varthabharthi

ಸುಗ್ಗಿ

ಹಳ್ಳೇರ್ ಒಂದು ವಿಶಿಷ್ಟ ಸಮುದಾಯ

ವಾರ್ತಾ ಭಾರತಿ : 23 Dec, 2017
ಮಹೇಂದ್ರ ಕುಮಾರ್ ಬಿ.ಪಿ.

ಹಳ್ಳೇರರು ಸೋಮಾರಿಗಳಲ್ಲ, ಚೆನ್ನಾಗಿ ದುಡಿಯುವವರು, ಸಭ್ಯರು, ತೀರ ಬಡವರಾದ ಇವರು ಸ್ವಂತ ಹೊಲಗದ್ದೆಗಳನ್ನು ಹೊಂದಿರದ ಪ್ರಯುಕ್ತ ಭೂಮಾಲಕರಾದ ಹವ್ಯಕರು, ನಾಡವರು ಮುಂತಾದವರ ಹೊಲ ಗದ್ದೆಗಳಲ್ಲಿ, ತೋಟ ಪಟ್ಟಿಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುವುದೇ ಹೆಚ್ಚು. ಕೆಲವರು ಹೊಟ್ಟೆಗಿಲ್ಲದ ಸಮಯದಲ್ಲಿ ಭೂಮಾಲಕರಲ್ಲಿ ಸಾಲಮಾಡಿ, ಸಾಲ ತೀರಿಸಲಾಗದೇ ಅವರ ಮನೆಯಲ್ಲಿ ಒತ್ತೆಯಾಳಾಗಿ ದುಡಿಯುವುದೂ ಇಲ್ಲದಿಲ್ಲ. ಹಲವರು ಗೇಣಿ ಗದ್ದೆಯನ್ನು ಮಾಡಿ ಹೊಟ್ಟೆ ಹೊರಕೊಳ್ಳುವವರೂ ಇದ್ದಾರೆ. ಕೆಲವರು ಕಲ್ಲು ಗಣಿಗಳಲ್ಲಿ ಕೂಲಿಯಾಳುಗಳಾಗಿ, ಹೊರೆಯಾಳುಗಳಾಗಿ ಜೀವನ ಸಾಗಿಸುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಹಳ್ಳೇರನ್ನು ಕುರಿತು ಈವರೆಗೆ ವ್ಯಾಪಕ ಅಧ್ಯಯನ ನಡೆದಿರುವುದು ಕಂಡುಬರುವುದಿಲ್ಲ. ಮುಂಬೈ ಪ್ರಾಂತದ ಕೆನರಾ ಗೆಝೆಟಿಯರಿನಲ್ಲಿ ಇವರ ವಿಷಯವಾಗಿ ಒಂದು ಪುಟದ ಪರಿಮಿತಿಯಲ್ಲಿ ಕೆಲವು ವಿವರಗಳು ಸಿಗುತ್ತವೆ. ಅಲ್ಲಿ ಇವರನ್ನು ಹಳ್ಳೇರ, ವಾಜಂತ್ರಿಗಳೆಂದು ಕರೆಯಲಾಗಿದೆ. ಹಾವನೂರು ವರದಿಯಲ್ಲಿ ಈ ಜಾತಿಯ ಪ್ರಸ್ತಾಪ ಮಾಡಲಾಗಿದ್ದು, ಇವರನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಲಾಗಿದೆ. ಶಾರೀರಿಕ ನಿಲುವು, ಉಡುಗೆ, ತೊಡುಗೆ, ಆಹಾರ ವಿಚಾರ ಹಾಗೂ ಜೀವನ ವಿಧಾನಗಳಲ್ಲಿ ಇವರು ಬಹುಮಟ್ಟಿಗೆ ಆಗೇರು, ಮುಕ್ರಿ ಮುಂತಾದ ಪರಿಶಿಷ್ಟ ಜಾತಿಗಳನ್ನು ಹೋಲುವುದರಿಂದ ಇವರನ್ನು ಆ ಗುಂಪಿನಲ್ಲಿ ಮಿಲಿತಗೊಳಿಸಬಹುದಾಗಿದೆ. ಕರ್ನಾಟಕದಲ್ಲಿ ಹಳ್ಳೀರ್, ಹಣಬ, ಹಳಬ, ಅರಿಯ ಎಂಬ ಜಾತಿಗಳಿವೆ: ಈ ಜಾತಿಗಳಿಗೂ ಉತ್ತರ ಕನ್ನಡ ಜಿಲ್ಲೆಯ ಹಳ್ಳೇರಿಗೂ ಏನಾದರೂ ಸಂಬಂಧವಿದೆಯೇ ಎನ್ನುವುದು ಹೆಚ್ಚಿನ ಸಂಶೋಧನೆಯಿಂದ ದೃಢಪಡಬೇಕಾಗಿದೆ.

