varthabharthi

ಸುಗ್ಗಿ

ಚಾಮ್ ಸ್ಕಿ ಜೊತೆಗೆ ಕೆ.ವಿ.ಎನ್.ರ ಎರಡು ಹೆಜ್ಜೆ

ಕನ್ನಡ ಭಾಷಾ ಜಗತ್ತು

ವಾರ್ತಾ ಭಾರತಿ : 23 Dec, 2017
ಕೆ.ವಿ.ನಾರಾಯಣ

        ಕೆ.ವಿ.ನಾರಾಯಣ

ಚಾಮ್‌ಸ್ಕಿ ಕಳೆದ ಐವತ್ತು ವರ್ಷಗಳಿಂದ ನಡೆಸಿದ ಚಿಂತನೆಗಳು ಕನ್ನಡ ಅಷ್ಟೇ ಅಲ್ಲ ಭಾರತದ ಯಾವುದೇ ಭಾಷಿಕ ಚಿಂತನೆಯಲ್ಲಿ ನಡೆಯದಿರುವುದೇ ಸೋಜಿಗ. ಕನ್ನಡದ ಸಂದರ್ಭದಲ್ಲಿ ಚಾಮ್‌ಸ್ಕಿಯನ್ನು ಹೊಸ ತಲೆಮಾರು ಸರಿಯಾಗಿ ಗಮನಿಸದೇ ಇರುವ ಬಗ್ಗೆ ಕೆ.ವಿ.ಎನ್ ಅವರಿಗೆ ಬೇಸರ ಇದೆ. ಕನ್ನಡದ ಸಂದರ್ಭಗಳಲ್ಲಿ ಹೊಸ ತಲೆಮಾರು ಚಾಮ್‌ಸ್ಕಿ ಚಿಂತನೆಗಳನ್ನು ತಿಳಿದುಕೊಳ್ಳಲು ಅವಕಾಶಗಳೇ ಇಲ್ಲದಂತೆ ಮಾಡಲಾಗಿದೆ. ಅದರ ಹೊಣೆ ನಾವೇ ಹೊರಬೇಕಾಗಿದೆ.

"ಅಶೋಕ ಕುಮಾರ ರಂಜೇರೆ

ಕನ್ನಡ ವಿಶ್ವವಿದ್ಯಾನಿಲಯ, ಹಂಪಿ

ಭಾಷೆಯನ್ನು ಕುರಿತು ಸಾವಿರಾರು ವರ್ಷಗಳಿಂದ ಚರ್ಚೆಗಳು ನಡೆದಿದ್ದರೂ ಆಧುನಿಕ ಭಾಷಾಶಾಸ್ತ್ರ ಹರಿಕಾರ ಎಂತಲೇ ಪ್ರಸಿದ್ಧಿ ಪಡೆದ ಅಮೆರಿಕದ ನೋಮ್ ಚಾಮ್‌ಸ್ಕಿ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವನ್ನು ಒದಗಿಸಿವೆೆ. ಜಾಗತಿಕ ಸಂದರ್ಭದಲ್ಲಿ ಚಾಮ್‌ಸ್ಕಿ ಆಡುವ ಮಾತಿಗೆ ಅತ್ಯಂತ ಪ್ರಾಮುಖ್ಯತೆ ಇದೆ. ಯಾಕೆ ಅಂದರೆ ಜಗತ್ತಿನ ಎಲ್ಲ ಅಧಿಕಾರ ಕೇಂದ್ರಗಳನ್ನು ಪ್ರಶ್ನಿಸುವ ಮತ್ತು ಆ ಕೇಂದ್ರಗಳಿಗೆ ದೊರಕುವ ಯಾಜಮಾನ್ಯದ ಮೂಲಗಳನ್ನು ನಿರಾಕರಿಸುವ ನೆಲೆಗಳನ್ನು ಚಾಮ್‌ಸ್ಕಿ ನೆಮ್ಮಿರುವುದರಿಂದಲೇ ಅವರ ಚಿಂತನೆಗಳು ಜಾಗತಿಕ ಮಟ್ಟದಲ್ಲಿ ಮಹತ್ವವನ್ನು ಪಡೆದಿವೆ. ಕಳೆದ ಐದು ದಶಕಗಳಿಂದ ಚಾಮ್‌ಸ್ಕಿ ನಿರಂತರವಾಗಿ ಬರೆಯುತ್ತಿದ್ದಾರೆ. ಅವರು ಕಳೆದ ಎರಡು ದಶಕಗಳಲ್ಲಿ ಹೊರತಂದಿರುವ ‘ದ ಸೈನ್ಸ್ ಆಫ್ ಲಾಂಗ್ವೇಜ್’, ‘ವಾಟ್ ಕೈಂಡ್ ಆಫ್ ಕ್ರೀಚರ್ಸ್‌ ಆರ್ ವಿ’ ಮತ್ತು ‘ವೈ ಓನ್ಲಿ ಅಸ್’ ಕೃತಿಗಳ ಚಿಂತನೆಗಳನ್ನು ಕನ್ನಡದ ಸಂದರ್ಭದಲ್ಲಿ ಕೆ.ವಿ.ಎನ್. ರವರು ‘‘ಚಾಮ್‌ಸ್ಕಿ ಜೊತೆಗೆ ಎರಡು ಹೆಜ್ಜೆ’’ ಎಂಬ ತಮ್ಮ ಹೊಸ ಪುಸ್ತಕದಲ್ಲಿ ನಿರೂಪಿಸಿದ್ದಾರೆ.

