varthabharthi

ಗಲ್ಫ್ ಸುದ್ದಿ

ಕತರ್: ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆಯೊಂದಿಗೆ ಸಂವಾದ

ವಾರ್ತಾ ಭಾರತಿ : 19 Dec, 2017

ಕತರ್, ಡಿ.19: ಕೊಲ್ಲಿ ರಾಷ್ಟ್ರಗಳ ಪ್ರವಾಸದಲ್ಲಿರುವ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರನ್ನು ಡಿ.17ರಂದು ಕತರ್ ನಲ್ಲಿರುವ ಕರ್ನಾಟಕ ಮೂಲದ ಸಂಘಗಳಾದ ಕರ್ನಾಟಕ ಸಂಘ, ತುಳುಕೂಟ, ಬಂಟ್ಸ್ ಕತರ್, ಮಂಗಳೂರು ಕ್ರಿಕೆಟ್ ಕ್ಲಬ್, ಕರ್ನಾಟಕ ಮುಸ್ಲಿಂ ಸಾಂಸ್ಕೃತಿಕ ಸಂಘ ಮತ್ತು ಸೌತ್ ಕೆನರಾ ಮುಸ್ಲಿಂ ಕಲ್ಯಾಣಾಭಿವೃದ್ಧಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸನ್ಮಾನಿಸಲಾಯಿತು.

ಕತರ್ ರಾಜಧಾನಿ ದೋಹಾದಲ್ಲಿನ ಇಂಡಿಯನ್ ಕಲ್ಚರಲ್ ಸೆಂಟರ್ ನ ಅಶೋಕ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಆರತಿ ಕೃಷ್ಣ, ರಾಜ್ಯ ಸರ್ಕಾರ ಹೊಸದಾಗಿ ರೂಪಿಸಿ ಜಾರಿಗೆ ತಂದಿರುವ ಅನಿವಾಸಿ ಭಾರತೀಯ/ಕನ್ನಡಿಗರ ನೀತಿಯ ಕುರಿತು ಸವಿವರವಾದ ಮಾಹಿತಿ ನೀಡಿದರು.

 ಇದೇ ಸಂದರ್ಭ ಅನಿವಾಸಿ ಕನ್ನಡಿಗರು ಹಲವು ಬೇಡಿಕೆಗಳ ಮನವಿಯನ್ನು ಡಾ.ಆರತಿ ಕೃಷ್ಣ ಅವರ ಮುಂದಿಟ್ಟರು.

ಬೇಡಿಕೆಗಳ ಪಟ್ಟಿ ಹೀಗಿವೆ..

►  ವಂಚನೆಯ ಆರೋಪದಡಿಯಲ್ಲಿನ ನೇಮಕಾತಿ ಏಜನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.

►  ಸ್ಥಳೀಯ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ವ್ಯವಹರಿಸಿ ಶೋಷಿತ ಕಾರ್ಮಿಕ ವರ್ಗಕ್ಕೆ ಪರಿಹಾರ ಒದಗಿಸಬೇಕು.

►  ಅನಿವಾಸಿ ಕನ್ನಡಿಗರು ಪಿಂಚಣಿ ಸೌಲಭ್ಯವನ್ನು ಪಡೆಯುವ ಬಗ್ಗೆ ಯೋಜನೆ ರೂಪಿಸಬೇಕು.

►  ಗೃಹಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸೇವೆಯ ಅಂತ್ಯದ ಸೌಲಭ್ಯಗಳನ್ನು ದೊರೆಯುವಂತೆ ಮಾಡಬೇಕು.

►  ಸ್ಥಳೀಯ ಭಾರತೀಯ ಶಾಲೆಗಳಲ್ಲಿ ಕನ್ನಡವನ್ನು ದ್ವಿತೀಯ/ ತೃತೀಯ ಭಾಷೆಯನ್ನಾಗಿ ಕಲಿಸಲು ಅವಕಾಶ ಕಲ್ಪಿಸಬೇಕು.

►  ಹಿಂದೂಗಳಿಗೆ ಪ್ರಾರ್ಥನಾ ಮಂದಿರ ಒದಗಿಸುವ ಕುರಿತು ಸಂಬಂಧಪಟ್ಟ ಇಲಾಖೆಗಳೊಂದಿಗೆ ವ್ಯವಹರಿಸಬೇಕು.

