varthabharthi

ವಿಶೇಷ-ವರದಿಗಳು

ಮುಂದಿನ ಗುರಿ ಕರ್ನಾಟಕ: ಜಿಗ್ನೇಶ್ ಮೇವಾನಿ

ವಾರ್ತಾ ಭಾರತಿ : 20 Dec, 2017
ವಿಶೇಷ ಸಂದರ್ಶನ: ಸಅದ್ ಅಹ್ಮದ್

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ವಡ್ಗಾಂವ್ ಮೀಸಲು ಕ್ಷೇತ್ರದಲ್ಲಿ ತಮ್ಮ ಮೊದಲ ಯತ್ನದಲ್ಲೇ ಭರ್ಜರಿ ಜಯಭೇರಿ ಬಾರಿಸಿರುವ ಯುವ ನಾಯಕ ಜಿಗ್ನೇಶ್ ಮೇವಾನಿ ಇಡೀ ದೇಶದ ಗಮನ ಸೆಳೆದಿದ್ದಾರೆ. ಚಳವಳಿಯ ಮೂಲಕ ಬೆಳೆದು ಪಕ್ಷೇತರನಾಗಿ ಸ್ಪರ್ಧಿಸಿ ಆಡಳಿತ ಪಕ್ಷದ ಅಭ್ಯರ್ಥಿಯನ್ನೇ ಸುಮಾರು 20,000 ಮತಗಳ ಭಾರೀ ಅಂತರದಿಂದ ಸೋಲಿಸಿರುವ ಮೇವಾನಿ ಸಾಮಾಜಿಕ ಕಾರ್ಯಕರ್ತರಿಗೆ, ಯುವಜನರಿಗೆ ಈಗ ಆಕರ್ಷಣೆಯ ಕೇಂದ್ರ ಬಿಂದು. ಎಲ್ಲೆಡೆ ಅವರದ್ದೇ ಚರ್ಚೆ. ವಾರ್ತಾಭಾರತಿ ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ಕ್ಷೇತ್ರದಿಂದ ಅಹ್ಮದಾಬಾದ್‌ಗೆ ಪ್ರಯಾಣಿಸುತ್ತಿದ್ದರು. ಆದರೂ ತಮ್ಮ ಸಂಭ್ರಮವನ್ನು, ಮುಂದಿನ ಯೋಜನೆಗಳನ್ನು ವಿವರವಾಗಿ ಹಂಚಿಕೊಂಡರು. ಈ ಸಂದರ್ಭದಲ್ಲಿ, ತನ್ನ ಮುಂದಿನ ಗುರಿ ಕರ್ನಾಟಕ ರಾಜ್ಯ ಎಂದಿರುವ ಅವರು, ಬಿಜೆಪಿಯನ್ನು ಅಲ್ಲಿ ಜನರು ಹೀನಾಯವಾಗಿ ಸೋಲಿಸಲಿದ್ದಾರೆ. ನಾನು ಬಹಳ ಬೇಗ ಕರ್ನಾಟಕಕ್ಕೆ ಬರುತ್ತೇನೆ. ಅಲ್ಲಿ ಕ್ಯಾಂಪ್ ಮಾಡುತ್ತೇನೆ. ಬಹಳ ಸಮಯ ಅಲ್ಲಿದ್ದು ಬಿಜೆಪಿಯನ್ನು ಸೋಲಿಸುತ್ತೇನೆ ಎಂದಿದ್ದಾರೆ.

ಅವರ ಜೊತೆಗಿನ ಮಾತುಕತೆ ಇಲ್ಲಿದೆ:

ವಾರ್ತಾಭಾರತಿ: ಅಭಿನಂದನೆಗಳು ಜಿಗ್ನೇಶ್ ಅವರೇ.. ಮೊದಲ ಪ್ರಯತ್ನದಲ್ಲೇ ಬಹಳ ದೊಡ್ಡ ಜಯಗಳಿಸಿದ್ದೀರಿ.. ಏನನಿಸುತ್ತದೆ

ಜಿಗ್ನೇಶ್ ಮೇವಾನಿ: ಧನ್ಯವಾದಗಳು. ಫೆಂಟಾಸ್ಟಿಕ್. ತುಂಬಾ ಖುಷಿಯಾಗಿದೆ. ಇದು ಇಡೀ ಗುಜರಾತ್ ನ ಜನಸಾಮಾನ್ಯರ, ಬಡವರ ಗೆಲುವು. ಆದರೆ ಬಿಜೆಪಿ ಅಧಿಕಾರದಿಂದ ಕೆಳಗಿಳಿದಿದ್ದರೆ ಈ ಸಂಭ್ರಮ ದುಪ್ಪಟ್ಟಾಗುತ್ತಿತ್ತು. ಆದರೂ ಅದರ ಬುಡವನ್ನೇ ಅಲುಗಾಡಿಸುವಲ್ಲಿ ನಾವು ಸಫಲರಾಗಿದ್ದೇವೆ. ಹಾಗಾಗಿ ಸಂತಸವಿದೆ.

