varthabharthi

ಅನುಗಾಲ

ಅಸತ್ಯದೊಂದಿಗೆ ಪ್ರಯೋಗ: ಗುಜರಾತ್ ಮಾದರಿ

ವಾರ್ತಾ ಭಾರತಿ : 21 Dec, 2017
ಬಾಲಸುಬ್ರಹ್ಮಣ್ಯ ಕಂರ್ಜಪಣೆ

ಗುಜರಾತ್‌ನ ಈ ಚುನಾವಣೆಯನ್ನು ಒಂದು ಪ್ರಯೋಗಶಾಲೆಯಾಗಿ ಕಂಡರೆ ಕಾಂಗ್ರೆಸ್‌ನ ಕಿಲುಬು ಇನ್ನೂ ಕಳೆದಿಲ್ಲವೆಂದೂ ಬಿಜೆಪಿಯು ಗುಜರಾತನ್ನು ತನ್ನ ಅಸತ್ಯದ ಪ್ರಯೋಗಶಾಲೆಯಾಗಿ ಕಂಡಿದೆಯೆಂದೂ ಕಾಣುತ್ತದೆ. ರಾಹುಲ್ ಗಾಂಧಿಯ ಅಭಿಮನ್ಯು ಮತ್ತು ಮೋದಿಯ ದ್ರೋಣರ ನಡುವಣ ಈ ಯುದ್ಧಪರ್ವದಲ್ಲಿ ಉಳಿದವರೆಲ್ಲರೂ ವೀಕ್ಷಕರೇ ಆಗಿದ್ದರು. ಅಭಿಮನ್ಯು ಚಕ್ರವ್ಯೆಹದಿಂದ ಪಾರಾದದ್ದು ಮಾತ್ರ ಈ ಚುನಾವಣೆಯ ವೈಶಿಷ್ಟ್ಯ.


ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆ ಅನೇಕ ಉತ್ತರಗಳನ್ನು ನೀಡಿದೆ; ಜೊತೆಯಲ್ಲೇ ಅನೇಕ ಪ್ರಶ್ನೆಗಳನ್ನೂ ಹುಟ್ಟಿಸಿದೆ. ಪ್ರಾಯಃ 2014ರ ಆನಂತರ ದಿಲ್ಲಿ ಮತ್ತು ಬಿಹಾರಗಳ ಚುನಾವಣೆಯಲ್ಲೂ ಮೋದಿ ಇಂತಹ ಪ್ರತಿರೋಧವನ್ನು ಎದುರಿಸಿರಲಿಲ್ಲ. ದೇಶಕ್ಕೆ ಗುಜರಾತ್‌ನ ಈ ಮಾದರಿ ಒಂದು ಒಳ್ಳೆಯ ದಿಕ್ಸೂಚಿ.

ಗುಜರಾತ್ ಕಳೆದ ಎರಡು ದಶಕಗಳಿಂದಲೂ ಬಿಜೆಪಿಯ ತೆಕ್ಕೆಯಲ್ಲಿದೆ. ಗುಜರಾತ್ ವಿಧಾನಸಭೆಯ ಸದಸ್ಯತ್ವದ ಸಂಖ್ಯೆ 182. ಈ ಪೈಕಿ 1985ರಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನು ಪಡೆದದ್ದು ಬಿಟ್ಟರೆ ಬಿಜೆಪಿಯದ್ದೇ ಕಾರುಬಾರು. 1995ರಿಂದಂತೂ ಬಿಜೆಪಿ ಸತತವಾಗಿ 121 (1995), 117 (1998), 127 (2002), 117 (2007), 116 (2012) ಸ್ಥಾನಗಳನ್ನು ಗೆದ್ದಿದೆ. ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿಯು ಹೆಚ್ಚುಕಡಿಮೆ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದೆ. 26 ಸ್ಥಾನಗಳ ಪೈಕಿ ಬಿಜೆಪಿಯು 1996ರಲ್ಲಿ 10, 1998ರಲ್ಲಿ 19, 1999ರಲ್ಲಿ 20, 2004ರಲ್ಲಿ 14, 2009ರಲ್ಲಿ 15 ಹಾಗೂ 2014ರಲ್ಲಿ 26 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ 1996ರಲ್ಲಿ 10, 1998ರಲ್ಲಿ 7, 1999ರಲ್ಲಿ 6, 2004ರಲ್ಲಿ 12 ಮತ್ತು 2009ರಲ್ಲಿ 11 ಸ್ಥಾನಗಳನ್ನು ಪಡೆದು, 2014ರಲ್ಲಿ ಶೂನ್ಯ ಸಂಪಾದನೆಯನ್ನು ಮಾಡಿತು.

