varthabharthi

ವೈವಿಧ್ಯ

ಹಸಿವು ಸೂಚ್ಯಂಕದ ವರದಿಯನ್ನು ಅಲ್ಲಗಳೆದ ನೀತಿ ಆಯೋಗ

ಹಸಿವಿನ ಮರೆವು!

ವಾರ್ತಾ ಭಾರತಿ : 18 Dec, 2017
ಸಿಲ್ವಿಯಾ ಕರ್ಪಗಮ್ & ವೀಣಾ ಶತ್ರುಘ್ನ

ನೀತಿ ಆಯೋಗದ ಸದಸ್ಯರಾದ ರಮೇಶ್‌ಚಂದ್ ಹಾಗೂ ಶಿವೇಂದ್ರ ಕುಮಾರ್ ಶ್ರೀವಾಸ್ತವ ಅವರು ತಮ್ಮ ಲೇಖನದಲ್ಲಿ ಅಂತಾರಾಷ್ಟ್ರೀಯ ಆಹಾರ ನೀತಿ ಹಾಗೂ ಸಂಶೋಧನಾ ಸಂಸ್ಥೆಯ ಜಾಗತಿಕ ಹಸಿವು ಸೂಚ್ಯಂಕವನ್ನು ಅಲ್ಲಗಳೆಯುವ ಜೊತೆಗೆ, ಹಲವಾರು ಅಭೂತಪೂರ್ವ ಸಾಧನೆಗಳ ದಾಖಲೆ ಹೊಂದಿರುವ 100 ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಪೌಷ್ಟಿಕತೆ ಸಂಸ್ಥೆಯ ವೈಜ್ಞಾನಿಕ ಸಿಂಧುತ್ವವನ್ನು ಕೂಡಾ ಕಡೆಗಣಿಸಿದ್ದಾರೆ.

ಅಂತಾರಾಷ್ಟ್ರೀಯ ಆಹಾರ ನೀತಿ ಹಾಗೂ ಸಂಶೋಧನಾ ಸಂಸ್ಥೆಯ ಜಾಗತಿಕ ಹಸಿವು ಸೂಚ್ಯಂಕವು ಈ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆಗೊಂಡಿದ್ದು, ಜಗತ್ತಿನಾದ್ಯಂತದ ದೇಶಗಳ ಹಸಿವಿನ ಸ್ಥಿತಿಗತಿ ಕುರಿತಂತೆ ವರದಿಯು ಬೆಳಕು ಚೆಲ್ಲಿದೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು ವಿಶ್ವದ 199 ರಾಷ್ಟ್ರಗಳ ಪೈಕಿ 100ನೇ ಸ್ಥಾನದಲ್ಲಿದೆ.