ಈ ಕೃತಿ ಹಾಗೂ ಚಾಮ್‌ಸ್ಕಿಯ ಭಾಷಾ ಚಿಂತನೆಗಳನ್ನು ಇಲ್ಲಿ ವ್ಯಾಖ್ಯಾನಿಸಲಾಗಿದೆ. ಕನ್ನಡ ಭಾಷೆಯ ರಚನೆ ಮತ್ತು ಬಳಕೆ ಕುರಿತಂತೆ ಕೆ.ವಿ.ಎನ್ ಅವರ ಆಲೋಚನೆಗಳು ಕಳೆದ ನಾಲ್ಕು ದಶಕಗಳಿಂದ ಬೆಳೆದು ಬಂದಿದೆ. ಅಂದಿನಿಂದಲೂ ಚಾಮ್‌ಸ್ಕಿಯ ಚಿಂತನಾ ಕ್ರಮಗಳನ್ನು ಕನ್ನಡದ ಸಂದರ್ಭಕ್ಕೆ ಅನ್ವಯಿಸಿ ಮಾತಾಡುತ್ತಿರುವ ಬೆರಳೆಣಿಕೆಯವರಲ್ಲಿ ಕೆ.ವಿ.ಎನ್ ಅವರು ಪ್ರಮುಖರಾದವರು. ಈಗ ಪ್ರಕಟವಾಗಿರುವ ‘‘ಚಾಮ್‌ಸ್ಕಿ ಜೊತೆಗೆ ಎರಡು ಹೆಜ್ಜೆ’’ ಪುಸ್ತಕದಲ್ಲಿ ನೋಮ್ ಚಾಮ್‌ಸ್ಕಿಯ ಭಾಷಾಶಾಸ್ತ್ರದ ಆಲೋಚನಾ ಕ್ರಮದ ಆಧುನಿಕ ಮಾದರಿ ಯಾವುದಾಗಬೇಕು ಎನ್ನುವುದನ್ನು ಕನ್ನಡದ ಸಂದರ್ಭದಲ್ಲಿ ಇಟ್ಟು ಚರ್ಚಿಸಲಾಗಿದೆ.

100 ಪುಟಗಳ ‘ಚಾಮ್‌ಸ್ಕಿ ಜೊತೆಗೆ ಎರಡು ಹೆಜ್ಜೆ’ ಪುಸ್ತಕದಲ್ಲಿ ಮೂರು ಲೇಖನಗಳಿವೆ. ಮೊದಲನೆಯ ಲೇಖನ ‘ಭಾಷೆ ಕುರಿತು ಚಾಮ್‌ಸ್ಕಿ ಹೇಳುತ್ತಿರುವುದೇನು?’ ಎರಡನೆಯದು. ‘ಕೆಲವು ಪರಿಕಲ್ಪನೆಗಳು’ ಮೂರು. ‘ಭಾಷೆಯ ಅಧ್ಯಯನವೆಂಬ ವಿಜ್ಞಾನ’.