    ಹಳ್ಳೇರ್ ದೇವಾಲಯ

ಕರ್ನಾಟಕದಲ್ಲಿ ವಾಸಿಸುತ್ತಿರುವ ಒಂದು ವಿಶಿಷ್ಟವಾದ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಹಳ್ಳೇರು, ಮೂಲತಃ ಆಂಧ್ರದ ತಿರುಮಲೆಯ ಭಾಗದಿಂದ ವಲಸೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಗೋವಾದ ಪಂಜಿಂ ಭಾಗದಲ್ಲಿ ಸೋಂದೆಯರು ಆಳ್ವಿಕೆ ನಡೆಸುತ್ತಿದ್ದಾಗ ಹಳ್ಳೇರು ಸಮುದಾಯವು ಅವರ ಸಂಗೀತಗಾರರಾಗಿ ಕುಪ್ಪಳ್ಳಿಯಲ್ಲಿ ನೆಲೆಸಿದ್ದರು. ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಹಳ್ಳೇರು ಸಮುದಾಯದ ಜನಸಂಖ್ಯೆ 2,790. ಹೆಂಗಸರು -1,332, ಗಂಡಸರು - 1,458. ಒಟ್ಟು ಜನಸಂಖ್ಯೆಯ ಸುಮಾರು ಶೇ.95ರಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ. ಇವರು ಮುಖ್ಯವಾಗಿ ಮನೆಯ ಭಾಷೆಯಾಗಿ ಹಾಗೂ ಇತರರೊಂದಿಗೆ ವ್ಯವಹರಿಸಲು ಹಾಗೂ ಲಿಪಿಗಾಗಿ ಕನ್ನಡ ಭಾಷೆಯನ್ನು ಅವಲಂಬಿಸಿದ್ದಾರೆ. ಮಾಂಸಾಹಾರ ಇವರ ದಿನನಿತ್ಯದ ಆಹಾರ. ಕಾಡು ಹಂದಿಯನ್ನು ಬಹಳ ಇಷ್ಟಪಟ್ಟು ಬೇಟೆಯಾಡಿ ತಿನ್ನುತ್ತಾರೆ. ದಿನನಿತ್ಯದ ಆಹಾರವಾಗಿ ಅಕ್ಕಿ, ರಾಗಿ ಕಡಲೆ ಎಣ್ಣೆ ಹಾಗೂ ತೆಂಗಿನ ಎಣ್ಣೆಯನ್ನು ಅಡುಗೆಗಾಗಿ ಬಳಸುತ್ತಾರೆ. ಹಳ್ಳೇರ್ ಸಮುದಾಯದ ಗಂಡಸರು ಮದ್ಯಪಾನಪ್ರಿಯರು, ಆದರೆ ಹೆಂಗಸರು ಕೇವಲ ಹಬ್ಬ, ಮದುವೆ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೇವಿಸುತ್ತಾರೆ. ಎಲೆ ಅಡಿಕೆ ಜಗಿಯುವುದು ಹೊಗೆಸೊಪ್ಪಿನ ಅಭ್ಯಾಸ ಇವರಲ್ಲಿದೆ.

ವಾದ್ಯ ನುಡಿಸುವುದು, ಬೇಟೆ, ಒಟ್ಟಿಗೆ ಸೇರಿ ಸಂಪ್ರದಾಯ ಆಚರಣೆ, ವ್ಯವಸಾಯ, ಕೂಲಿ ಕೆಲಸ ನಿರ್ವಹಿಸುತ್ತಾರೆ. ಇತರ ಸಂದರ್ಭದಲ್ಲಿ ಬುಟ್ಟಿ ತಯಾರಿಸಿ, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ಕೆಲವೇ ಕೆಲವರು ಸರಕಾರಿ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗದಲ್ಲಿದ್ದಾರೆ. ಕುಲದೇವರು- ತಿರುಪತಿಯ ವೆಂಕಟರಮಣ ಹಾಗೂ ಗೇರುಸೊಪ್ಪೆ ಹನುಮಂತ. ಕಾಡಿನ ಹಬ್ಬವೇ ಇವರ ಮುಖ್ಯಹಬ್ಬ. ಗೋಡೆ ಹಾಗೂ ನೆಲದ ಮೇಲಿನ ಚಿತ್ತಾರ ರಚಿಸುವುದರಲ್ಲಿ ನಿಷ್ಣಾತರು. ಮಹಾರಾಷ್ಟ್ರದಲ್ಲಿ ವಾದ್ಯಗಾರರನ್ನು ಹಳ್ಳೇರ ಮತ್ತು ಭಜಂತ್ರಿ ಎಂದು ಕರೆಯುತ್ತಾರೆ. ಅಂದರೆ ವಾದ್ಯ ನುಡಿಸುವವರು ಎಂದರ್ಥ. ಅಲ್ಲದೆ ಶಹನಾಯಿ ನುಡಿಸುವುದರಿಂದ ಶಹನಾಯಿ ಎಂದೂ ಕೂಡ ಕರೆಯುತ್ತಾರೆ. ಇವರು ಪೂನಾ, ನಾಸಿಕ್, ಅಹ್ಮದ್‌ನಗರ, ಕೊಲ್ಹಾಪುರ, ಸಾಂಗ್ಲಿ, ಸತಾರ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಹಳ್ಳೇರಿಗೆ ತಮ್ಮ ಮೂಲಸ್ಥಾನದ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ‘‘ನಮ್ಮ ಹಿರಿಯರ ಕಾಲದಿಂದಲೂ ನಾವು ಇಲ್ಲಿಯೇ ನೆಲೆಸಿದವರು’’ ಎಂದು ಹೇಳುತ್ತಾರೆ. ಸದ್ಯದ ಮಟ್ಟಿಗೆ ಇವರು ಉತ್ತರ ಕನ್ನಡ ಜಿಲ್ಲೆಯ ಮೂಲ ನಿವಾಸಿಗಳು ಎಂದು ಊಹಿಸುವುದೇ ಸೂಕ್ತ.

ಮುಂಬೈ ಪ್ರಾಂತದ ಕೆನರಾ ಗೆಝೆಟಿಯರಿನಲ್ಲಿ ಹಳ್ಳೇರು ಬಾಡ, ಸಿದ್ಧಾಪುರ, ಶಿವೇಶ್ವರ, ಮಾಜಾಳಿ, ಕಡ್ವಾಡ, ಕಾರವಾರ, ಅಂಕೋಲಾ, ಕರ್ಕಿ ಹಳ್ದೀಪುರಗಳಲ್ಲಿ ನೆಲೆಸಿದ ವಿವರವಿದೆ. ಕನ್ನಡ ಮಾತನಾಡುವ ಹಳ್ಳೇರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಹಾಗೂ ದಕ್ಷಿಣ ಕನ್ನಡದ ಕಿರುಮಂಜೇಶ್ವರ, ಮರವಂತೆ, ಕುಂದಾಪುರದವರೆಗೆ ತಮ್ಮ ನೆಲೆಗಳಿವೆಯೆನ್ನುತ್ತಾರೆ. ಕಾರವಾರ ತಾಲೂಕಿನ ಸದಾಶಿವಗಡದಲ್ಲಿ ಕೊಂಕಣಿ ಮಾತನಾಡುವ ಹಳ್ಳೇರಿದ್ದಾರೆಂದು ಹೇಳುತ್ತಾರೆ. ಬಹುಶಃ ಬಾಡ, ಸಿದ್ದರ, ಶಿವೇಶ್ವರ ಮಾಜಾಳಿ ಮುಂತಾದ ಕಾರವಾರ ತಾಲೂಕಿನ ಹಳ್ಳೇರು ಕೊಂಕಣಿ ಮಾತನಾಡುವುದನ್ನು ರೂಢಿಸಿಕೊಂಡು ಕ್ರಮೇಣ ಕನ್ನಡ ಮಾತಾಡುವ ಹಳ್ಳೇರಿಂದ ಪ್ರತ್ಯೇಕಗೊಂಡಿರಬೇಕು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಂಡಳ್ಳಿ, ತೇರನಮಕ್ಕಿ, ಹೊನ್ನಾವರ ತಾಲೂಕಿನ ಮಂಕಿ, ಹಡಿನಬಾಳ, ಮೂಡ್ಕಣಿ, ಕಡಗೇರಿ, ಖರ್ವಾ, ಅಳ್ಳಂಕಿ, ಸಂಸಿ, ಜಲವಳ್ ಕರ್ಕಿ, ತಲಗೋಡು, ಹಾಡಗೇರಿ, ಗುಂಡೀಬೈಲ್, ಇಡಗುಂಜಿ, ಮಾಳಕೋಡು, ಕುಮಟಾ ತಾಲೂಕಿನ ಹಿರೇಗುತ್ತಿ, ಎಣ್ಣೆಮಡಿ, ಮೊರಬ, ಮಾದನಗೇರಿ, ಬಾಡ, ಕಾಗಾಲ ಹಾಗೂ ಅಂಕೋಲಾ ತಾಲೂಕಿನ ಅಚವೆ, ಚಿನಗಾರ ಕೇಸೂಳ್ಳಿ, ಕುಂಟಕಣಿ, ಮಾಜ್ಗಿ ಮುಂತಾದ ಹಳ್ಳಿಗಳಲ್ಲಿ ಹಳ್ಳೇರ ನೆಲೆಗಳನ್ನು ಗುರುತಿಸಲಾಗಿದೆ.

