varthabharthi

ಸಂಪಾದಕೀಯ

ರಾಹುಲ್ ಗಾಂಧಿಯ ಕೈಯಲ್ಲಿ ಕಾಂಗ್ರೆಸ್ ಭವಿಷ್ಯ

ವಾರ್ತಾ ಭಾರತಿ : 18 Dec, 2017

ಮಹಾ-ಭಾರತ ರಾಜಕೀಯದ ಒಂದು ಅಧ್ಯಾಯ ಮುಗಿದಿದೆ. ಮಹಾಭಾರತದ ಕುಂತಿಯಂತೆಯೇ ಹೊಣೆಗಾರಿಕೆಗಳನ್ನು ನಿಭಾಯಿಸಿದ ಸೋನಿಯಾ, ಮಗನನ್ನು ರಾಜಕೀಯ ಚಕ್ರವ್ಯೂಹದೊಳಗೆ ನುಗ್ಗಲು ಸಿದ್ಧಪಡಿಸಿದ್ದಾರೆ. ತಾಯಿ ಈವರೆಗೆ ಜತನದಿಂದ ಕಾಪಾಡಿಕೊಂಡು ಬಂದ ಕಾಂಗ್ರೆಸ್ ಚುಕ್ಕಾಣಿ ಕೊನೆಗೂ ರಾಹುಲ್ ಕೈಗೆ ಹಸ್ತಾಂತರವಾಗಿದೆ. ಈ ರಾಜಕೀಯ ಮಹಾಭಾರತದಲ್ಲಿ ರಾಹುಲ್ ಅಭಿಮನ್ಯುವಾಗುತ್ತಾರೋ ಅರ್ಜುನ ಆಗುತ್ತಾರೋ ಎನ್ನುವ ಕುರಿತು ದೇಶ ಕುತೂಹಲದಲ್ಲಿ. ಗುಜರಾತ್‌ನ ಫಲಿತಾಂಶ ಈ ನಿಟ್ಟಿನಲ್ಲಿ ಅವರ ಪಾಲಿನ ಮೊದಲ ವ್ಯೂಹವಾಗಿದೆ.

ಕಾಂಗ್ರೆಸ್ ಪಾಲಿಗೆ ರಾಹುಲ್ ಗಾಂಧಿಗಿಂತ ಬೇರೆ ಆಯ್ಕೆ ಸದ್ಯದ ಸ್ಥಿತಿಯಲ್ಲಿ ಇರಲಿಲ್ಲ. ಸದ್ಯಕ್ಕೆ ಕಾಂಗ್ರೆಸ್ ನಿಂತಿರುವುದು ‘ಗಾಂಧಿ’ ಎನ್ನುವ ಪಿತ್ರಾರ್ಜಿತ ಹೆಸರಿನ ಜೊತೆಗೆ. ಅದನ್ನೂ ಕಳೆದುಕೊಳ್ಳುವುದಕ್ಕೆ ಕಾಂಗ್ರೆಸ್ ಸಿದ್ಧವಿದ್ದಂತಿಲ್ಲ. ಪಕ್ಷದಲ್ಲಿ ರಾಹುಲ್‌ಗಿಂತಲೂ ಮುತ್ಸದ್ದಿ ನಾಯಕರು ಇದ್ದಾರಾದರೂ, ಕಾಂಗ್ರೆಸನ್ನು ಒಂದು ರಾಷ್ಟ್ರೀಯ ಪಕ್ಷವಾಗಿ ಒಟ್ಟಾಗಿಸಲು ‘ಗಾಂಧಿ’ ಎನ್ನುವ ಅಂಟು ಬೇಕೇ ಬೇಕು. ಇಲ್ಲವಾದರೆ ಪಕ್ಷವೇ ಹೋಳಾಗುವ ಸಾಧ್ಯತೆಗಳಿವೆ. ಆದುದರಿಂದಲೇ ಕಾಂಗ್ರೆಸ್ ಅನಿವಾರ್ಯವಾಗಿ ರಾಹುಲ್‌ ಗಾಂಧಿಯನ್ನು ನೆಚ್ಚಿಕೊಂಡಿದೆ. ತನ್ನ ತಾಯಿಯ ವಿವೇಕ, ಮುತ್ಸದ್ದಿತನವನ್ನು ರಾಹುಲ್ ಗಾಂಧಿ ಎಷ್ಟರಮಟ್ಟಿಗೆ ಪಕ್ಷ ಸಂಘಟನೆಯಲ್ಲಿ ಬಳಸಲಿದ್ದಾರೆ ಎನ್ನುವ ಆಧಾರದಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯ ನಿಂತಿದೆ.

