varthabharthi

ಸಂಪಾದಕೀಯ

2ಜಿ ಹಗರಣ: ಬೆಟ್ಟ ಅಗೆದು ಇಲಿಯನ್ನೂ ಹಿಡಿಯದ ಸಿಬಿಐ

ವಾರ್ತಾ ಭಾರತಿ : 23 Dec, 2017

ಮಾಜಿ ಪ್ರಧಾನಿ ರಾಜೀವ್ ಗಾಂಧಿಯ ರಾಜಕೀಯ ಬದುಕಿನ ಮೇಲೆ ಭಾರೀ ಹಾನಿಯುಂಟು ಮಾಡಿದ್ದ ಪ್ರಕರಣ ‘ಬೋಫೋರ್ಸ್‌’. ದೇಶದ ಭದ್ರತೆಗೆ ಸಂಬಂಧಿಸಿದ ವಿಷಯವಾದುದರಿಂದ ಭಾರತೀಯರ ಪಾಲಿಗೆ ಇದು ಭಾವನಾತ್ಮಕ ವಿಷಯವಾಯಿತು. ವಿ.ಪಿ.ಸಿಂಗ್ ರಾಜಕೀಯವಾಗಿ ಮೇಲೇರುವುದಕ್ಕೆ ಸಾಕಷ್ಟು ಸಹಾಯ ಮಾಡಿತು. ಆದರೆ ಅಂತಿಮವಾಗಿ ರಾಜೀವ್‌ ಗಾಂಧಿಯವರು ಈ ಹಗರಣದಲ್ಲಿ ನೇರವಾಗಿ ಪಾತ್ರ ವಹಿಸಿರುವುದನ್ನು ಸಾಬೀತು ಮಾಡಲು ಸಾಧ್ಯವಾಗಲೇ ಇಲ್ಲ. ಆದರೆ ಅಷ್ಟರಲ್ಲಿ ರಾಜೀವ್‌ ಗಾಂಧಿಯವರ ಹತ್ಯೆಯಾಯಿತು.

ಇಂದು ಬೋಫೋರ್ಸ್‌ಗಿಂತ ಭೀಕರ ಹಗರಣಗಳಲ್ಲಿ ರಾಜಕೀಯ ನಾಯಕರು ಗುರುತಿಸಲ್ಪಡುತ್ತಿದ್ದಾರೆ ಮತ್ತು ಆ ಕುರಿತಂತೆ ಯಾವ ಲಜ್ಜೆಯೂ ಇಲ್ಲದೆ, ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ. ಅಧಿಕಾರವನ್ನೂ ಅನುಭವಿಸುತ್ತಿದ್ದಾರೆ. ಯುಪಿಎ ಸರಕಾರವನ್ನು ಬಡಮೇಲು ಮಾಡುವಲ್ಲಿ 2ಜಿ ಹಗರಣ ಮಹತ್ತರ ಪಾತ್ರವನ್ನು ವಹಿಸಿತ್ತು. ದೇಶದ ಇತಿಹಾಸದಲ್ಲೇ ಅತೀ ದೊಡ್ಡ ಹಗರಣ ಎಂದು ಇದನ್ನು ಬಿಂಬಿಸಲಾಗಿತ್ತು. ಹಗರಣದಿಂದ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಸಿಎಜಿ ವರದಿ ಮಾಡಿತ್ತು. ಸಿಎಜಿ ವರದಿ ಪ್ರಕಾರ, ಯುಪಿಎ ಸರಕಾರದ ದೂರಸಂಪರ್ಕ ಸಚಿವಾಲಯವು ಖಾಸಗಿ ಕಂಪೆನಿಗಳಿಗೆ 2007-08ರಲ್ಲಿ ತರಂಗಾಂತರ ಹಂಚಿಕೆ ಮಾಡುವಾಗ ಕಾನೂನು ಉಲ್ಲಂಘಿಸಿತ್ತು. ಹೆಚ್ಚಿನ ಬೆಲೆಯ ತರಂಗಾಂತರ ಪರವಾನಿಗೆಯನ್ನು ಕಡಿಮೆ ಬೆಲೆಗೆ ಹಂಚಿಕೆ ಮಾಡಿದ್ದರಿಂದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿತ್ತು.

