varthabharthi

ಆರೋಗ್ಯ

ಯಕೃತ್ತಿನ ರೋಗಗಳನ್ನು ಸೂಚಿಸುವ ಲಕ್ಷಣಗಳು ಗೊತ್ತೇ....?

ವಾರ್ತಾ ಭಾರತಿ : 21 Dec, 2017

ಯಕೃತ್ತು ನಮ್ಮ ಶರೀರದ ಪ್ರಮುಖ ಅಂಗವಾಗಿದೆ. ಜೀರ್ಣಾಂಗದಿಂದ ಬರುವ ರಕ್ತವು ದೇಹದ ಇತರ ಭಾಗಗಳಿಗೆ ಸಾಗುವ ಮುನ್ನ ಅದನ್ನು ಶುದ್ಧೀಕರಿಸುವುದು ಯಕೃತ್ತಿನ ಮುಖ್ಯ ಕಾರ್ಯಗಳಲ್ಲೊಂದಾಗಿದೆ. ರಕ್ತವು ಹೆಪ್ಪುಗಟ್ಟಲು ಮತ್ತು ವಿವಿಧ ಶಾರೀರಿಕ ಚಟುವಟಿಕೆಗಳಿಗೆ ಅಗತ್ಯವಾಗಿರುವ ಪ್ರೋಟಿನ್‌ಗಳನ್ನೂ ಅದು ಉತ್ಪಾದಿಸುತ್ತದೆ. ಸುಮಾರು ಮೂರು ಪೌಂಡ್ ಅಥವಾ 1.3 ಕೆ.ಜಿ.ಗಳಷ್ಟು ತೂಕ ಹೊಂದಿರುವ ಯಕೃತ್ತು ನಮ್ಮ ಹೊಟ್ಟೆಯ ಬಲಭಾಗದಲ್ಲಿರುತ್ತದೆ.

 ಪ್ರಮುಖ ಅಂಗವಾಗಿರುವ ಯಕೃತ್ತಿನ ಆರೋಗ್ಯದ ಬಗ್ಗೆ ನಿಗಾಯಿರಿಸುವುದು ಅಗತ್ಯವಾಗಿದೆ. ಯಕೃತ್ತಿಗೆ ಸಂಬಂಧಿಸಿದ ಹೆಪಟೈಟಿಸ್, ಸಿರೋಸಿಸ್ ಮತ್ತು ಕ್ಯಾನ್ಸರ್ ನಂತಹ ರೋಗಗಳು ಮಾರಣಾಂತಿಕವಾಗಬಲ್ಲವು. ಯಾವುದೇ ಕಾಯಿಲೆಯನ್ನು ಮೊದಲೇ ಪತ್ತೆ ಹಚ್ಚುವುದು ಅದರಿಂದ ಪಾರಾಗಲು ಅತ್ಯುತ್ತಮ ಮಾರ್ಗವಾಗಿದೆ.

ಯಕೃತ್ತಿನ ಕಾಯಿಲೆಗಳ ಪ್ರಮುಖ ಲಕ್ಷಣಗಳ ಕುರಿತು ಮಾಹಿತಿಯಿಲ್ಲಿದೆ...

ಊದಿಕೊಂಡ ಹೊಟ್ಟೆ

 ಊದಿಕೊಂಡ ಹೊಟ್ಟೆಯು ಎಸಿಟಿಸ್ ಎಂಬ ಸ್ಥಿತಿಯನ್ನು ಸೂಚಿಸುತ್ತದೆ. ಈ ಸ್ಥಿತಿಯಲ್ಲಿ ಪ್ರೋಟಿನ್ ಮತ್ತು ಇತರ ಸಂಯುಕ್ತಗಳನ್ನು ಸಮತೋಲನಗೊಳಿಸಲು ಯಕೃತ್ತಿಗೆ ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ ಅಂಗಾಂಶಗಳಲ್ಲಿ ಸ್ರಾವಗಳು ತುಂಬಿಕೊಳ್ಳುತ್ತವೆ. ಹೊಟ್ಟೆ ಊದಿಕೊಳ್ಳುವುದು ಎಸಿಟಿಸ್‌ನ ಪ್ರಮುಖ ಲಕ್ಷಣವಾಗಿದೆ. ಅದು ಸಿರೋಸಿಸ್‌ನ್ನೂ ಸೂಚಿಸಬಹುದು. ಕೆಲವೊಮ್ಮೆ ಈ ಊದುವಿಕೆ ಕೈಗಳಲ್ಲಿ ಮತ್ತು ಕಣಕಾಲುಗಳಲ್ಲಿಯೂ ಕಾಣಿಸಿಕೊಳ್ಳಬಹುದು.

