varthabharthi

ಸುಗ್ಗಿ

ಡಾಕ್ಟರ್ ಯಲ್ಲಾಪ್ರಗಡ ಸುಬ್ಬರಾವ್ (1895-1948)

ವಾರ್ತಾ ಭಾರತಿ : 23 Dec, 2017
ಡಾ|| ಎಚ್.ಡಿ. ಚಂದ್ರಪ್ಪಗೌಡ

ಸುಬ್ಬರಾವ್ ಎಳೆಯ ವಯಸ್ಸಿನಲ್ಲಿ ವಿದ್ಯಾಭ್ಯಾಸದಲ್ಲಿ ನಿರಾಸಕ್ತರಾಗಿದ್ದಂತೆ ಕಂಡು ಬಂದಿದ್ದರೂ, ಮುಂದೆ ಮದ್ರಾಸ್ ಮೆಡಿಕಲ್ ಕಾಲೇಜು ಸೇರಿ ವೈದ್ಯ ಪದವಿ ಗಳಿಸುವಲ್ಲಿ ಯಶಸ್ವಿಯಾದರು. ಭಾರತದ ಬಹುಪಾಲು ಜನರು ಕೇವಲ ಸರಳ ವ್ಯಾಧಿಗಳಿಂದ ನರಳಿ, ಅಸುನೀಗುತ್ತಿದ್ದ ಪರಿಸ್ಥಿತಿ ಅವರ ಮನಕರಗುವಂತೆ ಮಾಡಿತು. ಅವರು ವೈದ್ಯರಾಗುವ ಹೊತ್ತಿಗಾಗಲೇ ಅಮೆರಿಕದಂಥ ಮುಂದುವರಿದ ದೇಶದಲ್ಲಿ ಸಂಶೋಧನೆಗಳನ್ನು ಮುಗಿಸಿ ತಮ್ಮ ಜನರ ಜೀವನವನ್ನು ಸುಗಮಗೊಳಿಸಬೇಕೆಂಬ ಆಕಾಂಕ್ಷೆ ಬೇರುಬಿಟ್ಟಂತಾಗಿತ್ತು.

ಇನ್ನೇನು ಸೂರ್ಯಾಸ್ತಮಾನವಾಗಿ ಕತ್ತಲು ಕವಿಯುವ ಸಮಯ. ಮಾರುಟೇರು ಹಳ್ಳಿಯ ನಾಲೆಯ ದಡದಲ್ಲಿ ಸುಮಾರು 12-13 ವಯಸ್ಸಿನ ಬಾಲಕರಿಬ್ಬರು ಜಟಕಾ ಬಂಡಿಯಿಂದ ಅವಸರ ಅವಸರವಾಗಿ ಇಳಿಯುತ್ತಾರೆ. ಇಬ್ಬರ ಬೆನ್ನುಗಳ ಮೇಲೆ ಗಂಟು ಮೂಟೆಗಳಿವೆ; ವದನಗಳಲ್ಲಿ ಆತಂಕ ಭಯಗಳ ಛಾಯೆ. ಕಾಶಿಗೆ ಹೋಗುವ ರೈಲು ನಿಲ್ದಾಣಕ್ಕೆ ಹೊರಡಲು ನಾಲೆಯಲ್ಲಿ ಸಜ್ಜಾಗುತ್ತಿರುವ ದೋಣಿಯೊಂದರೊಳಗೆ ಜಿಗಿದು ಕುಳಿತುಕೊಳ್ಳುತ್ತಾರೆ. ಅವರಲ್ಲಿ ಸ್ವಲ್ಪ ಕಿರಿಯನಾದವನಿಗೆ ದುಃಖ ಉಮ್ಮಳಿಸಿ ಬರುವಂತಿದೆ; ಕಣ್ಣಂಚಿನಲ್ಲಿ ನೀರಾಡುತ್ತಿದೆ. ಹಿರಿಯನಾದವನು ಕೃತಕ ಧೈರ್ಯ ತಂದುಕೊಂಡಂತಿದೆ. ಅವನು ತನ್ನ ಚೀಲದಲ್ಲಿದ್ದ ಅವಲಕ್ಕಿ-ಬೆಲ್ಲವನ್ನು ಹೊರತೆಗೆದು ಕಿರಿಯನಿಗೂ ಕೊಟ್ಟು, ತಾನೂ ತಿನ್ನಲಾರಂಭಿಸುತ್ತಾನೆ. ಕಾಶಿಯಲ್ಲಿ ತಾವಿಬ್ಬರೂ ಸಿರಿವಂತರಾಗುವುದಕ್ಕೆ ವರ್ಣರಂಜಿತ ಯೋಜನೆಗಳನ್ನು ಹೇಳುತ್ತಾ ಕಿರಿಯನನ್ನು ಸಂತೈಸಲು ಪ್ರಯತ್ನಿಸುತ್ತಾನೆ. ಹಾಗೇ ಇಬ್ಬರೂ ನಿದ್ದೆ ಹೋಗುತ್ತಾರೆ.

