varthabharthi

ಸಿನಿಮಾ

ಮೂಕಿ ಚಿತ್ರದಲ್ಲಿ ಐಂದ್ರಿತಾ ರೇ

ವಾರ್ತಾ ಭಾರತಿ : 22 Dec, 2017

ಇಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ರಸವತ್ತಾದ ಸಂಭಾಷಣೆಗಳಿಲ್ಲದ ಹಾಗೂ ಹಾಡುಗಳಿಲ್ಲದ ಕಮರ್ಶಿಯಲ್ ಚಿತ್ರವನ್ನು ಊಹಿಸುವುದು ಕೂಡಾ ಕಷ್ಟ. ಇಂತಹದ್ದರಲ್ಲಿ ನವನಿರ್ದೇಶಕರೊಬ್ಬರು ಮೂಕಿ ಚಿತ್ರವನ್ನು ನಿರ್ಮಿಸುವುದಾಗಿ ಘೋಷಿಸಿರುವುದು ಅಚ್ಚರಿಪಡುವಂತಹದ್ದೇ ಆಗಿದೆ.

ನವನಿರ್ದೇಶಕ ಶ್ರೀಹರಿ, ಮೂಕಿ ಚಿತ್ರ ನಿರ್ಮಿಸುವ ಸಾಹಸಕ್ಕೆ ಕೈಹಾಕಿರುವುದು ಸ್ಯಾಂಡಲ್‌ವುಡ್‌ನಲ್ಲಿ ವ್ಯಾಪಕ ಕುತೂಹಲ ಸೃಷ್ಟಿಸಿದೆ. ಈ ವಿಶಿಷ್ಟ ಚಿತ್ರದ ಸ್ಕ್ರಿಪ್ಟ್ ಈಗಾಗಲೇ ರೆಡಿಯಾಗಿರುವುದಾಗಿ ಶ್ರೀಹರಿ ತಿಳಿಸಿದ್ದಾರೆ. ಚಿತ್ರದಲ್ಲಿ ಪಾತ್ರಗಳು ವೌನದ ಮೂಲಕವೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲಿವೆಯಂತೆ. ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್ ಮುಂದಿನ ವರ್ಷದ ಜನವರಿಯಲ್ಲಿ ಆರಂಭಗೊಳ್ಳಲಿದೆ. ಅಂದಹಾಗೆ ಐಂದ್ರಿತಾ ರೇ ಈ ‘ಸೈಲೆಂಟ್’ ಚಿತ್ರದ ನಾಯಕಿ.

ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಐಂದ್ರಿತಾ ಕಾಣಿಸಿಕೊಳ್ಳುತ್ತಿಲ್ಲ. ಹಾಗೆಂದು ಆಕೆಗೆ ಅವಕಾಶಗಳ ಕೊರತೆಯಿದೆಯೆಂದು ಅರ್ಥವಲ್ಲ. ಉತ್ತಮ ಪಾತ್ರಗಳಿರುವ ಚಿತ್ರಕ್ಕಾಗಿ ಆಕೆ ಎದುರು ನೋಡುತ್ತಿದ್ದರು. ಇದೀಗ ಶ್ರೀಹರಿ ನಿರ್ದೇಶನದ ಮೂಕಿ ಚಿತ್ರದ ಮೂಲಕ ಆಕೆಗೆ ಅಂತಹದ್ದೊಂದು ಅವಕಾಶ ಕೂಡಿಬಂದಿದೆಯಂತೆ.

ಜಾಹೀರಾತು ಹಾಗೂ ಮಾಧ್ಯಮರಂಗದಲ್ಲಿ 14 ವರ್ಷಗಳಿಂದ ಕೆಲಸ ಮಾಡಿರುವ ಶ್ರೀಹರಿ ತನ್ನ ಈ ಚೊಚ್ಚಲ ಚಿತ್ರದಲ್ಲಿ ಬಾಲಿವುಡ್ ಹಾಗೂ ಕಾಲಿವುಡ್‌ನ ಖ್ಯಾತ ತಾರೆಯರು ನಟಿಸುವ ಸಾಧ್ಯತೆಯಿದೆಯೆಂಬ ಸುಳಿವು ಕೂಡಾ ನೀಡಿದ್ದಾರೆ. ಆದಾಗ್ಯೂ ಚಿತ್ರೀಕರಣ ಆರಂಭದ ಬಳಿಕವಷ್ಟೇ ಹೆಚ್ಚಿನ ವಿವರಗಳನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ. 1987ರಲ್ಲಿ ಬಿಡುಗಡೆಯಾದ ಮೂಕಿ ಚಿತ್ರ ಪುಷ್ಪಕ ವಿಮಾನವನ್ನು ತಾನು ನೋಡಿ ದ್ದರೂ, ಅದರ ಪ್ರಭಾವ ಚಿತ್ರದ ಮೇಲಿಲ್ಲವೆಂದು ಶ್ರೀಹರಿ ಸ್ಪಷ್ಟಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)