ಭಾರತದಲ್ಲಿನ ಆಹಾರ ಭದ್ರತೆ ಕುರಿತ ಪರಿಸ್ಥಿತಿಯನ್ನು ವಿವರಿಸುವ ಬದಲು ನೀತಿ ಆಯೋಗದ ಸದಸ್ಯರಾದ ರಮೇಶ್‌ಚಂದ್ ಹಾಗೂ ಶಿವೇಂದ್ರ ಕುಮಾರ್ ಶ್ರೀವಾಸ್ತವ ಅವರು ಜಾಗತಿಕ ಹಸಿವು ಸೂಚ್ಯಂಕವನ್ನು ‘‘ತಪ್ಪು ದಾರಿಗೆಳೆಯುವ ಹಸಿವಿನ ಸೂಚ್ಯಂಕ’’ ಎಂದು ಡಿಸೆಂಬರ್ 4ರಂದು ‘ದಿ ಹಿಂದೂ’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಬಣ್ಣಿಸಿ ದ್ದಾರೆ. ಕೇಂದ್ರ ಸರಕಾರದ ಮಹತ್ವದ ಅಂಗವೊಂದರ ಇಬ್ಬರು ನೀತಿನಿರೂಪಕರು ಈ ಲೇಖನವನ್ನು ಬರೆದಿರುವುದು ವಿಶೇಷ ಕಳವಳಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಆಹಾರ ನೀತಿ ಹಾಗೂ ಸಂಶೋಧನಾ ಸಂಸ್ಥೆ ಪ್ರಕಟಿಸಿರುವ ಜಾಗತಿಕ ಹಸಿವು ಸೂಚ್ಯಂಕದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಈ ಇಬ್ಬರು ಲೇಖಕರು, ಅಂಕಿಸಂಖ್ಯೆಗಳನ್ನು ತಿರುಚುವ ಮೂಲಕ ಭಾರತೀಯರ ಪೌಷ್ಟಿಕತೆಯ ಗುಣಮಟ್ಟದ ಬಗ್ಗೆ ಉತ್ತಮ ಭಾವನೆ ಮೂಡಿಸುವ ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ಶಿಶು ಆರೋಗ್ಯ ಸೂಚ್ಯಂಕಗಳು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಸೇರ್ಪಡೆಗೊಳ್ಳದೆ ಇರುತ್ತಿದ್ದರೆ, ಭಾರತವು 77ನೇ ಸ್ಥಾನದಲ್ಲಿರಬಹುದಾಗಿತ್ತು ಎಂದು ಅವರು ವಾದಿಸಿದ್ದಾರೆ. ಒಂದು ಬಗೆಯಲ್ಲಿ ಆ ರ್ಯಾಂಕ್ ಪಡೆಯುವುದನ್ನೇ ದೇಶವು ಹೆಮ್ಮೆ ಪಟ್ಟುಕೊಳ್ಳುವಂತಹ ವಿಚಾರವೆಂದು ಅವರು ಭಾವಿಸಿದಂತಿದೆ.

ಕಳೆದ ಒಂದು ದಶಕದಲ್ಲಿ ಭಾರತದ ತಲಾ ಆಹಾರ ಉತ್ಪಾದನೆಯು ಶೇ.26ರಷ್ಟು ಏರಿಕೆಯಾಗಿದ್ದು, ಕಳೆದ 50 ವರ್ಷಗಳಲ್ಲಿ ದುಪ್ಪಟ್ಟು ಹೆಚ್ಚಳ ಕಂಡಿದೆಯೆಂದು ಲೇಖಕರು ಹೇಳಿಕೊಂಡಿದ್ದಾರೆ. ಆಹಾರ ಉತ್ಪಾದನೆ ಹೆಚ್ಚಿದ ಹಾಗೆ ಹಸಿವಿನಿಂದ ಬಾಧಿತರಾದವರ ಪ್ರಮಾಣ ತನ್ನಿಂತಾನೆ ಕಡಿಮೆಯಾಗಲಿದೆಯೆಂದು ಹೇಳುವ ಮೂಲಕ ಹಸಿವು ಹಾಗೂ ಆಹಾರ ಉತ್ಪಾದನೆಗೆ ಸರಳವಾಗಿ ನಂಟು ಕಲ್ಪಿಸಲು ಯತ್ನಿಸಿದ್ದಾರೆ. ಆದರೆ ಹಸಿವಿನ ಸಮಸ್ಯೆಯು ಬಾಧಿಸುವ ರೀತಿ ಹಾಗೂ ಹಸಿವು ಬಾಧಿತರ ಪ್ರಮಾಣವು ಆಹಾರ ಉತ್ಪಾದನೆಗಿಂತಲೂ, ಆಹಾರ ಲಭ್ಯತೆಯ ಜೊತೆಗೆ ನಂಟನ್ನು ಹೊಂದಿರುವ ಬಗ್ಗೆ ಅವರಿಗಿರುವ ಅಜ್ಞಾನವನ್ನು ಇದು ತೋರಿಸಿಕೊಟ್ಟಿದೆ.

