varthabharthi

ವಚನ ಬೆಳಕು

ಕಾಯಕವೇ ಕೈಲಾಸ

ವಾರ್ತಾ ಭಾರತಿ : 23 Dec, 2017

ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು.
ಕಾಯಕವೇ ಕೈಲಾಸವಾದ ಕಾರಣ.
 ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.

                                                                  - ಆಯ್ದಕ್ಕಿ ಮಾರಯ್ಯ
ಶರಣದರ್ಶನದಲ್ಲಿ ದಾಸೋಹಂಭಾವದ ಕಾಯಕಕ್ಕೆ ಹೆಚ್ಚಿನ ಮಹತ್ವವಿದೆ. ಬೆಳಕು ಕೊಡುವುದು ಸೂರ್ಯನ ಕಾಯಕ, ಬೆಳದಿಂಗಳನ್ನು ತರುವುದು ಚಂದ್ರನ ಕಾಯಕ, ಹೊಳೆಯುವುದು ತಾರೆಗಳ ಕಾಯಕ, ಸೃಷ್ಟಿಕ್ರಿಯೆ ಭೂಮಿಯ ಕಾಯಕ, ಜೀವಜಾಲದ ಕೊಂಡಿಗಳಾಗುವುದು ಪಶು ಪಕ್ಷಿಗಳ ಕಾಯಕ. ಪರಾಗಸ್ಪರ್ಶ ಕೀಟಗಳ ಕಾಯಕ. ಈ ಎಲ್ಲವುಗಳ ಕಾಯಕದ ಪರಿಣಾಮ ನಮಗೆ ದಾಸೋಹ ರೂಪದಲ್ಲಿ ಸಿಗುತ್ತದೆ. ಇವು ನಿಷ್ಕ್ರಿಯವಾದರೆ ಲೋಕ ನಿರ್ನಾಮವಾಗುವುದು. ಕಾಯಕ ದಾಸೋಹ ನಿಸರ್ಗತತ್ತ್ವಗಳಾಗಿವೆ. ಮಾನವನು ನಿಸರ್ಗದ ಭಾಗವಾಗಿದ್ದಾನೆ. ಆದ್ದರಿಂದ ಆತ ಕಾಯಕ ಮತ್ತು ದಾಸೋಹ ಬಿಟ್ಟು ಬದುಕುವಂತಿಲ್ಲ ಎಂದು ಬಸವಧರ್ಮ ಸಾರುತ್ತದೆ.

ಸತಿ ಆಯ್ದಕ್ಕಿ ಲಕ್ಕಮ್ಮಳಿಂದ ಆಯ್ದಕ್ಕಿ ಮಾರಯ್ಯನವರು ಕಾಯಕದ ಮಹತ್ವ ಅರಿತರು. ಈ ಕಡುಬಡವ ದಂಪತಿಯ ಮಧ್ಯೆ ಅನ್ಯೋನ್ಯತೆ, ವೈಚಾರಿಕ ಸ್ವಾತಂತ್ರ್ಯ, ನ್ಯಾಯನಿಷ್ಠುರತೆ, ಸಾಮರಸ್ಯ ಮತ್ತು ಏಕೋಭಾವವಿತ್ತು. ಸತಿ ಲಕ್ಕಮ್ಮನ ಜ್ಞಾನಕ್ಕೆ ಪತಿ ಮಾರಯ್ಯ ಬೆಲೆ ಕೊಟ್ಟರು. ಆ ಜ್ಞಾನವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರು. ಅಂತೆಯೇ ಅವರಿಗೆ ಇಂಥ ಮಹತ್ವದ ವಚನವನ್ನು ಬರೆಯಲಿಕ್ಕೆ ಸಾಧ್ಯವಾಯಿತು. ಇಡೀ ಶರಣಸಂಕುಲದ ಹೆಮ್ಮೆಯ ವಚನ ಇದಾಗಿದೆ.