ಇತಿಹಾಸ ನೆನಪಿರುವವರಿಗೆ 2002ರ ಗೋಧ್ರಾ ಪ್ರಕರಣ ಮತ್ತು ಆನಂತರದ ಗಲಭೆ ಬಿಜೆಪಿಗೆ ಅನಾಯಾಸವಾಗಿ ಅಧಿಕಾರವನ್ನು ಬಂಗಾರದ ತಟ್ಟೆಯಲ್ಲಿಟ್ಟು ಕೊಟ್ಟಿತೆಂಬುದು ಗೊತ್ತಿದೆ. ಆದರೆ ಅದಕ್ಕೂ ಮುನ್ನಿನ ಎರಡು ಚುನಾವಣೆಗಳಲ್ಲೂ ಬಿಜೆಪಿ ಮಹತ್ತರ ಬಹುಮತ ಗಳಿಸಿದ್ದನ್ನು ನೆನಪಿಸಿಕೊಂಡರೆ ಕಾಂಗ್ರೆಸ್‌ನ ದುರಾಡಳಿತ ಮತ್ತು ಬಿಜೆಪಿಯ ಹಿಂದುತ್ವಯಾತ್ರೆಯೇ ಬಿಜೆಪಿಯ ಯಶಸ್ಸಿನ ಮೆಟ್ಟಲೆಂಬುದು ಮನವರಿಕೆಯಾದೀತು. ವಿಕಾಸದ ಮಂತ್ರವೆಷ್ಟೇ ಸದ್ದುಮಾಡಿದರೂ ತಳಮಟ್ಟದಲ್ಲಿ ಅದರ ಪಾತ್ರವಿರಲಿಲ್ಲ. ದೇಶವ್ಯಾಪಿ ಅಯೋಧ್ಯಾ ಚಳವಳಿಯ ರಥಯಾತ್ರೆಯು ಗುಜರಾತ್‌ನ ಸೋಮನಾಥದಿಂದ ಆರಂಭವಾದದ್ದು ಕಾಕತಾಳೀಯವಲ್ಲ. ಅಲ್ಲಿನ ಜನರು ಹಿಂದೂ-ಮುಸ್ಲಿಮ್ ಎಂದು ತಮ್ಮ ದೈನಂದಿನ ವ್ಯವಹಾರದಲ್ಲಿ ಪರಸ್ಪರ ದ್ವೇಷಿಗಳಾಗದಿದ್ದರೂ ಎಲ್ಲ ವರ್ಗದ ಹಿಂದೂಗಳು ಒಂದು ವೋಟ್‌ಬ್ಯಾಂಕ್ ಆಗಿ ಪರಿವರ್ತನೆಯಾದರು. ಪಕ್ಷ ಪಾಂಡವರಲ್ಲಿ ಊಟ ಕೌರವರಲ್ಲಿ ಎಂಬಂತೆ ವ್ಯಾವಹಾರಿಕವಾಗಿ ದಿನನಿತ್ಯದ ವ್ಯವಹಾರದಲ್ಲಿ ಸಮಾಜದ ಎಲ್ಲ ಜಾತಿ, ಮತಗಳ ಜನರು ಬೇಕಾದರೂ ಚುನಾವಣೆ ಎದುರಾದಾಗ ಧ್ರುವೀಕರಣಗೊಂಡರು. ಇದರಲ್ಲಿ ಅಡ್ವಾಣಿಯವರ ಕೊಡುಗೆಯೇ ಪ್ರಧಾನ. (ಆದರೂ ಅವರು ಪ್ರಧಾನಿಯಾಗಲು ವಿಫಲರಾದದ್ದು ಇತಿಹಾಸದ ಒಂದು ಕ್ರೂರ ಮತ್ತು ಸಮರ್ಥನೀಯ ವ್ಯಂಗ್ಯ!) ದೇಶವನ್ನು ಈಗ ಮುನ್ನಡೆಸುತ್ತಿರುವ ಮೋದಿ 2014ರ ಮೊದಲು 2002, 2007 ಮತ್ತು 2012ರಲ್ಲಿ ಗುಜರಾತ್‌ನ ಬಿಜೆಪಿಯ ಪ್ರಶ್ನಾತೀತ ನಾಯಕರಾದರು ಮತ್ತು ಮುಖ್ಯಮಂತ್ರಿಯಾದರು.

