varthabharthi

ಸಂಪಾದಕೀಯ

ಈ ಅತ್ಯಾಚಾರಗಳಿಗೆ ಕೊನೆ ಎಂದು?

ವಾರ್ತಾ ಭಾರತಿ : 21 Dec, 2017

ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯಲು ಸರಕಾರ ಹಲವಾರು ಕಾನೂನುಗಳನ್ನು ಮಾಡುತ್ತಲೇ ಇದೆ. ಆದರೆ, ಈ ಕಾನೂನುಗಳಿಂದ ಯಾವ ಪ್ರಯೋಜನವೂ ಆಗಿಲ್ಲ. ಪ್ರತೀ ದಿನವೂ ಮಹಿಳೆಯರ ಅತ್ಯಾಚಾರ ಮತ್ತು ದೌರ್ಜನ್ಯಗಳು ನಡೆಯುತ್ತಲೇ ಇವೆ. ಮಂಗಳವಾರ ವಿಜಯಪುರದಲ್ಲಿ 15 ವರ್ಷದ ದಲಿತ ಬಾಲಕಿ ದಾನಮ್ಮಳನ್ನು ಮೇಲ್ಜಾತಿಯ ಯುವಕರು ಸಾಮೂಹಿಕ ಅತ್ಯಾಚಾರ ಮಾಡಿ ಪೈಶಾಚಿಕವಾಗಿ ಕೊಂದು ಹಾಕಿದ್ದಾರೆ. ಇದನ್ನು ಪ್ರತಿಭಟಿಸಿ ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಈ ಬಾಲಕಿಯ ಹೆತ್ತವರು ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಮಹಿಳೆಯರ ಅತ್ಯಾಚಾರ ಮತ್ತು ಕೊಲೆಗಳು ದೇಶದ ರಾಜಧಾನಿ ಇಲ್ಲವೇ ರಾಜ್ಯದ ರಾಜಧಾನಿಯಲ್ಲಿ ನಡೆದರೆ ಸುದ್ದಿಯಾಗುತ್ತವೆ.

ವಿಜಯಪುರದಂತಹ ಹಿಂದುಳಿದ ಜಿಲ್ಲೆಯಲ್ಲಿ ದಲಿತ ಬಾಲಕಿಯ ಅತ್ಯಾಚಾರ ನಡೆದರೆ ಅದು ಮಾಧ್ಯಮಗಳಲ್ಲಿ ವರದಿಯಾಗುವುದಿಲ್ಲ. ಟಿಆರ್‌ಪಿಗಾಗಿ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವ ಟಿವಿ ಮಾಧ್ಯಮಗಳೂ ದಲಿತ ಬಾಲಕಿಯ ಕಗ್ಗೊಲೆಯ ಬಗ್ಗೆ ನ್ಯಾಯಸಮ್ಮತ ವರದಿ ಮಾಡಲಿಲ್ಲ. ಇನ್ನು ನಕಲಿ ಹಿಂದುತ್ವವಾದಿಗಳು ಈ ಅತ್ಯಾಚಾರದ ಬಗ್ಗೆ ಈ ವರೆಗೆ ಬಾಯಿ ಬಿಟ್ಟಿಲ್ಲ. ಎಲ್ಲೋ ಒಂದು ಕಡೆ ಆಕಸ್ಮಿಕ ಸಾವು ಸಂಭವಿಸಿದರೆ ಇಂತಹವರೇ ಕೊಂದಿದ್ದಾರೆಂದು ಕರಾರುವಾಕ್ಕಾಗಿ ಹೇಳಿ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಈ ಸ್ವಯಂ ಘೋಷಿತ ಧರ್ಮ ರಕ್ಷಕರು ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಯಾವುದೇ ಪ್ರಕರಣದಲ್ಲಿ ಹಲ್ಲೆಗೊಳಗಾಗಿದ್ದವರು ಹಿಂದೂಗಳು ಆಗಿದ್ದರೆ ಹಲ್ಲೆ ಮಾಡಿದವರು ಮುಸ್ಲಿಮರು ಆಗಿದ್ದರೆ ಮಾತ್ರ ಇವರ ಧರ್ಮ ಪ್ರಜ್ಞೆ ಜಾಗೃತವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಧರ್ಮ ರಕ್ಷಣೆ ತಲವಾರು ಹಿಡಿಯಬೇಕೆಂದು ಕೆಲವರು ಕರೆ ಕೊಡುತ್ತಾರೆ.

