varthabharthi

ವಿಶೇಷ-ವರದಿಗಳು

ಇಲ್ಲದಿದ್ದರೆ ಜೇಬಿಗೆ ಬೀಳಬಹುದು ಕತ್ತರಿ

ಕಾರು ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಗಾ ಇರಲಿ

ವಾರ್ತಾ ಭಾರತಿ : 19 Dec, 2017

ಕಾರು ಖರೀದಿಸುವ ಸಂದರ್ಭ ಹೆಚ್ಚಿನವರ ಜೀವನದಲ್ಲಿ ಪದೇ ಪದೇ ಬರುವುದಿಲ್ಲ. ಕಾರು ಖರೀದಿಸುವ ಸುದೀರ್ಘ ಹಂಬಲ ನೆರವೇರುವ ಕ್ಷಣದಲ್ಲಿ ನಮ್ಮಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಕಾರು ಶೋ ರೂಮ್‌ನಿಂದ ಹೊರಗೆ ಬರುವ ಮುನ್ನವೇ ಕನಸಿನಲ್ಲಿ ನಾವು ಅದರಲ್ಲಿ ಹಲವಾರು ಬಾರಿ ಸವಾರಿ ಮಾಡಿರುತ್ತೇವೆ. ಕಾರು ಮಾರಾಟಗಾರರಿಗೆ ಇದೆಲ್ಲವೂ ಗೊತ್ತಿರುತ್ತದೆ ಮತ್ತು ನಿಮ್ಮ ಸಂಭ್ರಮ, ಉದ್ವೇಗದ ಲಾಭವನ್ನು ಪಡೆದುಕೊಳ್ಳಲು ಅವರು ಹಿಂಜರಿಯುವುದಿಲ್ಲ. ಹೀಗಾಗಿ ಕಾರು ಖರೀದಿಗಿಂತ ಖರೀದಿಯ ಒಳಗುಟ್ಟುಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.

ನೀವು ಕಾರಿನ ಶೋ ರೂಮಿನಲ್ಲಿ ಹೆಜ್ಜೆಯಿರಿಸಿದ ಕ್ಷಣದಿಂದ ನಿಮ್ಮಿಂದ ಗರಿಷ್ಠ ವೆಚ್ಚವನ್ನು ಮಾಡಿಸಲು ಸೇಲ್ಸ್‌ಮನ್‌ಗಳು ಪ್ರಯತ್ನಿಸುತ್ತಾರೆ. ನಿಮಗೆ ಅತ್ಯುತ್ತಮ ಬೆಲೆಯಲ್ಲಿ ಪುಷ್ಪಕ ವಿಮಾನದಂತಹ ಕಾರನ್ನೇ ನೀಡುತ್ತೇವೆ ಎಂದು ನಂಬಿಸುತ್ತಾರೆ. ಕಾರಿಗೆ ಹಣವನ್ನು ಪಾವತಿಸುವವರು ನೀವು, ಹೀಗಾಗಿ ಶೋ ರೂಮ್‌ನಲ್ಲಿ ನಿಮಗೆ ಯಾವುದೇ ವಂಚನೆಯಾಗದಂತೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರುವುದು ಮುಖ್ಯವಾಗುತ್ತದೆ. ನಿಮ್ಮ ಡೀಲರ್ ನೀವು ತಿಳಿದುಕೊಳ್ಳಬಾರದೆಂದು ಬಯಸುವ ಕಾರಿಗೆ ಸಂಬಂಧಿಸಿದ ಪ್ರಮುಖ ಸಂಗತಿಗಳಿಲ್ಲಿವೆ.

