೈಲಾಸಂ ಅವರನ್ನು ಕುರಿತಂತೆಯೇ ಹದಿನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ.

ಶಾಂತಿ, ನೂರು ಪುಟಾಣಿ, ಪುರುಷ ಸರಸ್ವತಿ, ಗುಲಗಂಜಿ, ಕೋಳಿಕಳ್ಳ, ಬಾ ಕರೂ ಬಾ, ಗೋಳೂರಿನ ಗಾಯಕರು, ವಿಚಾರ ತರಂಗ, ಸ್ವಾರಸ್ಯ, ಕಿರಣಾನುಭವ, ಸಭಾವಿನಯ, ವಿಚಾರ ರಶ್ಮಿ, ಹತ್ತು ವರುಷ, ನಿರ್ಭಯಾಗ್ರಫಿ ಇನ್ನೂ ಮುಂತಾದುವು ಇವರ ಇನ್ನಿತರ ಮೌಲಿಕ ಕೃತಿಗಳು.

ರಾಜರತ್ನಂ ಅವರಿಗೆ ಪ್ರಸಿದ್ಧಿ ತಂದುಕೊಟ್ಟ ಸೃಜನಶೀಲ ಕೃತಿಯೆಂದರೆ ರತ್ನನ ಪದಗಳು. ಕುಡಿತದಿಂದ ಸದಾ ದೂರವಿದ್ದ ರಾಜರತ್ನಂರವರಿಂದ ಈ ಕೃತಿಯಲ್ಲಿ ರೂಪಿಸಲ್ಪಟ್ಟಿರುವ ಯೆಂಡ್ಗುಡ್ಕ ರತ್ನನ ಪಾತ್ರ ಅತ್ಯಂತ ವಿಶಿಷ್ಟವಾದುದು. ಬಿಡಿಬಿಡಿಯಾದ ಕವಿತೆಗಳಿಂದ ಕೂಡಿದ್ದರೂ ಈ ಕೃತಿಯು ಯೆಂಡ್ಗುಡ್ಕ ರತ್ನನ ಪಾತ್ರದ ಒಟ್ಟು ಆತ್ಮಕಥನದಂತೆ ಮೂಡಿಬಂದಿದೆ. ಮನುಷ್ಯನ ನೀತಿ-ನಡತೆಗಳ ವೈವಿಧ್ಯಮಯ ಮಾದರಿಗಳು ಈ ಕೃತಿಯಲ್ಲಿ ಸಹಜವಾಗಿ ಅನಾವರಣಗೊಂಡಿವೆ. ಭಾಷಿಕ ನೆಲೆಯ ದೃಷ್ಟಿಯಿಂದಂತೂ ಈ ರತ್ನನ ಪದಗಳು ಹೊಸದೊಂದು ಪ್ರಯೋಗಶೀಲತೆಯನ್ನು ಪ್ರಕಟಗೊಳಿಸಿವೆ. ಮಾತ್ರವಲ್ಲದೆ, ಬದುಕಿನ ಅಪೂರ್ವ ಅನುಭವಗಳನ್ನು ತನ್ನ ಅಂತರಂಗದಲ್ಲಿ ಅಡಗಿಸಿಕೊಂಡಿರುವ ಕೃತಿ ಇದಾಗಿದೆ.

‘‘ಅರ್ತ್ ಇಲ್ಲಾಂತ ನಗಬೇಡಣ್ಣಾ

ನಾ ಕುಡದಾಡೋ ಮಟ್ಟು!

ಕುಡಕನ್ ಪದಗೋಳ್ ಒಕ್ ನೋಡಿದ್ರೆ

ಮಸ್ತಾಗ್ ಅವೆ ಗುಟ್ಟು!’’