ತರಚಿದಂತಹ ಗಾಯಗಳು

ಯಕೃತ್ತು ರಕ್ತ ಹೆಪ್ಪುಗಟ್ಟಲು ಅಗತ್ಯವಾಗಿರುವ ಪ್ರೋಟಿನ್‌ಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದರಿಂದ ಅದರ ಸ್ಥಿತಿ ಹದಗೆಟ್ಟಾಗ ಶರೀರದಲ್ಲಿ ಆಗಾಗ್ಗೆ ತರಚಿದಂತಹ ಗಾಯಗಳು ಮತ್ತು ರಕ್ತಸ್ರಾವ ಕಂಡು ಬರಬಹುದು. ಇದು ಇತರ ಕಾಯಿಲೆಗಳನ್ನೂ ಸೂಚಿಸಬಹುದಾದ್ದರಿಂದ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ದಣಿವು ಮತ್ತು ನಿಶ್ಶಕ್ತಿ

ಇಂದಿನ ಬಿಡುವಿಲ್ಲದ ಜೀವನಶೈಲಿಯಿಂದಾಗಿ ದಣಿವು ಮತ್ತು ನಿಶ್ಶಕ್ತಿ ಕಾಣಿಸಿಕೊಳ್ಳು ವದು ಸಾಮಾನ್ಯವಾಗಿದೆ. ಆದರೆ ತೀವ್ರ ದಣಿವು ಮತ್ತು ಕೆಲಸ ಮಾಡಲು ಸಾಧ್ಯವಾಗದಿದ್ದರೆ ಅದು ನಿಮ್ಮಿಳಗೇ ಬೆಳೆಯುತ್ತಿರುವ ಯಕೃತ್ತಿನ ರೋಗವನ್ನು ಸೂಚಿಸಬಹುದು. ಯಕೃತ್ತು ತನ್ನ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸದೆ ಕಡಿಮೆ ಆಮ್ಲಜನಕ ಮಟ್ಟ ಮತ್ತು ತ್ಯಾಜ್ಯ ಶೇಖರಣೆ ಇದಕ್ಕೆ ಕಾರಣವಾಗಿರುತ್ತದೆ.

ಹಸಿವು ಕಡಿಮೆಯಾಗುವಿಕೆ

ಹಸಿವು ಕಡಿಮೆಯಾಗುವಿಕೆ ಮತ್ತು ವಾಕರಿಕೆ ಯಕೃತ್ತಿನ ರೋಗವನ್ನು ಮೊದಲೇ ಸೂಚಿಸುವ ಸಂಕೇತಗಳಾಗಿವೆ. ಹೆಪಟೈಟಿಸ್ ಪ್ರಕರಣದಲ್ಲಿ ಅಜೀರ್ಣ ಸೇರಿದಂತೆ ಫ್ಲೂದಂತಹ ಲಕ್ಷಣಗಳು ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಕಾಯಿಲೆಯ ನಂತರದ ಹಂತಗಳಲ್ಲಿ ಶರೀರದ ಕೆಲವು ಭಾಗಗಳಲ್ಲಿ ನೋವು ಮತ್ತು ನೋಟದಲ್ಲಿ ಬದಲಾವಣೆಗಳಂತಹ ಇನ್ನಷ್ಟು ಸ್ಪಷ್ಟ ಲಕ್ಷಣಗಳು ಕಂಡು ಬರಬಹುದು.

ಕಾಮಾಲೆ

ನಂಜು ಉಂಟಾಗುವುದನ್ನು ತಡೆಯುವುದು ಮತ್ತು ಶರೀರವನ್ನು ನಂಜುಗಳಿಂದ ಮುಕ್ತಗೊಳಿಸುವುದು ಯಕೃತ್ತಿನ ಮುಖ್ಯ ಕಾರ್ಯವಾಗಿದೆ. ಯಕೃತ್ತು ಈ ಕಾರ್ಯವನ್ನು ನಿಲ್ಲಿಸಿದಾಗ ತ್ಯಾಜ್ಯವು ಶರೀರದಿಂದ ಹೊರಗೆ ಹೋಗುವುದಿಲ್ಲ. ಬಿಲಿರುಬಿನ್ ಎಂಬ ವರ್ಣದ್ರವ್ಯವು ರಕ್ತದಲ್ಲಿ ಸೇರಿಕೊಂಡು ಚರ್ಮ ಮತ್ತು ಕಣ್ಣುಗಳನ್ನು ಹಳದಿಯಾಗಿಸುತ್ತದೆ.

ಹೊಟ್ಟೆನೋವು

ಸಿರೋಸಿಸ್ ರೋಗವಿದ್ದಾಗ ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಈ ನೋವು ಮೇಲ್ಭಾಗದ ಬಲಗಡೆಯಿಂದ ಅಥವಾ ಪಕ್ಕೆಲಬುಗಳ ಬುಡದಿಂದ ಆರಂಭಗೊಳ್ಳುತ್ತದೆ. ಇಂತಹ ನೋವು ಹೆಚ್ಚು ಸಮಯ ಉಳಿದುಕೊಂಡರೆ ತಕ್ಷಣ ವೈದ್ಯಕೀಯ ತಪಾಸಣೆ ಅಗತ್ಯವಾಗುತ್ತದೆ.

ವ್ಯಕ್ತಿತ್ವದಲ್ಲಿ ಬದಲಾವಣೆಗಳು

 ನಂಜನ್ನು ಶರೀರದಿಂದ ಹೊರಗೆ ಹಾಕಲು ಯಕೃತ್ತಿಗೆ ಸಾಧ್ಯವಾಗದಿದ್ದಾಗ ಅವು ರಕ್ತದೊಡನೆ ಸೇರಿಕೊಳ್ಳುತ್ತವೆ ಮತ್ತು ಅದರಲ್ಲಿ ಸಂಗ್ರಹಗೊಳ್ಳುತ್ತವೆ. ಇಂತಹ ರಕ್ತವು ಮಿದುಳಿನತ್ತ ಸಾಗಿದಾಗ ವ್ಯಕ್ತಿತ್ವದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ.ಮಲಗುವ ಅಭ್ಯಾಸ, ಸ್ಪಂದನವಿಲ್ಲದಿರುವಿಕೆ ಮತ್ತು ಮರೆಗುಳಿತನಗಳು ಕಂಡುಬರಬಹುದು.

ಮೂತ್ರ ಮತ್ತು ಮಲದಲ್ಲಿ ಬದಲಾವಣೆ

ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಸಂಬಂಧಿಸಿದ ಯಾವುದೇ ಕಾಯಿಲೆಗಳನ್ನು ಮಲ ಮತ್ತು ಮೂತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದರಿಂದ ಪತ್ತೆ ಹಚ್ಚಬಹುದು. ವ್ಯಕ್ತಿಯು ಸಾಕಷ್ಟು ನೀರು ಕುಡಿಯುತ್ತಿದ್ದರೂ ಮೂತ್ರವು ಗಾಢಬಣ್ಣದ್ದಾಗಿದ್ದರೆ ಅದು ಕಾಮಾಲೆ ಅಥವಾ ಸಿರೋಸಿಸ್‌ನ್ನು ಸೂಚಿಸಬಹುದು. ಯಕೃತ್ತಿನ ರೋಗಗಳಿದ್ದಾಗ ಮಲದ ಬಣ್ಣವು ಪೇಲವವಾಗಿರುತ್ತದೆ.

ನಿರಂತರ ವಾಂತಿ

ವಾಕರಿಕೆ ಯಕೃತ್ತಿಗೆ ಹಾನಿಯಾಗಿದೆ ಎನ್ನುವುದನ್ನು ಸೂಚಿಸುವ ಮೊದಲ ಸಂಕೇತ ವಾಗಿದೆ. ಆದರೆ ರೋಗವು ಹೆಚ್ಚುತ್ತಿದ್ದಂತೆ ಲಕ್ಷಣಗಳು ಹೆಚ್ಚು ಸ್ಪಷ್ಟವಾಗತೊಡಗುತ್ತವೆ. ನಂಜುಗಳನ್ನು ನಿವಾರಿಸುವ ತನ್ನ ಸಾಮರ್ಥ್ಯವನ್ನು ಯಕೃತ್ತು ಕಳೆದುಕೊಳ್ಳುತ್ತದೆ ಮತ್ತು ಜೀಣಾಂಗ ಸಮಸ್ಯೆಗಳು ಹೆಚ್ಚುತ್ತವೆ. ಶರೀರದಲ್ಲಿ ನಂಜು ಶೇಖರಗೊಳ್ಳುವುದು ವಾಕರಿಕೆ ಮತ್ತು ವಾಂತಿಗೆ ಕಾರಣವಾಗುತ್ತದೆ.

ಚರ್ಮದಲ್ಲಿ ತುರಿಕೆ

ಚರ್ಮದಲ್ಲಿ ತೀವ್ರ ತುರಿಕೆಯುಂಟಾಗುವುದು ಯಕೃತ್ತಿನ ರೋಗದ ಜೊತೆಗೆ ಮೂತ್ರಪಿಂಡಗಳಿಗೆ ಆಗಿರುವ ಹಾನಿಯನ್ನು ಅಥವಾ ಕೆಲವು ಮಾರಣಾಂತಿಕ ಕ್ಯಾನ್ಸರ್ ಗಳನ್ನೂ ಸೂಚಿಸಬಹುದು. ಶರೀರದಲ್ಲಿ ತ್ಯಾಜ್ಯಗಳು ಶೇಖರಗೊಳ್ಳುವುದು ಈ ತುರಿಕೆಗೆ ಕಾರಣವಾಗುತ್ತದೆ ಮತ್ತು ಶರೀರದ ಕೆಲವು ಭಾಗಗಳಲ್ಲಿ ದದ್ದುಗಳು ಕಾಣಿಸಿಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)