►ನಿಮ್ಮ ಖರೀದಿಯನ್ನು ತಿಂಗಳ ಕೊನೆಗೆ ಮುಂದೂಡಿ: ಕಾರು ಮಾರಾಟಗಾರರಿಗೂ ಇತರರಂತೆ ನಿಗದಿತ ಟಾರ್ಗೆಟ್ ಇರುತ್ತದೆ. ಹೆಚ್ಚಿನವರಿಗೆ ತಮ್ಮ ವೃತ್ತಿಯಲ್ಲಿ ಟಾರ್ಗೆಟ್‌ಗಳನ್ನು ಪೂರೈಸಲು ಮೂರು ತಿಂಗಳವರೆಗೂ ಕಾಲಾವಕಾಶವಿರುತ್ತದೆ, ಆದರೆ ಕಾರ್ ಸೇಲ್ಸ್‌ಮನ್‌ಗಳು ತಮ್ಮ ಮಾರಾಟ ಗುರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಬೇಕಾಗುತ್ತದೆ. ತಿಂಗಳ ಅಂತ್ಯದವರೆಗೂ ಅವರು ತಮ್ಮ ಲಾಭವನ್ನು ಕಡಿಮೆ ಮಾಡಿಕೊಳ್ಳುವುದಿಲ್ಲ ಮತ್ತು ತಮ್ಮ ಮಾರ್ಜಿನ್‌ನ್ನು ಕಾಯ್ದುಕೊಳ್ಳುತ್ತಾರೆ. ಆದರೆ ತಿಂಗಳ ಕೊನೆಯಲ್ಲಿ ಅವರಿಗೆ ಮಾರಾಟವಾದ ಕಾರುಗಳ ಸಂಖ್ಯೆ ಮುಖ್ಯವಾಗಿರುತ್ತದೆ ಮತ್ತು ಸಾಧ್ಯವಾದಷ್ಟು ಮಟ್ಟಿಗೆ ತಮ್ಮ ಮಾರ್ಜಿನ್‌ನೊಂದಿಗೆ ರಾಜಿ ಮಾಡಿಕೊಳ್ಳಲೂ ಸಿದ್ಧರಿರುತ್ತಾರೆ. ಈ ಕಾರ್ಯತಂತ್ರ ತಕ್ಷಣಕ್ಕೆ ಪ್ರಕಟಗೊಳ್ಳದಿರಬಹುದು ಮತ್ತು ಕಾರು ಖರೀದಿಸಲು ನೀವು ಆಸಕ್ತರಾಗಿದ್ದೀರಿ ಎನ್ನುವುದು ಗೊತ್ತಾದರೆ ಮಾರ್ಜಿನ್ ಬಿಟ್ಟು ಕೊಡದೆ ಕಾರನ್ನು ನಿಮಗೆ ದಾಟಿಸಲು ಸಾಧ್ಯವಿದ್ದಷ್ಟು ಪ್ರಯತ್ನಿಸುತ್ತಾರೆ. ಹೀಗಾಗಿ ನಿಮ್ಮ ಪಟ್ಟನ್ನು ಸಡಿಲಿಸದೆ ತಿಂಗಳ ಅಂತ್ಯದ ಅತ್ಯುತ್ತಮ ಖರೀದಿಯನ್ನು ಮಾಡಿ.

►ವಿಐಎನ್ ನಂ.ಮತ್ತು ಆಫರ್‌ಗಳು: ನಿಮ್ಮ ಸೇಲ್ಸ್‌ಮನ್ ನಿಮ್ಮ ಮುಂದಿಟ್ಟಿರುವ ಆಫರ್‌ಗಳು ಅವು ಇರುವುದಕ್ಕಿಂತ ಉತ್ಪ್ರೇಕ್ಷಿತವಾಗಿದೆ ಎಂದು ನಿಮಗೆ ಅನಿಸಬಹುದು. ನೀವು ಬುಕ್ ಮಾಡಲಿರುವ ಕಾರಿನ ವಿಐಎನ್ ಅಥವಾ ವೆಹಿಕಲ್ ವೆರಿಫಿಕೇಷನ್ ನಂಬರ್ ನೋಡಬೇಕು ಎಂದು ಆತನಿಗೆ ಹೇಳಿ. ನೀವು ರಿಜಿಸ್ಟರ್ ಮಾಡುವ ಮೊದಲೇ ಅದನ್ನು ನೋಡಬೇಕೆಂದು ಪಟ್ಟು ಹಿಡಿಯಿರಿ. ಆತ ನಿಮಗೆ ಮಾರಾಟ ಮಾಡಲು ಉದ್ದೇಶಿಸಿರುವ ಕಾರು ಯಾವ ವರ್ಷದಲ್ಲಿ ತಯಾರಾಗಿದ್ದು ಎನ್ನುವುದನ್ನು ನಿಖರವಾಗಿ ತಿಳಿದುಕೊಳ್ಳಲು ವಿಐಎನ್ ಅತ್ಯುತ್ತಮ ಮಾರ್ಗವಾಗಿದೆ. ಡೀಲರ್ ತನ್ನ ಬಳಿ ದಾಸ್ತಾನಿರುವ ಹಳೆಯ ಕಾರನ್ನು ಮೊದಲು ದಾಟಿಸಲು ಪ್ರಯತ್ನಿಸುತ್ತಾನೆ ಮತ್ತು ನೀವು ಖರೀದಿಸುವ ಕಾರು ಖರೀದಿ ತಿಂಗಳಿಗಿಂತ ಹಿಂದಿನದ್ದಾಗಿರಬಹುದು. ಈ ಹಳೆಯ ಕಾರುಗಳಿಗೆ ನೀವು ನಿರಾಕರಿಸಲು ಸಾಧ್ಯವಾಗದಂತಹ ಅತ್ಯಾಕರ್ಷಕ ಡಿಸ್ಕೌಂಟ್‌ನ ಆಮಿಷಗಳನ್ನು ತೋರಿಸಲಾಗುತ್ತದೆ. ಈ ಬಗ್ಗೆ ಜಾಗ್ರತೆ ಅಗತ್ಯ.

