varthabharthi

ಸುಗ್ಗಿ

ನರೇಂದ್ರ ನಾಯಕ್ ಜೀವನ ಕಥನ

ಚಿಗಳ್ಳಿಯ ದೀಪಗಳು... ಪವಾಡದ ಹೆಸರಿನಲ್ಲಿ ಮೋಸ...

ವಾರ್ತಾ ಭಾರತಿ : 16 Dec, 2017
ನಿರೂಪಣೆ: ಸತ್ಯಾ ಕೆ.

ಭಾಗ-24

ವಿಚಾರವಾದಿಗಳನ್ನು ಹೀಯಾಳಿಸುವುದು, ಅವರು ಹೇಳುವುದು ಸರಿಯಲ್ಲ ಎಂಬುದನ್ನು ಸಾಬೀತು ಪಡಿಸುವ ಸವಾಲುಗಳನ್ನು ನಾವು ಸದಾ ಎದುರಿಸುತ್ತಿರುತ್ತೇವೆ. ಒಂದು ರೀತಿಯ ಮೋಸವನ್ನು ಬಯಲಿಗೆ ಎಳೆದಾಕ್ಷಣ ಮೋಸ ಇನ್ನೊಂದು ರೀತಿಯಲ್ಲಿ ಹುಟ್ಟಿಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ನಾವು ತನಿಖೆಯ ಆಧಾರದಲ್ಲಿಯೇ ಮುಂದುವರಿಯುತ್ತೇವೆ, ಅದಕ್ಕಾಗಿ ನಾವು ಸದಾ ಸಿದ್ಧರಿರುತ್ತೇವೆ. ಉತ್ತರ ಕರ್ನಾಟಕದ ಭಾಗದಲ್ಲಿ ಕಾರ್ಯ ಗಳನ್ನು ನೀಡುವಾಗ, ಆಗಾಗ ಚಿಗಳ್ಳಿ ಲಾಂದ್ರಗಳ ಬಗ್ಗೆ ಪ್ರಶ್ನೆಗಳು ಬರುತ್ತಿದ್ದವು.

ಆ ಊರಿನಲ್ಲಿ ಎಣ್ಣೆಯಿಲ್ಲದ ಲಾಂದ್ರಗಳು ಉರಿಯುತ್ತವೆ. ಅದು ಹೇಗೆ ಎಂಬ ಪ್ರಶ್ನೆಗಳನ್ನು ನನ್ನಲ್ಲಿ ಕೇಳುತ್ತಿದ್ದರು. ನಾನು ಎಣ್ಣೆ ಇಲ್ಲದೆ ಲಾಂದ್ರಗಳು ಉರಿಯುತ್ತವೆ ಎಂಬುದು ಸುಳ್ಳು ಎಂದು ಹೇಳಿ ಸುಮ್ಮನಾಗುತ್ತಿದ್ದೆ ಆದರೆ ಮೂಢನಂಬಿಕೆಗಳನ್ನು ಪ್ರಚಾರ ಮಾಡುವುದರಲ್ಲಿ ಮಾಧ್ಯಮಗಳ ಪಾತ್ರವೂ ಹಿರಿದು. ನಂಬಿಕೆಯ ಹೆಸರಿನಲ್ಲಿ ಮೂಢನಂಬಿಕೆಗಳ ಪ್ರಚಾರ ಇಂದಿಗೂ ಪ್ರಚಲಿತದಲ್ಲಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ 2002ರಲ್ಲಿ ಈ ಚಿಗಳ್ಳಿಯ ಲಾಂದ್ರ ಬಗ್ಗೆ ಭಾರೀ ಪ್ರಚಾರವಾಗಿತ್ತು. ಈ ಬಗ್ಗೆ ರಾಜ್ಯದ ಪ್ರಮುಖ ಕನ್ನಡ ಪತ್ರಿಕೆಯೊಂದರಲ್ಲಿ ಲೇಖನ ಪ್ರಕಟವಾಯಿತು. ಅದರ ಬೆನ್ನಿಗೇ ಆಂಗ್ಲ ಪತ್ರಿಕೆಯೊಂದರಲ್ಲಿ ಆ ಲಾಂದ್ರಗಳ ಪವಾಡ ಸದೃಶ್ಯ ಉರಿಯುವಿಕೆಯ ಬಗ್ಗೆ ಚಿತ್ರದೊಂದಿಗೆ ಬರವಣಿಗೆಯೂ ಬಂತು. ಲಾಂದ್ರಗಳು ಸುಮಾರು 25 ವರ್ಷಗಳಿಂದ ಪವಾಡ ಸದೃಶವಾಗಿ ಉರಿಯುತ್ತಿವೆ ಎಂಬ ಕತೆ ಪ್ರಚಾರವಾಗಿತ್ತು.