ರಾಜಧರ್ಮವನ್ನು ಕಡೆಗಣಿಸಿದ ಆರೋಪಕ್ಕೆ ತನ್ನ ಪಕ್ಷದ ಹಿರಿಯರಿಂದಲೇ ತುತ್ತಾದರೂ ಪಕ್ಷದ ರಾಜ್ಯನಾಯಕರಾಗಿ ಅಭೂತಪೂರ್ವ ಯಶಸ್ಸನ್ನು ಗಳಿಸಿ ಆನಂತರ 2014ರ ಹೊತ್ತಿಗೆ ರಾಷ್ಟ್ರೀಯ ಚುಕ್ಕಾಣಿಯನ್ನು ಹಿಡಿದರು. ಗುಜರಾತ್‌ನಲ್ಲಿ ಅವರ ಕೃತಿಯನ್ನು ಕಾಣದವರೂ ದೇಶದೆಲ್ಲೆಡೆ ಅವರು ತನ್ನ ಮಾತಿನ ಮೂಲಕವೇ ಗುಜರಾತನ್ನು ಮಂದಿ ಕಾಣದ ಸ್ವರ್ಗದಂತೆ ಬಿಂಬಿಸಿದಾಗ ಅವರ ಮಾತನ್ನೇ ನಂಬಿದರು. ಗುಜರಾತ್‌ಗೆ ಹೋಗದವರೂ ಗುಜರಾತೆಂದರೆ ಸ್ವರ್ಗಸದೃಶವೆಂದೇ ಬಣ್ಣಿಸುತ್ತಿದ್ದರು. ಇದೆಲ್ಲದರ ಸಮುಚ್ಚಯವಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿರಲಿಲ್ಲ. ಬಿಜೆಪಿಯ ‘ಕಾಂಗ್ರೆಸ್ ಮುಕ್ತ’ ಎಂಬ ಪ್ರಜಾತಂತ್ರವಿರೋಧೀ ಆಶಯ ಪೂರ್ಣವಾಗುವ ಶಂಕೆಯಿತ್ತು.

ಆದರೆ ಬಿಜೆಪಿಗೆ ವಿರೋಧವಾಗಿ ಪಟೇಲರ, ದಲಿತರ ಮತ್ತು ಇತರ ಹಿಂದುಳಿದ ವರ್ಗಗಳ ಒಂದು ಸಮೂಹವು ಒಟ್ಟಾದಾಗ ಕಾಂಗ್ರೆಸ್‌ನ ಹೋರಾಟಕ್ಕೆ ಒಂದು ಭೂಮಿಕೆಯು ಸಿದ್ಧವಾಯಿತು. ಕೆಲವೇ ತಿಂಗಳುಗಳ ಹಿಂದೆ ನಡೆದ ಚುನಾವಣೆಯಲ್ಲಿ ಶರದ್ ಪವಾರ್ ಅವರ ಎನ್‌ಸಿಪಿಯು ಕಾರಣವಿಲ್ಲದೆ ಬಿಜೆಪಿಯ ಪರವಾಗಿ ನಿಂತದ್ದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸಿನೊಂದಿಗೆ ಕೈಜೋಡಿಸುವ ಅದರ ಪ್ರಯತ್ನವು ಕೈಗೂಡಲಿಲ್ಲ. ಪರಿಸ್ಥಿತಿಯ ತೀವ್ರತೆಯು ಮೋದಿ-ಶಾ ಮಾತ್ರವಲ್ಲ ಬಿಜೆಪಿಯ ತಳಮಟ್ಟದ ಕಾರ್ಯಕರ್ತರಿಗೂ ಮನದಟ್ಟಾಗಿತ್ತು. ಗುಜರಾತ್‌ನಲ್ಲಿ ಗೆಲುವು ತಾವು ನಿರೀಕ್ಷಿಸಿದಷ್ಟು ಸುಲಭವಲ್ಲ ಎಂಬುದು ಅರಿವಾಗತೊಡಗಿತು. ಆದರೆ ಬಿಜೆಪಿಗೆ ಗೆಲುವು ಅನಿವಾರ್ಯವಾಗಿತ್ತು; ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಬಿಜೆಪಿ ತನ್ನೆಲ್ಲ ಶಕ್ತಿಯನ್ನು ಗುಜರಾತ್‌ನಲ್ಲಿ ಪ್ರಯೋಗಿಸಿತು. ದೇಶದ ಪ್ರಧಾನಿಯವರೇ ರಾಜ್ಯದಲ್ಲಿ ಝಂಡಾ ಊರುವ ಅನಿವಾರ್ಯತೆ ಬಂತೆಂದರೆ ಗುಜರಾತ್‌ಬಿಜೆಪಿಯ ಪಾಲಿಗೆ ನಂಬಲರ್ಹವಲ್ಲದ ಸಂಸಾರಸಾಥಿಯಂತಾಗಿತ್ತೆಂಬುದು ಸ್ಪಷ್ಟ.

