varthabharthi

ಸುಗ್ಗಿ

ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ

ವಾರ್ತಾ ಭಾರತಿ : 23 Dec, 2017
ಸುಭಾಷ್ ರಾಜಮನೆ

‘ಒಂದು ಬೀಜವು ಮಣ್ಣಿನೊಡನೆ ಹುದುಗಿದ್ದಾಗ ಅದು ಯಾರ ಕಣ್ಣಿಗೂ ಕಾಣುವುದಿಲ್ಲ. ಆದರೆ, ಕಾಲಕ್ರಮೇಣ ಈ ಒಂದು ಆಲೋಚನೆ ಬೀಜದಿಂದಲೇ ದೊಡ್ಡದಾದ ಒಂದು ಮರ ಬೆಳೆಯುತ್ತದೆ. ಮನುಷ್ಯನ ಆಲೋಚನೆಗಳು ಕೂಡ ಮಣ್ಣಿನೊಳಗಿನ ಬೀಜದಂತೆಯೇ ಯಾರ ಗಮನಕ್ಕೂ ಬರುವುದಿಲ್ಲ. ಆದರೆ, ಇಂಥ ಆಲೋಚನೆಗಳಿಂದಲೇ ಮನುಕುಲದ ಇತಿಹಾಸದಲ್ಲಿ ಮಹತ್ತರವಾದ ಘಟನೆಗಳು ಸಂಭವಿಸಿವೆ’. ಹೀಗೆ ಆಲೋಚನಾ ಶಕ್ತಿ ಮತ್ತು ಅದರ ಪರಿಣಾವನ್ನು ಕುರಿತು ಹೇಳಿದವರು ರಧ್ಯಾದ ಮಹಾನ್ ದಾರ್ಶನಿಕ ಲೇಖಕ ಲಿಯೋ ಟಾಲ್‌ಸ್ಟಾಯ್. ಈತನನ್ನು ಜಗತ್ತು ಕಂಡ ದೊಡ್ಡ ಕತೆಗಾರ ಮತ್ತು ಕಾದಂಬರಿಕಾರನೆಂದೇ ಗುರುತಿಸಲಾಗಿದೆ. ಮನುಷ್ಯನ ದುರಾಸೆ, ಸಾವು, ಪ್ರೇಮ, ಶಾಂತಿಯನ್ನು ಸೃಜನಶೀಲವಾಗಿ ಶೋಧಿಸಿದವನಾಗಿದ್ದಾನೆ. ಆದರೆ ಟಾಲ್‌ಸ್ಟಾಯ್ ಮಾನವ ಲೋಕದ ಒಳತಿಗಾಗಿ ಗಾಢವಾಗಿ ಚಿಂತನೆ ಮಾಡಿದ ಲೇಖಕನೂ ಹೌದು. ಈ ಹಿನ್ನೆಲೆಯಲ್ಲಿ ಟಾಲ್‌ಸ್ಟಾಯ್‌ನ ‘ವೈಜ್ ಥಾಟ್ಸ್ ಫಾರ್ ಎವರಿಡೇ’ ಎಂಬ ಕೃತಿಯನ್ನು ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ‘ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

 ಟಾಲ್‌ಸ್ಟಾಯ್‌ನ ಚಿಂತನೆಗಳು ಈ ಮೊದಲು ಕನ್ನಡಕ್ಕೆ ಬಂದಿವೆ. ಆತನ ಕತೆ, ಕಾದಂಬರಿ, ಆತ್ಮಕತೆಗಳು ಮತ್ತೆ ಮತ್ತೆ ಅನುವಾದಗೊಂಡಿವೆ. ಆದರೆ ಟಾಲ್‌ಸ್ಟಾಯ್‌ನ ವಿಚಾರಧಾರೆ ಕನ್ನಡ ಭಾಷೆಗೆ ಬಂದಿರುವ ಪ್ರಮಾಣ ಕಡಿಮೆಯೇ. ಇಷ್ಟೆಲ್ಲದರ ನಡುವೆಯೂ ಆತನ ಜೀವನ, ಸಾಹಿತ್ಯ ಕೃತಿಗಳು ಮತ್ತು ಚಿಂತನೆಯ ಪ್ರಭಾವ ಕುವೆಂಪು, ಕಾರಂತ, ಮಾಸ್ತಿ ಮೊದಲಾದ ಲೇಖಕರಲ್ಲಿ ನಿಚ್ಚಳವಾಗಿ ಕಾಣುತ್ತದೆ. ಗಾಂಧೀಜಿಯವರ ಮೇಲೆಯೂ ಟಾಲ್‌ಸ್ಟಾಯ್ ಚಿಂತನೆಯ ಪ್ರಭಾವವಿದೆ. ಟಾಲ್‌ಸ್ಟಾಯ್‌ನ ಉದಾತ್ತ ಚಿಂತನೆಗಳನ್ನು ಆತನ ಜೀವನ ಮತ್ತು ಸೃಜನಶೀಲ ಸಾಹಿತ್ಯದಿಂದ ಬೇರ್ಪಡಿಸಿ ನೋಡಲಾಗದು. ಯಾಕೆಂದರೆ ಈ ಕೃತಿಯಲ್ಲಿಯ ಅನೇಕ ಆಲೋಚನೆಗಳು ಆತನ ಸಣ್ಣಕತೆ ಮತ್ತು ಕಾದಂಬರಿಗಳಲ್ಲಿ ಪರೋಕ್ಷವಾಗಿ ಹಾಸುಹೊಕ್ಕಾಗಿವೆ.

 ಈ ಕೃತಿ ಬರೀ ಟಾಲ್‌ಸ್ಟಾಯ್‌ನ ವಿಚಾರಗಳಷ್ಟೇ ಅಲ್ಲದೆ ಜಗತ್ತಿನ ಬೇರೆ ಬೇರೆ ಧರ್ಮ, ದಾರ್ಶನಿಕರ, ಲೇಖಕರ ಚಿಂತನೆಗಳನ್ನು ಒಳಗೊಂಡಿದೆ. ಭಾರತೀಯ ಸಂಸ್ಕೃತಿಯ ಪ್ರತೀಕವಾದ ಬುದ್ಧ, ಕೃಷ್ಣ, ರಾಮಕೃಷ್ಣ ಮೊದಲಾದವರ ವಿಚಾರಧಾರೆಗಳು ಕೂಡ ಇದರಲ್ಲಿವೆ. ಟಾಲ್‌ಸ್ಟಾಯ್ ತನ್ನ ಕೊನೆಯ ದಿನಗಳಲ್ಲಿ ಬರೆದ ಕೃತಿಯಿದು. ಇದು ವರ್ಷದ ಹನ್ನೆರಡು ತಿಂಗಳುಗಳ ಕ್ಯಾಲೆಂಡರ್ ಮಾದರಿಯಲ್ಲಿ ರಚನೆಯಾಗಿದೆ. ಇಂಗ್ಲಿಷ್‌ನಲ್ಲಿ ಇಂತಹ ಪುಸ್ತಕಗಳ ಪರಂಪರೆ ಇದೆ. ಕನ್ನಡದಲ್ಲಿ ‘ಗಾಂಧಿ ಉಪನಿಷತ್’ ಮತ್ತು ಜಿಡ್ಡು ಕೃಷ್ಣಮೂರ್ತಿಯವರ ‘ಬಾಳಿಗೊಂದು ಭಾಷ್ಯ’ ಇದೇ ಮಾದರಿಯಲ್ಲಿವೆ. ಆದರೆ ಟಾಲ್‌ಸ್ಟಾಯ್ ತನ್ನ ಇಳಿವಯಸ್ಸಿನಲ್ಲೂ ಆಳವಾದ ಮತ್ತು ಗಹನವಾದ ಚಿಂತನೆಯಲ್ಲಿ ತೊಡಗಿಕೊಂಡದ್ದು ಆತನ ಜೀವನ ಪ್ರೀತಿ ಮತ್ತು ಅದಮ್ಯ ಉತ್ಸಾಹವನ್ನು ತೋರಿಸುತ್ತದೆ. ಆತ ಚಿಂತನೆಯ ಮೂಲಕವೇ ಅಧ್ಯಾತ್ಮ ಮತ್ತು ಅನುಭಾವದ ಉತ್ತುಂಗವನ್ನು ತಲುಪಿದವನು; ಸಾಹಿತ್ಯದಿಂದ ಅಪಾರವಾದ ಕೀರ್ತಿ, ಗೌರವ, ಸಂಪತ್ತನ್ನು ಪಡೆದವನಾಗಿಯೂ ಅವುಗಳಿಂದೆಲ್ಲ ಅಷ್ಟೇ ನಿರ್ಲಿಪ್ತವಾಗಿ ಬಿಡುಗಡೆಗೊಂಡವನು. ಸಂತನಲ್ಲದ ಸಂತನಾಗಿ ಬಾಳಿ ಬದುಕಿದವನು. ಆದ್ದರಿಂದಲೇ ಆತನ ಚಿಂತನೆಗಳಿಗೆ ಸಾರ್ವಕಾಲಿಕ ಮೌಲ್ಯ ಪ್ರಾಪ್ತವಾಗಿದೆ.