ಇತ್ತೀಚೆಗೆ ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಸಮಾವೇಶದಲ್ಲಿ ಮಾತನಾಡಿದ ಸಂಘಪರಿವಾರದ ನಾಯಕರು ಹಿಂದೂಗಳು ತಮ್ಮ ರಕ್ಷಣೆಗೆ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬೇಕೆಂದು ಕರೆ ನೀಡಿದ್ದರು. ಆದರೆ, ಈಗ ವಿಜಯಪುರದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ನಡೆದಿದೆ. ದಲಿತರು ಕೂಡಾ ತಮ್ಮ ಸ್ವಯಂ ರಕ್ಷಣೆಗೆ ತಲವಾರುಗಳನ್ನು, ಬಂದೂಕುಗಳನ್ನು ಇಟ್ಟುಕೊಂಡರೆ ತಪ್ಪೇನು? ಈ ಪ್ರಶ್ನೆಗೆ ಇವರು ಏನು ಉತ್ತರ ಹೇಳುತ್ತಾರೆ. ನಿಜ, ದಲಿತರನ್ನು ಇವರು ಹಿಂದೂಗಳೆಂದು ಎಂದೂ ಪರಿಗಣಿಸಿಲ್ಲ. ಇವರ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ದಲಿತರಿಗೆ ಶೂದ್ರರಿಗಿಂತ ಕಟ್ಟಕಡೆಯ ಸ್ಥಾನವಿದೆ. ಆದರೂ ಬ್ರಾಹ್ಮಣ್ಯದ ರಕ್ಷಣೆಗಾಗಿ ಈ ಅಮಾಯಕ ದಲಿತ ಹುಡುಗರನ್ನು ಇವರು ಬಳಸಿಕೊಳ್ಳುತ್ತಾರೆ. ಅವರಲ್ಲಿ ಧರ್ಮದ ಉನ್ಮಾದ ಕೆರಳಿಸಿ ಅಲ್ಪಸಂಖ್ಯಾತರ ಮೇಲೆ ದಾಳಿಗೆ ಛೂಬಿಡುತ್ತಾರೆ. ಇತ್ತೀಚೆಗೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲೂ ಜೈಲಿಗೆ ಹೋದವರು ತಳಸಮುದಾಯದ ಹುಡುಗರು. ಆದರೆ, ಒಬ್ಬನೇ ಒಬ್ಬ ಹವ್ಯಕ ಬ್ರಾಹ್ಮಣ ಈ ಪ್ರಕರಣದಲ್ಲಿ ಜೈಲಿಗೆ ಹೋಗಿಲ್ಲ, ಕೇಸು ಹಾಕಿಸಿಕೊಂಡಿಲ್ಲ. ಆಕಸ್ಮಾತ್ ಬಂಧನಕ್ಕೆ ಒಳಗಾಗಿದ್ದರೂ ಬಿಡುಗಡೆಯಾಗಿ ಬಂದಿದ್ದಾರೆ. ಆದರೆ, ತಳಸಮುದಾಯದ ಯುವತಿಯ ಅತ್ಯಾಚಾರ ನಡೆದರೆ ಅದನ್ನು ಖಂಡಿಸುವ ಕನಿಷ್ಠ ಮಾನವೀಯತೆಯನ್ನೂ ಇವರು ತೋರಿಸುವುದಿಲ್ಲ. ರಾಜ್ಯದಲ್ಲಿ ಅಧಿಕೃತ ಪ್ರತಿಪಕ್ಷವಾದ ಬಿಜೆಪಿ ಈ ವರೆಗೆ ಈ ಘಟನೆಯನ್ನು ಖಂಡಿಸಿ ಒಂದೇ ಒಂದು ಹೇಳಿಕೆಯನ್ನು ನೀಡಿಲ್ಲ. ರಾಜ್ಯ ಸರಕಾರವು ಕೂಡಾ ತುಂಬಾ ತಡವಾಗಿ ಸ್ಪಂದಿಸಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ವರದಿಯ ಪ್ರಕಾರ ಮಹಿಳೆಯರ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ಪ್ರತೀ 16 ನಿಮಿಷಕ್ಕೆ ಒಬ್ಬ ದಲಿತನ ಹಲ್ಲೆ ನಡೆಯುತ್ತಿದೆ. ಪ್ರತೀ ದಿನ ನಾಲ್ವರು ದಲಿತ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಆದಿವಾಸಿ ಮಹಿಳೆಯರನ್ನು ಸೇರಿಸಿದರೆ ಈ ಸಂಖ್ಯೆ 6ರಿಂದ 8ಕ್ಕೆ ಹೆಚ್ಚುತ್ತದೆ. ಅಧಿಕೃತ ಅಂಕಿಅಂಶಗಳ ಪ್ರಕಾರ 2016ರಲ್ಲಿ ಮಹಿಳೆಯರ ದೌರ್ಜನ್ಯ ನಡೆದ 4 ಲಕ್ಷ ಪ್ರಕರಣಗಳು ದಾಖಲಾಗಿವೆ. ಹಿಂದಿನ ವರ್ಷಕ್ಕಿಂತ(2015) ಶೇ.2.90ರಷ್ಟು ಪ್ರಕರಣಗಳು ಹೆಚ್ಚಾಗಿವೆ. ಇದರಲ್ಲಿ ಶೇ.32ರಷ್ಟು ಕೌಟುಂಬಿಕ ದೌರ್ಜನ್ಯದ ಪ್ರಕರಣ, ಶೇ.25ರಷ್ಟು ಲೈಂಗಿಕ ಕಿರುಕುಳದ ಪ್ರಕರಣ, ಶೇ.11.5ರಷ್ಟು ಅತ್ಯಾಚಾರದ ಪ್ರಕರಣಗಳಾಗಿವೆ. ಇದು ಅಧಿಕೃತವಾಗಿ ದಾಖಲಾದ ಪ್ರಕರಣಗಳ ಅಂಕಿಅಂಶಗಳು ಮಾತ್ರ. ಆದರೆ, ಬೆಳಕಿಗೆ ಬಾರದ ಪ್ರಕರಣಗಳು ಇದಕ್ಕಿಂತ ಎರಡು ಪಟ್ಟು ಹೆಚ್ಚಾಗಿವೆ. ಮಕ್ಕಳ ದೌರ್ಜನ್ಯದ ಪ್ರಕರಣಗಳೂ ಹೆಚ್ಚಾಗುತ್ತಲೇ ಇವೆ. ಕಳೆದ ವರ್ಷ 1 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದು 2015ನೇ ವರ್ಷಕ್ಕಿಂತ ಶೇ.13ರಷ್ಟು ಹೆಚ್ಚಾಗಿದೆ.

ಮಹಿಳೆಯರ ದೌರ್ಜನ್ಯಗಳ ತಡೆಗಾಗಿ ಮೂಲಸೌಕರ್ಯ ಮತ್ತು ವ್ಯವಸ್ಥೆಯನ್ನು ರೂಪಿಸಲು 2015ರಲ್ಲಿ ನಿರ್ಭಯಾ ನಿಧಿಯನ್ನು ಸ್ಥಾಪಿಸಲಾಗಿದೆ. ಈ ನಿಧಿಗೆ 3,100 ಕೋಟಿ ರೂ. ತೆಗೆದಿರಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯು ಈ ನಿಧಿಯ ಉಸ್ತುವಾರಿ ಸಂಸ್ಥೆಯಾಗಿದೆ. ಇದಕ್ಕಾಗಿ ಯೋಜನೆ ರೂಪಿಸಲು 2,209 ಕೋಟಿ ರೂ. ನಿಗದಿಪಡಿಸಲಾಗಿದೆ. ಆದರೆ, ಸರಕಾರ ಇದಕ್ಕೆ ಬಿಡುಗಡೆ ಮಾಡಿರುವುದು 264 ಕೋಟಿ ರೂ. ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ ದಿಲ್ಲಿಯಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆಯಿತು. ಆ ಪ್ರಕರಣ ಇಡೀ ದೇಶದಲ್ಲಿ ಮಾತ್ರವಲ್ಲ ಜಗತ್ತಿನ ಗಮನ ಸೆಳೆಯಿತು. ಸರಕಾರ ಅದನ್ನು ಗಂಭೀರವಾಗಿ ಪರಿಗಣಿಸಿ ಅಪರಾಧಿಗಳನ್ನು ದಂಡಿಸಲು ಪ್ರತ್ಯೇಕ ಕಾನೂನನ್ನೇ ರೂಪಿಸಿತು. ಆದರೂ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದು ಸರಕಾರದ ನಿರ್ಲಕ್ಷವನ್ನು ಎತ್ತಿ ತೋರಿಸುತ್ತದೆ.

ಮಹಿಳೆಯರ ಮೇಲೆ ನಡೆಯುವ ಅಪರಾಧಗಳನ್ನು ಎದುರಿಸುವಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಸರಕಾರ ಮತ್ತು ಕಾನೂನು ಜಾರಿ ಮಾಡುವ ಸಂಸ್ಥೆಗಳು ಮಹಿಳೆಯರ ಮತ್ತು ಮಕ್ಕಳ ವಿರುದ್ಧದ ಅಪರಾಧಗಳನ್ನು ಎದುರಿಸಲು ಆದ್ಯತೆ ನೀಡಬೇಕು. ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಸಂತ್ರಸ್ತ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲಲು ವರ್ಮಾ ಸಮಿತಿ ನೀಡಿರುವ ಶಿಫಾರಸುಗಳನ್ನು ಕೇಂದ್ರ ಸರಕಾರ ಕೂಡಲೇ ಜಾರಿಗೆ ತರಬೇಕು. ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್, ವೈಯಕ್ತಿಕವಾಗಿ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಹಾಗೂ ರಾಜ್ಯ ಸರಕಾರದಿಂದ 8 ಲಕ್ಷ ರೂ. ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಆದರೆ, ಬರೀ ಪರಿಹಾರ ಘೋಷಣೆಯಿಂದ ಮಗಳನ್ನು ಕಳೆದುಕೊಂಡವರ ಕುಟುಂಬಕ್ಕೆ ನ್ಯಾಯ ಸಿಗುವುದಿಲ್ಲ. ಕಳೆದುಕೊಂಡ ಮಗಳನ್ನು ತಂದುಕೊಡಲು ಸಾಧ್ಯವೂ ಆಗುವುದಿಲ್ಲ. ಆದರೆ, ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಸರಕಾರ ಎಚ್ಚರ ವಹಿಸಬೇಕು. ಅತ್ಯಾಚಾರದ ಆರೋಪಕ್ಕೆ ಗುರಿಯಾದವರನ್ನು ಈಗಾಗಲೇ ಬಂಧಿಸಲಾಗಿದೆ. ಅವರು ಕಾನೂನಿನ ಬಲೆಯಿಂದ ತಪ್ಪಿಸಿಕೊಂಡು ಹೋಗದಂತೆ ಸರಕಾರ ನೋಡಿಕೊಳ್ಳಬೇಕು. ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ರೂಪಿಸಲಾದ ವಿಶೇಷ ಕಾನೂನನ್ನು ಈ ಪ್ರಕರಣಕ್ಕೂ ಅನ್ವಯಿಸಿ ಪಾತಕಿಗಳನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)