ಇದಕ್ಕೆ ಕಾರಣ ಬಿಜೆಪಿಯು ಹಿಂದುಗಳನ್ನು ಒಂದು ಮತಬ್ಯಾಂಕಾಗಿ ಪರಿವರ್ತಿಸಿದರೂ ಅದರಲ್ಲಿ ಸೃಷ್ಟಿಯಾದ ಒಡಕು. ಇದು ಯಾರ ಪಾಲಿಗೆ ಮತಗಳಾಗಿ ಪರಿವರ್ತನೆಯಾಗುತ್ತದೆಯೆಂಬುದು ಯಾರಿಗೂ ನಿಚ್ಚಳವಾಗಿ ಗೊತ್ತಿರಲಿಲ್ಲ. ಆದರೆ ರಾಹುಲ್ ಗಾಂಧಿ ರಾಜಕೀಯದ ಹದಿಹರೆಯವನ್ನು ಕಳಚಿಕೊಂಡು ಪ್ರೌಢತೆಯೊಂದಿಗೆ ತನ್ನೆಲ್ಲ ಶಕ್ತಿಯನ್ನು ಗುಜರಾತ್‌ನಲ್ಲಿ ವ್ಯಯಮಾಡತೊಡಗಿದಾಗ ಮತ್ತು ಅತೃಪ್ತ ಸಮೂಹಗಳೊಂದಿಗೆ ವಿವಿಧ ಸೂತ್ರಗಳನ್ನು ಹೆಣೆದಾಗ ಗುಜರಾತ್ ಬಿಜೆಪಿಯ ಮೈಸೂರುಪಾಕ್ ಆಗಿ ಉಳಿಯುವುದಿಲ್ಲವೆನ್ನುವುದು ಕಾಣತೊಡಗಿತು. ಹೇಗಾದರೂ ಗೆದ್ದರೆ ಸಾಕೆಂಬ ಉದ್ದೇಶದಿಂದ ಬಿಜೆಪಿಯು ಹೆಣಗಾಡಿದರೆ, ಈ ಬಾರಿ ಗುಜರಾತ್‌ನಲ್ಲಿ ಹೊಸ ಶಕೆಯನ್ನು ಸೃಷ್ಟಿಮಾಡಿದರೆ ಅದರ ಹೊಡೆತ ಬಿಜೆಪಿಯ ಪಾಲಿಗೆ ದೇಶದೆಲ್ಲೆಡೆ ಆಗುತ್ತದೆಂಬ ಅರಿವು ಕಾಂಗ್ರೆಸಿಗಿತ್ತು.