ಒಂದು ದೇಶದ ಹಸಿವು ಬಾಧಿತರ ಪ್ರಮಾಣ ವನ್ನು ನಿರ್ಧರಿಸುವಾಗ ಅಲ್ಲಿ, ಉತ್ಪಾದನೆಯಾದ ಆಹಾರವು ಎಷ್ಟು ಪ್ರಮಾಣದಲ್ಲಿ ರಫ್ತಾಗುತ್ತಿದೆ, ಪಶು ಆಹಾರವಾಗಿ ಬಳಕೆಯಾಗುತ್ತಿದೆ ಮತ್ತು ವ್ಯರ್ಥ ವಾಗುತ್ತಿದೆ ಎಂಬುದನ್ನು ಪರಿಗಣಿಸ ಬೇಕಾಗುತ್ತದೆ. ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಸಮೂಹಗಳ ನಡುವೆ ಆಹಾರ ವಿತರಣೆಯ ಸ್ವರೂಪ ಇವೆಲ್ಲವನ್ನು ಪರಿಗಣನೆಗೆ ತೆಗೆದುಕೊಳ್ಳ ಬೇಕಾಗುತ್ತದೆ. ನಗರ ಪ್ರದೇಶದ ಶ್ರೀಮಂತರು ಹಾಗೂ ನಗರದ ಬಡವರಿಗೆ ಒಂದೇ ರೀತಿಯಾಗಿ ಆಹಾರದ ಲಭ್ಯತೆಯಿದೆ ಯೆಂದು ಈ ಇಬ್ಬರು ತಜ್ಞರು ಭಾವಿಸಿದ್ದಾರೆಯೇ?. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನೇ (ಪಡಿತರ) ಅವಲಂಬಿಸಿರು ವವರಿಗೂ, ಮಾರುಕಟ್ಟೆಗಳಿಂದ ಆಹಾರವನ್ನು ಖರೀದಿಸಲು ಶಕ್ತರಾಗಿರುವವರಿಗೂ ಆಹಾರ ಲಭ್ಯತೆಯ ಪ್ರಮಾಣದ ಮೇಲೆ ಸರಿಸಮಾನ ವಾದ ನಿಯಂತ್ರಣವಿರುವುದೇ?. ಆಹಾರ ಲಭ್ಯತೆಯಲ್ಲಿ ಲಿಂಗ, ಜಾತಿ, ಧರ್ಮ, ಪ್ರಾಂತ ಹಾಗೂ ನಗರ/ಗ್ರಾಮೀಣವೆಂಬ ಭಿನ್ನತೆ ಇಲ್ಲವೇನು?.

ಜಗತ್ತಿನಾದ್ಯಂತದ ಒಟ್ಟು ಹಸಿವು ಬಾಧಿತರಲ್ಲಿ ಶೇ.60ರಷ್ಟು ಮಂದಿ ಮಹಿಳೆಯರೆಂಬುದನ್ನು ಜಾಗತಿಕ ಆರೋಗ್ಯ ಸೂಚ್ಯಂಕದ ವರದಿ ತೋರಿಸಿ ಕೊಟ್ಟಿದೆ. ಮಹಿಳೆಯರಿಗೆ ಶಿಕ್ಷಣ, ಆರೋಗ್ಯಪಾಲನೆ ಹಾಗೂ ಸಂಪನ್ಮೂಲ ಗಳ ಲಭ್ಯತೆಯನ್ನು ನಿರಾಕರಿಸುವಂತಹ ಸಾಮಾಜಿಕ ಸಂರಚನೆಯು ಆಳವಾಗಿ ಬೇರೂರಿರುವುದರ ಪರಿಣಾಮ ಇದಾಗಿದೆ. ಒಂದು ದೇಶದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳು ಕೂಡಾ ಆಗಾಗ್ಗೆ ತಾರತಮ್ಯ, ಬಡತನ ಹಾಗೂ ಹಸಿವಿನ ಬಲಿಪಶುಗಳಾಗಿರುತ್ತಾರೆ. ಹಸಿವಿನ ಪ್ರಮಾಣವನ್ನು ಅಳೆಯಲು ಲಿಂಗ ಹಾಗೂ ಜನಾಂಗೀಯತೆಯನ್ನು ಬಳಸಿಕೊಂಡಲ್ಲಿ ಹಸಿವು ಸೂಚ್ಯಂಕ ದಲ್ಲಿ ಭಾರತದ ಸ್ಥಾನಮಾನ ಇನ್ನಷ್ಟು ಕಳಪೆಯಾಗುವ ಸಾಧ್ಯತೆ ಅತ್ಯಧಿಕವಾಗಿದೆ.

