varthabharthi

ಸಿನಿಮಾ

'ಹಿಚ್‌ಕಿ'ಯೊಂದಿಗೆ ಬಾಲಿವುಡ್‌ಗೆ ಹಿಂದಿರುಗುತ್ತಿರುವ ರಾಣಿ ಮುಖರ್ಜಿ

ವಾರ್ತಾ ಭಾರತಿ : 22 Dec, 2017

2014ರಲ್ಲಿ ಬಿಡುಗಡೆಯಾದ ‘ಮರ್ದಾನಿ’ ಚಿತ್ರದ ಬಳಿಕ, ಮೂರು ವರ್ಷ ಬೆಳ್ಳಿತೆರೆಯಿಂದ ದೂರಸರಿದಿದ್ದ ರಾಣಿಮುಖರ್ಜಿ ‘ಹಿಚ್‌ಕಿ’ ಮೂಲಕ ಮತ್ತೆ ವಾಪಸಾಗುತ್ತಿದ್ದಾರೆ. ಸಿದ್ದಾಶರ್ಥ ಪಿ. ಮಲ್ಹೋತ್ರಾ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಮನೀಶ್ ಶರ್ಮಾ ನಿರ್ಮಾಪಕರು.

ತಾಯ್ತನದ ಕಾರಣದಿಂದಾಗಿ ಅಭಿನಯಕ್ಕೆ ವಿರಾಮ ಹೇಳಿದ್ದ ರಾಣಿಯ ಕಂಬ್ಯಾಕ್ ಚಿತ್ರವಾದ ಹಿಚ್‌ಕಿ ಬಗ್ಗೆ ಬಾಲಿವುಡ್ ಭಾರೀ ನಿರೀಕ್ಷೆಯಿಟ್ಟುಕೊಂಡಿದೆ. ಈ ಚಿತ್ರದಲ್ಲಿ ರಾಣಿ, ಪೋಲಿ ವಿದ್ಯಾರ್ಥಿಗಳಿಗೆ ಬದುಕಿನ ದಾರಿಯನ್ನು ಕಲಿಸುವ ಶಿಕ್ಷಕಿಯಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ನಾಯಕಿ ಪ್ರಧಾನವಾದ ಈ ಚಿತ್ರದಲ್ಲಿ, ಸಮಾಜದ ದುರ್ಬಲ ವರ್ಗಗಳ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆಯಂತೆ. ಕಳೆದ ವಾರ ಬಿಡುಗಡೆಯಾದ ಚಿತ್ರದ ಟ್ರೇಲರ್‌ನಲ್ಲಿ ಶಿಕ್ಷಕಿಯ ಪಾತ್ರದಲ್ಲಿ ರಾಣಿ ಮುಖರ್ಜಿಯನ್ನು, ಕಿಡಿಗೇಡಿ ವಿದ್ಯಾರ್ಥಿಗಳ ಗುಂಪೊಂದು ಬೆದರಿ ಸುವ ದೃಶ್ಯವನ್ನು ತೋರಿಸಲಾಗಿದೆ.

‘ಹಿಚ್‌ಕಿ’ ಎಂದರೆ ಹಿಂದಿಯಲ್ಲಿ ಬಿಕ್ಕಳಿಕೆ ಎಂಬರ್ಥವಿದೆ. ಚಿತ್ರದಲ್ಲಿ ರಾಣಿ ಮುಖರ್ಜಿ ಬಿಕ್ಕಳಿಕೆಯ ತೊಂದರೆಯಿರುವ ಶಿಕ್ಷಕಿಯಾಗಿ, ಇದಕ್ಕಾಗಿ ಆಕೆ ಸಹೋದ್ಯೋಗಿಗಳು, ವಿದ್ಯಾರ್ಥಿಗಳಿಂದ ಪರಿಹಾಸ್ಯಕ್ಕೊಳಗಾಗುತ್ತಿರುತ್ತಾಳೆ. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಆಕೆ, ತನ್ನ ಬದುಕನ್ನೊಂದು ಸವಾಲಾಗಿ ಸ್ವೀಕರಿಸುತ್ತಾಳೆ. ಜೊತೆಗೆ ತನ್ನ ವಿದ್ಯಾರ್ಥಿಗಳು ಸರಿಯಾದ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುತ್ತಾಳೆ.

ಅಂದಹಾಗೆ ‘ಹಿಚ್‌ಕಿ’ ರಾಣಿಯ ಹೋಂ ಬ್ಯಾನರ್ ಯಶ್‌ರಾಜ್ ಫಿಲ್ಮ್ಸ್‌ಮೂಲಕ ಬಿಡುಗಡೆಯಾಗುತ್ತಿದೆ. ಸದಾ ವೈವಿಧ್ಯಮಯ ಚಿತ್ರಗಳನ್ನು ನೀಡುವ ಯಶ್‌ರಾಜ್ ಫಿಲ್ಮ್ಸ್ ಹಿಚ್‌ಕಿಯನ್ನು ವಿತರಿಸುತ್ತಿರುವುದರಿಂದ, ಆ ಚಿತ್ರದಲ್ಲಿ ಏನಾದರೂ ವಿಶಿಷ್ಟತೆ ಯಿರುವುದಂತೂ ಖಂಡಿತ. ಹೀಗಾಗಿ ರಾಣಿ, ಇನ್ನೊಂದು ಪವರ್‌ಫುಲ್ ಅಭಿನಯದೊಂದಿಗೆ ಬಾಲಿವುಡ್‌ಗೆ ಮರಳುವುದನ್ನು ನಿರೀಕ್ಷಿಸಬಹುದಾಗಿದೆ. ರಾಣಿ ಮುಖರ್ಜಿಗೆ ‘ಹಿಚ್‌ಕಿ’ ಚಿತ್ರದ ಯಶಸ್ಸು ಅತ್ಯಂತ ಅಗತ್ಯವಾಗಿದೆ. ಯಾಕೆಂದರೆ ಈ ಚಿತ್ರದ ಗೆಲುವು ಆಕೆಯ ಸಿನೆಮಾ ಬದುಕನ್ನು ನಿರ್ಧರಿಸಲಿದೆ. ಎಲ್ಲವೂ ಸರಿಹೋದಲ್ಲಿ ‘ಹಿಚ್’ಕಿ ಮುಂದಿನ ವರ್ಷದ ಫೆಬ್ರವರಿ 23ರಂದು ಬಿಡುಗಡೆಗೊಳ್ಳಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)