varthabharthi

ವೈವಿಧ್ಯ

ಗುಜರಾತ್ ಆದಿವಾಸಿಗಳ ಕಡೆಗಣಿಸಿ ಸೋತ ಕಾಂಗ್ರೆಸ್

ವಾರ್ತಾ ಭಾರತಿ : 23 Dec, 2017
ಕು.ಸ. ಮಧುಸೂದನನಾಯರ್, ರಂಗೇನಹಳ್ಳಿ

ಕಾಂಗ್ರೆಸ್ ಪಕ್ಷದ ಸರ್ವ ಪ್ರಯತ್ನಗಳ ನಂತರವೂ ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಭಾಜಪ 99 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವಲ್ಲಿ ಅದಕ್ಕೆ ನೆರವಾಗಿದ್ದು ಗುಜರಾತ್‌ನ ಆದಿವಾಸಿಗಳ ಮತಗಳು. ನಿಜ, ಈ ಬಾರಿಯ ಚುನಾವಣೆಗಳನ್ನು ಗೆಲ್ಲಲು ಬೇಕಾದಂತಹ ಎಲ್ಲ ರೀತಿಯ ಜಾತಿ ಸಮೀಕರಣಗಳನ್ನು ಬಳಸಿದ ಕಾಂಗ್ರೆಸ್ ಅದಕ್ಕಾಗಿಯೇ ಹಾರ್ದಿಕ್ ಪಟೇಲ್ ಮೂಲಕ ಪಾಟಿದಾರರ, ಅಲ್ಪೇಶ್ ಠಾಕೂರ್ ಮೂಲಕ ಹಿಂದುಳಿದ ಮತದಾರರನ್ನು, ಜಿಗ್ನೇಶ್ ಮೇವಾನಿಯವರ ಮೂಲಕ ದಲಿತ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಸರ್ವ ಪ್ರಯತ್ನಗಳನ್ನೂ ಮಾಡಿ ಭಾಗಶಃ ಯಶಸ್ಸನ್ನು ಕಂಡು ಭಾಜಪ ಮೂರಂಕಿಯನ್ನು ದಾಟದಂತೆ ನೋಡಿಕೊಂಡಿತು. ಈ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಒಂದು ದೊಡ್ಡ ತಪ್ಪನ್ನು ಮಾಡಿ ಭಾಜಪ ಮತ್ತೆ ಗೆಲ್ಲಲು ಕಾರಣವಾಯಿತು. ಅದು ಹೀಗಿದೆ.