ಸಿಎಜಿ ವರದಿಯನ್ನೇ ಮುಂದಿಟ್ಟುಕೊಂಡು, ಯುಪಿಎ ಸರಕಾರದ ಮೇಲೆ ಬಿಜೆಪಿ ಮುಗಿ ಬಿದ್ದಿತ್ತು. ಯುಪಿಎ ಮಹಾ ಭ್ರಷ್ಟ ಸರಕಾರವೆಂದು ಬಿಂಬಿಸುವುದಕ್ಕೆ 2 ಜಿ ಹಗರಣದ ಕೋಟಿ ಲೆಕ್ಕಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿತ್ತು. ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರಕಾರ ಹಮ್ಮಿಕೊಂಡಿದ್ದ ಎಲ್ಲ ಜನಪರ ಕಾರ್ಯಕ್ರಮಗಳೂ ಈ ಹಗರಣದ ಮರೆಯಲ್ಲಿ ಮುಚ್ಚಿ ಹೋಯಿತು. ಈ ಹಗರಣವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಮನಮೋಹನ್ ಸಿಂಗ್ ಮೇಲೆ ಭಾರೀ ದಾಳಿಗಳನ್ನು ನಡೆಸಿದ್ದವು. ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಈ ಎಲ್ಲ ಹಗರಣಗಳ ಹಿಂದಿರುವ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ ಎಂದು ರಾಜಕೀಯ ಮುಖಂಡರು ಜನರನ್ನು ನಂಬಿಸಿದ್ದರು. ಇದೀಗ ನರೇಂದ್ರ ಮೋದಿಯ ಎನ್‌ಡಿಎ ಸರಕಾರ ಅಧಿಕಾರದಲ್ಲಿರುವಾಗಲೇ ಎಲ್ಲ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಒಂದು ವೇಳೆ, ಈ ಅವಧಿಯಲ್ಲಿ ಯುಪಿಎ ಸರಕಾರವಿದ್ದಿದ್ದರೆ, ಸರಕಾರವೇ ಆರೋಪಿಗಳನ್ನು ರಕ್ಷಿಸಿತು ಎನ್ನಬಹುದಿತ್ತು. ಯಾವ ಪಕ್ಷ 2ಜಿ ಆರೋಪದ ಕುರಿತಂತೆ ದೇಶಾದ್ಯಂತ ಡಂಗುರ ಸಾರಿತ್ತೋ, ಅದೇ ಪಕ್ಷ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಆರೋಪಿಗಳು ಸಂಪೂರ್ಣ ದೋಷಮುಕ್ತರಾಗಿ ಹೊರಬಂದಿದ್ದಾರೆ. ‘‘ಸರಿಯಾದ ಸಾಕ್ಷಾಧಾರಗಳನ್ನು ನೀಡುವಲ್ಲಿ ಸಿಬಿಐ ಸಂಪೂರ್ಣ ವಿಫಲವಾಗಿದೆ ಮತ್ತು ಸಿಬಿಐ ಅತ್ಯಂತ ಕಳಪೆ ರೀತಿಯಲ್ಲಿ ವಾದ ಮಾಡಿದೆ. ಅದರಲ್ಲಿ ಯಾವುದೇ ಗುಣಮಟ್ಟವಿಲ್ಲ. ಇಡಿ ಮತ್ತು ಸಿಬಿಐಐ ಸಂಸ್ಥೆಗಳು ಏನನ್ನು ಸಾಬೀತು ಪಡಿಸಲು ಯತ್ನಿಸುತ್ತಿವೆ ಎಂಬುದು ಅಸ್ಪಷ್ಟವಾಗಿದೆ’’ ಎಂದು ನ್ಯಾಯಾಲಯ ಹೇಳಿದೆ. ಮಾತ್ರವಲ್ಲ, ಸಿಬಿಐಗೆ ಛೀಮಾರಿಯನ್ನೂ ಹಾಕಿದೆ. ಸಿಬಿಐ ಎನ್ನುವುದು ಕೇಂದ್ರದ ಸರಕಾರದ ಪಂಜರದ ಗಿಳಿ. ಆದುದರಿಂದ ಸಿಬಿಐಗೆ ಹಾಕಿರುವ ಛೀಮಾರಿ ಪರೋಕ್ಷವಾಗಿ ಕೇಂದ್ರ ಸರಕಾರವನ್ನೇ ಸವರಿಕೊಂಡು ಹೋಗಿದೆ.

