varthabharthi

ವೈವಿಧ್ಯ

ಇಂದು ಡಾ.ಯು. ಆರ್. ಅನಂತ ಮೂರ್ತಿ ಜನ್ಮದಿನ

ಬಡವರು ಕನ್ನಡವನ್ನು ಉಳಿಸಿಯಾರು...

ವಾರ್ತಾ ಭಾರತಿ : 20 Dec, 2017

ಡಾ. ಯು.ಆರ್.ಅನಂತಮೂರ್ತಿಯವರು 69ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಭಾಷಣದ ಆಯ್ದ ಭಾಗ

ಮುಂದೊಂದು ದಿನ ಎಲ್ಲ ಭಾರತೀಯ ಭಾಷೆಗಳೂ, ಕನ್ನಡವಂತೂ ಖಂಡಿತವಾಗಿ, ಬಹುಪಾಲು ವಿದ್ಯಾವಂತರಿಗೆ ಅಡುಗೆಮನೆಯ ಭಾಷೆಯಾಗಿ ಮಾತ್ರ ಬಳಕೆಯಾಗಿ ಉಳಿಯ ಬಹುದೆಂಬ ಆತಂಕ ನನ್ನಂಥವರಿಗಿದೆ. ವಿಪರ್ಯಾಸ ವೆಂದರೆ, ಭವಿಷ್ಯದಲ್ಲಿ ಹಾಗಾಗದಂತೆ ತಡೆಯಬಲ್ಲವರು ವಿದ್ಯಾವಂತರೂ, ಭಾಗ್ಯವಂತರೂ ಆದ ನಮ್ಮಂಥ ಜನರಲ್ಲ; ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕೆಂಬ ಆಸೆಯಿದ್ದರೂ ಓದಲಾರದ ಹಳ್ಳಿಯ ಹಿಂದುಳಿದವರು ಮತ್ತು ಬಡವರು ಕನ್ನಡವನ್ನು ಉಳಿಸಿಯಾರು. ಕನ್ನಡ ಮಾತಿನ ಕಸುವನ್ನು ಚರಿತ್ರೆಯುದ್ದಕ್ಕೂ ಉಳಿಸಿಕೊಂಡು ಬಂದವರು ಇವರೇ. ಬಡಜನರ ಬಗ್ಗೆ ಕನಿಕರ ಪಡುವುದು ಮಾತ್ರ ಸಲ್ಲದು. ಗೌರವದಿಂದಲೂ ಭರವಸೆಯಿಂದಲೂ ಅವರನ್ನು ನೋಡುವುದು ಅವಶ್ಯವೆನ್ನಲು ಈ ಮಾತುಗಳನ್ನು ಹೇಳಿ, ಮುಂದಿನ ಮಾತುಗಳನ್ನು ಸೇರಿಸುತ್ತೇನೆ.
ನಮ್ಮ ನಾಗರಿಕತೆಯು ತೋರುವ ಜಗಲಿ ಯಲ್ಲಿ ಆಳಿದ ಪರಕೀಯರ ಗುರುತುಗಳಿದ್ದರೆ, ಚರಿತ್ರೆಯಲ್ಲಿ ಇನ್ನೂ ದಾಖಲಾಗದ ಸಮೃದ್ಧ ಹಿತ್ತಲಿನಲ್ಲಿ ಹಿಂದುಳಿದ ಜಾತಿಗಳ, ದಲಿತರ, ಮಹಿಳೆಯರ ಅನುಭವದ್ರವ್ಯ ನಾಗರಿಕತೆಯ ಜಗಲಿಯನ್ನೇರಲು ಕಾದಿದೆ. ನಮ್ಮ ಸಮುದಾಯದಿಂದ ಹುಟ್ಟಿ ಬರುವ ನವಶಿಕ್ಷಿತರು ಈಗಾಗಲೇ ಸವಕಲಾದ ಕನ್ನಡಕ್ಕೆ ಜೀವಂತ ಮಾತಿನ ಕಾವು ತಂದಿದ್ದಾರೆ. ದಣಿದ ಸಾಹಿತ್ಯ ಪ್ರಕಾರಗಳಿಗೆ ಹೊಸ ಚೇತನ ತುಂಬಿದ್ದಾರೆ. ವಚನ ಚಳವಳಿಯ ನಂತರ ನಮ್ಮ ಕಾಲದಲ್ಲಿ ಎಲ್ಲ ಜಾತಿಯಿಂದಲೂ, ವರ್ಗಗಳಿಂದಲೂ ಬಹುದೊಡ್ಡ ಸಂಖ್ಯೆಯಲ್ಲಿ ಲೇಖಕರು ಕಾಣಿಸಿಕೊಂಡಿದ್ದಾರೆ. ಬಂಡಾಯ ಮತ್ತು ದಲಿತ ಚಳವಳಿಗಳು, ಈಚಿನ ದಿನಗಳಲ್ಲಿ ಸ್ತ್ರೀವಾದಿ ಚಳವಳಿ ಅತಿರೇಕದ ನಿಲುವುಗಳನ್ನು ತೆಗೆದುಕೊಂಡಂತೆ ಕೆಲವೊಮ್ಮೆ ಕೆಲವರಿಗೆ ಕಂಡಾಗಲೂ ಇಡೀ ಒಂದು ಜನಾಂಗದ ಅರಿವಿನ ಸ್ಫೋಟಕ್ಕೆ ಕಾರಣವಾಗಿವೆ. ಹೇಳಲೇಬೇಕಾದ್ದನ್ನು ಅತಿಮಾಡಿ ಹೇಳಿದರೂ ಸರಿಯೇ. ಯಾಕೆಂದರೆ ಅತಿಗಳು ಸತ್ಯದ ಬಾಗಿಲನ್ನು ತೆರೆಯುತ್ತವೆ ಎಂಬ ಅರ್ಥಬರುವ ಮಾತನ್ನು ಬ್ಲೇಕ್ ಕವಿ ಹೇಳಿದ್ದನ್ನು ಇಲ್ಲಿ ನೆನೆಯಬೇಕು. ಈ ಲೇಖಕ ಲೇಖಕಿಯರು ರೂಪಕ ಪ್ರತಿಭೆ ಪಡೆದವರಾಗಿದ್ದಾಗ, ಕಿರುಚುವ ಅಗತ್ಯವಿಲ್ಲದೆ, ವಸಾಹತುಶಾಹಿಯ ನೆರಳಿನಿಂದ ನಮ್ಮ ಸಾಹಿತ್ಯವನ್ನು ಹೊರತರಬಲ್ಲವರಾಗುತ್ತಾರೆ.