ವಾರ್ತಾಭಾರತಿ: ನೀವು ಇಷ್ಟು ದೊಡ್ಡ ಅಂತರದ ಜಯ ನಿರೀಕ್ಷಿಸಿದ್ದಿರಾ? ನಿಮ್ಮ ಗೆಲುವಿನ ರಹಸ್ಯವೇನು?

ಜಿಗ್ನೇಶ್ ಮೇವಾನಿ: ನಾನು 5000 ಮತಗಳ ಅಂತರ ನಿರೀಕ್ಷಿಸಿದ್ದೆ. ಆದರೆ ಇದು ಬಹುದೊಡ್ಡ ಗೆಲುವು. ಇದು ಗುಜರಾತ್‌ನ ದಲಿತರು, ಮುಸ್ಲಿಮ್ ಯುವಕರು, ಹಿಂದುಳಿದ ವರ್ಗಗಳು ಹಾಗೂ ಎಲ್ಲ ದಮನಿತರು ಒಂದು ಸೇರಿ ಪಡೆದ ಗೆಲುವು. ಸುಮಾರು ಅರ್ಧ ಡಝನ್ ರಾಜಕೀಯ ಪಕ್ಷಗಳು ನನ್ನ ಪರವಾಗಿ ಪ್ರಚಾರ ನಡೆಸಿದವು. ಬಿಜೆಪಿ ನನ್ನ ವಿರುದ್ಧ ಸಾಧ್ಯವಿರುವ ಎಲ್ಲ ಬಲವನ್ನು ಪ್ರಯೋಗಿಸಿತು. ಧಾರಾಳ ದುಡ್ಡು ಖರ್ಚು ಮಾಡಿತು. ಪ್ರಧಾನಿ, ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ, ಗುಜರಾತ್ ಮುಖ್ಯಮಂತ್ರಿ ಸಹಿತ ಘಟಾನುಘಟಿ ನಾಯಕರು ನನ್ನ ವಿರುದ್ಧ ಪ್ರಚಾರ ನಡೆಸಿದರು. ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದರು. ನಾನು ಜಿಹಾದಿಗಳಿಂದ ಹಣ ಪಡೆದಿದ್ದೇನೆ ಎಂದು ಅತ್ಯಂತ ಕೀಳು ಮಟ್ಟದ ಸುಳ್ಳಾರೋಪಗಳನ್ನು ಮಾಡಿದರು. ಆದರೆ ಕೊನೆಗೂ ಜನಶಕ್ತಿ ಗೆದ್ದಿದೆ.

ವಾರ್ತಾಭಾರತಿ: ಶಾಸಕನಾಗಿ ನಿಮ್ಮ ಆದ್ಯತೆಗಳೇನು?

ಜಿಗ್ನೇಶ್ ಮೇವಾನಿ: ನನ್ನ ಗೆಲುವು, ಅದರಲ್ಲೂ ಗೆಲುವಿನ ಪ್ರಮಾಣ ಜವಾಬ್ದಾರಿಯನ್ನು ಹೆಚ್ಚಿಸಿದೆ. ನಾನು ಇಂದಿನಿಂದಲೇ ಕೆಲಸ ಪ್ರಾರಂಭಿಸಿದ್ದೇನೆ. ಇವತ್ತು ನನ್ನ ಕ್ಷೇತ್ರದಲ್ಲಿ ಅತ್ಯಂತ ಕೆಟ್ಟದಾಗಿರುವ ರಸ್ತೆಗಳ ಪರಿಸ್ಥಿತಿ ಸುಧಾರಿಸಲು ಕೋರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆ.

ವಾರ್ತಾಭಾರತಿ: ಗುಜರಾತ್ ವಿಧಾನಸಭೆಯಲ್ಲಿ ಜಿಗ್ನೇಶ್ ಮೇವಾನಿ ಇರುವುದರ ಪ್ರಾಮುಖ್ಯತೆಯೇನು?