ಚಿಗಳ್ಳಿಯ ಶಾರದಾ ರಾಯ್ಕರ್ ಎಂಬ ಬಡ ಹೆಣ್ಣು ಮಗಳ ಮನೆಯಲ್ಲಿ ಈ ಪವಾಡ ಆರಂಭವಾಯಿತು. ಆಕೆ ಯಾರೋ ಸ್ವಾಮಿಯ ಪ್ರವಚನಕ್ಕೆ ಹೋಗಿ ಮನೆಗೆ ಬರುವ ಬಡವರಿಗೆ ಅನ್ನದಾನ ಮಾಡುವ ಇಚ್ಛೆಯಿಂದ ಹೊರಟಿದ್ದಳಂತೆ. ಆದರೆ ಆಕೆಯ ಮನೆಯಲ್ಲಿ ಏನೂ ಇರಲಿಲ್ಲ. ದೀಪವು ಉರಿಯಲು ಎಣ್ಣೆಯೂ ಇರಲಿಲ್ಲ. ಆಗ ಹಠಾತ್ತನೆ ‘ಫಳಾರ್’ ಎಂದು ಮಿಂಚಿನಂತೆ ಕೋರೈಸುವ ಬೆಳಕು ಸೃಷ್ಟಿಯಾಯಿತು. ಈ ಬೆಳಕಿನಿಂದ ಲಾಂದ್ರವು ಹತ್ತಿ ಉರಿಯತೊಡಗಿತು. ಉರಿಯುವ ಲಾಂದ್ರವು ಒಂದಿದ್ದದ್ದು ಮೂರಾಯಿತು! ಕೊನೆಗೆ ಈಕೆ ತೀರಿಕೊಂಡಾಗ ಆಕೆಯ ಸಂಬಂಧಿ ನಾಗರತ್ನಾ ರಾಯ್ಕರ್ ಈ ದೀಪಗಳ ಆರೈಕೆ ಮಾಡತೊಡಗಿದರು. ಎಣ್ಣೆ ಇಲ್ಲದೆ ಉರಿಯುವ ಈ ದೀಪಗಳಿಗೆ ಆರೈಕೆಯ ಅಗತ್ಯವೇನೆಂಬ ಪ್ರಶ್ನೆ ನಾವು ಕೇಳಬಹುದಾದರೂ ಈ ಆರೈಕೆ ಬೇಕೆಂಬುದನ್ನು ಒಪ್ಪಿಕೊಳ್ಳಲೇಬೇಕು.