ಮೊದಲನೆಯ ಲೇಖನ ಸುಮಾರು ಒಂದೂವರೆ ದಶಕದ ಹಿಂದೆ ಪ್ರಕಟವಾದ ಅಭಿನವ ಪ್ರಕಾಶನದ ‘ಮನುಕುಲದ ಮಾತುಗಾರ’ ಪುಸ್ತಕದಲ್ಲಿ ಪ್ರಕಟವಾಗಿದೆ. ಕೆಲವು ಪರಿಕಲ್ಪನೆಗಳು ಮತ್ತು ಭಾಷೆಯ ಅಧ್ಯಯನವೆಂಬ ವಿಜ್ಞಾನ ಇತ್ತೀಚಿನ ಬರಹಗಳಾಗಿವೆ. ಕೆ.ವಿ.ಎನ್ ಅವರೇ ಹೇಳುವ ಹಾಗೆ ನಮ್ಮ ಕಾಲದ ಅತೀದೊಡ್ಡ ಚಿಂತಕರಾದ ನೋಮ್ ಚಾಮ್‌ಸ್ಕಿಯ ಸಾಮಾಜಿಕ, ರಾಜಕೀಯ, ಆರ್ಥಿಕ ಚಿಂತನೆಗಳ ಜೊತೆಗೆ ಭಾಷೆಯನ್ನು ಕುರಿತಂತೆ ಕಳೆದ 50 ವರ್ಷಗಳಲ್ಲಿ ನಡೆಸಿದ ವಿಚಾರಗಳನ್ನು ಕನ್ನಡದ ಓದುಗರಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಬರಹಗಳನ್ನು ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಕರ್ನಾಟಕದ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಕುರಿತ ನಮ್ಮ ಆಲೋಚನೆಗಳು ತುಂಬಾ ಹಳೆಯ ಮಾದರಿಯವು. ಅದರಿಂದ ಹೊರಬರಬೇಕಾದ ಅನಿವಾರ್ಯತೆ ಇದೆ. ಭಾರತ ಅಥವಾ ಕರ್ನಾಟಕದಲ್ಲಿ ಚಾಮ್‌ಸ್ಕಿ ಅವರ ಚಿಂತನೆಗಳನ್ನು ನಮ್ಮ ದೇಸಿ ಭಾಷೆಗಳ ಸಂದರ್ಭದಲ್ಲಿ ಇಟ್ಟು ಚರ್ಚಿಸುವ ತಜ್ಞರು ವಿರಳ. ಅದರಲ್ಲೂ ಕನ್ನಡದಲ್ಲಿ ಮತ್ತೂ ವಿರಳ. ಕನ್ನಡದ ಸಂದರ್ಭದಲ್ಲಿ ಕಲಿಕೆಯ ಭಾಗವಾಗಿ ಚಾಮ್‌ಸ್ಕಿಯನ್ನು ಓದುವ ಅವಕಾಶವೇ ಇಲ್ಲದಿರುವುದು ಇದಕ್ಕೆ ಮುಖ್ಯ ಕಾರಣವಾಗಿರಬಹುದು. ಆದ್ದರಿಂದ ಕನ್ನಡದ ಸಂದರ್ಭದಲ್ಲಿ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಚಿಂತನೆಗಳಲ್ಲಿನ ಗೋಜಲುಗಳನ್ನು ನಿವಾರಿಸಿಕೊಳ್ಳುವ ಹಿನ್ನೆಲೆಯಲ್ಲಿ ಚಾಮ್‌ಸ್ಕಿ ಅವರ ಭಾಷೆ ಕುರಿತ ಚಿಂತನೆಗಳ ಹಾದಿಯಲ್ಲಿ ಸಾಗಬೇಕಾಗಿದೆ ಎನ್ನುವುದು ಕೆ.ವಿ.ಎನ್ ಅವರ ಅಭಿಮತ. ಆ ನಿಟ್ಟಿನಲ್ಲಿ ಇಲ್ಲಿನ ಬರಹಗಳನ್ನು ನೋಡಬೇಕಾಗಿದೆ.