ಪ್ರಕರಣದ ಕುರಿತಂತೆ ಸಿಬಿಐಯ ಕಳಪೆ ನಿರ್ವಹಣೆಯ ಹಿಂದೆ ಎರಡು ಕಾರಣಗಳನ್ನು ಅನುಮಾನಿಸಬಹುದು. ಒಂದು, ಕೇಂದ್ರ ಸರಕಾರದ ನಿರ್ದೇಶನದಂತೆಯೇ ಸಿಬಿಐ ಈ ಪ್ರಕರಣವನ್ನು ದುರ್ಬಲವಾಗಿ ನಿಭಾಯಿಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ತಮಿಳುನಾಡು ಭೇಟಿಯೂ ಸಾವಿರ ಅನುಮಾನಗಳಿಗೆ ಪುಷ್ಟಿಯನ್ನು ನೀಡಿದೆ. ಆರೋಪಿಗಳನ್ನು ರಕ್ಷಿಸಲು ಕೇಂದ್ರ ಮತ್ತು ಡಿಎಂಕೆ ನಡುವೆ ಯಾಕೆ ಒಪ್ಪಂದ ನಡೆದಿರಬಾರದು? ಈ ಒಪ್ಪಂದ ಸಿಬಿಐಯ ಕೈಗಳನ್ನು ಕಟ್ಟಿ ಹಾಕಿರಬಹುದೆ? ಎಂಬ ಪ್ರಶ್ನೆಗಳು ಹುಟ್ಟುವುದು ಸಹಜವೇ ಆಗಿದೆ. ಇದೇ ಸಂದರ್ಭದಲ್ಲಿ, ಇಡೀ ಹಗರಣವೇ ಬಿಜೆಪಿಯ ಸೃಷ್ಟಿ. ಹಗರಣದ ಕುರಿತಂತೆ ತಪ್ಪು ವ್ಯಾಖ್ಯಾನ ಮಾಡಿ, ಸಿಬಿಐ ಮೂಲಕ ಅದನ್ನು ನಿಜ ಮಾಡಲು ಬಿಜೆಪಿ ಹೊರಟಿತ್ತು ಎಂದು ನಾವು ಭಾವಿಸಬೇಕಾಗುತ್ತದೆ. ಆದುದರಿಂದಲೇ, ಸರಿಯಾದ ರೀತಿಯಲ್ಲಿ ವಾದವನ್ನು ಮಂಡಿಸಲು ಸಿಬಿಐಗೆ ಸಾಧ್ಯವಾಗಲಿಲ್ಲ. ಪರಿಣಾಮವಾಗಿ ನ್ಯಾಯಾಲಯದಿಂದ ಅದು ಛೀಮಾರಿ ಹಾಕಿಸಿಕೊಂಡಿದೆ.