ನಿಡದವೊಲು ರೈಲು ನಿಲ್ದಾಣ ಒಂದೆರಡು ಮೈಲಿ ಇರುವಷ್ಟರಲ್ಲಿ ದೋಣಿ ಒಂದು ದಡದ ಹತ್ತಿರ ನಿಲ್ಲುತ್ತದೆ. ಆಗ ರಾತ್ರಿ ಒಂಬತ್ತು ಗಂಟೆಯ ಸಮಯವಿರಬಹುದು. ನಿದ್ರೆಯಲ್ಲಿದ್ದ ಹುಡುಗರಿಬ್ಬರನ್ನೂ ಯಾರೋ ಎಚ್ಚರಿಸುತ್ತಾರೆ. ಕಣ್ಣುಬಿಟ್ಟು ನೋಡಿದರೆ ಸಹಪಾಠಿ ಹುಡುಗನೊಬ್ಬನಿದ್ದಾನೆ; ಅವನ ಜೊತೆಯಲ್ಲಿ ದಢೂತಿ ಅಸಾಮಿಯೊಬ್ಬ ಬೇರೆ. ನಾಲೆಯ ದಡದಲ್ಲಿ ಒಂದು ಬೈಸಿಕಲ್ ಸಹ ಇದೆ. ಅವರಿಬ್ಬರೂ ಹುಡುಗರನ್ನು ದಡಕ್ಕೆ ಬರುವಂತೆ ಪುಸಲಾಯಿಸುತ್ತಾರೆ. ಹಿರಿಯ ಬಾಲಕನಿಗೆ ತನ್ನ ಯೋಜನೆ ವ್ಯರ್ಥವಾಯಿತೆಂಬ ಅರಿವಾಗಿ ಪ್ರತಿಭಟಿಸುತ್ತಾನೆ. ಊರಿಗೆ ಹಿಂದಿರುಗಿದರೆ ತಾಯಿ ನೀಡಬಹುದಾದ ಶಿಕ್ಷೆಯನ್ನು ನೆನೆದು ನಾಲೆಗೆ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳಲೂ ಪ್ರಯತ್ನಿಸುತ್ತಾನೆ. ಬಂದವರು ಹೇಗೋ ಹುಡುಗರಿಬ್ಬರನ್ನೂ ಊರಿನ ಕಡೆ ಹೋಗುವ ದೋಣಿಯಲ್ಲಿ ಸೇರಿಸಿ ಮರುಪ್ರಯಾಣ ಪ್ರಾರಂಭಿಸುತ್ತಾರೆ.