ಪ್ಲೇಟೊನಿಂದ ಹಿಡಿದು ಫರ್ಡಿನಂಡ್ ಡಿ ಸಸ್ಸೂರು ಅವರನ್ನು ಒಳಗೊಂಡಂತೆ ಇಲ್ಲಿಯವರೆಗಿನ ಅನೇಕ ಚಿಂತನಕಾರರ ತಿಳಿವನ್ನು ಆಗುಮಾಡಿಕೊಂಡು ಅವುಗಳನ್ನು ವಿಸ್ತರಿಸಿದ ಚಾಮ್‌ಸ್ಕಿ ಅವರು ಭಾಷೆಯನ್ನು ಕುರಿತಂತೆ ನಡೆಸಿದ ಆಲೋಚನೆ ಹೇಗೆ ವಿಶಿಷ್ಟವಾದದ್ದು ಎನ್ನುವುದನ್ನು ಕೆ.ವಿ.ಎನ್ ಅವರು ಇಲ್ಲಿನ ಬರಹದಲ್ಲಿ ವಿವರಿಸಿದ್ದಾರೆ. ವರ್ತನಾತ್ಮಕ ಮನೋವಿಜ್ಞಾನದ ಗ್ರಹಿಕೆಗೆ ಕಟ್ಟುಬಿದ್ದ ಚಿಂತನಕಾರರ ಈ ಆಲೋಚನೆಯಲ್ಲಿನ ತಪ್ಪುಗಳೇನು ಎನ್ನುವುದನ್ನು ಚಾಮ್‌ಸ್ಕಿ ವಿವರಿಸುವಾಗ ಭಾಷೆ ಎಂದರೇನು? ಮನುಷ್ಯನಲ್ಲಿ ಇದು ಅಂತಸ್ಥಗೊಂಡಿರುವ ಸಾಮರ್ಥ್ಯನಾ ಅಥವಾ ಹೊರಗಿನ ಕಲಿಕೆಯಿಂದ ಬರುವಂಥದ್ದಾ ಎನ್ನುವುದನ್ನು ಕುರಿತು ಕೆ.ವಿ.ಎನ್ ಅವರು ಇಲ್ಲಿ ಖಚಿತಪಡಿಸುತ್ತಾರೆ. ಈ ಕುರಿತಂತೆ ಚಾಮ್‌ಸ್ಕಿ ಮುಖ್ಯವಾಗಿ ಮಂಡಿಸಿದ ಸಂಗತಿ ಎಂದರೆ ಭಾಷೆಯ ತಿಳಿವು ಬಯಲಾಜಿಕಲ್ ಬೇಸ್ಡ್ ಆದದ್ದು. ಇದು ಮನುಷ್ಯನಿಗೆ ಹುಟ್ಟಿನಿಂದ ಬರತಕ್ಕ ಸಾಮರ್ಥ್ಯ. ಅದು ಮಗುವಿನ ಮೆದುಳಿನಲ್ಲಿ ಮೊದಲೇ ನೆಲೆಗೊಂಡಿರುತ್ತದೆ. ಹಾಗಾಗಿ ಮಕ್ಕಳು ನುಡಿಯನ್ನು ಕಲಿಯುವುದಿಲ್ಲ. ಬೇರೆಯವರು ಅದನ್ನು ಕಲಿಸಲೂ ಆಗುವುದಿಲ್ಲ. ಬದಲಾಗಿ ಮಗುವಿನ ಮೆದುಳಿನಲ್ಲಿ ಅಂತಸ್ಥವಾಗಿರುವ ಈ ಸಾಮರ್ಥ್ಯ ನಿಗದಿತ ಅವಧಿಯಲ್ಲಿ ಖಚಿತವಾಗಿ ರೂಪುತಾಳುತ್ತದೆ. (ಈಗಾಗಲೇ ತಜ್ಞರು ಹೇಳಿರುವಂತೆ ಸುಮಾರು 18ನೇ ತಿಂಗಳಿಂದ 36ನೇ ತಿಂಗಳವರೆಗೆ ಈ ಸಾಮರ್ಥ್ಯ ಪೂರ್ಣಪ್ರಮಾಣದಲ್ಲಿ ವಿಕಾಸ ಹೊಂದಿಬಿಡುತ್ತದೆ.(ಇದು ಕೆಲವರಲ್ಲಿ ಅಲ್ಪ ಸ್ವಲ್ಪ ಕಾಲಾವಧಿ ಬದಲಾಗಬಹುದು.) ಹಾಗೆ ವಿಕಾಸ ಹೊಂದಲು ಇರುವ ಮೂಲ ಸಾಮಗ್ರಿ ಯಾವುದು ಎನ್ನುವುದಕ್ಕೆ ಚಾಮ್‌ಸ್ಕಿ ಹೇಳುವುದು ಮನುಷ್ಯನ ಮೆದುಳಿನಲ್ಲಿ ಯು.ಜಿ (ಯೂನಿವರ್ಸಲ್ ಗ್ರಾಮರ್) ಅನ್ನುವುದು ಇರುತ್ತದೆ. ಜಗತ್ತಿನ ಯಾವುದೇ ಭಾಷೆ ಇರಬಹುದು. ಅವುಗಳಿಗೆಲ್ಲ ಬೇಕಾದ ಸಮಾನಾಂಶಗಳ ಲಕ್ಷಣಗಳು ಇದರಲ್ಲಿ ಇರುತ್ತವೆ. ಅಂದರೆ ಭಾಷೆ ಎನ್ನುವ ಮನುಷ್ಯ ಸಾಮರ್ಥ್ಯದ ಅದರ ಕನಿಷ್ಠ ಅಂಶಗಳು ನೆಲೆಗೊಂಡಿರುವ ಸಾಮರ್ಥ್ಯ ಅದಾಗಿರುತ್ತದೆ. ಅದನ್ನೇ ಚಾಮ್‌ಸ್ಕಿ ಯು.ಜಿ ಅಂತ ಕರೆಯುತ್ತಾನೆ. ಭಾಷಿಕ ಸಾಮರ್ಥ್ಯ ಎಲ್ಲರಲ್ಲೂ ಒಂದೇ ರೀತಿಯಲ್ಲಿ ಸಮಾನವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ಅದನ್ನು ಜಗತ್ತಿನ ಎಲ್ಲ ಭಾಷೆಗಳ ಮೂಲ ಕಣಜ ಎಂದು ಭಾವಿಸಬೇಕಾಗಿಲ್ಲ. ಎಲ್ಲ ಭಾಷೆಗಳಿಗೆ ಅನ್ವಯವಾಗುವ ನಿಯಮ ಜಾರಿಗೊಳ್ಳಲು ಇರುವ ಸಾಧ್ಯತೆಗಳು ಎಂದು ಪರಿಭಾವಿಸಬೇಕು. ಚಾಮ್‌ಸ್ಕಿ ಈ ಕುರಿತು ಫ್ರಾನ್ಸ್‌ನ ಚಿಂತಕ ಫರ್ಡಿನಾಂಡ್ ಡಿ ಸಸ್ಸೂರನ ಲಂಗ್ ಮತ್ತು ಪರೋಲ್ ಎಂಬ ಎರಡು ಪರಿಕಲ್ಪನೆಗಳನ್ನೊಳಗೊಂಡಂತೆ ಭಾಷಿಕ ಅಂತಸ್ಥ ಸಾಮರ್ಥ್ಯ ಮತ್ತು ಬಳಕೆಯ ಹೊರಗಿನ ಸಾಮರ್ಥ್ಯ ಕುರಿತೂ ಆಧುನಿಕ ಸಂದರ್ಭದಲ್ಲಿ ವಿವರಿಸುತ್ತಾನೆ. ಈ ಸಂಬಂಧದ ಈ ಪೂರ್ವಕಲ್ಪನೆಯನ್ನು (ಹೈಫೋಥೀಸಿಸ್) ಮಂಡಿಸುವುದಕ್ಕೆ ಅಥವಾ ಅದನ್ನು ಸಾಧಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನು ಬೇರೆ ಬೇರೆ ಜ್ಞಾನಶಾಖೆಗಳಿಂದ ಪಡೆದುಕೊಂಡು ಚಾಮ್‌ಸ್ಕಿ ವಿವರಿಸುತ್ತಾನೆ. ಇದನ್ನು ಕನ್ನಡದ ಸಂದರ್ಭದಲ್ಲಿ ಇಟ್ಟುಕೊಂಡು ಅನೇಕ ಉದಾಹರಣೆಗಳ ಮೂಲಕ ಪ್ರೊ.ಕೆ.ವಿ.ಎನ್ ಅವರು ಈ ಹೊತ್ತಿಗೆಯ ಮೊದಲ ಮತ್ತು ಕೊನೆಯ ಲೇಖನಗಳಲ್ಲಿ ವಿವರಿಸಿದ್ದಾರೆ.