ಜಿಗ್ನೇಶ್ ಮೇವಾನಿ:  ಬಹಳ ಸರಳ. ನಾನು ಗುಜರಾತ್‌ನ ಸಾಮಾನ್ಯರಲ್ಲಿ ಸಾಮಾನ್ಯ ಜನರ ಧ್ವನಿಯಾಗಿ ವಿಧಾನಸಭೆಯಲ್ಲಿ ಕೆಲಸ ಮಾಡುತ್ತೇನೆ. ಇಲ್ಲಿನ ರಸ್ತೆಗಳಲ್ಲಿರುವ ಜನರ ಆಶಯಗಳಿಗೆ ನಾನು ಶಾಸಕನಾಗಿ ಸ್ಪಂದಿಸುತ್ತೇನೆ. ಜಿಗ್ನೇಶ್ ಮೇವಾನಿ ಅಂದರೆ ಜನರ ಧ್ವನಿ.

ವಾರ್ತಾಭಾರತಿ: ಬಿಜೆಪಿ ಸರಕಾರವನ್ನು ಸದನದಲ್ಲಿ ಹೇಗೆ ಎದುರಿಸುತ್ತೀರಿ ?

ಜಿಗ್ನೇಶ್ ಮೇವಾನಿ: ಅವರಿಗೆ ಈಗಾಗಾಲೇ ಭಯ ಶುರುವಾಗಿದೆ (ನಗು). ನಾನು ಸದನದಲ್ಲಿ ಅವರ ಚಳಿ ಬಿಡಿಸುತ್ತೇನೆ. ಅವರ ಬಂಡವಾಳವನ್ನು ಬಯಲು ಮಾಡುತ್ತೇನೆ. ಅವರು ತೋರಿಸಿರುವ ಪೊಳ್ಳ ಮಾದರಿಯನ್ನು ನಾನು ಚಿಂದಿ ಮಾಡುತ್ತೇನೆ. ನಿಜವಾದ ಅಭಿವೃದ್ಧಿ ಅಂದರೆ ಏನು ಎಂದು ಅವರಿಗೆ ನಾನು ತೋರಿಸಿಕೊಡುತ್ತೇನೆ. ಎಲ್ಲ ಜಾತಿ, ಧರ್ಮ, ವರ್ಗಗಳ ಜನರನ್ನು ಸೇರಿಸಿಕೊಂಡು ಸಾಧಿಸುವ ಸಮಗ್ರ ಅಭಿವೃದ್ಧಿ ಯಾವುದು ಎಂದು ನಾನು ಮಾಡಿ ತೋರಿಸುತ್ತೇನೆ. ಪ್ರಜಾಪ್ರಭುತ್ವದ ಆಶಯಗಳನ್ನು ಈಡೇರಿಸಿ ನಾನು ಬಿಜೆಪಿಗೆ ಪಾಠ ಕಲಿಸುತ್ತೇನೆ.

ವಾರ್ತಾಭಾರತಿ: ಆದರೆ ನೀವು, ಹಾರ್ದಿಕ್ ಪಟೇಲ್, ಅಲ್ಪೇಶ್ ಎಲ್ಲರೂ ಒಂದಾಗಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ, ಬಿಜೆಪಿ ಸೋಲಲಿಲ್ಲ.

ಜಿಗ್ನೇಶ್ ಮೇವಾನಿ: ಅದು ರಿಯಲಿ ಅನ್ ಫಾರ್ಚೂನೇಟ್ (ದುರದೃಷ್ಟಕರ). ಅತ್ಯಂತ ಬೇಸರದ ವಿಷಯ. ಆದರೆ ನಾವು ನೈತಿಕ ಜಯಗಳಿಸಿದ್ದೇವೆ. 100ರ ಮೇಲಿದ್ದ ಬಿಜೆಪಿ ಈಗ 99ಕ್ಕೆ ಬಂದು ನಿಂತಿದೆ. ಈ ಎರಡಂಕೆಯಿಂದ ಅದನ್ನು ಮುಂದಿನ ಐದು ವರ್ಷಗಳಲ್ಲಿ ಸಂಪೂರ್ಣ ಬುಡಸಮೇತ ನಾವು ಕಿತ್ತುಹಾಕುತ್ತೇವೆ. ಈ ಚುನಾವಣೆಯಲ್ಲಿ ಅಂತಹದೊಂದು ಭರವಸೆಯ ಬೆಳ್ಳಿರೇಖೆ ಮೂಡಿದೆ. ಅದರಲ್ಲಿ ಸಂಶಯವಿಲ್ಲ.