ರಾಜೀವ್ ಗಾಂಧಿಯ ಹತ್ಯೆಯಾದ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಇನ್ನೂ ಎಳೆಯರು. ಪಕ್ಷದಲ್ಲಿ ಅತಿರಥ ಮಹಾರಥರು ನಾಯಕತ್ವವನ್ನು ಕೈಗೆತ್ತಿಕೊಳ್ಳುವುದಕ್ಕೆ ಸಿದ್ಧರಾಗಿ ನಿಂತಿದ್ದ ಸಮಯ. ಇಂತಹ ಹೊತ್ತಿನಲ್ಲಿ ಸೋನಿಯಾ ಯಾವುದೇ ಆತುರವನ್ನು ತೋರಿಸದೆ ರಾಜಕೀಯದಿಂದ ದೂರ ನಿಂತರು. ಒಂದು ರೀತಿಯಲ್ಲಿ ಇದ್ದು ಇಲ್ಲದಂತೆ ವರ್ತಿಸಿದರು. ತನ್ನ ಕುಟುಂಬವನ್ನು ಜೋಪಾನ ಮಾಡಿಕೊಳ್ಳುವುದರ ಕಡೆಗೆ ಆದ್ಯತೆ ನೀಡಿದರು. ಇದಾದ ನಂತರ ಪಿ.ವಿ. ನರಸಿಂಹ ರಾವ್ ಕಾಂಗ್ರೆಸ್‌ನ ನೇತೃತ್ವ ವಹಿಸಿದರು. ಪ್ರಧಾನಿಯೂ ಆದರು. ಆದರೆ ಅವರು ಕಾಂಗ್ರೆಸನ್ನು ಮತ್ತು ದೇಶವನ್ನು ಯಾವ ದಿಕ್ಕಿಗೆ ಮುನ್ನಡೆಸಿದರು ಎನ್ನುವುದು ಇತಿಹಾಸ.

ಬಾಬರಿ ಮಸೀದಿ ಇವರ ಕಾಲದಲ್ಲೇ ಧ್ವಂಸವಾಯಿತು. ಆ ಕಳಂಕದಿಂದ ಪಾರಾಗಲು ಇಂದಿಗೂ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ. ಪಿ.ವಿ. ನರಸಿಂಹ ರಾವ್ ಸಹಕಾರದಿಂದಲೇ ಬಾಬರಿ ಮಸೀದಿ ಧ್ವಂಸವಾಯಿತು ಎನ್ನುವ ಮಾತನ್ನು ಕಾಂಗ್ರೆಸ್ ನಾಯಕರೇ ಒಪ್ಪಿಕೊಂಡಿದ್ದಾರೆ. ರಾಜೀವ್ ಹತ್ಯೆಯ ಬಳಿಕ, ಕಾಂಗ್ರೆಸ್‌ನ್ನು ಕಾಂಗ್ರೆಸ್‌ನ ಒಳಗಿನ ಮುಖಂಡರನ್ನೇ ಬಳಸಿಕೊಂಡು ಮುಗಿಸುವ ಯೋಜನೆಯೊಂದನ್ನು ಸಂಘ ಪರಿವಾರ ರೂಪಿಸಿತ್ತು ಮತ್ತು ನರಸಿಂಹ ರಾವ್ ಆ ಯೋಜನೆ ಒಂದು ಭಾಗವಾಗಿ ಕಾರ್ಯನಿರ್ವಹಿಸಿದರು ಎಂಬ ಆರೋಪ ಅವರ ಮೇಲಿದೆ. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಪಕ್ಷದ ಜೊತೆಗೆ ತನ್ನ ಅಂತರವನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿಕೊಂಡಿದ್ದರು. ಪಕ್ಷ ತಾನಾಗಿ ಕರೆಯದೆ ಅದರ ಹಿಂದೆ ಹೋಗಬಾರದು ಎಂದು ಸೋನಿಯಾ ನಿಶ್ಚಯಿಸಿಕೊಂಡಂತಿತ್ತು. ಇದೂ ಒಂದು ರಾಜಕೀಯ ತಂತ್ರವೇ ಆಗಿದೆ. ಸೋನಿಯಾ ಪಕ್ಷದ ಅಗತ್ಯ ಮತ್ತು ಅನಿವಾರ್ಯ ಎನ್ನುವುದು ಪಕ್ಷಕ್ಕೆ ಮನವರಿಕೆಯಾಗುವವರೆಗೂ ಅವರು ರಾಜಕೀಯದಿಂದ ದೂರ ನಿಂತರು. ವಿವಿಧ ನಾಯಕರ ಪ್ರತಿಷ್ಠೆಗಳಿಂದಾಗಿ ಪಕ್ಷ ಇನ್ನೇನೂ ಹೋಳಾಗಿಯೇ ಬಿಡುತ್ತದೆ ಎನ್ನುವಷ್ಟರಲ್ಲಿ ಸೋನಿಯಾ ಕಾಂಗ್ರೆಸ್‌ನ ಚುಕ್ಕಾಣಿಯನ್ನು ಕೈಗೆತ್ತಿಕೊಂಡರು.