►ಟ್ರೇಡ್-ಇನ್ ಅತ್ಯುತ್ತಮ ವ್ಯವಹಾರವಲ್ಲ: ನೀವು ಟ್ರೇಡ್-ಇನ್ ಅಥವಾ ನಿಮ್ಮ ಹೊಸ ಕಾರಿನ ಭಾಗಶಃ ಪಾವತಿಯನ್ನು ಹಳೆಯ ಕಾರನ್ನು ನೀಡುವ ಮೂಲಕ ಮಾರಾಟ ಮಾಡಲು ಬಯಸಿದ್ದರೆ ಆರಂಭದಲ್ಲಿ ಉತ್ಸಾಹವನ್ನು ತೋರಿಸಿ, ತೆಗೆದುಕೊಂಡು ಬನ್ನಿ, ಒಳ್ಳೆಯ ಬೆಲೆ ನೀಡೋಣ ಎನ್ನುವ ಡೀಲರ್ ನೀವು ನಿಮ್ಮ ಹಳೆಯ ಕಾರಿನೊಂದಿಗೆ ಶೋ ರೂಮ್‌ಗೆ ಹೋದಾಗ ಆ ಉತ್ಸಾಹವನ್ನು ಕಳೆದುಕೊಂಡಿರುತ್ತಾನೆ. ಅಚ್ಚರಿ ಪಡಬೇಡಿ, ಅವರು ಆ ರೀತಿಯಲ್ಲಿ ತರಬೇತಾಗಿರುತ್ತಾರೆ. ನಿಮ್ಮ ಹಳೆಯ ಕಾರನ್ನೊಮ್ಮೆ ಚಲಾಯಿಸಿ ಒಂದು ದರವನ್ನು ಹೇಳುತ್ತಾರೆ ಮತ್ತು ಇದು ಈ ಕಾರಿಗೆ ಅತ್ಯುತ್ತಮ ದರ ಎಂದು ನಿಮಗೆ ಬಿಂಬಿಸಲು ಶತಪ್ರಯತ್ನ ಮಾಡುತ್ತಾರೆ. ಆದರೆ ಅದು ಬಹುಶಃ ಅತ್ಯುತ್ತಮ ದರವಾಗಿರದಿರಬಹುದು. ನಿಮಗೆ ಹೊರಗಡೆ ಫ್ರೀ-ಮಾರ್ಕೆಟ್‌ನಲ್ಲಿ ಇದಕ್ಕಿಂತ ಹೆಚ್ಚಿನ ದರ ಸಿಗಬಹುದು. ಆದರೆ ಅಂತಿಮ ನಿರ್ಣಯಕ್ಕೆ ಬರುವ ಮುನ್ನ ಎರಡೂ ಕಡೆ ವಿಚಾರಿಸಿ ನಿಮ್ಮ ಹಳೆಯ ಕಾರಿಗೆ ಸಿಗಬಹುದಾದ ಗರಿಷ್ಠ ಬೆಲೆಯನ್ನು ಖಚಿತ ಪಡಿಸಿಕೊಳ್ಳಿ.