     ಬಿದಿರಿನ ಬುಟ್ಟಿಗಳು ಮತ್ತು ಮಡಕೆ

►ಹಳ್ಳೇರು ಪದ ನಿಷ್ಪತ್ತಿ

ಹಳ್ಳೇರ್ ಸಮುದಾಯದವರ ಅಭಿಪ್ರಾಯದಂತೆ, ಹಿಂದೆ ಹಳ್ಳಿ ಹಳ್ಳಿಗೆ, ಹೋಗಿ ಗದ್ದೆ ಹೊಡೆಯುವ, ದನಕಾಯುವ, ಕಸ ಗುಡಿಸುವ, ಸೌದೆ, ಸೊಪ್ಪು ತರುವ ಕೆಲಸಗಳನ್ನು ಮಾಡುತ್ತಿದ್ದರು. ಕೆಲವೊಮ್ಮೆ ಎಷ್ಟೇ ಬೇಡಿದರೂ ಮೂರು-ನಾಲ್ಕು ದಿನ ಕೆಲಸ ದೊರೆಯುತ್ತಿರಲಿಲ್ಲ. ಅದಕ್ಕೆ ಪ್ರತಿಯಾಗಿ ದಿನಕ್ಕೆ ನಾಲ್ಕಾಣೆ, ಒಂದು ತಪ್ಪಲೆ ಅನ್ನ, ಗೆರಟೆ ಸಾರು, ಚೊಂಬು ರಾಗಿ ಗಂಜಿಯನ್ನು ಪಡೆಯುತ್ತಿದ್ದರು. ಕೆಲವೊಮ್ಮೆ ಉಪವಾಸವೇ ಗತಿಯಾಗುತ್ತಿತ್ತು. ಈ ಪ್ರದೇಶಕ್ಕೆ ತುಂಬಾ ಹಳೆಯವರು ಹಾಗೂ ಮೂಲಿಗರಾಗಿರುವುದರಿಂದ ಹಳೇ ಪೈಕಿಯವರು ಹಳ್ಳೇರು ಆಗಿರಬಹುದು.

ಉತ್ತರಕನ್ನಡ ಜಿಲ್ಲೆಯ ಹಳ್ಳೇರಲ್ಲಿ ಜನಪದ ಸಾಹಿತ್ಯ ವಿಪುಲವಾಗಿದೆ. ಇತ್ತೀಚಿಗೆ ನಗರ ನಾಗರಿಕತೆಯ ಪ್ರವೇಶದಿಂದಾಗಿ ಅವರಲ್ಲಿ ಜನಪದ ಸಾಹಿತ್ಯ ಸೃಷ್ಟಿ ಕ್ಷೀಣಿಸತೊಡಗಿದೆ.ಹಾಡುಗಳು, ಪದಗಳು, ಕಥನ ಗೀತಗಳು, ಗದ್ಯ ಕಥೆಗಳು, ಒಗಟುಗಳು ಹೀಗೆ ಹಳ್ಳೇರ್ ಸಮುದಾಯದಲ್ಲಿ ಜಾನಪದ ನಿಕ್ಷೇಪವೂ ಇದೆ. ಹಾಡು ಹಾಗೂ ಪದ ಏಕಾರ್ಥವನ್ನು ಕೊಡುತ್ತದೆಯಾದರೂ ಉತ್ತರ ಕನ್ನಡ ಜಿಲ್ಲೆಯ ಜಾನಪದರಲ್ಲಿ ಅವುಗಳಿಗೆ ಭಿನ್ನಾರ್ಥಗಳಿವೆ. ಅವರು ಹೆಂಗಸರು ಹಾಡುವ ಗೀತಗಳನ್ನು ಹಾಡುಗಳೆಂದು ಕರೆದರೆ, ಗಂಡಸರು ಹೇಳುವ ಗೀತಗಳನ್ನು ‘ಪದ’ಗಳೆಂದು ಕರೆಯುತ್ತಾರೆ.