ಎಣ್ಣೆ ಇಲ್ಲದೆ ಉರಿಯುವ ಈ ಲಾಂದ್ರಗಳ ವಿಷಯ ಅಲ್ಲಲ್ಲಿ ಹರಡಿತು. ನೂರಾರು ಜನರು ಈ ದೀಪಗಳನ್ನು ವೀಕ್ಷಿಸಲು ಬರತೊಡಗಿದರು. ಇದರ ಸುತ್ತಲೂ ಊರಿನ ಫುಢಾರಿಗಳ ಮತ್ತು ಪರ ಊರಿನ ಆಸಕ್ತರ ಗುಂಪು ಬೆಳೆಯಿತು. ಇದಕ್ಕೊಂದು ದೀಪ ಸಂರಕ್ಷಣಾ ಸಮಿತಿಯೂ ಹುಟ್ಟಿಕೊಂಡಿತು. ಈ ಸಮಿತಿಯ ಮುಖ್ಯಸ್ಥರಾಗಿ ಊರಿನವರಾದ ಗೌರಣ್ಣನವರ್ ಹಾಗೂ ಕೆನರಾ ಬ್ಯಾಂಕ್ ಉದ್ಯೋಗಿ ರಾಜೇಶ್ ರಾವ್ ಅಧಿಕಾರ ವಹಿಸಿಕೊಂಡರು. ದೀಪಗಳಿಗೆ ಮಂದಿರ ಕಟ್ಟುವ ಸಿದ್ಧತೆಗಳು ಆರಂಭವಾಯಿತು. ಈ ಉದ್ದೇಶಕ್ಕಾಗಿ ಅವರು ಜನರಿಂದ ಹಣ ಕೂಡಿಸಲು ಮುಂದಾದರು. ಎಣ್ಣೆ ಇಲ್ಲದೆ ಉರಿಯುವ ದೀಪಗಳಿಗಂತೂ ಭಾರೀ ಪ್ರಚಾರ. ಕೆಲವು ಪತ್ರಿಕೆಗಳು ಇವುಗಳನ್ನು ಜನಪ್ರಿಯ ಮಾಡುವ ಮುತುವರ್ಜಿಯನ್ನೇ ವಹಿಸಿಕೊಂಡಿದ್ದವು. ಮುಂಡಗೋಡು- ಶಿರಸಿ ಕಡೆ ಯಾವ ವಿಐಪಿಗಳು ಬಂದರೂ ಅವರನ್ನು ಚಿಗಳ್ಳಿಗೆ ಕರೆಯಿಸಿ ಅವರ ಕೈಯಲ್ಲಿ ಶಹಬಾಸ್‌ಗಿರಿ ಗಿಟ್ಟಿಸುವುದು ಪರಿಪಾಠವಾಯಿತು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಬೌದ್ಧರ ಗುರು ದಲಾಯಿಲಾಮಾ, ಕರ್ನಾಟಕ ಸರಕಾರದ ಹಲವಾರು ಮಂತ್ರಿಗಳು, ಮುಖ್ಯವಾಗಿ ಉದ್ಯಮ ಸಚಿವ ಆರ್.ವಿ. ದೇಶಪಾಂಡೆ ಮೊದಲಾದವರು ಈ ದೀಪಗಳ ಪವಾಡಗಳನ್ನು ವೀಕ್ಷಿಸಿದ್ದರು.

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನಾನಾ ಕಾರ್ಯಕ್ರಮಗಳನ್ನು ಕೊಡುವಾಗ ಈ ಪವಾಡ ಲಾಂದ್ರಗಳ ಬಗ್ಗೆ ಆಗಾಗ ಪ್ರಶ್ನೆಗಳು ಮೂಡುತ್ತಿದ್ದವು. ಆದರೆ ನಾನು ಆ ವಿಷಯವನ್ನು ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಯಾವುದೋ ಹಳ್ಳಿಯ ಮೂಲೆಯಲ್ಲಿ ಏನೋ ಮಾಡಿಕೊಂಡಿದ್ದಾರೆಂದು ಅಲ್ಲಿಗೆ ಬಿಟ್ಟಿದ್ದೆ.