  ಗುಜರಾತ್‌ನ ಒಟ್ಟು ಮತದಾರರ ಶೇ. 14ರಷ್ಟಿರುವ ಆದಿವಾಸಿ ಮತದಾರರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಈ ಬಾರಿ ಹೆಚ್ಚಿನ ಪ್ರಯತ್ನ ಮಾಡಲೇ ಇಲ್ಲ. ಸುಮಾರು 27 ಕ್ಷೇತ್ರಗಳಲ್ಲಿ ಈ ಆದಿವಾಸಿಗಳ ಮತಗಳೇ ನಿರ್ಣಾಯಕವಾಗಿದ್ದು ಅವುಗಳನ್ನು ಧ್ರುವೀಕರಿಸುವಲ್ಲಿ ಕಾಂಗ್ರೆಸ್ ನಾಯಕತ್ವ ಗಮನ ಹರಿಸದೇ ಹೋಗಿದ್ದು ಅಲ್ಲಿನ 15 ಕ್ಷೇತ್ರಗಳನ್ನು ಭಾಜಪ ಗೆಲ್ಲಲು ಕಾರಣವಾಯಿತು. 2002ರ ಗೋಧ್ರೋತ್ತರ ಚುನಾವಣೆಗಳಲ್ಲಿ ಭಾಜಪವನ್ನು ಬೆಂಬಲಿಸಿದ್ದ ಆದಿವಾಸಿಗಳು 2007ರ ಹೊತ್ತಿಗೆ ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದ್ದರು. ಆಗ 27 ಸ್ಥಾನಗಳ ಪೈಕಿ ಭಾಜಪ ಕೇವಲ 8 ಸ್ಥಾನಗಳನ್ನು ಪಡೆದಿದ್ದರೆ ಕಾಂಗ್ರೆಸ್ ಉಳಿದ ಸ್ಥಾನಗಳಲ್ಲಿ ದಿಗ್ವಿಜಯ ಸಾಧಿಸಿತ್ತು. ಇದನ್ನು ಅರಿತ ಅಂದಿನ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿಯವರು ಗುಜರಾತ್‌ನಲ್ಲಿ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದರು. ತದನಂತರದಲ್ಲಿ 85 ಸಾವಿರ ಆದಿವಾಸಿ ಕುಟುಂಬಗಳಿಗೆ ಸುಮಾರು 13 ಲಕ್ಷ ಹೆಕ್ಟೇರ್ ಭೂಮಿಯನ್ನು ಹಂಚಲಾಯಿತೆಂದು ಸರಕಾರಿ ಅಂಕಿಅಂಶಗಳ ಮೂಲಕ ಆದಿವಾಸಿಗಳ ನಡುವೆ ಪ್ರಚಾರ ಮಾಡಲಾಯಿತು. ಇಷ್ಟಲ್ಲದೆ 15 ಸಾವಿರ ಕೋಟಿಗಳ ‘ವನಬಂಧು ಯೋಜನಾ’ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. ಇದರಿಂದಾಗಿ 2012ರ ಹೊತ್ತಿಗೆ ಮತ್ತೆ ಆದಿವಾಸಿಗಳು ಭಾಜಪದತ್ತ ನಡೆಯ ತೊಡಗಿದರು. ಹೀಗಾಗಿ 2012ರ ಚುನಾವಣೆಗಳಲ್ಲಿ ಭಾಜಪ ಆ ಭಾಗದ 15 ಸ್ಥಾನಗಳನ್ನು ಗೆದ್ದು ಕಾಂಗ್ರೆಸನ್ನು ಹಿಂದಿಕ್ಕಿತ್ತು.
ಸ್ಥಳೀಯ ಕಾಂಗ್ರೆಸ್ ಘಟಕ ಈ ಅಂಕಿಅಂಶಗಳನ್ನು ಗಂಭೀರವಾಗಿ ತೆಗೆದು ಕೊಳ್ಳಲೇ ಇಲ್ಲ. ಬದಲಿಗೆ ಚುನಾವಣಾ ತಂತ್ರಗಾರಿಕೆ ಮಾಡುವ ಸಮಯದಲ್ಲಿ ಕಾಂಗ್ರೆಸ್ ಆದಿವಾಸಿ ಜಿಲ್ಲೆಗಳ ಬಗ್ಗೆ ಯೋಚಿಸಲೇ ಇಲ್ಲ. ಅದು ಸಂಪೂರ್ಣವಾಗಿ ಆದಿವಾಸಿಯೇತರ ಜಾತಿಗಳ ಧ್ರುವೀಕರಣ ಮಾಡುವ ಮೂಲಕ ಮತಗಳಿಸುವ ತಂತ್ರಕ್ಕೆ ಮೊರೆ ಹೋಯಿತು. ಈ ವಿಷಯದಲ್ಲಿ ಅದು ದಲಿತರ ಮೇವಾನಿಯ ಜೊತೆ, ಹಿಂದುಳಿದ ವರ್ಗಗಳ ಅಲ್ಪೇಶ್ ಠಾಕೂರ್ ಜೊತೆ ಮಾತನಾಡಿತೇ ಹೊರತು ಅಪ್ಪಿತಪ್ಪಿಯೂ ಯಾವುದೇ ಆದಿವಾಸಿ ಹೋರಾಟಗಾರರನ್ನು ಮಾತನಾಡಿಸುವ ಗೋಜಿಗೆ ಹೋಗಲೇ ಇಲ್ಲ. ಅದರಲ್ಲೂ ತನ್ನ ಮೂರು ತಿಂಗಳ ಚುನಾವಣಾ ತಯಾರಿ ಮತ್ತು ಪ್ರಚಾರದ ಅವಧಿಯಲ್ಲಿ ಹಾರ್ದಿಕ್ ಪಟೇಲ್ ಮೂಲಕ ಹೇಗೆ ಪಾಟಿದಾರರ ಮತಗಳನ್ನು ಸೆಳೆಯಬಹುದು ಎಂಬುದರ ಬಗ್ಗೆ ಹೆಚ್ಚು ತನ್ನ ಗಮನವನ್ನು ಕೇಂದ್ರೀಕರಿಸಿತೇ ಹೊರತು ಅಪ್ಪಿತಪ್ಪಿಯೂ ಆದಿವಾಸಿ ಜಿಲ್ಲೆಗಳ ಬಗ್ಗೆ ಯೋಚಿಸಲೇ ಇಲ್ಲ.
ಇದರ ಜೊತೆಗೆ ತನ್ನ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅತಿಯಾಗಿ ಪ್ರಸ್ತಾಪಿಸಿದ ನೋಟ್‌ಬ್ಯಾನ್ ಮತ್ತು ಜಿಎಸ್‌ಟಿಯಂತಹ ವಿಚಾರಗಳಲ್ಲಿ ಆದಿವಾಸಿಗಳಿಗೆ ಯಾವುದೇ ಹೆಚ್ಚಿನ ಆಸಕ್ತಿ ಇರಲಿಲ್ಲ. ಅದರಿಂದಾಗಿ ಈ ವಿಚಾರಗಳು ಆದಿವಾಸಿ ಸಮುದಾಯದಲ್ಲಿ ಯಾವುದೇ ಪರಿಣಾಮಗಳನ್ನೂ ಬೀರಲಿಲ್ಲ. ಸಂಯುಕ್ತ ಜನತಾದಳದ ಮಾಜಿ ಶಾಸಕ ಚೋಟೂ ವಾಸವ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡರೂ ಅದು ಪರಿಣಾಮಕಾರಿಯಾಗೇನು ಕೆಲಸ ಮಾಡಲಿಲ್ಲ.
 ಇದನ್ನು ಅರಿತುಕೊಂಡ ಭಾಜಪ ಆದಿವಾಸಿಗಳ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪರಿವಾರದ ಸಂಘಟನೆಯಾದ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ್ ಮೂಲಕ ಆದಿವಾಸಿಗಳನ್ನು ತನ್ನಪರವಾಗಿ ಸಂಘಟಿಸಿ ಚುನಾವಣಾ ಪ್ರಚಾರ ಕೈಗೊಂಡಿತು. ಕೊನೆಗೆ ಇದು ಭಾಜಪಕ್ಕೆ ಯಶಸ್ಸನ್ನೂ ನೀಡಿತು. ಹಾಗಾಗಿ ಈಬಾರಿಯ ಚುನಾವಣೆಯಲ್ಲಿ ಆದಿವಾಸಿ ಪ್ರದೇಶಗಳ 15 ಸ್ಥಾನಗಳನ್ನು ಗೆಲ್ಲುವ ಮೂಲಕಮತ್ತೆ ಅಧಿಕಾರಕ್ಕೆ ಬಂದಿತು. ಆಕಸ್ಮಾತ್ ಕಾಂಗ್ರೆಸ್ ಈ ಕ್ಷೇತ್ರಗಳಿಗೆ ಹೆಚ್ಚು ಗಮನ ನೀಡಿ ತನ್ನ ಪ್ರಚಾರತಂತ್ರವನ್ನು ಬದಲಾಯಿಸಿಕೊಂಡಿದ್ದರೆ ಅಂತಿಮ ಫಲಿತಾಂಶದ ಚಿತ್ರಣವೇ ಬೇರೆಯದ್ದಾಗಿರುತ್ತಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)