ಇದು ರತ್ನನ ಪದಗಳು ಕೃತಿಯ ಅಂತಃ ಸತ್ವವಾಗಿದೆ. ನಾಗನ ಪದಗಳು ಎಂಬುದು ರತ್ನನ ಪದಗಳಷ್ಟೇ ಮಹತ್ವಪೂರ್ಣ ಎನಿಸಿರುವ ಇವರ ಮತ್ತೊಂದು ಮೌಲ್ಯಯುತ ಕೃತಿಯಾಗಿದೆ. ಸೃಜನಶೀಲ ಸಾಹಿತ್ಯ ರಚನೆಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಸಾಹಿತ್ಯ ಪರಿಚಾರಕರಾಗಿ ಕನ್ನಡ ಪುಸ್ತಕಗಳನ್ನು ಹೊತ್ತು ನಾಡಿನ ಮೂಲೆ ಮೂಲೆಗೂ ತಲುಪಿಸುವ ಮಹತ್ವದ ಕೆಲಸ ಮಾಡಿದ್ದಾರೆ ರಾಜರತ್ನಂ. ಬೌದ್ಧಧರ್ಮ, ಜೈನಧರ್ಮ, ಕ್ರೈಸ್ತ ಧರ್ಮ ಮತ್ತು ಇಸ್ಲಾಂ ಧರ್ಮಗಳ ಅಂತಃಸತ್ವವನ್ನು ಅತ್ಯಂತ ಸರಳವಾಗಿ, ಆದರೆ ಪರಿಣಾಮಕಾರಿಯಾಗಿ ಸಹೃದಯ ಸಮೂಹಕ್ಕೆ ಅರ್ಥ ಮಾಡಿಸುವ ನಿಟ್ಟಿನಲ್ಲೂ ಸಕ್ರಿಯವಾಗಿ ದುಡಿದಿದ್ದಾರೆ. ಕಾದಂಬರಿ ಪ್ರಕಾರವೊಂದನ್ನು ಹೊರತುಪಡಿಸಿ ಕಾವ್ಯ, ನಾಟಕ, ಕಥೆ, ವಿಮರ್ಶೆ, ಶಿಶುಸಾಹಿತ್ಯ, ಧಾರ್ಮಿಕ ಸಾಹಿತ್ಯ, ವಿಚಾರ ಸಾಹಿತ್ಯ ಮೊದಲಾದ ಎಲ್ಲ ಪ್ರಕಾರಗಳಲ್ಲೂ ಡಾ. ಜಿ.ಪಿ. ರಾಜರತ್ನಂ ಸಾಹಿತ್ಯಕ ದುಡಿಮೆ ಮಾಡಿದ್ದಾರೆ. ಇವರ ಸಾಹಿತ್ಯ ರಚನೆಯಲ್ಲಿ ವಿಭಿನ್ನತೆಯೂ ವಿಶಿಷ್ಟತೆಯೂ ಕಂಡುಬರುತ್ತದೆ. ಭಾಷೆ, ವಸ್ತು ಮತ್ತು ತಂತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ರಾಜರತ್ನಂ ಮೂಡಿಸಿದ್ದಾರೆ. ಡಾ. ಜಿ.ಪಿ. ರಾಜರತ್ನಂ ಅವರು ಬರಿಯ ಸಾಹಿತ್ಯ ಸೃಷ್ಟಿಯಲ್ಲಿ ಮಾತ್ರವಲ್ಲದೆ ವೈಯಕ್ತಿಕ ವ್ಯಕ್ತಿತ್ವದ ದೃಷ್ಟಿಯಿಂದಲೂ ವಿಶಿಷ್ಟತೆ ಸಾಧಿಸಿದ್ದವರು. ಇವರ ಬರಹದಂತೆ ಬದುಕೂ ಸಹ ಮಹತ್ವವುಳ್ಳದ್ದು.

ಕನ್ನಡ ಪುಸ್ತಕ ಪ್ರಾಧಿಕಾರವು ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿಯನ್ನು ನೀಡುತ್ತಿದೆ. ಇಲ್ಲಿಯವರೆಗೆ ಪ್ರೊ.ಕಿ.ರಂ. ನಾಗರಾಜು, ಡಾ.ಸುಮತೀಂದ್ರ ನಾಡಿಗ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪಿ.ಲಂಕೇಶ್