ದೋಣಿ ಮಾರುಟೇರು ತಲುಪಿದಾಗ ಬೆಳಗಿನ ಜಾವ 2 ಗಂಟೆ. ದಡದಲ್ಲಿ ತಾಯಿ ಮುಖ ಗಂಟಿಕ್ಕಿಕೊಂಡು ಶತಪಥ ತಿರುಗಾಡುತ್ತಿದ್ದಾಳೆ. ದೋಣಿ ದಡಕ್ಕೆ ಬಂದಾಕ್ಷಣ ಆಕೆ ಹಿರಿಯನ ಜುಟ್ಟು ಹಿಡಿದು ಎಳೆದಾಡಿ ಚೆನ್ನಾಗಿ ಥಳಿಸುತ್ತಾಳೆ. ಹುಡುಗರನ್ನು ಜಟಕಾ ಬಂಡಿಯಲ್ಲಿ ಕೂರಿಸಿ, ತಾಯಿ ಅವರನ್ನು ತಮ್ಮೂರು ನರಸಾಪುರಕ್ಕೆ ಮತ್ತೆ ಕರೆತರುತ್ತಾರೆ. ಆ ತಾಯಿಯೇ ವೆಂಕಮ್ಮ. ಬಡತನದ ಬೇಗೆಯಿಂದ ಬಳಲುತ್ತಿದ್ದರೂ ತನ್ನ ಐದು ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಛಲ ತೊಟ್ಟವಳು, ಶಿಸ್ತಿನ ಸಿಪಾಯಿಯಾಗಿದ್ದ ಆಕೆಯ ನೀತಿ ನಿಯಮಗಳನ್ನು ಸಹಿಸಲಾರದೆ ಮನೆಯಿಂದ ತಪ್ಪಿಸಿಕೊಂಡು ಹೋಗಲು ಅವರ ಮಗ ಮಾಡಿದ ಪ್ರಯತ್ನ ಇದಾಗಿತ್ತು. ಜೊತೆಯಲ್ಲಿದ್ದವನು, ಅವರ ಮನೆಯಲ್ಲಿದ್ದು ಶಾಲೆಗೆ ಹೋಗಲು ಬಂದಿದ್ದ ಸಂಬಂಧಿ ಬಾಲಕ, ಅಯ್ಯಂಗಾರಿ ವೆಂಕಟರಾಮಯ್ಯ. ಅವರಿಬ್ಬರೂ ಹೊಂಚುಹಾಕಿ ಒಂದು ಮಧ್ಯಾಹ್ನ ಶಾಲೆಯಿಂದ ಮನೆಗೆ ಹಿಂದಿರುಗದೆ ತಪ್ಪಿಸಿಕೊಂಡು ಹೊರಟಿದ್ದರು; ಬಹು ದೂರದ ಕಾಶಿಗೆ ಹೋಗಿ ಅಲ್ಲಿಯ ದೇವಸ್ಥಾನಗಳ ಎದುರು ಹಣ್ಣು ಕಾಯಿಗಳನ್ನು ಮಾರಾಟಮಾಡಿ ಜೀವನ ಸಾಗಿಸಬಹುದೆಂಬುದು ಅವರ ಅಭಿಲಾಷೆಯಾಗಿತ್ತಂತೆ!

ಹೀಗೆ ಮನೆಯಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ ಬಾಲಕನೇ ಮುಂದೆ ಅಮೆರಿಕದಲ್ಲಿ ‘‘ಈ ಶತಮಾನದ ಶ್ರೇಷ್ಠ ವಿಜ್ಞಾನಿ’’ ಎಂದು ಹೆಸರು ಗಳಿಸಿದ ಡಾಕ್ಟರ್ ಯಲ್ಲಾಪ್ರಗಡ ಸುಬ್ಬರಾವ್!