ಎರಡನೆಯ ಲೇಖನ ದೀರ್ಘವಾಗಿದೆ. ಇದು ಚಾಮ್‌ಸ್ಕಿ ಬಳಸುವ ಮತ್ತು ಭಾಷಾ ಅಧ್ಯಯನಕ್ಕೆ ಪೂರಕವಾದ ಕೆಲವು ಪರಿಕಲ್ಪನೆಗಳನ್ನು ಕುರಿತು ಚರ್ಚಿಸುತ್ತಾರೆ. ಜನರೇಟಿವ್ ಗ್ರಾಮರ್, ಟ್ರಾನ್ಸ್‌ಫರ್ಮೇಶನ್ ಗ್ರಾಮರ್, ಪ್ರಿನ್ಸಿಪಲ್ಸ್ ಆ್ಯಂಡ್ ಪ್ಯಾರಾಮೀಟರ್ಸ್‌, ಮಿನಿಮಲಿಸಂನಂಥ ಭಾಷಾ ತಿಳುವಳಿಕೆಯ ಪರಿಭಾಷೆಗಳನ್ನು ಕುರಿತು ಅವುಗಳನ್ನು ಇಟ್ಟುಕೊಂಡು ಚಾಮ್‌ಸ್ಕಿ ಮಂಡಿಸಿದ ಪ್ರಮೇಯಗಳನ್ನು ಕುರಿತಂತೆ ಈ ಲೇಖನದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ‘ಐ ಲಾಂಗ್ವೇಜ್’, ಮತ್ತು ‘ಈ ಲಾಂಗ್ವೇಜ್’ ಕುರಿತ ತಿಳುವಳಿಕೆಗಳನ್ನು ಕೂಡ ಜಗತ್ತಿನ ಬಹುಪಾಲು ಚಿಂತಕರ ತಿಳುವಳಿಕೆಯ ಹಿನ್ನೆಲೆಯಲ್ಲಿ ಚಾಮ್‌ಸ್ಕಿ ಹೇಳುವುದನ್ನು ಕೆ.ವಿ.ಎನ್ ಅವರು ವಿಸ್ತರಿಸಿ ವಿವರಿಸುವುದನ್ನು ಇಲ್ಲಿ ಕಾಣಬಹುದಾಗಿದೆ. ಉದಾಹರಣೆಗೆ ‘ಐ ಲಾಂಗ್ವೇಜ್’ ಇದು ಎಲ್ಲರಲ್ಲೂ ಸಮಾನವಾಗಿ ಅಂತಸ್ಥವಾಗಿರುತ್ತದೆ. ‘ಈ ಲಾಂಗ್ವೇಜ್’ ಎಂದರೆ ಹೊರಗೆ ಅಭಿವ್ಯಕ್ತಗೊಳ್ಳುವ ಭಾಷೆ. ಅದು ಬರಹದ ರೂಪ ಇರಬಹುದು ಅಥವಾ ಮಾತಿನ ರೂಪ ಇರಬಹುದು. ಆದ್ದರಿಂದಲೇ ಚಾಮ್‌ಸ್ಕಿ ಹೇಳುವುದು ‘ಈ ಲಾಂಗ್ವೇಜ್’ನ ಭಾಷಿಕ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು ಅದರ ಸಾಮರ್ಥ್ಯ ಅರ್ಥ ಮಾಡಿಕೊಳ್ಳಲು ಪೂರ್ಣ ಪ್ರಮಾಣದಲ್ಲಿ ನೆರವಾಗುವುದಿಲ್ಲ. ಈ ಎರಡೂ ಸಾಮರ್ಥ್ಯಗಳು ಬೇರೆ ಬೇರೆ. ಆ ಕಾರಣಕ್ಕಾಗಿಯೇ ನಮ್ಮ ಸಂಶೋಧನೆಯ ಮುಖ್ಯ ಗುರಿ ‘ಐ ಲಾಂಗ್ವೇಜ್’ನ ಲಕ್ಷಣಗಳನ್ನು ಪತ್ತೆ ಮಾಡುವ ಕಡೆ ಹೋಗಬೇಕು ಎನ್ನುವುದನ್ನು ಚಾಮ್‌ಸ್ಕಿ ಹೇಳುತ್ತಾನೆ. ಚಾಮ್‌ಸ್ಕಿಯ ಈ ಚಿಂತನಾ ಕ್ರಮದ ಹಿಂದೆ ಜಗತ್ತಿನ ಬಹುಪಾಲು ಚಿಂತಕರ ಚಿಂತನೆಗಳು ಕೆಲಸ ಮಾಡಿವೆ. ಹಾಗಾಗಿ ನೋಮ್ ಚಾಮ್‌ಸ್ಕಿಯ ಚಿಂತನೆಗಳು ಪ್ಲೇಟೊ, ಡಾರ್ವಿನ್, ಗೆಲಿಲಿಯೋ, ಫರ್ಡಿನೆಂಡ್ ಡಿ ಸಸ್ಸೂರ್ ಮತ್ತಿತರ ಚಿಂತಕರ ಚಿಂತನ ವಿಧಾನದ ಮುಂದುವರಿಕೆಯಾಗಿಯೂ ಕಾಣುತ್ತದೆ. ಚರಿತ್ರೆಯಲ್ಲಿ ಅಂದಿನಿಂದಲೂ ಚಿಂತಕರು ಎತ್ತಿದ ಪ್ರಶ್ನೆಗಳಿಗೆ ಚಾಮ್‌ಸ್ಕಿ 20ನೇ ಶತಮಾನದಲ್ಲಿ ಉತ್ತರಗಳು ಕಂಡುಕೊಂಡಿರುವ ಕುರಿತು ಕೆ.ವಿ.ಎನ್ ಅವರು ವಿವರಿಸುತ್ತಾರೆ.