 ನಿಸರ್ಗಪರವಾದ ಕಾಯಕದ ಮೇಲೆ ನಿಂತ ಬಸವದರ್ಶನವನ್ನು ಮಾರಯ್ಯನವರು ಅಪ್ಪಿಕೊಂಡರು. ಕಾಯಕವೇ ಎಲ್ಲದಕ್ಕೂ ಆಧಾರ. ಕಾಯಕವಿಲ್ಲದಿದ್ದರೆ ಇಡೀ ಲೋಕ ನಿಷ್ಕ್ರಿಯವಾಗುವುದರಿಂದ ಗುರು, ಲಿಂಗ ಮತ್ತು ಜಂಗಮರು ಆಧಾರವಿಲ್ಲದಂತಾಗುತ್ತಾರೆ. ಈ ಹಿನ್ನೆಲೆಯಲ್ಲಿ ಇದೊಂದು ವಿಶಿಷ್ಟ ವಚನವಾಗಿದೆ. ಅವರು ಗುರು, ಲಿಂಗ ಮತ್ತು ಜಂಗಮರ ಅವಹೇಳನ ಮಾಡುವುದಿಲ್ಲ. ಆದರೆ ಗುರು, ಲಿಂಗ, ಜಂಗಮರ ಹಾಗೂ ಒಟ್ಟಾರೆ ಸಕಲ ಜೀವಾತ್ಮರ ಸಂರಕ್ಷಣೆಗಾಗಿ ಕಾಯಕ ಎಷ್ಟೊಂದು ಮಹತ್ವದ್ದಾಗಿದೆ ಎಂಬುದನ್ನು ತಿಳಿಸುವುದಕ್ಕಾಗಿ ಮಾತ್ರ ಅವರು ಈ ಸ್ಪಷ್ಟ ವಾದವನ್ನು ಮುಂದಿಡುತ್ತಾರೆ.

ನಾವು ಕಾಯಕದಲ್ಲಿ ಮಗ್ನವಾದಾಗ ದೇವರಿಗೆ ಪ್ರಿಯವಾದುದನ್ನೇ ಮಾಡುತ್ತ ಸ್ವಾವಲಂಬಿಯಾಗುತ್ತೇವೆ. ನಂತರ ದಾಸೋಹದ ಮೂಲಕ ಅಳಿಲುಸೇವೆ ಸಲ್ಲಿಸುತ್ತೇವೆ. ಕಾಯಕ ನಿರತರಾದಾಗ ಗುರುದರ್ಶನ, ಲಿಂಗಪೂಜೆ ಮತ್ತು ಜಂಗಮಸೇವೆಯ ಯೋಚನೆ ಮಾಡಬಾರದು. ಏಕೆಂದರೆ ಕಾಯಕದ ಪರಿಣಾಮವು ಗುರು ಲಿಂಗ ಜಂಗಮಕ್ಕಾಗಿಯೇ ಇದೆ ಎಂಬ ಸೂಕ್ಷ್ಮತೆಯನ್ನು ಈ ವಚನ ಹೊಂದಿದೆ. ಗುರು ಲಿಂಗ ಜಂಗಮ ಮತ್ತು ಸ್ವರ್ಗಸಮಾನವಾದ ಬದುಕಿನ ಒಳ್ಳೆಯದೆಲ್ಲ ಆ ಕಾಯಕದೊಳಗೇ ಇದೆ ಎಂಬ ಭಾವವನ್ನು ಈ ವಚನ ಸೂಚಿಸುತ್ತದೆ. ಅಂತೆಯೆ ‘ಕಾಯಕವೇ ಕೈಲಾಸ’ ಎಂಬುದು ಬಸವಧರ್ಮದ ಘೋಷವಾಕ್ಯವಾಗಿ ಅಂದರೆ ಮಹಾವಾಕ್ಯವಾಗಿ ಜನಮನದಲ್ಲಿ ಅಚ್ಚೊತ್ತಿದೆ.