ಹಳ್ಳೇರರು ಕನ್ನಡದ ಉಪಭಾಷೆಯನ್ನು ಮಾತನಾಡುತ್ತಾರೆ. ಜಿಲ್ಲೆಯ ವಿವಿಧ ಎಡೆಗಳಲ್ಲಿ ವಾಸಿಸುವ ಇವರು ತಮ್ಮ ವಿಶಿಷ್ಟವಾದ ಆಡುಮಾತುಗಳಲ್ಲಿ ಪ್ರಾದೇಶಿಕ ನುಡಿಗಳನ್ನು ಅನುಸರಿಸುತ್ತಾರೆ. ತಾವು ವಾಸಿಸುವ ಊರಿನ ಇತರ ಜಾತಿಗಳ ಭಾಷೆಯ ಪ್ರಭಾವವೂ ಇವರ ಭಾಷೆಯ ಮೇಲೆ ಆಗಿರುವುದು ಸ್ಪಷ್ಟವಾಗಿದೆ. ಉದಾಹರಣೆಗೆ ಹಿರೇಗುತ್ತಿಯ ಹಳ್ಳೇರರ ಭಾಷೆಯ ಮೇಲೆ ನಾಡವ ಜಾತಿಯ ಭಾಷೆಯ ಪ್ರಭಾವ ಮೊರ್ಬಾದ ಹಳ್ಳೇರರ ಭಾಷೆಯ ಮೇಲೆ ಗಾವೊಕ್ಕಲ (ಪಟಗಾರ) ಜಾತಿಯ ಭಾಷೆಯ ಪ್ರಭಾವ, ಬಾಡದ ಹಳ್ಳೇರರ ಭಾಷೆಯ ಮೇಲೆ ನಾಮಧಾರಿಗಳ ಭಾಷೆಯ ಪ್ರಭಾವವಾಗಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಇದು ಹೆಚ್ಚಿನ ಉಪಭಾಷೆಗಳಿಗೆ ಅನ್ವಯಿಸುವ ಮಾತಾಗುತ್ತದೆ. ಹಳ್ಳೇರರಲ್ಲಿ ಸ್ತ್ರೀಲಿಂಗ ಬಳಕೆಯಲ್ಲಿಲ್ಲ. ಅವರು ಸ್ತ್ರೀಲಿಂಗ ಏಕವಚನವನ್ನು ನಪುಂಸಕ ಏಕವಚನದಂತೆ, ಬಹುವಚನವನ್ನು ಪುಲ್ಲಿಂಗ ಬಹುವಚನದಂತೆ ಬಳಸುತ್ತಾರೆ. ಇತ್ತೀಚೆಗೆ ಅಕ್ಷರಾಭ್ಯಾಸವನ್ನು ಪಡೆದವರು ಮಾತ್ರ ಶಿಷ್ಟ ಭಾಷೆಯ ಬಳಕೆ ಮಾಡುವುದನ್ನು ಕಾಣುತ್ತೇವೆ.

ಹಳ್ಳೇರರು ಎತ್ತರದ ನಿಲುವುಳ್ಳವರಲ್ಲ. ಹುರಿಕಟ್ಟಾದ, ಗಟ್ಟಿಯಾದ ಕಪ್ಪುವರ್ಣದ ಕುಳ್ಳದೇಹಿಗಳು. ಮೈಮೇಲೆ ಕೂದಲು ಕಡಿಮೆಯಾಗಿದ್ದು, ಆಕರ್ಷಕ ಮೈಕಟ್ಟು ಉಳ್ಳವರು, ಸಭ್ಯರು, ಗುಣವಂತರು. ಒಟ್ಟಾಗಿ ದ್ರಾವಿಡ ಗುಣಲಕ್ಷ್ಮಣಗಳುಳ್ಳ ದೇಹ ಪ್ರಕೃತಿ ಇವರದ್ದಾಗಿರುತ್ತದೆ. ಇವರು ಬಹುತೇಕವಾಗಿ ಕೂಲಿ ಕಾರ್ಮಿಕರಾಗಿದ್ದು, ಚೀರೆಕಲ್ಲು ಕಡಿಯುವುದು, ಮನೆ ಗಾರೆ ಕೆಲಸ, ರಸ್ತೆ ಹೊಲ ಗದ್ದೆ, ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಾರೆ. ಶೇ.99ರಷ್ಟು ಭಾಗ ಹಳ್ಳೇರರು ಭೂಮಿ ವಂಚಿತರಾಗಿದ್ದು, ಬದುಕಿಗೆ ಕೂಲಿಯೇ ಆಧಾರವಾಗಿರುತ್ತದೆ. ಗಂಡಸರು ಕಚ್ಚೆಯುಟ್ಟು ಸೊಂಟಕ್ಕೆ ಅಡ್ಡ ಪಂಚೆ ಬಿಗಿದುಕೊಳ್ಳುತ್ತಾರೆ. ಕೆಲಸಕ್ಕೆ ಹೋಗುವಾಗ ತಲೆಗೆ ರುಮಾಲು ಸುತ್ತಿಕೊಂಡು ಕಂಬಳಿ ಸೂಡಿಯನ್ನು ಹಾಕುವುದುಂಟು. ಹೆಂಗಸರ ಸೀರೆ ಉಡುವ ಪದ್ಧ್ದತಿಯು ಹಾಲಕ್ಕಿಗಳು ರವಿಕೆಯರಿದೆ ತೊಡುವ ಪದ್ಧತಿಯಂತಿರುತ್ತದೆ. ಇದೇ ತರಹದ ಪದ್ಧತಿಯನ್ನು ಉತ್ತರಕನ್ನಡ ಜಿಲ್ಲೆಯ ಗೊಂಡ, ಮುಕ್ರಿ, ಅಗೇರ ಸಮುದಾಯಗಳಲ್ಲಿಯೂ ಒಂದೇ ತೆರನಾದ ಸೀರೆ ಉಡುವ ಪದ್ಧತಿಯನ್ನು ಕಾಣಬಹುದಾಗಿದೆ. ಇತ್ತೀಚೆಗೆ ಹೆಣ್ಣು-ಗಂಡುಗಳಲ್ಲಿ ಆಧುನಿಕ ಪದ್ಧತಿಯ ಪೋಷಾಕುಗಳು ಬರತೊಡಗಿವೆ.