► ಅನಿವಾಸಿ ಕನ್ನಡಿಗರಿಗೆ ಗುರುತಿನ ಕಾರ್ಡ್ ನೀಡುವುದು ಮತ್ತು ಅದರಿಂದಾಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಬೇಕು.

► ವೃತ್ತಿಪರ ವ್ಯಾಸಂಗಕ್ಕೆ ಅನಿವಾಸಿ ಕನ್ನಡ ವಿದ್ಯಾರ್ಥಿಗಳಿಗೆ ಕರ್ನಾಟಕದ ಕಾಲೇಜುಗಳಲ್ಲಿನ ಸದ್ಯದ ದುಬಾರಿ ಶುಲ್ಕದ ಬಗೆಗಿನ ಮೇಲೆ ನೀತಿ ರೂಪಿಸಿ ನೆರವು ನೀಡಬೇಕು.

►   ಬೆಂಗಳೂರು ಮತ್ತು ಮಂಗಳೂರಿಗೆ ಹೆಚ್ಚಿನ ವಿಮಾನ ಸೌಲಭ್ಯ ಮತ್ತು ದರ ನಿಯಂತ್ರಣ ಕಲ್ಪಿಸಬೇಕು.

►  ಅನಿವಾಸಿ ಕನ್ನಡಿಗರಿಗೆ ಪ್ರವಾಸಿ ಕೇಂದ್ರ ಸ್ಥಾಪಿಸುವ ಕುರಿತು ಯೋಜನೆ ಸಿದ್ದಪಡಿಸಬೇಕು.

►   ಅನಿವಾಸಿ ಭಾರತೀಯರಿಗೆ ಮತದಾನದ ಹಕ್ಕನ್ನು ನೀಡುವಲ್ಲಿ ವ್ಯವಹರಿಸಬೇಕು.

►    ಕರ್ನಾಟಕದಲ್ಲಿ ಬಂಡವಾಳ ಹೂಡಿಕೆದಾರರಿಗೆ ನೆರವು ಒದಗಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸಬೇಕು.

ಇದಕ್ಕೆ ಪ್ರತಿಕ್ರಿಯಿಸಿದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ, ಮೇಲಿನ ಬಹುತೇಕ ಬೇಡಿಕೆಗಳಿಗೆ ಅನಿವಾಸಿ ಭಾರತೀಯ ನೀತಿಯಡಿ ಪರಿಹಾರ ಮಾರ್ಗೋಪಾಯಗಳಿವೆ. ಇನ್ನು ಕೆಲವು ಬೇಡಿಕೆಗಳಿಗೆ ಪರಿಹಾರವನ್ನ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜತೆಗೆ ಪತ್ರ ವ್ಯವಹಾರವನ್ನು ನಡೆಸಿ ಶೀಘ್ರ ಗತಿಯಲ್ಲಿ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ವತಿಯಿಂದ ಈಡೇರಿಸಲು ಬದ್ಧರಾಗಿರುವುದಾಗಿ ಹೇಳಿದರು. 

ಕಾರ್ಯಕ್ರಮದಲ್ಲಿ ಕತರ್ ನ ಭಾರತೀಯ ರಾಯಭಾರಿಗಳಾದ ಪಿ.ಕುಮಾರನ್, ಮುಖ್ಯ ಅತಿಥಿಗಳಾಗಿ ಮತ್ತು ಇಂಡಿಯನ್ ಕಲ್ಚರಲ್ ಸೆಂಟರ್ ಅಧ್ಯಕ್ಷೆ ಮಿಲನ್ ಅರುಣ್, ಕೆ.ಎಂ.ಸಿ.ಎ. ಪ್ರಧಾನ ಕಾರ್ಯದರ್ಶಿ ಶಾಕಿಬ್ ರಾಜಖಾನ್, ಎಂ.ಸಿ.ಸಿ. ಅಧ್ಯಕ್ಷ, ಪ್ರಕಾಶ್ ನರೊನ್ಹ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಕೆ.ಮಧು ವೇದಿಕೆಯಲ್ಲಿ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)