ದೇಶದಲ್ಲಿ ಪ್ರಚಲಿತದಲ್ಲಿರುವ ಹಸಿವಿನ ಪ್ರಮಾಣವನ್ನು ಅಳೆಯಲು ಜಾಗತಿಕ ಹಸಿವು ಸೂಚ್ಯಂಕವನ್ನು ಮಾನದಂಡ ವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ಜಾಗತಿಕ ಆರೋಗ್ಯ ಸೂಚ್ಯಂಕವನ್ನು ನಿಕಟವಾಗಿ ಪರಿಶೀಲಿಸಿದಾಗ ತಿಳಿದುಬರುತ್ತದೆ ಎಂಬುದಾಗಿ ಲೇಖಕರು ಹೇಳಿಕೊಂಡಿ ದ್ದಾರೆ. ಇದರ ಜೊತೆಗೆ ದೇಶದ ಜನಸಂಖ್ಯೆ ಯಲ್ಲಿ ಕಡಿಮೆ ಪ್ರಮಾಣದಲ್ಲಿರುವ ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳಿಗೆ ದೇಹತೂಕವು ನಿಗದಿತ ತೂಕದ ಶೇ.70.5ರಷ್ಟಿದ್ದರೆ, ಒಟ್ಟು ಜನಸಂಖ್ಯೆಯ ಶೇ.8.15ರಷ್ಟಿರುವ ಐದು ವರ್ಷಕ್ಕಿಂತ ಅಧಿಕ ವಯಸ್ಸಿನವರ ದೇಹತೂಕ ನಿಗದಿಗಿಂತ ಶೇ.29.5ರಷ್ಟಿದೆ.

ಆರೋಗ್ಯ ಸೂಚ್ಯಂಕವು 5 ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳ ಪೌಷ್ಟಿಕ ಆಹಾರಕ್ಕಾಗಿನ ಬೇಡಿಕೆಯು ವಯಸ್ಕರಿಗಿಂತ ಮೂರು ಪಟ್ಟು ಅಧಿಕವಾಗಿದೆ (ವಯಸ್ಕರಿಗೆ ಅವರ ಪ್ರತೀ 1 ಕೆ.ಜಿ. ದೇಹ ತೂಕಕ್ಕೆ 35-45 ಕ್ಯಾಲೊರಿ ಆಹಾರದ ಅಗತ್ಯವಿದ್ದರೆ ಮಕ್ಕಳಲ್ಲಿ ಪ್ರತೀ ದಿನ ಅವರ ಪ್ರತೀ ಕೆ.ಜಿ. ದೇಹತೂಕಕ್ಕೆ 80-100 ಕ್ಯಾಲೊರಿ ಆಹಾರದ ಅಗತ್ಯವಿರುತ್ತದೆ).