ಕೊನೆಗೂ ಬಿಜೆಪಿ ಗೆದ್ದಿದೆ; ಆದರೆ ಗಮನಿಸಬೇಕಾದ್ದೆಂದರೆ 1995ರಿಂದ ಸತತವಾಗಿ 121, 117, 127, 117 ಮತ್ತು 116 ಸ್ಥಾನಗಳನ್ನು ಗೆದ್ದ ಬಿಜೆಪಿ ಈ ಬಾರಿ ಶಾಪಗ್ರಸ್ತನಂತೆ 35-40 ಮಾರ್ಕಿನೊಂದಿಗೆ ತೇರ್ಗಡೆಯಾಯಿತು; ಸುದೃಢ ಮೂರಂಕಿಯ ಮ್ಯಾಜಿಕ್‌ನಿಂದಲೂ ಒಂದು ಸ್ಥಾನ ಕಡಿಮೆಯಾಗಿ 99 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿತು. ಅಧಿಕಾರ ಹಿಡಿಯಲು 92 ಸ್ಥಾನಗಳು ಸಾಕಾದರೂ ಬಿಜೆಪಿಯ ವರ್ಚಸ್ಸಿಗೆ ಭಾರೀ ಹೊಡೆತ ಬಿದ್ದದ್ದಂತೂ ಸತ್ಯ. ಇದಕ್ಕೆ ಪರ್ಯಾಯವಾಗಿ 1995ರಿಂದ ಸತತವಾಗಿ 45, 53, 51, 59, ಮತ್ತು 60 ಸ್ಥಾನಗಳನ್ನಷ್ಟೇ ಪಡೆಯಲು ಶಕ್ಯವಾದ ಕಾಂಗ್ರೆಸ್ ಈ ಬಾರಿ 77 ಸ್ಥಾನಗಳನ್ನು ಪಡೆಯಿತು. ಮತಗಳನ್ನು ಲೆಕ್ಕ ಹಾಕಿದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಭಾರೀ ವ್ಯತ್ಯಾಸವಿಲ್ಲ. ಕಾಂಗ್ರೆಸ್ ತನ್ನ ಮತಗಳಲ್ಲಿ ಭಾರೀ ವೃದ್ಧಿಯನ್ನು ಕಂಡರೆ, ಬಿಜೆಪಿಯು ತನ್ನ ಮತಗಳಿಕೆಯಲ್ಲಿ ಅಷ್ಟೇ ಕುಸಿತ ಕಂಡಿದೆ. ಮೋದಿಯ ಶತಾಯಗತಾಯ ಪ್ರಚಾರವಲ್ಲದಿದ್ದರೆ ಮತ್ತು ಕಾಂಗ್ರೆಸಿನ ಕೆಲವು ವೈಯಕ್ತಿಕ ಮತ್ತು ಸಾಮೂಹಿಕ ನಡೆಗಳು ಜನರಲ್ಲಿ ಸಂಶಯದ ಬೀಜವನ್ನು ಬಿತ್ತದಿರುತ್ತಿದ್ದರೆ, ಫಲಿತಾಂಶ ಏರುಪೇರಾಗುತ್ತಿದ್ದುದರಲ್ಲಿ ಸಂಶಯವಿರಲಿಲ್ಲ. ಮಣಿಶಂಕರ ಅಯ್ಯರ್ ಅವರ ಟೀಕೆ, ಕಾಂಗ್ರಸಿನ ಕೆಲವು ಧುರೀಣರು ದಿಲ್ಲಿಯಲ್ಲಿ ಪಾಕಿಸ್ತಾನದ ಧುರೀಣರೊಂದಿಗೆ ನಡೆಸಿದ ಮಾತುಕತೆ- ಇವು ಸಾರ್ವಜನಿಕ ಮಟ್ಟದಲ್ಲಿ ಅಲಕ್ಷ್ಯಪಡಬೇಕಾದ ಘಟನೆಗಳಾದರೂ ಮೋದಿ ಇದನ್ನು ಬ್ರಹ್ಮಾಂಡವಾಗಿ ಬೆಳೆಸಿದರು. ದೇಶದ ಪ್ರಧಾನಿಯೊಬ್ಬರು ಈ ಮಟ್ಟಕ್ಕಿಳಿದು ಪ್ರಚಾರಮಾಡಬೇಕಿತ್ತೇ ಎಂಬುದು ಪ್ರಶ್ನಾರ್ಹ. ಆದರೆ ಈಗ ತಿರುಗಿ ನೋಡಿದರೆ ಮೋದಿಯವರ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಎಂಬ ಹೋರಾಟವಾಗಿದ್ದುದರಿಂದ ಅವರಿಗೆ ಬೇರೆ ಮರ್ಯಾದಸ್ತ ಆಯ್ಕೆಗಳೇ ಇರಲಿಲ್ಲವೇನೋ? ಈ ಟೀಕೆಗಳನ್ನು ಕಾಂಗ್ರೆಸ್ ತಕ್ಕಮಟ್ಟಿನ ಘನಸ್ತಿಕೆಯಿಂದಲೇ ಎದುರಿಸಿತು.