ಆದರೆ ಪ್ರಚಾರ ಹೆಚ್ಚುತ್ತಿದ್ದಂತೆ ನನಗೂ ಆ ಬಗ್ಗೆ ಕುತೂಹಲ ಮೂಡಿತು. ಕೆಲವು ಪತ್ರಿಕೆಗಳು ಈ ಪವಾಡದ ರಹಸ್ಯವನ್ನು ನಾನು ಬಯಲು ಮಾಡಬೇಕೆಂದು ಪಂಥಾಹ್ವಾನವನ್ನೂ ನೀಡಿದ್ದವು. ತತ್ಕಾರಣ, ಈ ಬಗ್ಗೆ ನಾನು ಕಾರ್ಯೋನ್ಮುಖವಾದೆ. ಮೊದಲನೆಯ ಹಂತವಾಗಿ ಈ ಪವಾಡಕ್ಕೆ ಪಂಥಾಹ್ವಾನ ನೀಡಿದ್ದ ಪತ್ರಿಕೆಗಳಿಗೆ ಪ್ರಕಟನೆಯನ್ನು ನೀಡಿದೆ. ನಿಜವಾಗಿಯೂ ಆ ದೀಪಗಳನ್ನು ನಾನು ಕೈಯಲ್ಲಿ ಹಿಡಿದು ಪರೀಕ್ಷೆ ಮಾಡಿದಾಗಲೂ ಅವುಗಳು ಎಣ್ಣೆ ಇಲ್ಲದೆ ಉರಿಯುವುದು ನಿಜವಾಗಿದ್ದರೆ ಅದರ ಮಾಲಕರಿಗೆ ನಾನು ಒಂದು ಲಕ್ಷ ರೂ. ಬಹುಮಾನ ಪ್ರಕಟಿಸಿದೆ. ಕೆಲವು ದಿನಗಳ ನಂತರ ಪತ್ರಿಕಾಗೋಷ್ಠಿ ಕರೆದು, ಇದೇ ವಿಷಯ ತಿಳಿಸಿದೆ. ಕೆಲವು ಟಿವಿ ಚಾನೆಲ್‌ಗಳಲ್ಲೂ ಈ ಬಗ್ಗೆ ಪ್ರಚಾರವಾಯಿತು.

ಲಾಂದ್ರಗಳ ಪವಾಡಗಳನ್ನು ಬೆಂಬಲಿಸಿ ಕೆಲವರು ಹೇಳಿಕೆಗಳನ್ನು ಕೂಡಾ ನೀಡಿದರು. ಈ ಹಂತದಲ್ಲಿ ನಾವು ದೂರದಿಂದ ಸವಾಲುಗಳನ್ನು ಕೊಡುವ ಬದಲಿಗೆ ಪವಾಡ ನಡೆಯುವ ಸ್ಥಳಕ್ಕೆ ಹೋಗಲು ನಿರ್ಧರಿಸಿದೆವು. ಮಾರ್ಚ್ 15, 2002ರಂದು ಶಿರಸಿಯಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿ ಪತ್ರಿಕಾಗೋಷ್ಠಿಯಲ್ಲಿ ಮತ್ತೆ ಎಣ್ಣೆ ಇಲ್ಲದೆ ಉರಿಯುವ ಲಾಂದ್ರಗಳಿಗೆ ಸವಾಲು ಎಸೆದೆವು. ಪವಾಡ ರಹಸ್ಯ ಬಯಲು ಕಾರ್ಯಕ್ರಮದ ಕೊನೆಯಲ್ಲಿ ಪ್ರಶ್ನೋತ್ತರಗಳು ನಡೆಯುವಾಗ ಚಿಗಳ್ಳಿಯಿಂದ ದೊಡ್ಡ ಗುಂಪೇ ಬಂದಿತ್ತೆಂದು ನಮಗೆ ತಿಳಿದು ಬಂತು. ಅವರು ನಮ್ಮ ಮೇಲೆ ಆಕ್ರಮಣ ನಡೆಸಲು ಸಾಕಷ್ಟು ಪ್ರಯತ್ನ ಪಟ್ಟರೂ ಕಾರ್ಯಕ್ರಮದ ವೀಕ್ಷಕರೇ ಅವರ ಬಾಯಿ ಮುಚ್ಚಿಸಿದರು. ಈ ದೀಪಗಳನ್ನು ಮುಟ್ಟಿ ಪರೀಕ್ಷಿಸಲು ಅವಕಾಶ ನೀಡುವಂತೆ ನಾವು ಕೇಳಿದಾಗ ಚಿಗಳ್ಳಿಯಿಂದ ಬಂದವರಲ್ಲೊಬ್ಬ ಅದು ಆರಿ ಹೋದರೆ ಯಾರು ಹೊತ್ತಿಸುವುದು ಎಂದು ಪ್ರಶ್ನಿಸಿದ. ಆಗ ವೀಕ್ಷಕರಲ್ಲೊಬ್ಬ ಮಹಿಳೆ ಬಹಳ ಸಂಪ್ರದಾಯಸ್ತೆಯಾಗಿ ಕಾಣುತ್ತಿದ್ದಾಕೆ ಮರು ಪ್ರಶ್ನೆ ಎಸೆದಳು. ನಿಮ್ಮ ದೀಪ ನಿಜವಾಗಿಯೂ ಸತ್ಯವಾದದ್ದಾಗಿದ್ದರೆ ಹುಲು ಮಾನವರು ಮುಟ್ಟಿದಾಗ ಆರಿ ಹೋಗಲೇ ಬಾರದು ಎಂದಳು. ಮರುದಿನ ಅಲ್ಲೊಂದು ವಿಶೇಷ ಘಟನೆ ನಡೆಯಿತು. ಆ ಊರಿಗೆ ಬರುವವರನ್ನು ಕರೆದುಕೊಂಡು ಹೋಗಿ ದೀಪಗಳನ್ನು ತೋರಿಸುವ ಸಂಪ್ರದಾಯದಂತೆ, ಅಲ್ಲಿಂದ ಪೇಜಾವರ ಮಠದ ಸ್ವಾಮೀಜಿ ವಿಶ್ವತೀರ್ಥರನ್ನು ಚಿಗಳ್ಳಿಗೆ ಆಹ್ವಾನಿಸಲಾಯಿತು. ಶಿಷ್ಯನೊಬ್ಬ ದೀಪ ಮುಟ್ಟಿ, ಸೀಮೆಎಣ್ಣೆ ವಾಸನೆ ಬರುತ್ತಿದೆ ಎಂದು ಹೇಳಿದ!

ಆಗ ಸ್ವಾಮಿಗಳಿಗೂ ಅದರ ಬಗ್ಗೆ ಸಂಶಯ ಬಂತು. ಇದನ್ನು ಪವಾಡವೆಂದು ಒಪ್ಪಬೇಕಾದರೆ ಸರಿಯಾದ ತನಿಖೆ ಬೇಕು ಎಂದರು. ಇದರಿಂದ ದೀಪದ ಬೆಂಬಲಿಗರಿಗೆ ಸಾಕಷ್ಟು ಆಘಾತವಾಯಿತು! ಆದರೆ, ಸೀಮೆಎಣ್ಣೆ ವಾಸನೆ ಬರದಂತೆ ಅವರು ಹೊಸ ಉಪಾಯ ಮಾಡಿದರು. ಆದರೂ ನಾವು ಪವಾಡದ ಬೆನ್ನು ಬಿಡಲಿಲ್ಲ. ಆಗಿನ ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪತ್ರ ಬರೆದು, ಈ ದೀಪಗಳ ಬಗ್ಗೆ ತನಿಖೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಕೇಳಿಕೊಂಡೆವು. ನಮ್ಮ ಪತ್ರವನ್ನು ಅವರು ಜಿಲ್ಲಾಧಿಕಾರಿಗೆ ಕಳುಹಿಸಿದರು. ಈ ಮಧ್ಯೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕಾರ್ಯದರ್ಶಿ ಡಾ.