►ಚೌಕಾಶಿ ಮಾಡುವುದು ನೆನಪಿರಲಿ: ಡೀಲರ್‌ಗಳು ನೀವು ಖರೀದಿಸಲು ಬಯಸಿರುವ ಕಾರಿಗೆ ರಿಯಾಯಿತಿಗಳ ಬಗ್ಗೆ ಮಾತಿಗೆ ಶುರುವಿಟ್ಟುಕೊಂಡಾಗ ಶಾಂತವಾಗಿ ಆಲಿಸಿ. ನೆನಪಿಡಿ, ಈ ರಿಯಾಯಿತಿಗಳು ನಿಮ್ಮ ಕಾರಿನ ಬೆಲೆಯಲ್ಲಿಯೇ ಸೇರಿರುತ್ತವೆ ಮತ್ತು ಇವು ಡೀಲರ್‌ನ ಲಾಭಾಂಶದಿಂದ ಬರುವುದಿಲ್ಲ ಎನ್ನುವುದು ಗೊತ್ತಿರಲಿ. ಎಲ್ಲವನ್ನೂ ಕೇಳಿಸಿಕೊಂಡ ಬಳಿಕ ಡೀಲರ್‌ನ ಅಂತಿಮ ದರವೇನೆಂದು ಕೇಳಿ. ಅದು ನಿಮಗೆ ತೃಪ್ತಿಯನ್ನುಂಟು ಮಾಡಿದರೆ ಮಾತ್ರ ಮುಂದುವರಿಯಿರಿ. ಚೌಕಾಶಿ ಮಾಡಲು ನಾಚಿಕೊಳ್ಳಬೇಕಿಲ್ಲ. ಅದರಿಂದ ನಿಮಗೆ ಖರ್ಚೇನೂ ಆಗುವುದಿಲ್ಲ, ಬದಲಿಗೆ ಲಾಭವೇ ಆಗುತ್ತದೆ.

►ಮಾರಾಟ ನಂತರದ ಸೇವೆ: ಹೆಚ್ಚಿನ ಡೀಲರ್‌ಗಳು ಕಾರು ಮಾರಾಟದಲ್ಲಿಯ ಲಾಭಕ್ಕಿಂತ ಹೆಚ್ಚಿನ ದುಡ್ಡನ್ನು ಆಫ್ಟರ್ ಸೇಲ್ಸ್ ಸರ್ವಿಸ್ ಅಥವಾ ಮಾರಾಟ ನಂತರದ ಸೇವೆಗಳಿಂದ ಗಳಿಸುತ್ತಾರೆ. ಅವರು ನಿಮಗೆ ನೀಡುವ ಹೆಚ್ಚಿನ ಸಲಹೆಗಳು ಅವರಿಗೆ ಹೆಚ್ಚಿನ ಲಾಭವನ್ನುಂಟುಮಾಡುವ ಉದ್ದೇಶವನ್ನೇ ಹೊಂದಿರುತ್ತವೆ. ಪ್ರತಿ ಬಾರಿ ನೀವು ಸರ್ವಿಸ್‌ಗಾಗಿ ಕಾರನ್ನು ಒಯ್ದಿಗ ಇಂಜೆಕ್ಟರ್ ಜೆಟ್‌ಗಳನ್ನು ಸ್ವಚ್ಛಗೊಳಿಸುವಂತಹ ಅಗತ್ಯವಿಲ್ಲದ ಸೇವೆಗಳಿಗಾಗಿ ಅವರು ನಿಮ್ಮಿಂದ ಕಾಸು ಬಿಚ್ಚಿಸುತ್ತಾರೆ. ವಾಸ್ತವದಲ್ಲಿ ಇವೆಲ್ಲ ಪ್ರತಿ ಸರ್ವಿಸ್‌ಗೂ ಅಗತ್ಯವಿರುವುದಿಲ್ಲ. ನೀವು ಕಾರು ಖರೀದಿಸಿದಾಗ ನೀಡಲಾಗುವ ಮ್ಯಾನ್ಯುವಲ್‌ನಲ್ಲಿ ವಾರಂಟಿ ಅವಧಿಯಲ್ಲಿ ಮಾಡಿಸಬೇಕಾದ ಕೆಲಸಗಳ ಬಗ್ಗೆ ಕಂಪನಿಯು ಮಾಹಿತಿಗಳನ್ನು ನೀಡಿರುತ್ತದೆ. ಇದನ್ನು ಅನುಸರಿಸಿದರೆ ಸರ್ವಿಸ್ ಸಂದರ್ಭ ಅನಗತ್ಯ ಸೇವೆಗಳಿಗಾಗಿ ದುಡ್ಡು ಬಿಚ್ಚುವ ಪ್ರಮೇಯವೇ ಇರುವದಿಲ್ಲ.

 

Comments (Click here to Expand)