ಮುಂದೆ ಯುಪಿಎ ಸರಕಾರ ಬಹುಮತ ಪಡೆದಾಗ ಸೋನಿಯಾ ಗಾಂಧಿಗೆ ಪ್ರಧಾನಿಯಾಗುವ ಮುಕ್ತ ಅವಕಾಶವಿತ್ತು. ಆದರೆ, ಸೋನಿಯಾ ಭಾರತದ ಒಳಮನಸ್ಸನ್ನು ಅರಿತುಕೊಂಡವರಂತೆ ಅತ್ಯಂತ ಪ್ರಬುದ್ಧತೆಯನ್ನು ಪ್ರದರ್ಶಿಸಿದರು. ಪ್ರಧಾನಿ ಪದವಿಯನ್ನು ನಿರಾಕರಿಸುವ ಮೂಲಕ ದೇಶದ ಜನರ ಮನದೊಳಗೆ ಪ್ರಧಾನಿಗೂ ಎತ್ತರದ ಸ್ಥಾನವನ್ನು ಪಡೆದರು. ಜೊತೆಗೆ ಕಾಂಗ್ರೆಸ್‌ನೊಳಗೆ ಪೂರ್ಣ ಪ್ರಮಾಣದಲ್ಲಿ ನಾಯಕಿಯಾಗಿ ಕಂಗೊಳಿಸಿದರು. ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರ ಆಯ್ಕೆ ಅವರ ಮುತ್ಸದ್ದಿತನದಿಂದ ಕೂಡಿದೆ. ಒಂದು ಕಲ್ಲಲ್ಲಿ ಅವರು ಹಲವು ಕಾಯಿಗಳನ್ನು ಉರುಳಿಸಿದರು. ಒಬ್ಬ ಅಲ್ಪಸಂಖ್ಯಾತ ಸಮುದಾಯದ ನಾಯಕನನ್ನು ಪ್ರಧಾನಿಯಾಗಿ ಮಾಡಿ, ಸಿಖ್ಖರ ಸಿಟ್ಟನ್ನು ತಿಳಿಗೊಳಿಸಿದರು. ರಾಜಕೀಯದಿಂದ ದೂರವಿರುವ ಆದರೆ, ಪ್ರಧಾನಿಯಾಗಲು ಎಲ್ಲ ಅರ್ಹತೆಯಿರುವ ಮನಮೋಹನ್ ಸಿಂಗ್‌ರ ಆಯ್ಕೆ ಈ ದೇಶಕ್ಕೆ ಸಾಕಷ್ಟು ಒಳಿತನ್ನು ಮಾಡಿತು ಎನ್ನುವುದರಲ್ಲಿ ಎರಡು ಮಾತಿಲ್ಲ.

ಆಹಾರ ಭದ್ರತೆ, ಖಾಯಂ ಉದ್ಯೋಗ ಹಕ್ಕು, ಆರ್‌ಟಿಐ, ಆರ್‌ಟಿಇಯಂತಹ ಮಹತ್ವದ ಜನಪರ ಕಾಯ್ದೆಗಳ ಹಿಂದೆ ಸೋನಿಯಾ ಗಾಂಧಿಯವರು ಇದ್ದಾರೆ. ಒಬ್ಬ ಸೊಸೆಯಾಗಿ ಈ ದೇಶಕ್ಕೆ ಕಾಲಿಟ್ಟು, ಬಳಿಕ ಮನೆಮಗಳಾಗಿ ತಮ್ಮ ಕರ್ತವ್ಯವನ್ನು ಅವರು ಪೂರ್ಣಗೊಳಿಸಿದ್ದಾರೆ. ಜೊತೆಗೆ ಎಲ್ಲ ಸಂಚುಗಳಿಗೆ ಸೆಡ್ಡು ಹೊಡೆದು ತನ್ನ ಮಗ ರಾಹುಲ್‌ ಗಾಂಧಿಯ ಕೈಗೆ ಪಕ್ಷದ ಚುಕ್ಕಾಣಿಯನ್ನು ನೀಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಒಂದು ರೀತಿಯಲ್ಲಿ ರಾಜಕೀಯದ ಹಿನ್ನೆಲೆಯೇ ಇಲ್ಲದ ಸೋನಿಯ ಗಾಂಧಿ ಎನ್ನುವ ನಾಯಕಿಯನ್ನು ನಿರ್ಮಾಣ ಮಾಡಿದ್ದು ಪರಿಸ್ಥಿತಿ ಎಂದೇ ಹೇಳಬೇಕು. ರಾಹುಲ್‌ ಗಾಂಧಿ ಕಾಂಗ್ರೆಸನ್ನು ಯಾವ ರೀತಿಯಲ್ಲಿ ಮುನ್ನಡೆಸಲಿದ್ದಾರೆ ಎನ್ನುವುದನ್ನು ಕಾಲ ಹೇಳಬೇಕಾಗಿದೆ.