ಕಾಯಕವೇ ಕೈಲಾಸವಾದ ಕಾರಣ ದೇವರು ಕಾಯಕದೊಳಗೇ ಇರುತ್ತಾನೆ ಎಂಬ ಮಾತು ಕಾಯಕದ ಬಗೆಗೆ ಶರಣರಿಗಿರುವ ಗೌರವದ ಪ್ರತೀಕವಾಗಿದೆ. ಶರಣರು ಕಾಯಕದ ಮೂಲಕ ದೇವರನ್ನು ಕಂಡರು. ಕಾಯಕದ ಅನುಭವವನ್ನೇ ಮೆಟ್ಟಿಲಾಗಿಸಿಕೊಂಡು ಅನುಭಾವದ ತುದಿಯನ್ನು ತಲುಪಿದರು. ಆದರೆ ನಮ್ಮ ದೇಶದ ಧರ್ಮಶಾಸ್ತ್ರಗಳು ಅಧ್ಯಾತ್ಮಕ್ಕೂ ಕಾಯಕಕ್ಕೂ ಸಂಬಂಧವನ್ನು ಕಲ್ಪಿಸಲೇ ಇಲ್ಲ. ಸಾಧುಗಳು, ಸನ್ಯಾಸಿಗಳು, ಸ್ವಾಮಿಗಳು, ಯೋಗಿಗಳು ಮತ್ತು ಯತಿಗಳು ಆಗುವುದೆಂದರೆ ಕಾಯಕದಿಂದ ದೂರಾಗುವುದು ಎಂದೇ ಅರ್ಥ. ದೊಡ್ಡ ದೊಡ್ದ ತತ್ತ್ವಜ್ಞಾನದ ಮಾತುಗಳನ್ನು ಹೇಳುತ್ತ ಪರಾವಲಂಬಿಗಳಾಗಿ ಬದುಕುವುದು ಎಂದೇ ಅರ್ಥ. ಹೀಗೆ ನಿಷ್ಕ್ರಿಯ ಬದುಕನ್ನು ಸಾಗಿಸುವವರು ಜ್ಞಾನವನ್ನು ಕ್ರಿಯೆಗೆ ಇಳಿಸುವಲ್ಲಿ ಸೋತರು. ಉಪದೇಶ ಮಾಡುವುದೇ ಇವರ ಕಾಯಕವಾಯಿತು. ಇಂಥವರಲ್ಲಿ ಅನೇಕರು ಸಾತ್ವಿಕರೂ ಧರ್ಮಭೀರುಗಳೂ ಇದ್ದರು. ಆದರೆ ಅವರಲ್ಲಿನ ಕೆಲವರು, ರಾಜರಿಗಿರುವ ಸೌಲಭ್ಯಗಳನ್ನು ಕೂಡ ಪಡೆಯುವಲ್ಲಿ ಸಫಲರಾದರು. ಬೆಳ್ಳಿಯ ಪಲ್ಲಕ್ಕಿ, ನವರತ್ನಗಳಿಂದ ಕೂಡಿದ ಬಂಗಾರದ ಕಿರೀಟ, ಆನೆ, ಅಂಬಾರಿ, ಕುದುರೆ, ರಥ ಮತ್ತು ನೂರಾರು ಸೇವಕರನ್ನು ಹೊಂದಿ ಭಾರೀ ಮಠಮಾನ್ಯಗಳ ಒಡೆಯರಾಗಿದ್ದರು. ಕಳ್ಳರು, ಸುಳ್ಳರು, ದರೋಡೆಕೋರರು, ಮೋಸಗಾರರು, ಕೊಲೆಗಡುಕರು, ಸುಲಿಗೆಕೋರರು, ಶ್ರೀಮಂತರು, ರಾಜ ಮಹಾರಾಜರು ಹೀಗೆ ಈ ಎಲ್ಲ ಪ್ರಕಾರದ ಜನರು ಇವರ ಮಾತುಗಳಿಗೆ ಮರಳಾಗುತ್ತಲೇ ಇದ್ದುದಕ್ಕೆ ಇತಿಹಾಸ ಸಾಕ್ಷಿ ಇದೆ. ನಿತ್ಯ ಜೀವನದಲ್ಲಿ ತಪ್ಪುಮಾಡುತ್ತಲೇ ಇರುವ ಇಂಥವರಿಗೆ ಈ ತ್ರಿಕಾಲ ಜ್ಞಾನಿಗಳು ನರಕದ ಭಯವನ್ನು ಹುಟ್ಟಿಸುತ್ತಿದ್ದರು. ಅವರ ಕರ್ಮ ಹರಿಯಲು ಯಜ್ಞಯಾಗಾದಿಗಳನ್ನು ಮಾಡಿಸುತ್ತಿದ್ದರು. ಸ್ವರ್ಗದ ಆಸೆಯನ್ನು ಹಚ್ಚುವುದರ ಮೂಲಕ ಅವರಿಂದ ಭಾರೀ ಮೊತ್ತದ ಧನಕನಕ ಮತ್ತು ಆಸ್ತಿಪಾಸ್ತಿ ಪಡೆಯುತ್ತಿದ್ದರು. ಕಾಯಕಜೀವಿಗಳು ಇಂಥ ಮಹಾತ್ಮರ ಬಿಟ್ಟಿ ಸೇವೆ ಮಾಡುತ್ತ ಪುಣ್ಯ ಲಭಿಸುವುೆಂಬ ಭ್ರಮೆಯಲ್ಲಿ ಬದುಕುತ್ತಿದ್ದರು.