ಸುಬ್ಬರಾವ್ ಎಳೆಯ ವಯಸ್ಸಿನಲ್ಲಿ ವಿದ್ಯಾಭ್ಯಾಸದಲ್ಲಿ ನಿರಾಸಕ್ತರಾಗಿದ್ದಂತೆ ಕಂಡು ಬಂದಿದ್ದರೂ, ಮುಂದೆ ಮದ್ರಾಸ್ ಮೆಡಿಕಲ್ ಕಾಲೇಜು ಸೇರಿ ವೈದ್ಯ ಪದವಿ ಗಳಿಸುವಲ್ಲಿ ಯಶಸ್ವಿಯಾದರು. ಭಾರತದ ಬಹುಪಾಲು ಜನರು ಕೇವಲ ಸರಳ ವ್ಯಾಧಿಗಳಿಂದ ನರಳಿ, ಅಸುನೀಗುತ್ತಿದ್ದ ಪರಿಸ್ಥಿತಿ ಅವರ ಮನಕರಗುವಂತೆ ಮಾಡಿತು. ಅವರು ವೈದ್ಯರಾಗುವ ಹೊತ್ತಿಗಾಗಲೇ ಅಮೆರಿಕದಂಥ ಮುಂದುವರಿದ ದೇಶದಲ್ಲಿ ಸಂಶೋಧನೆಗಳನ್ನು ಮುಗಿಸಿ ತಮ್ಮ ಜನರ ಜೀವನವನ್ನು ಸುಗಮಗೊಳಿಸಬೇಕೆಂಬ ಆಕಾಂಕ್ಷೆ ಬೇರುಬಿಟ್ಟಂತಾಗಿತ್ತು. ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅತೀ ಪ್ರಯಾಸದಿಂದ ಶಿಷ್ಯವೃತ್ತಿ ಪಡೆದುಕೊಂಡು, ಸಾಲ ಸೋಲ ಮಾಡಿ ಅಲ್ಲಿಗೆ ಹೋದರು. ಅಲ್ಲಿಯೂ ಜೀವನ ನಡೆಸಲು ತೀವ್ರ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಬೇಕಾಯಿತು. ಕೊನೆಗೆ ಆಸ್ಪತ್ರೆಯೊಂದರಲ್ಲಿ ಜಾಡಮಾಲಿಯ ಕೆಲಸ ನಿರ್ವಹಿಸಲೂ ಸಹ ಅವರು ಹಿಂಜರಿಯಲಿಲ್ಲ.

ಅತೀವ ಶ್ರದ್ಧೆ, ಎಡೆಬಿಡದ ಅಭ್ಯಾಸ, ರಾತ್ರಿ ಹಗಲುಗಳ ಪರಿವೆಯಿಲ್ಲದೆ ಕಾರ್ಯಮಗ್ನರಾಗುವುದು ಸುಬ್ಬರಾಯರಿಗೆ ಅನಿವಾರ್ಯವಾಯಿತು. ಹಲವು ವರ್ಷಗಳ ಅಂತಹ ಅತೀವ ಆಸಕ್ತಿ, ಶ್ರದ್ಧೆಗಳ ಪ್ರತಿಫಲವೋ ಎಂಬಂತೆ ಅವರು ಹಲವಾರು ಜೀವ ರಕ್ಷಣೆಯ ಮದ್ದುಗಳ ಸಂಶ್ಲೇಷಣೆಯ ಹರಿಕಾರರೆನಿಸಿ ಕೀರ್ತಿವಂತರಾದರು. ಪ್ಲೇಗ್ ಮಹಾಮಾರಿ ಭಾರತದಲ್ಲಿ ಇತ್ತೀಚೆಗೆ ತಲೆದೋರಿದಾಗ ಅದಕ್ಕೆ ಮಾರಕ ಮದ್ದಾಗಿದ್ದ ಜೀವಿರೋಧಕ ‘ಟೆಟ್ರಾಸೈಕ್ಲಿನ್’ನ ಸಂಶೋಧನೆ ಅಮೆರಿಕದಲ್ಲಿ ಅವರ ಮೂಲ ಪ್ರೇರಣೆಯಿಂದಲೇ ಆಗಿದ್ದೆಂದು ತಿಳಿದುಬಂದಿತು. ಆಗಲೇ ಸ್ವದೇಶದಲ್ಲಿ ಅವರ ಹೆಸರು ಕೇಳಿಬರುವಂತಾದದ್ದು; ಅವರು ತೀರಿಕೊಂಡ ಅರ್ಧ ಶತಮಾನದ ನಂತರ! ಹಲವಾರು ಮಾರಕ ಕಾಯಿಲೆಗಳಿಗೆ ಯಶಸ್ವೀ ಮದ್ದುಗಳನ್ನು ಕಂಡುಹಿಡಿದು ಮನುಕುಲದ ಉಳಿವಿಗೆ ಸಹಾಯ ಮಾಡಿದ್ದ ಸುಬ್ಬರಾಯರ ಅಂತ್ಯದ ಸಮಯದಲ್ಲಿ ಯಾವುದೇ ಮದ್ದಾಗಲೀ, ಯಾರ ಸಹಾಯವಾಗಲೀ ದೊರೆಯಲಿಲ್ಲ. ಒಂದು ರಾತ್ರಿ ಮಲಗಿದವರು ಚಿರ ನಿದ್ರಾಪರವಶರಾಗಿ ಇಹಲೋಕ ತ್ಯಜಿಸಿದರು! ಇದೀಗ ಡಾ. ಯಲ್ಲಾಪ್ರಗಡ ಸುಬ್ಬರಾಯರ ಜನ್ಮ ಶತಾಬ್ದಿಯ ಸಮಯ ಅವರ ಜೀವನ, ಸಾಧನೆಗಳತ್ತ ಗಮನ ಹರಿಸಲು ಈ ಪ್ರಯತ್ನ.