ವಾರ್ತಾಭಾರತಿ: ಈ ಸಂಭ್ರಮದ ನಡುವೆ ಗೌರಿ ಲಂಕೇಶ್ ನೆನಪಾದರೇ?

ಜಿಗ್ನೇಶ್ ಮೇವಾನಿ: ಅಯ್ಯೋ.. ಅವರಿದ್ದಿದ್ದರೆ ಇವತ್ತು ಅವರ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ. ನನ್ನನ್ನು ತಕ್ಷಣ ಬೆಂಗಳೂರಿಗೆ ಬಾ ಎಂದು ವಿಮಾನದ ಟಿಕೆಟ್ ಕಳಿಸುತ್ತಿದ್ದರು. ಬೆಂಗಳೂರಲ್ಲಿ ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದರು. ಅವರ ನೆನಪು ನನ್ನನ್ನು ಸದಾ ಕಾಡಲಿದೆ.

ವಾರ್ತಾಭಾರತಿ: ಗುಜರಾತ್ ಫಲಿತಾಂಶ ಕರ್ನಾಟಕ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ ಎಂದು ಬಿಜೆಪಿ ಹೇಳುತ್ತಿದೆ.

ಜಿಗ್ನೇಶ್ ಮೇವಾನಿ: ಹೌದು ಖಂಡಿತ. ಆದರೆ ಬಿಜೆಪಿಯನ್ನು ಅಲ್ಲಿ ಹೀನಾಯವಾಗಿ ಜನರು ಸೋಲಿಸಲಿದ್ದಾರೆ. ನಾನು ಬಹಳ ಬೇಗ ಕರ್ನಾಟಕಕ್ಕೆ ಬರುತ್ತೇನೆ. ಅಲ್ಲಿ ಕ್ಯಾಂಪ್ ಮಾಡುತ್ತೇನೆ. ಬಹಳ ಸಮಯ ಅಲ್ಲಿದ್ದು ಬಿಜೆಪಿಯನ್ನು ಸೋಲಿಸುತ್ತೇನೆ.

ವಾರ್ತಾಭಾರತಿ: ಗುಜರಾತ್ ಫಲಿತಾಂಶದ ಬಳಿಕ ಮತ್ತೆ ಇವಿಎಂ ಕುರಿತ ಚರ್ಚೆ ಗರಿಗೆದರುತ್ತಿದೆ. ನೀವು ಏನು ಹೇಳುತ್ತೀರಿ ?

ಜಿಗ್ನೇಶ್ ಮೇವಾನಿ: ನನ್ನ ಆದ್ಯತೆ ಮತಪತ್ರ ( ಬ್ಯಾಲಟ್ ಪೇಪರ್ ) ಮೂಲಕ ನಡೆಯುವ ಮತದಾನ. ನಾನು ಅದನ್ನೇ ಬಯಸುತ್ತೇನೆ.

ಉನಾದಿಂದ ಗಾಂಧಿನಗರ್‌ಗೆ ...

ಉನಾದಲ್ಲಿ ಗೋರಕ್ಷಕರಿಂದ ದಲಿತ ಯುವಕರ ಮೇಲೆ ಥಳಿತ ಪ್ರಕರಣದ ವಿರುದ್ಧ ಭುಗಿಲೆದ್ದ ದಲಿತ ಚಳವಳಿಯ ನಾಯಕ, 36 ವರ್ಷದ ಜಿಗ್ನೇಶ್ ಕುಮಾರ್ ನಟ್ವರ್‌ಲಾಲ್ ಮೇವಾನಿ ಇಂದು ಇಡೀ ದೇಶದ ಯುವಜನರ ಪಾಲಿನ ಕಣ್ಮಣಿ. ‘ ನಿಮ್ಮ ದನದ ಬಾಲವನ್ನು ನೀವೇ ಇಟ್ಟುಕೊಳ್ಳಿ, ನಮಗೆ ನಮ್ಮ ಭೂಮಿ ಕೊಡಿ’ ಎಂಬ ಘೋಷಣೆಯೊಂದಿಗೆ ಗುಜರಾತ್‌ನಲ್ಲಿ ಪ್ರಾರಂಭವಾದ ಜಿಗ್ನೇಶ್ ನಾಯಕತ್ವದ ಚಳವಳಿ ಇಂದು ದೇಶಾದ್ಯಂತ ಚಳವಳಿಗಳ ಸರಣಿಯನ್ನೇ ಸೃಷ್ಟಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)