ಕಾಂಗ್ರೆಸ್ ಸಮಾಜವನ್ನು ಒಡೆದು ಅಧಿಕಾರಕ್ಕೆ ಬರಲು ಪ್ರಯತ್ನಿಸಿದರೆ ತಾನು ವಿಕಾಸದ ಆಧಾರದಲ್ಲಿ ಅಧಿಕಾರವನ್ನು ಬಯಸಿದೆ ಎಂಬ ಬಿಜೆಪಿಯ ಘೋಷಣೆ ಅಪ್ಪಟ ಅಸತ್ಯವೆಂದು ಈ ಚುನಾವಣೆಯು ಗೊತ್ತುಮಾಡಿದೆ. ಗಾಂಧಿಯನ್ನು ಲೇವಡಿ ಮಾಡುವಂತೆ ಸುಳ್ಳಿನ ಯಶಸ್ವಿ ಪ್ರಯೋಗವಾಗಿದೆ. ಬಿಜೆಪಿಯ ಈ ನಡೆಯು ದೇಶದಲ್ಲಿ ಧಾರ್ಮಿಕ ನಂಬಿಕೆಗಳ ಆಧಾರದಲ್ಲಿ ಜನರನ್ನು ವಿಭಜಿಸಿದ್ದು ಮಾತ್ರವಲ್ಲ, ಹಿಂದುತ್ವಧಾರಿಗಳ ಹೊಸ ತಂಡವನ್ನು ಕಟ್ಟಿ ಅವರನ್ನು ಮುಖ್ಯ ವಾಹಿನಿಯಿಂದ ಬೇರ್ಪಡಿಸಿದೆ. ಇದು ಗುಜರಾತ್ ಮಾತ್ರವಲ್ಲ, ದೇಶದ ಎಲ್ಲೆಡೆ ನಡೆದಿದೆ; ನಡೆಯುತ್ತಿದೆ. ಒಂದು ಹಂತದ ವರೆಗೆ ಈ ವಿಭಜನೆಯು ಯಶಸ್ಸನ್ನು ಕಾಣುತ್ತದೆಯಾದರೂ ಇವೆಲ್ಲ ಕೃತಕವೆಂದು ಸಮಾಜಕ್ಕೆ ನಿಧಾನವಾಗಿ ಅರ್ಥವಾಗುತ್ತದೆ. ಆದರೆ ಆಗ ಸಾಕಷ್ಟು ನಷ್ಟವಾಗಿರುತ್ತದೆ. ಎಲ್ಲ ಕಾಲದ ಶಸ್ತ್ರಸಹಿತ ಮತ್ತು ಶಸ್ತ್ರರಹಿತ ಯುದ್ಧಗಳು ಇದನ್ನೇ ಹೇಳಿವೆ. ರಾಜಕೀಯ ಪಕ್ಷಗಳು ಈಗ ಏನು ಮಾಡಬೇಕು ಎಂದು ಹೇಳುವುದು ನನ್ನ ಉದ್ದೇಶವಲ್ಲ. ಆದರೆ ಗುಜರಾತ್‌ನ ಈ ಚುನಾವಣೆಯನ್ನು ಒಂದು ಪ್ರಯೋಗಶಾಲೆಯಾಗಿ ಕಂಡರೆ ಕಾಂಗ್ರೆಸ್‌ನ ಕಿಲುಬು ಇನ್ನೂ ಕಳೆದಿಲ್ಲವೆಂದೂ ಬಿಜೆಪಿಯು ಗುಜರಾತನ್ನು ತನ್ನ ಅಸತ್ಯದ ಪ್ರಯೋಗಶಾಲೆಯಾಗಿ ಕಂಡಿದೆಯೆಂದೂ ಕಾಣುತ್ತದೆ. ರಾಹುಲ್ ಗಾಂಧಿಯ ಅಭಿಮನ್ಯು ಮತ್ತು ಮೋದಿಯ ದ್ರೋಣರ ನಡುವಣ ಈ ಯುದ್ಧಪರ್ವದಲ್ಲಿ ಉಳಿದವರೆಲ್ಲರೂ ವೀಕ್ಷಕರೇ ಆಗಿದ್ದರು. ಅಭಿಮನ್ಯು ಚಕ್ರವ್ಯೆಹದಿಂದ ಪಾರಾದದ್ದು ಮಾತ್ರ ಈ ಚುನಾವಣೆಯ ವೈಶಿಷ್ಟ್ಯ.