ಎಚ್.ಎಸ್. ನಿರಂಜನಾರಾಧ್ಯ ಅವರೂ ನಮ್ಮನ್ನು ಬೆಂಬಲಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದರು. ಅದಕ್ಕೆ ಉತ್ತರವಾಗಿ ಜಿಲ್ಲಾಧಿಕಾರಿ ಸಮಿತಿ ರಚಿಸಿ ಅವರಿಗೆ ತಿಳಿಸಬೇಕೆಂದು ಉತ್ತರಿಸಿದರು. ನಾವು ಸಮಿತಿ ರಚಿಸಿಕೊಂಡು ಮೇ 14ರಂದು ಅಲ್ಲಿಗೆ ಬರುವುದಾಗಿ ತಿಳಿಸಿದೆವು. ಆ ದಿನ ನಾವು ಚಿಗಳ್ಳಿಗೆ ತಲುಪಿದಾಗ ಅಲ್ಲಿ ದೊಡ್ಡ ಪ್ರಮಾಣದ ಜನಜಂಗುಳಿಯಿತ್ತು. ಇದನ್ನು ನಿಯಂತ್ರಿಸಲು ಪೊಲೀಸರು ಕಷ್ಟ ಪಡುತ್ತಿದ್ದರು. ಪೊಲೀಸು ರಕ್ಷಣೆ ಇಲ್ಲದೆ ನಾವು ಅಲ್ಲಿ ಹೋಗಬಾರದು ಎಂಬ ಆದೇಶವಿದ್ದ ಕಾರಣ ನಾವು ಅವರ ರಕ್ಷಣೆ ಪಡೆಯಬೇಕಾಯಿತು. ಅಲ್ಲಿ ನಮ್ಮನ್ನು ಸ್ವಾಗತಿಸಲಾಯಿತು. ನಂತರ ದೀಪಗಳನ್ನು ನೋಡಲು ಹೋದೆವು. ದೊಡ್ಡ ಕಾಂಕ್ರಿಟ್ ಕಟ್ಟಡದೊಳಗೆ ಮರದಿಂದ ರಚಿಸಲಾದ ಕೋಳಿಗೂಡಿನಂತಹ ಚಿಕ್ಕದೊಂದು ಕಿಂಡಿಯ ಮೂಲಕ ಮಾತ್ರ ಲಾಂದ್ರವನ್ನು ವೀಕ್ಷಿಸಬಹುದಾಗಿತ್ತು. ಅದನ್ನು ಪರೀಕ್ಷಿಸಲು ಅಥವಾ ಮುಟ್ಟಲು ಯಾರಿಗೂ ಅವಕಾಶ ಇರಲಿಲ್ಲ. ನಾವು ಅದನ್ನು ಮುಟ್ಟಿ ಪರೀಕ್ಷಿಸಬೇಕೆಂದು ಹಠ ಹಿಡಿದೆವು. ಅಲ್ಲಿದ್ದ ಜನರಿಂದ ಸಾಕಷ್ಟು ಗಲಾಟೆಯಾಯಿತು.

ಈ ಹಂತದಲ್ಲಿ ಅಲ್ಲಿಯ ಎಸಿ ನವೀನ್‌ರಾಜ್ ಸಿಂಗ್ ಬಂದು ನಾವು ಚರ್ಚೆ ಬೇರೆ ಕಡೆ ಮಾಡೋಣವೆಂದು ಹತ್ತಿರದಲ್ಲಿದ್ದ ವಕೀಲರೊಬ್ಬರ ಮನೆಗೆ ಕರೆದುಕೊಂಡು ಹೋದರು. ನಾವು ಬಾಗಿಲು ತೆಗೆದು ಒಳ ಹೋಗಿ ದೀಪಗಳನ್ನು ಪರೀಕ್ಷಿಸಬೇಕೆಂದು ಪಟ್ಟು ಹಿಡಿದೆವು. ಸಮಿತಿಯವರು ಇದು ಸಾಧ್ಯವಿಲ್ಲವೆಂದರು. ಕೊನೆಗೆ ಒಂದು ಒಪ್ಪಂದವಾಯಿತು. ದೀಪದ ಮೇಲ್ವಿಚಾರಣೆ ನಡೆಸುತ್ತಿದ್ದ ನಾಗರತ್ನಾ ರಾಯ್ಕರ್ ಅವರು ಆ ದೀಪದಲ್ಲಿ ಒಂದನ್ನು ಎತ್ತಿ ಹಿಡಿದು ಅದನ್ನು ತೆರೆದು ಅದರಲ್ಲಿ ಎಣ್ಣೆ ಇಲ್ಲವೆಂದು ತೋರಿಸಬೇಕೆಂದು ಒಪ್ಪಂದ ಮಾಡಲಾಯಿತು. ನಾವೆಲ್ಲರೂ ಮತ್ತೆ ದೀಪ ಇರುವಲ್ಲಿಗೆ ಬಂದೆವು. ದೀಪ ಸಂರಕ್ಷಣಾ ಸಮಿತಿಯವರು ಆ ದೀಪವನ್ನು ತೋರಿಸಲು ಆಕೆಗೆ ತಿಳಿ ಹೇಳಲು ಹೋದರು. ಆದರೆ ದೀಪವನ್ನು ತೋರಿಸಲು ಆಕೆ ನಿರಾಕರಿಸಿದರು. ಅದಕ್ಕಾಗಿ ಆಕೆ ಹಲವು ಸಬೂಬುಗಳನ್ನು ನಮ್ಮ ಮುಂದಿರಿಸಿದಳು. ಕೊನೆಗೆ ಆಕೆ ದೀಪ ಕೈಯಲ್ಲಿ ಹಿಡಿದು ತೋರಿಸಲು ಮಾತ್ರ ಒಪ್ಪಿದಳು. ನಾನು ಎರಡು ಷರತ್ತು ವಿಧಿಸಿದ್ದೆ. ಒಂದನೆಯದು ಅದರ ಬೆಂಕಿಯನ್ನು ತೋರಿಸಲು ನಾನು ಕೊಟ್ಟ ಕರ್ಪೂರವನ್ನು ಅದರ ಬೆಂಕಿಗೆ ಹಿಡಿದು ತೋರಿಸಬೇಕು. ಎರಡನೆಯದು ಅದನ್ನು ಅಡ್ಡಮಾಡಿ ಎಣ್ಣೆ ಇಲ್ಲವೆಂದು ಸಾಬೀತು ಮಾಡಬೇಕು!

ಎರಡೂ ಷರತ್ತುಗಳಿಗೆ ಆಕೆ ಒಪ್ಪಲೇ ಇಲ್ಲ. ನಾನು ಹೇಳಿದ್ದನ್ನು ತಪ್ಪಿಸಲು ಮತ್ತೆ ಸಮಜಾಯಿಷಿ ನೀಡಿದಳು. ಶಾರದಾ ರಾಯ್ಕರ್ 25 ವರ್ಷಗಳ ಹಿಂದೆ ಹಾಕಿದ್ದ ಎಣ್ಣೆ ಇದ್ದರೆ ಏನು ಮಾಡಲಿ? ದೇವರ ಪವಾಡದಿಂದ ಈ ಲಾಂದ್ರದಲ್ಲಿ ಎಣ್ಣೆ ತುಂಬಿದ್ದರೆ ಮೊದಲಾದ ಪ್ರಶ್ನೆಗಳು ಅವಳದ್ದಾಗಿತ್ತು. ಕೊನೆಗೆ ಆಕೆ ನನಗೆ ಮಾತ್ರ ಲಾಂದ್ರವನ್ನು ಎತ್ತಿ ತೋರಿಸುವೆನೆಂದು ಹೇಳಿದಳು. ಆ ಸ್ಥಳದಲ್ಲಿ ಆಕೆ, ಟಿವಿ ಕ್ಯಾಮರಾದಾತ ಮತ್ತು ನಾನು ಮಾತ್ರವಿದ್ದು, ಆ ಲಾಂದ್ರವನ್ನು ತೋರಿಸುವುದೆಂದಾಯಿತು. ಅವಳ ಒಂದು ಕೈ ಅದರಡಿಯಲ್ಲಿತ್ತು. ಮತ್ತೊಂದು ಕೈ ಅದರ ಎಣ್ಣೆ ತುಂಬಿಸುವ ಟ್ಯಾಂಕ್‌ನ ಸುತ್ತಲಿತ್ತು. ಇದರ ಉದ್ದೇಶ ಸ್ಪಷ್ಟವಾಗಿತ್ತು. ಆ ಲಾಂದ್ರವನ್ನು ನಾನು ಹತ್ತಿರದಿಂದ ನೋಡಬಾರದು. ಮುಟ್ಟಬಾರದೆಂದು. ಸ್ವಲ್ಪ ಬದಿಯಿಂದ ನೋಡಿದಾಗ ಲಾಂದ್ರದ ಟ್ಯಾಂಕ್‌ನ ಮೇಲೆ ಎಣ್ಣೆಯ ಜಿಡ್ಡು ಕಂಡಿತು. ಅದನ್ನು ಅಡ್ಡ ಮಾಡು ಎಂದು ಅವಳಿಗೆ ಹೇಳಿದೆ. ಆಕೆ ಮಾಡಲಿಲ್ಲ. ಅಲ್ಲಿಯೇ ಕೂತಿದ್ದ ಆಕೆಯ ಗಂಡ ಅದನ್ನು ಅಡ್ಡ ಮಾಡಬೇಡ ತೆಗೆದು ಒಳಗಿಡು ಎಂದು ಹೇಳಿದರು. ಆಕೆ ಅದನ್ನು ಒಳಗಿಟ್ಟಳು. ಇಲ್ಲಿಗೆ ನಮ್ಮ ತನಿಖೆ ಮುಗಿಯಿತು. ಆ ಲಾಂದ್ರಗಳಿಗೆ ಯಾರೂ ನೋಡದ ಹೊತ್ತಿನಲ್ಲಿ ಎಣ್ಣೆ ತುಂಬಿಸಿ ಉರಿಸಲಾಗುತ್ತಿತ್ತು. ಎಣ್ಣೆ ತುಂಬಿಸಿರುವ ಬಾಟಲಿ ಕೂಡಾ ಆ ಕೋಣೆಯ ಒಳಗಡೆಯೇ ಇತ್ತು. ಅದು ಏಕೆಂದು ಪ್ರಶ್ನಿಸಿದಾಗ ಹತ್ತಿರವೇ ಇದ್ದ ನಂದಾದೀಪಕ್ಕೆ ತುಂಬಿಸಲು ಎಂಬ ಉತ್ತರ ಅವರಿಂದ ಬಂತು! ಅದೇ ಸ್ಥಳದಲ್ಲಿ ಉರಿಯುತ್ತಿರುವ ಮೂರು ಲಾಂದ್ರಗಳು ಇರುವಾಗ ಮತ್ತೊಂದು ನಂದಾದೀಪ ಬೇಕೇ ಎಂದು ಪ್ರಶ್ನಿಸಿದಾಗ ಅದು ನಮ್ಮ ಪದ್ಧತಿಯೆಂಬ ಹಾರಿಕೆಯ ಉತ್ತರ ನೀಡಿದರು. ಒಟ್ಟಿನಲ್ಲಿ ನಾಗರತ್ನಾ ರಾಯ್ಕರ್ ಹಾಗೂ ದೀಪ ಸಂರಕ್ಷಣಾ ಸಮಿತಿಯವರು ಸೇರಿ ಜನರಿಗೆ ಎಣ್ಣೆ ಇಲ್ಲದೆ ಉರಿಯುವ ಮೂರು ಲಾಂದ್ರಗಳ ಹೆಸರಿನಲ್ಲಿ ಮೋಸ ಮಾಡುತ್ತಿದ್ದರು. ಈ ಪವಾಡ ರಹಸ್ಯ ಬಯಲಾದಾಗ ಅಲ್ಲಿಯ ಜನ ರೊಚ್ಚಿಗೆದ್ದರು. ಸ್ಥಳೀಯ ಸಮಿತಿಯನ್ನು ರಚಿಸಿಕೊಂಡು ಈ ದೀಪಗಳ ಹಿಂದಿರುವ ಪವಾಡದ ರಹಸ್ಯ ಬಯಲು ಮಾಡಲು ಮುಂದಾದರು. ಈ ಪವಾಡ ರಹಸ್ಯ ಬಯಲಾದ ಮೇಲೆ ಪ್ರಚಾರ ನಿಂತಿತ್ತು. ಆದರೆ ಇಂತಹ ಪವಾಡ ಮತ್ತೆ ಯಾವಾಗ ತಲೆ ಎತ್ತುತ್ತದೋ ಎಂದು ಮಾತ್ರ ಹೇಳಲಾಗದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)