ಹಳ್ಳೇರು ಕುಲಚಿಹ್ನೆಯ ಉಪಾಸಕರಾಗಿದ್ದು, ಅವರಲ್ಲಿ ಹಲವಾರು ಪ್ರಾಣಿ ಹಾಗೂ ಗಿಡಬಳ್ಳಿಗಳ ಹೆಸರಿನ ಬಳಿಗಳಿವೆ. ಹಳ್ಳೇರಲ್ಲಿ ಅಜ್ಜಾರ ಬಳಿ ಗಂಗಾರ ಬಳಿ, ಹೊನ್ನ ಬಳಿ, ಅನ್ಬಳಿ, ಸಿರಿನಬಳಿ, ಸಿಟ್ಟಿಬಳಿ, ತೋಳಾರ ಬಳಿ, ಕುದ್ರಿ ಬಳಿ, ರಾಜ್ ಬಳಿ ಹೀಗೆ ಒಂಬತ್ತು ಬಳಿಗಳನ್ನು ಗುರುತಿಸಿದ್ದಾರೆ. ಇಂದು ಬಳಿಯ ಉಪಾಸನೆಯನ್ನು ಕಟ್ಟುನಿಟ್ಟಾಗಿ ಆಚರಿಸದ ಪ್ರಯುಕ್ತ ಬಳಿಗಳ ಹೆಸರುಗಳು ಇವರಲ್ಲಿ ಕಣ್ಮರೆಯಾಗುತ್ತಲಿವೆ. ಅಂತೆಯೇ ಕೆಲವು ಬಳಿಗಳ ಅರ್ಥ ಕಲ್ಪನೆಯೂ ಇವರಿಗೆ ಇದ್ದಂತಿಲ್ಲ. ಪ್ರತೀ ಬಳಿಯವರಿಗೆ ಅವರ ಬಳಿಯ ಗಿಡ, ಮರ, ಪ್ರಾಣಿಗಳು ಪವಿತ್ರವಾಗಿದ್ದು, ಅವುಗಳನ್ನು ಅವರು ನಾಶಪಡಿಸಲಾರರು. ಮದುವೆಯ ಕಾಲಕ್ಕೆ ಬಳಿಗಳ ಕಡೆಗೆ ವಿಶೇಷ ಗಮನ ಹರಿಸುವ ಪದ್ಧತಿ ಹಿಂದೆ ಇತ್ತು. ಒಂದೇ ಬಳಿಯವರಲ್ಲಿ ವಿವಾಹವನ್ನು ನಿಷೇಧಿಸಲಾಗುತ್ತಿತ್ತು. ತಮ್ಮಲ್ಲಿ ಬಳಿ ಮುಂದುವರಿಯುವುದು ಹೆಣ್ಣಿನಿಂದ ಎಂದು ಹೇಳಿದರೆ, ಮತ್ತೆ ಕೆಲವರು ಹೆಣ್ಣು ಹೆಣ್ಣಿನ ಬಳಿಗೆ, ಗಂಡು ಗಂಡಿನ ಬಳಿಗೆ ಸೇರುತ್ತಾರೆಂದು ಹೇಳುತ್ತಾರೆ. ಸಾಮಾನ್ಯವಾಗಿ ಬಳಿ ವ್ಯವಸ್ಥೆಯಿದ್ದ ಬುಡಕಟ್ಟುಗಳಲ್ಲಿ ಬಳಿ ಮುಂದುವರಿಯುವುದು ಹೆಣ್ಣಿನಿಂದ;

                   ಹಳ್ಳೇರು ಸಮುದಾಯದ ಕಲಾವಿದರು

►ಮನರಂಜನೆ

ಹಳ್ಳೇರರು ಯಕ್ಷಗಾನ ಪ್ರಿಯರು ದಿನನಿತ್ಯದ ಶ್ರಮದ ದುಡಿಮೆಯ ನಂತರ ಯಕ್ಷಗಾನ ಅವರ ಆಯಾಸವನ್ನು ಪರಿಹರಿಸುವ ಮನರಂಜನೆ ಯಾಗಿದೆ. ಎಲ್ಲೇ ಇದ್ದರೂ ಕುಟುಂಬ ಸಮೇತರಾಗಿ ವೀಕ್ಷಿಸಲು ತೆರಳುತ್ತಾರೆ. ರಾಮಾ ಹಳ್ಳೇರ, ಮಂಜು ಹಳ್ಳೇರ, ಬಿಳಲೆಯ ವಿಷ್ಣು ಹಳ್ಳೇರ, ‘ಬಾಡದ ಗಣಪತಿ ಹಳ್ಳೇರ, ಮೋರ್ಬಾದ ಬಾಳಾ ಹಳ್ಳೇರ ಮುಂತಾದವರು ಯಕ್ಷಗಾನ ಕಲಾವಿದರಾಗಿಯೂ ಬೆಳೆದಿದ್ದಾರೆ. ಇತ್ತೀಚೆಗೆ ಹೆಣ್ಣು ಮಕ್ಕಳು ಕೂಡ ಯಕ್ಷಗಾನದಲ್ಲಿ ಪಾತ್ರವಹಿಸುತ್ತಿದ್ದಾರೆ. ಉದಾಹರಣೆಗೆ ಹಿರೇಗುತ್ತಿಯ ಕಸ್ತೂರಿ ಹಳ್ಳೇರ. ಬಾಳಾ ಹಳ್ಳೇರ, ಮೋರ್ಬಾ ಇವರು ‘ಇಂದ್ರಾವಳಿ ವಿಲಾಸ’ ಮತ್ತು ‘ದೇವರತ್ತ ಕಾಳಗ’ ಎಂಬ ಎರಡು ಯಕ್ಷಗಾನ ರಚಿಸಿದ್ದಾರೆ. ಇದು ಹಲವಾರು ಊರುಗಳಲ್ಲಿ ಹಲವಾರು ಪ್ರದರ್ಶನ ಕಂಡಿದೆ. ಇವರು ಶ್ರೀ ಸತ್ಯನಾರಾಯಣ ಯಕ್ಷಗಾನ ಮಂಡಳಿ ರಚಿಸಿದ್ದಾರೆ.