ಭಾರತೀಯರೊಬ್ಬರು ಈ ಶತಮಾನದ ಆದಿಯಲ್ಲಿ ದೇಶವಿನ್ನೂ ದಾಸ್ಯದಲ್ಲಿ ತೊಳಲಾಡುತ್ತಿದ್ದಾಗಲೇ ಅಮೆರಿಕ ತೆರಳಿ, ವೈದ್ಯಕೀಯ ಸಂಶೋಧನೆಯಲ್ಲಿ ಪರಾಕಾಷ್ಠತೆಯನ್ನೇ ತಲುಪಿದ್ದರು; ಶತಮಾನದ ಶ್ರೇಷ್ಠ ವಿಜ್ಞಾನಿಯೆಂದು ಅಲ್ಲಿ ಖ್ಯಾತಿ ಗಳಿಸಿಕೊಂಡಿದ್ದರೂ, ಸ್ವದೇಶ ಬಾಂಧವರ ಗಮನ ಸೆಳೆಯುವುದಕ್ಕೆ ಅವರು ಗತಿಸಿದ ನಂತರ ಅರ್ಧ ಶತಮಾನವೇ ಬೇಕಾಯಿತು. ಅವರ ಬಗೆಗೆ ಗಮನ ಹರಿಯುವುದು ತಡವಾದರೂ ಪ್ರಸ್ತುತ ಡಾ. ಯಲ್ಲಾಪ್ರಗಡ ಅವರ ಜೀವನ ಸಾಧನೆಗಳ ಬಗೆಗೆ ಎಂದಿಲ್ಲದ ಗೌರವಾದರಗಳು ಮೂಡಿಬರುತ್ತಿರುವ ಲಕ್ಷಣಗಳು ಕಂಡುಬರುತ್ತಿರುವುದು ಆಶಾದಾಯಕ. ಶ್ರೀ ಎಸ್.ಪಿ.ಕೆ. ಗುಪ್ತ ಅವರು ರಚಿಸಿದ ಇಂಗ್ಲಿಷ್ ಗ್ರಂಥ In Quest of Panacea ಭಾರತವೇ ಅಲ್ಲದೆ ಇಡೀ ಪ್ರಪಂಚದಲ್ಲಿ ಡಾ॥

ಸರಕಾರವೂ ಸ್ವಲ್ಪ ತಡವಾಗಿಯಾದರೂ ಭಾರತದ ಸುಪುತ್ರನನ್ನು ಗೌರವಿಸುವುದರಲ್ಲಿ ಹಿಂದೆ ಬಿದ್ದಿಲ್ಲವೆನ್ನಬಹುದು. ಈ ದಿಸೆಯಲ್ಲಿ ಡಾ. ಸುಬ್ಬರಾಯರ ಜನ್ಮಶತಮಾನೋತ್ಸವವನ್ನು ಆಚರಿಸಲು ಒಂದು ರಾಷ್ಟ್ರೀಯ ಸಮಿತಿ ಕಂಕಣಬದ್ಧವಾಯಿತು. ಅದರ ವತಿಯಿಂದ ದೇಶದ ಹಲವು ಕಡೆ ಸಭೆ, ಸಮಾರಂಭಗಳು ನಡೆಯುತ್ತಿವೆ. ದಿಲ್ಲಿ, ಹೈದರಾಬಾದ್, ಮುಂಬೈ, ಕೋಲ್ಕತಾ, ಬೆಂಗಳೂರು, ಭೀಮಾವರಂ, ವಿಶಾಖಪಟ್ಟಣ ಮುಂತಾದ ಕಡೆಗಳಲ್ಲಿ ಸುಬ್ಬರಾಯರ ಜೀವನದ ಮೈಲಿಗಲ್ಲುಗಳನ್ನು ಗುರುತಿಸುವ ಚಿತ್ರಪಟಗಳ ಪ್ರದರ್ಶನಗಳು ಜರುಗಿವೆ.