ಡಾ. ಜಿ.ಪಿ. ರಾಜರತ್ನಂ ಕನ್ನಡ ಸಾರಸ್ವತ ಲೋಕ ಕಂಡಂತಹ ಒಬ್ಬ ಅನನ್ಯ ಸಾಹಿತಿ. ಕಾವ್ಯ, ನಾಟಕ, ಕಥೆ, ಮಕ್ಕಳ ಸಾಹಿತ್ಯ, ಬೌದ್ಧ ಸಾಹಿತ್ಯ, ಜೈನ ಸಾಹಿತ್ಯ, ಇಸ್ಲಾಂ ಸಾಹಿತ್ಯ - ಹೀಗೆ ಬಹುಮುಖಿ ನೆಲೆಯಲ್ಲಿ ರಾಜರತ್ನಂ ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೆ, ತಮ್ಮನ್ನು ತಾವು ‘ಸಾಹಿತ್ಯ ಪರಿಚಾರಕ’ ಎಂದು ಕರೆದುಕೊಂಡು, ಅದರಂತೆಯೆ ಸಾಹಿತ್ಯ ಸೇವೆಗೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು ರಾಜರತ್ನಂ. ಪಿ. ಲಂಕೇಶ್, ಕೆ.ಎಸ್. ನಿಸಾರ್ ಅಹಮದ್ ಮೊದಲಾದ ಹಲವು ಸುಪ್ರಸಿದ್ಧ ಸಾಹಿತಿಗಳನ್ನು ಪ್ರೋತ್ಸಾಹಿಸಿ ಬೆಳಕಿಗೆ ತಂದ ಶ್ರೇಯಸ್ಸೂ ರಾಜರತ್ನಂ ಅವರಿಗೆ ಸಲ್ಲುತ್ತದೆೆ.

ಇಂತಹ ಅಪೂರ್ವ ಸಾಹಿತಿ ಜನಿಸಿದ್ದು ರಾಮನಗರದಲ್ಲಿ ಎಂಬುದು ಒಂದು ಅಭಿಮಾನದ ಸಂಗತಿ. ಇಂದು ರಾಮ ನಗರವು ಜಿಲ್ಲಾ ಕೇಂದ್ರವಾಗಿ ರೂಪುಗೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಇಷ್ಟಾದರೂ, ಕನ್ನಡ ಸಾಹಿತ್ಯ ಲೋಕದ ಮೇರು ವ್ಯಕ್ತಿತ್ವ ರಾಜರತ್ನಂ ಅವರ ಹೆಸರಿನಲ್ಲಿ ಒಂದಾದರೂ ಸ್ಮಾರಕ ರಾಮನಗರದಲ್ಲಿ ಇಲ್ಲದಿರುವುದೊಂದು ವಿಪರ್ಯಾಸ. ರಾಮನಗರದ ಛತ್ರದ ಬೀದಿಯಲ್ಲಿ ‘ಜಿ.ಪಿ. ರಾಜರತ್ನಂ ವೃತ್ತ’ ಎಂಬ ಬರಹವಿರುವ ಧ್ವಜಸ್ತಂಭವೊಂದನ್ನು ಹೊರತುಪಡಿಸಿ ರಾಜರತ್ನಂ ಅವರ ಹೆಸರಿನ ಯಾವುದೇ ಕುರುಹು ರಾಮನಗರದಲ್ಲಿಲ್ಲ ಎಂದು ಇಲ್ಲಿನ ಜನರು ಬೇಸರ ವ್ಯಕ್ತಪಡಿಸುತ್ತಾರೆ.

ಅವರ ಜನ್ಮದಿನದ ಈ ಸಂದರ್ಭದಲ್ಲಿಯಾದರೂ ಅಪ್ಪಟ ಕನ್ನಡಾಭಿಮಾನಿ ರಾಜರತ್ನಂ ಅವರ ಹೆಸರಿನಲ್ಲಿ ‘ಡಾ. ಜಿ.ಪಿ. ರಾಜರತ್ನಂ ಕನ್ನಡ ಸಾಂಸ್ಕೃತಿಕ ಭವನ’ ವನ್ನು ರಾಮನಗರದಲ್ಲಿ ನಿರ್ಮಿಸಲು ಜಿಲ್ಲಾಡಳಿತ ಮನಸ್ಸು ಮಾಡಬೇಕು. ಆ ಮೂಲಕ ಕನ್ನಡ ನಾಡಿನ ಅಪೂರ್ವ ಸಾಹಿತಿಗೆ ಗೌರವ ಸಲ್ಲಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)