ಹಳ್ಳೇರರು ಕೋಳಿ ಅಂಕಕ್ಕಾಗಿಯೇ ಹುಂಜಗಳನ್ನು ಸಾಕುತ್ತಾರೆ. ಇತರ ಸಮುದಾಯಗಳೊಂದಿಗೆ ಕೋಳಿ ಅಂಕ ನಡೆಸುತ್ತಾರೆ. ಊರಹಬ್ಬ ಜಾತ್ರೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಕೋಳಿ ಅಂಕ ಏರ್ಪಡಿಸುತ್ತಾರೆ. ಅಂಕಕ್ಕೆ ಹೊರಡುವ ಮೊದಲು ಮನೆ ದೇವರಿಗೆ ಪೂಜೆ ಸಲ್ಲಿಸಿ, ಸೊಪ್ಪಿನೊಂದಿಗೆ ತೆಂಗಿನಕಾಯಿ ವೀಳ್ಯಪಟ್ಟಿ ದೇವರ ಮುಂದಿರಿಸಿ ‘ನಾ ಮೈಯೇ ಮೈನಾಗಿ’ ಎಂದು ಬೇಡಿಕೊಂಡು ಹುಂಜಕ್ಕೆ ಅಕ್ಕಿ ಹಾಕಿ ಕಾಳಗಕ್ಕೆ ಕೊಂಡೊಯ್ಯುತ್ತಾರೆ. ಊರಿನ ನಿರ್ದಿಷ್ಟ ಜಾಗ ಹಾಗೂ ಸಮಯದಲ್ಲಿ ಅಂಕ ನಡೆಯುತ್ತದೆ. ಈ ಕಾಳಗದಲ್ಲಿ ಎರಡು ಕೋಳಿ ಕಾಲಿಗೂ ಹರಿತವಾದ ಚಿಕ್ಕ ಬಾಕನ್ನು ಕಟ್ಟುತ್ತಾರೆ. ಪ್ರೇಕ್ಷಕರು ಹುಂಜದ ಮೇಲೆ ಬಾಜಿ (ಬೆಟ್) ಕಟ್ಟುತ್ತಾರೆ. ಒಂದು ಕೋಳಿ ಸಾಯುವವರೆಗೂ ಆಟ ಮುಂದುವರಿಯುತ್ತದೆ. ಸತ್ತ ಹುಂಜ ಗೆದ್ದವರ ಪಾಲಾಗುತ್ತದೆ. ಸಂಜೆ ಅದರ ಸಾರು ಮಾಡಿ ಬಂಧುಬಳಗ ಸ್ನೇಹಿತರೊಂದಿಗೆ ಭೋಜನ ಸವಿಯುತ್ತಾರೆ.

ಕೋಳಿಗೆ ಕತ್ತಿ ಕಟ್ಟುವುದು ವಿಶೇಷ ಕಲೆ. ಅದರ ಮೇಲೆ ಹುಂಜದ ಜಯ ನಿರ್ಧಾರವಾಗುತ್ತದೆ. ಅದಕ್ಕೆ ಪರಿಣಿತರಿರುತ್ತಾರೆ. ಗೆದ್ದವರು ತಮ್ಮ ಕಡೆಯ ಪರಿಣಿತರಿಗೆ ಗೌರವ ಧನ ನೀಡುತ್ತಾರೆ.

ಹಳ್ಳೇರ ಮುಖಂಡನಿಗೆ ಯಜಮಾನನೆಂದು ಕರೆಯುತ್ತಾರೆ. ಹಿಂದೆ 12 ಹಳ್ಳಿಗಳನ್ನು ಒಟ್ಟಿಗೆ ಸೇರಿಸಿ, ಯಜಮಾನನೆಂದು ನೇಮಿಸಿಕೊಳ್ಳಲಾಗುತ್ತಿತ್ತು. ಸದ್ಯಕ್ಕೆ ಈಗ ಹಳ್ಳಿಗೆ ಮುಖ್ಯಸ್ಥನಾಗಿ ಯಜಮಾನನು ಇರುತ್ತಾನೆ. ಅವರಿಗೆ ಸಹಾಯಕನಾಗಿ ಒಬ್ಬ ಕೋಲಕಾರನಿರುತ್ತಾನೆ. ತಮ್ಮಲ್ಲಿ ಏನೇ ತಂಟೆ ತಕರಾರು, ಧರ್ಮ, ಪೂಜೆ ಪುರಸ್ಕಾರ, ಸಾಂಪ್ರಾದಾಯಿಕ ವಿಧಿ ವಿಧಾನಗಳ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಸಭೆೆಯನ್ನು ಕರೆಯಲಾಗುತ್ತದೆ. ಅದನ್ನು ‘‘ಕೂಟ’’ ಎಂದು ಕರೆಯಲಾಗುತ್ತದೆ. ಅಲ್ಲಿ ಯಜಮಾನ ಮತ್ತು ಕೋಲಕಾರರು ಪ್ರಮುಖ ಪಾತ್ರವಹಿಸುತ್ತಾರೆ. ಅಪರಾಧಿಗಳಿಗೆ ದಂಡ ವಿಧಿಸುವ ಅಧಿಕಾರವು ಅವರಿಗಿರುತ್ತದೆ.

ಇವರಲ್ಲಿ ಸಾಕ್ಷರತಾ ಪ್ರಮಾಣ ಶೇಕಡಾ ಇಪ್ಪತ್ತನ್ನು ಮಿರಲಾರದು. ಹೈಸ್ಕೂಲು ಮತ್ತು ಕಾಲೇಜಿಗೆ ಹೋಗುವವರ ಸಂಖ್ಯೆ ನೂರಕ್ಕೆ ಎರಡೋ ಮೂರೋ ಇರಬಹುದು. ದಟ್ಟ ದಾರಿದ್ರ್ಯದಿಂದ ಬದುಕು ಬಾಳುತ್ತಿರುವ ಇವರು ಶೈಕ್ಷಣಿಕವಾಗಿ ತೀರ ಹಿಂದುಳಿದು ಮೇಲ್ವರ್ಗದವರ ಶೋಷಣೆಗೆ ಒಳಗಾಗಿ ಯಾತನಾಮಯ ಬದುಕು ಬಾಳುತ್ತಿದ್ದಾರೆ. ಹಳ್ಳೇರರು ಸೋಮಾರಿಗಳಲ್ಲ, ಚೆನ್ನಾಗಿ ದುಡಿಯುವವರು, ಸಭ್ಯರು, ತೀರ ಬಡವರಾದ ಇವರು ಸ್ವಂತ ಹೊಲಗದ್ದೆಗಳನ್ನು ಹೊಂದಿರದ ಪ್ರಯುಕ್ತ ಭೂಮಾಲಕರಾದ ಹವ್ಯಕರು, ನಾಡವರು ಮುಂತಾದವರ ಹೊಲ ಗದ್ದೆಗಳಲ್ಲಿ ತೋಟ ಪಟ್ಟಿಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುವುದೇ ಹೆಚ್ಚು. ಕೆಲವರು ಹೊಟ್ಟೆಗಿಲ್ಲದ ಸಮಯದಲ್ಲಿ ಭೂಮಾಲಕರಲ್ಲಿ ಸಾಲಮಾಡಿ, ಸಾಲ ತೀರಿಸಲಾಗದೇ ಅವರ ಮನೆಯಲ್ಲಿ ಒತ್ತೆಯಾಳಾಗಿ ದುಡಿಯುವುದೂ ಇಲ್ಲದಿಲ್ಲ. ಹಲವರು ಗೇಣಿ ಗದ್ದೆಯನ್ನು ಮಾಡಿ ಹೊಟ್ಟೆ ಹೊರಕೊಳ್ಳುವವರೂ ಇದ್ದಾರೆ. ಕೆಲವರು ಕಲ್ಲು ಗಣಿಗಳಲ್ಲಿ ಕೂಲಿಯಾಳುಗಳಾಗಿ, ಹೊರೆಯಾಳುಗಳಾಗಿ ಜೀವನ ಸಾಗಿಸುತ್ತಾರೆ.