ಈ ಮೇಲಿನ ಚಾಮ್‌ಸ್ಕಿ ಆಲೋಚನಾ ಕ್ರಮದಲ್ಲಿ ಕನ್ನಡದ ಆಲೋಚನಾ ಕ್ರಮದಲ್ಲಿ ಬೆಳೆಯಬೇಕು. ಯಾಕೆ ಅಂದರೆ ಈಗಲೂ ಕೂಡ ಕನ್ನಡದ ಸಂದರ್ಭದಲ್ಲಿ ಭಾಷೆ ಎಂದರೆ ಅದರ ರಚನೆ ಮತ್ತು ಬಳಕೆ ಕುರಿತಂತೆ ಮಾತನಾಡುವ ನಮಗೆ ಈ ಎರಡೂ ಕ್ರಮಗಳ ಅಗಾಧ ಸಾಮರ್ಥ್ಯಗಳ ಸ್ವರೂಪವನ್ನು ಕುರಿತಂತೆ ವಿವರಿಸಲು ಸಾಧ್ಯವಾಗಿಲ್ಲ. ಆದ್ದರಿಂದಲೇ ನಮ್ಮಲ್ಲಿ ಈಗಲೂ ಬಳಕೆಯಲ್ಲಿರುವ ಭಾಷೆಯ ಕಲಿಕೆ ಮತ್ತು ಕಲಿಸುವ ಬಗೆಗೆ ಇರುವ ನಮ್ಮ ಕಲ್ಪನೆಗಳಲ್ಲಿ ಭಾಷೆಯನ್ನು ಕಲಿಯುತ್ತೇವೆ, ಕಲಿಸುತ್ತೇವೆ ಎನ್ನುವುದನ್ನು ನಂಬಿಕೊಂಡಿರುವುದು. ಭಾಷೆಯ ಬಳಕೆಯನ್ನು ಕಲಿಸಬಹುದು, ಅದರ ಸಾಮರ್ಥ್ಯವನ್ನು ಕಲಿಸುವುದಕ್ಕೆ ಬರುವುದಿಲ್ಲ. ನಾವು ಈಗಲೂ ನಂಬಿಕೊಂಡಿರುವ, ತಿಳಿದಿರುವ ವರ್ತನಾತ್ಮಕ ಮನೋವಿಜ್ಞಾನದ ನೆಲೆಗಳಲ್ಲಿ ಕೆಲಸ ಮಾಡುವುದನ್ನು ಮತ್ತು ಅದರಿಂದ ನಮ್ಮಲ್ಲಿ ಮನೆಮಾಡಿದ ತಪ್ಪುಕಲ್ಪನೆಗಳನ್ನು ಅಥವಾ ಅರೆಸತ್ಯಗಳನ್ನು ಹೋಗಲಾಡಿಸಬೇಕಾಗಿದೆ ಎನ್ನುವುದು ಕೆ.ವಿ.ಎನ್ ಅವರು ಮಂಡಿಸುತ್ತಾರೆ. ಆದ್ದರಿಂದ ಕನ್ನಡದ ಮನಸ್ಸುಗಳು, ಕನ್ನಡದ ಭಾಷಾ ತಜ್ಞರು ಭಾಷೆಯನ್ನು ಕುರಿತು ನಡೆದ ಆಧುನಿಕ ಚಿಂತನೆಗಳನ್ನು ಅರ್ಥಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಸಹಕಾರಿಯಾಗಲಿ ಎನ್ನುವ ಕಾರಣಕ್ಕೆ ಚಾಮ್‌ಸ್ಕಿ ಚಿಂತನೆಗಳನ್ನು ಮಂಡಿಸಲಾಗಿದೆ ಎನ್ನುತ್ತಾರೆ.