ಮಕ್ಕಳ ದೇಹತೂಕ ಹಾಗೂ ಎತ್ತರವನ್ನು, ಅವರ ಆಹಾರ ಸೇವನೆ ಯಿಂದಲೇ ನಿರ್ಧರಿಸಲು ಸಾಧ್ಯವಿಲ್ಲ. ವಂಶವಾಹಿನಿ, ಪರಿಸರ, ನೈರ್ಮಲ್ಯ ಹಾಗೂ ಆಹಾರ ಸೇವನೆಯ ಬಳಕೆ ಕೂಡಾ ಪಾತ್ರ ವಹಿಸುತ್ತವೆ ಎಂಬ ಲೇಖಕರ ಅಭಿಪ್ರಾಯವನ್ನು ಜಾಗರೂಕತೆಯಿಂದ ಪರಿಶೀಲಿಸಬೇಕಾಗಿದೆ. ಯಾಕೆಂದರೆ ಎರಡು ಅಥವಾ ಮೂರು ತಲೆಮಾರುಗಳಿಗೆ ಹೇರಳವಾಗಿ, ಯಾವುದೇ ಅಡೆತಡೆಯಿಲ್ಲದೆ ಆಹಾರ ಸೇವನೆಗೆ ಅವಕಾಶ ದೊರೆತಾಗ ಮಾತ್ರವೇ ವಯಸ್ಕನ ಬೆಳವಣಿಗೆಯು ವಂಶವಾಹಿನಿ ಯಿಂದ ನಿರ್ಧ ರಿಸಲ್ಪಡುತ್ತದೆ. ಮಕ್ಕಳಿಗೆ ದಿನಂಪ್ರತಿ 1,200 ಹಾಗೂ 1,500 ಕ್ಯಾಲೊರಿಗಳ ಅಗತ್ಯವಿದ್ದು, ಅವರಿಗೆ ಆವಶ್ಯಕತೆಗಿಂತ ಸುಮಾರು 600 ಕ್ಯಾಲೊರಿಗಳಷ್ಟು ಕೊರತೆಯಿದ್ದರೆ ಆಗ ಆಹಾರ ಸೇವನೆಯ ಅಂಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಸಮರ್ಪಕವಾದ ಆಹಾರ ಸೇವನೆಯು ಉತ್ತಮ ವಾದ ರೋಗನಿ ರೋಧಕ ಸಾಮರ್ಥ್ಯವನ್ನು ಒದಗಿಸು ತ್ತದೆ ಹಾಗೂ ಮಗುವನ್ನು ಸೋಂಕು ಮತ್ತು ಅರೆಜೀರ್ಣ ತೆಯಿಂದ ರಕ್ಷಿಸಿದರೆ, ಅಪೌಷ್ಟಿಕತೆಯಿಂದ ಕೂಡಿದ ಮಗು ಸುಲಭವಾಗಿ ಸೋಂಕು ರೋಗಗಳಿಗೆ ತುತ್ತಾಗುತ್ತದೆ.

ಮಾನವ ದೇಹಕ್ಕೆ ಕನಿಷ್ಠ ಶಕ್ತಿಯ ಅವಶ್ಯಕತೆಗಳ ಬಗ್ಗೆ ಮಾತನಾಡಲು ಭಾರತಕ್ಕೆ ಸಾಧ್ಯವಾಗಲಾರದು. ಸಕ್ರಿಯನಾಗಿರುವ ಓರ್ವ ಆರೋಗ್ಯಕರ ವ್ಯಕ್ತಿಯ ಇಂಧನ ಹಾಗೂ ಪೌಷ್ಟಿಕ ಅಗತ್ಯಗಳನ್ನು ಈಡೇರಿ ಸುವಂತಹ ಪಥ್ಯಾಹಾರ ಭತ್ತೆಯನ್ನು ಒದಗಿಸುವ ಹಕ್ಕು ದೇಶದ ಪೌರರಿಗಿದೆ. ಹೃದಯ, ಶ್ವಾಸಕೋಶ, ಕರುಳು ಇತ್ಯಾದಿ ಅಂಗಾಂಗಗಳ ಕಾರ್ಯನಿರ್ವಹಣೆಗೆ ಸೂಕ್ತವಾದ ದೇಹಶಕ್ತಿಯ ಅಗತ್ಯವಿದೆ. ಇದರ ಜೊತೆಗೆ ಕಠಿಣವಾದ ಔದ್ಯೋಗಿಕ ಕೆಲಸಗಳ ನಿರ್ವಹಣೆಗೆ ಅಧಿಕ, ಸಾಧಾರಣ ಅಥವಾ ಲಘು ಅಧಿಕ ಶಕ್ತಿಯ ಅಗತ್ಯವಿರುತ್ತದೆ. ಅಡುಗೆ, ಸ್ವಚ್ಛಗೊಳಿಸುವಿಕೆ, ಶಿಶುಪಾಲನೆ, ವೈಯಕ್ತಿಕ ಆವಶ್ಯಕತೆಗಳು ಹಾಗೂ ವಿರಾಮ ಚಟುವಟಿಕೆಗಳಂತಹ ದೈನಂದಿನ ಕೆಲಸಗಳಿಗೂ ಉತ್ತಮ ದೇಹಶಕ್ತಿಯ ಆವಶ್ಯಕತೆಯಿದೆ. ಮಕ್ಕಳ ಬೆಳವಣಿಗೆ ಹಾಗೂ ಗರ್ಭಿಣಿಯರ ಭ್ರೂಣದ ಬೆಳವಣಿಗೆಗೆ ಹೆಚ್ಚುವರಿ ಶಕ್ತಿಯ ಆವಶ್ಯಕತೆಯಿದೆ. ಕೈಗಾರೀಕರಣಗೊಂಡ ದೇಶದಲ್ಲಿ ಈ ಮೂರು ಶ್ರೇಣಿಗಳಲ್ಲಿನ ಚಟುವಟಿಕೆಗಾಗಿ ಪ್ರಜೆಗಳಿಂದ ದಿನಂಪ್ರತಿ ಸುಮಾರು ಎಂಟು ತಾಸುಗಳನ್ನು ವ್ಯಯಿಸಲಾಗುತ್ತದೆ.