   ಜಯಪ್ರಕಾಶ ನಾರಾಯಣ

 ಇಂದಿನ ಸಮಕಾಲೀನ ಸಂದರ್ಭದಲ್ಲಿ ವ್ಯಕ್ತಿತ್ವ ವಿಕಸನ ಮತ್ತು ಸ್ವಯಂ ಪ್ರೇರಣೆಯಿಂದ ಯಶಸ್ಸು ಪಡೆಯುವುದರ ಬಗ್ಗೆ ಮಾರುಕಟ್ಟೆಯಲ್ಲಿ ಸಾವಿರಾರು ಪುಸ್ತಕಗಳು ಬಂದಿವೆ. ಇಂಥವುಗಳನ್ನು ಬರೆದ ನಾರ್ಮನ್ ವಿನ್ಸೆಂಟ್ ಪೀಲೆ, ಡೇಲ್ ಕಾರ್ನೇಗಿ, ರಾಬರ್ಟ್ ಖೋವಿಯಿಂದ ಹಿಡಿದು ಈಚೆಗಿನ ಶಿವ್ ಖೇರ್ ಮತ್ತು ರಾಬಿನ್ ಶರ್ಮಾವರೆಗೆ ವೃತ್ತಿಪರ ಲೇಖಕರಿದ್ದಾರೆ. ಇಂಥವುಗಳಿಗಿಂತ ಟಾಲ್‌ಸ್ಟಾಯ್‌ನ ಈ ಕೃತಿಯು ನಮ್ಮ ಜಡಗೊಂಡ ಆಲೋಚನೆ ಮತ್ತು ಸಂವೇದನೆಗಳಿಗೆ ಮರುಜೀವ ನೀಡುತ್ತದೆ. ಬದುಕನ್ನು ಹಸನು ಮಾಡಿಕೊಳ್ಳಲು ಮಾರ್ಗದರ್ಶಿಯಾಗಿದೆ. ಜೀವನ, ಲೋಕ, ಸತ್ಯ, ಪ್ರಾಮಾಣಿಕತೆ, ಪ್ರೀತಿ, ದೇವರು, ಪ್ರಾರ್ಥನೆ ಮೊದಲಾದವುಗಳನ್ನು ಮತ್ತೊಂದು ನಿಟ್ಟಿನಿಂದ ನೋಡುವಂತೆ ಪ್ರೇರಣೆಯನ್ನು ನೀಡುತ್ತದೆ. ಜೀವನದ ಸಂಕೀರ್ಣತೆ ಮತ್ತು ವೈರುಧ್ಯಗಳನ್ನು ಅರಿಯಲು ದಿಕ್ಸೂಚಿಯಾಗಿದೆ.

ಕೃತಿ: ಕಾಲವಲ್ಲಿರಲಿಲ್ಲ ದೇಶವಲ್ಲಿರಲಿಲ್ಲ

ಮೂಲ: ಲಿಯೋ ಟಾಲ್‌ಸ್ಟಾಯ್

ಅನು: ಬಿ.ಎಸ್. ಜಯಪ್ರಕಾಶ್ ನಾರಾಯಣ

ಪ್ರಕಾಶನ: ಆಕೃತಿ ಪುಸ್ತಕ, ಬೆಂಗಳೂರು

ಪ್ರಕಟನೆ: 2017

ಪು: 364

ಬೆಲೆ: 250/

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)