ಭಾರತದ ಬಹುತೇಕ ರಾಜ್ಯಗಳು, ಕರ್ನಾಟಕವಂತೂ ಮುಖ್ಯವಾಗಿ ಬಹು ಭಾಷಾ ವಲಯಗಳು. ನಮ್ಮದು ಯುರೋಪಿನಂತೆ ಒಂದೇ ಭಾಷೆ, ಒಂದೇ ಮತ, ಒಂದೇ ರೇಸಿನ ರಾಷ್ಟ್ರವೂ ಅಲ್ಲ. ರಾಜ್ಯಗಳೂ ಅಲ್ಲ. ಆದ್ದರಿಂದ ಯುರೋಪಿನಲ್ಲಿ ರುವಂತೆ ನಮ್ಮಲ್ಲಿ ಖಚಿತವಾದ ಮಾತೃಭಾಷೆಯೆಂಬುದಿಲ್ಲ. ಅದರ ಬದಲಾಗಿ ನಮ್ಮಲ್ಲಿ ಹಲವರಿಗೆ ಮನೆಮಾತೊಂದು ಇರುತ್ತದೆ. ದೇಶದ ಮಾತೊಂದು ಇರುತ್ತದೆ. ದೇಶದ ಆಚಿನ ಸಂಪರ್ಕಕ್ಕಾಗಿ ಇನ್ನೊಂದು ಮಾತು ಇರುತ್ತದೆ. ಮಾತೃಭಾಷೆಯೆಂಬುದು ಅನುವಾದ ಕನ್ನಡ ರಾಜ್ಯಭಾಷೆಯಾಗ ದಂತೆ, ಶಿಕ್ಷಣ ಮಾಧ್ಯಮ ವಾಗದಂತೆ ತಡೆಯಲು ಇಂಗ್ಲಿಷ್ ಭಾಷೆಯ ವ್ಯಾಮೋಹಿಗಳು ಬಳಸುವ ಅಸ್ತ್ರ ಈ ಮದರ್‌ಟಂಗ್ ಕಲ್ಪನೆ.