ಕಡಿಮೆ ಪ್ರಮಾಣದ ಆಹಾರ ಸೇವನೆ ಹಾಗೂ ತೀವ್ರವಾದ ಕ್ಯಾಲೊರಿ ಕೊರತೆಯಿಂದಾಗಿ ಔದ್ಯೋಗಿಕ ಕೆಲಸವನ್ನು ನಿರ್ವಹಿಸುವ ವ್ಯಕ್ತಿಯ ಸಾಮರ್ಥ್ಯವು ಕಡಿಮೆಯಾಗುವುದು. ಕಡಿಮೆ ಆರ್ಥಿಕ ಹಿನ್ನೆಲೆಯಿಂದ ಬಂದ ಭಾರತೀಯರು ಶ್ರಮದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರಾದರೂ, ಅವರ ಆಹಾರ ಸೇವನೆ ಪ್ರಮಾಣವು 1,600-1,700ರಷ್ಟಾಗಿದ್ದು ಇದು ಅತ್ಯಂತ ಕಡಿಮೆಯಾಗಿದೆ. ಹೀಗಾಗಿ ಅವರು ದೇಹತೂಕ ಕಳೆದು ಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ.

ದೀರ್ಘ ಸಮಯದಿಂದ ದೇಹಶಕ್ತಿಯ ಕೊರತೆ ಯಿಂದಾಗಿ, ಬಹುವಿಧದ ವಿಟಮಿನ್ ಹಾಗೂ ಖನಿಜಾಂಶ ಗಳ ಕೊರತೆಯಿಂದಾಗಿ ಕಡಿಮೆ ಆರ್ಥಿಕ ಗುಂಪಿಗೆ ಸೇರಿದ ವಯಸ್ಕ ಮಹಿಳೆಯರು ಹಾಗೂ ಪುರುಷರು ಕ್ರಮವಾಗಿ ಸರಾಸರಿ 45 ಕೆ.ಜಿ. ಹಾಗೂ 51 ಕೆ.ಜಿ. ದೇಹತೂಕವನ್ನು ಕಳೆದುಕೊಳ್ಳುತ್ತಾರೆ. ಇವರಲ್ಲಿ 15 ಕೆ.ಜಿ. ಕೊರತೆಯಿರುವುದು ಅತ್ಯಂತ ಆಘಾತಕಾರಿ ಅಂಶವಾಗಿದೆ. ಹೀಗೆ ಈ ಸಮೂಹವು ದೀರ್ಘಸಮಯದ ಆಯಾಸ ಹಾಗೂ ನಿಶ್ಶಕ್ತಿ ಯಿಂದ ಬಳಲುವುದನ್ನು ವೈದ್ಯರುಗಳು ಆಗಾಗ್ಗೆ ಕಡೆ ಗಣಿಸುತ್ತಾರೆ. ಜನಸಾಮಾನ್ಯರು ಈ ಸಮಸ್ಯೆಯನ್ನು ಆಡುಭಾಷೆಯಲ್ಲಿ ‘ಮೈಕೈಕಾಲು ಸುಸ್ತು’ ಎನ್ನುತ್ತಾರೆ. ಗರ್ಭಿಣಿ ಮಹಿಳೆಯರಲ್ಲಿ ಈ ದೈಹಿಕ ಸಮಸ್ಯೆಯು ಗಂಭೀರವಾದ ಪರಿಣಾಮವನ್ನುಂಟು ಮಾಡುವುದಲ್ಲದೆ, ಕಡಿಮೆ ದೇಹ ತೂಕದ ಮಕ್ಕಳ ಜನನಕ್ಕೆ ಕಾರಣವಾಗುತ್ತದೆ.