ಮೇಲಿನ ಎರಡು ಕಾರಣಗಳಲ್ಲಿ ಯಾವುದೇ ಇರಲಿ, ಅದರ ಹೊಣೆಯನ್ನು ಮೋದಿ ನೇತೃತ್ವದ ಸರಕಾರವೇ ವಹಿಸಬೇಕು. ನ್ಯಾಯಾಲಯ ನೀಡಿರುವ ತೀರ್ಪು, ಅದು ವ್ಯಕ್ತಪಡಿಸಿರುವ ಅಸಮಾಧಾನ, ಹತಾಶೆಯನ್ನು ಯಾವ ರೀತಿಯಲ್ಲೂ ಲಘುವಾಗಿ ಕಾಣುವಂತಿಲ್ಲ. ‘‘ನ್ಯಾಯಾಲಯದಲ್ಲಿ ಸ್ವೀಕಾರಾರ್ಹವಾಗಬಲ್ಲ ದಾಖಲೆಗಳನ್ನು ತರಬಹುದು ಎಂದು ಕಳೆದ ಏಳು ವರ್ಷಗಳಿಂದ ಎಲ್ಲ ಕಾರ್ಯನಿರ್ವಹಣೆ ದಿನಗಳಲ್ಲೂ, ಬೇಸಿಗೆ ರಜೆಯಲ್ಲೂ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಕಾಯುತ್ತಿದ್ದೆ. ಆದರೆ ಎಲ್ಲ ವ್ಯರ್ಥವಾಯಿತು. ಒಬ್ಬನೇ ಒಬ್ಬ ವ್ಯಕ್ತಿಯೂ ಬರಲಿಲ್ಲ. ಗಾಳಿ ಸುದ್ದಿ, ಗಾಸಿಪ್ ಹಾಗೂ ಊಹಾಪೋಹದಿಂದ ಸೃಷ್ಟಿಯಾದ ಸಾರ್ವಜನಿಕ ಅಭಿಪ್ರಾಯದ ಹಿಂದೆಯೇ ಎಲ್ಲರೂ ಬಿದ್ದಿದ್ದರು ಎನ್ನುವುದನ್ನು ಇದು ತೋರಿಸುತ್ತಿದೆ. ಆದರೆ ಸಾರ್ವಜನಿಕರ ಭಾವನೆಗೆ ನ್ಯಾಯಾಲಯದ ವಿಚಾರಣೆಯಲ್ಲಿ ಜಾಗವಿಲ್ಲ. ಅದು ಸಾಕ್ಷಗಳನ್ನು ಬೇಡುತ್ತದೆ’’ ಎಂದು ಸಿಬಿಐ ವಿಶೇಷ ನ್ಯಾಯಾಧೀಶರು ವಿಷಾದ ವ್ಯಕ್ತಪಡಿಸಿದ್ದಾರೆ.

ನ್ಯಾಯಾಧೀಶರ ಮಾತುಗಳೇ ಒಟ್ಟು ಹಗರಣದ ಚಿತ್ರಣವನ್ನು ನಮ್ಮ ಮುಂದಿಡುತ್ತದೆ. ಸಿಎಜಿ ವರದಿಯ ಆಧಾರವನ್ನು ಇಟ್ಟುಕೊಂಡು ನಿರ್ದಿಷ್ಟ ಆರೋಪಿಗಳನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಸಿಬಿಐ ಎಡವಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಅಭಿಪ್ರಾಯಗಳು ನ್ಯಾಯವ್ಯವಸ್ಥೆಯನ್ನು ನಿಯಂತ್ರಿಸುತ್ತಿವೆೆ. ಭಯೋತ್ಪಾದನೆಯಂತಹ ಪ್ರಕರಣಗಳಲ್ಲಿ ಆರೋಪಿಗಳ ವಿರುದ್ಧ ಸಾಕ್ಷಗಳು ಇಲ್ಲದೇ ಇದ್ದರೂ ತೀರ್ಪನ್ನು ನೀಡಲೇ ಬೇಕಾದಂತಹ ಒತ್ತಡವೊಂದನ್ನು ಈ ಅಭಿಪ್ರಾಯಗಳು ಸೃಷ್ಟಿಸುತ್ತದೆ. ಸಾಕ್ಷ ಇಲ್ಲದೇ ಇದ್ದರೂ ಕೆಲವೊಮ್ಮೆ ‘ಜನರನ್ನು ಸಂತೃಪ್ತಿ ಪಡಿಸಲು’ ಶಿಕ್ಷೆ ವಿಧಿಸಲೇಬೇಕಾದಂತಹ ಅನಿವಾರ್ಯತೆಗೆ ನ್ಯಾಯಾಲಯವನ್ನು ಸಿಲುಕಿಸುತ್ತದೆ. ಆದರೆ ಇದು ಭಯೋತ್ಪಾದನೆಯಂತಹ ಪ್ರಕರಣವಲ್ಲದೇ ಇರುವುದರಿಂದ ಬಿಜೆಪಿ ಮತ್ತು ಸಂಘಪರಿವಾರ ಸೃಷ್ಟಿಸಿದ ಸಾರ್ವಜನಿಕ ಅಭಿಪ್ರಾಯಕ್ಕೆ ಆರೋಪಿಗಳನ್ನು ಅಪರಾಧಿಗಳಾಗಿ ಪರಿವರ್ತಿಸುವ ಶಕ್ತಿಯಿರಲಿಲ್ಲ.