ಈ ಸಂದರ್ಭದಲ್ಲೇ ನಾನು ಸೇರಿಸಬೇಕಾದ ಒಂದು ಮುಖ್ಯ ಮಾತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಣುವ ವಿಶಿಷ್ಟ ಭಾಷಾ ವಲಯದಿಂದ ಪ್ರೇರಿತವಾದ ಮಾತಿದು. ಇಲ್ಲಿ ಕೊಂಕಣಿಯಿದೆ. ತುಳುವಿದೆ. ಕನ್ನಡವಿದೆ. ಆದರೂ ‘ಕನ್ನಡದೊಳ್ ಭಾವಿಸಿದ’ ಜನಪದ ಇಲ್ಲಿಯದು. ಮನೆಯಲ್ಲಿ ಮರಾಠಿ ಮಾತಾಡುವವರೊಬ್ಬರು ತುಳುವಿನಲ್ಲಿ ರಾಮಾಯಣ ರಚಿಸುವುದು ಈ ಜನಪದದಲ್ಲಿ ಸಾಧ್ಯ. ಕನ್ನಡದಲ್ಲಿ ಸೃಷ್ಟಿಯಾದ ಚೋಮ ನಿಜ ಜೀವನದಲ್ಲಿ ಮಾತಾಡುವ ತುಳುವಿಗೆ ಇಲ್ಲಿ ಅನುವಾದಿತವಾಗಿ ಮರುಹುಟ್ಟು ಪಡೆಯುವುದು ಸಾಧ್ಯ. ಕಯ್ಯಿರ ಕಿಞ್ಞಣ್ಣ ರೈ, ಜತ್ತಪ್ಪ ರೈ, ಗೋವಿಂದ ಪೈ, ಮಂದಾರ ಕೇಶವ ಭಟ್ಟರು-ಬಹುಭಾಷಾವಲಯ ಸೃಷ್ಟಿಸಿದ ಕನ್ನಡಿಗರು. ಸಾಂಸ್ಕೃತಿಕವಾಗಿ ಏಕಭಾಷೆಗಳಾಗಿ ಕುಗ್ಗಿ, ಸೊರಗಿ, ಆದರೆ ರಾಷ್ಟ್ರಗಳೆಂದು ಮೆರೆದಾಡುವ ಪಾಶ್ಚಾತ್ಯ ನಾಗರಿಕತೆಗೆ ನಮ್ಮ ಜನಪದಗಳಲ್ಲಿ ನಿಜವಾದ ಪರ್ಯಾಯವಿದೆ.

ಸದ್ಯ ಯಾರೂ ಒಪ್ಪುವಂತೆ ಕಾಣದಿದ್ದರೂ, ಸಂಕೋಚಪಡದೆ ನಾನೊಂದು ವಿಚಾರವನ್ನು ಘನ ಸರಕಾರದ ಮುಂದಿಡುತ್ತಿದ್ದೇನೆ. ನಮ್ಮ ಅರ್ಥ ವ್ಯವಸ್ಥೆಗೆ ಬಹುರಾಷ್ಟ್ರೀಯ ಕಂಪೆನಿಗಳನ್ನು ಆಹ್ವಾನಿಸುವುದು ಅವಶ್ಯವಾದರೆ ಆಹ್ವಾನಿಸೋಣ. ಆದರೆ, ನಮ್ಮ ಸಾಮಾಜಿಕ ಅಗತ್ಯಗಳನ್ನು ಉದಾರೀಕರಣದ ನಮ್ಮ ಹುರುಪಿನಲ್ಲಿ ಮರೆಯಬಾರದು. ಖಾಸಗೀಕರಣದ ಈ ದಿನಗಳಲ್ಲಿ ಸರಕಾರಿ ಉದ್ಯೋಗಾವಕಾಶ ತುಂಬ ಕಮ್ಮಿಯಾಗುತ್ತಿದೆ. ಮೀಸಲಾತಿಯ ಮುಖೇನ ನಮ್ಮ ಸಮಾನತೆಯ ಹಸಿವನ್ನು ಪೂರೈಸುವ ಅವಕಾಶಗಳು ಕ್ರಮೇಣ ಇಲ್ಲವಾಗುತ್ತಿವೆ. ಬಡವರು ಇನ್ನೂ ದಿಕ್ಕು ಕೆಟ್ಟ ಬಡವರಾಗುತ್ತ ಹೋಗುವ ಸಮಾಜದಲ್ಲಿ ಸಂಪತ್ತನ್ನು ಯಾರಿಗಾಗಿ ನಾವು ಸೃಷ್ಟಿಸಬೇಕು? ಆದ್ದರಿಂದ ಸರಕಾರದ ಕೆಲಸಗಳಿಗೆ ಅನ್ವಯಿಸುವ ಮೀಸಲಾತಿ ಎಲ್ಲ ಬಹುರಾಷ್ಟ್ರೀಯ ಸಂಸ್ಥೆಗಳಿಗೂ ಅನ್ವಯಿಸಬೇಕು. ಪ್ರೆಸಿಟೆಂಟ್ ಕೆನಡಿ ಕಪ್ಪು ಜನರಿಗೆ ಇಂಥ ಮೀಸಲಾತಿಯನ್ನು ಕಡ್ಡಾಯ ಮಾಡಿದ್ದರು ಎಂದು ನಾನು ಕೇಳಿದ್ದೇನೆ.

ಇಷ್ಟೇ ಸಾಲದು. ಕರ್ನಾಟಕದಲ್ಲಿ ಅವರು ವ್ಯವಹಾರ ಮಾಡುವಾಗ ಕನ್ನಡ ಭಾಷೆಯನ್ನು ಬಳಸುವಂತೆ ಒತ್ತಾಯ ಮಾಡಬೇಕು. ಜಪಾನಿ ಭಾಷೆಯನ್ನು, ಅರೆಬಿಕ್ ಭಾಷೆಯನ್ನು, ಡಚ್ಚನ್ನು ಆಯಾ ದೇಶಗಳಲ್ಲಿ ಈ ಕಂಪೆನಿಗಳು ಬಳಸುವುದಿಲ್ಲವೇ ಹಾಗೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)