 ಕೆ.ವಿ.ಎನ್ ಅವರೇ ಹೇಳುವ ಹಾಗೆ ಕಳೆದ 50 ವರ್ಷಗಳಿಂದ ಭಾಷೆ ಕುರಿತು ಚಾಮ್‌ಸ್ಕಿ ನಡೆಸಿದ ಚಿಂತನೆಯ ವಿಚಾರಗಳನ್ನು ಕನ್ನಡದ ಓದುಗರಿಗೆ ಪರಿಚಯ ಮಾಡಿಕೊಡುವ ಸದುದ್ದೇಶದಿಂದ ಕೆ.ವಿ.ಎನ್ ಅವರು ಇಲ್ಲಿನ ಬರಹಗಳನ್ನು ಓದುಗರಿಗೆ ನೀಡಿದ್ದಾರೆ. ಕಳೆದ ಐವತ್ತು ವರ್ಷಗಳಿಂದ ನಡೆಸಿದ ಚಿಂತನೆಗಳು ಕನ್ನಡ ಅಷ್ಟೇ ಅಲ್ಲ ಭಾರತದ ಯಾವುದೇ ಭಾಷಿಕ ಚಿಂತನೆಯಲ್ಲಿ ನಡೆಯದಿರುವುದೇ ಸೋಜಿಗ. ಕನ್ನಡದ ಸಂದರ್ಭದಲ್ಲಿ ಚಾಮ್‌ಸ್ಕಿಯನ್ನು ಹೊಸ ತಲೆಮಾರು ಸರಿಯಾಗಿ ಗಮನಿಸದೇ ಇರುವ ಬಗ್ಗೆ ಕೆ.ವಿ.ಎನ್ ಅವರಿಗೆ ಬೇಸರ ಇದೆ. ಕನ್ನಡದ ಸಂದರ್ಭಗಳಲ್ಲಿ ಹೊಸ ತಲೆಮಾರು ಚಾಮ್‌ಸ್ಕಿ ಚಿಂತನೆಗಳನ್ನು ತಿಳಿದುಕೊಳ್ಳಲು ಅವಕಾಶಗಳೇ ಇಲ್ಲದಂತೆ ಮಾಡಲಾಗಿದೆ. ಅದರ ಹೊಣೆ ನಾವೇ ಹೊರಬೇಕಾಗಿದೆ. ಆ ಕಾರಣಕ್ಕಾಗಿ ಕೆ.ವಿ.ಎನ್ ಅವರು ನೀಡಿದ ಈ ಪುಟ್ಟ ಪುಸ್ತಕ ಹೊಸ ತಲೆಮಾರಿನ ರಹದಾರಿಗೆ ಮಾರ್ಗದರ್ಶಿಯಾಗಬಲ್ಲದು ಎನಿಸುತ್ತದೆ. ಆ ನಿಟ್ಟಿನಲ್ಲಿ ಭಾಷಾ ಅಧ್ಯಯನದ ತಿಳುವಳಿಕೆಗೆ ತೆರೆದುಕೊಳ್ಳುವ ಹೊಸ ಪೀಳಿಗೆ ಇದನ್ನು ಗಮನಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಹಾಕಿಕೊಟ್ಟ ಪುಟ್ಟ ಮಾರ್ಗ ಇದು ಎಂದರೂ ತಪ್ಪಾಗಲಾರದು.