ಹಾಗಾದರೆ, ಸಿಎಜಿ ವರದಿಯಲ್ಲಿ ಹೇಳಿರುವ ಕೋಟ್ಯಂತರ ಅವ್ಯವಹಾರ ನಡೆದಿರುವುದು ಸುಳ್ಳೇ? ನಿಜವೇ ಆಗಿದ್ದರೆ, ಅದರ ಸೂತ್ರದಾರರು ಯಾರು? ಎಂಬ ಪ್ರಶ್ನೆ ಉತ್ತರವಿಲ್ಲದೆ ಬಿದ್ದುಕೊಂಡಿದೆ. ಇಲ್ಲಿ ಅವ್ಯವಹಾರ ನಡೆದಿರುವುದು ನಿಜವೇ ಆಗಿರಬಹುದು. ಆದರೆ ಅದಕ್ಕೆ ನಿರ್ದಿಷ್ಟ ಸಚಿವರನ್ನು ಹೊಣೆ ಮಾಡುವಲ್ಲಿ ಸಿಬಿಐ ವಿಫಲವಾಗಿದೆ. ಇಡೀ ಹಗರಣಗಳ ಕುರಿತಂತೆ ದೂರಸಂಪರ್ಕ ಇಲಾಖೆಯೇ ಅಜ್ಞಾನಿಯಾಗಿದೆ ಎನ್ನುವುದನ್ನು ನ್ಯಾಯಾಲಯ ವಿವರಿಸುತ್ತದೆ. ವಿಚಾರಗಳು ಸರಿಯಾಗಿ ಅರ್ಥವಾಗದ್ದರಿಂದ ಏನೋ ಬೃಹತ್ ಅಕ್ರಮ ನಡೆದಿದೆ ಎಂಬ ಸಂದೇಹ ಸೃಷ್ಟಿಯಾಗಿದೆ ಮತ್ತು ಈ ಸಂದೇಹವನ್ನೇ ಇಟ್ಟುಕೊಂಡು ಸಿಬಿಐ ಆರೋಪಗಳನ್ನು ಮಾಡಿದೆ. ಅದಕ್ಕೂ ತಾನು ಮಂಡಿಸುತ್ತಿರುವ ವಿಷಯದ ಕುರಿತಂತೆ ಸ್ಪಷ್ಟತೆ ಇರಲಿಲ್ಲ.

ಬಹುಶಃ ಯಾರದೋ ಒತ್ತಡದ ಕಾರಣಕ್ಕಾಗಿ ಆರೋಪಗಳನ್ನು ಮಂಡಿಸುವ ಅನಿವಾರ್ಯತೆಯನ್ನು ಸಿಬಿಐ ಹೊಂದಿತ್ತೇ ಎನ್ನುವ ಅನುಮಾನ ಈಗ ಕಾಡುತ್ತದೆ. ಅದೇನೇ ಇರಲಿ. ಗೊಂದಲಕಾರಿ ನೀತಿಗಳು ಮತ್ತು ಮಾರ್ಗಸೂಚಿಗಳ ಮರೆಯಲ್ಲಿ ಹಲವು ರಾಜಕಾರಣಿಗಳು ಮತ್ತು ಅಧಿಕಾರಿಗಳು ಕೋಟಿ ಗಟ್ಟಳೆ ಹಣ ದೋಚಿರುವುದಂತೂ ಸತ್ಯ. ಇದರಲ್ಲಿ ಯುಪಿಎ ಸರಕಾರ ಮಾತ್ರ ಭಾಗಿಯಾಗಿರುವುದಲ್ಲ. ಈ ಹಿಂದಿನ ಎನ್‌ಡಿಎ ಸರಕಾರದ ಪಾಲೂ ಇದೆ. ಆದುದರಿಂದಲೇ ಆರೋಪಗಳನ್ನು ಸ್ಪಷ್ಟವಾಗಿ ಮಂಡಿಸಲು ಸಿಬಿಐಗೆ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಗುಡ್ಡವನ್ನು ಅಗೆದು ಇಲಿಯನ್ನೂ ಹಿಡಿಯದೇ ಸಿಬಿಐ ಬೇಸ್ತು ಬಿದ್ದಿದೆ. ಅಥವಾ ರಾಜಕೀಯ ಹೆಗ್ಗಣಗಳು ದೇಶದ ಜನರನ್ನು ಬೇಸ್ತು ಬೀಳಿಸಿ ಈಗ ಮರೆಯಲ್ಲಿ ನಗುತ್ತಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)