ಸೂಕ್ಷ್ಮಮತಿಗಳಾದ ಬಸವಣ್ಣನವರು ಇದನ್ನೆಲ್ಲ ಗಮನಿಸಿದರು. ಬಹುಸಂಖ್ಯಾತರಾದ ಕಾಯಕಜೀವಿಗಳ ಶೋಷಣೆಯನ್ನು ಎಲ್ಲರೂ ಒಂದಾಗಿ ಮಾಡುತ್ತಿರುವುದನ್ನು ತಪ್ಪಿಸುವುದೇ ಅವರ ಆದ್ಯ ಕರ್ತವ್ಯವಾಗಿತ್ತು. ಕಾಯಕಜೀವಿಗಳನ್ನು ಒಂದು ಸಂಕುಲವಾಗಿಸಿ, ಅವರನ್ನು ವೈಚಾರಿಕ ನೆಲೆಗೆ ತರಲು ನಿರ್ಧರಿಸಿದರು. ಸುಲಿಗೆಯ ಕೇಂದ್ರಗಳಾದ ಗುಡಿಗಳಿಂದ, ಮೂರ್ತಿಗಳಿಂದ ತೀರ್ಥಕ್ಷೇತ್ರಗಳಿಂದ, ಶಾಸ್ತ್ರಗಳಿಂದ, ಕರ್ಮಸಿದ್ಧಾಂತ ಮತ್ತು ಪಂಚಾಂಗಗಳಿಂದ ಮತ್ತು ಎಲ್ಲ ತೆರನಾದ ಮೂಢನಂಬಿಕೆಗಳಿಂದ ಅವರನ್ನು ಮುಕ್ತಗೊಳಿಸಿ ಕಾಯಕ ಪ್ರಧಾನವಾದ ಜೀವನಮಾರ್ಗವನ್ನು ತೋರಿಸುವಂಥ ಹೊಸಧರ್ಮವನ್ನೇ ಜಾರಿಗೆ ತಂದರು. ಈ ಹೊಸ ಧರ್ಮವು ಅರಿವು ಆಚಾರದ ಧರ್ಮವಾಗಿತ್ತು. ದುಡಿಯುವವರಿಗೆ ಸಮಾಜದಲ್ಲಿ ಉನ್ನತ ಸ್ಥಾನ ಕೊಡುವ ಧರ್ಮವಾಗಿತ್ತು. ದುಡಿಯುವ ವರ್ಗದಲ್ಲಿ ಜಾತಿ, ಅಸ್ಪಶ್ಯತೆ ಮುಂತಾದ ಮೇಲು ಕೀಳುಗಳನ್ನು ನಿವಾರಿಸಿದ ಧರ್ಮವಾಗಿತ್ತು.

 ಇಂಥ ಅನುಪಮ ಧರ್ಮದಿಂದ ಕಾಯಕಜೀವಿಗಳು ಪುಳಕಿತಗೊಂಡರು. ಕಾಯಕಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂಬ ಸತ್ಯವನ್ನು ಅವರು ಅರಿತರು. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮುಂತಾದ ಸವರ್ಣೀಯರು ಸುಖದಿಂದ ಬದುಕುತ್ತಿರುವುದು ತಮ್ಮ ಕಾಯಕದ ಕಾರಣದಿಂದಲೇ ಎಂಬುದು ಅವರಿಗೆ ಮನವರಿಕೆಯಾಯಿತು. ಇಂಥ ಅರಿವಿನ ಹಿನ್ನೆಲೆಯಲ್ಲಿ ಮೂಡಿಬಂದ ವಚನವಿದು.

***

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)