ಈ ಇಬ್ಬರು ಲೇಖಕರುಗಳು ತಮ್ಮ ಲೇಖನದಲ್ಲಿ ಅಂತಾರಾಷ್ಟ್ರೀಯ ಆಹಾರ ನೀತಿ ಹಾಗೂ ಸಂಶೋಧನಾ ಸಂಸ್ಥೆಯ ಜಾಗತಿಕ ಹಸಿವು ಸೂಚ್ಯಂಕವನ್ನು ಅಲ್ಲಗಳೆಯುವ ಜೊತೆಗೆ, ಹಲವಾರು ಅಭೂತಪೂರ್ವ ಸಾಧನೆಗಳ ದಾಖಲೆ ಹೊಂದಿರುವ 100 ವರ್ಷಗಳ ಇತಿಹಾಸವಿರುವ ರಾಷ್ಟ್ರೀಯ ಪೌಷ್ಟಿಕತೆ ಸಂಸ್ಥೆಯ ವೈಜ್ಞಾನಿಕ ಸಿಂಧುತ್ವವನ್ನು ಕೂಡಾ ಕಡೆಗಣಿಸಿದ್ದಾರೆ. ಅಘಾತಕಾರಿ ಅಂಕಿಅಂಶಗಳು ಪ್ರಕಟಗೊಂಡಾಗ, ಅಧಿಕಾರ ಸ್ಥಾನದಲ್ಲಿ ರುವವರು ಅದನ್ನು ಅಲ್ಲಗಳೆಯುವುದು ಕೂಡಾ ಸಾಮಾನ್ಯವಾದುದಾಗಿದೆ. ಹಸಿವಿನ ಸಮಸ್ಯೆ ಯನ್ನು ದೇಶ ಎದುರಿಸುತ್ತಿರುವಾಗ ಸರಕಾರವು ಬಹು ರಾಷ್ಟ್ರೀಯ ಕಂಪೆನಿಗಳಿಗೆ ಬಾಗಿಲುಗಳನ್ನು ಸರಿಯಾಗಿ ತೆರೆದಿಡಲು ಸಾಧ್ಯವಾ ಗಲಾರದು. ಹಸಿವು ಸೂಚ್ಯಂಕದ ಅಂಕಿಅಂಶಗಳನ್ನು ಸಾರಾಸಗಟಾಗಿ ನಿರಾಕರಿಸುವ ಬದಲು, ಒಂದು ದೇಶ ಎದುರಿಸುತ್ತಿರುವ ಹಸಿವಿನ ಸಮಸ್ಯೆಗೆ ಬಹುರಾಷ್ಟ್ರೀಯ ಕಂಪೆನಿಗಳನ್ನು ಹಾಗೂ ಕಾರ್ಪೊರೇಟ್ ಕಂಪೆನಿಗಳನ್ನು ಉತ್ತರದಾಯಿಗಳನ್ನಾಗಿಸುವುದು ಸೇರಿದಂತೆ ಜಾಗತಿಕ ಹಸಿವು ಸೂಚ್ಯಂಕದ ಕೆಲವು ಶಿಫಾರಸುಗಳನ್ನು ನೀತಿ ಆಯೋಗದ ಮುಂದೆ ಚರ್ಚಿಸಲು ಈ ಇಬ್ಬರು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುವರೆಂದು ಆಶಿಸೋಣವೇ?.

ಕೃಪೆ: scroll.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)