ರಾಹುಲ್ ಅವರು ಕಾಂಗ್ರೆಸ್ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡ ಎರಡೇ ದಿನಗಳಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ಫಲಿತಾಂಶ ಅವರ ಮುಂದಿನ ನಡೆಯ ಮೇಲೆ ಭಾರೀ ಪರಿಣಾಮ ಬೀರಲಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್ ಬಹುಮತವನ್ನು ಪಡೆದದ್ದೇ ಆದರೆ, ರಾಹುಲ್‌ ಗಾಂಧಿಯ ಮುಂದಿನ ದಾರಿ ಸಲೀಸಾಗಲಿದೆ. ಆದರೆ ಗುಜರಾತ್‌ನಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡರೆ, ಅದು ರಾಹುಲ್ ಗಾಂಧಿಯ ನಾಯಕತ್ವದ ಮೇಲೆ ದುಷ್ಪರಿಣಾಮ ಬೀರಲಿದೆ. ಗುಜರಾತ್ ಚುನಾವಣೆಯ ನೇತೃತ್ವವನ್ನು ಪೂರ್ಣವಾಗಿ ರಾಹುಲ್ ಗಾಂಧಿಯವರು ಹೊತ್ತುಕೊಂಡಿದ್ದರು. ಅಚ್ಚರಿಯ ರೀತಿಯಲ್ಲಿ ಮೋದಿಯ ಪ್ರಭಾವಳಿಯನ್ನು ಅವರು ಭೇದಿಸಿದ್ದಾರೆ. ಸಾರ್ವಜನಿಕ ವೇದಿಕೆಯಲ್ಲಿ ಮೋದಿ ಅಳುತ್ತಾ ಮತ ಯಾಚನೆ ಮಾಡುವಂತಹ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ. ಹೀಗಿರುವಾಗ, ಸೋಲಿಗೂ, ಗೆಲುವಿಗೂ ರಾಹುಲ್‌ ಗಾಂಧಿಯೇ ಹೆಗಲು ಕೊಡಬೇಕು. ಈಗಾಗಲೇ ಸಮೀಕ್ಷೆಗಳು ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ಹೇಳುತ್ತಿವೆ. ಅದು ಸಂಭವಿಸಿದರೆ, ಮುಂದಿನ ಲೋಕಸಭಾ ಚುನಾವಣೆ ಕಾಂಗ್ರೆಸ್‌ಗೆ ಕಷ್ಟಕರವಾಗಲಿದೆ. ಕಾಂಗ್ರೆಸ್ ಎನ್ನುವ ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸಿಕೊಂಡು ಬಂದಿರುವ ಅಳಿದುಳಿದ ನಾಯಕರು, ನಾಳೆ ಎಲ್ಲ ವೈಫಲ್ಯಗಳನ್ನು ರಾಹುಲ್ ತಲೆಗೆ ಕಟ್ಟಿ ಪ್ರಿಯಾಂಕಾ ಕಡೆಗೆ ದೃಷ್ಟಿ ಹಾಯಿಸಿದರೆ ಅದರಲ್ಲಿ ಅಚ್ಚರಿಯಿಲ್ಲ. ಆದರೆ ಆಕೆ ರಾಜಕೀಯದ ಕಡೆಗೆ ಆಸಕ್ತಿ ತೋರಿಸದೇ ಇದ್ದಲ್ಲಿ, ಕಾಂಗ್ರೆಸ್ ರಾಹುಲ್ ಜೊತೆಗೇ ಮುಗಿದು ಹೋಗುವ ಅಪಾಯವಿದೆ. ಅದೇನೇ ಇರಲಿ, ರಾಹುಲ್ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ಪ್ರಬುದ್ಧತೆಯನ್ನು ತನ್ನದಾಗಿಸಿಕೊಂಡು ಕಾಂಗ್ರೆಸನ್ನು ಉಳಿಸಲಿ. ದೇಶಕ್ಕೂ ಒಳ್ಳೆಯದನ್ನು ಮಾಡಲಿ ಎಂದಷ್ಟೇ ಜನರು ಸದ್ಯಕ್ಕೆ ಬಯಸಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)