   ‘ಸುಬ್ಬರೋಮೈಸೀಸ್’ ಸ್ಪ್ಲೆಂಡೆನ್ಸ್

ಬೆಂಗಳೂರಿನಲ್ಲಿರುವ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡಮಿಯವರು ಸುಬ್ಬರಾಯರ ಸ್ಮರಣಾರ್ಥ ವೈಜ್ಞಾನಿಕ ವಲಯಗಳಲ್ಲಿ ಅವರ ಎಲ್ಲಾ ಲೇಖನಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸುವ ನಿರ್ಧಾರ ಮಾಡಿದ್ದಾರೆ. ಜೀವರಸಾಯನ ಶಾಸ್ತ್ರದಲ್ಲಿ ಉತ್ತಮ ಸಂಶೋಧನೆ ನಡೆಸಿದ ವಿಜ್ಞಾನಿಗಳನ್ನು ಮೂರು ವರ್ಷಕ್ಕೊಮ್ಮೆ ಗೌರವಿಸುತ್ತಿದ್ದಾರೆ. ಆಂಧ್ರ ಪ್ರದೇಶ ಸರಕಾರ ಹೈದರಾಬಾದಿನಲ್ಲಿರುವ ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಅವರ ಪ್ರತಿಮೆಯನ್ನು ಅನಾವರಣ ಮಾಡಿದೆ. ಭಾರತ ಸರಕಾರ ಸುಬ್ಬರಾಯರ ಸ್ಮರಣಾರ್ಥ ಅಂಚೆಚೀಟಿಯನ್ನು ಬಿಡುಗಡೆ ಮಾಡಿ ಗೌರವ ಸಲ್ಲಿಸಿದೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ವಿಜ್ಞಾನ ಕ್ಷೇತ್ರದಲ್ಲಿ ಡಾ. ಸುಬ್ಬರಾಯರ ಹೆಸರನ್ನು ಅಜರಾಮರವಾಗಿರಿಸುವ ಸಲುವಾಗಿ, ಅವರ ಸಂಶೋಧನಾ ಆಸಕ್ತಿಯಾಗಿದ್ದ ಬೂಸ್ಟ್‌ನ ಪ್ರಭೇದವೊಂದಕ್ಕೆ ಅವರ ಹೆಸರನ್ನಿಡಲಾಗಿದೆ. ಅವರ ಅಭಿಮಾನಿಗಳಲ್ಲೊಬ್ಬರಾದ ಡಾ. ಕ್ಲಿಪೋರ್ಡ್ ಹೆಸಲ್ಪೈನ್ ಪರ್ಲ್ ರಿವರ್‌ನ ಪ್ರಯೋಗಾಲಯ ಕಟ್ಟಡಗಳಿಂದ ಹೊರ ಬರುತ್ತಿದ್ದ ಕೊಚ್ಚೆ ನೀರಿನ ಫಿಲ್ಟರ್‌ಬೆಡ್ (filterbed)  ನಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ವಿಶಿಷ್ಟ ಬಗೆಯ ಬೂಸ್ಟ್ ಒಂದನ್ನು 1953 ರಲ್ಲಿ ಗಮನಿಸಿದರು; ಟೆಟ್ರಾ ಸೈಕ್ಲಿನ್ ಜೀವಿರೋಧಕ ರಸದ ಉತ್ಪಾದನೆಗೆ ಕಾರಣವಾದ ಬೂಸ್ಟಿನ ಉಪಜಾತಿಯೊಂದಕ್ಕೆ ಅದು ಸೇರಿದುದೆಂದು ಗುರುತಿಸಿದರು. ಅಲ್ಲಿಯವರೆಗೆ ಯಾರೂ ಅದನ್ನು ಅಭ್ಯಾಸ ಮಾಡಿರಲಿಲ್ಲ; ಹಾಗೂ ಯಾವುದೇ ಹೆಸರಿನಿಂದ ಕರೆಯುತ್ತಿರಲಿಲ್ಲ. ತಮ್ಮ ಜೀವಮಾನವೆಲ್ಲಾ ಈ ತರಹದ ಬೂಸ್ಟ್ ಗಳ ಸಂಶೋಧನೆಯಲ್ಲಿ ತೊಡಗಿಕೊಂಡು ಟೆಟ್ರಾಸೈಕ್ಲಿನ್ ನಂಥ ಸರ್ವರೋಗಾಪಹಾರಿ ಮದ್ದನ್ನು ಆವಿಷ್ಕರಿಸಲು ಕಾರಣಕರ್ತರಾದ ಮಹಾನುಭಾವ ಸುಬ್ಬರಾಯರ ನೆನಪಿಗಾಗಿ ಆ ವಿಶಿಷ್ಟ ಬೂಸ್ಟಿಗೆ ‘ಸುಬ್ಬರೋಮೈಸೀಸ್’ ಸ್ಪ್ಲೆಂಡೆನ್ಸ್(Subbaromyces splendens)  ಎಂದು ನಾಮಕರಣ ಮಾಡಿದ್ದಾರೆ.