►ವಿಧವಾ ವಿವಾಹ

ಹಳ್ಳೇರರಲ್ಲಿ ವಿಧವಾ ವಿವಾಹ ಚಾಲ್ತಿಯಲ್ಲಿದೆ. ಇದಕ್ಕೆ ಉಳಗಾರ್ತಿ ಮದುವೆ ಎಂದು ಕರೆಯುತ್ತಾರೆ. ವಿಧವೆ ಮತ್ತು ವಿಧುರರ ನಡುವೆ ಮಾತ್ರ ಇಂಥಹ ಮದುವೆ ನಡೆಯುತ್ತದೆ. ಉಳಗಾರ್ತಿ ಮದುವೆಯಲ್ಲಿ ಕೆಲವು ನಿಷೇಧಗಳು, ಕಟ್ಟುಪಾಡುಗಳಿವೆ. ವಿಧುರ ಅವಿವಾಹಿತೆಯನ್ನು ಮದುವೆಯಾಗಬಹುದು. ಆದರೆ ವಿಧವೆ ಅವಿವಾಹಿತನನ್ನು ಮದುವೆಯಾಗುವಂತಿಲ್ಲ. ಈ ಉಳಗಾರ್ತಿ ಮದುವೆಗೆ ವಾದ್ಯಗಳಿಲ್ಲ. ಪುರೋಹಿತರಿಲ್ಲ, ಕಿಕ್ಕಿರಿದ ಜನಸಮುದಾಯವಿರುವುದಿಲ್ಲ. ಅತ್ಯಂತ ಸರಳವಾಗಿ ಈ ಮದುವೆ ನಡೆಯುತ್ತದೆ.

ಒಂದು ಊಹೆಯ ಪ್ರಕಾರ ಪಂಚವಾದ್ಯಗಳಲ್ಲಿ ಪ್ರಾವೀಣ್ಯತೆಯನ್ನು ಹೊಂದಿರುವ ಈ ಸಮುದಾಯವನ್ನು ಸೋಂದೆ ಮತ್ತು ಕದಂಬ ಅರಸರು ಮಹಾರಾಷ್ಟ್ರದ ಭಾಗಗಳಿಂದ ಇಲ್ಲಿ ತಂದು ಬಳಸಿ ಬಿಸಾಕಿದರೆಂಬ ಪ್ರತೀತಿಯಿದೆ. ನಂತರ ತಮ್ಮ ಬದುಕಿಗಾಗಿ ಸಮುದ್ರದ ದಡದಲ್ಲಿ ಇರುವ ‘ಗಜನಿ’ (ನದಿ ನೀರು ಸಮುದ್ರಕ್ಕೆ ಸೇರುವ ಮುನ್ನ ಆಸುಪಾಸುಗಳಲ್ಲಿ ಇರುವ ಜಾಗವನ್ನು ಗಜನಿ ಜಾಗವೆಂದು ಕರೆಯುತ್ತಾರೆ. ಅಲ್ಲಿ ಕೆಲವೊಮ್ಮೆ ಸಿಹಿ ನೀರು, ಕೆಲವೊಮ್ಮೆ ಉಪ್ಪು ನೀರು, ಮಗದೊಮ್ಮೆ ಸಿಹಿ ಉಪ್ಪು ನೀರಿರುವ ವಿಶೇಷ ಪರಿಸರ ನಿರ್ಮಾಣವಾಗಿರುವ ಜಾಗ) ಜಾಗಗಳಲ್ಲಿ ಭತ್ತ, ತರಕಾರಿ ಬೆಳೆದು ಬದುಕುತ್ತಿದ್ದ ಸಮುದಾಯ ಹಳ್ಳೇರ ಸಮುದಾಯ. ಆದರೆ 1962 ಜೂನ್ 7 ರಂದು ಅವರ ಬದುಕಿನ ಮರಣ ಶಾಸನದ ದಿನವಾಗಿತ್ತು. ಕಾರಣ ಆಗ ಸುನಾಮಿಯಂತೆ ಅಬ್ಬರಿಸಿ ಬಂದ ಅಲೆಯ ನೆರೆ ಅವರ ಅಷ್ಟೂ ಗಜನಿಯ ಮೇಲೆ ಪ್ರಹಾರ ಮಾಡಿ ಅವರ ಬದುಕನ್ನು ಕಸಿದುಕೊಂಡಿತು. ಇದರಿಂದಾಗಿ 1,800 ಎಕರೆ (ವಿವಿಧ ಸಮುದಾಯಗಳದ್ದು ಸೇರಿ) ಅದರಲ್ಲಿ 800 ಎಕರೆ ಜಾಗ ಹಳ್ಳೇರರಿಗೆ ಸಂಬಂಧಪಟ್ಟ ಗಜನಿ ಜಾಗದಲ್ಲಿ 5 ಅಡಿ ಎತ್ತರಕ್ಕೆ ನೀರು ಶಾಶ್ವತವಾಗಿ ನಿಂತ ಕಾರಣ ಅವರು ಗಜನಿ ಭೂಮಿಯನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಯಿತು. ಆಗ ಆ ಜಾಗವನ್ನು ಸರಕಾರ ತನ್ನ ಸುಪರ್ದಿಗೆ ತೆಗೆದುಕೊಂಡು ಉಪ್ಪಿನ ಉತ್ಪಾದನೆಗಾಗಿ ಬೃಹತ್ ಕಂಪೆನಿಗಳಿಗೆ ಮಾರಿಕೊಂಡಿತು. ಆದರೆ ಇವರುಗಳಿಗೆ ವಸತಿಗಾಗಿ ಮಾತ್ರ ಮನೆ ಕಟ್ಟಿಕೊಡಲು ಬಿಟ್ಟ ಜಾಗಗಳು ಈಗ ಸದ್ಯದ ಹಳ್ಳೇರರ ಕೊಪ್ಪಗಳಾಗಿ ಮಾರ್ಪಟ್ಟಿವೆ.

