varthabharthi

ಸಿನಿಮಾ

ದಿಲೀಪ್-ಮಂಜು ವಾರಿಯರ್ ವಿಚ್ಛೇದನಕ್ಕೆ ದೌರ್ಜನ್ಯಕ್ಕೊಳಗಾದ ನಟಿಯೇ ಕಾರಣ: ಕಾವ್ಯಾ ಮಾಧವನ್

ವಾರ್ತಾ ಭಾರತಿ : 20 Dec, 2017

ಕೊಚ್ಚಿ, ಡಿ.20: ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ನಟ ದಿಲೀಪ್ ಪತ್ನಿ ಕಾವ್ಯಾ ಮಾಧವನ್‍ ಪೊಲೀಸ್ ತನಿಖಾ ತಂಡಕ್ಕೆ ನೀಡಿದ್ದ ಹೇಳಿಕೆಗಳು ಬಹಿರಂಗವಾಗಿದೆ. ದಿಲೀಪ್ ಮತ್ತು ಮಂಜು ವಾರಿಯರ್ ಪರಸ್ಪರ ದೂರವಾಗಲು ತಾನು ಕಾರಣವೆಂದು ದೌರ್ಜನ್ಯಕ್ಕೊಳಗಾದ ನಟಿ ಹೇಳುತ್ತಿದ್ದರು ಎಂದು ಕಾವ್ಯಾ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಜಾಹೀರಾತು ನಿರ್ದೇಶಕ ಶ್ರೀಕುಮಾರ್ ಮೆನನ್ ಸಾಮಾಜಿಕ ಜಾಲತಾಣದಲ್ಲಿ ದಿಲೀಪ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು ಎಂದು ಕಾವ್ಯಾ ಆರೋಪಿಸಿದ್ದಾರೆ. "ರಿಹರ್ಸಲ್ ಕ್ಯಾಂಪ್‍ನಲ್ಲಿ ದಿಲೀಪ್ ಮತ್ತು ನನ್ನ ಬಗ್ಗೆ ನಟಿ ಮಾತನಾಡುತ್ತಿದ್ದರು. ನಾನು ಮತ್ತು ದಿಲೀಪ್ ನೃತ್ಯ ಮಾಡುತ್ತಿರುವ ಫೋಟೊಗಳನ್ನು ಮಂಜು ವಾರಿಯರ್ ಗೆ ಕಳುಹಿಸಿಕೊಟ್ಟಿದ್ದರು. ಈ ವಿಷಯವನ್ನು ದಿಲೀಪ್ ನನಗೆ ಹೇಳಿದ್ದರು. 2012ರಲ್ಲಿ ಸಮಸ್ಯೆ ಹೆಚ್ಚು ಬಿಗಡಾಯಿಸಿತು. ಅದಕ್ಕೆ ನಟಿಯೂ ಕಾರಣವಾಗಿದ್ದರು. ದಿಲೀಪ್ ಮತ್ತು ಮಂಜು ವಿವಾಹ ವಿಚ್ಛೇದನಕ್ಕೆ ತಾನೇ ಕಾರಣ ಎಂದು ನಟಿ ಹಲವರ ಬಳಿ ಹೇಳಿದ್ದಾರೆ. ದಿಲೀಪ್ ಮತ್ತು ಮಂಜು ವಾರಿಯರ್ ನಡುವಿನ ಸಮಸ್ಯೆಗಳಿಗೆ ನಟಿ ಕೂಡಾ ಕಾರಣವಾಗಿದ್ದಾರೆ" ಎಂದು ಕಾವ್ಯಾ ಆರೋಪಿಸಿದ್ದಾರೆ.

ರಿಹರ್ಸಲ್ ಕ್ಯಾಂಪ್‍ನ ಘಟನೆಯ ನಂತರ ನಟಿಯೊಂದಿಗೆ ದಿಲೀಪ್ ಮಾತನಾಡಿಲ್ಲ. ಆದರೆ ಕ್ಯಾಂಪ್‍ನ ಘಟನೆಗಳ ಕುರಿತು ನಟ ಸಿದ್ದೀಕ್ ಜೊತೆ ದೂರಿದ್ದರು. ಅನಾವಶ್ಯಕ ಮಾತುಗಳನ್ನಾಡಬಾರದೆಂದು ನಟಿಗೆ ಸಿದ್ದೀಕ್ ಉಪದೇಶಿಸಿದ್ದರು ಎಂದು ಕಾವ್ಯಾ ತಿಳಿಸಿದ್ದಾರೆ.

"ರಿಮಿ ಟಾಮಿ ಕರೆ ಮಾಡಿದಾಗಲೇ ನನಗೆ ನಟಿಯ ಮೇಲೆ ದೌರ್ಜನ್ಯ ನಡೆದ ವಿಷಯ ತಿಳಿಯಿತು. ಪಲ್ಸರ್ ಸುನಿಯ ಬಗ್ಗೆ ನನಗೆ ಗೊತ್ತಿಲ್ಲ. ಮನೆಗೆ ಬಂದಿದ್ದಾನೆಯೇ ಎಂದೂ ಗೊತ್ತಿಲ್ಲ. ಆದರೆ ಆರೋಪಿಗಳಲ್ಲಿ ಒಬ್ಬನಾದ ವಿಷ್ಣು ಕಾಕ್ಕಾನಾಡ್ ಲಕ್ಷ್ಯ ಕಚೇರಿಗೆ ಬಂದಿದ್ದ. ನನ್ನ ಚಾಲಕನೊಡನೆ ತಂದೆ ಮತ್ತು ತಾಯಿಯ ನಂಬರ್ ಕೇಳಿದ್ದಾನೆ. ಆದರೆ ನಂಬರ್ ಕೊಟ್ಟಿಲ್ಲ. ಲಕ್ಷ್ಯದಲ್ಲಿ ಸಿಸಿ ಕ್ಯಾಮರಾ ಇದೆ. ಅದರ ದೃಶ್ಯಗಳನ್ನು ಪೊಲೀಸರಿಗೆ ನೀಡಲಾಗಿದೆ. ಬೆದರಿಕೆಯೊಡ್ಡಿ ಹಣ ಕೀಳಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ದಿಲೀಪ್ ಡಿಜಿಪಿ ಲೋಕನಾಥ್ ಬೆಹ್ರಾರಿಗೆ ಕರೆ ಮಾಡಿ ತಿಳಿಸಿದ್ದರು. ನಂತರ ಪೊಲೀಸರಿಗೆ ದೂರನ್ನು ನೀಡಿದೆವು" ಕಾವ್ಯಾ ತನಿಖಾ ತಂಡಕ್ಕೆ ಹೇಳಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)