ಕುಮಾರವ್ಯಾಸ ಭಾರತದಲ್ಲಿ ಕರ್ಣನ ರಥವನ್ನು ಅರ್ಜುನನು ಒಂದು ಯೋಜನ ಅಂತರಕ್ಕೆ ಹಿನ್ನೂಕಿದ ಆನಂತರ ಅರ್ಜುನನ ರಥವನ್ನು ಕರ್ಣನು ಬಿಲ್ಲಂತರಕ್ಕೆ ನೂಕಿದಾಗ ಕೃಷ್ಣನು ಭೇಷ್ ಎಂದನಂತೆ. ಇದರಿಂದ ವ್ಯಗ್ರನಾದ ಅರ್ಜುನನು ಕಾರಣವನ್ನು ಕೇಳಿದಾಗ ಕೃಷ್ಣನು ‘‘ಬಸುರೊಳಗೆ ಬ್ರಹ್ಮಾಂಡಕೋಟಿಯ ಮುಸುಕಿಕೊಂಡಿಹ ನಾ ಸಹಿತ ಮೇಲೆಸೆವ ಸಿಂಧದ ಹನುಮ ಸಹಿತೀ ದಿವ್ಯಹಯಸಹಿತ ಎಸುಗೆಯಲಿ ತೊಲಗಿಸುವ ಕರ್ಣನ ಅಸಮಸಾಹಸ ಪಿರಿದೊ ಹುಲುರಥದೆಸುಗೆ ನಿನ್ನಗ್ಗಳಿಕೆ ಪಿರಿದೋ ಪಾರ್ಥ ಪೇಳೆಂದ’’ ಎಂದು ಕವಿ ವರ್ಣಿಸುತ್ತಾನೆ. ಜೈಮಿನಿ ಭಾರತದಲ್ಲೂ ಇಂತಹ ಘಟನೆಯಿದೆ: ಸುಧನ್ವನನ್ನು ಮೂರು ಬಾಣಗಳಲ್ಲಿ ಸಂಹರಿಸುವುದಾಗಿ ಅರ್ಜುನನು ಪ್ರತಿಜ್ಞೆ ಮಾಡುತ್ತಾನೆ. ಆ ಮೂರೂ ಬಾಣಗಳನ್ನು ಖಂಡಿಸುವುದಾಗಿ ಸುಧನ್ವನು ಪ್ರತಿಜ್ಞೆ ಮಾಡುತ್ತಾನೆ. ಕೊನೆಗೆ ಅರ್ಜುನನನ್ನು ರಕ್ಷಿಸಿ ಮಾನವುಳಿಸಿಕೊಳ್ಳುವುದಕ್ಕಾಗಿ ಕೃಷ್ಣನು ಆ ಬಾಣಗಳಿಗೆ ತನ್ನೆಲ್ಲ ಪುಣ್ಯಗಳನ್ನು ಧಾರೆಯೆರೆದು ಸುಧನ್ವನು ಖಂಡಿಸಿದ ಕೊನೆಯ ಬಾಣದ ತುಂಡು ಸುಧನ್ವನನ್ನು ಕೊಲ್ಲುವ ಸಂದರ್ಭವನ್ನು ಸೃಷ್ಟಿಸುತ್ತಾನೆ. ಹೀಗೆ ಅತ್ಯಂತ ಪ್ರಯಾಸದಿಂದ ಗೆಲ್ಲುವ ದುರ್ಭರ ಸನ್ನಿವೇಶಗಳಿವೆ. ಇಂತಹ ಗೆಲುವನ್ನೇ ಹೀನಾಯ ಗೆಲುವು ಎಂದು ಹೇಳುವುದು. ಸೋತವನು ಸೋತಿರುವುದಿಲ್ಲ; ಜನಮನದಲ್ಲಿ ಗೆದ್ದಿರುತ್ತಾನೆ. ಗೆದ್ದವನು ಸಿಂಹಾಸನವನ್ನೇರಿದಾಗಲೂ ಅದು ಅಲುಗುವ ಅನುಭವವಾಗುತ್ತದೆ. ಪ್ರಾಯಃ ಬಿಜೆಪಿಗೆ, ಮೋದಿಗೆ ಇದೇ ಅನುಭವವಾಗುತ್ತಿರಬಹುದು. ಗೆದ್ದ ದೊಡ್ಡಸ್ತಿಕೆಯೊಳಗೆ ಈ ಸಣ್ಣನಡುಕವಿರುವುದೇ ರಾಜಕೀಯದ ವಿಸ್ಮಯಗಳಲ್ಲೊಂದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)