  ಶುಭ ಸಮಾರಂಭಗಳಲ್ಲಿ ಬಳಸುವ ವಾದ್ಯಗಳು

►ಆಹಾರ ಪದ್ಧತಿ

ಹಳ್ಳೇರಿಗೆ ಕುಚಲಕ್ಕಿಯ ಗಂಜಿ, ಒಣ ಮೀನು ದೈನಂದಿನ ಆಹಾರ, ರಾಗಿ ಇಲ್ಲವೆ ಬೆಳ್ತಕ್ಕಿ ಅಂಬಲಿ ಸೇವಿಸುತ್ತಾರೆ. ರಾತ್ರಿ ಹೊತ್ತು ಅನ್ನ, ಮೀನು ಪಳದಿ ಉಣ್ಣುತ್ತಾರೆ. ಹಳ್ಳ ಕೆರೆಗಳಲ್ಲಿ ದೊರೆಯುವ ಸಣ್ಣ ಸಣ್ಣ ಮೀನುಗಳನ್ನು ಹಿಡಿದು ತಿನ್ನುತ್ತಾರೆ. ರಾತ್ರಿ ಹೊತ್ತಿನಲ್ಲಿ ತೆಂಗಿನ ಗರಿಯ ಚೂಡಿ ಹಿಡಿದುಕೊಂಡು ಕತ್ತಿಯಿಂದ ಕಡಿದು ಮೀನು ಬೇಟೆಯಾಡುವುದರಲ್ಲಿ, ಏಡಿಗಳನ್ನು ಕಡಿದು ತರುವಲ್ಲಿ ಹಳ್ಳೇರಿಗೆ ತುಂಬ ಆಸಕ್ತಿ. ಇವರು ಹಿಡಿಯುವ ಮೀನುಗಳಲ್ಲಿ ಮಳ್ಳಿ, ಕಾಗಳಸಿ, ಮಡ್ಲೆ, ಬಾಳೆ, ಶಾಡಿ, ನೊಗ್ಲ, ಕಾಂಡಿ, ಹೆಮ್ಮಲಗ ಹಾಗೂ ಗುರುಕು, ಪಚ್ಚು ಜಾತಿಯ ಮೀನುಗಳಿರುತ್ತವೆ. ಕಪ್ಪೆ ಚಿಪ್ಪುಗಳನ್ನು ತಂದು ಮಸಾಲೆ ಹಾಕಿ ಬೇಯಿಸಿ ತಿನ್ನುತ್ತಾರೆ. ಇದಲ್ಲದೆ ಒಡೆಯನ ಮನೆಯವರು ನೀಡುವ ತಂಗಳನ್ನ, ಸಾರು ರೊಟ್ಟಿ ಇವುಗಳನ್ನು ಆಹಾರವಾಗಿ ಬಳಸುವುದುಂಟು.

ಹಳ್ಳೇರರು ಮಾಂಸಹಾರಿಗಳು. ಮುಖ್ಯವಾಗಿ ಬೇಟೆಯಾಡಿದ ಹಂದಿ, ಮೀನನ್ನು ಹೆಚ್ಚಾಗಿ ಬಳಸುತ್ತಾರೆ. ಆಮೆಯನ್ನು ಹೆಚ್ಚಾಗಿ ಇಷ್ಟಪಟ್ಟು ಸೇವಿಸುತ್ತಾರೆ.. ಬಂಗಡೆ, ಕಾರ್ಚಿ, ಗುರ್ಕು, ಇಸಡಿ, ಸೈಡಿ ಚಾಲಿ, ಮಳೆಗಾಲದ ಕೆರೆ ಹೊಂಡದ ಮೀನುಗಳು, ಜಟ್ಟುಗಳು, ಕಲ್ಲೆಸಡಿ, ಹೊಂಟೆ, ಗುಳ್ಳೇಗಳನ್ನು ತಿನ್ನುತ್ತಾರೆ. ಮೀನುಗಳಿಗೆ ಗಾಳಿ, ಕುಳಿ ಹಾಕಿ ಹಿಡಿಯುತ್ತಾರೆ. ಪಕ್ಷಿಗಳನ್ನು ಬೇಟೆಯಾಡುವಾಗ ಕಣ್ಗೆಯನ್ನು ಉಪಯೋಗಿಸುತ್ತಾರೆ. ಇವರು ವರ್ಷಕ್ಕೆ ಎರಡು ಸಲ ಬೇಟೆಯಾಡಲೇಬೇಕು. ಇಲ್ಲವಾದರೆ ದನಕರು, ಊರಿಗೆ ತೊಂದರೆ ಎಂಬುದು ಅವರ ನಂಬಿಕೆ, ಹಿಂದೆ ಒಂದು ವಾರದ ಕಾಲ ಕಾಡಿನಲ್ಲಿಯೇ ಇದ್ದು ಬೇಟೆಯಾಡುತ್ತಿದ್ದರು. ಅದಕ್ಕೆ ‘ವಸತಿ ಬೇಟೆ’ ಎಂದು ಕರೆಯುತ್ತಾರೆ. ಹಿಂದೆ. ಪಟಗಾರ, ನಾಮಧಾರಿ, ಭಂಡಾರಿ, ಹಳ್ಳೇರ, ಹರಿಕಂತ್ರ ಈ ಎಲ್ಲ ಸಮುದಾಯದವರು ಸೇರಿ ಚೂಪಾದ ಈಟಿಗಳನ್ನು ಬಳಸಿ ಬೇಟೆಯಾಡುತ್ತಿದ್ದರು. ಇದು ಮನರಂಜನೆಯ ಭಾಗವೂ ಹೌದು ಇದನ್ನು ಇಟ್ಟೀಬಲಿ ಎಂದು ಕರೆಯುತ್ತಾರೆ. ಈಗ ಈ ಪದ್ಧತಿ ಇಲ್ಲ. ಬಲೆಯ ಮೂಲಕ ಪ್ರಾಣಿಗಳನ್ನು ಬೇಟೆಯಾಡುವುದಕ್ಕೆ ‘ಬಲೆ ಬಳ್ಳಿ’ ಬೇಟೆ ಎಂದು ಹೆಸರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)