ಕನ್ನಡ ಜಗತ್ತಿನ ತಿಳುವಳಿಕೆದಾರರಲ್ಲಿ ಕೆ.ವಿ.ಎನ್ ಆಲೋಚನೆಗಳು ಯಾವಾಗಲೂ 20 ವರ್ಷ ಮುಂದಿರುತ್ತವೆ. ಆ ಕಾರಣಕ್ಕಾಗಿಯೇ ಇರಬೇಕು ಕೆ.ವಿ.ಎನ್ ಎಷ್ಟೋ ಸಲ ಸಾಮಾನ್ಯ ತಿಳುವಳಿಕೆದಾರರಿಂದ ದೂರವೇ ಉಳಿದುಬಿಡುತ್ತಾರೆ. ಹಾಗಾಗದೇ ಈ ಹೊಸ ತಿಳುವಳಿಕೆಗಳು ಕನ್ನಡಿಗರಿಗೆ ದಕ್ಕಬೇಕು ಎನ್ನುವ ಹಿನ್ನೆಲೆಯಲ್ಲಿ ಕಿರು ಹೊತ್ತಿಗೆ ರೂಪಿಸಿಕೊಟ್ಟ ಕೆ.ವಿ.ಎನ್ ಅವರು ಅಭಿನಂದನಾರ್ಹರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)