ಇದರಿಂದ ಡಾ॥ ಸುಬ್ಬರಾಯರ ಹಸರು ವಿಜ್ಞಾನ ಕ್ಷೇತ್ರದಲ್ಲಿ ಉಳಿಯುವಂತಾಗಿದೆ. ಸುಬ್ಬರೋಮೈಸೀಸ್ ಜಾತಿ   (genus) ಗೆ ಸೇರಿದ ಬೂಸ್ಟಿನ ಉಪಜಾತಿ (species)ಇಂದು 1974 ರಲ್ಲಿ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದ ಪ್ರಾಂಗಣದ ನೀರಿನಲ್ಲಿ ಸಿಕ್ಕಿತು. ಅದಕ್ಕೆ ‘ಸುಬ್ಬರೋಮೈಸಿಸ್ ಅಕ್ವಾಟಿಕಾ’(subbaromyces aquatic)   ಎಂದು ಹೆಸರಿಡಲಾಗಿದೆ.

ಸರಕಾರ ಸ್ವಲ್ಪ ತಡವಾಗಿಯಾದರೂ ಭಾರತದ ಸುಪುತ್ರನನ್ನು ಗೌರವಿಸುವುದರಲ್ಲಿ ಹಿಂದೆ ಬಿದ್ದಿಲ್ಲವೆನ್ನಬಹುದು. ಈ ದಿಸೆಯಲ್ಲಿ ಡಾ. ಸುಬ್ಬರಾಯರ ಜನ್ಮಶತಮಾನೋತ್ಸವವನ್ನು ಆಚರಿಸಲು ಒಂದು ರಾಷ್ಟ್ರೀಯ ಸಮಿತಿ ಕಂಕಣಬದ್ಧವಾಯಿತು. ಅದರ ವತಿಯಿಂದ ದೇಶದ ಹಲವು ಕಡೆ ಸಭೆ, ಸಮಾರಂಭಗಳು ನಡೆಯುತ್ತಿವೆ. ದಿಲ್ಲಿ, ಹೈದರಾಬಾದ್, ಮುಂಬೈ, ಕೋಲ್ಕತಾ, ಬೆಂಗಳೂರು, ಭೀಮಾವರಂ, ವಿಶಾಖಪಟ್ಟಣ ಮುಂತಾದ ಕಡೆಗಳಲ್ಲಿ ಸುಬ್ಬರಾಯರ ಜೀವನದ ಮೈಲಿಗಲ್ಲುಗಳನ್ನು ಗುರುತಿಸುವ ಚಿತ್ರಪಟಗಳ ಪ್ರದರ್ಶನಗಳು ಜರುಗಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)